ಇಂದು ತಂತ್ರಜ್ಞಾನ ಅಂಗೈಲಿದೆ, ಆದರೂ ಪುರುಸೊತ್ತಿಲ್ಲ!


1) ಒಂದು ಕಾಲವಿತ್ತು...
ದೂರದರ್ಶನ ಎಂಬುದೊಂದೇ ಟಿ.ವಿ.ವಾಹಿನಿ. ಆಗ ವಾರಕ್ಕೆ ಒಂದೋ, ಎರಡೋ ಸಿನಿಮಾ, ಒಂದು ಚಿತ್ರಮಂಜರಿ, ಮತ್ತೊಂದು ಚಿತ್ರಹಾರ್, ದಿವಸಕ್ಕೆ ಎರಡೋ, ಮೂರೋ ವಾರ್ತಾ ಪ್ರಸಾರಗಳು. ಜನ ಆಗ ಕಾದು ಕುಳಿತು ಸಿನಿಮಾಗಳನ್ನು ಜಾಹೀರಾತು ಸಮೇತ ನೋಡುತ್ತಿದ್ದರು. ಹೆಚ್ಚಿನ ಆಯ್ಕೆ ಇರಲಿಲ್ಲ. ಚಿತ್ರಗೀತೆಗಳನ್ನು ಹೊತ್ತು ತರುತ್ತಿದ್ದ ಚಿತ್ರಹಾರ್, ರಂಗೋಲಿಯನ್ನು ನೋಡಲೆಂದೇ ಕಾದು ಕೂರುವವರಿದ್ದರು. ಇಂದು ಡಿಟಿಎಚ್, ಕೇಬಲ್ ವಾಹಿನಿಗಳು ಸಾವಿರಗಟ್ಟಲೆ ಚಾನೆಲ್ ಗಳು, ತಂತ್ರಜ್ಞಾನದಲ್ಲಿ ತನ್ನನ್ನು ಮೀರಿಸುವವರಿಲ್ಲವೆಂಬಂಥ ಅದ್ಭುತ ಮೊಬೈಲುಗಳು, ಕಂಪ್ಯೂಟರುಗಳು, ಲ್ಯಾಪ್ ಟಾಪುಗಳು, ಟ್ಯಾಬ್ಲೆಟುಗಳು, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್.... ಹೀಗೆ ಹೆಸರುಗಳ ಪಟ್ಟಿಯೇ ಅಷ್ಟುದ್ದ ಇರುವಂಥ ತಂತ್ರಜ್ಞಾನ ನಮ್ಮನ್ನು ಆವರಿಸಿದೆ. ಸಿನಿಮಾಗಳು ಥಿಯೇಟರಿಗೆ ಬರುವ ಮೊದಲು ಅದ್ಹೇಗೋ ಅದರ ಪ್ರತಿ ಮೊಬೈಲುಗಳಿಗೂ ಬಂದಿರುತ್ತದೆ. ಆದರೂ ಜನ ಮುಂಚಿನ ಹಾಗೆ ಶಿಸ್ತಿನಿಂದ ಟಿ.ವಿ.ಎದುರು ಕುಳಿತು ಅದೇ ಶ್ರದ್ಧೆಯಿಂದ ಸಿನಿಮಾ ನೋಡ್ತಾರ. ಮನೆ ವೆರಾಂಡದಲ್ಲೇ ಕುಳಿತು ಸಿನಿಮಾಗಳನ್ನು ನೋಡಬಹುದು. ಆದರೆ ಮನೆ ಮಂದಿಗೆಲ್ಲ ಒಂದು ಸಿನಿಮಾವನ್ನು ಯಾವುದೇ ಡಿಸ್ಟರ್ಬನ್ಸ್ ಇಲ್ಲದೆ ನೋಡುವಷ್ಟು ವ್ಯವಧಾನ ಇದೆಯಾ...?

2) ಒಂದು ಕಾಲವಿತ್ತು...
ಬೆಳಗ್ಗೆದ್ದು ಪೇಪರು ಕೈಗೆ ಬಂದಾಗಲೆ ನಿನ್ನೆ ಏನೇನು ಆಗಿದೆ ಎಂಬುದ ನಾಗರಿಕರಿಗೆ ಗೊತ್ತಾಗುತ್ತಿತ್ತು. ಸುದ್ದಿಗಳನ್ನು ತಿಳಿಯಲು ಪೇಪರಿಗಿಂತ ಉತ್ತಮ ವ್ಯವಸ್ಥೆ ಆಗ ಇರಲಿಲ್ಲ. ರೇಡಿಯೋದಲ್ಲಿ ವಾರ್ತೆಗಳು ಬರುತ್ತಿದ್ದವಾದರೂ ಅದರಲ್ಲಿ ತೀರಾ ಸ್ಥಳೀಯ ಸುದ್ದಿಗಳು, ಸುದ್ದಿ ವಿಶ್ಲೇಷಣೆಗಳು ಬರುತ್ತಿರಲಿಲ್ಲ. ಹಾಗಾಗಿ ಪತ್ರಿಕೆಯಲ್ಲಿ ಬಂದಾಗಲೇ ರ್ಯಾಂಕ್ ಬಂದದ್ದು, ಯಾರೋ ಸತ್ತದ್ದು, ಅಪಘಾತ ಆಗಿದ್ದು, ರಾಜೀನಾಮೆ ಕೊಟ್ಟದ್ದು, ಪಕ್ಷಾಂತರ ಮಾಡಿದ್ದು.... ಎಲ್ಲ ಗೊತ್ತಾಗುತ್ತಿತ್ತು. ಮತ್ತೆ ಅದರ ಫಾಲೋ ಅಪ್ ಬೇಕಿದ್ದರೆ ಮರುದಿನ ಪತ್ರಿಕೆಗೆ ಕಾಯಬೇಕಾಗಿತ್ತು. ಇಂದು ಹಾಗಿಲ್ಲ, ಸಾವಿಗಟ್ಟಲೆ ನ್ಯೂಸ್ ಚಾನೆಲ್ ಗಳು ಬಂದಿವೆ. ಸಾಕಷ್ಟು ಸುದ್ದಿ ವೆಬ್ ತಾಣಗಳಿವೆ. ಸಾಮಾಜಿಕ ಜಾಲತಾಣಗಳು ಜನಪ್ರಿಯವಾಗಿ, ಮೊಬೈಲೇ ಡೇಟಾ ಅಗ್ಗವಾಗುತ್ತಾ ಬಂದ ಹಾಗೆ, ಮೊಬೈಲ್ ಹೊಂದಿದ ಪ್ರತಿಯೊಬ್ಬರೂ ಸುದ್ದಿಗಾರರಾಗುತ್ತಿದ್ದಾರೆ. ಸುದ್ದಿ ನೇರವಾಗಿ ನಡೆದ ಸ್ಥಳದಿಂದ ಅದರ ವೀಕ್ಷಕರನ್ನೋ, ಓದಗರನ್ನೋ ತಲಪುತ್ತದೆ (ಅದು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ ಎಂಬುದು ಬೇರೆ ಪ್ರಶ್ನೆ. ಸುದ್ದಿಗೋಷ್ಠಿಗಳು ನೇರವಾಗಿ ಟಿ.ವಿ.ಮೂಲಕ ಲೈವ್ ಕಾಣಿಸುತ್ತದೆ. ದುರಂತ, ರಾಜಕೀಯ ಮನ್ವಂತರ ಎಲ್ಲವೂ ಸಿಗುತ್ತದೆ. ಆದರೂ...
ಇಂದಿಗೂ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಕಂಡ ಕಂಡ ವಿಚಾರಗಳೆಲ್ಲ ಆಗಿಂದಾಗ್ಗೆ ಫಾರ್ವರ್ಡ್ ಆಗುತ್ತಿರುವ ಕಾರಣ ಕೆಲವೊಮ್ಮೆ ಜನರಿಗೆ ಸತ್ಯ ಯಾವುದು ಸುಳ್ಳು ಸುದ್ದಿ ಯಾವುದು ತಿಳಿಯುವುದೇ ಇಲ್ಲ...!

3) ಒಂದು ಕಾಲವಿತ್ತು...
ಪೋಸ್ಟು ಡಬ್ಬಕ್ಕೆ ಹಾಕಿದ ಪತ್ರ ವಿಳಾಸವನ್ನು ಸೇರಿದಾಗಲಷ್ಟೇ ಪತ್ರದಲ್ಲಿ ಬರೆದ ವಿಚಾರಗಳು ಅತ್ತ ಕಡೆಯವರಿಗೆ ತಿಳಿಯುತ್ತಿತ್ತು. ನಾನು ಇಂತಹ ದಿನ ನಿಮ್ಮ ಮನೆಗೆ ಬರುತ್ತೇನೆ ಎಂದು ಪತ್ರದಲ್ಲಿ ಹೇಳಲಾಗುತ್ತಿತ್ತು, ಆ ಪತ್ರಕ್ಕೆ ಉತ್ತರ ಬಾರದಿದ್ದರೂ ಪರವಾಗಿಲ್ಲ. ಅಂತಹ ದಿನದಂದ ಅವರು ಆ ಮನೆಗಳಿಗೆ ಹೋಗಲು ಅವಕಾಶ ಇತ್ತು. ಪರೀಕ್ಷೆಯಲ್ಲಿ ಪಾಸಾಗಿದ್ದು, ತಾನು ಊರನ್ನು ಕ್ಷೇಮವಾಗಿ ತಲುಪಿದ್ದು, ಯಾರೋ ವಿಧಿವಶರಾಗಿದ್ದು.. ಎಲ್ಲ ಪತ್ರದಲ್ಲೇ ಗೊತ್ತಾಗುತ್ತಿತ್ತು. ಕನಿಷ್ಠ 2ರಿಂದ 3 ದಿನ ಪತ್ರ ಇನ್ನೊಂದು ಊರಿನ ಮೂಲೆಯ ಮನೆ ತಲುಪಲು ಬೇಕಾಗುತ್ತಿತ್ತು. ಆದರೂ ಜನರಿಗೆ ಈಗಿನ ಹಾಗೆ ಆ ಕ್ಷಣವೇ ಗೊತ್ತಾಗಬೇಕೆಂಬ ಧಾವಂತ ಇರಲಿಲ್ಲ. ಈಗ ಹಾಗಲ್ಲ ಮನೆಯಿಂದ ಹೊರಟಾಗ, ಹೊರಟ ಮೇಲೆ, ತಲಪುವ ಸ್ವಲ್ಪ ಮೊದಲು, ತಲುಪಿದ ಮೇಲೆ ಹೀಗೆ ಕ್ಷಣ ಕ್ಷಣಕ್ಕೆ ಅಪ್ಡೇಟ್ ಕೊಡುತ್ತಿದ್ದರೂ ಟೆನ್ಶನ್ ಕಡಿಮೆಯಾಗುವುದಿಲ್ಲ. ವ್ಯಕ್ತಿಯೊಬ್ಬ ಆಫ್ ಲೈನ್ ಗೆ ಹೋದರೆ ಆತ ಸತ್ತೇ ಹೋದನೇನೋ ಎಂಬಂಥ ವಿಚಿತ್ರ ಆತಂಕ. ವ್ಯಕ್ತಿಯೊಬ್ಬಸಾಮಾಜಿಕ ಜಾಲತಾಣಗಳಲ್ಲಿ ಕೆಲ ಗಂಟೆಗಳ ಕಾಲ ಮೌನವಾಗಿದ್ದರೆ ಆತನೇನೋ ವಿಚಿತ್ರ ಸಮಸ್ಯೆಯಲ್ಲಿ ಸಿಲುಕಿದ್ದಾನೋ ಎಂಬಂಥ ಗುಮಾನಿ... ನೆಂಟರ ಮನೆಗೆ ಹೋಗುವುದಿದ್ದರೂ ಸಮಯ ಕೇಳಿ ಹೋಗಬೇಕು, ತಾನು ರಜೆಯಲ್ಲಿ ಪ್ರವಾಸಕ್ಕೆ ಹೋದರೂ, ಸಮಾರಂಭಕ್ಕೆ ಹೋದರೂ ಅದನ್ನು ಸೆಲ್ಫೀ ತೆಗೆದು ಸ್ಟೇಟಸ್ಸು, ಫೇಸ್ಬುಕ್ಕಿಗೆ ಹಾಕಬೇಕು, ಮತ್ತೆಷ್ಟು ಮಂದಿ ಅದನ್ನು ನೋಡಿ ಲೈಕಿಸಿದ್ದಾರೆ ಎಂದು ಗಮನಿಸುತ್ತಲೇ ಇರಬೇಕು. ಜಲಪಾತ ನೋಡ ಹೋದವರು, ಜಲಪಾತದ ಸದ್ದನ್ನು ನಿಶ್ಯಬ್ಧವಾಗಿ ಸವಿಯುವ ಬದಲು ಕೇಕೆ ಹಾಕುತ್ತಾ ಜಲಪಾಕ್ಕೆ ಅಡ್ಡವಾಗಿ ತನ್ನ ಮುಖದ ಸೆಲ್ಫೀ ತೆಗೆದು ಸಂಭ್ರಮಿಸಿ ಸ್ಟೇಟಸ್ಸಿನಲ್ಲಿ ಹಾಕಿ ಆ ಕ್ಷಣಕ್ಕೇ ತನ್ನ ಪ್ರವಾಸದ ಸಾಹಸವನ್ನು ಜಗತ್ತಿಗಿಡೀ ತಿಳಿಸಿದ ಸಂಭ್ರಮದಲ್ಲಿ ಬೀಗುತ್ತಾನೆ. ಈಗ ಹೀಗಿದೆ ಪರಿಸ್ಥಿತಿ.. ಎಲ್ಲವೂ ಆ ಕ್ಷಣಕ್ಕೇ ಜಗತ್ತಿಗೆ ತಿಳಿಯಬೇಕು. ಯಾರಿಗೂ ಕಾಯಲು ವ್ಯವಧಾನವಿಲ್ಲ!

4) ಒಂದು ಕಾಲವಿತ್ತು...
ಆಗ ಇಷ್ಟೊಂದು ಚೆಕ್ ಪೋಸ್ಟುಗಳು, ಟೋಲ್ ಕೇಂದ್ರಗಳು, ಸಿಸಿ ಕ್ಯಾಮೆರಾಗಳೂ ಇರಲಿಲ್ಲ. ಎಟಿಎಂ ಕೇಂದ್ರಗಳು, ಸೈಬರ್ ಕ್ರೈಂ ಪೊಲೀಸರು, ಸ್ಟಿಂಗ್ ಆಪರೇಶನ್ ಮಾಡುವ ಪತ್ರಕರ್ತರು, ಹಿಡನ್ ಕೆಮರಾಗಳು, ಬಯೋಮೆಟ್ರಿಕ್ ಗುರುತು ಹಚ್ಚುವ ಯಂತ್ರಗಳು, ಆಧಾರ್ ಕಾರ್ಡುಗಳು ಯಾವುದೂ ಇರಲಿಲ್ಲ. ಒಂದು ಸಹಿ, ಮುಖ ಪರಿಚಯ, ವಿಳಾಸ, ರೇಶನ್ ಕಾರ್ಡುಗಳಲ್ಲಿ ಬಹುತೇಕ ಪರಿಚಯ, ನಂಬಿಕೆಯ ವ್ಯವಹಾಗಳು ಮುಗಿಯುತ್ತಿತ್ತು. ಇಂದು ಮೇಲೆ ಹೇಳಿದ ಅಷ್ಟೂ ವ್ಯವಸ್ಥೆ ಸುತ್ತಮುತ್ತಲಿದೆ. ಆದರೂ ನಂಬಿಕೆ ಮಾತ್ರ ಅಷ್ಟೊಂದಿಲ್ಲ. ವಿಚಿತ್ರವಾದ ಅಪರಾಧಗಳು, ವಂಚನೆಗಳು, ಎಲ್ಲ ವ್ಯವಸ್ಥೆಯನ್ನೂ ಬೇಧಿಸಿ ಮಾಡುವ ಮೋಸದ ಜಾಲಗಳು ಹೆಚ್ಚುತ್ತಲೇ ಇವೆ. ಸಿಸಿ ಕ್ಯಾಮೆರಾಗಳು, ಬೆರಳಚ್ಚು ವ್ಯವಸ್ಥೆಗಳಾಚೆಯೂ ಅಪರಾಧದ ಪ್ರಮಾಣವೇನೂ ತಗ್ಗಿದಂತೆ ಕಾಣಿಸಿಕೊಳ್ಳುವುದಿಲ್ಲ. ಪತ್ರಿಕೆಗಳ ಅಪರಾಧ ಸುದ್ದಿಗಳ ಪುಟವನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ.
---
ಒಂದು ಕಾಲವಿತ್ತು... ಈಗ ಎಲ್ಲ ಹಾಳಾಗಿದೆ. ಈಗಿನವರು ಸರಿ ಇಲ್ಲ, ಆಗಿನವರು ಬುದ್ಧಿವಂತರು. ಆಗ ಮನಶಾಂತಿಯಿಲ್ಲ, ಆಗ ಎಲ್ಲವೂ ಸರಿಯಿತ್ತು... ಎಂಬಿತ್ಯಾದಿ ವಾದಗಳಿಗೋಸ್ಕರ ಅಥವಾ ಪೂರ್ವಾಗ್ರಹ ಪೀಡಿತ ತರ್ಕಕ್ಕೋಸ್ಕರದ ಚಿಂತನೆ ಇದಲ್ಲ. ಸುಮಾರು ಮೂರು ದಶಕಗಳ ಈ ಮನ್ವಂತರದಲ್ಲಿ ತಂತ್ರಜ್ಞಾನ, ಸಂಪರ್ಕ, ವೈಯಕ್ತಿಕತೆಯ ವ್ಯಾಖ್ಯಾನ, ಸಮಯದ ಬಳಕೆ ಎಲ್ಲ ಎಷ್ಟು ಬದಲಾಗಿದೆ ನೋಡಿ. ಆದರೂ ಜನರಿಗೆ ಯಾವುದಕ್ಕೂ ಪುರುಸೊತ್ತಿಲ್ಲ. ಈ ವ್ಯವಸ್ಥೆಗಳಿಂದ ಹೊರತಾಗಿ ಒಬ್ಬ ಬದುಕಲು ತುಂಬ ಕಷ್ಟ ಇದೆ. ಮೂವತ್ತು ವರ್ಷಗಳ ಹಿಂದಿನ ಮೋಡ್ ಸೃಷ್ಟಿಸಿ ನಾನದರಲ್ಲೇ ಇರುತ್ತೇನೆ ಎನ್ನಲು ಆಗುವುದಿಲ್ಲ. ನಂಗೆ ವಾಟ್ಸಪ್ ಗೀಟ್ಸಪ್ ಎಲ್ಲಬೇಡ....ಹೀಗೆಯೇ ಇರುತ್ತೇನೆ ಎನ್ನುತ್ತಿದ್ದವರು ಕೂಡಾ ಒಂದು ಹಂತದಲ್ಲಿ ವಾಟ್ಸಪ್ ಅಳವಡಿಸಿಕೊಂಡದ್ದನ್ನು ಸ್ವತಹ ಕಂಡಿದ್ದೇನೆ. ಇದು ಕಾಲದ ಮಹಿಮೆ. ಒಬ್ಬ, ಇಬ್ಬರಿಂದ ಆದ, ಆಗುವ ಬದಲಾವಣೆಯೂ ಅಲ್ಲ. ಇಷ್ಟೆಲ್ಲ ಬದಲಾವಣೆಯಾದರೂ ನಮ್ಮ ರಾಜಕಾಣಿಗಳ ಮಾತಿನ ರೀತಿ, ಅದೇ ಭರವಸೆಗಳು, ಅಪರಾಧಗಳ ಸಂಖ್ಯೆ, ನಂಬಿಕೆದ್ರೋಹ, ದೇಶವನ್ನು, ಬಡವರನ್ನು ಉದ್ಧಾರ ಮಾಡುವ ಆಶ್ವಾಸನೆಗಳು ಇಂದಿಗೂ ಅದೇ ರೀತಿ ನಡೆಯುತ್ತಿದೆ. ಅಪರಾಧ ಕೃತ್ಯಗಳು, ದುರಂತಗಳು ಬಹಳ ಬೇಗೆ ಪ್ರಪಂಚದೆದುರು ತೆರೆದುಕೊಳ್ಳುತ್ತಿದೆ. ಯಾವುದು ವೈಯಕ್ತಿಕ, ಯಾವುದು ಸಾರ್ವಜನಿಕ ಎಂಬುದರ ನಡುವಿನ ಗೆರೆ ತೆಳೆವಾಗುತ್ತಿದೆ.... ಜಗತ್ತು ಬದಲಾಗಬಹುದು. ಆದೆ 30 ವರ್ಷಗಳ ಹಿಂದಿನ ಮೋಡ್ ಇದೆಯಲ್ಲ ಅದೇ ಮೂಡನ್ನು ಅರೆಕ್ಷಣ ಆವಾಹಿಸಿಕೊಂಡರೆ ಆದ ಬದಲಾವಣೆ ಸ್ಪಷ್ಟವಾಗಿ ತಿಳಿಯುತ್ತದೆ. ನಮಗೆ ನಾವೇ ಆವಾಹಿಸಿಕೊಂಡ ಅವಸರದ ಬದುಕಿನಲ್ಲಿ ಮತ್ತೆ ಬಿಝಿಯಾಗಿ ಕಳೆದು ಹೋಗುತ್ತಿರುವಾಗ ಏತಕ್ಕಾಗಿ ಬಿಝಿಯಾಗಿದ್ದೇವೆ ಎಂಬ ಪ್ರಶ್ನೆ ಎಲ್ಲೋ ಕಾಲದ ಪಾಲಾಗಿರುತ್ತದೆ...!

-ಕೃಷ್ಣಮೋಹನ ತಲೆಂಗಳ, (18.08.2019)

No comments: