ಟ್ಯೂನೂ ನಿನ್ನದೆ, ರೀಲ್ಸೂ ನಿನ್ನದೆ...ರೋಸದಿರಲಿ ಮನಸೂ...!

 



ನಾವು ಸಣ್ಣವರಿದ್ದಾಗ ನಮ್ಮ ಇಷ್ಟದ ಚಿತ್ರಗೀತೆ ಕೇಳಬೇಕಾದರೆ ರೇಡಿಯೋದ ಚಿತ್ರಗೀತೆಗಳು ಅಥವಾ ಕೋರಿಕೆ ಕಾರ್ಯಕ್ರಮ ಕೇಳಬೇಕಿತ್ತು. ಕೋರಿಕೆಗಾದರೆ ಪೋಸ್ಟು ಕಾರ್ಡ್ ನಲ್ಲಿ ಬೇಡಿಕೆ ಸಲ್ಲಿಸಿದರೆ ಯಾವತ್ತಾದರೂ ಹಾಡು ಪ್ರಸಾರ ಆಗ್ತಾ ಇತ್ತು. ಅದಕ್ಕು ಮಿಕ್ಕಿ ಟ್ರೆಂಡಿಂಗ್ ಚಿತ್ರಗೀತೆಗಳನ್ನು ಕೇಳಬೇಕಾದರೆ ಊರಿಗೆ ಲಾಟರಿ ಟಿಕೆಟ್ ಮಾರುವ ಅಂಬಾಸಿಡರ್ ಕಾರು ಬರಬೇಕು ಅಥವಾ ಊರಿನಲ್ಲಿ ನಡೆಯುವ ಸ್ಕೂಲ್ಡೇ ಅಥವಾ ಸಾರ್ವಜನಿಕ ಉತ್ಸವ, ಮದುವೆ ಮನೆಗಳಲ್ಲಿ ಕಟ್ಟುವ ಮೈಕ್ಕದಲ್ಲಿ ಕನ್ನಡ, ಹಿಂದಿ ಚಿತ್ರಗೀತೆಗಳನ್ನು ಕೇಳಬೇಕಿತ್ತು.

ಇವತ್ತು ಸಿನಿಮಾ ಬಿಡುಗಡೆ ಆಗುವ ಮೊದಲೇ ಒಂದು ಹಾಡು ಹಿಟ್ ಆಗ್ತದೆ, ಅಥವಾ ವೈರಲ್ ಆಗಿಸಲಾಗ್ತದೆ. ಆ ಹಾಡನ್ನು ಯಾರೋ ಒಬ್ಬ ರೀಲ್ಸ್ ಮಾಡ್ತಾನೆ. ಅದು ಸ್ವಲ್ಪ ಜನಪ್ರಿಯ ಆದ ಕೂಡ್ಲೆ ಕಂಡ ಕಂಡವರೆಲ್ಲ ಅದೇ ಹಾಡು ಬಳಸಿ ರೀಲ್ಸ್ ಮಾಡ್ತಾರೆ. ಮತ್ತೆ ತಕ್ಕೊಳ್ಳಿ ಫೇಸ್ಬುಕ್ಕು, ಇನ್ ಸ್ಟಾಗ್ರಾಂ, ವಾಟ್ಸಪ್ ಸ್ಟೇಟಸ್, ಕಂಡ ಕಂಡ ಗ್ರೂಪುಗಳಲ್ಲಿ ಅದೇ ಟ್ಯೂನ್, ಅದೇ ಹಾಡು, ಚಿತ್ರ ವಿಚಿತ್ರ ನೃತ್ಯಗಳು... ಆ ನೃತ್ಯ ಹೇಗೆ ಕಾಣಿಸ್ತದೆ, ಅದರಿಂದ ಮನರಂಜನೆ ಸಿಗ್ತದ? ಅದೆಲ್ಲ ಎಂತ ಸಾ ಇಲ್ಲ. ಖುಷಿಗಾಗಿ ಹಾಡು, ಖುಷಿಗಾಗಿ ನೃತ್ಯ... ತಪ್ಪಲ್ಲ...!

ಅವತ್ತು ಕಾದು ಕುಳಿತು ಹಾಡು ಕೇಳುವಾಗ ಭಯಂಕರ ಧನ್ಯತಾ ಭಾವ ಇತ್ತು. ಇವತ್ತು ಹೋದಲ್ಲಿ ಬಂದಲ್ಲಿ ಒಂದೇ ರಾಗ, ಒಂದೇ ಟ್ಯೂನ್ ಮತ್ತು ಚಿತ್ರವಿಚಿತ್ರ ಸಹಿಸಲಸಾಧ್ಯ ರೀಲ್ಸ್ ಡ್ಯಾನ್ಸ್ ಗಳನ್ನು ನೋಡಿ, ನೋಡಿ, ಕೇಳಿ ಕೇಳಿ ಕೊನೆಗೆ ಎಷ್ಟು ಬೇಜಾರಾಗ್ತದೆ ಅಂದ್ರೆ ತಪ್ಪಿ ಕೂಡಾ ಈ ಹಾಡಿರುವ ಸಿನಿಮಾಗೆ ಹೋಗುವುದೇ ಬೇಡ ಅನ್ನಿಸ್ತದೆ...! ನನಗನ್ನಿಸ್ತದೆ, ನನ್ನ ಗ್ರಹಿಕೆ ದೋಷವೋ ಗೊತ್ತಿಲ್ಲ, ನಿಮಗೆ ಅನ್ನಿಸುವುದಾದರೇ ಕಮೆಂಟ್ ಮಾಡಿ.

 

ಇದು ತುಂಬ ಸರಳ communication overloaded… ಎಲ್ಲ ಹಿತಮಿತವಾಗಿ, ರುಚಿಗೆ ತಕ್ಕಷ್ಟೇ ಇದ್ದರೆ ಅದಕ್ಕೊಂದು ಮೌಲ್ಯ, ಕುತೂಹಲ, ತೃಪ್ತಿ, ಕಾತರ, ನಿರೀಕ್ಷೆ, ಮೆಚ್ಚುಗೆ ಎಲ್ಲ ಇರ್ತದೆ.... ಐಸ್ ಕ್ರೀಂ ಇಷ್ಟಾಂತ ಒಬ್ಬನಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಬಕೆಟ್ ಗಟ್ಟಲೆ ಐಸ್ ಕ್ರೀಮೇ ತಿನ್ನಿಸಿದರೆ ಮರುದಿನದಿಂದ ಅವನಿಗೆ ಐಸ್ ಕ್ರೀಂ ಕುರಿತು ಯಾವ ಭಾವ ಇದ್ದೀತು... ನನಗಂತೂ ಹೀಗೆಯೇ ಅನ್ನಿಸ್ತದೆ. ಸೋಶಿಯಲ್ ಮೀಡಿಯಾ ಬಿಟ್ಟು ಬದುಕುವ ಪರಿಸ್ಥಿತಿ ಈಗಿನ ಸಂದರ್ಭದಲ್ಲಿ (ವೃತ್ತ ಆಧಾರಿತ) ಇಲ್ಲ. ಹಾಗಿರುವಾಗ ಬೇಡ ಬೇಡ ಎಂದರೂ ಇಂಥದ್ದೇ ಕಂಡಾಗ, ಸಹಜವಾಗಿ ಮನಸ್ಸು ರೋಸಿ ಹೋಗ್ತದೆ. ಅಂದಿನ ದಿನಗಳೇ ಚಂದ ಇತ್ತಲ್ಲ ಅನ್ನಿಸ್ತದೆ...

1)      ಇದ್ದದ್ದು ಒಂದೇ ಚಾನೆಲ್ಲು ಅದು ಡಿಡಿ1. ಭಾನುವಾರ ಬೆಳಗ್ಗೆ ರಂಗೋಲಿಯಲ್ಲಿ ಹಿಂದಿ ಚಿತ್ರಗೀತೆ, ಶುಕ್ರವಾರ ಸಂಜೆ 7.30ಕ್ಕೆ ಚಿತ್ರಮಂಜರಿಯಲ್ಲಿ ಕನ್ನಡ ಚಿತ್ರಗೀತೆ, ವಾರಕ್ಕೊಂದೇ ಕನ್ನಡ ಸಿನಿಮಾ ಭಾನುವಾರ ಸಂಜೆ 4 ಗಂಟೆಗೆ. ಅದೂ ಯಾರ್ಯಾರ ಮನೆಗೆ ಹೋಗಿ ಟಿ.ವಿ. ನೋಡುವುದು. ಇಡೀ ಕಾರ್ಯಕ್ರಮ ತದೇಕಚಿತ್ತದಿಂದ ನೋಡುವುದು. ಹಾಗಾಗಿ ಆ ವೀಕ್ಷಣೆಗೆ ಅಷ್ಟು ಬೆಲೆ ಇರ್ತಾ ಇತ್ತು.

2)      ಇದ್ದದ್ದೇ ಒಂದು ಚಾನೆಲ್ಲಲ್ವ, ಹಾಗಾಗಿ ನಡುನಡುವೆ ಚಾನೆಲ್ ಚೇಂಜ್ ಮಾಡ್ಲಿಕಿಲ್ಲ. ಜಾಹೀರಾತು, ಕಾಣೆಯಾದವರ ವಿವರ ಸಹಿತ ಎಲ್ಲ ನೋಡ್ತಾ ಇದ್ದೆವು. ಹೆಚ್ಚಿನ ಗಮನ, ಹೆಚ್ಚಿನ ಏಕಾಗ್ರತೆ ಇತ್ತು...

3)      ಯಾವುದೇ ಬ್ರೇಕಿಂಗ್ ಸುದ್ದಿ ತಿಳಿಸುವ ಮಾಧ್ಯಮವೇ ಇರಲಿಲ್ಲ. ದೊಡ್ಡ ದೊಡ್ಡವರು ಸತ್ತು ಶಾಲೆಗೆ ರಜೆಯಿಂದ ಹಿಡಿದು ಪ್ರಮುಖ ನಿರ್ಧಾರಗಳೆಲ್ಲ ಬೆಳಗ್ಗೆ ಪೇಪರ್ ಬಂದಾಗಲೇ ಗೊತ್ತಾಗ್ತಾ ಇದ್ದದ್ದು. ಹಾಗಾಗಿ ಬ್ರೇಕಿಂಗ್ ಸುದ್ದಿಗಳನ್ನು ನೋಡಿ ಎದೆಬಡಿತ ಹೆಚ್ಚಿಸಿಕೊಳ್ಳಬೇಕಾದ ಅಗತ್ಯ ಇರಲಿಲ್ಲ.

4)      ತ್ವರಿತ ಸುದ್ದಿ ನೀಡ್ತಾ ಇದ್ದದ್ದು ರೇಡಿಯೋ ವಾರ್ತೆಗಳು ಆದ್ದರಿಂದ ಅದು ಸರ್ಕಾರಿ ವಾಹಿನಿ, ಸುದ್ದಿಗಳು ಫಿಲ್ಟರ್ ಆಗಿ ಬರ್ತಾ ಇದ್ದದ್ದು, ಸಮಷ್ಟಿ ಪ್ರಜ್ಞೆಯ ಸುದ್ದಿಗಳಿಂದ ಮನಸ್ಸು ವಿಚಲಿತ ಆಗುವಂಥದ್ದೇನೂ ಇರಲಿಲ್ಲ. ಮೊಬೈಲ್ ಇಲ್ಲದ ಕಾಲದಲ್ಲಿ ರೇಡಿಯೋವೇ ಮನರಂಜನೆ ಸಾಧನ ಆಗಿತ್ತು, ರೇಡಿಯೋ ಕೇಳ್ಕೊಂಡು ಯಾವುದೇ ಕೆಲಸ ಮಾಡಲು ಸಾಧ್ಯ ಇದ್ದ ಕಾರಣ ಮಾಧ್ಯಮವೊಂದರಿಂದ ನಮ್ಮ ಯಾವುದೇ ದಿನಚರಿಗೆ ಅಡ್ಡಿ ಆಗ್ತಾ ಇರಲಿಲ್ಲ.

5)      ರೇಡಿಯೋ ಕೇಳ್ತಾ ಬೆಳೆದವರಿಗೆ ಎಸ್ಪಿ ಬಾಲಸುಬ್ರಹ್ಮಣ್ಯಂ, ಪಿಬಿ ಶ್ರೀನಿವಾಸ್, ಮಹಮ್ಮದ್ ರಫಿ ಇವರೆಲ್ಲ ನೋಡ್ಲಿಕೆ ಹೇಗಿರ್ತಾರೆ ಅಂತ ಸಾ ಗೊತ್ತಿರಲಿಲ್ಲ. ಅದೆಲ್ಲ ಗೊತ್ತಾದ್ದು ಟಿ.ವಿ.ಯಲ್ಲಿ ಅವರದ್ದೆಲ್ಲ ಸಂದರ್ಶನಗಳು ಬಂದ ಬಳಿಕ, ಫೇಸ್ಬುಕ್ಕು ಪ್ರವರ್ಧನಮಾನಕ್ಕೆ ಬಂದಾದ ಮೇಲೆ.

6)      ರಕ್ಷಾ ಬಂಧನಕ್ಕೆ, ಜನ್ಮದಿನಕ್ಕೆ, ಹೊಸ ವರ್ಷಕ್ಕೆ, ದೀಪಾವಳಿಗೆಲ್ಲ ಚಂದ ಚಂದ ಗ್ರೀಟಿಂಗ್ಸ್ ಬರ್ತಾ ಇತ್ತು. ಸಂಪರ್ಕ ಮಾಡಬೇಕೆಂದಿದ್ದವರು ಇನ್ ಲ್ಯಾಂಡ್ ಲೆಟರಿನಲ್ಲಿ ಪತ್ರ ಬರೆಯುತ್ತಿದ್ದರು. ಆ ಪತ್ರ ತರುವುದು, ಓದುವುದು, ಮತ್ತೊಮ್ಮೆ ಓದುವುದು, ಕಟ್ಟಿಡುವುದು ಇವುಗಳಲ್ಲಿ ಇದ್ದ ಸುಖ ವಾಟ್ಸಪ್ಪಿನ ನೂರಾರು ಗ್ರೂಪುಗಳನ್ನು ಮ್ಯೂಟ್ ಮಾಡಿಟ್ಟು ದಿನದ ಕೊನೆಗೆ ಯಾವುದನ್ನೂ ನೋಡದೆ ಕ್ಲಿಯರ್ ಚಾಟ್ ಕೊಡುವಾಗ ಖಂಡಿತಾ ಸಿಗುವುದಿಲ್ಲ.

7)      ಆಗ ನಾವೇನಾದರೂ ಬರೆದರೆ, ಹಾಡಿದರೆ, ಓಡಿದರೆ ಜನ ತಾವಾಗಿ ಗುರುತಿಸಿ ನಾಲ್ಕು ಮಾತನಾಡುತ್ತಿದ್ದರು. ಇವತ್ತು ನಾವೇನಾದರೂ  ಬರೆದರೆ, ಹಾಡಿದರೆ, ಓಡಿದರೆ ನಾವೇ ಅದನ್ನು ಫೇಸ್ಬುಕ್ಕು, ವಾಟ್ಸಪ್ಪ್ ಸ್ಟೇಟಸ್ಸಿಗೆ ಹಾಕಿ ಪ್ರಚಾರ ಕೊಡಬೇಕು. ಲೈಕು, ಶೇರ್ ಮಾಡಿ ಅಂತ ಗೋಗರೆಯಬೇಕು. ಎಲ್ಲದಕ್ಕಿಂತ ನಿಮ್ಮ ನಿರ್ವಹಣೆ ಹೇಗಾಗಿದೆ ಎಂಬುದಕ್ಕಿಂತಲೂ ನೀವೆಷ್ಟು ಮಂದಿಯನ್ನು ರೀಚ್ ಆಗಿದ್ದೀರಿ ಎಂಬುದೇ ಮುಖ್ಯವಾಗುತ್ತದೆ. ಕ್ವಾಲಿಟಿಯ ಜಾಗವನ್ನು ಕ್ವಾಂಟಿಟಿ ಆಕ್ರಮಿಸಿದೆ. ಲೋಕವೇ ನನ್ನನ್ನು ಗುರುತಿಸಲಿ ಎಂಬ ಪ್ರಾಮಾಣಿಕರಿಗೆ ಇಲ್ಲಿ ಯಾವತ್ತೋ ಜಾಗ ಇಲ್ಲವಾಗಿದೆ.

8)      ಸತ್ಯ ಮತ್ತು ಸುಳ್ಳುಗಳ ಅಂತರ ಕಡಿಮೆಯಾಗಿದೆ. ಸುಳ್ಳಗಳನ್ನೂ ನಾವು ಎಂಜಾಯ್ ಮಾಡ್ತೇವೆ. ಪ್ರಚಾರ ಕೊಡ್ತೇವೆ. ಅವನ್ನು ಕಂಡುಕೊಳ್ಳಲು ಇಷ್ಟೊಂದು ತಂತ್ರಜ್ಞಾನ ಇದ್ದರೂ ಸಾಧ್ಯವಾಗುವುದೇ ಇಲ್ಲ!

9)      ಜನಪ್ರಿಯವಾಗಿದ್ದರೆ, ಜನಪ್ರಿಯವಾಗಿರುವುದನ್ನು ಶೇರ್ ಮಾಡಿದರೆ, ಜನಪ್ರಿಯವಾಗಿರುವವರಿಗೆ ಬಕೆಟ್ ಹಿಡಿದು ಸುತ್ತಮುತ್ತ ತಿರುಗಾಡಿದರೆ ತಾವೂ ಸುಲಭವಾಗಿ ಜನಪ್ರಿಯರಾಗಬಹುದು ಎಂಬುದು ಜನರಿಗೆ ಗೊತ್ತಾಗಿದೆ. ಹಾಗಾಗಿ ನಾನು ಏನು, ನನ್ನ ಸಾಧ್ಯತೆ ಏನೂ ಅನ್ನುವುದಕ್ಕಿಂತಲೂ ನಾನು ಹೇಗೆ ಕಾಣಿಸಿಕೊಂಡರೆ ಹೆಚ್ಚು ರೀಚ್ ಆಗ್ತೇನೆ?” ಎಂಬುದೇ ವೈಯಕ್ತಿಕ ಮನೋಭಾವವಾಗಿ ಬೆಳೆಯುತ್ತಿದೆ.

10)   ಎಷ್ಟೇ ಚಿಟ್ಟು ಹಿಡಿದರೂ, ಎಷ್ಟೆ ಆಯ್ಕೆಗಳಿದ್ದರೂ ಕೆಲವು ಚರ್ವಿತಚರ್ವಣವಾದ, ಜನಪ್ರಿಯವಾದ, ಹತ್ತು ಜನ ಮಾಡಿದ್ದರೂ ಮತ್ತೊಮ್ಮೆ ಮಾಡುವ ಯಾಂತ್ರಿಕ ಮನಃಸ್ಥಿತಿ, ಕ್ರಿಯಾಶೀಲತೆ ಕಳೆದುಕೊಂಡು ಸ್ತಬ್ಧವಾದಂತಹ ವಿಚಿತ್ರ ಹಿಂಬಾಲಿಸುವಿಕೆಯ ಜೊತೆಗೆ ಏಗಲಾಗದವರೂ, ಬಾಗಲಾಗದವರೂ ನನ್ನ ಹಾಗೆ ಗೊಣಗಿಕೊಂಡು ಏದುಸಿರು ಬಿಡುತ್ತಲೇ ಇರ್ತೇವೆ. ನೀವೂ ಹಾಗೆಯ? ತಿಳಿಸಿ. ಅಲ್ಲವಾದರೆ ಅಡ್ಡಿ ಇಲ್ಲ... ಕಾಲಾಯ ತಸ್ಮೈ ನಮಃ ಅಷ್ಟೇ!

-ಕೃಷ್ಣಮೋಹನ ತಲೆಂಗಳ (29.08.2024)

No comments:

Popular Posts