ಅಸೌಖ್ಯದ ಅರಿವಿಲ್ಲದೇ ಅಡ್ಡಾಡುವ ನಾವೆಂತಹ ಬುದ್ಧಿವಂತರು? ಆದ್ಯತೆಗಳನ್ನೇ ಬದಲಿಸುವ “ಆಸ್ಪತ್ರೆಯ ದಿನಗಳು”!

 


ಹೇಳದೇ, ಕೇಳದೇ ಕಾಡುವ ಅನಾರೋಗ್ಯ ಬದುಕಿನ ಆದ್ಯತೆಗಳನ್ನೇ ಬದಲಾಯಿಸುತ್ತದೆ. ವ್ಯಸ್ತ ಬದುಕಿನಲ್ಲಿ ಯಾವುದು ಅನಿವಾರ್ಯ ಅಂದುಕೊಂಡಿರುತ್ತೇವೆಯೋ ಅದರ ತೀವ್ರತೆ ಬದುಕಿನ ಇತರ ವ್ಯಾಖ್ಯಾನಗಳನ್ನು ಬದಲಾಯಿಸಿಬಿಟ್ಟಿರುತ್ತದೆ. ಅನಾರೋಗ್ಯದಿಂದ ಬಿಡುಗಡೆ ಹೊಂದುವ ನಿಟ್ಟಿನಲ್ಲಿ ಆಸ್ಪತ್ರೆ ಸೇರಿ ಅಲ್ಲಿಂದ ಬಿಡುಗಡೆ ಹೊಂದುವ ವರೆಗಿನ ದಿನಗಳು ನಿರಾಕರಿಸಲಾಗದ ದಿನಚರಿಯ ಪುಟ್ಟ ಇತಿಹಾಸದ ಗುಚ್ಛವನ್ನು ಕಟ್ಟಿಕೊಡುತ್ತದೆ. ಅದು ಬದುಕಿನ ಇತಿಹಾಸದ ಪುಟವಾಗಿ ಮಸುಕಾಗಿಯಾದರೂ ಕೊನೆ ತನಕ ನೆನಪಿನಲ್ಲಿರುತ್ತದೆ.

 

ನಿರಾಕರಿಸಲಾಗದ ವಿಶ್ರಾಂತಿ!:

ವಿಪರ್ಯಾಸ ಎಂದರೆ ವ್ಯಸ್ತ ಬದುಕಿನಲ್ಲಿ ಹಲವು ಬಾರಿ ಕಡ್ಡಾಯ ವಿಶ್ರಾಂತಿ ಕಲ್ಪಿಸುವುದು ಅನಾರೋಗ್ಯ. ವಿಶ್ರಾಂತಿ ಜೊತೆಗೆ ಅನಾರೋಗ್ಯ ಕಡಿಮೆಯಾಗುವುದರ ಜೊತೆಗೆ, ವಿಶ್ರಾಂತಿ ಹಾಗೂ ಬಿಡುವು ಜೊತೆ ಜೊತೆಗೆ ಪರ್ಯಾವಸಾನಗೊಳ್ಳುತ್ತದೆ. ಹದಗೆಟ್ಟ ಆರೋಗ್ಯ ದೇಹಕ್ಕೆ ವಿಶ್ರಾಂತಿ ಅಗತ್ಯವನ್ನು ತೋರಿಸಿಕೊಡುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇಂತಹ ವಿಶ್ರಾಂತಿ, ಇಂತಹ ಆಸ್ಪತ್ರೆ ವಾಸ, ಇಂತಹ ಬಿಡುವು ಪೂರ್ವನಿಯೋಜಿತ ಆಗಿರುವುದಿಲ್ಲ. ತಕ್ಷಣ ಪರೀಕ್ಷೆ, ತಕ್ಷಣ ಫಲಿತಾಂಶ, ತಕ್ಷಣ ಆಸ್ಪತ್ರೆ ವಾಸ... ಒಂಥರ ಸಿನಿಮೀಯ ದೃಶ್ಯಗಳು. ಯೋಚಿಸುವ ಮೊದಲು ನಾವೆಲ್ಲಿಗೋ ತಲುಪಿರುತ್ತೇವೆ. ತಲುಪಲೇಬೇಕಾಗುತ್ತದೆ. ಸುದೀರ್ಘವಾಗಿ ಯೋಚಿಸುವ ಮೊದಲು ಅಡ್ಮಿಟ್ ಆಗಲೇಬೇಕಾದ ಸಂದರ್ಭ ಇರುತ್ತದೆ.

ಧ್ಯಾನಸ್ಥ ದಿನಗಳು:

ಆಸ್ಪತ್ರೆ ವಾಸವೇ ಆಯಾಚಿತ ಧ್ಯಾನಸ್ಥ ಬದುಕು. ಯಾವ ಆಸ್ಪತ್ರೆಗೆ ಸೇರಬೇಕು ಅಥವಾ ಅಲ್ಲಿ ಎಂತಹ ವಾರ್ಡಿನಲ್ಲಿ ಉಳಿದುಕೊಳ್ಳಬೇಕು ಎಂಬುದನ್ನು ಬಿಟ್ಟರೆ, ಮತ್ತೆಲ್ಲ ನಮ್ಮ ಕೈಲಿಲ್ಲ. ರೋಗ ಪತ್ತೆ, ವಿಧ ವಿಧದ ಪರೀಕ್ಷೆಗಳು, ಚಿಕಿತ್ಸೆಗಳು, ಚುಚ್ಚುಮದ್ದುಗಳು, ಶಸ್ತ್ರಚಿಕಿತ್ಸೆ ಎಲ್ಲ ನಮ್ಮ ಚಿಕಿತ್ಸೆ ಜವಾಬ್ದಾರಿ ಹೊತ್ತುಕೊಂಡ ವೈದ್ಯರ ತಂಡದ್ದು. ಎಷ್ಟು ದಿನ ಅಲ್ಲಿರಬೇಕು, ಎಷ್ಟು ದಿನ ಡ್ರಿಪ್ಸ್ ಹಾಕಿಸಿಕೊಳ್ಳಬೇಕು, ಎಷ್ಟು ದಿನ ವಿಶ್ರಾಂತಿ ಬೇಕು? ಎಲ್ಲವನ್ನು ತಜ್ಞರು ನಿರ್ಧಾರ ಮಾಡ್ತಾರೆ.

ನನ್ನನ್ನು ಬಿಟ್ಟು ಇಡೀ ಜಗತ್ತೇ ಆರೋಗ್ಯಪೂರ್ಣವಾಗಿದೆ, ಎಷ್ಟು ಚಂದ ತಿನ್ತಾರೆ, ಓಡಾಡ್ತಾರೆ, ಖುಷಿಯಾಗಿದ್ದಾರೆ, ಧೈರ್ಯದಿಂದ ಇದ್ದಾರೆ, ಸಹಜವಾಗಿದ್ದಾರೆ ಅಂತ ಅನ್ನಿಸುವುದು ಆಗಲೇ.... ಮುಕ್ತ ಓಡಾಟ, ಮುಕ್ತ ಆಹಾರ, ಮುಕ್ತ ಬದುಕು ಕನಸೇನೋ ಅನ್ನಿಸುವುದು ಆಗಲೇ!

ವಿಚಿತ್ರ ಏನು ಗೊತ್ತ? ನಾನೇ ಪರಮಜ್ಞಾನಿ, ನಾನು ಅತೀ ಬುದ್ಧಿವಂತ, ನಾನು ಅತ್ಯಂತ ಸುಶಿಕ್ಷಿತ, ನಾನು ಭಯಂಕರ ಇನ್ ಫ್ಲುಯೆನ್ಸ್ ಇರುವ ವ್ಯಕ್ತಿ, ನಾನು ಭಯಂಕರ ಧೈರ್ಯಶಾಲಿ ಅಂದುಕೊಳ್ಳುವವರಿಗೂ ತಮ್ಮ ಶರೀರದೊಳಗೆ ಏನೆಲ್ಲ ಅಸೌಖ್ಯ ಮನೆ ಮಾಡಿದೆ ಅಂತ ಗೊತ್ತಾಗುವುದು ಪ್ರಯೋಗಶಾಲೆ ವರದಿ ಬಂದ ಮೇಲೆಯೇ. ರಕ್ತಪರೀಕ್ಷೆ, ಎಕ್ಸರೇ, ಸ್ಕ್ಯಾನಿಂಗ್ ವರದಿ ಬಂದ ಮೇಲೆ, ಹೊರಗಿನಿಂದ ತೀರಾ ನಾರ್ಮಲ್ ಕಾಣುವ ವ್ಯಕ್ತಿಯೂ ಯಾವ ಸ್ಟೇಜಿನಲ್ಲಿ ಇದ್ದಾನೆ ಎಂದು ಪತ್ತೆಯಾಗುವುದರೊಂದಿಗೆ ಆತನ ದಿನಚರಿ ಏಕಾಏಕಿ ಬದಲಾಗಿ ಬಿಡ್ತತೆ.

ನಮ್ಮ ಅಂತಸ್ತು, ಪ್ರಭಾವ, ನಮ್ಮ ಅಧಿಕಾರ ಇವ್ಯಾವುದೂ ನಮ್ಮನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕ ಆಗಿಸುವುದಿಲ್ಲ. ಹೆಚ್ಚೆಂದರೆ ಐಷಾರಾಮಿ ಕೊಠಡಿಯಲ್ಲಿ ವಾಸ್ತವ್ಯ ಹೂಡಬಹುದೇ ಹೊರತು ಚಿಕಿತ್ಸೆ, ವಾಸಿಯಾಗುವ ಸಾಧ್ಯತೆ ಇತರರ ಹಾಗೆಯೇ. ಅಷ್ಟೇ. ದೊಡ್ಡ ಆಸ್ಪತ್ರೆಗೆ ಸೇರಬಹುದು, ಅತ್ಯಂತ ತಜ್ಞ ವೈದ್ಯರ ಚಿಕಿತ್ಸೆ ಸಿಗಬಹುದು. ಆದರೆ ಬದುಕು ಮತ್ತು ಸಾವು ಇವೆಲ್ಲವನ್ನೂ ಮೀರಿದ್ದು, ಎಂಥವರನ್ನೂ ಬಿಟ್ಟಿಲ್ಲ ಎಂಬುದನ್ನು ಕೋವಿಡ್ ಕಟು ದಿನಗಳು ತೋರಿಸಿಕೊಟ್ಟಿದೆ.

ಅದನ್ನೇ ಹೇಳಿದ್ದು ಆಗ, ಆಸ್ಪತ್ರೆ ವಾಸ ಆದ್ಯತೆಗಳನ್ನೇ ಬದಲಾಯಿಸ್ತದೆ, ಧ್ಯಾನಸ್ಥ ಬದುಕನ್ನು ಕಲ್ಪಿಸುತ್ತದೆ ಅಂತ. ಆಸ್ಪತ್ರೆಯಲ್ಲಿ ಅಸಹಾಯಕರಾಗಿ ಮಲಗಿದಷ್ಟೂ ದಿವಸ ರೋಗಿಯ ಧ್ಯಾನ ಇರುವುದು ಅಲ್ಲಿಂದ ಒಮ್ಮೆ ಹೊರಗೆ ಬಂದರೆ ಸಾಕು ಅಂತ... ಬಿಝೀ ಅಂದುಕೊಂಡ ಬದುಕು ಏಕಾಏಕಿ ಖಾಲಿಯಾಗಿರ್ತದೆ. ನಾಳೆ ಆಗಲೇಬೇಕಿತ್ತು ಅಂದುಕೊಂಡ ಟಾಸ್ಕು ಈಗ ಆದ್ಯತೆಯ ಪಟ್ಟಿಯಿಂದ ಸರಿದು ಹೋಗಿರುತ್ತದೆ. ಯಾರದ್ದೋ ಜೊತಗಿನ ಸಿಟ್ಟು, ದ್ವೇಷ, ಪೈಪೋಟಿ, ನಾನೇ ಮೊದಲಿಗನಾಗುವ ಆಸೆ, ನಾಲ್ಕಾರು ಮಂದಿಯ ಗಮನ ಸೆಳೆದು ಹೀರೋ ಆಗುವ ಹಂಬಲ ಎಂಥದ್ದೂ ಇರುವುದಿಲ್ಲ... ಒಮ್ಮೆ ಮೊದಲಿನ ಹಾಗೆ ಆದ್ರೆ ಸಾಕು, ಜೀವಂತ ಹೊರಗೆ ಬಂದ್ರೆ ಸಾಕು ಅನ್ನುವುದು ತುಂಬ ಮಂದಿಯ ಮೊದಲ ಹಾಗೂ ಏಕೈಕ ಆದ್ಯತೆ ಆಗಿರ್ತದೆ. ಆಸ್ಪತ್ರೆ ಬಿಲ್ಲು ಎಷ್ಟಾಗಬಹುದು ಎಂಬುದು ಸಹ ಎರಡನೇ ಆದ್ಯತೆಯಲ್ಲಿರ್ತದೆ. ಕಚೇರಿ, ಎಲೆಕ್ಷನ್ನು, ಐಪಿಎಲ್ಲು, ಸ್ನೇಹಿತರು, ಪಾರ್ಟಿ, ಪಕ್ಷಾಂತರ ಎಲ್ಲ ನೆನಪಾಗುವುದು ಸ್ವಲ್ಪ ಶರೀರದಲ್ಲಿ ತ್ರಾಣ ಬಂದ ಮೇಲೆ ಅಥವಾ ಜೀವಂತ ಹೊರಗೆ ಹೋಗ್ತಿ ಎಂಬ ವಿಶ್ವಾಸ ಬಂದ ಮೇಲೆ!

ನಮ್ಮೊಳಗೆ ನಾವೇ ಕಟ್ಟಿಕೊಂಡ ವರ್ತುಲಗಳು, ಒತ್ತಡಗಳು, ಕೈಗೆ ಸಿಕ್ಕದ ಸಮಯ, ಚಿಂತಿಸಲು ಪುರುಸೊತ್ತಿಲ್ಲದ ಓಡಾಟ, ಬದುಕಿನ ಭಾಗವೇನೋ ಅಂತ ಅಂದುಕೊಂಡ ಹತ್ತಾರು ವಿಚಾರಗಳು ಯಾವುವೂ ನಿಶ್ಯಕ್ತರಾಗಿ ಹಾಸಿಗೆಯಲ್ಲಿ ಮಲಗಿ ಚೇತರಿಕೆಯ ಹಂಬಲದಲ್ಲಿ ಇರುವಾಗ ಆದ್ಯತೆಗಳೇ ಆಗಿರುವುದಿಲ್ಲ. ದೇಹ ಚೈತನ್ಯಯುಕ್ತವಾಗಿರುವಾಗ ಅರಿವಿಗೇ ಬಾರದಿರುವ ಇಂಜಕ್ಷನ್ನುಗಳು, ಡ್ರಿಪ್ಸು, ವ್ಹೀಲ್ ಚೇರ್, ಆಂಟಿಬಯಾಟಿಕ್, ಲ್ಯಾಬ್ ಟೆಸ್ಟ್, ಗಂಜಿ ಊಟ, ನಿಶ್ಚಲರಾಗಿ ಸ್ಟ್ರೆಚರ್ ಗಳಲ್ಲಿ ಪ್ಲೋರಿನಿಂದ ಫ್ಲೋರಿಗೆ ಸಾಗುವ ಶರೀರಗಳು ಎಲ್ಲಿಗೆ ಹೋಗ್ತವೆ ಅನ್ನುವ ಅಚ್ಚರಿಗಳೆಲ್ಲ ಕಾಣಿಸುವುದು ಆಸ್ಪತ್ರೆ ವಾಸದಲ್ಲಿ.

ಐಸಿಯು ಎದುರು ಸಾಲು ಕುರ್ಚಿಗಳಲ್ಲಿ ಆತಂಕ ಮಡುವಿನಲ್ಲಿ ಕುಳಿತ ಸಂಬಂಧಿಕರು ಎಂಬ ನಿದ್ದೆಗೆಟ್ಟ ದೇಹಗಳು, ಮೆಡಿಸಿನ್ ತರಲು ಫಾರ್ಮಸಿಯತ್ತ ಆತಂಕದಿಂದ ಓಡುವ ಕುಟುಂಬಿಕರು, ಆಪರೇಷನ್ ಥಿಯೇಟರ್ ಎದುರು ನಿರ್ಲಿಪ್ತರಾಗಿ ಫಲಿತಾಂಶಕ್ಕೆ ಕಾಯುತ್ತಿರುವ ಮನೆ ಮಂದಿ, ಎಂಥದ್ದೇ ನೋವು ಕಂಡರೂ, ಗೋಳು ಕಾಣಿಸಿದರೂ, ಕೇಳಿಸಿದರೂ ಭಾವಶೂನ್ಯರಂತೆ ಸಹನೆಯಿಂದ, ದೃಢವಾಗಿ ಕರ್ತವ್ಯ ನಿರ್ವಹಿಸುವ ಸಿಸ್ಟರುಗಳು, ರೂಂಬಾಯ್ ಗಳು, ಡಾಕ್ಟರ್ ಗಳು ಆ ದೊಡ್ಡ ಕಡ್ಡದೊಳಗೆ ನಾಲ್ಕಾರು ದಿನ ಇದ್ದು ಬಂದರೆ ಮಾತ್ರ ಕಾಣಸಿಗ್ತಾರೆ. ವಿಚಿತ್ರ ಅಂದರೆ ದಿನಾ ಅದೇ ಆಸ್ಪತ್ರೆ ಕಟ್ಟಡದ ಎದುರೇ ಓಡಾಡ್ತಾ ಇದ್ರೂ, ಶರೀರ ಆರೋಗ್ಯದಿಂದ ಇರುವಾಗ ಇಂಥ ಯಾವುದೇ ದೃಶ್ಯಗಳು ಕಣ್ಣೆದುರು ಸುಳಿಯುವುದು ಅಪರೂಪ. ನಮ್ಮ ಮೇಲೆ ನಮಗೆ ಭಯಂಕರ ಕಾನ್ಫಿಡೆನ್ಸ್ ಇರ್ತದೆ. ನಮ್ಮ ಶರೀರ ನಮಗಿಂತ ಪ್ರತ್ಯೇಕ ಅನ್ನಿಸುವುದು ಹುಶಾರಿಲ್ಲದೆ ಮಲಗಿದಾಗ! ಸೋ ಕಾಲ್ಡ್ ಬಿಝೀ ಶೆಡ್ಯೂಲಿನಲ್ಲಿ... ಇಹದ ಪರಿವೆಯೇ ಇಲ್ಲದೆ ಓಡಾಡುತ್ತಿರುವ ಯಾರೂ ಸಹ ಆಸ್ಪತ್ರೆಯಲ್ಲಿ ಹೋಗಿ ಮಲಗಲು ರಿಹರ್ಸಲ್ ಮಾಡಿರುವುದಿಲ್ಲ! ಸಂದರ್ಭ ಒದಗುತ್ತದೆ. ಅಥವಾ ನಮ್ಮ ಬೇಜವಾಬ್ದಾರಿ, ದುರಾದೃಷ್ಟ ಅಥವಾ ಪರಿಸ್ಥಿತಿಯೇ ನಮ್ಮನ್ನು ಅಲ್ಲಿ ಕೊಂಡು ಹೋಗಿ ಮಲಗಿಸುತ್ತದೆ.

ಅನಿವಾರ್ಯ ಅಂದುಕೊಂಡ ಜವಾಬ್ದಾರಿಗಳಿಂದ ಕಳಚಿಕೊಂಡು, ಕಟ್ಟಿ ಹಾಕಿದಂತೆ ಮಲಗಿರುತ್ತಾ, ಒಂದಷ್ಟು ಮಂದಿಗೆ ಟೆನ್ಶನ್ ಕೊಟ್ಟು, ಕೆಟ್ಟು ಹೋದ ದೇಹ ದುರಸ್ತಿಗೆ ವ್ಯಯಿಸುವ ದಿನಗಳು ಮೂಡಿಸುವ ವೈರಾಗ್ಯ, ಹುಟ್ಟಿಸುವ ಚಿಂತನೆಗಳು, ಮೂಡಿಸುವ ಜ್ಞಾನೋದಯಗಳು ಸ್ಮಶಾನ ವೈರಾಗ್ಯದ ಹಾಗೆ. ಅಲ್ಲಿಂದ ಜೀವಂತ ಆಚೆ ಬರುವ ಮೊದಲು  ಡಾಕ್ಟ್ರು ಹೇಳುವ ಜಾಸ್ತಿ ಕುಡೀಬೇಡಿ, ಸಿಗರೇಟ್ ಕಡಿಮೆ ಮಾಡಿ, ಒಳ್ಳೆ ಫುಡ್ ತಕ್ಕೊಳ್ಳಿ, ಧ್ಯಾನ,ಪ್ರಾಣಾಯಾಮ ಮಾಡಿ ಅಂತೆಲ್ಲ ಹೇಳುವ ಕಿವಿಮಾತುಗಳನ್ನು ಎಷ್ಟು ದಿನ, ಎಷ್ಟು ಮಂದಿ ಪಾಲಿಸ್ತಾರೆ...? ಅಲ್ವ? ಶರೀರ ನಿರಾಯಾಸವಾಗಿ ಸ್ಪಂದಿಸುವಾಗ, ಆಯಾಸ ಬಾಧಿಸದೇ ಇರುವಾಗ, ನಾವು ನಾರ್ಮಲ್ ಇದ್ದೇವೆ ಅಂತ (ಒಳಗೆ ಯಾವ್ಯಾವ ಅಂಗಗಳು ಯಾವ ಕಂಡೀಶನಲ್ಲಿವೆ ಅಂತ ತುಂಬ ಸಲ ಆರಂಭದಲ್ಲಿ ಗೊತ್ತೇ ಆಗದಿರುವುದು ಮನುಷ್ಯ ಜೀವಿಯ ದೊಡ್ಡ ದೌರ್ಬಲ್ಯ) ನಾವು ಅಂದುಕೊಂಡಿರುವಾಗ ಇಂತಹ ವೈರಾಗ್ಯ, ಇಂತಹ ಜಾಗೃತಿ, ಜಾಗ್ರತೆ, ಜ್ಞಾನೋದಯ ಎಂಥದ್ದೂ ಕಾಡುವುದಿಲ್ಲ. ಆದ್ಯತೆಗಳು ಬೇರೆಯೇ ಇರ್ತವೆ!

ದೇಹ ನಮ್ಮನ್ನು ಬಳಸಿದಾಗ, ತಿನ್ನಲು, ನಡೆಯಲು, ಮಲಗಲು, ಕೂರಲು, ಕನಿಷ್ಠ ಶೌಚಾಲಯಕ್ಕೆ ಹೋಗಲೂ ಆಗದಂಥ ಪರಿಸ್ಥಿತಿ ಕಾಡಿದಾಗ ದೇಹವೇ ಒಂದು ಹೊರೆ ಅಂತ ಎಷ್ಟು ಮಂದಿಗೆ ಅನ್ನಿಸಿರಲಿಕ್ಕಿಲ್ಲ? ಹೊಟ್ಟೆ ತುಂಬ ತಿನ್ನಲು ಬಿಡದ ಆಸಿಡಿಟಿ, ಇಷ್ಟ ಪಟ್ಟ ಆಹಾರ ಸೇವನೆಗೆ ಕೊಕ್ಕೆ ಹಾಕುವ ಮಧುಮೇಹ, ಬಿಪಿ, ಲಿವರ್ ಪ್ರಾಬ್ಲಂ, ಔಷಧಿ ಇಲ್ಲದ ಹೊರತು ಸಹಜವಾಗಿ ಸ್ಪಂದಿಸದ ಅಂಗಾಂಗಗಳ ಸಮಸ್ಯೆಗಳು ಪದೇ ಪದೇ ಕಾಡುವಾಗ ದೇಹ ಪೋಷಣೆಗೆ ನಮ್ಮ ಶ್ರಮ, ತ್ಯಾಗ, ಅನಿವಾರ್ಯ ಹೊಂದಾಣಿಕೆ ಮತ್ತು ದೇಹಕ್ಕೋಸ್ಕರ ಉಲ್ಲಾಸ ಕಳೆದುಕೊಳ್ಳುವ ಮನಸು ಎಲ್ಲ ಪಾಚಿ ಹಿಡಿದ ಬಂಡೆ ಏರುವ ಶ್ರಮದ ಹಾಗೆ... ನಾವು ಹೊರಟಲ್ಲಿಯೇ ಇದ್ದೇವೇನೋ ಅನ್ನಿಸುವಂತೆ ಮಾಡುತ್ತದೆ. ನಾಲ್ಕು ಹೆಜ್ಜೆ ನಡೆದಾಗ ಆರು ಹೆಜ್ಜೆ ಜಾರಿ ಹಿಂದೆ ಬಂದ ಹಾಗೆ. ಹೊಂದಾಣಿಕೆಯಲ್ಲಿ ಬದುಕು ಸವೆಯುತ್ತಾ ಇರುವಾಗ, ಅಭಿವೃದ್ಧಿ, ಸುಧಾರಣೆ, ಸಾಧನೆಗಳು ಆಗುವುದು ಎಲ್ಲಿಂದ?

ಮರಣಗುಂಡಿಯಲ್ಲಿ ಬೈಕ್ಕು ಎಷ್ಟೇ ವೇಗವಾಗಿ ಚಲಿಸಿದರೂ ಅದು ಆ ವರ್ತುಲ ಬಿಟ್ಟು ಮುಂದೆ ಹೋಗುವುದಿಲ್ಲ. ಅದೇ ಬೈಕ್ಕು ಇಡೀ ಜಾತ್ರೆ ಮುಗಿಯುವ ತನಕ ರಸ್ತೆಯಲ್ಲಿ ಹೋಗಿದ್ದಗೆ ಯಾವುದೋ ದೇಶ ಸೇರುತ್ತಿತ್ತು! ಅಲ್ವ? ಜೀವನ ಮಟ್ಟ ಮೇಲಕ್ಕೇರಿ ಚಲಾಯಿಸುವ ವಾಹನವನ್ನು ಬದಲಿಸಿ ಮುಂದಿನ ಹಂತದ (next level) ವಾಹನ ಖರೀದಿಸುವು ಬೇರೆ, ಅದು ಕೈಗೆಟುಕದೆ ಅಥವಾ ಪರಿಸ್ಥಿತಿ ಸ್ಪಂದಿಸದೆ ಇರುವ ವಾಹನವನ್ನೇ ರಿಪೇರಿ ಮಾಡುತ್ತಾ ದಿನದೂಡಬೇಕಾಗಿ ಬರುವುದು ಬೇರೆ. ಬಹಳಷ್ಟು ಸಲ ಕೈಕೊಡುವ ಆರೋಗ್ಯಸಹ ಹಾಗೆಯೇ, ಜೀವನದ ಪ್ರಮುಖ ಘಟ್ಟಗಳು, ಬೆಲೆಬಾಳುವ ದಿನಗಳು ರಿಪೇರಿಯಲ್ಲಿ ಅಥವಾ ಸುಧಾರಿಸುವುದರಲ್ಲಿ ಕಳೆದುಹೋಗುತ್ತವೆ.

ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬಂದಾಗಲೂ ಅಷ್ಟೇ... ಅನಾರೋಗ್ಯದಿಂದ ಗುಣಮುಖರಾಗಿ ಹೊರಗೆಬರುತ್ತೇವೆಯೇ ವಿನಃ ಚಿರಂಜೀವಿಗಳಾಗಿ ಅಲ್ಲ! ಮತ್ತಷ್ಟು ಮುಂಜಾಗ್ರತೆ, ಪಥ್ಯ, ವ್ಯಾಯಾಮದ ನಿರ್ಬಂಧಗಳಿರ್ತವೆ. ಆರ್ಥಿಕ ಖರ್ಚುಗಳೂ ಸಹಜವಾಗಿ ಬಾಧಿಸುತ್ತವೆ ಮಾತ್ರ ಅಲ್ಲ, ಶರೀರ ಮೊದಲಿನಂತಾಗಲು ಸಮಯ ಬೇಕಾಗುತ್ತದೆ, ಅಷ್ಟೂ ದಿನ ದುಡಿಮೆಯ ವೇಗವೂ ಕುಗ್ಗುತ್ತದೆ.

ಪರಿಸ್ಥಿತಿ ಹಾಗೂ ಮನಃಸ್ಥಿತಿ ಸರಿ ಇದ್ದು ರಸ್ತೆಯಲ್ಲಿ ಸೀದಾ ಮುಂದೆ ಹೋಗ್ತಾ ಇರುವುದಕ್ಕೂ, ಅಲ್ಲಲ್ಲಿ ವಾಹನ ದುರಸ್ತಿ ಮಾಡ್ತಾ ಸಂಚಾರ ಮಾಡುವುದಕ್ಕೂ ವ್ಯತ್ಯಾಸ ಇದೆ ಹೇಳಿದ್ದು. ಅತಿ ಬುದ್ಧಿವಂತೆಕೆಗಳೂ ಯಾವುದೂ ಅನಾರೋಗ್ಯ ಸಂದರ್ಭ ನೆರವಿಗೆ ಬರುವುದಿಲ್ಲ. ಸಮಯಪ್ರಜ್ಞೆ, ಸೂಕ್ತ ಚಿಕಿತ್ಸೆ ಹಾಗೂ ನಂಬಿಕೆಯಿಂದ ದೇಹ ದುರಸ್ತಿ ಆಗುತ್ತದೆ ಅಷ್ಟೇ.

ಹಾಗಂತ ಇದು ಯಾರದ್ದೋ ಒಬ್ಬನ ಗೋಳು, ಒಬ್ಬನ ಹಣೆಬರಹ, ಒಬ್ಬನನ್ನುಮಾತ್ರ ಕಾಡುವ, ಕಾಣಿಸುವ ಮತ್ತು ಕಂಗೆಡಿಸುವ ನಿದರ್ಶನಗಳಲ್ಲ. ಹಲವರ ಬದುಕಿನಲ್ಲಿ, ಯಾಕೆ, ಬಹುತೇಕ ಪ್ರತಿಯೊಬ್ಬರ ಬದುಕಿನಲ್ಲೂ ಹಾದು ಹೋಗುವ ಆಸ್ಪತ್ರೆಯ ದಿನಗಳು ಮತ್ತು ದೇಹ ದುರಸ್ತಿಯ ಕ್ಷಣಗಳು ಆ ಕ್ಷಣಕ್ಕೆ, ಆ ಹೊತ್ತಿಗೆ ಮತ್ತು ಆ ಮನಃಸ್ಥಿತಿಗೆ ಹುಟ್ಟಿಸುವ ವೈರಾಗ್ಯ, ತೋರಿಸಿಕೊಡುವ ಸತ್ಯಗಳು ಮತ್ತು ದೇಹದೆದುರು ನಾವೆಷ್ಟು ದುರ್ಬಲರು ಎಂಬ ವಾಸ್ತವ ಪ್ರಜ್ಞೆಯ ಅರಿವು ಬದುಕಿನ ಸುದೀರ್ಘ ಪಯಣದ ಪುಟ್ಟ, ಪುಟ್ಟ ವಿರಾಮಗಳು. ಬಯಸಿ ಬರುವಂಥದ್ದಲ್ಲ, ನಿರಾಕರಿಸುವಂತೆಯೂ ಇಲ್ಲ, ಆದರೆ ಮೂಡಿಸುವ ಜ್ಞಾನೋದಯಗಳು ಮಾತ್ರ ತುಂಬ ದುಬಾರಿ!

-ಕೃಷ್ಣಮೋಹನ ತಲೆಂಗಳ (17.04.2023).

 

No comments:

Popular Posts