ಕನ್ನಡವನ್ನು ಕನ್ನಡಿಗರೇ ಕನ್ನಡದ ಥರ ಮಾತನಾಡದಿದ್ದರೆ ಇನ್ಯಾರು ಮಾತನಾಡಬೇಕು?!

ಕನ್ನಡದ ಮೇಲೆ ಹಿಂದಿ ಹೇರಿಕೆ ಕುರಿತು ಚರ್ಚೆ ನಡೆಯುತ್ತಿದೆ. ಖಂಡಿತಾ ಹೇರಿಕೆ ತಪ್ಪಲ್ಲ. ಆದರೆ, ಭಾಷೆ ವಿಚಾರಕ್ಕೆ ಬಂದಾಗ ಅತ್ಯಂತ ಉದ್ವೇಗ, ಪಕ್ಷ ರಾಜಕೀಯ, ಹೋರಾಟ, ಪ್ರಚಾರ ಎಲ್ಲದರಿಂದ ಹೊರ ಬಂದು ಪೂರ್ವಾಗ್ರಹಪೀಡಿತರಾಗದೆ ನಾವು ಕೆಲವು ವಿಚಾರಗಳ ಬಗ್ಗೆ ಚಿಂತಿಸಬೇಕು. ತುಂಬ ದಿನಗಳಿಂದ ಕಾಡುತ್ತಿರುವ ವಿಚಾರಗಳಿವು...

ಭಾಷೆ ಕೇವಲ ಪ್ರಚಾರ, ಹೋರಾಟ, ಹೇಳಿಕೆಗಳಿಂದ ಮಾತ್ರ ಉಳಿಯುವುದಲ್ಲ, ಭಾಷೆಯ ಬಗ್ಗೆ ಪ್ರೀತಿ ಮತ್ತು ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದೂ ಅದರ ಉಳಿಕೆಗೆ ಕಾರಣವಾಗುತ್ತವೆ. ನನಗನ್ನಿಸಿದ್ದನ್ನು ಅಂಶಗಳಾಗಿ ಹೇಳುತ್ತೇನೆ ಕೇಳಿ...

1) ನಾವು ಕನ್ನಡವನ್ನು ಎಷ್ಟು ಶುದ್ಧವಾಗಿ ಬಳಸುತ್ತೇವೆ. ನಮ್ಮ ಮಾತು, ನಡೆ, ನುಡಿ, ಉಡುಪು ಎಲ್ಲದಕ್ಕೂ ಆಂಗ್ಲ ಚಿಂತನೆ, ಜಾಗತಿಕ ಮಾನದಂಡಗಳೇ ಆದರ್ಶವೆಂದು ಬದುಕುತ್ತಿರುವ ನಾವು (ನಾವು ಅಂದರೇ ಬಹುತೇಕರು) ಇಂಗ್ಲಿಷಿನ ಮೋಡದಡಿ ಅದರ ನೆರಳಿನಲ್ಲಿ ಕನ್ನಡವನ್ನು ಬಳಸುತ್ತಿದ್ದೇವೆ. ಶುದ್ಧ ಕನ್ನಡದ ಬಳಕೆ ಬಗ್ಗೆ ಮುಖ್ಯವಾಗಿ ಈಗಿನ ಯುವಕರಲ್ಲಿ ಆಸಕ್ತಿಯಾಗಲಿ, ಪ್ರೀತಿಯಾಗಲಿ ಕಡಿಮೆ...
2) ಸಾಮಾಜಿಕ ಜಾಲತಾಣವೇ ಈಗ ಸದ್ದು ಮಾಡುತ್ತಿರುವ ಸಂವಹನ ಮಾಧ್ಯಮ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಕೆಗೆ ಸಾಕಷ್ಟು ಆಯ್ಕೆಗಳಿವೆ. ಆದಾಗ್ಯೂ ನಮಗೆ ಶುದ್ಧ ಕನ್ನಡದಲ್ಲಿ ಮೆಸೇಜು ಮಾಡಲು, ಬೆರಕೆಯಿಲ್ಲದ ಭಾಷೆಯಲ್ಲಿ ಮಾತನಾಡಲು ಪುರುಸೊತ್ತಿಲ್ಲ ಅಥವಾ, ಸಾಧ್ಯವಾಗುತ್ತಿಲ್ಲ... ಯಾಕೆ?

3) ಒಂದು ಕಾಲದಲ್ಲಿ ಕಂಪ್ಯೂಟರ್, ಮೊಬೈಲು ಬಳಸಲು ಇಂಗ್ಲಿಷು ಅನಿವಾರ್ಯ ಎಂಬ ನಂಬಿಕೆಯಿತ್ತು. ಇತ್ತೀಚಿನ ನಾಲ್ಕಾರು ವರ್ಷಗಳಿಂದ ಕನ್ನಡ ಕೀಬೋರ್ಡ್ ಸಹಿತ ಎಲ್ಲಾ ಆಯ್ಕೆಗಳು ಆನ್ ಲೈನ್ ಜಗತ್ತಿನಲ್ಲಿ ಸಿಗುತ್ತಿವೆ ಆದರೂ ಸರಳ ಸರಳ ಪದಗಳಿಗೂ ನಮಗೆ ಇಂಗ್ಲಿಷೇ ಆಗಬೇಕು.

4) ನಾನೊಬ್ಬ ಇಂಗ್ಲಿಷಿನಲ್ಲಿ ತುಂಬಾ ಚೆನ್ನಾಗಿ ಮಾತನಾಡಲು ಅಥವಾ ಬರೆಯಲು ತಿಳಿದಿರುವ ವ್ಯಕ್ತಿಯಲ್ಲ. ಆ ಬಗ್ಗೆ ನನಗೆ ಬೇಸರವಿದೆ, ನನ್ನ ಇಂಗ್ಲಿಷ್ ಚೆನ್ನಾಗಿರಬೇಕಿತ್ತು ಅಂತ. ಹಾಗಂತ ಅದನ್ನು ಹೇಳಲು ನನಗೆ ತುಂಬ ಮುಜುಗರ ಏನೂ ಆಗುವುದಿಲ್ಲ. ಕಾರಣ, ನಾನು ಹುಟ್ಟಿದ್ದು, ಇಂಗ್ಲೆಂಡಿನಲ್ಲಿ ಅಲ್ಲ. ಭಾರತದಲ್ಲಿ. ಚಿಕ್ಕಂದಿನಿಂದಲೂ ಮಾತನಾಡುತ್ತಿದ್ದುದು ಕನ್ನಡ, ಕಲಿತದ್ದೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ. ಹಾಗಾಗಿ ಸಹಜವಾಗಿ ಕನ್ನಡವೇ ಆಪ್ತವಾಗುತ್ತಿತ್ತು. ದೊಡ್ಡ ಕ್ಲಾಸುಗಳಲ್ಲಿ ಇಂಗ್ಲಿಷ್ ಕಲಿಯುವಿಕೆ ಇದ್ದರೂ ಈಗಿನಿಂಥ ಭಯಂಕರ ಗುಣಮಟ್ಟದ ಇಂಗ್ಲಿಷ್ ಶಾಲೆಗಳಲ್ಲಿ ಕಲಿತದ್ದಲ್ಲ, ಇಂಗ್ಲಿಷನ್ನು ತುಂಬಾ ಇಂಪ್ರೂವ್ ಮಾಡಲು ಆಗಲಿಲ್ಲ. ಆದರೆ ನನ್ನ ಮಾತೃಭಾಷೆ ಕನ್ನಡದಲ್ಲಿ ಚೆನ್ನಾಗಿ ಬರೆಯಲು, ಮಾತನಾಡಲು ಸಾಧ್ಯವಾಗುತ್ತದೆ ಎಂದಷ್ಟೇ ಹೇಳಬಲ್ಲೆ. ನನನಗೆ ಇಂಗ್ಲಿಷ್ ದ್ವೇಷವಿಲ್ಲ, ಹಿಂದಿ ದ್ವೇಷವೂ ಇಲ್ಲ, ಎರಡೂ ಭಾಷೆಯನ್ನು ಹೆಚ್ಚೆಚ್ಚು ಕಲಿಯಲು ಆಸಕ್ತಿ ಇದೆ. ಹಾಗಂತ ನನ್ನ ಕನ್ನಡದೊಂದಿಗೆ ಇವನ್ನು ವಿಪರೀತ ಬೆರೆಸಿ ಮಾತನಾಡುವ ಅಪರಿಮಿತ ಉತ್ಸಾಹವಿಲ್ಲ. ಬಸ್ಸಿಗೆ ಧೂಮಶಕಟ ಬಂಡಿ ಎಂದೇ ಬಳಸಬೇಕು ಎಂಬ ವಾದವೂ ನನ್ನದಲ್ಲ! ನನಗೆ ಗೊತ್ತಿಲ್ಲದ ಸಂದರ್ಭಗಳಲ್ಲಿ ತಪ್ಪು ತಪ್ಪಾಗಿ ಇಂಗ್ಲಿಷ್ ಬಳಸುವ ಅತಿಯಾದ ಧೈರ್ಯವೂ ನನಗಿಲ್ಲ. ಸರಳ ಇಂಗ್ಲಿಷಿನಲ್ಲಿ ವ್ಯವಹರಿಸಬಲ್ಲೆ ಅಷ್ಟೇ...

5) ನಾವು ಮಂಗಳೂರಿನವರು ಮಂಗಳೂರಿನವರಿಗೇ ಏನಾದರೂ ಶುಭಾಶಯ ಕೋರುವ ಸಂದರ್ಭದಲ್ಲಿ ಇಂಗ್ಲಿಷಿನಲ್ಲೇ ಶುಭ ಕೋರುತ್ತೇವೆ (ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ..., ಬಿ ಹ್ಯಾಪಿ ಆಲ್ವೇಸ್... ಗುಡ್ ಮಾರ್ನಿಂಗ್, ಗುಡ್ ನೈಟ್.....) ಇತ್ಯಾದಿ ಇತ್ಯಾದಿ... ನೀವು ಅಕ್ಷರ ಅಕ್ಷರವೂ ಶುದ್ಧ ಕನ್ನಡದಲ್ಲೇ ಮಾತನಾಡಿ, ನಿಮ್ಮ ಮಾತಿನ ನಡುವೆ ಇಂಗ್ಲಿಷ್ ನುಸುಳಲೇ ಬಾರದೆಂಬ ವಾದ ನನ್ನದಲ್ಲ. ಆದರೆ, ನೀವಿಬ್ಬರೂ ಮಂಗಳೂರಿಗರೇ... ಆತ್ಮೀಯವಾಗಿ ಮಾತನಾಡುವಾಗ ಕನ್ನಡ, ತುಳುವಿನಲ್ಲಿ ಮಾತನಾಡುತ್ತೀರಿ. ಹಾಗಿದ್ದಾಗ, ಇಬ್ಬರಿಗೂ ಆಪ್ತವಾಗುವ ಭಾಷೆ ಕನ್ನಡ ಅಥವಾ ತುಳು (ಇಂಗ್ಲಿಷ್ ಲಿಟರೇಚರ್ ಕಲಿತಿದ್ದರೆ ಬೇರೆ ಪ್ರಶ್ನೆ, ನನ್ನಷ್ಟೇ ಇಂಗ್ಲಿಷ್ ಗೊತ್ತಿರುವ ಮಹಾನುಭಾವರ ಬಗ್ಗೆ ಹೇಳುತ್ತಿರುವುದು) ಮಾತನಾಡುವ ನೀರು ಶುಭ ಕೋರುವಾಗ ಮುದ್ದಾಗಿ ನಾಲ್ಕು ಶಬ್ದ ಕನ್ನಡದಲ್ಲಿ ಯಾಕೆ ಬರೆದು ಹಾಕುವುದಿಲ್ಲ. 

ಸಹೋದರ ಎಂಬ ಪದ ಬ್ರೋ... ಯಾಕಾಗುತ್ತದೆ,? ಸಹೋದರಿ ಅಥವಾ ತಂಗಿ ಅನ್ನುವುದು ಸಿಸ್.... ಯಾಕಾಗುತ್ತದೆ? ನಮಸ್ಕಾರ ಅನ್ನುವುದು ಹಾಯ್ ಯಾಕಾಗುತ್ತದೆ? ಆಯ್ತು ಅನ್ನುವ ಬದಲ್ ಓಕೆಕೆಕೆ ಅಂತ ಯಾಕೆ ಹೇಳುತ್ತೇವೆ? ಶುಭ ಮುಂಜಾನೆ ಅನ್ನುವುದು ಗುಡ್ ಮಾರ್ನಿಂಗ್ ಯಾಕಾಗುತ್ತದೆ?

6) ಅನಿವಾರ್ಯವಲ್ಲದ ಸಂದರ್ಭದಲ್ಲೂ ಇಂಗ್ಲಿಷಿನಲ್ಲಿ ಮಾತನಾಡುವುದು ಸ್ಟಾಂಡರ್ಡು ಅಥವಾ ಇಂಗ್ಲಿಷ್ ಮಾತನಾಡಿದವ ಬುದ್ಧಿವಂತ ಅನ್ನುವ ಮಾನದಂಡ ರೂಪಿಸಿದವರು ಯಾರು? ನಮ್ಮ ಮಾತೃಭಾಷೆಯೇ ನಮಗೆ ಸರಿ ಬಾರದಿದ್ದರೆ ಕೊರತೆ ಹೌದು. ನಮ್ಮೂರಿನ, ನಮ್ಮ ಮನೆಯವರ, ನಮ್ಮ ಕಚೇರಿಯಲ್ಲಿರುವವರ ಜೊತೆಗೂ ಸರಿಯಾಗಿ ಬಾರದ ತಪ್ಪು ತಪ್ಪು ಇಂಗ್ಲಿಷಿನಲ್ಲಿ ಮಾತನಾಡುವಂಥಹ ಅತಿರೇಕದ ಅಂಗ್ಲ ವ್ಯಾಮೋಹ ಯಾಕೆ? ಪರ ಊರಿನಲ್ಲಿ, ಪರ ಭಾಷಿಕರಲ್ಲಿ ಸಂವಹನಕ್ಕೋಸ್ಕರ ಅವರ ಭಾಷೆ ಮಾತನಾಡಬೇಕಾದ್ದು ಖಂಡಿತಾ ಸರಿ. ಆದರೆ, ನಿಮ್ಮ ಓರಗೆಯವ, ನಿಮ್ಮ ಸಹಪಾಠಿ, ನಿಮ್ಮ ಮನೆಮಂದಿಗೂ ವಾಟ್ಸಪ್ಪು, ಫೇಸ್ಬುಕ್ಕಿನಲ್ಲಿ ಹುಟ್ಟಿದ ದಿನ, ವಾರ್ಷಿಕೋತ್ಸವಗಳ ಸಂದರ್ಭದಲ್ಲೂ ಇಂಗ್ಲಿಷ್ ವಾಕ್ಯಗಳಲ್ಲೇ (ಶೇ.75ರಷ್ಟು ವಾಕ್ಯಗಳು ಎಲ್ಲಿಂದಲೋ ಕಾಪಿ ಮಾಡಿದಂಥವು) ಶುಭ ಕೋರಿ ಮೆಸೇಜ್ ಮಾಡ್ತೀರಲ್ಲ. ಯಾಕೆ? ಕನ್ನಡದಲ್ಲಿ ಟೈಪಿಂಗ್ ಕಷ್ಟವ, ಅಥವಾ ಕನ್ನಡದಲ್ಲಿ ಶುಭ ಕೋರಿದರೆ ಸ್ಟಾಂಡರ್ಡ್ ಕಡಿಮೆ ಅನ್ನುವ ಕೀಳರಿಮೆ ಇದೆಯ?

7) ವಿಶ್ವದ ಎಲ್ಲೆಡೆ ಜ್ಞ, ಕ್ಷ, ಞ ಇತ್ಯಾದಿ ಅಕ್ಷರಗಳನ್ನು ಪ್ರಾಥಮಿಕ ತರಗತಿಗಳಲ್ಲಿ ಒಂದೇ ರೀತಿ ಕಲಿಸಲಾಗುತ್ತಿದೆ. ಕೆಲವು ಭಾಗಗಳ ಮಂದಿ ಜ್ಞವನ್ನು ಗ್ನ ಅಂತ ಉಚ್ಚಾರ ಮಾಡುತ್ತಾರೆ. ಯಾಕೆ (ಕೃತಘ್ನತೆ, ಯಘ್ನ, ವಿಘ್ನಾನ, ಕಯ್ಯಾರ ಕಿಯ್ಯಣ್ಣ ರೈ... ಇತ್ಯಾದಿ ಇತ್ಯಾದಿ) ಜ್ಞವನ್ನು ಘ್ನ ಅಂತ ಹೇಳಬಹುದು ಅಂತ ಏನಾದರೂ ಸೂಚನೆ ಇದೆಯೇ? (ನಿಜವಾಗಿ ನನಗೆ ಈ ಬಗ್ಗೆ ಮಾಹಿತಿಯಿಲ್ಲ ಅದಕ್ಕೆ ಕೇಳಿದ್ದು).

8) ಸಮೂಹ ಮಾಧ್ಯಮದಲ್ಲೂ ಕೆಲವು ಮಂದಿ ಆರ್ ಜೆಗಳು (ರೇಡಿಯೋಗಳಲ್ಲಿ), ಆಂಕರ್ ಗಳು (ಟಿ.ವಿ.ಯಲ್ಲಿ), ಸಿನಿಮಾ ನಟ, ನಟಿಯರು ಕನ್ನಡವನ್ನು ಇಂಗ್ಲಿಷ್ ಆಕ್ಸೆಂಟಿನಲ್ಲಿ (ಹಾಗೆ ಹೇಳಿದರೇ ಅರ್ಥ ಆಗೋದು) ಮಾತನಾಡುವುದು ಯಾಕೆ? ಕನ್ನಡವನ್ನು ಕಷ್ಟದಲ್ಲಿ ಮಾತನಾಡಿದ ಹಾಗೆ ವರ್ತಿಸುವುದು ಯಾಕೆ? ಎ ಎಂಬ ಅಕ್ಷರವನ್ನು ಯೇ ಅಂತ ಎಳೆಯುವುದು, ಅಲ್ಪ ಪ್ರಾಣವನ್ನು ಮಹಾಪ್ರಾಣದಲ್ಲಿ ಉಚ್ಚರಿಸುವುದು, ಏಕವಚನದಲ್ಲಿ ವಾಕ್ಯ ಆರಂಭಿಸಿ ಬಹುವಚನದಲ್ಲಿ ಮುಗಿಸುವುದು..... ಕನ್ನಡ ವಾಕ್ಯದ ನಡು ನಡುವೆ ಅಗತ್ಯವೇ ಇಲ್ಲದಿದ್ದರೂ ಇಂಗ್ಲಿಷ್ ಪದಗಳನ್ನು ತುರುಕುವುದು ಯಾಕೆ?

ಈಗ ಜನ ಇದನ್ನೇ ಬಯಸ್ತಾರೆ... ಜನ ಅಟ್ರಾಕ್ಟ್ ಆಗ್ತಾರೆ... ಶುದ್ಧ ಕನ್ನಡ ಬೋರಿಂಗ್...ಕನ್ನಡ ಪದದ ಮಾತನಾಡುವ ಸೌಂದರ್ಯವನ್ನು ಇಂಗ್ಲಿಶ್ ಶೈಲಿಯಲ್ಲಿ ಉಚ್ಛರಿಸಿ ಜೀವಂತ ಕೊಲ್ಲುವ ಮಂದಿ ಈ ಥರ ಸಬೂಬುಗಳನ್ನು ಕೊಟ್ಟು ಸಮರ್ಥಿಸಿಕೊಳ್ಳುವಾಗ, ಅನಿಸುವುದು.... ಇಂತಹ ಮಾನದಂಡಗಳನ್ನು ಸೃಷ್ಟಿಸುವ, ನಿರ್ಧರಿಸುವ ಮಂದಿ ಯಾರು... ಕನ್ನಡವನ್ನು ಕನ್ನಡಿಗರೇ ಕನ್ನಡದ ಥರ ಮಾತನಾಡದಿದ್ದರೆ ಇನ್ಯಾರು ಮಾತನಾಡಬೇಕು?


ನಾವು ಯಾರನ್ನೋ ಮೆಚ್ಚಿಸಲು, ಯಾರದ್ದೋ ಜೊತೆ ಹೋಲಿಕೆ ಮಾಡಿ ಬದುಕಲು, ಯಾರೋ ಮಾಡುತ್ತಾರೆಂದು ನಾವೂ ಮಾಡಲು ಹೋಗಲು ಬಳಸುವ ಸಮಯವನ್ನು ಶುದ್ಧ ಕನ್ನಡ ಮಾತನಾಡಲು ಬಳಸಿದರೆ ಸಾಕು. ಭಾಷೆ ಉಳಿಯುತ್ತದೆ, ಶುದ್ಧ ನೀರಿನ ಥರ. ವಿನಾ ಕಾರಣದ ಕಲಬೆರಕೆ, ಅನಗತ್ಯ, ತಲೆಚಿಟ್ಟು ಹಿಡಿಸುವ ರಾಗಗಳು, ತಪ್ಪು ತಪ್ಪು ಉಚ್ಚಾರ, ಸರಳ ಪದಗಳಿಗೂ ಇಂಗ್ಲಿಷ್ ಪದಗಳ ಬಳಕೆ.... ಇದನ್ನೆಲ್ಲ ಮಾಡುತ್ತಿರುವುದು ಹಿಂದಿಯವರೋ, ಮಲೆಯಾಳಿಗರೋ ಅಲ್ಲ... ನಾವೇ ಕನ್ನಡಿಗರು ಅನ್ನುವುದು ನೆನಪಿರಲಿ!!

ನಾವು ಇವತ್ತು ಹೀಗೆ ಮಾಡಿದರೆ ನಮ್ಮ ಮಕ್ಕಳೂ ನಾಳೇ ಇದನ್ನೇ ಮುಂದುವರಿಸುತ್ತಾರೆ. ಮಾಧ್ಯಮಗಳಲ್ಲಿ ಬಂದದ್ದೂ ಆದರ್ಶ ಎಂಬ ಕಲ್ಪನೆ ಮೂಡಬಹುದು. ಶುದ್ಧ ಕನ್ನಡ ಯಾವುದು... ಕಲಬೆರಕೆ ಯಾವುದೆಂದು ಗೊತ್ತಾಗದ ಪರಿಸ್ಥಿತಿ ಬಂದೀತು. ಇವತ್ತು ಎಷ್ಟು ಮಂದಿ HAI ಎಂಬ ಇಂಗ್ಲಿಷ ಪದದ ಸ್ಪೆಲ್ಲಿಂಗ್ HAI ಎಂಬುದು ನೆನಪಿದೆ ಹೇಳಿ... ಎಲ್ಲರೂ HI ಎಂದೇ ಬರೆಯುತ್ತಾರೆ. ನಾಳೆ ಕನ್ನಡಕ್ಕೂ ಇದೇ ಗತಿ ಬಂದೀತು... ಕನ್ನಡ ಮಾತನಾಡಲು ಮುಜುಗರ ಬೇಡ, ಸುಮ್ಮನೇ ಕಾರಣವೇ ಇಲ್ಲದೆ ಯಾವ್ಯಾವುದೋ ಅನುಕರಣೆ ಬೇಡ. ಮಾತನಾಡುವುದಿದ್ದರೆ ಚೆಂದಕೆ, ಶುದ್ಧವಾಗಿ ಕನ್ನಡ ಮಾತನಾಡಿ, ಇಲ್ಲವಾದರೆ ಇಂಗ್ಲಿಷಿನಲ್ಲೇ ಮಾತನಾಡಿ ಕನಿಷ್ಠ ನಿಮ್ಮ ಇಂಗ್ಲಿಷ್ ಆಧರೂ ಸುಧಾರಿಸೀತು.. ಕನ್ನಡಕ್ಕೆ ಆಪತ್ತು ಕಾದಿದೆ ಎಂಬ ಬೊಗಳೆ ಆರೋಪ ಬೇಡ... ಮೇಲೆ ನೋಡಿ ಉಗುಳಿದ ಹಾಗಾದೀತು!!

-ಕೃಷ್ಣಮೋಹನ ತಲೆಂಗಳ (22-09-2019)


No comments: