ಸೆಲ್ಫೀಯೊಳಗಿನ ನಮ್ಮನ್ನು "ಕಂಡುಕೊಳ್ಳುವುದಾ.... ತೋರ್ಸಿಕೊಳ್ಳುವುದಾ..."?!
ನಾವೊಂದು ಪ್ರವಾಸಿ ತಾಣಕ್ಕೆ ಭೇಟಿ ಕೊಟ್ಟಿರ್ತೇವೆ. ಅಲ್ಲಿ ಪ್ರಾಕೃತಿಕ ವಿಶೇಷಗಳ ಎದುರು ನಿಂತು ಸೆಲ್ಫೀ ಕ್ಲಿಕ್ಕಿಸುತ್ತೇವೆ. ಮತ್ತೆ ಅದನ್ನು ಫೇಸ್ಬುಕ್ಕಿನಲ್ಲಿ, ಸ್ಟೇಟಸ್ಸಿನಲ್ಲಿ ಹಂಚಿಕೊಳ್ತೇವೆ. ಗಮನಿಸಿದ್ದೀರ, ನಾವು ಹಂಚಿಕೊಳ್ಳುವ 10-15 ಫೋಟೋಗಳಲ್ಲೂ ಬಹುತೇಕ ಸಂದರ್ಭ ನಮ್ಮ ಹಿಂದಿನ ಪ್ರಾಕೃತಿಕ ಸೌಂದರ್ಯಕ್ಕೂ ಹೆಚ್ಚು ಅರ್ಧಭಾಗದಲ್ಲಿ ನಮ್ಮ ಹಲ್ಲುಸಹಿತ ನಗುವಿನ ಮುಖವೇ ಆಕ್ರಮಿಸಿರುತ್ತದೆ. ಆ ಫೋಟೋಗಳನ್ನು ವೀಕ್ಷಿಸುವ ಫೇಸ್ಬುಕ್ಕು ಬಂಧುಗಳು ಪ್ರತಿ ಫ್ರೇಮಿನಲ್ಲೂ ನಮ್ಮ ಮುಖಭಾವ, ಬಳಸಿದ ಫಿಲ್ಟರ್ ಗಮನಿಸಬೇಕಾ ಅಥವಾ ಹಿಂದುಗಡೆ ಅರೆಬರೆ ಕಾಣುವ ಜೋಗ ಜಲಪಾತ, ಮೈಸೂರು ಅರಮನೆ, ಆಗುಂಬೆ ಘಾಟಿಯನ್ನು ನೋಡಬೇಕ ಅನ್ನುವುದೇ ಗೊಂದಲ, ನಮ್ಮ ಮುಖವನ್ನು ಬದಿಗೆ ಸರಿಸಿ ಹಿಂದಿನ ಪರಿಸರ ನೋಡೋಣ ಅಂದ್ರೆ, ಅದು ಫೋಟೋ ಅಲ್ವ, ಮುಖವನ್ನು ದೂಡುವುದು ಹೇಗೆ?!!
ಸುಮಾರು 20 ವರ್ಷ ಹಿಂದೆ
ಮೊಬೈಲ್ ನಮ್ಮ ನಿಮ್ಮ ಕೈಗೆ ಬಂದಾಗ ಅದರಲ್ಲಿ ಕೆಮರಾ ಇರಲಿಲ್ಲ. ನಂತರ ಬಂದ ಮೊಬೈಲುಗಳಲ್ಲಿ
ಬ್ಯಾಕ್ ಕೆಮರಾ ಮಾತ್ರ ಇತ್ತು, ಅದಕ್ಕೆ ಇಂಟರ್ನೆಟ್ ಸಂಪರ್ಕ ಇರಲಿಲ್ಲ, ತೆಗೆದ ಫೋಟೋವನ್ನು
ಬ್ಲೂಟೂತ್ ಮೂಲಕವೇ, ಜಿಪಿಆರ್ರೆಸ್ ಎಂಬ ವಿಧಾನದ ಮೂಲಕವೋ ಹಂಚಿಕೊಳ್ಳಬೇಕಿತ್ತು, ಭಯಂಕರ
ಕಷ್ಟದಲ್ಲಿ ಎಂಎಂಎಸ್ ಮಾಡಬಹುದಿತ್ತು. ಅದರ ನಂತರ ಬಂದ ಮೊಬೈಲಿನಲ್ಲಿ ಫ್ರಂಟ ಕೆಮರಾ ಆಪ್ಶನ್
ಬಂತು...
ಅಲ್ಲಿಗೆ ನಮ್ಮ ದೃಷ್ಟಿಕೋನವೇ
ಬದಲಾಯ್ತು. ಸೆಲ್ಫೀ ಎಂಬ ಒಂದು ಟ್ರೆಂಡು, ಒಂದು ಹುಚ್ಚು, ಒಂದು ಹವ್ಯಾಸ ಮತ್ತು ಕೆಲವು
ಸಂದರ್ಭದಲ್ಲಿ ಗೀಳು ಬೆಳೆದು ಬೆಳೆದು... ಬೆಳೆದು ಯಾವುದೋ ಹಂತಕ್ಕೆ ತಲುಪಿದೆ. ನಾವು ನಮ್ಮನ್ನೇ
ನಾವು ಆಗಾಗ ಸೆಲ್ಫೀಯಲ್ಲಿ ಕಂಡುಕೊಳ್ಳುವುದು ಮತ್ತು ಧಾರಾಳವಾಗಿ ನಮ್ಮ ಮೂತಿಯನ್ನೇ ಜಗತ್ತಿಗೆ
ತೋರಿಸುವುದರಲ್ಲಿ ವಿಚಿತ್ರ ತೃಪ್ತಿ ಕಾಣುತ್ತಿದ್ದೇವೆ.
ಮೊಬೈಲ್ ನಿಮ್ಮದು,
ಕರೆನ್ಸಿ ನಿಮ್ಮದು, ಸಮಯ ನಿಮ್ಮದು, ಖಾತೆ ನಿಮ್ಮದು... ಸೆಲ್ಫೀ ತೆಗೆಯುವುದು, ಅದನ್ನು ನಿಮ್ಮದೆ
ಸ್ವಂತ ಖಾತೆಯಲ್ಲಿ, ಸ್ಟೇಟಸ್ಸಿನಲ್ಲಿ ಹಾಕುವುದು ಖಂಡಿತಾ ತಪ್ಪಲ್ಲ, ಮಾಡಬಾರದ ಕೆಲಸವೂ ಅಲ್ಲ,
ಅದನ್ನು ಆಕ್ಷೇಪಿಸುವುದಕ್ಕೆ ನಾನು ಯಾರೂ ಅಲ್ಲ, ಅಷ್ಟಕ್ಕೂ ನನಗೂ ಸೆಲ್ಫೀ ಕ್ಲಿಕ್ಕಿಸುವ ಹುಚ್ಚು
ಖಂಡಿತಾ ಇದೆ...
ಆದರೆ...
ನಾವು ಸೆಲ್ಫೀ ಎಂಬ ಲಕ್ಷಣ
ಮೊಬೈಲಿನಲ್ಲಿ ಬಂದ ಮೇಲೆ ಎಂತಹ ಗದ್ದಲದಲ್ಲಿದ್ರೂ ನಮ್ಮನ್ನೇ ನಾವು ಮರೆಯುವಷ್ಟು ಸೆಲ್ಫೀ
ತೆಗೆಯುವದರಲ್ಲಿ ಧ್ಯಾನಸ್ಥರಾಗ್ತೇವೆ. ನಮ್ಮ ಹಿಂದೆ ಭೋರ್ಗರೆಯುವ ಜಲಪಾತ ಇರಲಿ, ಹಸಿರು ಕಾಡು,
ಕಣಿವೆ, ಸೂರ್ಯೋದಯ, ಸೂರ್ಯಾಸ್ತ, ಸಮುದ್ರದ ಅಲೆ ಎಂಥದ್ದೇ ಇರಲಿ.... ಅದರೆದುರು ನಾವು ಅಡ್ಡ
ನಿಂತು, ಅದರೆದುರು ನಮ್ಮ ಮುಖ ದರ್ಶನ ಮಾಡಿ, ಫ್ರೇಮಿನ ಮೂರನೇ ಎರಡು ಭಾಗದಲ್ಲಿ ನಮ್ಮ ಮುಖವನ್ನೇ
ಕೂರಿಸಿ ಫೋಟೋ ಸೆರೆ ಹಿಡಿದು, ಕಂಡ ಕಂಡಲ್ಲಿ ಶೇರ್ ಮಾಡಿ ವಿಚಿತ್ರ ತೃಪ್ತಿ ಅನುಭವಿಸುತ್ತೇವೆ.
ನಮ್ಮ ಸುತ್ತಮುತ್ತ ಏನಾಗ್ತಿದೆ ಎಂಬ ಪರಿವೆಯೇ ನಮಗಿರುವುದಿಲ್ಲ. ಕಂಡದನ್ನು
ಅನುಭವಿಸುವುದಕ್ಕಿಂತಲೂ ಕಂಡದ್ದನ್ನು ತೋರಿಸುವುದರಲ್ಲೇ ನಮಗೆ ಆತುರ ಜಾಸ್ತಿ ಆಗ್ತಾ ಇದೆ.
ಸೆಲ್ಫೀ ತೆಗೆಯುವಾಗ
ಕ್ಯಾಮೆರಾದಲ್ಲಿ ಫಿಲ್ಟರ್ ಬಳಸ್ತಾರೆ, ನಂತರ ಇಫೆಕ್ಟ್ ಸೇರಿಸ್ತಾರೆ. ಇನ್ ಸ್ಟಾಗ್ರಾಂನಲ್ಲಿ
ವೈರಲ್ ಹಾಡುಗಳನ್ನು ಸೇರಿಸಿ ಬೇರೆಯೇ ಭ್ರಮೆ ಸೃಷ್ಟಿಸ್ತಾರೆ ಎಂಬಿತ್ಯಾದಿ ವಿಡಂಬನೆಗಳ
ನಡುವೆಯೂ... “ನಿನ್ನ ನೀರು ಮರೆತರೇನು
ಸುಖವಿದೇ...” ಎಂಬ ಹಾಗೆ ನಾವೂ
ನಮ್ಮನ್ನು ಮರೆಯದೆ, ನಮ್ಮನ್ನೂ ಅನುಸರಿಸವವರೂ (ಫಾಲೋವರ್ಸ್) ನಮ್ಮನ್ನು ಮರೆಯದ ಹಾಗೆ ಆಗಾಗ
ಸೆಲ್ಫೀ ಶೇರು ಮಾಡುತ್ತಲೇ ನಮ್ಮ ಅಸ್ತಿತ್ವ ಸಾಬೀತು ಪಡಿಸುತ್ತಲೇ ಇರುತ್ತೇವೆ.
ಒಂದು ಚಂದದ ಜಾಗಕ್ಕೆ ಹೋಗಿ
ಇಳಿದ ತಕ್ಷಣ, ಗುಡ್ಡ ಹತ್ತಿ ತುದಿ ಮುಟ್ಟಿದ ತಕ್ಷಣ, ಸಮುದ್ರದ ತೆರೆಗೆ ಪಾದ ಸೋಂಕಿದ ತಕ್ಷಣ
ಮೊದಲು ಅನ್ನಿಸುವುದು ಸೆಲ್ಫೀ ತೆಗೆಯುವ ಅಂತ. ತೆಗೆದ ತಕ್ಷಣ ಅನ್ನಿಸುವುದು ಇದನ್ನು
ಸ್ಟೇಟಸ್ಸಿಗೆ ಹಾಕುವ ಅಂತ, ಸ್ಟೇಟಸ್ಸಿನಲ್ಲಿ ಕೆಲವೇ ನಿಮಿಷದಲ್ಲಿ ಹತ್ತೈವತ್ತು ಜನ ನೋಡಿದೆ ಎಂದ
ಕಂಡ ತಕ್ಷಣ ಅನ್ನಿಸುವುದು ದ್ವಾಪರದ ಹಾಡು ಸೇರಿಸಿ ಇನ್ ಸ್ಟಾದಲ್ಲಿ ಹಾಕಿದ್ರೆ ಎಷ್ಟು ಮಂದಿ
ನನ್ನು ಮುಸುಡು ನೋಡಿ ಆನಂದ ತುಂದಿಲರಾಗಬಹುದು ಅಂತ... ಹೀಗೆ ನಿರೀಕ್ಷೆಗಳಿಗೆ ಮಿತಿಯೇ ಇಲ್ಲ...
ಸ್ಟುಡಿಯೋಗೆ ಹೋಗಿ ಫೋಟೋ
ತೆಗೆಸಿ, ಅದರ ರೀಲು ಕ್ಲೀನ್ ಮಾಡಿ ಪ್ರಿಂಟಾಗಿ ದುಡ್ಡು ಕೊಟ್ಟು ಫೋಟೋ ಮನೆಗೆ ತಂದು ಆಲ್ಬಮಿನಲ್ಲಿ
ಇರಿಸುವ ದಿನಗಳನ್ನು ದಾಟಿ ನಾವು ಎಷ್ಟೋ ಮುಂದೆ ಬಂದಿದ್ದೇವೆ. ಬಯಸಿದಾಗ, ಬಯಸಿದಂತೆ
ಸೆಲ್ಫೀಗಳನ್ನು ಬೇಕು ಬೇಕಾದಂತೆ ಯಾರದ್ದೂ ಹಂಗಿಲ್ಲದೆ, ಯಾರದ್ದೂ ನಿರ್ಬಂಧ ಇಲ್ಲದೆ ತೆಗೆಯುವ,
ಎಡಿಟ್ ಮಾಡುವ, ಹಂಚಿಕೊಳ್ಳುವ ಸ್ವಾತಂತ್ರ್ಯದ ದಿನಗಳಲ್ಲಿದ್ದೇವೆ. ಅದಕ್ಕೆ ಆಂಗಲ್ಲು, ಲೈಟಿಂಗು,
ಕ್ರಾಪಿಂಗು, ಹಿನ್ನೆಲೆ, ಮುನ್ನಲೆ ಹೇಗಿರ್ತದೆ ಎಂಬ ಪರಿವೆಯೂ ನಮ್ಮಲ್ಲಿ ತುಂಬ ಮಂದಿಗೆ ಇರುವುದೇ
ಇಲ್ಲ. ನಾವಷ್ಟು ಫೋಟೋ ಪರಿಣತರೂ ಆಗಿರಬೇಕಾಗಿಲ್ಲ... ತೆಗೆದ ಫೋಟೋ ಶೇರ್ ಮಾಡಿದಾಗ ಹೇಗೆ
ಕಾಣಿಸ್ತದೆ ಎಂಬ ಕನಿಷ್ಠ ಜ್ಞಾನವೂ ಕೆಲವೊಮ್ಮೆ ನಮಗೆ ಇರುವುದಿಲ್ಲ...!
ಆದರೆ ಸೆಲ್ಫೀ ಭರದಲ್ಲಿ
ನೋಡಲು ಹೋದ ಜಾಗದ ಮಹತ್ವವನ್ನೇ ಮರೆಯುವುದು, ಜಲಪಾತದಿಂದ ಕೆಳಗೆ ಜಾರಿ ಬೀಳುವುದು, ಫೋಟೋ
ತೆಗೆಯುವುದು, ಎಡಿಟ್ ಮಾಡುವುದು, ಶೇರ್ ಮಾಡುವುದು, ಲೈವ್ ನೀಡುವ ಭರಾಟೆಯಲ್ಲಿ ಅಷ್ಟು ಚಂದದ
ಪ್ರಕೃತಿ ಜೊತೆ ಒಂದಷ್ಟು ಹೊತ್ತು ಮೈಮರೆಯುವ ಸುಖದಿಂದಲೂ ವಂಚಿತರಾಗುತ್ತಿದ್ದೇವೆ.
ಜಾಲತಾಣದಲ್ಲಿ ಶೇರ್ ಮಾಡುವ
10-15 ಫೋಟೋಗಳ ಪ್ರತಿ ಫ್ರೇಮಿನಲ್ಲೂ ನಾವೇ ಇದ್ದರೆ ಜನ ಅದನ್ನು ನೋಡಿಯಾರ? ಅವರಿಗಷ್ಟು ಪುರುಸೊತ್ತು ಇರ್ತದ? ಅಷ್ಟಕ್ಕೂ ಪ್ರತಿ ಫ್ರೇಮಿನಲ್ಲೂ
ನಮ್ಮನ್ನು ನಾವೇ ತೋರಿಸಿಕೊಳ್ಳುವಷ್ಟು ಜರೂರತ್ತು ಇದೆಯ? ಎಂದೆಲ್ಲ ನಮಗೆ ಅನ್ನಿಸುವುದೇ ಇಲ್ಲ...!
ನನ್ನಿಷ್ಟ, ಬೇಕಾದ ಹಾಗೆ,
ಬೇಕಾದಷ್ಟು ಫೋಟೋ ಹಾಕ್ತೇನೆ, ನೋಡುವವರು ನೋಡ್ಲಿ, ನೋಡದಿದ್ರೆ ಅಷ್ಟೇ ಹೋಯ್ತು ಎಂಬ ವಾದಕ್ಕೆ
ನನ್ನದೇನೂ ಆಕ್ಷೇಪ ಅಲ್ಲ, ಆಕ್ಷೇಪ ಇಲ್ಲ... ಆದರೆ ಫೋಟೋ ಫ್ರೇಮಿನೊಳಗೆ ನಮ್ಮನ್ನು ಮಾತ್ರ
ತೋರಿಸಿ ಉಸಿರುಕಟ್ಟಿಸುವಷ್ಟೇ ಮಹತ್ವವನ್ನು ನಮ್ಮ ಹಿಂದಿರುವ ಪ್ರಕೃತಿ, ಪರಿಸರ, ಆ
ಆಹ್ಲಾದಕತೆಯನ್ನೂ ತೋರಿಸಲು ಸಾಧ್ಯವಾದರೆ ಅದು ನಮ್ಮನ್ನೇ ತೋರಿಸಿದಂತೆ. ನಾವು ತೆಗೆದ ಫೋಟೋ ಎಂದರೆ
ಅದು ನಮ್ಮದೇ ದೃಷ್ಟಿಕೋನ, ನಮ್ಮದೇ ಫ್ರೇಮಿಂಗ್, ನಮ್ಮದೇ ಆಂಗಲ್, ನಮ್ಮದೇ ಟೈಮಿಂಗ್ ಎಂದೇ
ಅರ್ಥ... ಹಾಗಾಗಿ ನಮ್ಮ ಮುಖ ಕಂಡರೂ, ಕಾಣದೇ ಇದ್ದರೂ ನಾವು ತೆಗೆದ ಫೋಟೋದಲ್ಲಿ ಒಂದು ನಮ್ಮತನ
ಇದ್ದೇ ಇರುತ್ತದೆ, ಅಲ್ವ?
ನಮ್ಮನ್ನು ನಾವು ಖಂಡಿತಾ
ಕಂಡುಕೊಳ್ಳುವ, ನಮ್ಮನ್ನು ನಾವೇ ತೋರಿಸಿಕೊಳ್ಳುವ (ಅಂತಹ ಅನಿವಾರ್ಯತೆ ಇದೆ), ಆದರೆ ನಮ್ಮೊಂದಿಗೆ
ಬೇರೆಯವನ್ನೂ ಕಂಡುಕೊಳ್ಳುವ ಪ್ರಯತ್ನ ಮಾಡುವ, ನಮ್ಮನ್ನು ಮಾತ್ರ ತೋರಿಸುತ್ತಾ ಬಂದರೆ ನಮ್ಮನ್ನು
ಜನ ಅಷ್ಟೂ ನೋಡ್ತಾರ...? ಅವರನ್ನೂ ನಾವು ನೋಡಬೇಡವ? ದಿನನಿತ್ಯ ಸಾವಿರಗಟ್ಟಲೆ ಜನ ಹಾಕುವ
ಸೆಲ್ಫೀಗಳನ್ನು ಯಾರು ನೋಡ್ತಾರೆ? ಯಾರೂ ನೋಡದಿದ್ರೆ
ಹಾಕುವುದು ಯಾಕೆ...? ಎಂಬಿತ್ಯಾದಿ ಉತ್ತರ
ಸಿಕ್ಕದ ಪ್ರಶ್ನೆಗಳು....
ಮತ್ತು ಸೆಲ್ಫೀಯಲ್ಲಿ ತೋರಿಸಿದಂತ ನಾವು ನಿಜವಾಗಿಯೂ ನಾವೇ ಆಗಿರ್ತೇವೆಯ, ಆ ನಗು, ಆ ಬಿರುನೋಟ, ಆ
ಮಾದಕತೆ, ಗಾಂಭೀರ್ಯ ಎದುರು ಸಿಕ್ಕಾಗಲೂ ನಮ್ಮಲ್ಲಿ ಕಂಡೀತ...? ಅಥವಾ ಸೆಲ್ಫೀ ತಲುಪಿಸುವಲ್ಲಿಗೆ
ಸೆಲ್ಫಿಶ್ ಗಳಾಗಿ ಉಳಿಯುತ್ತೇವೆಯ ಎಂಬ ವಿಚಿತ್ರ ಆತಂಕ ಸಹಾ ಇದೆ!!! ನಿಮ್ಮಲ್ಲೂ ಇದೆಯಾ? ಇದ್ರೆ ಕಮೆಂಟಿನಲ್ಲಿ ತಿಳಿಸಿ.
-ಕೃಷ್ಣಮೋಹನ ತಲೆಂಗಳ
(22.08.2024)
No comments:
Post a Comment