ಫಸ್ಟು ಬಸ್ಸಿನಲ್ಲಿ ಅಗರಬತ್ತಿಯ ಸುರುಳಿ ಸುರುಳಿ ಪರಿಮಳ.....

ಬೆಳಗ್ಗಿನ ಜಾವ ಏಳೂ ಕಾಲಕ್ಕೆ ಹೊರಡುವುದು ಗಣೇಶ ಪ್ರಸಾದ ಬಸ್ಸು. ಹಾಗಂತ ಯಾರೂ ಕರೆಯುವುದಿಲ್ಲ. ಫಸ್ಟ್ ಬಸ್ ಅಂತಲೇ ಕರೆಯುತ್ತಿದ್ದೆವು. ಕಾಟುಕುಕ್ಕೆಯ ಅಜ್ಜನಮನೆಗೆ ಹೋದರೆ ಮರುದಿನ ಹೊರಡುತ್ತಿದ್ದದ್ದು ಇದೇ ಫಸ್ಟ್ ಬಸ್ಸಿನಲ್ಲಿ. ಫಸ್ಟ್ ಬಸ್ಸಿಗೆ ಹೊರಡುವುದು ಹಿಂದಿನ ದಿನವೇ ನಿಘಂಟಾಗಿರುತ್ತಿತ್ತು. ಪೆರ್ಲದಲ್ಲಿ ಇಳಿದು ಸ್ಟೇಟು ಬಸ್ಸಿನಲ್ಲಿ ಹತ್ತಿಕೊಂಡರೆ ಮತ್ತೆ ವಿಟ್ಲದಿಂದ ಹೋಗುವ ಬಸ್ಸಿನಲ್ಲಿ ಕುಳಿತರೆ ಸೀದಾ ಶಾಲೆಯ ಶುರುವಾಗುವ ಹೊತ್ತಿಗೆ ಊರು ತಲುಪಬಹುದಿತ್ತು.

ಫಸ್ಟು ಬಸ್ಸೇಕೆ ಅಷ್ಟು ತಾಜಾ ಇರುತ್ತದೋ ಗೊತ್ತಿಲ್ಲ. ಆಗಷ್ಟೇ ತೊಳೆದು ಹನಿ ಹನಿ ನೀರು ತೊಟ್ಟಿಕ್ಕುವ ಬಾಡಿ... ಎದುರಿನ ಗಾಜಿನ ತುಂಬಾ ನೀರ ಮಣಿಗಳ ಸಾಲು ಸಾಲು... ಹೊರಗೆಲ್ಲ ಕ್ಲೀನು ಕ್ಲೀನು... ಬೆಳಗ್ಗಿನ ಜಾವ ಪೋಣಿಸಿ ತಂದು ಎದುರಿನ ದೇವರ ಫೋಟೋಕ್ಕೆ ನೇತಾಡಿಸಿದ ದಾಸವಾಳದ ಮಾಲೆ....ಸುರುಳು ಸುರುಳಿಯಾಗಿ ಹೊಗೆಯಲ್ಲಿ ಘಮ ಘಮ ಪರಿಮಳ ಹೊತ್ತು ತರುವ ಅಗರಬತ್ತಿ... ನಂತರದ ರಶ್ಸು, ಧೂಳು, ತಿಕ್ಕಾಟ, ತಳ್ಳಾಟ, ನೇತಾಡುವ ಎಲ್ಲ ರಗಳೆಗಳನ್ನು ಮರೆತು ಮೊದಲ ಸ್ಟಾಪಿನಲ್ಲಿ ಹತ್ತಿದರೆ ಎಲ್ಲಿ ಬೇಕಾದರೂ ಕೂರುವಷ್ಟು ಸೀಟುಗಳು ಖಾಲಿ ಖಾಲಿ ಕಾಯುತ್ತಿದ್ದ ಫಸ್ಟು ಬಸ್ಸಿನಲ್ಲಿ ಹೋಗುವುದೇ ಖುಷಿ.

ಅರೆಬರೆ ಮಂಜನ್ನು ಸೀಳುತ್ತಾ, ಬಸ್ಸು ಹೋಗುವಷ್ಟೇ ಕಿರಿದಾದ ಮಾರ್ಗದಲ್ಲಿ ಎಲ್ಲಿ ಚಕ್ರ ಚರಂಡಿಗೆ ಜಾರುವುದೋ ಎಂದು ಆತಂಕವಾದರೂ ಚಾಕಚಕ್ಯತೆಯಿಂದ ಡ್ರೈವ್ ಮಾಡುವ ಡ್ರೈವರ್ ಮಾಮ. ದೇವರ ಫೋಟೋಗೆ ನಮಸ್ಕಾರ ಮಾಡಿ ಬೋಣಿಗೆ ತನ್ನ ಕಂಕುಳಡಿಯ ಬ್ಯಾಗಿನಿಂದ ಟಿಕೆಟು ಪುಸ್ತಕ ತೆಗೆದು ಕಿಸೆ ತುಂಬ ಚಿಲ್ಲರೆ ತುರುಕಿ ಕೆಲಸಕ್ಕೆ ಅಣಿಯಾಗುವ ಆ ವಯಸ್ಸಿನ ಹೀರೋ ಕಂಡಕ್ಟರು. ಬಾಯಿ ತುಂಬ ಕವಳ ತುಂಬಿಸಿ "ಕೇರಿ ಕೇರಿ..". ಅಂತ ಚೀರುತ್ತಾ ಹಿಂದಿನ ಬಾಗಿಲಿನಲ್ಲಿ ನೇತಾಡುತ್ತಾ ಟಿಂಗ್ ಟಿಂಗ್ ಅಂತ ಹಗ್ಗ ಎಳೆದು ಬಸ್ಸನ್ನು ನಿಲ್ಲಿಸುವ, ಹೊರಡಿಸುವ ತಾಕತ್ತಿದ್ದ ಕ್ಲೀನರ್.... ಎಷ್ಟೊಂದು ವೈವಿಧ್ಯತೆ ಇತ್ತು....

ಬೆಳಗ್ಗಿನ ದಂಧೆಗೆ ಹೊರಡುವ ಮಂದಿ ಬುಟ್ಟಿ, ಗೋಣಿ, ತರಕಾರಿ, ಬಾಳೆ ಎಲೆ ಕಟ್ಟು ಹೊತ್ತು ಅಲ್ಲಲ್ಲಿ ಸ್ಟಾಪುಗಳಲ್ಲಿ ಹತ್ತುವವರು. ದೂರದ ಕಾಲೇಜಿಗೆ ಹೋಗಲೆಂದು ಬೆಳಗ್ಗಿನ ಜಾವವೇ ಎರಡು ಮೈಲಿ ನಡೆದು ರಸ್ತೆಗೆ ತಲುಪಿ ಉಸ್ಸಪ್ಪ ಅಂತ ಬಸ್ಸಿಗೆ ಹತ್ತುವವರು. ಮೊಬೈಲೇ ಇಲ್ಲದ ಕಾಲದಲ್ಲಿ ಚಾಟಿಂಗ್, ನೆಟ್ವರ್ಕಿನ ಹಂಗಿಲ್ಲದೆ, ನೇತಾಡುವ ಇಯರ್ ಫೋನ್ ಇಲ್ಲದೆ ಆರಾಮವಾಗಿ ಸೂರ್ಯೋದಯವನ್ನೋ, ಬೆಳಗ್ಗಿನ ಪ್ರಕೃತಿಯ ತಂಪು ತಂಪು ಹವೆಯ ಮಾದಕತೆಯನ್ನು ಆಸ್ವಾದಿಸುತ್ತಾ ಮೂಡನ್ನು ಶುಭ್ರವಾಗಿರಿಸುತ್ತಿದ್ದ ಹಳ್ಳಿಯ ಮಂದಿಗೆ ದಿನ ಶುರುವಾಗುತ್ತಿದ್ದುದು ಚೆಂದದ ಫಸ್ಟು ಬಸ್ಸಿನಿಂದ...

ಅದೇ ಬಸ್ಸು ಹತ್ತೂಮುಕ್ಕಾಲರ ಎರಡನೇ ಟ್ರಿಪ್ಪಿಗೆ ಬೆವರಿನಿಂದ ತೋಯ್ದು, ಕಂಡಕ್ಟರು ಸುಸ್ತಾಗಿ ಚಹಾ ಕುಡಿದು, ಮಧ್ಯಾಹ್ನ ಎರಡೂ ಮುಕ್ಕಾಲರ ಹೊತ್ತಿಗೆ ದೇವಸ್ಥಾನದ ಹತ್ತಿರ ನಿಂತು ಊಟ ಮಾಡಿ, ತೂಕಡಿಸುವ ಮೂಡಿನಲ್ಲಿ ಮತ್ತೆ ಕಾಸರಗೋಡಿಗೆ ಹೋಗಿ ಸಂಜೆ ಆರೂ ಮುಕ್ಕಾಲಕ್ಕೆ ರಶ್ಶೋರಶ್ಶು ಎಂಬಂತೆ ಹೊಟ್ಟೆ ತುಂಬಿಕೊಂಡು, ಒಂದಷ್ಟು ಬೆವರು, ಮತ್ತಷ್ಟು ತೀರ್ಥದ ಘಾಟಿನೊಂದಿಗೆ ಪೆರ್ಲದಲ್ಲಿ ಬಂದಿಳಿದಾಗ ಅಷ್ಟೂ ಮಂದಿ ಬಸ್ಸಿನಿಂದ ಇಳಿಯುತ್ತಾರೆ. ಉಳಿದ ನಾಲ್ಕಾರು ಮಂದಿ ಮಾತ್ರ ಲಾಸ್ಟ್ ಸ್ಟಾಪಿನ ವರೆಗೆ ಬರುವಾಗ ಬಸ್ಸಿನಲ್ಲಿ ಎಷ್ಟೊಂದು ಜಾಗವಿದೆಯಲ್ಲ ಅಂತ ಖುಷಿಯಾಗುತ್ತಿತ್ತು...

ಎದುರಿನ ಬಾಗಿಲಿನ ಹತ್ತಿರ ಕಂಡಕ್ಟರು ಇಲ್ಲದಿದ್ದರೆ ನಾವೇ ಬಾಗಿಲು ಹಾಕುವ ಖುಷಿ (ಅದೊಂದು ತಾಕತ್ತೆಂಬ ಭಾವವಿತ್ತು), ಡ್ರೈವರ್ ಯಾಕೆ ಪದೇ ಪದೇ ಗೇರು ಚೇಂಜ್ ಮಾಡ್ತಾನೆ ಅನ್ನುವ ಅಚ್ಚರಿ. ತಿರುವು ಬರುವಾಗ ಯಾಕಷ್ಟು ಕಷ್ಟ ಪಟ್ಟು ಸ್ಟೀರಿಂಗ್ ತಿರುಗಿಸುತ್ತಾನೆಂಬ ಅನುಕಂಪ, ರಿವರ್ಸ್ ಹೋಗುವಾಗ ಕ್ಲೀನರ್ ಹಿಂದೆ ಹಿಂದೆ ಹೋಗಿ ಬಸ್ಸನ್ನು ಕಕ್ಕುಲತೆಯಿಂದ ತಿರುಗಿಸಲು ಸೂಚನೆ ನೀಡುತ್ತಿದ್ದ ಪರಿ, ಟಾಪಿನಿಂದ ಯಾರಾದರೂ ಬೀಡಿಯ ಎಲೆಯ ಕಟ್ಟನ್ನು ತೆಗೆಯಲು ಹತ್ತಿದ್ದಾಗ ಕಂಡಕ್ಟರು ನೀಡುತ್ತಿದ್ದ "ಟಾಪಿಲಿ... ಟಾಪಿಲಿ" ಎಂಬ ಸೂಚನೆ... ಟಾಪಿಗೆ ಹತ್ತಿದ ಪುಣ್ಯಾತ್ಮ ಎಷ್ಟು ಧೀರನಿರಬಹುದೆಂಬ ಪ್ರಶಂಸೆ ಚಿಕ್ಕಂದಿನ ಬಸ್ಸಿನ ನೆನಪಿನ ಜೋಳಿಗೆಯಲ್ಲಿ ಬೆಚ್ಚಗೆ ಮಲಗಿರುವ ನೆನಪುಗಳು...

ಆಗೆಲ್ಲ ಬಸ್ಸು ಹತ್ತಿದ ತಕ್ಷಣ ತಲೆ ಅಡಿಗೆ ಹಾಕಿ ಚಾಟು ಮಾಡುವ ಕೃತಕ ಅವಸರ ಇರಲಿಲ್ಲ. ರಸ್ತೆಯಲ್ಲಿ ಭಾರೀ ಟ್ರಾಫಿಕ್ಕೂ ಇರಲಿಲ್ಲ. ಚತುಷ್ಪಥ ರಸ್ತೆಯೂ, ರಸ್ತೆಯಲ್ಲಿ ರಿಫ್ಲೆಕ್ಟರ್, ಹೈಟೆಕ್ ಬಸ್ಸುಗಳು, ಮನೆ ಮನೆಯಲ್ಲಿ ಕಾರುಗಳು ಯಾವುದೂ ಇರಲಿಲ್ಲ. ಆದರೂ ಏದುಸಿರು ಬಿಟ್ಟು ರಸ್ತೆ ತನಕ ನಡೆದು ಮಳೆ ಬಂದರೆ ಇಳಿಯಬಿಡುವ ಟಾರ್ಪಲಿನ್ ಇರುವ ಕಿಟಕಿ ಪಕ್ಕವೇ ಕುಳಿತು ಗಾಳಿಗೆ ಮುಖವೊಡ್ಡುವ ಬಸ್ಸಿನಲ್ಲಿ ಹೋಗುವ ಅನುಭೂತಿ ಮಾತ್ರ ಬೆಲೆ ಕಟ್ಟಲಾಗದ್ದು....

ಇಂದೂ ಅಷ್ಟೇ ಹೊತ್ತಿಗೆ ಅದೇ ಬಸ್ಸು ಹೋಗುತ್ತಿದೆ.... ಬಸ್ಸಿನ ಹೆಸರು ಬದಲಾಗಿದೆ... ಜನರೇಶನ್ ಕೂಡಾ ಈಗ ಬದಲಾಗಿದೆ. ಹತ್ತುವಾಗಲೇ ಕೈಯ್ಯಲ್ಲಿ ಇಷ್ಟುದ್ದದ ಫೋನಿರುತ್ತದೆ. ವಾಟ್ಸಪ್ಪು ನೋಡುತ್ತಲೇ ಟಿಕೆಟ್ ತೆಗೆಯುತ್ತಾರೆ. ನಗಲೂ ಪುರುಸೊತ್ತಿಲ್ಲ. ಬಸ್ಸಿನ ಅಗರಬತ್ತಿಯ ಪರಿಮಳ ಮೂಗು ಸೋಕುವುದು ತಿಳಿಯುವ ಹೊತ್ತಿಗೆ ಫೇಸ್ ಬುಕ್ ವಾಲ್ ಚೆಕ್ ಮಾಡಿ ಸ್ಮೈ ಲಿಗಳಲ್ಲೇ ರಿಪ್ಲೈ ಮಾಡಿ ಆಗಿರುತ್ತದೆ. ನಡು ನಡುವೆ ನೆಟ್ವರ್ಕ್ ಕೈಕೊಟ್ಟರೆ ಸಿಟ್ಟು ಬರುತ್ತದೆ... ಟಿಕೆಟ್ ಇಶ್ಯೂ ಮಾಡಿದ ಬಳಿಕ ಕಿಸೆಗೆ ಕೈ ಹಾಕಿ ಕಂಟಕ್ಟರ್ ಮಾಮನೂ ವಾಟ್ಸಪ್ಪು ಚೆಕ್ ಮಾಡುವುದು ಕಂಡಾಗ ಎಲ್ಲರೂ ಅಪ್ಡೇಟ್ ಆಗಿದ್ದಾರೆ ಎನಿಸುತ್ತದೆ... ಆ ಮಾರ್ಗ ಮತ್ತು ಬಸ್ಸು ಓಡುವ ಸಮಯವನ್ನು ಹೊರತುಪಡಿಸಿ....!!!

-ಕೃಷ್ಣಮೋಹನ ತಲೆಂಗಳ.

2 comments:

Venkat said...

ನಮ್ಮ ಬಸ್ಸು 🙂

vinootana said...

ಹಿಂದಿನ ಬಸ್ ಪ್ರಯಾಣದ ನೆನಪೇ ಖುಷಿ ನೀಡುತ್ತದೆ. ಈಗ ಅದೆಷ್ಟು ಬಾರಿ ಬಸ್ ಲ್ಲಿ ಸಂಚರಿಸಿದರು ಆ ಖುಷಿ ಇಲ್ಲ