ಮಳೆಯನ್ನು ಅರ್ಥ ಮಾಡುವ ವ್ಯರ್ಥ ಸರ್ಕಸ್ಸು ...!

ಯಾವಾಗ ಬರುತ್ತದೋ, ಹೋಗುತ್ತದೋ ಗೊತ್ತಿಲ್ಲ, ಅರ್ಥವೇ ಮಾಡಿಕೊಳ್ಳದ ಮನಸುಗಳ ಹಾಗೆ... ಬಂದಾಗ ಧೋ ಎಂದು ಸುರಿದು ಇಲ್ಲವಾದಾಗ ಅಡ್ರಸ್ಸೇ ಕಳೆದು ಹೋದ ಹಾಗೆ. ಬಿಸಿಲಿನ ಝಳಕ್ಕೆ ಭೂಮಿ ಬರಡಾಗಿ ಮಲಗುವುದು ಕನಸೆಂಬಂತೆ ತೋರುವುದು ಮುಸಲಧಾರೆಯಾಗ... ಇದೊಂದು ತೀರ, ಅದು ಮತ್ತೊಂದು ತೀರ... ಮಳೆಯೆಂಬ ಧ್ಯಾನ, ಮಳೆಯಂಬ ಏಕಾಂತ, ಮಳೆಯೆಂಬ ಅಚ್ಚರಿ, ಮಳೆಯೆಂಬ ಬಿರುಸು, ಸಾಂತ್ವನ ಮತ್ತು ಮಳೆಯಿಂಬ ಭಾವ ತೀರದ ಆಚೆಗಿನ ಮಸುಕು ಮಸುಕಾದ ದಿಗಂತ ಎಲ್ಲವೂ ಹೊಸ ಲೋಕ, ನಿನ್ನೆ ಮೊನ್ನೆ ಓಡಾಡಿದ ಅಂಗಳ, ಟೆರೇಸು, ಗುಡ್ಡದ ಮೇಲಿನ ಒತ್ತಾಗಿ ಬೆಳೆದ ಮರಗಳ ರಾಶಿಯ ನಡುವೆಯೂ ಮಳೆ ನಿರ್ಮಿಸುವ ಮಬ್ಬು ಮಬ್ಬಾದ ಏಕಾಂತದ ಕುಟೀರಕ್ಕೆ ಮಳೆಯೇ ಸಾಟಿ...





.....


ಮಳೆಯನ್ನು ಜಾಸ್ತಿ ಅರ್ಥ ಮಾಡಿಕೊಳ್ಳಲು ಹೋಗಬಾರದು... ಸುಮ್ಮನೆ ಆವರಿಸಿಕೊಳ್ಳುವ ಅನುಭೂತಿ ಅನುಭವಿಸಬೇಕು. ತುಂತುರಿಗಿಂತಲೂ ಧಾರಾಕಾರ, ಬಳಿಕ ತೊಟ್ಟಿಕ್ಕುವ ಹನಿಗಳ ಲಯಬದ್ಧ ಗಾಂಭೀರ್ಯಕ್ಕೂ ಮನಸ್ಸನ್ನು ತೇವಗೊಳಿಸುವ ಜಾಕತ್ತಿದೆ. ಎಲ್ಲೂ ತೊಳೆದು ಹೋಗದ್ದನ್ನು ಮಳೆ ಗುಡಿಸಿ, ಸಾರಿಸಿ ಸ್ವಚ್ಛಗೊಳಿಸುತ್ತದೆ. ಎಲ್ಲೂ ಕರಗದ್ದು ಮಳೆಯೆದುರು ಕರಗಿ ಕಣ್ಣೀರಾಗುತ್ತದೆ... ಸಿದ್ಧಿಸದ ತಾಳ್ಮೆ, ಕಾಯುವ ಸಹನೆ, ಧರೆಗಿಳಿಸುವ ಅಸಹಾಯಕತೆ ಎಲ್ಲದಕ್ಕೂ ಮಳೆ ಸಾಕ್ಷಿಯಾಗುತ್ತದೆ. ಅಂಗೈಯೊಳಗಿನ ಪುಟ್ಟ ಲೋಟದಲ್ಲಿ ತಣ್ಣಗೆ ಮಲಗಿರುವ ನೀರು ಅಷ್ಟು ದೊಡ್ಡ ಮೊತ್ತದಲ್ಲಿ ಮೋಡ ಬಿರಿಯುವಂತೆ ಅಬ್ಬರಿಸಿ ಸುರಿದಾಗ ಮುಂಬರುವ ಆರ್ಭಟದ ಶಕ್ತಿ ನೀರಿನೆದುರು ನಮ್ಮ ಕುಬ್ಜತೆಯನ್ನು ತೆರೆದು ತೆರೆದು ತೋರಿಸುತ್ತದೆ.

......

ಮಳೆಯೊಡನೆ ಕಣ್ಣೀರೂ ಬೆರೆಯುತ್ತದೆ. ಗೊತ್ತಾಗುವುದಿಲ್ಲ ವ್ಯತ್ಯಾಸ. ಭಾರಗಳೆಲ್ಲ ಮಳೆಯಾಚಿಗಿನ ಮಬ್ಬಿನಷ್ಟು ಅಸ್ಪಷ್ಟವಾಗಿ, ಅಗೋಚರವಾಗಿಯೂ ಅಲ್ಪ ಸ್ವಲ್ಪ ಕಾಡುತ್ತಿರುವಾಗ ಮಳೆ ಸುರಿಯುತ್ತಲೇ ಇರಬಾರದೇ ಎಂಬಷ್ಟು ಉದಾಸೀನ. ಮಳೆಯ ರಭಸಕ್ಕೆ ಭಾರಗಳು ಹುಸಿಯಾಗಿ, ಭಾವಗಳು ಮತ್ತೆ ಚೇತರಿಸಲಿ ಎಂಬ ದೂರದ ಆಸೆ ಮಳೆಗೆ ಗೊತ್ತಾಗುವುದೇ ಇಲ್ಲ ಕೆಲವೊಮ್ಮೆ. ಹಾಗೆ ನೀರಾಗಿ ಕರಗಿದರೂ ಆ ಹೊತ್ತಿಗೆ ಮಾತ್ರ ಹಗುರ. ಮತ್ತದೇ ಭಾರ ಮತ್ತು ಕರಿಗಸಲಾಗದಷ್ಟು ಕಾಠಿಣ್ಯ, ಆಗೊಮ್ಮೆ ಈಗೊಮ್ಮೆ ಕರೆಂಟು ತೆಗೆಯುವ ಸಿಡಿಲು ಮತ್ತದೇ ಅರ್ಥವೇ ಮಾಡಿಕೊಳ್ಳದೆ ಹಂಗಿಸುವ ಮನಸ್ಸುಗಳ ಹಾಗೆ....


.....

ಕಪ್ಪು ಬಂಡೆ ತೋಯ್ದು ಮತ್ತಷ್ಟು ಹೊಳೆಯುತ್ತದೆ... ಮರಗಳ ಜೊಂಪೆ ಮಿಂದು ಶುಭ್ರವಾಗಿ ತಲೆ ಸ್ನಾನ ಮಾಡಿದ ಬಳಿಕ ತೊಟ್ಟಿಕ್ಕುವ ಕೇಶರಾಶಿಯ ಹಾಗೆ ಭಾರವಾಗಿ ಜೋತಾಡುತ್ತದೆ... ಕಾಲು ದಾರಿಯ ಮೇಲೆ ಅಷ್ಟಿಷ್ಟು ಕೆಸರು, ಕಪ್ಪಾದ ತರಗೆಲೆಗಳಿಗೆ ತೊರೆಗಳ ಸೇರುವ ಆತುರ, ಬಾಗಿದ ಬೀಳಲುಗಳ ತುದಿಯ ವಕ್ರದಲ್ಲಿ ಒಂದೊಂದೇ ಬಿಂದುಗಳ ಸಾಲು.... ಯಾವುದೇ ಕ್ಷಣದಲ್ಲಿ ಉದರಲು ಕಾದು ಕುಳಿತ ಕಣ್ಣೀರ ಬಿಂದುಗಳ ಹಾಗೆ... ಸ್ವಲ್ಪವೇ ಸ್ವಲ್ಪ ಚಳಿ ಗಾಳಿ, 10 ಮೀಟರಿನಾಚೆಗೆ ಮಂಜು ಮಂಜಾಗಿ ಕಾಣುವ ಪರದೆಯ ಹಾಗಿರುವ ಕೌತುಕ. ಗಾಳಿ ಜೊತೆ ತೇಲಿ ಬರುವ ಮಂಜಿನ ಹನಿಗಳ ತಲೆಗೂದಲಿನ ತುದಿಯನ್ನು ಮಾತ್ರ ಆರಿಸಿ ಕುಳಿತು ಮಿಂಚುವ ಪುಟ್ಟ ಪುಟ್ಟ ಬೆಳ್ಳಿಯ ಚುಕ್ಕಿಗಳು.... ತಾಕಲಾಟದ ನಡುವೆ ಬಿದಿರಿನ ಠೇಂಕಾರ, ಈಗ ಇನ್ನೇನು ಬೀಳುತ್ತದೆಯೆಂಬಂತೆ ಹುಚ್ಚು ಹುಚ್ಚಾಗಿ ಓಲಾಡುವ ತೆಂಗಿನ ಮರ. ಮಣ ಭಾರಕ್ಕೆ ತಾನಾಗಿ ಬುಡಕ್ಕೆ ಶರಣಾಗುವ ಹಲಸಿನ ಕಾಯಿ.... ಎಷ್ಟೊಂದು ಕೆಲಸವಿದೆ ಮಳೆ ಬಂದಾಗ ನೋಡುವುದಕ್ಕೆ....

......

ಬೆಟ್ಟದ ಸೆರಗಿನಲ್ಲಿ ಪಾದ ಮುಳುಗುವಷ್ಟು ಮಾತ್ರ... ಮತ್ತೆ ಅಂಗಳದ ತುಂಬ ದೋಣಿ ಬಿಡುವಂಥ ಪ್ರವಾಹ,, ಕೆಳಗೆ ಕಣಿಯಲ್ಲಿ ಮೊಣಕಾಲುದ್ದದ ನೀರು... ತೋಟದಾಚೆಗಿನ ತೋಡಿನತ್ತ ಹೋಗಿ ನೋಡಿದರೆ ತಲೆ ತಿರಗಿಸುವ ಕೆಂಪು ನೀರಿನ ರಭಸದ ಓಟ. ಊರಿನ ಅಷ್ಟೂ ನೀರು ಸಮುದ್ರಕ್ಕೆ ಹೋಗಿ ಕಾಡಿದರೆ, ನೀರು ಉಕ್ಕಿ ಹರಿಯುವುದಿಲ್ಲವೇ... ಸದಾ ಶಾಂತವಾಗಿರುವ ತೋಡಿಗೂ ಮಳೆಯನ್ನು ಕಂಡಾಗ ಬಿರುಸಿನಿಂದ ಓಡುವ ಆತುಕವೇಕೆ.... ಆಚೆಯ ಅಬ್ಬಿಯ ಬಂಡೆಯ ನಡುವೆ ಧುಮ್ಮಿಕ್ಕುವಾಗ ಬೀಳುವ ಸದ್ದು, ಅಡಕೆ ಮರಗಳನ್ನು ಹಾದು ಬರುವ ಮಳೆಯ ಸದ್ದಿಗೆ ಹೋಲಿಕೆಯಾಗಿ ಒಮ್ಮೊಮ್ಮೆ ಗೊಂದಲವಾಗುವುದುಂಟು ಹೊಸದೊಂದು ಮಳೆ ಬಂತೆ ಎಂದು....

......

ಮಳೆ ಜೊತೆ ಮಾತು ಬೇಕಿಲ್ಲ, ಮಳೆ ತಾನಾಗಿ ಮಾತನಾಡುತ್ತದೆ.... ಕೇಳುವಷ್ಟು ತಾಳ್ಮೆ ಇದ್ದರೆ ಧಾರಾಳವಾಯಿತು. ಅಲ್ಲಲ್ಲಿ ಉಕ್ಕುವ ಪುಟ್ಟ ಪುಟ್ಟ ಒರತೆ, ಹೆಸರೇ ಕಳೆದ ಹೂಗಳ ಸೃಷ್ಟಿ, ಅಂಗಳದಲ್ಲೇ ಕಾಣಿಸಿಕೊಳ್ಳುವ ಮಂಜಿನ ಪರದೆಯೇ ಮಳೆಯ ಭಾಷೆ. ಮಳೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ವ್ಯರ್ಥ. ಈಗ ಧಾರಾಕಾರ, ಮತ್ತೆ ಚಿಟಿಪಿಟಿ, ಮಗದೊಮ್ಮೆ ನಾಪತ್ತೆ... ಸಿಕ್ಕಾಗ, ಕೈಗೆಟುಕಿದಾಗ ಬೊಗಸೆಯಲ್ಲಿ ತುಂಬಿ ಬೆರಳೆಡೆ ಕುಸಿದು ಹೋಗುವ ಅದೃಷ್ಟದ ಹಾಗೆ.... ಕಂಡಾಗ, ಕಂಡಷ್ಟು ಸಾಕ್ಷಿಯಾಗುವ ಕೌತುಕ... 


-ಕೃಷ್ಣಮೋಹನ ತಲೆಂಗಳ.

(17.08.2019)

No comments: