ವಾಟ್ಸಪ್ ಗ್ರೂಪುಗಳ ಸ್ವಚ್ಛತೆ ಆಗಬೇಡವೇ..?!



ವಾಟ್ಸಪ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳು ತಾಂತ್ರಿಕವಾಗಿ ಸಂವಹನವನ್ನು ಸುಲಭವಾಗಿ, ತ್ವರಿತವಾಗಿ ಪಸರಿಸಲು ಸಾಧ್ಯವಾಗಿರುವ ವರದಾನಗಳು. ಆದರೆ, ನಾವು ಬಹಳಷ್ಟು ಬಾರಿ ನಿರ್ಭಾವುಕ, ಯಾಂತ್ರಿಕ ವರ್ತನೆಗಳಿಂದ ಅವುಗಳನ್ನು ತ್ಯಾಜ್ಯ ವಿಲೇ ಕೇಂದ್ರಗಳನ್ನಾಗಿಸುತ್ತಿದ್ದೇವೆ.

ಹೌದು, ಪ್ರತಿ ವಾಟ್ಸಪ್ ಗ್ರೂಪನ್ನೂ ಒಂದು ಉದ್ದೇಶಕ್ಕೋಸ್ಕರ ಕಟ್ಟಿರಲಾಗುತ್ತದೆ. ಶಿಕ್ಷಣ, ಸಂಸ್ಕೃತಿ, ಸುದ್ದಿ ಪ್ರಸಾರ, ಸಂಸ್ಥೆಯೊಂದರ ಮಾಹಿತಿ ನೀಡುವಿಕೆ, ಚಿತ್ರಗಳು, ವಿಡಿಯೋಗಳ ಹಂಚುವಿಕೆ, ಪ್ರವಾಸ, ಕೌಟುಂಬಿಕ, ಸ್ನೇಹಿತರ ವಲಯ, ಧಾರ್ಮಿಕ ಮಾಹಿತಿ ಹೀಗೆ ಹತ್ತು ಹಲವಾರು ಉದ್ದೇಶಗಳಿಗೋಸ್ಕರ ಮಾಡಿರುತ್ತಾರೆ. ಗ್ರೂಪುಗಳನ್ನು ಸ್ಥಾಪಿಸುವ ಉದ್ದೇಶ ತುಂಬ ಸರಳ. ಒಂದೇ ಕ್ಲಿಕ್ಕಿಗೆ ಅಷ್ಟೂ ಜನರನ್ನು ಏಕಕಾಲಕ್ಕೆ ತಲುಪಬೇಕು, ತಲುಪಬಹುದು ಹಾಗೂ ಅವರೆಲ್ಲರಿಂದ ಮರು ಉತ್ತರ ಪಡೆಯಬಹುದು ಎಂದಾಗಿರುತ್ತದೆ. ಆದರೆ ನನ್ನ ಪ್ರಕಾರ ಶೇ.75 ಮಂದಿ ಈ ಉದ್ದೇಶವನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ. ಒಂದು ವಾಟ್ಸಪ್ ಗ್ರೂಪು ಶುರು ಮಾಡಿ ನಿಮ್ಮ ಅನುಮತಿ ಪಡೆದೇ ಸೇರಿಸಿದರೂ ಆ ಗ್ರೂಪಿನಲ್ಲಿ ತನ್ನ ಪಾತ್ರವೇನೆಂದು ಅರ್ಥ ಮಾಡಿಕೊಳ್ಳುವುದಿಲ್ಲ. ಸೇರಿದ ತಕ್ಷಣ ಶುರು ಮಾಡುತ್ತಾರೆ ಕಂಡ ಕಂಡ ಮೆಸೇಜುಗಳನ್ನು ಫಾರ್ವರ್ಡ್ ಮಾಡಲು ಅಥವಾ ಗ್ರೂಪಿಗೆ ಸಂಬಂಧಿಸಿದ ಅರ್ಥಹೀನ ಉದ್ದುದ್ದ ಸಂದೇಶಗಳನ್ನು ಹಾಕಲು....

ನನಗೆ ಅರ್ಥವೇ ಆಗದ ಸಂಗತಿಗಳು ಹೀಗಿವೆ...

1) ಒಂದು ಗ್ರೂಪಿನಲ್ಲಿ 50, 100, 200ಕ್ಕೂ ಹೆಚ್ಚು ಜನ ಇರುತ್ತಾರೆ. ನಾವು ಹಾಕುವ ಒಂದು ಅಪ್ರಸ್ತುತ ಮೆಸೇಜು ಕೂಡಾ ಅಷ್ಟೂ ಜನರನ್ನು ತಲಪುತ್ತದೆ. ಹಾಗಿರುವಾಗ ನಮ್ಮ ಮೆಸೇಜು ಅವರನ್ನು ತಲಪುವಾಗ ಅದು ಅವರ ಮೇಲೂ ಪರಿಣಾಮ ಬೀರುತ್ತದೆ. ಅಲ್ಲಿ ತುಂಬಾ ಬಿಝಿ ಇರುವವರು, ಬೇರೆ ಅವಧಿಯಲ್ಲಿ ಕೆಲಸ ಮಾಡುವವರು ಎಲ್ಲರೂ ಇರುತ್ತಾರೆ. ಅವರು ಗ್ರೂಪಿನ ಪ್ರಧಾನ ಉದ್ದೇಶಕ್ಕೋಸ್ಕರ ಆ ಉದ್ದೇಶಕ್ಕೆ ಅನುಗುಣವಾಗಿ ಬರುವ ಮೆಸೇಜಿಗೋಸ್ಕರ ಸೈಲೆಂಟ್ ಆಗಿದ್ದರೂ ಗ್ರೂಪಿನಲ್ಲಿ ಉಳಿದಿರುತ್ತಾರೆ. ನಾವು ಹಾಕುವ ಗುಂಪಿಗೆ ಸೇರದ ಮೆಸೇಜುಗಳು ಅವರಿಗೆ ತೊಂದರೆ ನೀಡಬಲ್ಲುದು ಎಂಬುದು ಯಾಕೆ ಅರ್ಥ ಆಗುವುದಿಲ್ಲ.

2) ನಾವು ನಮ್ಮ ಮನೆಯವರಿಗೆ ಗುಡ್ ಮಾರ್ನಿಂಗ್, ಗುಡ್ ನೈಟ್ ಹೇಳುತ್ತೆವೋ ಗೊತ್ತಿಲ್ಲ. ಕೆಲವರಂತೂ ತಾವು ಎದ್ದ ಕೂಡಲೇ ತಾವು ಇರುವ ಅಷ್ಟೂ ಗ್ರೂಪುಗಳಿಗೆ ಶಿಸ್ತಿನಲ್ಲಿ ಗುಡ್ ಮಾರ್ನಿಂಗ್ ಮತ್ತು ಗುಡ್ ನೈಟ್ ಮೆಸೇಜುಗಳನ್ನು ಫಾರ್ವರ್ಡ್ ಮಾಡುತ್ತಾರೆ (ನೆನಪಿಡಿ ಇವರಲ್ಲಿ ಬಹಳಷ್ಟು ಮಂದಿ ಗುಂಪಿನ ಆಶಯಕ್ಕನುಗುಣವಾಗಿ ಏನನ್ನೂ ಫಾರ್ವರ್ಡ್ ಮಾಡುವುದಿಲ್ಲ). ನಾನು ಕೇಳುವುದು ಕೌಟುಂಬಿಕ ಅಥವಾ ಸ್ನೇಹಿತರ ವಲಯದ ವಾಟ್ಸಪ್ ಗ್ರೂಪುಗಳನ್ನು ಹೊರತುಪಡಿಸಿ ಇತರ ಗ್ರೂಪುಗಳಿಗೆ ಈ ಗುಡ್ ಮಾರ್ನಿಂಗ್ ವಿಶ ಮಾಡುವ ಅಗತ್ಯ ಏನು. ನೀವು ಹಾಕುವ ಪಾರ್ವರ್ಡೆಡ್ ಸಂದೇಶವನ್ನು ಡೌನ್ ಲೋಡ್ ಮಾಡಿ ಎಲ್ಲರೂ ಓದುತ್ತಾರೆ ಎಂದು ನೀವು ಭಾವಿಸುತ್ತೀರ. ಒಮ್ಮೆ ಯೋಚಿಸಿ, ಅಲ್ಲಿರುವ ಅಷ್ಟೂ ಮಂದಿ ಗುಡ್ ಮಾರ್ನಿಂಗ್ ಮೆಸೇಜು ಮಾಡಿದರೆ ಗ್ರೂಪಿನಲ್ಲಿ ಮತ್ತೆ ಮುಖ್ಯ ಸಂದೇಶಗಳು ಬಂದಾಗ ಈ ರಾಶಿಯ ನಡುವೆ ಯಾರಿಗಾದರೂ ಅದು ಕಾಣಿಸುತ್ತದೆಯೇ

3) ಆರೋಗ್ಯದ ಬಗ್ಗೆ, ನಡವಳಿಕೆ ಬಗ್ಗೆ, ಧಾರ್ಮಿಕತೆ ಬಗ್ಗೆ, ದೇಶಾಭಿಮಾನದ ಬಗ್ಗೆ, ರಾಜಕಾರಣಿಗಳ ವರ್ತನೆ ಬಗ್ಗೆ ಪುಂಖಾನುಪುಂಖವಾಗಿ ಕೆಲವು ಉದ್ದುದ್ದ ಬರಹಗಳು ಬರುತ್ತವೆ. ಆ ಬರಹದ ಕೆಳಗೆ ಬರೆದವನ ಹೆಸರು ಇರುವುದಿಲ್ಲ. ಇಂತಹ ಸಂದೇಶಗಳನ್ನು ಕೆಲವರು ಕಣ್ಣು ಮುಚ್ಚಿ ಗ್ರೂಪುಗಳಿಗೆ ದೂಡುತ್ತಲೇ ಇರುತ್ತಾರೆ. ನಾನು ಕೇಳುವುದು, ಹೆಸರು, ವಿಳಾಸ ಇಲ್ಲದ ಬರಹಗಳನ್ನು ನಂಬುವುದಾದರೂ ಹೇಗೆ... ಯಾಕೆ ಅಂತಹ ದೃಢೀಕೃತವಲ್ಲದ ಬರಹಗಳಿಗೆ ಪ್ರಚಾರ ನೀಡುತ್ತೀರಿ?. ಒಂದು ನೇರ ನಡವಳಿಕೆ ಇರುವ ವ್ಯಕ್ತಿ ತನ್ನ ಬರಹದ ಕೆಳಗೆ ತನ್ನ ಹೆಸರು, ವಿಳಾಸ ಹಾಕಬೇಕು. ಅದು ಬಿಟ್ಟು ಯಾರೋ, ಎಲ್ಲಿಯೋ ಬರೆದ ಅನಾಮಧೇಯ ಮೈಲುದ್ದದ ಬರಹಗಳನ್ನು ಹಾಕುವುದು ಸುಶಿಕ್ಷಿತರಿಗೆ ಶೋಭೆ ತರುವ ವಿಚಾರವಲ್ಲ. ಸಾಮಾಜಿಕವಾಗಿ ಸತ್ಯವನ್ನೇ ಪ್ರಸಾರ ಮಾಡಬೇಕಾದ ಕುರಿತು ಪ್ರತಿಯೊಬ್ಬರಿಗೂ ಜವಾಬ್ದಾರಿಗಳಿವೆ, ಅದನ್ನು ನಾವು ಪಾಲಿಸಬೇಕು.

4) ಇನ್ನು ಕೆಲವರು ಗುಂಪಿನಲ್ಲಿ ಗಂಭೀರ ವಿಷಯ ಚರ್ಚೆಯಾಗುತ್ತಿರುವಾಗ ಯಾವುದೋ ಜೋಕು, ಯಾವುದೋ ಫೋಟೋ, ಯಾವುದೋ ವಿಡಿಯೋವನ್ನು ಸುಮ್ಮನೆ ದೂಡಿ ಬಿಡುತ್ತಾರೆ. ಆ ಬಗ್ಗೆ ಯಾವುದೇ ವಿವರಗಳು ಇರುವುದಿಲ್ಲ. ಯಾಕೆ ಈ ಥರ ಮಾಡುತ್ತೀರಿ. ವಿವರಗಳ ಸಹಿತ ವಿಡಿಯೋ ಅಥವಾ ಫೋಟೋ ಹಾಕಿದರೆ ಅಗತ್ಯ ಇದ್ದವರು ಅದನ್ನು ಡೌನ್ ಲೋಡ್ ಮಾಡಿ ನೋಡಬಹುದು. ಅದರಿಂದ ಯಾರಿಗಾದರೂ ಪ್ರಯೋಜನ ಆಗಬಹುದು. ಅದು ಬಿಟ್ಟು ಸುಮ್ಮನೇ ನಿಮಗೆ ಪುರುಸೊತ್ತಿಗೆ ಎಂಬ ಕಾರಣಕ್ಕೆ ದೂಡಿ ಬಿಟ್ಟರೆ (ಪಕ್ಕದ ಮನೆಯವನ ಕಂಪೌಂಡಿಗೆ ಕಸ ಸುರಿದ ಹಾಗೆ) ಅದನ್ನು ನೋಡಿದವರು ಏನೆಂದು ತಿಳಿದುಕೊಳ್ಳಬೇಕು.

5) ಕಸ ಸುರಿದು ಓಡಿ ಹೋಗುವವರ ವರ್ಗ ಇನ್ನೊಂದು. ಇವರು ಗುಂಪಿನ ಯಾವುದೇ ಗಂಭೀರ ವಿಚಾರಗಳ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ. ಸಡನ್ ಆಗಿ ಏನೋ ಒಂದು ಅಪ್ರಸ್ತುತ ಸಂದೇಶ ದೂಡಿ ಬಿಡುತ್ತಾರೆ. ಅದು ಆ ಗುಂಪಿಗೆ ಅಗತ್ಯವಿರುವುದಲ್ಲ ಎಂದು ಕಂಡುಕೊಂಡ ಬಡಪಾಯಿ ಅಡ್ಮಿನ್ ಅಥವಾ ಇನ್ಯಾರಾದರೂ ಆ ಬಗ್ಗೆ ಪ್ರಶ್ನಿಸಿದರೆ ಉತ್ತರವೇ ಕೊಡುವುದಿಲ್ಲ. ಸುಮ್ಮನಿದ್ದುಬಿಡುತ್ತಾರೆ. ಅಸಲಿಗೆ ಅವರು ಮೆಸೇಜ್ ಫಾರ್ವರ್ಡ್ ಮಾಡಿದ ಬಳಿಕ ಗ್ರೂಪನ್ನು ನೋಡುವುದೇ ಇಲ್ಲ. ಇನ್ನಷ್ಟು ಗ್ರೂಪುಗಳಿಗೆ ಆಂತಹ ಸಂದೇಶಗಳನ್ನು ಕಳುಹಿಸುವಲ್ಲಿ ಬಿಝಿ ಇರುತ್ತಾರೆ ಪಾಪ. ನಮಗೊಂದು ಜವಾಬ್ದಾರಿ ಅಥವಾ ಉತ್ತರದಾಯಿತ್ವ ಬೇಕು. ನಾವು ಹಾಕಿದ ಸಂದೇಶದ ಬಗ್ಗೆ ಪ್ರಶ್ನೆಗಳು ಬಂದರೆ, ಸಂಶಯಗಳನ್ನು ಯಾರಾದರೂ ಕೇಳಿದರೆ ಉತ್ತರಿಸುವ ಹೊಣೆ ನಮಗಿದೆ. ನಾವು ಹಾಕಿದ ಮೆಸೇಜಿನ ಕುರಿತ ಪ್ರಶ್ನೆಗಳನ್ನು ಓದುವ ತನಕ ನಾವೇ ಗ್ರೂಪಿನಲ್ಲಿ ಇರುವುದಿಲ್ಲ ಎಂದಾದರೆ ಬಾಕಿದ್ದವರು ಯಾಕೆ ಆ ಮೆಸೇಜು ಓದಬೇಕು ಎಂಬ ಸರಳ ತರ್ಕ ಯಾಕೆ ನಮ್ಮ ತಲೆಗೆ ಹೋಗುವುದಿಲ್ಲ.

6) ಮತ್ತಷ್ಟು ಮಂದಿಗೆ ವಾಟ್ಸಪ್ ಗ್ರೂಪುಗಳೆಂದರೆ ನಮ್ಮ ನಮ್ಮ ಬಗ್ಗೆ ಹೊಗಳಿಕೊಳ್ಳಲು, ಪ್ರಚಾರ ಗಿಟ್ಟಿಸಿಕೊಳ್ಳಲು ಇರುವ ವೇದಿಕೆ. ಗ್ರೂಪಿನ ಉದ್ದೇಶ ಏನೇ ಇರಲಿ (ಕೌಟುಂಬಿಕ ಮತ್ತು ಸ್ನೇಹಿತರ ಗ್ರೂಪಿಗೆ ಇದು ಅನ್ವಯಿಸುವುದಿಲ್ಲ) ತನ್ನ ಬಗ್ಗೆ, ತನ್ನ ಸಾಧನೆ ಬಗ್ಗೆ, ತನಗೆ ಸಿಕ್ಕಿದ ಪ್ರಶಸ್ತಿಗಳ ಬಗ್ಗೆ, ತನ್ನ ವಿವಿದ ಭಂಗಿಗಳ ಫೋಟೋಗಳ ಬಗ್ಗೆ (ಸೆಲ್ಫೀಗಳು) ಅಲ್ಲಿ ಅವಶ್ಯಕತೆ ಇಲ್ಲದಿದ್ದರೂ ಹೇಳಿಕೊಳ್ಳುತ್ತಲೇ ಇರುತ್ತಾರೆ. ಯಥಾ ಪ್ರಕಾರ, ಯಾವುದೇ ಹಿಂದೆ ಮುಂದಿನ ವಿವರಗಳು ಇರುವುದಿಲ್ಲ, ಪೋಸ್ಟ್ ಮಾಡುವುದು, ಪಲಾಯನ ಮಾಡುವುದು...

ಬಡಪಾ
ಯಿ ಅಡ್ಮಿನ್ ಗಳು ಬಹಳಷ್ಟು ಬಾರಿ ಇಂತಹ ಸಂದರ್ಭಗಳಲ್ಲಿ ಅಸಹಾಯಕರಾಗಿರುತ್ತಾರೆ. ಯಾಕೆಂದರೆ ತುಂಬ ಸಲ ಈ ಥರ ವರ್ತಿಸುವವರು ತುಂಬಾ ಸುಶಿಕ್ಷಿತರು, ಸಮಾಜದಲ್ಲಿ ದೊಡ್ಡ ದೊಡ್ಡ ಸ್ಥಾನಗಳಲ್ಲಿ ಇರುವವರು, ಸಿಡುಕರು, ಮುಂಗೋಪಿಗಳೂ, ಬಹಳಷ್ಟು ದೊಡ್ಡ ದೊಡ್ಡ ಜನರೆನಿಸಿಕೊಂಡವರೂ ಇರುತ್ತಾರೆ. ಇಂತವರಿಗೆ ನಯವಾಗಿ ಹಿತವಚನ ಹೇಳಿದರೆ ಸಿಟ್ಟು ಬರುತ್ತದೆ, ಖಡಕ್ ಹೇಳಿದರೆ ಗ್ರೂಪಿನ ಶಾಂತಿಗೆ ಭಂಗ ಬರುತ್ತದೆ. ಕಿತ್ತು ಹಾಕಿದರೆ ಪರಿಸ್ಥಿತಿ ಕಲುಷಿತವಾಗುತ್ತದೆ, ವಿನಾ ಕಾರಣ ಸಂಘರ್ಷ ಹುಟ್ಟಿಕೊಳ್ಳುತ್ತದೆ...

ಒಂದು ಹಂತದಲ್ಲಿ ಯಾರೋ ಓದದ ಇಂತಹ ಜಂಕ್ ಮೆಸೇಜುಗಳಿಂದಲೇ ಗುಂಪು ತುಂಬಿ ಹೋಗಿ ಅಡ್ಮಿನ್ ಗಳು ಹಾಕುವ ಪ್ರಮುಖ ಸಂದೇಶಗಳು ಯಾರನ್ನೂ ತಲಪುವುದೇ ಇಲ್ಲ... ಗ್ರೂ
ಪ್ ಒಂಥರ ಕಸದಿಂದ ತುಂಬಿ ತುಳುಕುತ್ತಿರುವ ಡಸ್ಟ್ ಬಿನ್ ಥರ ಅನಾಥವಾಗಿ ಗೋಚರಿಸುತ್ತಿರುತ್ತದೆ (ನಾನು ಕಣ್ಣಾರೆ ಕಂಡ ವಿಷಯ ಇದು, ಉತ್ಪ್ರೇಕ್ಷೆಯಲ್ಲ).

 ಎಲ್ಲ ಗ್ರೂಪುಗಳು ಹೀಗೆ ಇರುತ್ತವೆ ಎಂದಲ್ಲ, ಲಂಗು ಲಗಾಮಿಲ್ಲದೆ ಫಾರ್ವರ್ಡೆಂಡ್ ಮೆಸೇಜುಗಳು ತುಂಬಿರುವ ಗ್ರೂಪುಗಳು ಅಂತಿಮವಾಗಿ ಹೀಗೆಯೇ ಆಗುವುದು. ಕೊನೆಗೆ ಎಲ್ಲರೂ ಸೇರಿ, ಅಯ್ಯೋ ವಾಟ್ಸಪ್ ಗ್ರೂಪುಗಳಿಗೆ ನನ್ನನ್ನು ಸೇರಿಸಬೇಡಿ ಮಾರಾಯರೆ, ಇಡೀ ದಿನ ಹ್ಯಾಂಗ್ ಆಗುತ್ತದೆ, ನನಗೆ ಮಸೇಜು ನೋಡಲು ಟೈಮಿರುವುದಿಲ್ಲ.... ನನ್ನನ್ನು ಸೇರಿಸಬೇಡಿ ಎಂದೆಲ್ಲ ಹೇಳಿಕೊಂಡು ತಿರುಗುತ್ತೇವೆ. ಪಾಪ ಯಾರೋ ಒಂದು ಉದ್ದೇಶದಿಂದ ಶುರು ಮಾಡಿದ ಗ್ರೂಪಿಗೆ ನಾವೂ ಕೂಡಾ ಅಪ್ರಸ್ತುತ ಸಂದೇಶಗಳನ್ನು ದೂಡಿ ಅದರ ಪ್ರಾಮುಖ್ಯತೆ ಕಡಿಮೆ ಮಾಡಿದ್ದೇವೆಯೇ ಎಂದು ಈ ಹಂತದಲ್ಲಿ ಯೋಚಿಸುವದು ಉತ್ತಮ...


ವಾಟ್ಸಪ್ ಗ್ರೂಪುಗಳು ಹೊರೆಯಾಗದ ಹಾಗೆ ಹೇಗೆ ಶುಚಿಯಾಗಿ ಇರಿಸಬಹುದು ಹಾಗಾದರೆ?:

1) ಗ್ರೂಪಿಗೊಂದು ಉದ್ದೇಶ ಇರುತ್ತದೆ. ಅದನ್ನು ಗೌರವಿಸಿ, ಇಲ್ಲವಾದರೆ ಅಂತಹ ಗ್ರೂಪಿನಲ್ಲಿ ಇರಬೇಡಿ. ಆ ಉದ್ದೇಶಕ್ಕೆ ಹೊರತಾದ ಮೆಸೇಜುಗಳನ್ನು ಅಡ್ಮಿನ್ ಅನುಮತಿ ಇಲ್ಲದೆ ಹಾಕಬೇಡಿ. ತುಂಬ ಮಂದಿಗೆ ತಪ್ಪು ಕಲ್ಪನೆ ಇದೆ, ಅಯ್ಯೋ ಗ್ರೂಪು ಸೈಲೆಂಟಾಗಿದೆ, ಸ್ವಲ್ಪ ಸದ್ದು ಮಾಡೋಣ ಅಂತ. ಇದು ತಪ್ಪ. ಜಗತ್ತಿನಲ್ಲಿ ಸದ್ದು ಮಾಡಲು ಸಾಕಷ್ಟು ಸ್ಥಳಗಳಿವೆ. ಅದು ಬಿಟ್ಟು ವಾಟ್ಸಪ್ ಗ್ರೂಪುಗಳಲ್ಲಿ ಸದ್ದು ಮಾಡುವುದಕ್ಕೋಸ್ಕರ ಮೆಸೇಜುಗಳನ್ನು ತುರುಕುವುದು, ದೂಡುವುದು ಸರಿಯಲ್ಲ

2) ಹಠಕ್ಕೆ ಬಿದ್ದವರಂತೆ ಗ್ರೂಪಿಗೆ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜು ಹಾಕುವುದು, ಹಿಂದೆ ಮುಂದೆ ಮಾಹಿತಿಯಲ್ಲದ ಫೋಟೋ, ವಿಡಿಯೋ ದೂಡುವುದು, ಹೆಸರೇ ಇಲ್ಲದ ಅನಾಮಧೇಯ ಬರಹಗಳನ್ನು ಹಾಕುವುದು, ಜಾತಿ, ಧರ್ಮ, ಲಿಂಗ ಇತ್ಯಾದಿ ಸೂಕ್ಷ್ಮ ವಿಚಾರಗಳನ್ನು ನಿಂದಿಸುವ ಬರಹಗಳನ್ನು ದಯವಿಟ್ಟು ಹಾಕಬೇಡಿ, ನೂಕಬೇಡಿ. ಗ್ರೂಪಿನ ಪಾವಿತ್ರ್ಯತೆಯನ್ನು ಗೌರವಿಸಿ.

3) ಗ್ರೂಪುಗಳು ಇರುವುದು ನಮ್ಮ ವೈಯಕ್ತಿಕ ನಿಲುವುಗಳನ್ನು, ತೆವಲುಗಳನ್ನು ಹಂಚಿಕೊಳ್ಳುವುದಕ್ಕಲ್ಲ ಎಂಬುದು ನೆನಪಿರಬೇಕು. ಹಠಕ್ಕೆ ಬಿದ್ದವರಂತೆ ನಮ್ಮ ವೈಯಕ್ತಿಕ ಅನಿಸಿಕೆ, ವಿವರಗಳನ್ನು ಒಂದು ಜಾಹೀರಾತು ಫಲಕವೋ ಎಂಬಂತೆ ಅಲ್ಲಿ ಹಾಕುತ್ತಾ ಬರುವುದಲ್ಲ. ಗ್ರೂಪುಗಳು ನಮ್ಮ ವೈಯಕ್ತಿಕ ಪ್ರಮೋಶನಿಗೆ ಇರುವುದಲ್ಲ. ವಾಟ್ಸಪ್ ಸ್ಟೇಟಸ್ಸು, ಫೇಸು ಬುಕ್ ವಾಲ್ ಇರುವುದು ಇದಕ್ಕೋಸ್ಕರ. ಅದನ್ನು ಬಳಸಿ. ವೈಯಕ್ತಿಕವಾಗಿ ಏನೇ ಹೇಳುವುದಕ್ಕೆ ಇದ್ದರೂ ನಿಮ್ಮ ನಿಮ್ಮ ಸ್ಟೇಟಸು, ವಾಲ್ ಗಳಲ್ಲಿ ಹಂಚಿಕೊಳ್ಳಿ, ಬೇಕಾದವರು ನೋಡುತ್ತಾರೆ, ಬೇಡದವರು ಬಿಡುತ್ತಾರೆ. ಅದು ನಿಮ್ಮ ಸ್ಥಳ, ನಿಮ್ಮ ಹಕ್ಕು.

4) ನಾನು ಖುಷಿ ಬಂದಂತೆ ಗ್ರೂಪಿಗೆ ಬೇಕಾದ್ದನ್ನು ಹಾಕುತ್ತೇನೆ, ಬೇಕಾದವರು ನೋಡುತ್ತಾರೆ, ಬೇಡದವರು ಅಸಹನೆಯಿಂದ ಗ್ರೂಪು ಬಿಡುತ್ತಾರೆ, ಬಿಡುವವರು ಬಿಡಲಿ, ಅದು ಅವರ ಕರ್ಮ ಎಂದೆಲ್ಲ ಬೈಯ್ಯುವವರನ್ನು ಕಂಡಿದ್ದೇನೆ. ಇದಕ್ಕೆ ದಾಷ್ಟ್ರ್ಯ ಎಂದು ಹೆಸರು. ನಿಮ್ಮ ಹಾಗೆ ಎಲ್ಲರೂ ಸದಸ್ಯರೇ. ಎಲ್ಲರಿಗೂ ಗ್ರೂಪಿನಲ್ಲಿ ಇರುವ ಹಕ್ಕಿದೆ. ಇನ್ನೊಬ್ಬರಿಗೆ ಉಪದ್ರ ಕೊಡುವ ಯಾರಿಗೂ ಇಲ್ಲ. ಎಲ್ಲರ ಭಾವನೆಗಳನ್ನು ಗೌರವಿಸಿ.

5) ಆದಷ್ಟು ಮಟ್ಟಿಗೆ ಸ್ವಂತದ್ದೇನಾದರೂ ಬರೆದು ಹಾಕಲು ಪ್ರಯತ್ನಿಸಿ. ಯಾಕೆ ಯಾರ್ಯಾರು ಬರೆದ ಅನಾಮಧೇಯ ವಿಚಾರಗಳನ್ನು ಹಂಚುತ್ತೀರಿ, ಪ್ರಚಾರ ಮಾಡುತ್ತೀರಿ. ನಿಮ್ಮದೇ ಬರಹ, ಚಿಂತನೆಗಳಿದ್ದರೆ ಅಡ್ಮಿನ್ ಅನುಮತಿ ಪಡೆದು ಹಾಕಿದರೆ ಉತ್ತಮ ಪ್ರತಿಕ್ರಿಯೆಯಾದರೂ ಸಿಕ್ಕೀತು...

ಇಷ್ಟು ವಿಚಾರಗಳನ್ನು ಹಂಚಿಕೊಂಡರು ಬಹಳಷ್ಟು ಮಂದಿ ಅಸಹನೆ ಪಡುತ್ತಾರೆ. ಏನೋ ಹೇಳಬಾರದ್ದು ಹೇಳಿದ ಹಾಗೆ. ವಿಷಯ ಅದಲ್ಲ. ಅಸಹಿಷ್ಣುತೆ ಹೆಚ್ಚುತ್ತಿದೆ ಗ್ರುಪುಗಳಲ್ಲಿ. ಬೇರೆಯವರು ಬರೆದದ್ದು ಓದುವ ತಾಳ್ಮೆಯಿಲ್ಲ. ಯಾಂತ್ರಿಕವಾಗಿ ಇಮೋಜಿಗಳನ್ನು ಪೋಸ್ಟ್ ಮಾಡಿ ಲೈಕ್ ಮಾಡಿದಂತೆ ವರ್ತಿಸುವುದು
ಅಭ್ಯಾಸವಾಗಿ ಹೋಗಿದೆ ಜನರಿಗೆ. ಹಾಗಾಗಿ ಯಾವುದು ನಿಜವಾದ ಲೈಕು, ಯಾವುದು ಫೇಕು ಅಂತ ಗೊತ್ತಾಗುವುದೇ ಇಲ್ಲ.. ತಂತ್ರಜ್ಞಾನ ಇರುವುದು ಸದ್ಬಳಕೆಗೆ, ಒಳ್ಳೆಯದಕ್ಕೆ ಬಳಸೋಣ. ವಾಟ್ಸಪ್ ಗ್ರೂಪುಗಳಲ್ಲಿ ನನ್ನಿಂದ ಯಾರಿಗೂ ತೊಂದರೆ ಆಗದ ಹಾಗೆ ಇರುತ್ತೇನೆ ಎಂಬ ಸಂಕಲ್ಪ ಪ್ರತಿಯೊಬ್ಬರೂ ಕೈಗೊಂಡರೆ ಗ್ರೂಪು ಸ್ವಚ್ಛವಾಗಿ ನಳನಳಿಸುತ್ತಾ ಜಂಕ್ ಮುಕ್ತವಾಗಿ ಇದ್ದೀತು. ತನ್ನ ಗಾಂಭೀರ್ಯ ಕಾಪಾಡಿಕೊಂಡೀತು.

-ಕೃಷ್ಣಮೋಹನ ತಲೆಂಗಳ.


No comments: