ಬಲ್ಲಿರೇನಯ್ಯ ಯಕ್ಷಕೂಟಕ್ಕೆ ಐದರ ಹರೆಯ...


ನಮಸ್ತೆ
ಮೊನ್ನೆ ನ.7ಕ್ಕೆ ನಮ್ಮ ಬಲ್ಲಿರೇನಯ್ಯ ಯಕ್ಷಕೂಟ ವಾಟ್ಸಪ್ ಗ್ರೂಪು ಆರಂಭವಾಗಿ ಐದು ವರ್ಷಗಳು ಭರ್ತಿಯಾದವು (2014 ನ.7ರಂದು ಆರಂಭಿಸಿದ್ದು).
ಆಂದು, ಗ್ರೂಪು ಆರಂಭವಾಗುವ ಹೊತ್ತಿಗೆ ವಾಟ್ಸಪ್ ಪ್ರವರ್ಧಮಾನಕ್ಕೆಬಂದು ಕೆಲವೇ ದಿನಗಳಾಗಿದ್ದವು ಅಷ್ಟೇ. ಆಗ ಯಕ್ಷಗಾನಕ್ಕೆ ಸಂಬಂಧಿಸಿದ ಗ್ರೂಪು ಒಂದೋ, ಎರಡೋ ಇದ್ದಿರಬಹುದು. ಈ ಪೈಕಿ ಆರಂಭಿಕ ದಿನಗಳಲ್ಲಿ ಆರಂಭವಾದ ಯಕ್ಷಗಾನಕ್ಕೆ ಸಂಬಂಧಿಸಿದ (ತೆಂಕು ತಿಟ್ಟಿನ ನೆಲದಲ್ಲಿ) ವಾಟ್ಸಪ್ ಗ್ರೂಪುಗಳಲ್ಲಿ ನಮ್ಮದೂ ಒಂದಾಗಿತ್ತು ಎಂಬುದು ಹೆಮ್ಮೆಯ ವಿಚಾರ.


ಈ ಹಿಂದಿನ ವರ್ಷಗಳಲ್ಲಿ ಹೇಳಿದ ಹಾಗೆ, ಯಾವುದೇ ಮಹತ್ವಾಕಾಂಕ್ಷೆ ಅಥವಾ ದೂರದೃಷ್ಟಿಯನ್ನಿರಿಸಿ ಹುಟ್ಟು ಹಾಕಿದ ಗ್ರೂಪು ಇದಲ್ಲ. ಯಾವುದೇ ಸಿದ್ಧಾಂತ, ಪಂಥ, ಅಜೆಂಡಾಗಳನ್ನಿರಿಸಿ ಕಟ್ಟಿದ ಗ್ರೂಪು ಇದಲ್ಲ. ಯಾವುದೇ ನಿಬಂಧನೆ ಅಥವಾ ಚೌಕಟ್ಟುಗಳನ್ನೂ ಬಳಸಿದ ಗ್ರೂಪಲ್ಲ. ಸರಳವಾದ ನಿಯಮಗಳನ್ನು ಅನುರಸಿರಿ, ಸದಸ್ಯರೇ ಬೆಳೆಸಿದ ಗ್ರೂಪು. ಯಕ್ಷಗಾನ ಪ್ರದರ್ಶನಗಳ ಮಾಹಿತಿ ವಿನಿಮಯದ ಉದ್ದೇಶ ಎಂಬ ಒಂದೇ ಉದ್ದೇಶದಿಂದ ಶುರುವಾದ ಗ್ರೂಪಿದು, ಇಂದಿಗೂ ಬಹುತೇಕ ಅದೇ ಗುರಿಯೊಂದಿಗೆ ನಡೆಯುತ್ತಿದೆ.

ಮಂಗಳೂರಿನಲ್ಲಿರುವ ನನ್ನ ಮಾಧ್ಯಮ ಮಿತ್ರರೊಂದಿಗೆ ಇಂದು ಎಲ್ಲಿ ಆಟ ಇದೆ, ಯಾರ್ಯಾರು ಬರುತ್ತಾರೆ ಎಂದು ವೈಯಕ್ತಿಕವಾಗಿ ಸಂದೇಶ ಕಳುಹಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ನಾಲ್ಕೈದು ಮಂದಿಯನ್ನು ಸೇರಿಸಿ ..ಇವತ್ತು ಇಂಥ ಕಡೆ ಆಟ ಇದೆ.. ಎಂಬ ಸಂದೇಶ ಕಳುಹಿಸಲು ಶುರು ಮಾಡಿದ ಗ್ರೂಪಿದು (ಸಂತೋಷವೆಂದರೆ ಅಂದು ಆರಂಭಿಕ ದಿನಗಳಲ್ಲಿದ್ದು ಶೇ.90ರಷ್ಟು ಮಂದಿ ಇಂದಿಗೂ ಗ್ರೂಪಿನಲ್ಲಿದ್ದಾರೆ). ನಂತರದ ದಿನಗಳಲ್ಲಿ ಅವರು ನನ್ನ ಸ್ನೇಹಿತನೊಬ್ಬನಿದ್ದಾನೆ, ಅವರನ್ನು ಸೇರಿಸಿ, ಬಂಧುವೊಬ್ಬರಿದ್ದಾರೆ ಅವರನ್ನೂ ಸೇರಿಸಿ... ಹೀಗೆ ಮನವಿಗಳನ್ನು ಕಳುಹಿಸುತ್ತಾ ಕಳುಹಿಸುತ್ತಾ.... ಒಬ್ಬೊಬ್ಬರನ್ನೇ ಸೇರಿಸುತ್ತಾ ಸೇರಿಸುತ್ತಾ ಗ್ರೂಪು ಬರೋಬ್ಬರಿ ಭರ್ತಿಯಾಗುವಷ್ಟು ಸದಸ್ಯರು ಕೆಲವೇ ತಿಂಗಳುಗಳಲ್ಲಿ ಆಗಿ ಹೋದರು. ಇಂದಿಗೂ ಗ್ರೂಪಿನ ಕರಿಷ್ಠ ಸಂಖ್ಯೆ 256ರಷ್ಟು ಸದಸ್ಯರು ಸದಾ ತುಂಬಿಯೇ ಇರುತ್ತಾರೆ. ಮತ್ತಷ್ಟು ಸದಸ್ಯರು ಸೇರ್ಪಡೆಗೆ ಕೋರಿಕೊಂಡ ಕಾರಣ ಬಲ್ಲಿರೇನಯ್ಯ 2 ಎಂಬ ಗ್ರೂಪನ್ನೂ ಆರಂಭಿಸಿದ್ದು, ಅದರಲ್ಲೂ ಸುಮಾರು 17 ಮಂದಿ ಸದಸ್ಯರಿದ್ದಾರೆ.

ಇಂದು ಯಕ್ಷಗಾನಗಳಿಗೆ ಗ್ರೂಪು ಕಟ್ಟುವುದು, ಅದಕ್ಕೆ ಸದಸ್ಯರನ್ನು ಸೇರಿಸುವುದು ದೊಡ್ಡ ವಿಷಯ, ಸಾಧನೆ ಅಥವಾ ಅಚ್ಚರಿ ಅಲ್ಲ. ಆದರೆ, ಐದು ವರ್ಷಗಳ ಹಿಂದಿನ ತಂತ್ರಜ್ಞಾನಕ್ಕೆ ಸಂಬಂಧಿಸಿ ಆ ದಿನಗಳಲ್ಲಿ ಇಂತಹ ಕಲ್ಪನೆಗೆ ಸಾತ್ ಕೊಟ್ಟು ತನ್ನಿಂತಾನೇ ಗ್ರೂಪನ್ನು ಬೆಳೆಸುತ್ತಾ ಬೆಳೆಸುತ್ತಾ ಹೋದ ಅಸಂಖ್ಯಾತ ಸ್ನೇಹಿತರು (ಒಬ್ಬೊಬ್ಬರದ್ದೇ ಹೆಸರು ಹೇಳಲು ಅಸಾಧ್ಯ) ಈ ಗ್ರೂಪು ಇಂದಿಗೂ ಉಳಿಯಲು ಕಾರಣಕರ್ತರು.

ನಾನು ಯಕ್ಷಗಾನದ ಈ ಗ್ರೂಪನ್ನು ಹೊರತು ಪಡಿಸಿ ಇನ್ನೂ ನಾಲ್ಕೈದು ಗ್ರೂಪುಗಳಿಗೆ (ಬೇರೆ ಬೇರೆ ವಿಚಾರದ್ದು) ಅಡ್ಮಿನ್ ಆಗಿದ್ದೇನೆ. ಆದರೆ, ಈ ಗ್ರೂಪಿನಷ್ಟು ನಿರಾಯಾಸವಾಗಿ ನಡೆಯುವ ಗ್ರೂಪು ಬೇರೆ ಯಾವುದೂ ಇಲ್ಲ. ಇಲ್ಲಿನ ಸ್ವಶಿಸ್ತು, ವಿಷಯ ಬದ್ಧತೆ ಹಾಗೂ ಗ್ರೂಪಿನ ಶೀರ್ಷಿಕೆ ಕುರಿತ ಸಮರ್ಪಣಾ ಭಾವ ಬೇರೆ ಯಾವ ಗ್ರೂಪಿನಲ್ಲೂ ಇಲ್ಲ. ಇದೇ ಕಾರಣಕ್ಕೆ ನಿನ್ನೆ ಅಯೋಧ್ಯ ತೀರ್ಪಿನ ದಿವಸ ಅಡ್ಮಿನ್ ಓನ್ಲಿ ಆಯ್ಕೆಯ್ನು ಗ್ರೂಪಿನಲ್ಲಿ ಬಳಸಲಿಲ್ಲ. ಯಾಕೆಂದರೆ ಪ್ರತಿ ಸದಸ್ಯರೂ ಗ್ರೂಪಿನ ಶಿಸ್ತನ್ನು ಯಾವತ್ತೂ ಉಲ್ಲಂಘಿಸಿಲ್ಲ ಎಂಬುದು ಸಂತೋಷದ ಸಂಗತಿ. ಒಂದು ಸಂದರ್ಭ ಓರ್ವ ಹಿರಿಯರನ್ನು ಹೊರತು ಪಡಿಸಿ ಇನ್ಯಾವತ್ತೂ ಗ್ರೂಪಿನಿಂದ ಯಾರನ್ನೂ ರಿಮೂವ್ ಮಾಡುವ ಸಂದರ್ಭ ಬರಲಿಲ್ಲ. ಯಾರಿಗೂ ಪದೇ ಪದೇ ಎಚ್ಚರಿಸುವ ಪ್ರಮೇಯ ಬಂದಿಲ್ಲ, ಯಾರಿಗೂ ಗಂಭೀರ ಜಗಳಗಳು ಇಲ್ಲಿ ನಡೆದಿಲ್ಲ. 256 ಮಂದಿ ಇದ್ದರೂ ಗ್ರೂಪಿನ ಸ್ವಯಂಶಿಸ್ತು ಸದಾ ಪಾಲನೆಯಾಗುತ್ತದೆ ಎಂಬುದು ಹೆಮ್ಮೆಯ ಸಂಗತಿ.


ಸರಳ ವಿಚಾರಗಳು


1) ಗ್ರೂಪಿಗೆ ಯಾರನ್ನೇ ಸೇರಿಸುವುದಿದ್ದರೂ ಅವರಿಗೆ ಗ್ರೂಪಿನ ನಿಯಮಗಳನ್ನು ವೈಯಕ್ತಿಕವಾಗಿ ಕಳುಹಿಸಲಾಗುತ್ತದೆ.
2) ಗ್ರೂಪಿಗೆ ಸೇರಿಸುವಾಗ ಅವರ ಹೆಸರು, ಕಿರು ಪರಿಚಯವನ್ನು ಪ್ರತಿ ಬಾರಿಯೂ ಎಲ್ಲರಿಗೂ ತಿಳಿಯುವಂತೆ ನೀಡಲಾಗುತ್ತದೆ.
3) ಆದಷ್ಟು ಮಟ್ಟಿಗೆ ಫಾರ್ವರ್ಡ್ ಪೋಸ್ಟುಗಳನ್ನು ಹಾಕುವಾಗ ಮೂಲ ಗ್ರೂಪಿಗೆ ಕ್ರೆಡಿಟ್ ನೀಡಲಾಗುತ್ತದೆ.
4) ಆಟಗಳು ನಡೆಯುವಲ್ಲಿಂದ ನೇರ ಪ್ರಸಾರ ನೀಡುವಾಗ ಯಥಾಸಾಧ್ಯ ವಿವರಗಳನ್ನು ನೀಡಲಾಗುತ್ತದೆ.
5) ನಮ್ಮ ಗ್ರೂಪು ಯಾವುದೇ ಕಲಾವಿದ, ಮೇಳ ಅಥವಾ ಸಿದ್ಧಾಂತದ ಪರ ಅಥವಾ ವಿರೋಧ ಇರುವುದಲ್ಲ. ಯಕ್ಷಗಾನಂ ಗೆಲ್ಗೆ ಅನ್ನುವುದು ಮಾತ್ರ ಗ್ರೂಪಿನ ಧ್ಯೇಯ. ಯಕ್ಷಗಾನ ಕಾರ್ಯಕ್ರಮಗಳ ಮಾಹಿತಿ ವಿನಿಮಯವಷ್ಟೇ ಗ್ರೂಪಿನ ಉದ್ದೇಶ. ಹಿಂದೆ ಮತ್ತು ಮುಂದೆಯೂ ಕೂಡಾ..


ನಮ್ಮ ಗ್ರೂಪಿನಲ್ಲಿ ಒಂದಷ್ಟು ಮಂದಿ ಕಲಾವಿದರಿದ್ದಾರೆ, ನಾಲ್ಕೈದು ಮಂದಿ ಹಿರಿಯ ಭಾಗತರಿದ್ದಾರೆ (ಗ್ರೂಪಿಗೆ ಅಗತ್ಯ ಮಾಹಿತಿಗಳನ್ನು ಸದಾ ನೀಡುತ್ತಿರುತ್ತಾರೆ). ಇವರನ್ನು ಹೊರತುಪಡಿಸಿ ಯಕ್ಷಗಾನದ ಬಗ್ಗೆ ಅತ್ಯಂತ ಶಾಸ್ತ್ರೀಯವಾಗಿ ತಿಳಿದವರು, ಕೇವಲ ಪ್ರೇಕ್ಷಕರಾಗಿ ಮಾತ್ರ ಯಕ್ಷಗಾನವನ್ನು ಕಂಡವರು, ಯಕ್ಷಗಾನದ ಆಸಕ್ತಿ ಇದ್ದರೂ ಶಾಸ್ತ್ರೀಯವಾಗಿ ಏನೂ ತಿಳಿಯದವರೂ ಇದ್ದಾರೆ. ಒಳ್ಳೊಳ್ಳೆ ಛಾಯಾಗ್ರಾಹಕರಿದ್ದಾರೆ. ಆಟಗಳಿಂದ ವಿಡಿಯೋಗಳನ್ನು ನೇರ ಪ್ರಸಾರದಲ್ಲಿ ನೀಡುವವರಿದ್ದಾರೆ. ಕಲಾವಿದರು, ಪ್ರಸಂಗ, ಮೇಳಗಳ ಬಗ್ಗೆ ನಿಖರ ಮಾಹಿತ ನೀಡಬಲ್ಲವರು ಇದ್ದಾರೆ. ಯಾವುದೇ ಮೇಳ, ಕಲಾವಿದ, ಪ್ರಸಂಗ, ವ್ಯಕ್ತಿಯ ಕುರಿತು ಇಲ್ಲಿ ಅವಹೇಳನಕ್ಕೆ, ವದಂತಿಗಳ ಪ್ರಸಾರಕ್ಕೆ ಕಡ್ಡಾಯವಾಗಿ ಅವಕಾಶವಿಲ್ಲ. ಅಪಪ್ರಚಾರಕ್ಕೂ ಅವಕಾಶವಿಲ್ಲ ಎಂಬುದು ಗ್ರೂಪಿನ ಬದ್ಧತೆ.
ಮಾಧ್ಯಮ ಮಿತ್ರರು, ಉಪನ್ಯಾಸಕರು, ಅಲ್ಪ ಪ್ರಮಾಣದಲ್ಲಿ ಕಲಾವಿದರು, ಮಹಿಳೆಯರು, ವಿದ್ಯಾರ್ಥಿಗಳು, ವಿದೇಶಗಳಲ್ಲಿರುವವರು, ಪರ ರಾಜ್ಯಗಳಲ್ಲಿರುವವರು ಗ್ರೂಪಿನಲ್ಲಿದ್ದಾರೆ. ನಿರಂತರವಾಗಿ ಬಯಲಾಟಗಳಿಗೆ ಹೋಗುವವರು, ಬಯಲಾಟಕ್ಕೆ ಹೋಗದೆ ಮನೆಯಿಂದಲೇ ಪ್ರೋತ್ಸಾಹಿಸುವವಪು, ಪೋಸ್ಟುಗಳಿಗೆ ರಿಯಾಕ್ಟ್ ಮಾಡುವವರು, ಎಲ್ಲವನ್ನು ನೋಡಿಯೂ ನಿಶ್ಯಬ್ಧವಾಗಿರುವವರು ಎಲ್ಲ ರೀತಿಯ ಸದಸ್ಯರೂ ಇದ್ದಾರೆ. ಎರಡನೇ ಗ್ರೂಪು ಶುರುವಾದಾಗ ಪಾದೆಕಲ್ಲು ಸುಬ್ರಹ್ಮಣ್ಯ ಕುಮಾರ್, ಮರಕಡ, ರಜನಿ ಅವರು ಒಂದನೇ ಗ್ರೂಪಿನ ಪೋಸ್ಟುಗಳನ್ನು ಎರಡನೇ ಪೋಸ್ಟಿಗೆ ಶೇರ್ ಮಾಡಿ ಅಲ್ಲಿನವರಿಗೂ ಇಲ್ಲಿನ ವಿಚಾರಿ ತಿಳಿಸುವಲ್ಲಿ ಸಹಕರಿಸಿದ್ದಾರೆ. ಅವರಿಗೆ ತುಂಬು ಹೃದಯದ ಕೃತಜ್ಞತೆಗಳು. ಈ ರೀತಿ ಗ್ರೂಪಿಗೆ ಜೀವಂತಿಕೆ ತುಂಬುವಲ್ಲಿ ಸಹಕರಿಸುತ್ತಿರುವವರು ಹೆಸರು ಉಲ್ಲೇಖಿಸಿದರೆ ತುಂಬಾ ಇದೆ, ಅದಕ್ಕೋಸ್ಕರ ಪ್ರತಿಯೊಬ್ಬರ ಹೆಸರು ಹೇಳುತ್ತಿಲ್ಲ. ಕ್ಷಮೆಯಿರಲಿ. ಎಷ್ಟೋ ಬಾರಿ ವಿವಿಧ ಕಾರಣಗಳಿಂದ ಗ್ರೂಪಿನಿಂದ ಲೆಫ್ಟ್ ಆದವರು ನನ್ನನ್ನ ಪುನಹ ಸೇರಿಸಿ ಎಂದೋ ಅಥವಾ ನಾನೀಗ ತಾತ್ಕಾಲಿಕವಾಗಿ ಗ್ರೂಪು ಬಿಡುತ್ತೇನೆ ಜಾಗ ಕಾದಿರಿಸಿ ಎಂದು ಮನವಿ ಸಲ್ಲಿಸಿದವರೂ ಇದ್ದಾರೆ. ಇದೆಲ್ಲ ಅವರ ಪ್ರೀತಿಯ ದ್ಯೋತಕ. ಒಂದೇ ಮನೆಯ ಮೂರು ನಾಲ್ಕು ಮಂದಿ ಗ್ರೂಪಿನ ಸದಸ್ಯರಾಗಿರುವವರು ಇದ್ದಾರೆ. ವೈಯಕ್ತಿಕವಾಗಿ ನನಗೆ ಈ ಗ್ರೂಪಿನಿಂದ ಯಕ್ಷಗಾನದ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಕಲಿಯಲು ಸಾಧ್ಯವಾಗಿದೆ. ಎಷ್ಟೋ ಮಂದಿ ಗ್ರೂಪಿನಿಂದಾಗಿಯೇ ಪರಿಚಯವಾಗಿದ್ದಾರೆ. ಬಹಳಷ್ಟು ವಿಚಾರಗಳನ್ನು ತಿಳಿಯಲು ಸಾಧ್ಯವಾಗಿದೆ....

ಯಕ್ಷಗಾನ ನಿರಂತರವಾಗಿರುವ ಕಲೆ, ಬೆಳೆಯುತ್ತಲೇ ಹೋಗುತ್ತಿದೆ. ನಾವೆಲ್ಲ ಕಲಾಸ್ವಾದಕರು, ನಾವು ನೋಡಿದ್ದನ್ನು ಗ್ರೂಪಿನ ಇತರರ ಜೊತೆ ಹಂಚಿ ಖುಷಿ ಪಡುತ್ತೇವೆ. ಅಂದ ಹಾಗೆ ಈ ವರ್ಷದ ಯಕ್ಷ ಋತು, ಮೇಳಗಳ ತಿರುಗಾಟ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗುತ್ತಿದೆ. ಎಂದಿನಂತೆ ನಮ್ಮ ಗ್ರೂಪು ಕೂಡಾ ಆಟದ ವಿವರಗಳು, ಮಲ್ಪಿ ಮೀಡಿಯಾ ಸಂದೇಶಗಳಿಂದ ತುಂಬಿ ತುಳುಕಲಿದೆ. ಗ್ರೂಪನ್ನು ಕಟ್ಟಿ ಬೆಳೆಸಿದ, ಪ್ರತಿ ದಿನವೂ ಗ್ರೂಪನ್ನು ಜೀವಂತವಾಗಿಡಲು ಸಹಕರಿಸುತ್ತಿರುವ ಪ್ರತಿಯೊಬ್ಬ ಹಿರಿಯ, ಕಿರಿಯ ಸ್ನೇಹಿತರಿಗೆ, ಹಿತೈಷಿಗಳಿಗೆ ತುಂಬು ಹೃದಯದ ಧನ್ಯವಾದಗಳು.
-ಕೆಎಂ, ಅಡ್ಮಿನ್ (10.11.2019)


No comments: