ಕಾಣದ ದೇವರು ಮತ್ತು ಅಪಾರ ಭಕ್ತಿ....

ಕೆಲವು ಪರಿಚಯಗಳೇ ಹಾಗೆ... ದೂರಕ್ಕೆ ಅಜ್ಞಾತವಾಗಿ ವರ್ಷಾನುಗಟ್ಟಲೆ ಇರುವುದಕ್ಕೂ, ಮುಖತಾ ಗುರುತಾಗಿ, ಮಾತನಾಡಿ, ಅವರ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡು ಒಡಾನಾಟವೆಲ್ಲ ಆದ ಬಳಿಕ...
ಸ್ವಲ್ಪ ಹಿಂದಿರುಗಿ ನೋಡಿದರೆ...
ವರ್ಷಗಳ ಹಿಂದೆ ದೂರದಿಂದ ಕಂಡ ಅವರ ಬಗ್ಗೆ ನಮಗಿದ್ದ ಅಭಿಮಾನ, ಕುತೂಹಲ, ಅಕ್ಕರೆ... ಮತ್ತೀಗ ಗುರುತು ಸಿಕ್ಕಿ ಮಾತನಾಡಿದ ಬಳಿಕ ಇರಬಹುದಾದ ಅಭಿಮಾನ, ಕುತೂಹಲ ಹಾಗೂ ಅಕ್ಕರೆಗಳನ್ನು ತಾಳೆ ಹಾಕುವ ಅವಕಾಶ ಸಿಗುತ್ತದೆ. ಆ ಕುತೂಹಲಗಳು ಕರಗಿದ ಬಳಿಕದ ಪರಿಚಯ ಕೆಲವೊಮ್ಮೆ ಭ್ರಮನಿರಸನವನ್ನೂ, ವೈರುಧ್ಯದ ಚಿತ್ರಣವನ್ನೂ ಕಟ್ಟಿ ಕೊಡುವುದೂ ಇದೆ... 
 
----

ಆತನೊಬ್ಬ ಆರ್ ಜೆ. ರೇಡಿಯೋದಲ್ಲಿ ಆತನ ಧ್ವನಿ ಕೇಳಿದಾಗ ತುಂಬ ಖುಷಿ. ಭಾಷೆ, ಮಾತನಾಡುವ ಶೈಲಿ, ಆತನ ತಾಳ್ಮೆ, ಸ್ನೇಹಯುತ, ಕಾಳಜಿಭರಿತ ಮಾತುಗಳು ತುಂಬ ಇಷ್ಟ. ಹೀಗೆ ಫೇಸ್ಬುಕ್ಕಲ್ಲಿ ಸಿಕ್ಕಿ ಪರಿಚಯವಾದ. ಬಳಿಕ ಸ್ನೇಹಾಚಾರ ಬೆಳೆಯಿತು. ಆತನ ಕುರಿತ ಅಭಿಮಾನವನ್ನು ಸಾಕಷ್ಟು ಬಾರಿ ಹೇಳಿಕೊಂಡಿದ್ದೆ ಕೂಡಾ. ಮೊದ ಮೊದಲು ತುಂಬ ಸಮಯ ಕೊಟ್ಟು ಮಾತನಾಡುತ್ತಿದ್ದ. ಕೇಳಿದ್ದಕ್ಕೆ ಉತ್ತರಿಸುತ್ತಿದ್ದ. ಬರ ಬರುತ್ತಾ, ಆತ ಮಾತನಾಡುವುದು, ಪ್ರತಿಕ್ರಿಯೆ ನೀಡುವುದು ಕಡಿಮೆಯಾಯಿತು. ಏನಾದರೂ ಕೇಳಿದರೆ ಸಿಟ್ಟು ಬರುವುದು, ಸಿಡುಕುವುದು, ಅವಾಯ್ಡ್ ಮಾಡುವುದು ಗೊತ್ತಾಯಿತು.
ರೇಡಿಯೋದಲ್ಲಿ ಅಷ್ಟೊಂದು ಸುಮಧುರ ಧ್ವನಿಯಲ್ಲಿ ಮಾತನಾಡುವುದು, ಕೇಳುಗರನ್ನು ಕಟ್ಟಿ ಹಾಕುವ ಮೋಡಿಗಾರ ಈತನೆಯ ಅಂತ ಸಂಶಯ ಬರತೊಡಗಿತು. ಒಂದು ಹಂತದಲ್ಲಿ ತುಂಬಾ ಬಿಝಿ ಇರುವ ಥರ ಕಂಡು ಬಂದ ಆತ ನೇರವಾಗಿ ಸಿಡುಕತೊಡಗಿದಾಗ ಮತ್ತೆ ಮಾತನಾಡುವುದೇ ಕಡಿಮೆಯಾಯಿತು.... ಈಗಲೂ ಆತ ರೇಡಿಯೋದಲ್ಲಿ ನಗು ನಗುತ್ತ ಮಾತನಾಡುತ್ತಾನೆ. ಆದರೆ, ಯಾಕೋ ಆ ನಗುವಿನ ಹಿಂದಿನ ಗದರಿದ ಧ್ವನಿ ಕಟ್ಟಿ ಹಾಕುತ್ತಿದೆ..


----

ಅವರೊಬ್ಬ ಖ್ಯಾತ ಬರಹಗಾರರು. ವ್ಯಕ್ತಿತ್ವ ವಿಕಸನದ ಬಗ್ಗೆ ತುಂಬಾ ಬರೀತಾರೆ, ಸಣ್ಣ ಲೇಖನಗಳನ್ನು ಕೂಡಾ. ತುಂಬ ಪುಸ್ತಕಗಳು ಬಿಡುಗಡೆಯಾಗಿವೆ. ಒಂದೇ ಸಲಕ್ಕೆ ಕುಳಿತು ಓದುವಷ್ಟು ಕಟ್ಟಿ ಹಾಕುವಂತೆ ಬರೆಯಬಲ್ಲವರು ಅವರು... ಅವರ ಬರಹಗಳಲ್ಲಿ ಬರುವ ಉಕ್ತಿಗಳು ಸಂಗ್ರಹ ಯೋಗ್ಯವಾಗಿರುತ್ತವೆ. ಅದನ್ನು ಪ್ರತ್ಯೇಕ ನೋಟ್ಸ್ ಪುಸ್ತಕದಲ್ಲಿ ಬರೆದಿಟ್ಟದ್ದೂ ಇದೆ. ಅವರನ್ನೊಮ್ಮೆ ಕಾಣಬೇಕು, ಮಾತನಾಡಿ ಜೀವನೋತ್ಸಾಹ ತುಂಬಿಕೊಳ್ಳಬೇಕೆಂಬ ಆಸೆ ಇತ್ತು. ಹೀಗೆ ಒಂದು ಸಮಾರಂಭದಲ್ಲಿ ಸಿಕ್ಕರು. ಸ್ವತಹ ಪರಿಚಯಿಸಿಕೊಂಡು ಮಾತನಾಡಿದಾಗ ನಸು ನಕ್ಕರು. ಅವರ ಬರಹಗಳ ಬಗ್ಗೆ ತುಂಬ ಹೇಳುವದಕ್ಕಿತ್ತು. ಆದರೆ ಅವರ ಸುತ್ತಮುತ್ತ ತುಂಬ ಮಂದಿ ಅಭಿಮಾನಿಗಳು ಮುತ್ತಿಕೊಂಡಿದ್ದರು. ಅವರಿಗೆ ಮಾತನಾಡುವಷ್ಟು ಪುರುಸೊತ್ತಿರಲಿಲ್ಲ. ಆದರೂ ಅವರ ಕುರಿತಾದ ಅಭಿಮಾನವನ್ನು ಒಂದಷ್ಟು ಹೇಳುವಷ್ಟು ಸಮಯ ಸಿಕ್ಕಿತು. ಓ ಹೌದಾ ಎಂದಷ್ಟೇ ಹೇಳಿದರು... ನೀವ್ಯಾರು, ಹೆಸರೇನು ಅಂತ ಕೇಳುವಷ್ಟೂ ಅವರಿಗೆ ಪುರುಸೊತ್ತಿರಲಿಲ್ಲ. ಯಾಕೋ ಮನಸ್ಸು ಮುದುಡಿತು.. ಹೇಳಬೇಕೆಂದುಕೊಂಡಿದ್ದ ಮಾತುಗಳು ಮತ್ತೆ ಹೊರಗೆ ಬರಲಿಲ್ಲ.
ಅವರ ಇತರ ಗುಣಗಳ ಬಗ್ಗೆ ಅವರನ್ನು ಹತ್ತಿರದಿಂದ ಕಂಡ ಸ್ನೇಹಿತರು ವಿವರವಾಗಿ ಹೇಳಿದ ಬಳಿಕ ಮತ್ತೆ ಅವರ ಜೊತೆ ಮಾತನಾಡಬೇಕೆಂದು ಅನಿಸಲಿಲ್ಲ. ಈಗೀಗ ಅವರ ಬರಹಗಳನ್ನು ಓದುವಾಗ ರೋಮಾಂಚನ ಆಗುವುದೂ ಇಲ್ಲ.
.....

ಪ್ರತಿ ವ್ಯಕ್ತಿತ್ವ ಕೂಡಾ ಸಹಜವಾಗಿ ಇರುವುದಕ್ಕೂ, ನಾವದನ್ನು ಕಲ್ಪಿಸಿಕೊಳ್ಳುವುದು, ಗ್ರಹಿಸಿಕೊಳ್ಳುವುದಕ್ಕೂ ವ್ಯತ್ಯಾಸವಿರಬಹುದು. ಪ್ರತಿಯೊಬ್ಬರ ಬದುಕು ಕೂಡಾ ಒಂದು ಪುಸ್ತಕವಾದರೆ, ನಾವದರ ಪ್ರತಿ ಪುಟವನ್ನೂ ಓದಿರುವುದಿಲ್ಲ. ಪ್ರತಿ ಪುಟವನ್ನು ಓದದೆ ಅಂತಹ ಪುಸ್ತಕದ ವಿಮರ್ಶೆ ಮಾಡುವುದು ಕೂಡಾ ಸಮಂಜಸ ಆಗುವುದಿಲ್ಲ. ನಮಗೆ ಕಾಣುವುದು ರಕ್ಷಾಪುಟ, ಹಿಂಬರಹ ಮಾತ್ರ, ಅದರ ಆಧಾರದಲ್ಲಿ ನಾವು ಬಹಳಷ್ಟು ಸಾರಿ ಇತರರ ಬಗ್ಗೆ ಜಡ್ಜ್ ಮೆಂಟಲ್ ಗಳಾಗಿ ವರ್ತಿಸುತ್ತಿರುತ್ತೇವೆ. ರೇಡಿಯೋದಲ್ಲಿ ಕೇಳಿದ ಧ್ವನಿ, ಪುಸ್ತಕದಲ್ಲಿ ಕಂಡ ಅಕ್ಷರಗಳಲ್ಲಿ ನೋಡ ಸಿಕ್ಕಿದ ಅದರ ಕರ್ತೃವನ್ನು ನಿಜ ಬದುಕಿನಲ್ಲೂ ಆರೋಪಿಸಿದಾಗ, ಅಥವಾ ಬಹಳಷ್ಟನ್ನು ನಿರೀಕ್ಷಿಸಿದಾಗ ಹೀಗಾಗುತ್ತದೆ ಅನ್ನಿಸುತ್ತದೆ. ಇದೇ ಕಾರಣಕ್ಕೆ ಬಹಳಷ್ಟು ಮಂದಿಗೆ ಬಹಳಷ್ಟು ಸಾರಿ ಭ್ರಮ ನಿರಸನಗಳು ಆಗುತ್ತವೆ. ತುಂಬ ಮಂದಿಯ ಮೇಲಿರುವ ಅಭಿಮಾನದ ತೀವ್ರತೆ ಅವರ ಒಡನಾಟದ ಬಳಿಕ ಕಡಿಮೆಗೊಳ್ಳುವುದು ಇದೇ ಕಾರಣಕ್ಕೆ....

.......

ಪ್ರತಿ ಬದುಕೂ ಕೂಡಾ ಒಂದು ಪ್ರತ್ಯೇಕ ಕಾದಂಬರಿಯಾದರೆ. ಅದರಲ್ಲಿ ಬರುವ ಅಧ್ಯಾಯಗಳು ಅವರವರ ಹಣೆಬರಹಕ್ಕೋ, ಅದೃಷ್ಟಕ್ಕೋ, ಪರಿಸ್ಥಿತಿಯ ಕಾರಣಕ್ಕೋ ಬೇರೆ ಬೇರೆಯದೇ ರೀತಿಯಲ್ಲಿ ರೂಪುಗೊಂಡಿರುತ್ತದೆ. ಅದೇ ಪರಿಸ್ಥಿತಿ ಅವರಿಗೊಂದು ಮನಸ್ಥಿತಿ ಕಟ್ಟಿಕೊಟ್ಟಿರುತ್ತದೆ. ಅದೇ ಮನಸ್ಥಿತಿ ಅವರ ಸೃಜನಶೀಲತೆಯ ಮೇಲೂ ಪರಿಣಾಮ ಬೀರಿರಬಹುದು. ಅಥವಾ ಅವರ ಅಭಿವ್ಯಕ್ತಿಗಳಲ್ಲಿ ಕಾಣದ ಮನಸ್ಥಿತಿ ಅವರ ನಿಜ ಬದುಕಿನಲ್ಲಿ ಇರಲೂ ಬಹುದು. ಜೀವನದಲ್ಲಿ ಹವ್ಯಾಸ, ವೃತ್ತಿ ಮತ್ತು ಕೌಟುಂಬಿಕ ಇವೆಲ್ಲ ಜೊತೆ ಜೊತೆಯಾಗಿ ಸಾಗುತ್ತಿರುತ್ತದೆ. ಅಲ್ಲಿನ ಜವಾಬ್ದಾರಿ, ಜೀವನೋಪಾಯಕ್ಕೆ ಮಾಡುವ ಕಸುಬು, ಹವ್ಯಾಸದ ಬೆಳವಣಿಗೆ ಇವೆಲ್ಲ ಒಬ್ಬನೇ ವ್ಯಕ್ತಿಗೆ ಬೇರೆ ಬೇರೆ ಜವಾಬ್ದಾರಿಗಳನ್ನೂ, ಪಾತ್ರಗಳನ್ನೂ ನೀಡುತ್ತದೆ. ಅದನ್ನು ಆತ ದ್ವಂದ್ವ ವ್ಯಕ್ತಿತ್ವ ಮಾದರಿಯ ಹಾಗೆಯೂ ಕೆಲವೊಮ್ಮೆ ನಿಭಾಯಿಸಬೇಕಾಗುತ್ತದೆ. ಅದರೊಳಗಿನ ಗೊಂದಲ, ಹತಾಶೆಗಳು, ಅಸಹಾಯಕತೆಗಳು ಆತನ ಬದುಕಿನ ಕಾದಂಬರಿಯ ರಕ್ಷಾಪುಟದಲ್ಲಿ ಮುದ್ರಿಸಲ್ಪಟ್ಟಿರುವುದಿಲ್ಲ. ಆತನೂ ತನ್ನ ಬದುಕಿನ ಕಥೆಯನ್ನು ನಾಲ್ಕು ರಸ್ತೆ ಸೇರುವಲ್ಲಿ ಕುಳಿತು ವಾಚಿಸುತ್ತಾ ಇರುವುದಿಲ್ಲ. ಅದೆಲ್ಲ ಕಂಡುಕೊಳ್ಳಬೇಕಾದ ವಿಚಾರಗಳು.... ಇದನ್ನು ಪಕ್ಕಕ್ಕಿಟ್ಟು, ಒಬ್ಬ ವ್ಯಕ್ತಿಯಿಂದ ಬಹಳಷ್ಟು ನಿರೀಕ್ಷಿಸಿದಾಗ ಅಥವಾ ಪೂರ್ತಿ ಅರ್ಥ ಮಾಡಿಕೊಳ್ಳದೆ, ಒಂದು ಕೋನದಿಂದ ಕಂಡದ್ದನ್ನೇ ನಿಜವೆಂದುಕೊಂಡು ವರ್ತಿಸಿದಾಗ ಬಹಳಷ್ಟು ಭ್ರಮನಿರಸನಗಳು ಕಾಡುತ್ತವೆ.

......

ನುಡಿದಂತೆ ನಡೆಯಬೇಕೆನ್ನುವುದು ಸೌಜನ್ಯ, ಅದು ಮನುಷ್ಯನಿಗಿರಬೇಕಾದ ಬದ್ಧತೆಯೂ ಹೌದು. ಸಾತ್ವಿಕರು ಎಲ್ಲರಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ. ಆದರೆ ಒಬ್ಬಾತ ಸೈದ್ಧಾಂತಿಕವಾಗಿ, ಕ್ರಮ ಬದ್ಧವಾಗಿ ಬದುಕಬೇಕಾದರೆ ಆತನ ಪರಿಸ್ಥಿತಿ, ಅವಕಾಶ, ಪರಿಸರವೂ ಆತನ ನಿರೀಕ್ಷೆಗಳಿಗೆ ತಕ್ಕಂತೆ ಇರಬೇಕು. ಆಗ ಮಾತ್ರ ಅದು ಆರೋಗ್ಯಪೂರ್ಣವಾಗಿ ಇರುತ್ತದೆ. ಹಸಿದವನಿಗೆ ಅನ್ನ ಸಿಕ್ಕದ ಸಮಯದಲ್ಲಿ ವೇದಾಂತ ಮಾತನಾಡಿದರೆ ಅವನಿಂದ ಎಂತಹ ಮಾತುಗಳನ್ನು ನಿರೀಕ್ಷಿಸಬಹುದು. ಇದು ಎಲ್ಲ ಸಂದರ್ಭಕ್ಕೂ ಅನ್ವಯವಾಗುತ್ತದೆ.
ಬೆಟ್ಟವನ್ನು ದೂರದಿಂದ ಕಾಣುವಾಗ ನುಣ್ಣಗೆ, ಹರಿಸಿನ ಟೋಪಿ ಥರ ಕಾಣುತ್ತದೆ. ಕಷ್ಟಪಟ್ಟು ಬೆಟ್ಟ ಏರಿದಾಗ ಮಾತ್ರ ಅಲ್ಲಿನ ಕೊರಕಲು, ಮುಳ್ಳು, ಜಾರು ದಾರಿ, ಬಂಡೆಗಳು ಎಲ್ಲ ಕಾಣಿಸುವುದು. ಬೆಟ್ಟ ಆಗಲೂ ಚಂದವೇ ಹೌದು. ಆದರೆ, ಒಡಲಲ್ಲಿ ಅಷ್ಟೊಂದು ಕಠಿಣ, ಗಡಸು ವಿಚಾರಗಳನ್ನೂ ಇರಿಸಿಕೊಂಡಿರುವುದು ಬೆಟ್ಟ ಹತ್ತಿದಾಗಲೇ ತಾನೆ...? ವ್ಯಕ್ತಿತ್ವಗಳೂ ಅಷ್ಟೇ, ಸೆಲೆಬ್ರಿಟಿಗಳೂ ಅಷ್ಟೇ, ದೊಡ್ಡ ದೊಡ್ಡ ಮನುಷ್ಯರೆಂದು ನಾವು ಅಂದುಕೊಳ್ಳುವವರೂ ಅಷ್ಟೆ. ಸಾಮಾಜಿಕ ಬದುಕಿನ ಮೇಲೆ ಖಾಸಗಿ ಬದುಕು ಕೂಡಾ ಪರಿಣಾಮ ಬೀರುತ್ತದೆ. ಸಾಮಾಜಿಕವಾದ ಸಂಪರ್ಕ ಪ್ರತಿಯಬ್ಬರ ಒಂದು ಮಗ್ಗುಲು ಮಾತ್ರ, ಇತರ ಸಮಯ ಆತನ ಖಾಸಗಿ ಬದುಕಾಗಿರುತ್ತದೆ. ಅಲ್ಲಿಯಾ ಆತನಿಗೆ ಜವಾಬ್ದಾರಿಗಳಿರುತ್ತದೆ, ಕರ್ತವ್ಯಗಳಿರುತ್ತದೆ, ನಿಭಾಯಿಸಬೇಕಾದ ಸಾಕಷ್ಟು ವಿಚಾರಗಳಿರುತ್ತವೆ. ಅವನ್ನೆಲ್ಲ ಪರಿಗಣಿಸಿದಾಗ ಆತ ರೂಪುಗೊಂಡಿರುತ್ತಾನೆ.
ಹೊರಗಿನವರು ಆತನ ಸಾಮಾಜಿಕ ಮುಖವನ್ನು, ಮನೆಯವರು ಆತನ ಖಾಸಗಿ ಮುಖವನ್ನು ಹತ್ತಿರದಿಂದ ಕಂಡಿರುತ್ತಾನೆ. ಆತನ ಸ್ವಭಾವ ಒಂದೇ ಇರಬಹುದು, ಆದರೆ, ಅದರ ಅಭಿವ್ಯಕ್ತಿ ವ್ಯತ್ಯಾಸ ಇರಬಹುದು....

-----

ಎಷ್ಟೋ ಸಲ ನಾವು ಅಭಿಮಾನಿಸುವ ವಿಚಾರಗಳನ್ನು ದೂರದಿಂದ ಕಂಡು ಖುಷಿ ಪಟ್ಟಾಗ ಸಿಗುವ ಆನಂದ ಹತ್ತಿರ ಹೋದಾಗ ಇರುವುದಿಲ್ಲ. ಜಲಪಾತ ದೂರದಿಂದ ಕಂಡಾಗ ಚಂದ, ಹತ್ತಿರ ಹೋಗಿ ಕುಣಿಯತೊಡಗಿದರೆ ನಾವು ಕೊಚ್ಚಿಹೋಗ ಬೇಕಾದೀತು.... ಹೂವು ಚಂದವೆಂದು ಗಿಡದಿಂದ ಕಿತ್ತರೆ ಬಾಡಿ ಹೋದೀತು... ಹಾಗೆಯೇ ಕೆಲವೊಬ್ಬರ ಬಗ್ಗೆ ದೂರದಿಂದ ಅಭಿಮಾನ ಪಟ್ಟಾಗ, ಅವರು ತಿಳಿವಳಿಕೆ ಇರುವವರೆಂದು ಅಂದುಕೊಂಡಾಗ ಇದ್ದ ಖುಷಿ ಅವರ ಒಡನಾಟದ ಬಗ್ಗೆ ಕಡಿಮೆಯಾಗಲೂ ಬಹುದು... ನಾವೇ ನಿರ್ಧರಿಸಬೇಕು. ಅಭಿಮಾನ ಮತ್ತು ಕಲ್ಪನೆಯಲ್ಲಿ ಸಿಕ್ಕಿಂದ ಸಂತೋಷ ದೊಡ್ಡದೋ, ಅದನ್ನು ಹತ್ತಿರದಿಂದ ಕಾಣುವ ಹಪಹಪಿಕೆಯಿಂದ ಇನ್ನಷ್ಟು ಸ್ಪಷ್ಟತೆ ಪಡೆಯುವ ದಾರಿಯಲ್ಲಿ ದೊರಕುವ ವಾಸ್ತವಿಕೆ ಅನುಭೂತಿ ದೊಡ್ಡದೋ ಅಂತ...

ಎಂದಿಗೂ ಪ್ರತ್ಯಕ್ಷವಾಗಿ ಕಾಣದ ದೇವರ ಕುರಿತು ಇರುವ ಅಪಾರ ಭಕ್ತಿ ಮತ್ತು ನಂಬಿಕೆಗೆ ಬೆಲೆ ಕಟ್ಟಲಾದೀತೆ....!

-ಕೃಷ್ಣಮೋಹನ ತಲೆಂಗಳ.
(11.08.2019)

No comments: