ನಮ್ಮನ್ನೇ ನಮ್ಮೆದುರು ತೆರೆದಿಡುವ ಸೋಲು ಮತ್ತು ಫೇಲು... “ಗೆದ್ದವರೂ ಫೇಲ್ ಆಗಿದ್ದು” ನಮಗೆ ಕಾಣುವುದೇ ಇಲ್ಲ!
“ಅನುಭವವೂ ಬದುಕಿಗೆ ಪಾಠ ಕಲಿಸುತ್ತದೆ. ಆದರೆ, ಕೆಲವೊಮ್ಮೆ ಸಿಲಬಸ್ ಸಿಗುವಾಗ
ಪರೀಕ್ಷೆಯೇ ಮುಗಿದು ಹೋಗಿರುತ್ತದೆ!” ಎಂಬುದು ಹಳೇ ಜೋಕು. ಸೋಲು ಕೂಡಾ ಪಾಠವೇ, ಹಿನ್ನಡೆ
ಕೂಡಾ ಅನುಭವವೇ, ಅನುಭವ ನಮ್ಮನ್ನು ತಿದ್ದುತ್ತದೆ, ಜಾಗೃತರಾಗಿಸುತ್ತದೆ ಮತ್ತು ತಪ್ಪೊಂದು
ನಡೆದರೆ ಮತ್ತೊಮ್ಮೆ ನಡೆಸದಂತೆ ಎಚ್ಚರಿಸುತ್ತದೆ. ಎಚ್ಚರಿಕೆಯನ್ನು ಪಾಲಿಸುವುದು, ಕಡೆಗಣಿಸುವುದು
ಅವರವರ ಯೋಗ್ಯತೆಗೆ ಬಿಟ್ಟದ್ದು.
ಸೋಲು ಮತ್ತು ಫೇಲು ನಮ್ಮ ಬಲಹೀನತೆ, ತಪ್ಪುಗಳು, ಪ್ರಮಾದಗಳನ್ನು ತೆರೆದಿಟ್ಟು ನಮಗೇ ನಮ್ಮನ್ನು ತೋರಿಸಿಕೊಡುತ್ತದೆ. ಆದರೆ ಅದನ್ನು ಸ್ವೀಕರಿಸಲ ನಮ್ಮ ಅಹಂಗೆ ಕಷ್ಟ ಆಗ್ತದೆ.
ಪರೀಕ್ಷೆಯಲ್ಲಿ ಫೇಲ್ ಎಂಬುದೊಂದು ಭಯಂಕರ ಅಪಮಾನ
ಹಾಗೂ ಅದೇ ಬದುಕಿನ ಶಾಶ್ವತ ಹಿನ್ನಡೆಯೊಂದರ ಪ್ರತೀಕ ಎಂಬ ಹತಾಶೆ ಇದ್ದರೆ ಅದರಾಚೆಗೂ ಒಂದು
ಬದುಕಿದೆ ಎಂದು ಅರಿವಾದಾಗ ಇದು ಸತ್ಯ ಎಂಬುದು ಅರಿವಾದೀತು.
ಅಷ್ಟಕ್ಕೂ ಪರೀಕ್ಷೆಯಲ್ಲಿ ದಡ್ಡರೆನಿಸಿಕೊಂಡು ಫೇಲ್
ಆದ ಪೈಕಿ ಎಷ್ಟು ಮಂದಿ ಬದುಕಿನಲ್ಲಿ ಸೋತಿದ್ದಾರೆ? ಹಾಗೂ ಪರೀಕ್ಷೆಯಲ್ಲಿ ರಾಂಕ್ ಪಡೆದವರ ಪೈಕಿ ಎಷ್ಟು
ಮಂದಿ ಬದುಕಿನಲ್ಲೂ ಡಿಸ್ಟಿಂಕ್ಷನ್ ನಿರ್ವಹಣೆ ಮಾಡಿ ತೋರಿಸಿದ್ದಾರೆ? ಎಲ್ಲಿಯಾದರೂ ಸರ್ವೇ ನಡೆದಿದೆಯಾ? ಫಸ್ಟ್ ಕ್ಲಾಸಿನಲ್ಲಿ ಪಾಸಾದವರು, ಚಿನ್ನದ ಪದಕ ಪಡೆದವರ ಬದುಕಿನ
ಸೋಲುಗಳನ್ನು ಚಿತ್ರೀಕರಿಸಿ ಡಾಕ್ಯುಮೆಂಟರಿ ಮಾಡಿದ್ದಾರ? ಅಥವಾ ಊರಿಡೀ ಡಂಗುರ ಸಾರಿಸಿ ಬರುತ್ತಾರ?
ಅದು ಬಿಡಿ, ದೊಡ್ಡದೊಬ್ಬ ಸಾಧಕ, ಸೃಜನಶೀಲ ಕಲಾವಿದ,
ಅತ್ಯುತ್ತಮ ಕುಶಲಕರ್ಮಿ, ಸಮಾಜಸೇವಕ, ಕ್ರೀಡಾಪಟು, ರಾಜಕಾರಣಿ, ಆಧ್ಯಾತ್ಮಿಕ ಮುಖಂಡ ಇವರೆಲ್ಲರ
ಶೈಕ್ಷಣಿಕ ಅರ್ಹತೆಗಳನ್ನು ನೀವು ರಿಯಾಲಿಟಿ ಚೆಕ್ ಮಾಡಿದ್ದೀರ? ಅವರೆಲ್ಲ ಶಾಲೆಯಲ್ಲಿ ಎಷ್ಟು ಮಾರ್ಕು ಪಡೆದಿದ್ದಾರೆ
ಅಂತ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದೀರ? ಇಲ್ವಲ್ಲ. ಬದುಕಿನಲ್ಲಿ ಗೆದ್ದವರ ಶೈಕ್ಷಣಿಕ
ಸೋಲುಗಳು, ಫೇಲುಗಳು ಯಾರಿಗೂ ದೊಡ್ಡದಾಗಿ ಕಾಣುವುದಿಲ್ಲ ಹಾಗೂ ಅಂತಹ ಸೋಲಿನ ಇತಿಹಾಸಗಳು
ಪ್ರಸ್ತುತವೂ ಆಗುವುದಿಲ್ಲ. ಶಾಲೆ, ಕಾಲೇಜುಗಳಲ್ಲಿ ಚಿನ್ನದ ಪದಕ ಪಡೆದು, ಫಸ್ಟು ಕ್ಲಾಸಿನಲ್ಲೇ
ಪಾಸಾಗಿ ಹೊರಗೆ ಹೋದವರ ಹಿಂದೆಯೇ ತೆರಳಿ ಅವರು ಜೀವನದಲ್ಲೂ ಗೆಲ್ತಾರ? ಪ್ರತಿಯೊಂದರಲ್ಲೂ ಬುದ್ಧಿವಂತರಾಗ್ತಾರ? ಜೀವನದುದ್ದಕ್ಕೂ ಚಿನ್ನದ ಪದಕದ ಹುಡುನಾಗಿಯೇ ಇರ್ತಾನ? ಅಂತ ನೋಡುವಷ್ಟು ವ್ಯವಧಾನ, ಆಸಕ್ತಿ ಯಾರಿಗೂ ಇರುವುದಿಲ್ಲ.
ಹಾಗಾಗಿ, ಅನುಭವ, ಸಾಧನೆ ಮತ್ತು ಯಶಸ್ಸಿನ ಹಿಂದಿನ
ಸೋಲುಗಳು ಸದ್ದು ಮಾಡುವುದಿಲ್ಲ... ಪ್ರಸ್ತುತವೂ ಆಗುವುದಿಲ್ಲ. ವೀಕೆಂಡ್ ವಿದ್ ರಮೇಶ್ ನಂತಹ
ಕಾರ್ಯಕ್ರಮಗಳನ್ನು ಕಂಡಾಗ (ಸದ್ಯದ ಮಟ್ಟಿಗೆ), ಯಾರದ್ದೋ ಆತ್ಮಕಥೆ ಓದಿದಾಗ, ಯಾರೋ ವೇದಿಕೆಯಲ್ಲಿ
ಭಾವನಾತ್ಮಕವಾಗಿ ಮಾತನಾಡಿದಾಗಲೇ ಗೊತ್ತಾಗುವುದು “ಗೆದ್ದವರ ಹಿಂದೆಯೂ ಸೋಲಿನ ಕಥೆಗಳು ಇರ್ತವೆ” ಅಂತ. ಗೆದ್ದವರೆಲ್ಲ ಹುಟ್ಟುವಾಗಲೇ ಕೊರಳಿಗೆ ಚಿನ್ನದ ಪದಕ ಹಾಕಿ,
ಬಾಯಲ್ಲಿ ಚಿನ್ನದ ಚಮಚ ಇರಿಸಿಕೊಂಡಿರ್ತಾರೆ ಎಂಬ ಕೆಟ್ಟ ಭ್ರಮೆ ನಮ್ಮನ್ನು ಆವರಿಸಿರುತ್ತದೆ.
ಹಾಗಾಗಿ ಗೆಲವಿನ ಹಿಂದಿನ ಶ್ರಮ, ಸಹನೆ ಹಾಗೂ ಸೋತ ಕತೆಗಳು ಕಾಣಿಸುವುದಿಲ್ಲ, ಕಂಡರೂ ಮನಸ್ಸು
ಸುಲಭದಲ್ಲಿ ಒಪ್ಪುವುದಿಲ್ಲ.
ಪರೀಕ್ಷೆಯಲ್ಲಿ ಫೇಲ್ ಮಾಡಿದರೆ ಮಕ್ಕಳು ಧೈರ್ಯ
ಕಳೆದುಕೊಳ್ಳುತ್ತಾರೆ, ವಿದ್ಯಾಭ್ಯಾಸ ಮೊಟಕುಗೊಳಿಸ್ತಾರೆ, ಆತ್ಮಹತ್ಯೆಗಳಂತಹ ದುರಂತಗಳು
ಸಂಭವಿಸುತ್ತವೆ ಹಾಗೂ ಅವರೊಂಥರಾ ಪ್ರತ್ಯೇಕರಾಗಿ ಅಂತರ್ಮುಖಿಗಳಾಗಿ ಕೀಳರಿಮೆ ಬೆಳೆಸಿಕೊಳ್ತಾರೆ
ಮತ್ತಿತರ ಕಾರಣಗಳಿಂದಲೋ ಏನೋ ಕೆಲವು ವರ್ಷಗಳಿಂದ ಬಹುತೇಕ ಎಸ್ಸೆಸ್ಸೆಲ್ಸಿ ತನಕ (ಈಗ
ಎಸ್ಸೆಸ್ಸೆಲ್ಸಿಯಲ್ಲೂ ಸಹ) ಮಕ್ಕಳನ್ನು ಫೇಲ್ ಮಾಡದೇ ಇರಲು ಅಥವಾ ಶತಾಯಗತಾಯ ಪಾಸ್ ಮಾಡಲು
ಸರ್ಕಾರ ನಿರ್ಧರಿಸಿದೆ. ಹಲವು ವರ್ಷಗಳಿಂದ ಇದು ನಡೆಯುತ್ತಿದೆ. ಹಾಗಾಗಿ ಬಹುತೇಕ 10ನೇ ತರಗತಿ
ತನಕ ನಾನಾ ಕಾರಣಗಳಿಂದ ಥಿಯರಿಲ್ಲಿ ಪಾಸ್-ಫೇಲ್ ಕಲ್ಪನೆ ಇದ್ದರೂ ವಾಸ್ತವದಲ್ಲಿ ಬಹುತೇಕರನ್ನು “ಪಾಸ್” ಮಾಡಲಾಗ್ತದೆ. ದಶಕಗಳ ಹಿಂದೆ ನಾವು ಎಳೆಯವರಿದ್ದಾಗ
ಕಲಿಯುವುದರಲ್ಲಿ ಹಿಂದುಳಿದವರು ಫೇಲ್ ಆಗಿ, ಮರುವರ್ಷ ಮತ್ತದೇ ತರಗತಿಯಲ್ಲಿ ಕಲಿತು ಆ ಪರೀಕ್ಷೆ
ಪಾಸ್ ಮಾಡಿ ಮುಂದಿನ ತರಗತಿಗೆ ಬರಬೇಕಾಗಿತ್ತು. ಮುಂದಿನ ವರ್ಷ ತನ್ನ ಜೂನಿಯರ್ ಗಳ ಜೊತೆ ಕುಳಿತು
ಮತ್ತದೇ ಪಾಠ ಕೇಳುವ ಅಪಮಾನ, ಶಿಕ್ಷಕರು ಹಂಗಿಸುವುದನ್ನು ಕೇಳಬೇಕಾದ ಸಂದರ್ಭ, ತನ್ನದಲ್ಲದ
ತಪ್ಪಿಗೆ ತನ್ನ ಹಿನ್ನಲೆ ಹಾಗೂ ಪರಿಸ್ಥಿತಿ (ಬಡತನ, ಮನೆಯಲ್ಲಿ ಸುಶಿಕ್ಷಿತರು ಇಲ್ಲದಿರುವುದು,
ಮನೆಯಲ್ಲಿ ಕಲಿಯುವ ವಾತಾವರಣವೇ ಇಲ್ಲದೇ ಹೋಗುವುದು) ತನ್ನಲ್ಲಿರುವ ಸರಾಸರಿ ಬುದ್ಧಿವಂತಿಕೆಯ
ಕಾರಣದಿಂದ ಫೇಲ್ ಆಗಿ, ಅದರಿಂದ ಬೇಸತ್ತು ಶಾಲೆಯನ್ನೇ ಬಿಟ್ಟು, ಮತ್ತೆಲ್ಲೋ ಹೋಗಿ, ಇನ್ನೇನೋ
ಆಗುವುದು.... ಇತ್ಯಾದಿ ಇತ್ಯಾದಿಗಳು ಆಗ್ತಾ ಇತ್ತು. ಇಂತಹ ಕಾರಣಗಳಿಂದ ಬಹುತೇಕ ಪ್ರೌಢಶಾಲೆಯ
ಕೊನೆಯ ತನಕ ಇಂತಹ ವ್ಯವಸ್ಥೆಯನ್ನು ಕೈಬಿಟ್ಟು ಎಲ್ಲರನ್ನೂ ಪಾಸ್ ಮಾಡಲಾಗುತ್ತಿದೆ. ಫೇಲ್ ಆದರೂ,
ತಕ್ಷಣ ಪೂರಕ ಪರೀಕ್ಷೆ ನಡೆಸಿ, ಅದೇ ವರ್ಷ ಮುಂದಿನ ತರಗತಿಗೆ ಪ್ರವೇಶ ಪಡೆಯಲು ಬಹುತೇಕ ಅವಕಾಶ
ಇದೆ. ಹಾಗಾಗಿ ಫೇಲ್ ಆಗಿ, ಅಪಮಾನಕ್ಕೊಳಗಾಗಿ ಮತ್ತದೇ ತರಗತಿಯಲ್ಲಿ ಕುಳಿತು, ಮತ್ತೆ ಕಲಿತು
ಪರೀಕ್ಷೆ ಪಾಸು ಮಾಡಿ ಮುಂದಡಿ ಇಡುವ ಸನ್ನಿವೇಶ ಈಗಿಲ್ಲ...
ಶಾಲೆಯ ಪರೀಕ್ಷೆಯ ವಿಚಾರ ಪಕ್ಕಕ್ಕಿಡೋಣ…:
ಶಾಲೆಯೇ ಬೇರೆ, ಬದುಕೇ ಬೇರೆ. ಸಿಲಬಸ್ ಇಲ್ಲದ
ಬದುಕಿನಲ್ಲಿ, ಶಿಕ್ಷಕರಿಲ್ಲದ ತರಗತಿಗಳಲ್ಲಿ ಕಲಿಯುವಾಗ ಅಲ್ಲಿ ಫೇಲ್ ಆಗುವುದಕ್ಕೆ ಮಾನದಂಡಗಳಿಲ್ಲ,
ಪಾಸಾಗು ಅಂತ ಕರೆದು ಹೇಳುವವರಿಲ್ಲ. ಹಾಗಂತ ನಾವು ಫೇಲ್ ಆಗದೇ ಇರುವುದೂ ಇಲ್ಲ. ತಪ್ಪು ನಿರ್ಧಾರ,
ದುಡುಕು ನಡೆ, ನಿರ್ಲಕ್ಷ್ಯದ ಪ್ರಯೋಗ, ಅನುಭವದ ಕೊರತೆ, ಅಸಹಜ ಸಲಹೆಗಳ ಪಾಲನೆ ಇತ್ಯಾದಿ ನೂರಾರು
ಕಾರಣಗಳಿಂದ ತಪ್ಪುಗಳನ್ನು ಮಾಡುತ್ತಲೇ ಇರ್ತೇವೆ, ಹಿನ್ನಡೆಗಳನ್ನು ಅನುಭವಿಸುತ್ತಲೇ ಇರುತ್ತೇವೆ.
ಪಾಠಗಳನ್ನು ಕಲಿಯುತ್ತಲೇ ಇರುತ್ತೇವೆ. ಯಾವುದೇ ಟೀಚರು, ಗೈಡು, ಕೋಚಿಂಗ್ ಎಂಥದ್ದೂ ಇಲ್ಲದೆ
ಕಲಿಯುವ ಪಾಠಗಳು ಮತ್ತು ಎದುರಿಸುವ ಪರೀಕ್ಷೆಗಳಿಗೆ ನಾವೇ ಮೌಲ್ಯಮಾಪಕರು. ನಮಗೇ ಗೊತ್ತಿರ್ತದೆ
ನಮ್ಮ ಪರ್ಫಾರ್ಮೆನ್ಸು ಹೇಗಿದೆ ಅಂತ. (ತುಂಬ ಸಲ ನಮ್ಮ ಅಹಂ ನಮ್ಮ ನಿರ್ವಹಣೆಯನ್ನು ಒಪ್ಪದೇ
ಇರುವುದು ಔಟ್ ಆಫ್ ಸಿಲಬಸ್ ವಿಚಾರ).
ಮರೆವಿನಿಂದ ಬೈಕಿಗೆ ಪೆಟ್ರೋಲ್ ತುಂಬಿಸದೇ ಹೋಗಿ
ಅರ್ಧದಲ್ಲಿ ಬಾಕಿ ಆಗುವುದು, ಆರೋಗ್ಯದ ಬಗ್ಗೆ ಜಾಗ್ರತೆ ಮಾಡದೆ ಅನಾರೋಗ್ಯಕ್ಕೀಡಾಗಿ ದೇಹ,
ಮನಸ್ಸು ಕೆಡಿಸಿಕೊಳ್ಳುವುದು, ಅಪಾತ್ರರಿಗೆ ದುಡ್ಡು ಕೊಟ್ಟು ಕೈಸುಟ್ಟುಕೊಳ್ಳುವುದು, ಮಿತಿಮೀರಿದ
ವೇಗದಿಂದ ವಾಹನ ಚಲಾಯಿಸಿ ಅಪಘಾತಕ್ಕೀಡಾಗುವುದು ಹೀಗೆ... ನಮ್ಮ ಮಿತಿಯೊಳಗಿನ ತಪ್ಪುಗಳೇ ಸಾಕಷ್ಟು
ಪಾಠಗಳನ್ನು ಕಲಿಸುತ್ತವೆ. ನಮ್ಮ ನಿಯಂತ್ರಣದಲ್ಲಿ ಇಲ್ಲದ ನಮ್ಮ ಅದೃಷ್ಟ, ಹಣೆಬರಹ, ಪರಿಸ್ಥಿತಿಗಳಿಂದ
ಬರುವ ಸಮಸ್ಯೆಗಳು, ಸವಾಲುಗಳು ಬೇರೆಯೇ ಇವೆ. ಯಾವುದೇ ಮೂಲದಿಂದ ಸಮಸ್ಯೆ ಬರಲಿ ಅದು ಪಾಠ ಕಲಿಸಿಯೇ
ಕಲಿಸುತ್ತದೆ. ಅದು ಎಷ್ಟು ಪ್ರಯೋಜನಕ್ಕೆ ಬರ್ತದೆ ಎಂಬುದು ಚರ್ಚಾರ್ಹ ಆದರೂ ನಮ್ಮ ಬದುಕು
ಗಟ್ಟಿಗೊಳ್ಳುವುದು ಇಂತಹ ಅನುಭವಗಳಿಂದ ಹಾಗೂ ತಪ್ಪುಗಳಿಂದ. ಸ್ವಯಂವೇದ್ಯವಾಗುವ ಅನುಭವಗಳು ತುಂಬ
ಆಳವಾದ ಪಾಠವನ್ನು ತೀವ್ರವಾಗಿ ಕಲಿಸಿಹೋಗಿರುತ್ತದೆ.
ಸಂಚರಿಸುವ ವಾಹನದ ಟೈಯರ್ ಪಂಕ್ಚರ್ ಆದರೆ, ಹೇಳದೇ
ಕೆಳದೇ ಜ್ವರ ಬಂದರೆ, ಅನಿರೀಕ್ಷಿತವಾಗಿ ಕೈಯ್ಯಲ್ಲಿ ದುಡ್ಡು ಖಾಲಿ ಆದರೆ, ಮುನ್ಸೂಚನೆ ಇಲ್ಲದೆ
ಕೆಲಸ ಕಳೆದುಕೊಂಡರೆ ತಲೆ ಮೇಲೆ ಕೈಹೊತ್ತು ಕುಳಿತರೆ ಪರಿಸ್ಥಿತಿ ತಿಳಿ ಆಗ್ತದ? ಅಥವಾ ಆತ್ಮಹತ್ಯೆ ಮಾಡಿಕೊಂಡರೆ ಸಮಸ್ಯೆ ಪರಿಹಾರ ಆಗ್ತದ? ನೀವೇ ಇಲ್ಲವಾದರೆ ನಿಮ್ಮನ್ನು ನಂಬಿಕೊಂಡು ಕುಳಿತವರ ಬದುಕು
ಹಸನಾಗಿ ಇರ್ತದ? ಹಾಗಾದರೆ ಇವೆಲ್ಲ ಬದುಕಿನಲ್ಲಿ ನಾವು ಫೇಲ್ ಆಗುವ ಸಂದರ್ಭಗಳಲ್ವ? ನೋಟಿಸ್ ಬೋರ್ಡಿನಲ್ಲಿ ಪ್ರಕಟವಾಗುವ ಫಲಿತಾಂಶದಲ್ಲಿ ಫೇಲ್ ಆದರೆ
ಮಾತ್ರ ಅಪಮಾನವ? ನಮ್ಮದೇ ತಪ್ಪುಗಳಿಂದ ನಮ್ಮೆದುರು ನಾವೇ ಫೇಲ್ ಆದರೆ ಅದು ನಮಗೆ
ಅಪಮಾನ ಅಲ್ವ? ಅಪಮಾನ ಆದಾಗಲೆಲ್ಲ
ಆತ್ಮಹತ್ಯೆ ಮಾಡಿಕೊಂಡರೆ ಮನುಷ್ಯ ಬದುಕಿನಲ್ಲಿ ಎಷ್ಟು ಸಲ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು?!
ಜಗತ್ತಿನಲ್ಲಿ ಇಂಟರ್ ವ್ಯೂಗೆ ಹೋದವರೆಲ್ಲರೂ ಆಯ್ಕೆ
ಆಗುವುದು ಅಂಥ ಇದ್ದಿದ್ದರೆ, ಪರೀಕ್ಷೆ ಬರೆದರೆಲ್ಲರೂ ಡಿಸ್ಟಿಂಕ್ಷನಿನಲ್ಲೇ ಪಾಸಾಗುವುದು ಅಂತ
ಇದ್ದಿದ್ದರೆ, ಮನುಷ್ಯನ ಆರೋಗ್ಯ ಕೆಡದೆ ನೂರಾರು ವರ್ಷ ಚಿರಂಜೀವಿಗಳಾಗಿಯೇ ಬದುಕುತ್ತಲೇ ಇರ್ತಾನೆ
ಅಂತ ಇರ್ತಿದ್ರೆ, ಕ್ರಿಕೆಟ್ಟಿನಲ್ಲಿ ಆಟಗಾರ ಪ್ರತಿ ಬಾಲಿಗೂ ಸಿಕ್ಸರನ್ನೇ ಹೊಡೀತಾನೆ ಅಂತ ಇದ್ರೆ
ಈ ಜಗತ್ತು ಹೇಗೆ ಇರ್ತಾ ಇತ್ತು. ಯಾವುದೇ ವೈವಿಧ್ಯತೆ, ದ್ವಿತೀಯ ಆಯ್ಕೆ, ಮತ್ತೊಂದು ದಾರಿ,
ಸವಾಲು, ಪ್ಲಾನ್ ಬಿ, ಪ್ಲಾನ್ ಸಿ ಎಂಥದ್ದೂ ಇಲ್ಲದ ಒಂದು ಯಾಂತ್ರಿಕ ಜಗತ್ತನ್ನು ಕಾಣ್ತಾ
ಇದ್ದೆವು.
ವೈವಿಧ್ಯಮಯ ಚಿಂತನೆಗಳು, ವೈವಿಧ್ಯಮಯ
ವ್ಯಕ್ತಿತ್ವಗಳು, ಸೃಜನಶೀಲ ಮನಸ್ಸುಗಳು ನಮ್ಮ ನಡುವೆ ಇರುವುದೇ ಮತ್ತೊಂದು ಮಗ್ಗುಲಿನಿಂದ
ಆಲೋಚಿಸಲು ಅವರಿಗೆ ಸಾಧ್ಯ ಆಗಿರುವುದರಿಂದ. ಪ್ರತಿ ಫೇಲು, ಪ್ರತಿ ಸೋಲು ಪ್ರತಿ ತಪ್ಪು ನಿರ್ಧಾರ
ಕೂಡಾ ಒಂದು ಸವಾಲನ್ನು, ಒಂದು ಪ್ಲಾನ್ ಬಿಯನ್ನು, ಮತ್ತೊಮ್ಮೆ ಪುಟಿದು ಬರುವ ಆಕಾಂಕ್ಷೆಯನ್ನು
ನಮ್ಮೊಳಗೆ ಹುಟ್ಟಿಸುತ್ತದೆ... ಒಂದು ಗೆಲವು, ಒಂದು ಯಶಸ್ಸು ಒಂದು ಪರಿಪೂರ್ಣತೆಯ ಅಮಲನ್ನು
ನಮ್ಮಲ್ಲಿ ತುಂಬಿಸುತ್ತದೆ. ಜನ ಸೋಲನ್ನು, ನೋವನ್ನು ಡಂಗುರ ಸಾರುತ್ತಾ ಪ್ರಚಾರ ಮಾಡುವುದಿಲ್ಲ.
ಅದಕ್ಕೇ ಬದುಕಿನಲ್ಲಿ ಫೇಲ್ ಆದ ಕತೆಗಳು ಬಹಳಷ್ಟು ಸಂದರ್ಭಗಳಲ್ಲಿ ಬೆಳಕಿಗೇ ಬರುವುದಿಲ್ಲ.
ವಾಹನದ ಟಯರ್ ಪಂಕ್ಚರ್ ಆದಾಗ ಅಳುತ್ತಾ ಕುಳಿತರೆ,
ಕೇವಲ ಟೆನ್ಶನ್ ಮಾಡಿ ತಲೆ ಮೇಲೆ ಕೈಹೊತ್ತು ನಿಂತರೆ ಸಮಸ್ಯೆ ಒಂದಿಂಚೂ ಪರಿಹಾರ ಆಗುವುದಿಲ್ಲ.
ಅದಕ್ಕೆ ಪ್ಯಾಚ್ ವರ್ಕ್ ಮಾಡುವವರನ್ನು ಹುಡುಕಿ ರಿಪೇರಿ ಮಾಡಲು ಸಾಧ್ಯವಾದರೆ ಅಥವಾ ಸ್ವಂತ ತಲೆ
ಖರ್ಚು ಮಾಡಿ ಸ್ಟೆಪ್ನಿ ಅಳವಡಿಸಲು ಸಾಧ್ಯವಾದರೆ ನಿಂತ ಗಾಡಿಯನ್ನು ಮತ್ತೆ ಚಲಾಯಿಸಿ “ಅಲ್ಲಿಂದಲಾದರೂ ಮುಂದೆ ಹೋಗಬಹುದಲ್ವ”? ಗಾಡಿ ಬಲಿಸಲು
ಬದುಕಿನಲ್ಲಿ ಆಗಾಗ ಸಾಧ್ಯವಾಗದಿದ್ದರೂ ದುರವಸ್ಥೆಗೊಳಗಾದ ವಾಹನವನ್ನು ಕನಿಷ್ಠ ದುರಸ್ತಿ
ಮಾಡಿಸಲಾದರೂ ಸಾಧ್ಯವಾದರೆ ಚಲಿಸುತ್ತಾ ಮುಂದುವರಿಯವು ಸಾಧ್ಯವಿದೆ.
ಕೇವಲ ಪರೀಕ್ಷೆಯಲ್ಲಿ ಫೇಲ್ ಆದ್ದಕ್ಕೆ ಸಿಕ್ಕಾಪಟ್ಟೆ
ಟೆನ್ಶನ್ ಮಾಡುವವರು, ಬದುಕಿಗೆ ತಿಲಾಂಜಲಿ ಇಡುವವರು, ದುಡುಕುವವರು “ಸೋತು ಗೆದ್ದವರ ಕತೆಗಳನ್ನು ಓದಬೇಕಿದೆ”. ಗೆದ್ದವರ ಹಿಂದಿನ ಸೋಲುಗಳನ್ನು ತಿಳಿಯಲು, ಸೋತು ಗೆದ್ದವರ
ಬದುಕಿನ ಸ್ಫೂರ್ತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಬೇಕಿದೆ. ನಾವು ಕಂಡದ್ದು,
ಊಹಿಸಿದ್ದು ಮಾತ್ರ ಸೋಲುಗಳಲ್ಲ. ಹೇಳಲ್ಪಡದ, ಕಣ್ಣಿಗೆ ಕಾಣದ ಸೋಲುಗಳೂ ಇರ್ತವೆ. ಆದರೆ ಅವು
ಗೆಲವಿನ ಬೆಳಕಿನ ಪ್ರಖರತೆ ಹಿಂದೆ ಮಬ್ಬಾಗಿರುತ್ತವೆ. ಎಷ್ಟೋ ಗೆಲವುಗಳಿಗೆ ಫೇಲಾಗಿದ್ದೇ ಕಾರಣ
ಆಗಿರ್ತವೆ ಎಂಬುದು ಅನುಭವದಿಂದ ಮಾತ್ರ ಕಂಡುಕೊಳ್ಳಲು ಸಾಧ್ಯ. ಯಾಕೆಂದರೆ ಸುರಿಯುವ ಮಳೆಯಲ್ಲಿ ನೆನೆದುಕೊಂಡು
ನಡೆಯುವವ ಸುರಿಸುವ ಕಣ್ಣೀರು ಯಾರಿಗೂ ಕಾಣಿಸುವುದೇ ಇಲ್ಲ!
-ಕೃಷ್ಣಮೋಹನ ತಲೆಂಗಳ (22.04.2023)
No comments:
Post a Comment