ಅಪಾತ್ರರಿಗೆ ಕೊಟ್ಟು ಕೆಟ್ಟವರು....

ಬದುಕಿನಲ್ಲಿ ಕಷ್ಟಗಳು ಸಹಜ. ಇತರರ ನೆರವು, ಋಣವೇ ಇಲ್ಲದೆ ಬದುಕಲು ಕಷ್ಟ. ಅನಿವಾರ್ಯವಾಗಿ ಸಾಲ ಪಡೆದುಕೊಂಡು ಬದುಕು ಸಾಗಿಸುವ ಸಂದರ್ಭ ಸಾಲ‌ ಪಡೆದಾತ ತಾನು ಪ್ರಾಮಾಣಿಕನೇ ಆಗಿದ್ದರೆ, ಈ ಥರ ಮಾಡಬಹುದು:

1) ಸಾಲ ಪಡೆಯುವಾಗ ಸರಿಯಾದ ಕಾರಣ ನೀಡಿ, ಇಂತಿಷ್ಟು ಸಮಯದೊಳಗೆ ಇಂತಹ ಮೂಲದಿಂದ ಬರುವ ದುಡ್ಡಿನಲ್ಲಿ ಮರುಪಾವತಿಸುತ್ತೇನೆ ಎಂದು ಭರವಸೆ ನೀಡಬಹುದು.

2) ಅಂದುಕೊಂಡ ಸಮಯದೊಳಗೆ ಸಾಲ ಮರುಪಾವತಿಸಲು ಆಗದಿದ್ದರೆ ಕಾಲಕಾಲಕ್ಕೆ ತನ್ನ ಅನಿವಾರ್ಯತೆಗಳನ್ನು ಸಾಲ‌ ನೀಡಿದಾತನಿಗೆ ಮನವರಿಕೆ ಮಾಡಿ ತನಗೆ ಪಡೆದ ಸಾಲದ ಅರಿವಿರುವುದನ್ನು ಖಚಿತಪಡಿಸಬಹುದು.

3) ದೊಡ್ಡ ಮೊತ್ತದ ಸಾಲವಿದ್ದಾಗ್ಯೂ ಸಹ ಪೂರ್ತಿ ಮೊತ್ತ ಮರುಪಾವತಿಸಲು ಕಾರಣಾಂತರಗಳಿಂದ ಅಸಾಧ್ಯವಾದರೂ ಕನಿಷ್ಠ ಒಂದೋ, ಹತ್ತೋ, ಐನೂರೋ....ಹೀಗೆ ಸಣ್ಣ ಮೊತ್ತವನ್ನಾದರೂ ವಾಪಸ್ ಕೊಟ್ಟು ಬಾಕಿ ಮೊತ್ತವನ್ನು ಮತ್ತೆ ಪಾವತಿಸುವ ಬಗ್ಗೆ ಮನವರಿಕೆ ಮಾಡಬಹುದು...

ಆದರೆ, ತೀರಾ ನೊಂದು ಹೇಳುತ್ತಿದ್ದೇನೆ....

ಇದ್ಯಾವುದನ್ನೂ ಮಾಡದೆ, ಸಾವಿರಗಳ ಲೆಕ್ಕದಲ್ಲಿ ಸಾಲ ಪಡೆದು ನಾಕೈದು ದಿನಗಳಲ್ಲಿ ವಾಪಸ್ ಕೊಡುವುದಾಗಿ ನಂಬಿಸಿ, ಆಮೇಲೆ ಸಾಲದ ವಿಷಯವೇ ಮಾತಾಡದೆ, ಎಷ್ಟೋ ತಿಂಗಳುಗಳು ಕಳೆದರೂ ಒಂದೇ ಒಂದು ಪೈಸೆ ತಿರುಗಿ ಕೊಡದೆ, ಕೊಟ್ಟಾತ ಮುಜುಗರ ಬಿಟ್ಟು ಕೇಳಿದಾಗ ಮತ್ತಷ್ಟು ಸುಳ್ಳು ಹೇಳುತ್ತಾ, ಯಾವುದೇ ಬದ್ಧತೆ ಇಲ್ಲದೆ, ಆರಾಮವಾಗಿ ಸಾಲ‌ ಕೊಟ್ಟಾತನ ಕಣ್ಣೆದುರೇ "ಸಹಜ" ವಾಗಿ ಓಡಾಡುವ ಕೃತಘ್ನರಿದ್ದಾರಲ್ಲ....

ಅವರು ಮನುಷ್ಯನಿಗೆ ಮನುಷ್ಯತ್ವದ ಮೇಲಿನ ನಂಬಿಕೆಯನ್ನೇ ಅಳಿಸಿ ಹಾಕುತ್ತಾರೆ. ಒಂದು ಹಂತದಲ್ಲಿ ಸಾಲ ಕೊಟ್ಟವನನ್ನೇ ಸತಾಯಿಸಿ ಮಿತ್ರತ್ವದ ಅರ್ಥವನ್ನೇ ಬದಲಿಸುವ "ವಾಪಸ್ ಕೊಡುವುದಿಲ್ಲವೆಂದು ನಿರ್ಧರಿಸಿಯೇ ದುಡ್ಡು ಕೇಳುವ ವೃತ್ತಿಪರ ಸಾಲಗಾರರಿಗೆ" ಯಾವುದೇ ದಾಕ್ಷಿಣ್ಯ, ಮುಜುಗರ ಇರುವುದಿಲ್ಲ ಎಂಬುದು ನೆನಪಿರಲಿ....

ಕಷ್ಟಗಳಿಲ್ಲದ ಮನುಷ್ಯರೇ ಇಲ. ಯಾಚನೆಯೂ ಕೆಲವೊಮ್ಮೆ ಅನಿವಾರ್ಯ. ಆದರೆ ಪಡೆದ ಉಪಕಾರ ನೆನಪು ಬೇಕು. ವಿಶ್ವಾಸಘಾತುಕತನವನ್ನೇ ಪ್ರವೃತ್ತಿಯಾಗಿಸಿದರೆ ಮುಂದೊಂದು ದಿನ ಅದುವೇ ದೊಡ್ಡ ಕಪ್ಪುಚುಕ್ಕೆಯಾಗುವುದು ನೆನಪಿರಬೇಕು.

ಸಾತ್ವಿಕತೆಯನ್ನೇ ದೌರ್ಬಲ್ಯವೆಂದುಕೊಂಡು ಸ್ಚಾರ್ಥಕ್ಕೆ ಬಳಸುವವರಿಗೆ ಗೊತ್ತಿರುವುದಿಲ್ಲ. ವಂಚನೆ ಕೂಡಾ ದೌರ್ಬಲ್ಯವಾಗಿ ಜಗತ್ತಿಗೇ ಕಾಣಿಸುತ್ತದೆ ಎಂಬುದು...

(ಇದು ಬಹುತೇಕ ಸಾಲ ಕೊಟ್ಟು ಕೈಸುಟ್ಟವರ ಅನಿಸಿಕೆಯ ಸಾರಾಂಶ. ಸಾಲವನ್ನು ಬೇಕೆಂದೇ ವಾಪಸ್ ಕೊಡದೆ ಆರಾಮವಾಗಿ ಓಡಾಡುವ ಕೃತಘ್ನರನ್ನು ಮಾತ್ರ ಉದ್ದೇಶಿಸಿ ಬರೆದದ್ದು)

-KM (20/11/2010)

No comments: