ಕಟೀಲು ಮೇಳದ ಕಾಲಮಿತಿ ಪ್ರದರ್ಶನ, ಅರ್ಧ ವರ್ಷದಲ್ಲಿ ಕಂಡದ್ದು, ಕೇಳಿದ್ದು....!

 



ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಪ್ರಸಕ್ತ ಸಾಲಿನ ಆರು ತಿಂಗಳ ತಿರುಗಾಟಕ್ಕೆ ಇಂದು (ಮೇ 26, 2023) ವಿಧ್ಯುಕ್ತ ತೆರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕಾಲಮಿತಿಗೊಳಪಟ್ಟು ಪ್ರದರ್ಶನ ನೀಡಿದ ಕಟೀಲು ಮೇಳ ತನ್ನ ಪ್ರದರ್ಶನವನ್ನು ಯಶಸ್ವಿಯಾಗಿ ಮುಗಿಸಿದೆ. ಈ ಬಾರಿ ಕೋವಿಡ್ ಕಾಟ ಇರಲಿಲ್ಲ, ಮಳೆಯಿಂದ ಹೆಚ್ಚು ಅಡ್ಡಿ ಆಗಲೂ ಇಲ್ಲ. ಬೆಂಗಳೂರಿಗೂ ಮೇಳ ಹೋಗಿ ಬಂದದ್ದು ವಿಶೇಷ. ಬಲಿಪ ಪರಂಪರೆಯ ಶಿವಶಂಕರ ಬಲಿಪರು ಎರಡನೇ ಸೆಟ್ಟಿಗೆ ಸೇರ್ಪಡೆಗೊಂಡದ್ದು ಮತ್ತೊಂದು ಆಕರ್ಷಣೆಯೂ ಹೌದು. ಕಟೀಲು ಮೇಳದಲ್ಲಿದ್ದ ಹಿರಿಯರಾದ ಬಲಿಪ ನಾರಾಯಣ ಭಾಗವತರ ನಿರ್ಗಮನ ಅಭಿಮಾನಿಗಳ ಪಾಲಿಗೆ ದೊಡ್ಡ ಬೇಸರದ ವಿಚಾರ.

ಕಳೆದ ನವೆಂಬರ್ ನಲ್ಲಿ ತಿರುಗಾಟ ಆರಂಭಿಸುವಾಗ ಕಟೀಲು ಮೇಳ ಕಾಲಮಿತಿಗೊಳಪಡುವ ಬಗ್ಗೆ ಸಾಕಷ್ಟು ಟೀಕೆಗಳು ಬಂದಿದ್ದವು. ಮುಖ್ಯವಾಗಿ ಸೇವಾಕರ್ತರು, ಮೇಳದ ಅಭಿಮಾನಿಗಳು ಕಟೀಲು ಮೇಳ ಕಾಲಮಿತಿಗೊಳಪಡುವುದನ್ನು ಕಟುವಾಗಿ ಖಂಡಿಸಿದ್ದರು. ಸಭೆಗಳು ನಡೆದು ಮನವಿ ಸಲ್ಲಿಸುವ ಕಾರ್ಯವೂ ನಡೆದಿತ್ತು. ಪ್ರೇಕ್ಷಕರು, ಸೇವಾಕರ್ತರು, ಕಲಾವಿದರು ಸಹ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇವೆಲ್ಲದರ ಹೊರತಾಗಿ ಕಟೀಲು ಮೇಳ ಕಾಲಮಿತಿಗೊಳಪಟ್ಟೇ ಈ ವರ್ಷದಿಂದ ತಿರುಗಾಟ ಶುರು ಮಾಡಿದೆ. ಇದರೊಂದಿಗೆ ತೆಂಕಿನಲ್ಲೂ ಇಡೀ ರಾತ್ರಿ ನಿರಂತರವಾಗಿ ಬಯಲಾಟ ಪ್ರದರ್ಶನ ಮಾಡುವ ಮೇಳಗಳಿಲ್ಲ ಎಂಬ ಹಾಗೆ ಆಯಿತು.

ಅದೇನೇ ಇದ್ದರೂ. ಓರ್ವ ಪ್ರೇಕ್ಷಕನಾಗಿ, ಕಟೀಲು ಮೇಳಗಳ ಅಭಿಮಾನಿಯಾಗಿ ಕಳೆದ ಆರು ತಿಂಗಳುಗಳಲ್ಲಿ ಕಟೀಲು ಮೇಳದ ಪ್ರದರ್ಶನಗಳನ್ನು ಲಭ್ಯ ಸಮಯದಲ್ಲಿ, ಸೀಮಿತ ಸಂಖ್ಯೆಯಲ್ಲಿ ನೋಡಿದವನಾಗಿ ನನ್ನ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದೇನೆ.

1)      ಕಟೀಲು ಮೇಳ ಕಾಲಮಿತಿಗೊಳಪಟ್ಟ ಕಾರಣ, ಈ ವರ್ಷ ಸಾಕಷ್ಟು ಮಂದಿ ಇಡೀ ಅವಧಿಯಲ್ಲಿ ಕುಳಿತು ಬಯಲಾಟ ವೀಕ್ಷಿಸಿದ್ದಾರೆ. ಈ ಪೈಕಿ ನಾನೂ ಒಬ್ಬ, ನನ್ನ ಕೆಲಸದ ಸಮಯದ ಇತಿಮಿತಿಹೊರತುಪಡಿಸಿ ಎರಡು ಸಲ ಇಡೀ ಬಯಲಾಟ ವೀಕ್ಷಿಸಲು ನನಗೆ ಸಾಧ್ಯವಾಯಿತು. ಮತ್ತು ಪರಿಪೂರ್ಣತೆಯ ಅನುಭೂತಿ ಹೊಂದಿದ್ದೇನೆ. ಸಾಕಷ್ಟು ಮಂದಿ ಇದೇ ಅನುಭವ ಹೊಂದಿದ್ದಾರೆ.

2)      ಸಂಜೆ 5.45ರ ಹೊತ್ತಿಗೆ ಶುರುವಾಗುವ ಆಟಕ್ಕೆ ಆರಂಭದಲ್ಲಿ ಪ್ರೇಕ್ಷಕರ ಕೊರತೆ ಇದ್ದರೂ 7 ಗಂಟೆ ಹೊತ್ತಿಗೆ ಜನ ಸೇರಿ, ಅನ್ನ ಸಂತರ್ಪಣೆ ವೇಳೆಗೆ ಬಯಲು ತುಂಬಿ ಕೊನೆ ತನಕವೂ ತೃಪ್ತಿಕರ ಸಂಖ್ಯೆಯಲ್ಲಿ, ಬಹಳಷ್ಟು ಕಡೆ ತುಂಬಿ ತುಳುಕುವಷ್ಟು ಪ್ರೇಕ್ಷಕರು ಇದ್ದದ್ದನ್ನು ಸ್ವತಃ ಹಾಗೂ ಜಾಲತಾಣಗಳಲ್ಲಿ ಗಮನಿಸಿದ್ದೇನೆ. (ಆದರೆ ಚಟ್ಟಂಬಡೆ, ಚಾ ಸಿಗುವುದಿಲ್ಲ ಎಂಬುದು ತಮಾಷೆಯ ಮಾತು)

3)      ಕೆಲಸದ, ಕೌಟುಂಬಿಕ ಒತ್ತಡಗಳ ಹಿನ್ನೆಲೆಯಲ್ಲಿ ದೇವಿಮಹಾತ್ಮೆಯಂತಹ ಆಟಗಳನ್ನು ಪ್ರಥಮಾರ್ಧ ಅಥವಾ ದ್ವಿತೀಯಾರ್ಧ ಮಾತ್ರ ನೋಡಲು ಸಾಧ್ಯವಾಗುತ್ತಿದ್ದ ನನ್ನಂಥವರಿಗೆ ಇಡೀ ಆಟವನ್ನು ಸೀಮಿತ ಅವಧಿಯಲ್ಲಿ ನೋಡಲು ಸಾಧ್ಯವಾಗಿಸಿದ್ದು ಕಾಲಮಿತಿಯ ವಿಶೇಷ. ಕಟೀಲು ಕ್ಷೇತ್ರದಲ್ಲೂ ಕಾಲಮಿತಿಯ ಆಟಗಳಿಗೆ ತೃಪ್ತಿಕರ ಪ್ರೇಕ್ಷಕರು ಇರುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುವುದು ಕೇಳಿದ್ದೇನೆ.

4)      ದೇವಿಮಹಾತ್ಮೆ, ಲಲಿತೋಪಾಖ್ಯಾನ ಹೊರತುಪಡಿಸಿ ಇತರ ಸಾಕಷ್ಟು ಪ್ರಸಂಗಗಳು ಪ್ರದರ್ಶನ ಕಂಡಿವೆ. ಈ ಪೈಕಿ ಐದನೇ ಮೇಳದವರ ದಶಾವತಾರ ಹಾಗೂ ದಕ್ಷಯಜ್ಞ, ಗಿರಿಜಾ ಕಲ್ಯಾಣ ಪ್ರಸಂಗಗಳನ್ನು ನಾನು ಬಹುತೇಕ ಇಡೀ ಆಟ ವೀಕ್ಷಿಸಿದ್ದೇನೆ. ಆ ಆಟಗಳು ಸಾವಕಾಶವಾಗಿ, ಸವಿವರವಾಗಿ ಪ್ರದರ್ಶನವಾದದ್ದು ಕಂಡಿದ್ದೇನೆ. ಕಾಲಮಿತಿಯು ಇತರ ಪ್ರಸಂಗಗಳ ಪ್ರದರ್ಶನಕ್ಕೆ ಬಾಧಕ ಎಂದು ವೈಯಕ್ತಿಕವಾಗಿ ನನಗೆ ಅನಿಸಿಲ್ಲ.

5)      ಬೆಂಗಳೂರಿನಲ್ಲಿ ಮೂರು ದಿನ ಕಟೀಲು ಮೇಳಗಳ ಪ್ರದರ್ಶನ ನಡೆದಿದೆ. ಇದು ಹಲವು ವರ್ಷಗಳ ಬಳಿಕ ಬೆಂಗಳೂರಿಗೆ ಕಟೀಲು ಮೇಳದ ದಿಗ್ವಿಜಯವಂತೆ. ಇದು ಮುಂದುವರಿಯಬೇಕು. ದೂರದೂರುಗಳಿಗೂ ರೊಟೇಶನನ್ನಿನಲ್ಲಿ ಕಟೀಲು ಮೇಳಗಳು ಹೋಗುವಂತಾಗಬೇಕು. ಅಲ್ಲಿನ ಸೇವಾಕರ್ತರಿಗೆ ಅಲ್ಲಿಯೇ ಆಟ ಪ್ರದರ್ಶನ ಮಾಡಿದರೆ ಕಲಾಪ್ರಕಾರ ವಿಸ್ತರಿಸುವುದು ಮಾತ್ರವಲ್ಲ, ಮೇಳಕ್ಕೂ, ಕಲಾವಿದರಿಗೂ ಹೆಚ್ಚು ಮನ್ನಣೆ, ಬದಲಾವಣೆ ಸಿಗುತ್ತದೆ. ಕಾಲಮಿತಿಯಿಂದ ಇದು ಹೆಚ್ಚು ಸಾಧ್ಯವಾಗಿದೆ ಅಂತ ನನ್ನ ಅನಿಸಿದೆ. ಧರ್ಮಸ್ಥಳ ಮೇಳದ ಹಾಗೆ ಕಟೀಲು ಮೇಳದ ದಿಗ್ವಿಜಯ ರಾಜ್ಯದುದ್ದಗಲಕ್ಕೂ ನಡೆಯಬೇಕು.

 

ಇನ್ನು ಕಾಲಮಿತಿಯಿಂದ ಆದ ಬದಲಾವಣೆಗಳು ಹಾಗೂ ಪ್ರೇಕ್ಷಕನಾಗಿ ನನ್ನ ನಿರೀಕ್ಷೆಗಳನ್ನೂ ನಾನು ದಾಖಲಿಸಬೇಕಾದ್ದು ಅಗತ್ಯ. ಸ್ವೀಕರಿಸುವುದು ಮೇಳದ ಆಡಳಿತ ಮಂಡಳಿಗೆ ಬಿಟ್ಟದ್ದು

1)      ಕಟೀಲಿನ ಹೊರತು ಇನ್ನೂ ಮೂರು ತೆಂಕಿನ ಪ್ರಮುಖ ಮೇಳಗಳು ಹಾಗೂ ಇತರ ಅನೇಕ ಮೇಳಗಳು ದೇವಿಮಹಾತ್ಮೆ ಪ್ರಸಂಗ ಆಡುತ್ತವೆ. ಅವರೆಲ್ಲರ ಆಟ ಶುರುವಾಗುವುದ ಬಹುತೇಕ ಇದೇ ಸಮಯಕ್ಕೆ (ರಾತ್ರಿ 7ರ ಹೊತ್ತಿಗೆ), ಮುಗಿಯುವಾಗ ಅಲಿಖಿತವಾಗಿ ರಾತ್ರಿ 1 ಗಂಟೆ ಕಳೆಯುತ್ತದೆ. ಕಟೀಲು ಮೇಳವೂ ಈ ಟ್ರೆಂಡಿಗೆ ಅನುಸಾರವಾಗಿ ಮುಂದಿನ ವರ್ಷದಿಂದ ರಾತ್ರಿ 1 ಗಂಟೆ ತನಕ ಪ್ರದರ್ಶನ ನೀಡಿದರೆ ಉತ್ತಮ, ಸುಮಾರು 1 ಗಂಟೆ ಅವಧಿ ಪ್ರದರ್ಶನ ವಿಸ್ತರಿಸಿದರೆ ಕಲಾವಿದರಿಗೆ ಹೆಚ್ಚಿನ ಅವಕಾಶ ಸಿಗುವುದು ಮಾತ್ರವಲ್ಲ, ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಏನೂ ಕಡಿಮೆಯಾಗುವುದಿಲ್ಲ.

2)      ಇತರ ಮೇಳಗಳ ಕಾಲಮಿತಿಯ ಶ್ರೀದೇವಿಮಹಾತ್ಮೆಯಲ್ಲಿ ಯಾವುದೇ ದೃಶ್ಯಗಳಿಗೆ ಕತ್ತರಿ ಪ್ರಯೋಗವಾಗಿಲ್ಲ. ಮುಖ್ಯವಾಗಿ ಕಟೀಲು ಮೇಳದ ಕಾಲಮಿತಿಯ ದೇವಿಮಹಾತ್ಮೆಯಲ್ಲಿ ಪ್ರಧಾನ ಹಾಸ್ಯಗಾರರಿಗೆ ಅವಕಾಶ ಕಡಿಮೆ ಎಂಬುದು ನನ್ನ ವೈಯಕ್ತಿಕ ಗಮನಿಸುವಿಕೆ (ಇದು ಎಷ್ಟರ ಮಟ್ಟಿಗೆ ಸರಿ ಅಂತ ಪ್ರಾಜ್ಞರು ಹೇಳಬೇಕು). ಹಾಗಾಗಿ ಆಟದ ಸಮಯವನ್ನು ರಾತ್ರಿ 7ರಿಂದ 1ರ ತನಕ ವಿಸ್ತರಿಸಿದರೆ ಯಾವುದೇ ದೃಶ್ಯವನ್ನು ಕತ್ತರಿಸದೆ, ಎಲ್ಲ ದೃಶ್ಯಗಳನ್ನೂ ಪರಿಪೂರ್ಣವಾಗಿ ತೋರಿಸಲು ಸಾಧ್ಯವಿದೆ. ಈ ಬಗ್ಗೆ ಚಿಂತನೆ ಅಗತ್ಯ

3)      ಕಾಲಮಿತಿಯ ಹಿನ್ನೆಲೆ ರಾತ್ರಿ 12.30ರ ತನಕ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ಕೆಲವು ಸೆಟ್ಟುಗಳಲ್ಲಿ ಕೊನೆಯ ಮುಕ್ಕಾಲು ಗಂಟೆ ಸಿಕ್ಕಾಪಟ್ಟೆ ವೇಗವಾಗಿ ಪ್ರಸಂಗ ಸಾಗುತ್ತಿದ್ದದ್ದನ್ನು ಕಂಡಿದ್ದೇನೆ. ನಿಗದಿತ ಸಮಯಕ್ಕೇ ಆಟ ಮುಗಿಸಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಹೀಗೆ ಮಾಡಬೇಕಾಗಿ ಬಂದದ್ದು ಭಾಗವತರ ಅಥವಾ ಕಲಾವಿದರ ತಪ್ಪು ಅಂತ ಖಂಡಿತಾ ಹೇಳುವುದಲ್ಲ. ನೀವು ಆಟದ ಅವಧಿಯನ್ನು ಸ್ವಲ್ಪ ವಿಸ್ತರಿಸಿದರೆ, ಕೊನೆಯ ಭಾಗವನ್ನು ಅಷ್ಟು ವೇಗವಾಗಿ ಮುಗಿಸಬೇಕಾದ ಸಂದರ್ಭ ಬರಲಿಕ್ಕಿಲ್ಲ. ಬಹುಶಃ ದೇವಿಮಹಾತ್ಮೆ ಹಾಗೂ ಲಲಿತೋಪಾಖ್ಯಾನ ಹೊರತು ಇತರ ಪ್ರಸಂಗಗಳಿಗೆ ಕಾಲಮಿತಿ ಬಾಧಕವಾಗಿಲ್ಲ ಅಂತ ನನ್ನ ಅನಿಸಿಕೆ.

4)      ಕಟೀಲು ಮೇಳ ಮಾತ್ರ ಈ ತನಕ ಬಹುತೇಕ ಪರಿಪೂರ್ಣ ಪೂರ್ವರಂಗ ಪ್ರದರ್ಶನ ನೀಡುತ್ತಾ ಬಂದಿದೆ. ಈ ಸಾಲಿನಿಂದ ಪೀಠಿಕೆ ಚೆಂಡೆ ಬಳಿಕದ ಪೀಠಿಕೆ ಸ್ತ್ರೀ ವೇಷಗಳಿಗೆ ಕತ್ತರಿ ಹಾಕಲಾಗಿದೆ. ದಯವಿಟ್ಟು ಇದನ್ನು ಪುನಃ ಆರಂಭಿಸಬೇಕು ಎಂಬುದು ಪ್ರೇಕ್ಷಕನಾಗಿ ನನ್ನ ಮನವಿ. ಸುಮಾರು 10 ನಿಮಿಷಗಳನ್ನು ಆ ವೇಷಗಳಿಗೆ ನೀಡಿದರೆ ಕಲಿಯುವ ಕಲಾವಿದರಿಗೂ ವೇದಿಕೆ ಸಿಗುತ್ತದೆ ಮಾತ್ರವಲ್ಲ, ಆ ವೇಷಗಳು ಮನಸ್ಸಿಗೆ ತುಂಬ ಮುದ ನೀಡುತ್ತವೆ.ದಯವಿಟ್ಟು ಈ ಬಗ್ಗೆ ಗಮನ ಹರಿಸಿ.

5)      ಈ ಸಲ ಸಾಕಷ್ಟು ಹೊಸ ಕಲಾವಿದರು, ಯುವ ಕಲಾವಿದರೂ ನಾನಾ ಪಾತ್ರಗಳಲ್ಲಿ ಮುಂಚಿದ್ದಾರೆ. ಕೆಲವು ಪ್ರಸಂಗಗಳು ತುಂಬ ಹೆಸರು ಮಾಡಿವೆ, ಗಮನ ಸೆಳೆದಿವೆ. ಆದಾಗ್ಯೂ ಉದಯೋನ್ಮುಖ ಕಲಾವಿದರು ಉಚ್ಛಾರ ದೋಷದ ಬಗ್ಗೆ ದಯವಿಟ್ಟು ಗಮನ ಹರಿಸಿ ತಿದ್ದಿಕೊಳ್ಳುವುದು ಉತ್ತಮ. ಹಿರಿಯ ಕಲಾವಿದರ ಮಾರ್ಗದರ್ಶನದಿಂದ ಇದು ಸಾಧ್ಯ. ದಯವಿಟ್ಟು ಗಮನಿಸಿ.

6)      ನಾನಾ ಕಾರಣಗಳಿಂದ ಈ ವರ್ಷ ಕಟೀಲು ಮೇಳದಲ್ಲಿ ಕೆಲವು ಕಲಾವಿದರು, ಸಿಬ್ಬಂದಿ ನಿಧನರಾಗಿದ್ದಾರೆ, ಒಂದಷ್ಟು ಮಂದಿಗೆ ಅನಾರೋಗ್ಯ, ಅಪಘಾತಗಳೂ ಆಗಿತ್ತು. ಇಂತಹ ಸಂದರ್ಭ ಕಾಲಮಿತಿ ಪ್ರಯೋಗಕ್ಕೂ, ಇಂತಹ ದುರಂತಗಳಿಗೂ ತಳಕು ಹಾಕಿ, ಕೆಟ್ಟದಾಗಿ ಜಾಲತಾಣಗಳಲ್ಲಿ ಬರೆದ ಬರಹಗಳನ್ನು ಗಮನಿಸಿದ್ದೆ. ದಯವಿಟ್ಟು ಇಂತಹ ಕೀಳು ಮನಃಸ್ಥಿತಿ, ಆರೋಪಗಳು ಸರಿಯಲ್ಲ. ಯಾವುದೇ ವಿಚಾರವನ್ನು ತಾರ್ಕಿಕವಾಗಿ ನೋಡಬೇಕೇ ಹೊರತು ಪೂರ್ವಾಗ್ರಹ ಸರಿಯಲ್ಲ.

ಒಟ್ಟಿನಲ್ಲಿ... ಕಾಲಮಿತಿಯಿಂದ ಖುಷಿ ಪಟ್ಟವರೂ ಇದ್ದಾರೆ, ಬೇಸರ ಪಟ್ಟವರೂ ಇದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನನ್ನಂಥವರಿಗೆ ಕೆಲಸ ಮುಗಿಯುವ ಹೊತ್ತಿಗೇ ಆಟವೂ ಮುಗಿದು,ಸಾಕಷ್ಟು ಆಟಗಳನ್ನು ನೋಡಲಾಗದೆ ಕಳೆದುಕೊಂಡದ್ದಿದೆ. ಬೆಳಗ್ಗಿನ ಜಾವದ ಆಟದ ಅನುಭೂತಿ ತಪ್ಪಿ ಹೋಗಿದೆ. ಬೆಳಗ್ಗಿನ ಚಳಿಯಲ್ಲಿ ಆಟ ನೋಡುವ ಅನುಭವ ತೆರೆ ಮರೆಗೆ ಸರಿದಿದೆ.

ಆದರೂ ಆಟ ಕಾಲಮಿತಿಯಿಂದಾಗಿ ಹೆಚ್ಚು ಜನರನ್ನು ಆಕರ್ಷಿಸಿದೆ ಅಂತಾದರೆ ಖಂಡಿತಾ ಅದು ಯಶಸ್ವಿಯೇ ಸರಿ. ಕಲಾವಿದರಿಗೆ, ಮೇಳದ ಸಿಬ್ಬಂದಿಗೆ, ಯಜಮಾನರಿಗೆ, ಸೇವಾಕರ್ತರಿಗೆ ಕಾಲಮಿತಿ ಕುರಿತು ತಮ್ಮದೆ ಅನಿಸಿಕೆ, ಬೇಸರ, ಸಂತಸಗಳು ಇರಬಹುದು. ಆದರೆ ಈ ಒಟ್ಟೂ ಬರಹ ಓರ್ವ ಪ್ರೇಕ್ಷಕನ ದೃಷ್ಟಿಕೋನದ್ದು ಮಾತ್ರ ಅಷ್ಟೇ...

ಮುಂದಿನ ತಿರುಗಾಟಕ್ಕೂ ಮುನ್ನ ಕಲಾವಿದರು, ಸೇವಾಕರ್ತರು, ಆಡಳಿತ ಮಂಡಳಿಯವರು ಎಲ್ಲರನ್ನೂ ಕರೆದು, ಕುಳಿತು ಸಭೆ ನಡೆಸಿ ಇನ್ನಷ್ಟು ಪರಿಷ್ಕರಣೆಗಳನ್ನು ಮಾಡಬೇಕು. ಈ ವರ್ಷದ ತಿರುಗಾಟದ ಸಾಧಕ, ಬಾಧಕಗಳನ್ನು ವಿಮರ್ಶಿಸಿ ಮುನ್ನಡೆಯಬೇಕು. ಶ್ರೀದೇವಿಮಹಾತ್ಮೆ ಜೊತೆಗೆ ಈತರ ಪಾರಂಪರಿಕ ಪ್ರಸಂಗಗಳಿಗೂ ಆದ್ಯತೆ ನೀಡುವಂತೆ ಸೇವಾಕರ್ತರಿಗೂ ಮನವರಿಕೆ ಮಾಡಿದರೆ, ಕಲಾಭಿಮಾನಿಗಳಿಗೆ ವೈವಿಧ್ಯಮಯ ಪ್ರಸಂಗಗಳು ನೋಡಲು ಸಿಗುತ್ತದೆ,ಕಲಾವಿದರಿಗೂ ಪಾತ್ರ ವೈವಿಧ್ಯದ ತರಬೇತಿ ದೊರಕುತ್ತದೆ. ದೇವಿಮಹಾತ್ಮೆಗೆ ಮಾತ್ರ ಜನಸೇರುವುದು ಎಂಬ ಹಾಗೆ, ಎಲ್ಲ ಆಟಗಳಿಗೂ ಜನ ಸೇರುತ್ತಾರೆ, ಎಂಬ ಟ್ರೆಂಡ್ ಬರಬೇಕು.

 

 ಕಾಲದ ಓಟದ ಅನಿವಾರ್ಯತೆಯಲ್ಲಿ ಕಾಲ ಮಿತಿ ಆಟವೂ ಒಂದು. ಅದನ್ನು ಅಲ್ಲಗಳೆಯಲು ಅಸಾಧ್ಯ. ಆದರೆ, ಈ ಹಿಂದೆಯೂ ನಾನು ಬರೆದಿದ್ದೆ, ಈಗಲೂ ಹೇಳುತ್ತೇನೆ, ಕಾಲಮಿತಿಯ ಆಟ ಮಾಡಿ, ಆದರೆ ಆಟ ಪ್ರದರ್ಶಿಸುವ ಕಾಲದ ಅವಧಿಗೆ ಮಿತಿ ಹಾಕಬೇಡಿ, ಇಡೀ ರಾತ್ರಿ ಪ್ರದರ್ಶನ ನೀಡುತ್ತಿದ್ದ ಅವಧಿಯನ್ನೇ ತಲುಪಲು ಪ್ರದರ್ಶಿಸಿ! ಅಷ್ಟೇ ನನ್ನ ಮನವಿ... ಯಕ್ಷಗಾನಂ ಗೆಲ್ಗೆ

-ಕೃಷ್ಣಮೋಹನ ತಲೆಂಗಳ (26.05.2023).

No comments: