ನಾಳಿನ ಪ್ರಜೆಗಳ ‘ಸರಿಗಮಪ...’

ಹುಷಃ ಟಿ.ವಿ.ನಲ್ಲಿ‘ಕ್ಯೋಂ ಕೀ ಸಾಸ್ ಭೀ...’ ಶೈಲಿಯ ಅತ್ತೆಗೊಂದು, ಸೊಸೆಗೊಂದು ಕಾಲ ಹೋಯ್ತು. ಈಗ ಏನಿದ್ರೂ ಮಕ್ಕಳದ್ದೇ ಕಾಲ, ಕಾರುಬಾರು. ಈ ಕ್ಷಣಕ್ಕೂ ಯಾವುದೇ ಕನ್ನಡ ಚಾನೆಲ್ ಹಾಕ್ ನೋಡಿ. ಚಿಲ್ಡ್ರನ್ಸ್ ಸ್ಪೆಷಲ್ ಯಾವುದಾದ್ರೂ ರಿಯಾಲಿಟಿ ಶೋ ಇದ್ದೇ ಇರುತ್ತೆ. ನಿಜವಾಗ್ಲೂ, ತಲೆ ಚಿಟ್ಟು ಹಿಡಿಸೋ ಧಾರಾವಾಹಿಗಳು, ತಲೆಗೂದಲು ಬಿಚ್ಚಿ ಹಾಕಿ ಮಾತುಮಾತಿಗೂ ತಲೆಕೆಟ್ಟೋರ ಥರ ವಿನಾ ಕಾರಣ ನಗ್ತಾ ಮಾತಾಡೋ ಸಿನಿಮಾ ಹೀರೋಯಿನ್‌ಗಳ ಸ್ಟೀರಿಯೋಟೈಪ್ ಇಂಟರ್‌ವ್ಯೂ ನೋಡಿ ತಲೆಕೆಡಿಸ್ಕೊಂಡೋರಿಗೆ ಇದೊಂದು ಚೇಂಜ್. ಮಕ್ಕಳ ಮುಗ್ಧ ಮಾತು, ನಗು, ಹೊಳಪು ಕಂಗಳು ಖಂಡಿತಾ ಇಷ್ಟ ಆಗ್ತದೆ. ಆದ್ರೆ ಒಂದು ಚಾನೆಲ್ ಶುರು ಮಾಡ್ತು ಅಂತ ಎಲ್ಲರೂ ಡಿಟ್ಟೋ ಅಂತದ್ದೇ ಕಾರ್‍ಯಕ್ರಮ ಮಾಡ್ತಾ ಇರೊದು ಮಾತ್ರ ಬೇಸರದ ಸಂಗತಿ. ಆರಂಭದಿಂದಲೂ ತನ್ನದೇ ಶೈಲಿಯಿಂದ ಜನಪ್ರಿಯವಾಗಿರೋ ಈಟಿವಿಯ ‘ಎದೆ ತುಂಬಿ ಹಾಡುವೆನು’ ಹೊರತುಪಡಿಸಿ, ಇತರ-ಝೀಟಿವಿಯ ‘ಸರಿಗಮಪ... ಲಿಟ್ಲ್ ಚ್ಯಾಂಪ್ಸ್’, ಉದಯ ಟಿ.ವಿ.ಯ ಹಾಡು ಬಾ ಕೋಗಿಲೆ... ಝೀಟಿವಿಯ ‘ಕುಣಿಯೋಣು ಬಾ...ರ’ ಇತ್ಯಾದಿಗಳನ್ನು ನೋಡಿದಾಗ ಕೆಲವು ಸಮಸ್ಯೆಗಳು ಕಾಡುತ್ವೆ... ನಿಮ್ಮನ್ನೂ ಕಾಡಿರ್‍ಬಹುದು.. ೧) ತೀರ್‍ಪುಗಾರರಾಗಿ ಬರೋ ಕನ್ನಡದ ಜನಪ್ರಿಯ ನಟ ನಟಿಯರು, ಗಾಯಕರು ‘ತುಂಬ ಕಷ್ಟದಿಂದ’ ಕನ್ನಡ ಮಾತಾಡೋದು ಯಾಕೆ? ೨) ತೀರ್‍ಪುಗಾರರ ಕನ್ನಡದೋರೇ ಆಗಿರೋವಾಗ ತಮ್ಮ ಸಂಭಾಷಣೆಯ ಮುಕ್ಕಾಲು ಭಾಗವನ್ನೂ ಇಂಗ್ಲಿಷ್‌ನಲ್ಲಿ ಮಾತಾಡ್ಬೇಕಾದ ಅನಿವಾರ್‍ಯತೆ ಏನಿದೆ? ೩) ಒಂದು ಮಗು ಕಾರ್‍ಯಕ್ರಮದಿಂದ ಹೊರಹೋಗೋ ಸನ್ನಿವೇಷವನ್ನು ದುಃಖದ ಹಿನ್ನೆಲೆ ಸಂಗೀತ ನೀಡಿ ‘ಮಹಾ ದುರಂತ’ನಡೀತು ಅನ್ನೋ ಥರ ಮಾಡಿ, ಪುಟ್ಟ ಮಕ್ಕಳ ಕಣ್ಣಲ್ಲಿ ನೀರು ತರ್‍ಸೋ ಕ್ರೂರತೆ ಯಾಕೆ? ೪) ಎಸ್‌ಎಂಎಸ್ ಮಾಡೋ ಎಲ್ಲಾ ವೀಕ್ಷಕರಿಗೆ ಸಂಗೀತ ಜ್ಞಾನ ಇರ್‍ಬೇಕಾಗಿಲ್ಲ, ಹಾಗಿರುವಾಗ ಅತಿ ಹೆಚ್ಚು ಎಸ್‌ಎಂಎಸ್‌ ಪಡೆದ ಮಗು ವಿನ್ನರ್‍ ಅನ್ನೋದು ಎಷ್ಟರಮಟ್ಟಿಗೆ ಸರಿ? ಮುಂದೆ ಆ ಮಗು ತನ್ನ ತಪ್ಪುಗಳನ್ನು ತಿದ್ದಿಕೊಳ್ಳೋದು ಹೇಗೆ? ೫) ಮಗುವಿಗೆ ಅರ್ಥನೇ ಗೊತ್ತಿಲ್ಲದಿರೋ ವಯಸ್ಕ ಹಾಡುಗಳನ್ನ ಹೇಳಿಸಿ, ಡ್ಯಾನ್ಸ್ ಮಾಡಿಸಿ ‘ಎಕ್ಸ್ ಪ್ರೆಷನ್ ಸಾಲದು’ಅಂತ ಕಮೆಂಟ್ ಕೊಟ್ರೆ ಮಗು ಏನು ಮಾಡ್ಬೇಕು? ಉದಾ- ಕುಣಿಯೋಣು ಬಾರಾದಲ್ಲಿ ಮೊನ್ನೆ ಮೂಡುಬಿದಿರೆಯ ಪಂಚಮಿ ‘ಹುಡುಗಾ ಹುಡುಗಾ..’ಹಾಡಿಗೆ ಮೈ ಕುಲುಕಿಸಿ ಡ್ಯಾನ್ಸ್ ಮಾಡಿದ್ಲು. ೮ರ ಹುಡುಗಿ ಹತ್ರ ಅಂಥ ಡ್ಯಾನ್ಸ್ ಮಾಡ್ಸೊದು ಅನಿವಾರ್‍ಯನಾ? ೬) ೧೦-೧೨ರ ಮಕ್ಕಳು ಹಾಡುವ ಜೊತೆಗೆ ಕಿವಿಗೆ ಮೈಕ್ರೋಫೋನ್ ಇಟ್ಕೊಂಡು ತನ್ನದೇ ವಯಸ್ಸಿನ ಹುಡುಗ ಅಥವಾ ಹುಡುಗಿ ಜೊತೆ ಕುಣ್ಕೊಂಡು ಹಾಡ್ಬೇಕು! (ಹಾಡು ಬಾ ಕೋಗಿಲೆ) ಯಾಕೆ, ನಮ್ಮ ಹಿನ್ನೆಲೆ ಗಾಯಕರೆಲ್ಲ್ಲಾ ಕುಣ್ಕೊಂಡೇ ಸ್ಟುಡಿಯೋದಲ್ಲಿ ಹಾಡ್ತಾರಾ? ಹಿನ್ನೆಲೆ ಗಾಯಕ ಆಗೋನಿ/ಳಿಗೆ ಕುಣಯೋಕೂ ಗೊತ್ತಿರ್‍ಬೇಕು ಅನ್ನೋದು ಎಲ್ಲಿಯ ಕಾನೂನು ಸ್ವಾಮಿ? ೭) ಶಾರ್ಟ್ಸ್ ಹಾಕಿದೋರಿಗೆ ಸಂಸ್ಕೃತಿ ಇಲ್ಲ ಅಂತಲ್ಲ, ಆದ್ರೂ ಆ ಪುಟ್ಟ ಮಕ್ಕಳಿಗೂ ಮೊಣಕಾಲು ವರೆಗಿನ ಸ್ಕರ್ಟ್, ಟೈಟ್ಸ್ ತೊಡ್ಸಿ ಖುಷಿ ಪಡ್ತಾರೆ. ನಮಗೆ ಊರ ಉಡುಪು ಅಸ್ಪೃಷ್ಯ ಅನ್ನೋ ಥರ! ನೀವು ಗಮನಿಸಿ.. ಇಂಥ ಕಾರ್ಯಕ್ರಮದ ಸ್ಪರ್ಧಾಳುಗಳು, ಟಿವಿ ವಾರ್ತೆ ಓದೋರು ಲಂಗ ದಾವಣಿ ತೊಡೋದು, ಸಿರೆ ಉಡೋದು ಉತ್ಸವಗಳ ದಿನ, ರಾಷ್ಟ್ರೀಯ ಹಬ್ಬಗಳ ದಿನ ಮಾತ್ರ, ಅಂಥ ಅಲಿಖಿತ ನಿಯಮ ರೂಪಿಸ್ದೋರು ಯಾರು? ಇನ್ನು ಮಕ್ಕಳೂ ಇದನ್ನೇ ಗಟ್ಟಿ ಮಾಡ್ಕೊಳ್ತಾವೆ. ಭಾರತೀಯ ಉಡುಪು ಇರೋದೇ ಹಬ್ಬಗಳ ದಿನ ಹಾಕೋಕೆ ಅಂತ. ಆದ್ರೆ ಎಸ್.ಪಿ., ರಾಜೇಶ್ ಕೃಷ್ಣ, ಅರ್ಚನಾ ಉಡುಪ, ಎಂ.ಡಿ.ಪಲ್ಲವಿ ಮೊದಲಾದೋರು ಇನ್ನೂ ಅಂಥಹ ಡ್ರೆಸ್ ಕೋಡ್‌ಗಳಿಗೆ ಮೊರೆ ಹೋಗಿಲ್ಲ ಅನ್ನೋದೆ ಸಮಾಧಾನಕರ. ಒಟ್ಟಿನಲ್ಲಿ ಹಾಡುಗಳಿಗಿಂತಲೂ ಡ್ರೆಸ್ಸು, ಹಾರಾಟ, ಗ್ಲಾಮರ್‍ರೇ ಮುಖ್ಯ ಅಂತ ಬಿಂಬಿಸೋದು, ಎಲಿಮಿನೇಟ್ ಸಂದರ್ಭವನ್ನು ವೈಭವೀಕರಿಸದೆ ಸರಳವಾಗಿ ನಡೆಸಿದ್ರೆ ಕಾರ್ಯಕ್ರಮ ನಿಜ ಅರ್ಥದಲ್ಲಿ ಮಕ್ಕಳಿಗೊಂದು ಪ್ರೇರಣೆ ಆಗೋಕೆ ಸಾಧ್ಯ ಇದೆ. ಇಲ್ದೇ ಹೋದ್ರೆ ಇಂಗ್ಲಿಷ್‌ನಲ್ಲೆ ಮಾತನಾಡ್ತ ಮಕ್ಕಳನ್ನು ಬೆಳೆಸಿ ನಾಳೆ ಯಾರ ಹತ್ರ ಕನ್ನಡ ಉಳ್ಸಿ ಅಂತ ಬಾಯಿ ಬಾಯಿ ಬಡ್ಕೋತೀರ? ಕೊನೆಪಕ್ಷ ಆ ರೋಧನ ಕೇಳೊಕಾದ್ರು ಯಾರು ಇರ್ತಾರೆ ಅಂತ ಬೇಕಲ್ಲ! ಈ ಎಲ್ಲ ಕಾರ್ಯಕ್ರಮಗಳೂ ಮಕ್ಕಳ ಪ್ರತಿಭೆಗೆ ಕನ್ನಡಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಆದ್ರೇ, ಸುಂ ಸುಮ್ನೇ ಹಿಂದಿ ಚಾನೆಲ್‌ಗಳ ಅನುಕರಣೆ ಬೇಕಾ? ಮಕ್ಕಳ ಕಣ್ಣ್ಲಲ್ಲಿ ನೀರು ತರಿಸದೆ ಎಲಿಮಿನೇಟ್ ಮಾಡೋಕೆ ಆಗಲ್ವ?




ಕೊನೇಗೆ ಇನ್ನೊಂದು ಸಂಶಯ ಉಳ್ಕೊಂಡಿದೆ.... ಇಷ್ಟೆಲ್ಲಾ ಕಾರ್ಯಕ್ರಮಗಳಲ್ಲೂ ಬರೋ ಮಂದಿಯಲ್ಲಿ ಅಷ್ಟೂ ಮಂದಿ (ನಾನು ಗಮನಿಸಿದ ಹಾಗೆ... ಶೇ.೯೯) ಇಂಗ್ಲಿಷ್ ಮಾಧ್ಯಮದೋರು, ಸುಮಾರು ಶೇ. ೭೫ಕ್ಕೂ ಮಂದಿ ಬೆಂಗಳೂರಿವರು!! ಯಾಕೆ-೧) ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿಭೆಗಳೇ ಇಲ್ವ? ೨) ಅಥವ ಅವರನ್ನು ಗುರುತಿಸೊರು ಇಲ್ಬ? ೩) ಕನ್ನಡ ಮೀಡಿಯಂನೋರು ಇಂಥ ಸ್ಪರ್ಧೆಗೆ ಬರ್ತಾನೇ ಇಲ್ವ? ೪) ಪ್ರತಿಭೆಗಳೆಲ್ಲ ಬೆಂಗಳೂರಲ್ಲೇ ಸೇರ್ಕೊಂಡಿವೆಯಾ? ಅಥವಾ ಬೇರೆ ಊರಿನೋರಿಗೆ ಆಸಕ್ತಿ ಇಲ್ವ? ನಿಮಗೇನಾದ್ರು ಉತ್ತರ ಗೊತ್ತಿದೆಯಾ?

2 comments:

ಹರೀಶ ಮಾಂಬಾಡಿ said...

ಹಾಡಲು ಬರುವವರ ಬಳಿ ಕುಣಿಸುವುದು ಯಾಕೆ? ಹಾಡುವವರು ನೋಡಲು ಚೆನ್ನಾಗಿರಲೇಬೇಕಾ?
ಈಗ ಹಾಡು, ಅದರ ಕಾನ್ಸೆಪ್ಟ್ ಬದಲಾಗಿದೆ...
ಇದು ದುರಂತ ಎನ್ನುವುದು ನನ್ನ ಭಾವನೆ. ಇನ್ನೊಂದು ವಿಷಯವೆಂದರೆ ಚೆನ್ನಾಗಿ ಕನ್ನಡ ಹಾಡುವವರೂ ಬಳಿಕ ಆಂಗ್ಲ ಶೈಲಿಯಲ್ಲಿ ಮಾತನಾಡುತ್ತಾರೆ.

shivu.k said...

ನೀವು ಹೇಳಿದಂತೆ ಮಕ್ಕಳ ಕಾರ್ಯಕ್ರಮಗಳು ಈಗ ತುಂಬಾ ಚೆನ್ನಾಗಿರುತ್ತವೆ. ಅದರೆ ಅವರ ವಯಸ್ಸಿಗೆ ಮೀರಿದ ನಟನೆ ಹಾವ ಭಾವ ನಿರೀಕ್ಷಿಸುವುದು ಖಂಡಿತ ತಪ್ಪು. ಅವರ ಮುಗ್ಧತೆಯನ್ನು ನಾವೆ ಅಳಿಸಿಹಾಕುತ್ತಿದ್ದೇವೆ ಎನಿಸದೆ ಇರದು.
ನಿಮ್ಮ ಕಾಳಜಿಗೆ thanks.

ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com