ಸಿದ್ಧ ತೀರ್ಪು ಮತ್ತು ವಿಚಾರಣೆ ಶೈಲಿಯ ಟೀಕೆ....


ತೀರ್ಪು ಸಿದ್ಧಪಡಿಸಿಯೇ ವಿಚಾರಣೆ ಮಾಡುವುದು, ಸಿದ್ಧ ಉತ್ತರ ನಿರೀಕ್ಷಿಸಿಯೇ ಪ್ರಶ್ನೆ ಕೇಳುವುದು ಅಥವಾ ಇದಮಿತ್ಥಂ ಎಂಬಂತೆ ಸಾಮಾನ್ಯೀಕರಿಸಿ ಮಾತನಾಡುವುದು ಸುಲಭ. ಸಾಮಾನ್ಯೀಕರಿಸಿ ತೀರ್ಪಿನ ಸ್ವರೂಪದಲ್ಲಿ ಮಾತನಾಡುವುದ ಹಿಂದೆ ಒಂದು ಸಮೂಹದ ಅನಿಸಿಕೆ ಇರುತ್ತದೆ. ಬಾಯಿಯಿಂದ ಬಾಯಿಗೆ ಹರಿದು ಬಂದದ್ದು, ಅಥವಾ ಯಾರೋ ಒಬ್ಬರ ಅನಿಸಿಕೆಗೆ ಇತರರು ಹೌದೌದು ಎಂದು ಸಹಮತ ವ್ಯಕ್ತಪಡಿಸುವುದು. ಈಗ ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಒಂದು ಅವಹೇಳನ, ಒಂದು ತೇಜೋವಧೆ ಅಥವಾ ಒಂದು ವ್ಯವಸ್ಥೆಯನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಾಯಿಗೆ ಬಂದ ಹಾಗೆ ಟೀಕಿಸಲು ವೇದಿಕೆ ಸಿದ್ಧವಾಗುತ್ತದೆ. ಟೀಕೆಯ ಭರದಲ್ಲಿ ಟೀಕಿಸಲ್ಪಟ್ಟವನ ಅಹವಾಲು ಕೇಳಿಸುವ ತಾಳ್ಮೆ ಬಹುತೇಕರಿಗೆ ಇರುವುದಿಲ್ಲ.

ಟೀಕೆ, ಅಭಿಪ್ರಾಯದ ಪ್ರಸ್ತುತಿ ಅಥವಾ ಸಲಹೆ ನೀಡುವುದು, ಅಥವಾ ಉನ್ನತಿಗೋಸ್ಕರ ಬದಲಾವಣೆಗಳನ್ನು ಸೂಚಿಸುವ ಹಕ್ಕು ಎಲ್ಲರಿಗೂ ಇದೆ. ಆ ಸಲಹೆ ಅಥವಾ ಅಭಿಪ್ರಾಯದ ಹಿಂದೆ ಒಂದಷ್ಟು ತಿಳಿವಳಿಕೆ, ವಾಸ್ತವಿಕ ಪ್ರಜ್ಞೆ ಅಥವಾ ತಾನು ಟೀಕಿಸುವ ವ್ಯವಸ್ಥೆ ಕುರಿತು ಕಿಂಚಿತ್ ವ್ಯಾವಹಾರಿಕ ಜ್ಞಾನ ಇದ್ದರೆ ಮಾಡುವ ಟೀಕೆ ಹೆಚ್ಚು ಅರ್ಥಪೂರ್ಣ ಎನಿಸೀತು.

ದೂರದಲ್ಲಿ ಗುಂಪಿನ ನಡುವೆ ನಿಂತು ಅದು ಸರಿ ಇಲ್ಲ, ಇದು ಸರಿ ಇಲ್ಲ, ಇಡೀ ವ್ಯವಸ್ಥೆಯೇ ಸರಿ ಇಲ್ಲ, ದಿನ ಕಳೆದಂತೆ ಎಲ್ಲವೂ ಕೆಳಮಟ್ಟಕ್ಕೆ ಇಳಿಯುತ್ತಿದೆ, ಯಾರಿಗೂ ಜವಾಬ್ದಾರಿ ಇಲ್ಲ ಎಂದು ಹೇಳುವುದು ಸುಲಭ. ಹಾಗೆ ಹೇಳುವ ಹಕ್ಕೂ ಪ್ರತಿಯೊಬ್ಬರಿಗೂ ಇದೆ. ಆದರೆ ಅದು ಸ್ವಂತ ಅಭಿಪ್ರಾಯವಾಗಿದ್ದರೆ ನಾವು ಮಾಡುವ ಟೀಕೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ನಾಲ್ಕು ಮಂದಿ ಹೇಳಿದ್ದಾರೆಂಬ ಒಂದೇ ಕಾರಣಕ್ಕೆ ಐದನೆಯವರಾಗಿ ನಾವು ಅವರ ಜೊತೆ ವ್ಯವಸ್ಥೆಗೆ ಕಲ್ಲೆಸೆಯುತ್ತಾ ಸರಿ ಇಲ್ಲ ಸರಿ ಇಲ್ಲ ಎಂದು ದೂರುತ್ತಾ ನಾವು ಹೆಚ್ಚು ಪ್ರಜ್ಞಾವಂತರಾದೆವು ಎಂದುಕೊಂಡು ಖುಷಿ ಪಡುತ್ತೇವೆ.

ಆದರೆ...
ಎಷ್ಟೋ ಬಾರಿ ನಮಗೆ ನಮ್ಮ ಸುತ್ತಮುತ್ತಲಿನವರು, ನಮ್ಮ ಆತ್ಮೀಯರ ಅತಿರೇಕಗಳನ್ನೇ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ಅಷ್ಟೇ ಏಕೆ ನಮ್ಮದೇ ಚಟಗಳು, ನಮ್ಮದೇ ದೌರ್ಬಲ್ಯಗಳು ಅಥವಾ ನಮ್ಮ ಬಲಹೀನತೆಗಳನ್ನು ನಿಯಂತ್ರಿಸಲು ಸುಧಾರಿಸಲು ಸಮಯ ಸಿಗುವುದಿಲ್ಲ ಅಥವಾ ಅಂತಹ ವಿಚಾರದಲ್ಲಿ ಅಸಹಾಯಕತೆ ಆವರಿಸಿಕೊಳ್ಳುತ್ತದೆ. ಅಷ್ಟೇ ಯಾಕೆ, ಬಸ್ಸಿನಲ್ಲಿ ಚಾಕಲೇಟು ತಿಂದು ಸಿಪ್ಪೆ ರಸ್ತೆಗೆ ಎಸೆಯುವಾಗ, ಸಾರ್ವಜನಿಕ ಟಾಯ್ಲೆಟ್ಟನ್ನು ಬಳಸಿ ಕನಿಷ್ಠೆ ನೀರು ಹಾಕದೆ ಬರುವಾಗ, ದೊಡ್ಡ ಸರತಿ ಸಾಲಿನಲ್ಲಿ ಕ್ಯೂ ತಪ್ಪಿಸಿ ಹೋಗುವಾಗ, ರಸ್ತೆಯಲ್ಲಿ ಕಂಡ ಕಂಡಲ್ಲಿ ಉಗಿಯುವಾಗ, ವಾಟ್ಸಪ್ಪಿನಲ್ಲಿ ಗತಿ ಗೋತ್ರವಿಲ್ಲದ ಅನಾಮಧೇಯ ಬರಹಗಳನ್ನು ಕುರುಡರಂತೆ ನಂಬಿ ಕಂಡ ಕಂಡ ಗ್ರೂಪುಗಳಿಗೆ ದೂಡುವಾಗ ನಮ್ಮನ್ನು (ಬಹುತೇಕರನ್ನು, ಈ ಥರ ಮಾಡುವವರನ್ನು) ಯಾವ ಪಾಪಪ್ರಜ್ಞೆಯೂ ಕಾಡುವುದಿಲ್ಲ. ಜಂಕ್ ಫುಡ್ ಬಗ್ಗೆ ಭಾಷಣ ಮಾಡಿ ಸಂಜೆ ರಸ್ತೆ ಬದಿಯಲ್ಲಿ ನಿಂತು ಭೇಲ್ ಪೂರಿ ತಿನ್ನುವಾಗ ಏನೂ ಅನ್ನಿಸುವುದಿಲ್ಲ. ಧೂಮಪಾನದ ನಿಷೇಧದ ಬಗ್ಗೆ ತಿಳಿವಳಿಕೆ ಹೇಳಿ ಸ್ವತಹ ಸಿಗರೇಟು ಸೇದುವಾಗಲೂ ನೈತಿಕತೆ ಕಾಡುವುದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥೆಗಳು ಕೆಟ್ಟು ಹೋಗಿರುವ ಬಗ್ಗೆ ಅತಿಯಾದ ಕಾಳಜಿ ತೋರಿಸುವವರ ಪೈಕಿ ಬಹುತೇಕ ಮಂದಿ, 10 ಮಂದಿ ಹಾಗೆ ಹೇಳಿದ್ದಾರೆ ಎಂಬ ಕಾರಣಕ್ಕೆ ತಾವೂ ಅದಕ್ಕೆ ಸ್ವರ ಸೇರಿಸುವವರು ವೈಯಕ್ತಿಕವಾಗಿ ಸಿಕ್ಕಾಗ ಅಥವಾ ತಮಗೊಂದು ವ್ಯವಸ್ಥೆಯನ್ನು ಸುಧಾರಿಸುವ ಅವಕಾಶ ಸಿಕ್ಕಾಗ ಆ ಬಗ್ಗೆ ಚಿಂತಿಸುವುದೇ ಇಲ್ಲ ಅಥವಾ ಆ ಕುರಿತು ಯೋಚಿಸುವುದೇ ಇಲ್ಲ, ಮಾತನಾಡುವುದೂ ಇಲ್ಲ. ಕೆಲವರು ಈ ಕುರಿತು ಯೋಚಿಸುವವರೂ ಇರಬಹುದು. ಆದರೆ ಯಾಂತ್ರಿಕವಾಗಿ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದೇವೆ ಎಂದುಕೊಂಡು ಫಾರ್ವರ್ಡ್ ಸಂಸ್ಕೃತಿಯಲ್ಲಿ ಸಕ್ರಿಯರಾಗಿರುವವರಿಗೆ ತಾನೂ ಟೀಕಿಸುವವರ ಪೈಕಿ ಇರಬೇಕೆಂಬ ಭಾವ ಇರುತ್ತದೆಯಷ್ಟೇ ಹೊರತು ವ್ಯವಸ್ಥೆಯನ್ನು ಹೀಗೆಯೇ ಸುಧಾರಿಸಿ ಎಂಬ ಸಲಹೆ ಬಹುತೇಕ ಸಂದರ್ಭ ಇರುವುದಿಲ್ಲ. ಅಥವಾ ಟೀಕಿಸುವ ವ್ಯವಸ್ಥೆಯೊಳಗೆ ತಾನೂ ಒಂದು ಭಾಗ ಎಂಬುದೂ ಅರಿವಾಗುವುದಿಲ್ಲ.
ಪತ್ರಿಕೆಗಳೆಲ್ಲ ಹಾಳಾಗಿ ಹೋಗಿವೆ ಎಂದು ಬಾಯಿಗೆ ಬಂದ ಹಾಗೆ ಟೀಕಿಸಿ ಮರುದಿನ ದುಡ್ಡು ಕೊಟ್ಟು ಅದೇ ಪತ್ರಿಕೆಯನ್ನು ಕೊಂಡು ಓದುವ ಹಾಗೆ....

ಪ್ರತಿ ವ್ಯವಸ್ಥೆಗೂ ಒಂದು ಕೆಲಸದ ಪದ್ಧತಿ ಇರುತ್ತದೆ. ಪ್ರತಿ ಕೆಲಸ, ಹವ್ಯಾಸಗಳಿಗೂ ಕೆಲವು ಇತಿಮಿತಿಗಳು, ಕೆಲವು ಅನಿವಾರ್ಯವಾದ ನಡಾವಳಿಗಳೂ ಇರುತ್ತವೆ. ಅದು ಎಲ್ಲ ಸಂದರ್ಭಗಳಲ್ಲಿ, ಎಲ್ಲರಿಗೂ ಕಾಣಸಿಗುವುದಿಲ್ಲ.
ಎಲ್ಲರೂ ಮಾಡಿದ್ದು ಸರಿ ಎಂದು ಅಂಗೀಕರಿಸಬೇಕೆಂದೋ, ಅಥವಾ ಎಲ್ಲವೂ ಟೀಕೆಗಳಿಗೆ ಹೊರತಾದ್ದು ಎಂಬ ವಾದ ಖಂಡಿತಾ ಅಲ್ಲ. ಸಾರ್ವಜನಿಕವಾಗಿ ಟೀಕಿಸುವ ಮೊದಲು ಸ್ವಲ್ಪ ವಿವೇಚಿಸಿ ಟೀಕಿಸಿದರೆ ಅಥವಾ ಟೀಕೆಯಲ್ಲಿ ಸ್ವಲ್ಪ ನಮ್ಮತನವೂ ಇದ್ದರೆ ತೀರ್ಪುಗಾರರ ಶೈಲಿಯಲ್ಲಿ ಟೀಕಿಸುವುದು ಮತ್ತು ಅಸಹಾಯಕರಾಗಿ ಟೀಕೆಯನ್ನು ವಿನಾ ಕಾರಣ ಕೇಳಿಸಿಕೊಳ್ಳಬೇಕಾದ ಅನಿವಾರ್ಯ ಹಿಂಸೆಯನ್ನು ಅನುಭವಿಸುವವರ ನೋವನ್ನೂ ಅರ್ಥಮಾಡಿಕೊಳ್ಳಬಹುದು.

ಕೃಷ್ಣಮೋಹನ ತಲೆಂಗಳ (02.08.2019)

No comments: