ನಿಯಮ ರೂಪಿಸಿದರೆ ಸಾಕಾ... ಜನರನ್ನು ತಲಪುವುದು ಬೇಡವಾ? ಸ್ಪಷ್ಟತೆ ಇಲ್ಲದಲ್ಲಿ ಆತಂಕ ಸಹಜ, ನಿವಾರಿಸುವ ಪ್ರಯತ್ನ ಆಗಲಿ

ಇವತ್ತು ಬೆಳಗ್ಗೆ ಪೇಟೆಗೆ ಹೋದಾಗ ಕಂಡ ದೃಶ್ಯ. ಎರಡು ದಿನಗಳ ಕಠಿಣ ವಾರಾಂತ್ಯ ಲಾಕ್ಡೌನ್ ಬಳಿಕ ಇಂದು ತರಕಾರಿ, ಹಣ್ಣು, ದಿನಸಿ ಅಂಗಡಿ ತೆರೆದಿದ್ದವು. ನಮ್ಮೂರಿನ ಜಾತ್ರೆಗೆ ಸೇರುವಷ್ಟು ಮಂದಿ ದ್ವಿಚಕ್ರ, ಚತುಷ್ಚಕ್ರ ವಾಹನಗಳಲ್ಲಿ ಬಂದು ಅಂಗಡಿಗಳ ಮುಂದೆ ಮುಗಿಬಿದ್ದಿದ್ದರು! ನಮ್ಮೂರಿನಲ್ಲಿ ಸುಮಾರು 8-10 ತರಕಾರಿ ಅಂಗಡಿಗಳು, ಅಷ್ಟೇ ಸಂಖ್ಯೆಯ ದೊಡ್ಡ ದಿನಸಿ ಅಂಗಡಿಗಳಿವೆ. ಎಲ್ಲದರ ಎದುರೂ ಜನಜಾತ್ರೆ, ವಾಹನ ನಿಲ್ಲಿಸಲೂ ಸ್ಥಳವಿಲ್ಲ. ಪ್ರತಿಯೊಬ್ಬರ ಕೈಯ್ಯಲ್ಲೂ ಮನೆಯವರು ಕೊಟ್ಟು ಕಳುಹಿಸಿದ ಇಷ್ಟುದ್ದದ ಚೀಟಿ. ಎಲ್ಲರ ಮುಖದಲ್ಲಿ ಆತಂಕ ನನಗೆ ಬೇಕಾದ ವಸ್ತುಗಳು ಸಿಗುತ್ತದೋ, ಇಲ್ಲವೋ ಎಂಬ ಹಾಗೆ. ಅಂಗಡಿಯವರಿಗೂ ಬಿಡುವಿಲ್ಲ, ಯಾರ ಆರ್ಡರನ್ನೂ ಸರಿಯಾಗಿ ಸ್ವೀಕರಿಸಲು, ತೂಗಲು, ಚಿಲ್ಲರೆ ನೀಡಲು ವ್ಯವಧಾನ ಇಲ್ಲ. ಎಂದಿನ ಹಾಗೆ ಟೊಮೆಟೋಗೆ, ಬಟಾಟೆಗೆ, ನೀರುಳ್ಳಿಗೆ ಎಷ್ಟು ರೇಟು ಹಾಕುತ್ತಾರೆ ಎಂದು ನೋಡಲು ಯಾರಿಗೂ ಪುರುಸೊತ್ತಿಲ್ಲ. ಜಾರುವ ಮಾಸ್ಕು, ಸುರಿಯುವ ಬೆವರು, ಕಾಡುವ ಆತಂಕದ ನಡುವೆ ಒಮ್ಮೆ ಅಂಗಡಿಯಿಂದ ಹೊರಗೆ ಬಂದರೆ ಸಾಕು ಎಂಬ ಧಾವಂತ...

ಎಲ್ಲದಕ್ಕೂ ಜನರನ್ನೂ ದೂರಿ ಪ್ರಯೋಜನ ಇಲ್ಲ. ಜನ ಆತಂಕದಲ್ಲಿ ಇದ್ದಾರೆ. ಸರಿಯಾದ ಮಾಹಿತಿ ಸಿಗ್ತಾ ಇಲ್ಲ. ಸ್ಪಷ್ಟತೆ ಇಲ್ಲ. ಹೊರಗೆ ಬರಬೇಡಿ ಅಂದರೂ ಬದುಕಬೇಕಲ್ಲ. ಮನೆಯಲ್ಲಿ ಅಗತ್ಯ ವಸ್ತು ಬೇಕಲ್ಲ. ಜೊತೆಗೆ ವಾಹನ ತರಕೂಡದು ಎಂಬ ಕಟ್ಟಪ್ಪಣೆ ಬೇರೆ. ಎಲ್ಲ ಊರುಗಳಲ್ಲಿ ಡೋರ್ ಡೆಲಿವರಿ ವ್ಯವಸ್ಥೆ ಇರುವುದಿಲ್ಲ. ನಗರದ ಹಾಗೆ ಮಾಲುಗಳು, ಸಾಕಷ್ಟು ಸ್ಥಳಾವಕಾಶ ಇರುವುದಿಲ್ಲ. ನಮ್ಮೂರಿಗೆ ಗೂಡಂಗಡಿಗಳೇ ಮಾಲುಗಳು. ಅಲ್ಲಿಯೇ ಖರೀದಿ ಮಾಡಬೇಕು. ಇವತ್ತು ಹೋಗದಿದ್ದರೆ ನಾಳೆ ತರಕಾರಿ ಖಾಲಿಯಾದರೆ, ಅಕ್ಕಿ ಮುಗಿದರೆ, ಬೇಳೆ ಸಿಗದಿದ್ದರೆ ಎಂಬ ಆತಂಕ ಪ್ರತಿಯೊಬ್ಬರಲ್ಲೂ ಇದ್ದದ್ದೇ. ಜೊತೆಗೆ ಈ ಲಾಕ್ಡಾನ್ ಎಷ್ಟು ದಿನ ಉಂಟೋ ಎಂದೇ ಗೊತ್ತಿಲ್ಲದ ಹೊತ್ತಿಗೆ ಜನ ಪ್ಯಾನಿಕ್ ಆಗುವುದು ಸಹಜ.

ಸರಿಯಾದ ಸಂವಹನ ಇದ್ದಿದ್ದರೆ, ಆಹಾರ ವಸ್ತು ಸರಬರಾಜಿಗೆ ಸೂಕ್ತ ಯೋಜನೆ ಮಾಡಿದೆರ ಆತಂಕ ಕಡಿಮೆಯಾಗುತ್ತದೆ. ಆತಂಕ ಕಡಿಮೆಯಾದರೆ ಜನರ ಓಡಾಟ ತಗ್ಗುತ್ತದೆ, ಓಡಾಟ ತಗ್ಗಿದರೆ ಜನ ದಟ್ಟಣೆ ಇಳಿಯುತ್ತದೆ. ಜನದಟ್ಟಣೆ ಇಳಿದರೆ ಸರ್ಕಾರದ ಲಾಕ್ಡೌನ್ ಉದ್ದೇಶವೂ ಈಡೇರುತ್ತದೆ. ಕೊರೋನಾ ಚೈನ್ ಬ್ರೇಕ್ ಆಗುತ್ತದೆ. ನನ್ನದು ಕೆಲವು ಸಲಹೆಗಳಿವೆ.

1)      ಮೊತ್ತಮೊದಲು ಕೊರೋನಾ ಮಾರ್ಗಸೂಚಿಯನ್ನು ಅತ್ಯಂತ ಸರಳವಾಗಿ ಜನಸಾಮಾನ್ಯರಿಗೂ ಅರ್ಥ ಆಗುವ ಹಾಗೆ ನೀಡಿ. ಸರ್ಕಾರಿ ಭಾಷೆ ಬೇಡ. ಅವುಗಳ ಬ್ರೋಶರ್ ಮಾದರಿಯ ಡಿಸೈನ್ ಮಾಡಿಸಿ ಜಾಲತಾಣಗಳಿಗೆ ಅಧಿಕೃತವಾಗಿ ಸರ್ಕಾರವೇ ಬಿಡುಗಡೆ ಮಾಡಲಿ. ಆ ಮಾರ್ಗಸೂಚಿಯಲ್ಲಿ ಹೆಲ್ಪ್ ಲೈನ್ ನಂಬರುಗಳು, ಲಾಕ್ಡೌನ್ ನ ಇವೆ, ಇಲ್ಲಗಳ ಪಟ್ಟಿ, ಇವೆಲ್ಲದರ ಮಾಹಿತಿ ಸರಳವಾಗಿ ಕನ್ನಡದಲ್ಲೇ ಇರಲಿ

2)      ರಾಜಕಾರಣಿಗಳೇ ನೀವು ಎಂಥದ್ದೇ ದುರಂತ ಇದ್ದರೂ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸುತ್ತೀರಲ್ಲ. ಈಗ ಇದನ್ನೂ ಚುನಾವಣೆ ಎಂದೇ ಭಾವಿಸಿ. ಗ್ರಾಮ ಪಂಚಾಯತುಗಳ ಮೂಲಕ ಊರಿನಲ್ಲಿರುವವರ ದಿನಸಿ, ತರಕಾರಿ ಅಂಗಡಿಯವರನ್ನು ಒಟ್ಟು ಸೇರಿಸಿ. ಒಂದು ಸಿಂಡಿಕೇಟ್ ರಚಿಸಿ. ವಾಟ್ಸಪ್ ನಂಬರುಗಳು ಮೂಲಕ ಅಥವಾ ಆನ್ ಲೈನ್ ಮೂಲಕ ಅಥವಾ ಫೋನ್ ಕರೆ ಮೂಲಕವಾದರೂ ನಾಗರಿಕರಿಂದ ಕರೆ ಸ್ವೀಕರಿಸಿ, ಸಾವಕಾಶವಾಗಿ ಅವುಗಳನ್ನು ಪ್ಯಾಕ್ ಮಾಡಿಸಿ ಅವರ ಮನೆಗೆ ಅಥವಾ ಕನಿಷ್ಠ ವಠಾರಕ್ಕೆ ತಲುಪಿಸುವ ವ್ಯವಸ್ಥೆ ಮಾಡಿ. ಆತಂಕ ಬೇಡ,. ವಾರದ ಏಳೂ ದಿನ ಸಾಮಗ್ರಿ ಸಿಗುತ್ತದೆ ಎಂಬ ಭರವಸೆ ಮೂಡಿಸಿ. ನಮಗೆ ಅಗತ್ಯ ವಸ್ತು ಸಿಗದೇ ಹೋದರೆ ಎಂಬ ಆತಂಕ ಜನರಿಗಿರುವುದು ಸಹಜ. ಆಗ ಅಂಗಡಿಯವರಿಗೂ ವ್ಯಾಪಾರ ಆಗುತ್ತದೆ. ಜನರಿಗೂ ಸಾಮಾನು ಸಿಗುವ ಭರವಸೆ ಮೂಡುತ್ತದೆ. ಅದು ಬಿಟ್ಟು ದಿನಾ ಬೆಳಗ್ಗೆ ಅಂಗಡಿ ಎದುರು ಜಾತ್ರೆ ಸೇರಿದರೆ ಲಾಕ್ಡೌನ್ ಮಾಡಿ ಏನು ಪ್ರಯೋಜನ. ಹೇಗೆ ಅಂತರ ಕಾಪಾಡಲು ಸಾಧ್ಯ, ಆತಂಕ ನಿವಾರಣೆಯಾಗಲು ಸಾಧ್ಯ? ನೀವು ಓಟಿನ ಬೂತಿಗೆ ಜನರನ್ನು ಕರೆತರಲು ಯಾವ ವಾಹನ ಕಳುಹಿಸುತ್ತೀರೋ, ಅದೇ ವಾಹನದಲ್ಲಿ ಅವರಿಗೆ ದಿನಸಿ, ತರಕಾರಿ ಕಳುಹಿಸಿ, ಪುಕ್ಕಟೆ ಬೇಡ, ಅದರ ದರ ಪಡೆದೇ ಕಳುಹಿಸಿ. ಇಷ್ಟು ಮಾಡಿದರೆ ಮಾರುಕಟ್ಟೆಯಲ್ಲಿ ದಟ್ಟಣೆ ತಪ್ಪಿಸಬಹುದು.

3)      ಕಠಿಣ ನಿಯಮವೇನೋ ಸರಿ. ಆದರೆ ಮನುಷ್ಯಾವಸ್ಥೆ. ಸಹಜವಾಗಿ ಕಷ್ಟಗಳು, ಅಸಹಾಯಕತೆಗಳು ಕಾಡುವುದು ಸಹಜ. ಅನಾರೋಗ್ಯ, ಪ್ಯಾನಿಕ್ ಆಗುವುದು, ಇನ್ನೆಂಥದ್ದೋ ವೈಯಕ್ತಿಕ ಸಮಸ್ಯೆ ಆಗುವುದು. ಆಗೆಲ್ಲ ರಸ್ತೆಯಲ್ಲಿ ಓಡಾಡಲು ಏನು ಮಾಡಬೇಕು. ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಸ್ಪಷ್ಟವಾಗಿ ನೀಡಿ. ಕೇವಲ ಕಠಿಣ ಲಾಕ್ಡೌನ್, ಯಾರೂ ರಸ್ತೆಗಿಳಿಯಬೇಡಿ, ಗಡಿ ದಾಟಬೇಡಿ ಎಂಬಲ್ಲಿಗೆ ಮುಗಿಯಲಿಲ್ಲ. ಎಷ್ಟೋ ಮನೆಗಳಲ್ಲಿ ವೃದ್ಧರು ಮಾತ್ರ ಇರುತ್ತಾರೆ, ಅಸಹಾಯಕರು ಇರುತ್ತಾರೋ, ಅವರ ಮಕ್ಕಳು ಹೊಟ್ಟೆಪಾಡಿಗೆ ಪರ ಊರಿನಲ್ಲಿರುತ್ತಾರೆ. ಅನಿವಾರ್ಯ ದುಡಿಯಲೇಬೇಕು. ಪರ ಊರಿನಲ್ಲಿರುತ್ತಾರೆ. ಅವರು ದಿಢೀರ್ ಊರಿಗೆ ಬರಲೇಬೇಕಾದ ಸಂದರ್ಭ ಯಾರ ಜೊತೆ ಮಾತನಾಡಬೇಕು, ಹೇಗೆ ಸುರಕ್ಷಿತವಾಗಿ ಊರು ತಲುಬಹುದು ಎಂಬ ಬಗ್ಗೆ ಮಾರ್ಗಸೂಚಿಯಲ್ಲಿ ಎಲ್ಲಿದೆ ಉಲ್ಲೇಖ? ನಮಗೋಸ್ಕರ ಮಾಡಿದ ಲಾಕ್ಡೌನ್ ತಾನೆ? ಇದರಲ್ಲಿ ವಿಶೇಷ ಕೊರೋನಾ ಪಾಸ್ ನೀಡುವುದಿಲ್ಲ ಎಂದರೆ ಸಾಲದು. ತುರ್ತು ಸಂದರ್ಭ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಬೇಕು. ನಿಯಮ ದುರುಪಯೋಗ ಮಾಡುವವರು ಇದ್ದಾರೆ ನಿಜ. ಹಾಗಂತ ಅಸಹಾಯಕರೂ ಇದ್ದಾರೆ ತಾನೆ. ಅವರ ಗೋಳು ಕೇಳುವವರು ಯಾರು?

4)      ಲಸಿಕೆ ಪಡೆಯಲು ಎಷ್ಟು ಹೊತ್ತಿನ ವರೆಗೆ ಹೋಗಬಹುದು? ಯಾರೆಲ್ಲ ಹೋಗಬಹುದು?, ವಾಹನ ಕೊಂಡುಹೋಗಬಹುದೇ. ಅನಿವಾರ್ಯ ಸಂದರ್ಭ ಹೊರ ಜಿಲ್ಲೆಗೆ, ಹೊರ ರಾಜ್ಯಕ್ಕೆ ಹೋಗಲೇಬೇಕಾದರೆ ಏನು ಮಾಡಬೇಕು? ಯಾರನ್ನು ಸಂಪರ್ಕಿಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ರೇಡಿಯೋ, ಪತ್ರಿಕೆ, ಟಿ.ವಿ.ವಾಹಿನಿಗಳ ಮೂಲಕ ಸರ್ಕಾರವೇ ನೀಡುವ ಮೂಲಕ ಜನರ ಆತಂಕ ಕಡಿಮೆ ಮಾಡಬಹುದಲ್ಲ?ಯಾಕೆ ಓಟು ಬಂದಾಗ ಬೆಟ್ಟ ಗುಡ್ಡಗಳಲ್ಲಿ ಇರುವ ಮನೆಗಳಿಗೂ ಹೋಗಿ ನೀವು ಬ್ಯಾಲೆಟ್ ಡಮ್ಮಿ ಮಾದರಿ ತೋರಿಸಿ ಈ ಚಿಹ್ನೆಗೆ ಓಟು ಹಾಕಿ ಅಂತ ಹೇಳುವುದಿಲ್ವ? ಈಗ ಯಾಕೆ ಜನರಲ್ಲಿ ಲಾಕ್ಡೌನ್ ನಿಯಮಗಳ ಬಗ್ಗೆ ಗೊಂದಲ ಮೂಡ್ತಾ ಇದೆ?. ವೃದ್ದರೇ ಇರುವ ಮನೆಯವರು ವಾಹನ ತರಬಾರದು ಎಂದರೆ ಕೆ.ಜಿ.ಗಟ್ಟಲೆ ವಸ್ತುಗಳನ್ನು ಮನೆಗೆ ಹೇಗೆ ಹೊತ್ತುಕೊಂಡುಹೋಗುವುದು. ಆ ನೂಕುನುಗ್ಗಲಿನಲ್ಲಿ ವೃದ್ಧರಿಗೆ, ಮಹಿಳೆಯರಿಗೆ ಮುನ್ನುಗ್ಗಿ ಬೇಕಾದ  ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಿದೇಯಾ? ಪ್ರಾಕ್ಟಿಕಲ್ ಆಗಿ ಯೋಚಿಸಿ. ಕೆಲವೊಂದನ್ನು ಜನರಿಗೆ ಅವರಿರುವಲ್ಲಿಗೆ ಹೋಗಿ ಅವರಿಗೆ ಅರ್ಥ ಆಗಿಸುವವರು ಹೇಳಿದರೆ ಮಾತ್ರ ಅರ್ಥವಾಗುತ್ತದೆ. ಕೇವಲ ಮಾಧ್ಯಮಗಳ ಜಾಗೃತಿ ಸಾಕಾಗುವುದಿಲ್ಲ. ಇದು ಓಟಿನ ಸಂದರ್ಭ ಮನೆ ಮನೆಗೆ ಬರುವ ರಾಜಕಾರಣಿಗಳಿಗೂ ಅವರ ಕಾರ್ಯಕರ್ತರಿಗೂ ಚೆನ್ನಾಗಿ ಗೊತ್ತು.

5)      ಕೇವಲ ಸಂಘ ಸಂಸ್ಥೆಗಳು ಆಹಾರ, ಔಷಧಿ, ವಾಹನ ವ್ಯವಸ್ಥೆ ಕಲ್ಪಿಸಿದರೆ ಸಾಲದು. ಸರ್ಕಾರವೇ ನೇತೃತ್ವ ವಹಿಸಿ ಊರಿನ ಸಂಘ ಸಂಸ್ಥೆಗಳನ್ನು, ಸ್ವಯಂಸೇವಕರನ್ನು ಸೇರಿಸಿ ಒಂದು ಕಂಟ್ರೋಲ್ ರೂಂ ಸ್ಥಾಪಿಸಿ, ಅದರ ನಂಬರನ್ನು ಇಡೀ ಊರಿಗೆ ತಿಳಿಯುವಂತೆ ಮಾಡಿ ಔಷಧಿ, ಆಹಾರ, ತರಕಾರಿ, ಲಸಿಕೆ ಎಲ್ಲದರ ಮಾಹಿತಿ ಸುಲಭದಲ್ಲಿ ಜನರಿಗೆ ತಿಳಿಯುವ ಹಾಗೆ ಮಾಡಬಹುದು.

6)      ಕೇವಲ ನಿಯಮ ರೂಪಿಸಿದರೆ ಸಾಲದು, ಬ್ಯಾರಿಕೇಡ್ ಇಟ್ಟು ತಡೆಯುವ ಪೊಲೀಸರಿಗೂ ಅದರ ಅರಿವು ನೀಡಿ. ನಿನ್ನೆ ಒಬ್ಬ ಹಿರಿಯ ನಾಗರಿಕರು ಲಸಿಕೆ ಪಡೆಯಲು ಹೋಗುವಾಗ ಪೊಲೀಸರೊಬ್ಬರು ತಡೆದು ನೀವು 9 ಗಂಟೆ ಮೊದಲೇ ಹೋಗಿ ಬರಬೇಕು ಅಂತ ಹೇಳಿದರಂತೆ. ನಿಮ್ಮ ಪ್ರಾಥಮಿಕ ಆರೋಗ್ಯ ತೆರೆಯುವುದೇ 9.30ರ ಬಳಿಕ. ಹಾಗಿರುವಾಗ 9 ಗಂಟೆ ಮೊದಲು ಹೋಗುವುದು ಹೇಗೆ?!!!! ನಿಯಮ ರೂಪಿಸಿದರೆ ಸಾಕಾ... ಅದು ಜಾರಿಗೊಳಿಸುವವರಿಗೂ ಗೊತ್ತಿರಬೇಕಲ್ವ?

7)      ಸುಮ್ಮನೇ ದಿನೇ ದಿನೇ ನಿಯಮ ಬದಲಿಸುತ್ತಾ ಹೋದರೆ, ಜನರಿಗೆ ಅರ್ಥವಾಗದ ಭಾಷೆಯಲ್ಲಿ ಪ್ರಕಟಿಸಿದರೆ, ಲಸಿಕೆ ಯಾವಾಗ ಸಿಗುತ್ತದೆ? ಶಾಲೆ ಯಾವಾಗ ಶುರುವಾಗುತ್ತದೆ? ಲಾಕ್ಡೌನ್ ಕನಿಷ್ಠ ಎಷ್ಟು ದಿನ ಇರಬಹುದು? ಎಂಬಿತ್ಯಾದಿ ಸೂಕ್ಷ್ಮ ವಿಚಾರಗಳ ಬಗ್ಗೆ ನಿಖರ ಮಾಹಿತಿ ನೀಡದೆ ದಿನಕ್ಕೊಂದು ಹೇಳಿಕೆ ನೀಡುತ್ತಾ ಹೋದರೆ ಜನ ಯಾರನ್ನೂ ನಂಬುವುದಿಲ್ಲ. ಸಚಿವರು ಒಂದು ಹೇಳುವುದು, ಜಿಲ್ಲಾಧಿಕಾರಿ ಮತ್ತೊಂದು ಹೇಳುವುದು, ಮತ್ತೆ ಮತ್ತೆ ಪರಿಷ್ಕೃತ ಮಾರ್ಗಸೂಚಿ ಬರುವುದು. ಖರೀದಿ ದಿನ, ಖರೀದಿ ಗಂಟೆಯನ್ನು ಪ್ರತಿದಿನ ಬದಲಿಸುತ್ತಲೇ ಇರುವುದು. ಇದೆಲ್ಲ ಹಳ್ಳಿಗರಿಗೆ, ಅನಕ್ಷರಸ್ಥರಿಗೆಲ್ಲ ಹೇಗೆ ತಿಳಿಯಬೇಕು? ಕೊರೋನಾ ಬಂದ ಒಂದೂವರೆ ವರ್ಷದ ಅನುಭವದಲ್ಲಿ, ಇರುವ ಸರ್ಕಾರಿ ವ್ಯವಸ್ಥೆಯಲ್ಲೇ ಈಗಿನ ಗೊಂದಲಗಳನ್ನು ತಿಳಿಗೊಳಿಸಲು ಸಾಧ್ಯವಿದೆ. ಅದೇ ನಾನು ಹೇಳುವುದು ಓಟು ಹಾಕಿಸಲು ಜನರನ್ನು ಕರೆತರುವ ಅದೇ ಉತ್ಸಾಹವನ್ನು ಅವರಲ್ಲಿರುವ ಗೊಂದಲ ದೂರ ಮಾಡಲು ಹಾಗೂ ಅವರಿಗೆ ಮೂಲ ವಸ್ತುಗಳು ತಲುಪಿಸುವ ಭರವಸೆಯನ್ನು ನೀಡಿ ಎಲ್ಲರೂ ಸಹನೆಯಿಂದ ಇರುವಂತೆ ಲಾಕ್ಡೌನ್ ಗೆ ಸಹಕಾರ ನೀಡುವಂತೆ ನೋಡಿಕೊಳ್ಳಲೇಬೇಕು. ಎಲ್ಲ ರಾಜಕೀಯ ಪಕ್ಷಗಳು, ಆಡಳಿತ ಪಕ್ಷ, ಗ್ರಾಮ ಪಂಚಾಯಿತಿಗಳೂ ಜೊತೆ ಸೇರಬೇಕು. ರಾಜಕೀಯ ಕೆಸರೆರಚಾಟ ಸಾಕು....

ಗೊಂದಲ ದೂರ ಮಾಡಿ.... ಆತಂಕ ಕಡಿಮೆ ಮಾಡಲು ಪ್ರಯತ್ನಿಸಿ. ಜನಸಮೂಹ ಎಂದರೆ ಅದು ಮನಸ್ಸುಗಳ ಸಮೂಹ. ಒಬ್ಬೊಬ್ಬರು ಒಂದೊಂದು ಥರ ಇರುತ್ತಾರೆ. ಕೇವಲ ಲಾಠಿಯಲ್ಲಿ ಹೊಡೆದರೆ, ಬ್ಯಾರಿಕೇಡ್ ಹಾಕಿದರೆ ದಟ್ಟಣೆ ಖಂಡಿತಾ ಕಡಿಮೆಯಾಗುವುದಿಲ್ಲ. ತಳಹಂತದ ವರೆಗೂ ನಿಯಮ, ಸೌಲಭ್ಯ, ಭರವಸೆಗಳು ತಲುಪಬೇಕು... ತಲುಪಲೇಬೇಕು... ತಲುಪಿಸಿ ಪ್ಲೀಸ್...

-ಕೃಷ್ಣಮೋಹನ ತಲೆಂಗಳ (10.05.2021).

.

No comments: