ಸುಳ್ಳು ಸುದ್ದಿ ಪ್ರಸಾರದಿಂದಲೂ ಅದೇನು ಅಂತಹ ಮಹಾನ್ ಖುಷಿ ಸಿಗುತ್ತದೆ?!



ನಿರಂತರ ಮಳೆ ಹಿನ್ನೆಲೆಯಲ್ಲಿ ದ.ಕ.‌ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಆಯಾ ದಿನದ ಮಳೆ ಪರಿಸ್ಥಿತಿ ಗಮನಿಸಿ ರಜೆ ಘೋಷಿಸುತ್ತಿದ್ದಾರೆ. ಹವಾಮಾನ ವರದಿ ಆಧರಿಸಿ, ನಾಳೆಯ ರಜೆಯನ್ನು ಇಂದು ಸಂಜೆಯೇ ಘೋಷಿಸಿ ಪ್ರಕಟಣೆ ಹೊರಡಿಸುತ್ತಾರೆ (ಬೆಳಗ್ಗೆ ಮಕ್ಕಳು ಶಾಲೆಗೆ ಹೊರಟ ಬಳಿಕ ರಜೆ ಘೋಷಿಸಿದರೆ ಹೆತ್ತವರಿಗೂ, ಮಕ್ಕಳಿಗೂ ಗೊಂದಲವಾಗುವ ಹಿನ್ನೆಲೆ). ಆದರೆ ಕೆಲವು ಅತಿ ಬುದ್ಧಿವಂತರು ಮತ್ತು ವಿಘ್ನ ಸಂತೋಷಿಗಳು 08.08.2019ರ ಜಿಲ್ಲಾಧಿಕಾರಿ ಸಹಿ ಇರುವ ರಜೆ ಘೋಷಣೆಯ ಆದೇಶ ಪತ್ರವನ್ನು ನಕಲಿ ಮಾಡಿ, ಅದರ ದಿನಾಂಕವನ್ನು 09.08.2019 ಎಂದು ಬದಲಿಸಿ "ಶುಕ್ರವಾರವೂ ಶಾಲಾ ಕಾಲೇಜುಗಳಿಗೆ ರಜೆ" ಎಂಬ ವದಂತಿಯನ್ನು ಗುರುವಾರ ಮಧ್ಯಾಹ್ನವೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟರು. ಇದನ್ನು ಜನ‌ ನಂಬತೊಡಗಿದರು. ರಜೆ ಅಂತ ಕಂಡ ಕಂಡ ಗ್ರೂಪುಗಳಿಗೆ ಫಾರ್ವರ್ಡ್ ಮಾಡಲು ಶುರು ಮಾಡಿದರು.

ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಮತ್ತು ವಾರ್ತಾಧಿಕಾರಿ ಅವರು, "ಈ ಆದೇಶ ಸುಳ್ಳು, ಈ ಥರ ವರ್ತಿಸಿದರೆ ಕ್ರಮ‌ ಕೈಗೊಳ್ಳುವ" ಎಂದು ಮತ್ತೊಂದು ಆದೇಶ ಹೊರಡಿಸಬೇಕಾಯಿತು. 

ಬಳಿಕ ಗುರುವಾರವೂ ಮಳೆ ವಾತಾವರಣ ಮುಂದುವರಿದು ರಾತ್ರಿ 7 ಗಂಟೆ ಸುಮಾರಿಗೆ ಅಧಿಕೃತವಾಗಿ ಜಿಲ್ಲಾಧಿಕಾರಿ ಶುಕ್ರವಾರ ಶಾಲೆಗಳಿಗೆ ರಜೆ ಎಂದು ಘೋಷಿಸಿದರು. ನಂತರ ಈ ಆದೇಶ ಪ್ರತಿ‌ ಜಾಲತಾಣಗಳಲ್ಲಿ ಹರಿದಾಡಿದರೂ ಜನ ನಂಬಲು ತಯಾರಿರರಿಲ್ಲ!
ಯಾವುದು ನಿಜ? ಯಾವುದು ಸುಳ್ಳೆಂಬ ಗೊಂದಲ ವ್ಯಾಪಕವಾಯ್ತು. ಮಾಧ್ಯಮ ಪ್ರತಿನಿಧಿಗಳು ತಮ್ಮ ಕೈಲಾದಷ್ಟು ಮನವರಿಕೆ ಮಾಡಿಕೊಟ್ಟರು. 

ಈ ನಡುವೆ ಸತತ ರಜೆ ನೀಡುವ ಕಾರಣಕ್ಕೆ ಜವಾಬ್ದಾರಿಯುತ ಜಿಲ್ಲಾಧಿಕಾರಿ ಕುರಿತು ಹಗುರ ಜೋಕುಗಳನ್ನು ಹರಿಯಬಿಡುವುದು, ತಮಾಷೆ ಮಾಡುವುದೂ ಜಾಲತಾಣದಲ್ಲಿ ಕಾಣಿಸುತ್ತಿದೆ....
ಇದು ನಿನ್ನೆ ಮೊದಲಲ್ಲ. ಪದೇ ಪದೇ ಇಂತಹ ವದಂತಿಗಳು, ಕಪೋಲಕಲ್ಪಿತ ವಿಚಾರಗಳು ಬೇಜವಾಬ್ದಾರಿಯುತವಾದ ಕೆಲವೇ ಕೆಲವು ವ್ಯಕ್ತಿಗಳು ನಡವಳಿಕೆಯಿಂದಾಗಿ ವೈರಲ್ ಆಗಿ ಬಿಡುತ್ತದೆ. ನಂತರ ಸತ್ಯವನ್ನು ಹೊರಗೆ ತರುವಲ್ಲಿ ಸಂಬಂಧಪಟ್ಟವರಿಗೆ ಸಾಕು ಸಾಕಾಗಿರುತ್ತದೆ.
----
ನನಗೆ ಕಾಡುವ ಪ್ರಶ್ನೆಗಳು:

1) ಜಿಲ್ಲೆಯ ಕುರಿತು ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲಾಧಿಕಾರಿ ಅವರು ಯೋಚಿಸಿ ಯೋಗ್ಯ ಸಂದರ್ಭ ನಿರ್ಧಾರ ತೆಗೆದುಕೊಂಡು ರಜೆ ಘೋಷಿಸುತ್ತಾರೆ. ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಿಸಿದ್ದಾರೆ. ಸತತ ಬಿರುಗಾಳಿ ಮತ್ತು ಮಳೆ ಬರುತ್ತಿದೆ. ಬರ ನಿರ್ವಹಣೆ ಜೊತೆ ಅವರಿಗೆ ಇತರ ಸಾಕಷ್ಟು ಜವಾಬ್ದಾರಿಗಳು ಇರುತ್ತವೆ. ಅವರಿಗೆ ರಜೆ ಕೊಡುವುದೊಂದೇ ಕೆಲಸವಲ್ಲ. ಅವರು ವರದಿಗಳನ್ನು ಆಧರಿಸಿ, ವಿವೇಚಿಸಿಯೇ ರಜೆ ನೀಡುತ್ತಾರೆ. ಯಾಕೆ ಅವಸರ ಮಾಡಿ ಮಧ್ಯಾಹ್ನವೇ ಸುಳ್ಳು ಸುದ್ದಿ ಹರಡಿಸುವ ಆತುರ?

2) ಈ ಥರ ನಕಲಿ ಪೋಸ್ಟುಗಳನ್ನು ಸೃಷ್ಟಿಸುವುದು, forward ಮಾಡುವುದರ ಪರಿಣಾಮಗಳ ಬಗ್ಗೆ ಅರಿವಿದೆಯೇ? ಇದೆಷ್ಟು ಅಪಾಯಕಾರಿ ಎಂಬುದು ಗೊತ್ತಿಲ್ಲವೇ?

3) ಕಟೀಲು ಮುಳುಗಿತು, ಚಾರ್ಮಾಡಿ ಕುಸಿಯಿತು, ಎಲ್ಲೋ ಅಪಘಾತನಾಗಿ ಕೈಕಾಲನ್ನು ಕೈಯ್ಯಲ್ಲೇ ಎತ್ತಿಕೊಂಡು ಹೋದರು, ಮೋದಿ ವಾಟ್ಸಪ್ ಬಂದ್ ಮಾಡಿಸಿದರು ಎಂದೆಲ್ಲ ಯಾವುದೋ ಊರಿನ ವಿಡಿಯೋಗಳನ್ನು ವೈರಲ್ ಮಾಡಿ, ನಿಜವೆಂದೇ ನಂಬಿ ಕುರುಡರಾಗಿ forward ಮಾಡುವಾಗ ಇದು ಸತ್ಯವೇ? ಸುಳ್ಳೇ? ಅಂತ ಯಾಕೆ ಯೋಚಿಸುವುದಿಲ್ಲ?

4) ಸುಳ್ಳು ಸುದ್ದಿ ಪ್ರಸಾರದಿಂದ ಆಡಳಿತ, ಪೊಲೀಸರು, ಮಾಧ್ಯಮದ ಮಂದಿಗೆ ಆಗುವ ಸಮಸ್ಯೆಗಳ ಅರಿವು ಇಂಥವರಿಗಿದೆಯೇ? ಅಲ್ಲಿ ನೆರೆ ಬಂದಿದೆ, ಇಲ್ಲಿ ದಾರಿ ಬ್ಲಾಕ್ ಆಗಿದೆ ಎಂದು ವಾಟ್ಸಪ್ ಗಳಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡಿದರೆ ಆ ರಸ್ತೆಯಲ್ಲಿ ಪ್ರಯಾಣ ಹೊರಟವರ ಮನೆ ಮಂದಿಗೆ ಎಷ್ಟು ಆತಂಕ ಆಗಬಹುದೆಂಬ ವಿವೇಚನೆ ಇಂಥವರಿಗಿರುತ್ತದೆಯೇ...

5) ನಿರ್ಧಾರ ತೆಗೆದುಕೊಳ್ಳು ಅಧಿಕಾರಿಗಳು,‌ ನಿಖರ ಸುದ್ದಿ ತಿಳಿಸಲು ಮಾಧ್ಯಮ ಪ್ರತಿನಿಧಿಗಳ ಇದ್ದಾರೆ. ಪ್ರತಿಯೊಬ್ಬರೂ ಸುದ್ದಿಗಾರರೇ (ಖಚಿತವಲ್ಲದ ಸುದ್ದಿಗಳ ಪ್ರಚಾರಕರು) ಆದರೆ ಹೇಗೆ ?!

6) ಜಿಲ್ಲಾಧಿಕಾರಿ ಅವರು ನಿಯಮಗಳಿಗನುಸಾರ ಕೆಲಸ ಮಾಡಬೇಕು. ಅವರೂ ನಮ್ಮ ಹಾಗೆಯೇ‌ ಮನುಷ್ಯ. ಅವರಿಗೆ ತ್ರಿಕಾಲ ಜ್ಞಾನ ಇರುವುದಿಲ್ಲ. ಅವರು ಸರ್ವಜ್ಞರೇನಲ್ಲ. ಕಾಕತಾಳೀಯವಾಗಿ ರಜೆ ಕೊಟ್ಟ ದಿನ ಬಿಸಿಲು ಬರಲೂ ಬಹುದು. ಹಾಗಂತ ರಜೆ ಘೋಷಿಸದೆ ಆ ದಿನ ಅನಾಹುತ ಸಂಭವಿಸಿದರೆ ನಾವೆಲ್ಲ ಸೇರಿ ಅವರನ್ನೇ ದೂರುವುದಿಲ್ಲವೇ? ಸುಮ್ಮನೇ ಜೋಕು ಸೃಷ್ಟಿಸಿ ಯಾಕೆ ಪ್ರತಿ ಬಾರಿ ಕಾಲೆಳೆಯಬೇಕು?

7) ಈ ಪ್ರವಾಹ ಪರಿಸ್ಥಿರಿಯಲ್ಲಿ ಕೆಲವು ವರ್ಗದ ಮಂದಿಗೆ ಮಳೆ ಹಿನ್ನೆಲೆಯಲ್ಲಿ ರಜೆ ಪಡೆದು ಮನೆಯೊಳಗೆ ಕೂರಲು ಅವಕಾಶ ಇದೆ. ಮಳೆ ದಿನ ಮನೆಯಲ್ಲೇ ದಿನ ಕಳೆಯಲು ಸಾಧ್ಯವಿದೆ.ಆದರೆ ಮಳೆ ಎಂಬ ಕಾರಣಕ್ಕೆ ರಜೆ ಹೊಂದಲಾಗದೆ, ಎಂದಿಗಿಂತ ಹೆಚ್ಚು ಕೆಲಸವನ್ನು ಒತ್ತಡದಲ್ಲಿ ನಿರ್ವಹಿಸುವ ಒಂದು ವರ್ಗವೇ ಇದೆ. ಜಿಲ್ಲಾಡಳಿತ, ರಕ್ಷಣಾ ಪಡೆ, ಮಾಧ್ಯಮದ ಮಂದಿ, ಚಾಲಕರು, ವೈದ್ಯರು ಇತ್ಯಾದಿ ಇತ್ಯಾದಿ ಹಲವರಿದ್ದಾರೆ. ಸುಳ್ಳು ಸುದ್ದಿ‌ಹರಡುವ ವಿಕೃತಿ ಇವರೆಲ್ಲರ ಕೆಲಸಕ್ಕೆ ಅಡ್ಡಿಯಾಗುತ್ತದೆ ಮಾತ್ರವಲ್ಲ ಅವರೆಲ್ಲರ ಅಮೂಲ್ಯ ಸಮಯವನ್ನು ಹಾಳೆ ಮಾಡುತ್ತದೆಂಬುದು ನೆನಪಿರಲಿ!

8). ಯಾವುದೇ ವೃತ್ತಿ, ವ್ಯವಸ್ಥೆ ಬಗ್ಗೆ ಪೂರ್ತಿ ತಿಳಿವಳಿಕೆ ಇಲ್ಲದೆ ಮೂಗಿನ ನೇರಕ್ಕೆ ವಿಮರ್ಶಿಸುವುದು, ಅಪಹಾಸ್ಯ ಮಾಡುವುದು, ತೀರ್ಪು ಕೊಟ್ಟಂತೆ ಮಾತಾಡುವುದು, ಟೀಕಿಸಬೇಕೆಂಬ ಒಂದೇ ಕಾರಣಕ್ಕೆ ಟೀಕಿಸುವುದು, ನಮಗೆ ಪುರುಸೊತ್ತಿದೆ ಎಂಬ ಕಾರಣಕ್ಕೆ ಬೇರೆಯವರನ್ನು ಕೆಣಕುವುದು, ಯಾರನ್ನೋ ವಿಮರ್ಶಿಸುವ ಭರದಲ್ಲಿ ಲೇಖನದ ಕೆಳಗೆ ಲೇಖಕನ ಮೂದಿಸದೆ ಕೆಟ್ಟ ಪದಗಳನ್ನು ಬಳಸಿ ಬರೆದು ಹರಿಯಬಿಡುವುದು, ಇತರರು ಅದನ್ನು ಫಾರ್ವರ್ಡ್ ಮಾಡುವುದು, ಪರಿಣಾಮಗಳನ್ನು ಯೋಚಿಸದೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವುದು ಸುಶಿಕ್ಷಿತರು, ವಿವೇಕಿಗಳು ಅನಿಸಿಕೊಂಡವರು ಮಾಡಬೇಕಾದ ಕೆಲವೇ? ಯೋಚಿಸಿ.

9) ಜಾಲತಾಣಗಳಲ್ಲಿ ನಾವು ಹೇಳಹೊರಟ ವಿಷಯ, ಸುದ್ದಿ ಸತ್ಯ ಎಂಬ ವಿಶ್ವಾಸ ನಮಗಿದ್ದರೆ ಬರಹ, ಸುದ್ದಿಯ ಜೊತೆ ನಮ್ಮ ಹೆಸರು, ಗುರುತು, ವಿಳಾಸವನ್ನು ಧೈರ್ಯದಿಂದ ನಮೂದಿಸಬೇಕು. ಅಂತಹ ಬರಹಗಳನ್ನು ಮಾತ್ರ ಫಾರ್ವರ್ಡ್ ಮಾಡಬೇಕು. ಆಗ ಇಂತಹ ಅತಿರೇಕದ ವರ್ತನೆಗಳು ನಿಲ್ಲಬಹುದೇನೋ? ಹೇಳುವ ವಿಚಾರ ಸತ್ಯವೇ ಆಗಿದ್ದರೆ ಯಾಕೆ ಅನಾಮಿಕರಾಗಿ ಬರೆದು ಮುಂದೂಡಬೇಕು?

10) ಕೊನೆಯದಾಗಿ: ವರ್ಣರಂಜಿತ ಸುಳ್ಳು ಸುದ್ದಿಗಳನ್ನು, ಪೋಸ್ಟುಗಳನ್ನು ಕಣ್ಣು ಮುಚ್ಚಿ ನಂಬುವ ಮಂದಿ ಸತ್ಯ ಸುದ್ದಿ ಕೊಟ್ಟಾಗ ಸಂಶಯ ಪಟ್ಟು ಹತ್ತಾರು ಪ್ರಶ್ನೆ ಕೇಳುತ್ತಾರೆ!!!! ಯಾಕೆಂದು ಅರ್ಥ ಆಗ್ತಿಲ್ಲ.

-ಕೃಷ್ಣಮೋಹನ ತಲೆಂಗಳ
(09/08/2019)

No comments: