ಕೇಳಿದ್ದು ಕಂಡ ಹಾಗೆ... ಕಾಣದ್ದನ್ನೂ ಕಾಣಿಸುವ ಶಕ್ತಿ ಕೇಳುವುದಕ್ಕಿದೆ! ಏನಂತೀರಿ?

 



ಸಣ್ಣವನಿದ್ದಾಗ ರೇಡಿಯೋದಲ್ಲಿ ಬರ್ತಾ ಇದ್ದ ಹಾಡು "ಅರ್ಪಣೇ... ನಿನಗೇ ಅರ್ಪಣೆ..." ಬಹುಶಃ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿದ ಹಾಡು... ಗುಲ್ಬರ್ಗ ಅಥವಾ ಯಾವುದೋ ಒಂದು ಸ್ಟೇಷನಿನ್ನಲ್ಲಿ ಬೆಳಗ್ಗೆ 7.45ಕ್ಕೆ ಬರ್ತಾ ಇದ್ದ ಕಾರ್ಯಕ್ರಮ. ಅದರ ಹೆಸರೇ ಅರ್ಪಣೇ ಅಂತ ಇದ್ದ ನೆನಪು. ಮೀಡಿಯಂ ವೇವ್ ಸ್ಟೇಷನ್ನಿನಲ್ಲಿ ಗರ ಗರ ಸದ್ದಿನೊಂದಿಗೆ ಅಸ್ಪಷ್ಟವಾಗಿ ಕೇಳ್ತಾ ಇದ್ದ ಆ ಹಾಡು ಯಾವ ಸಿನಿಮಾದ್ದು, ಯಾರು ನಟರು, ಸನ್ನಿವೇಶ ಎಂಥದ್ದು... ಯಾವದೂ ಗೊತ್ತಿಲ್ಲದಿದ್ದರೂ ಇಂದಿಗೂ ಆ ಹಾಡು ಕೇಳಿದಾಗ ರೇಡಿಯೋವೇ ನೆನಪಾಗ್ತದೆ!

ಮಾತ್ರ ಅಲ್ಲ. "ಬಾನ ದಾರಿಯಲ್ಲಿ ಸೂರ್ಯ ಜಾರಿ ಬಂದ..., ಅಲ್ಲೊಂದು ಲೋಕ ಉಂಟು, ಕಂದಾ... ಓ ನನ್ನ ಕಂದ..., ಅರೆರೆರೆ ಗಿಣಿರಾಮ...." ಇಂತಹ ನೂರಾರು ಹಾಡುಗಳನ್ನು ಕೇಳಿದಾಗ ರೇಡಿಯೋವೇ ನೆನಪಾಗ್ತದೆ. ಪುಟ್ಟ ಪ್ರಾಯದಲ್ಲಿ ಏಕಾಗ್ರತೆಯಿಂದ ಕೇಳಿಸುತ್ತಿದ್ದ ಪರಿಣಾಮ ಅದು. ಎಂಥದ್ದೂ ಸಮೂಹ ಮಾಧ್ಯಮ ಇಲ್ಲದ ಹೊತ್ತಿಗೆ ಪುಟ್ಟ ಪುಟ್ಟ ಮನರಂಜನೆಯನ್ನು ಪುಕ್ಕಟೆಯಾಗಿ ಹೊತ್ತು ತಂದು ಕೇಳಿಸುತ್ತಿದ್ದದ್ದು ರೇಡಿಯೋ... ಹಾಗಾಗಿ ಆ ಹಾಡುಗಳು ಇವತ್ತಿಗೆ ಕೇಳಿದರೂ ಹಳೇ ರೇಡಿಯೋ, ಹಳೆ ಮನೆ ಮತ್ತು ಹಳೆ ದಿನಗಳೇ ನೆನಪಾಗ್ತವೆ...!

ಇವತ್ತು ಟಿ.ವಿ. ಇದೆ, ಯೂಟ್ಯೂಬಿನಲ್ಲೂ ಅದೇ ಹಾಡು ಹುಡುಕಿ ಬೇಕಾದಾಗ ನೋಡಬಹುದು. ಆದರೆ "ಅರ್ಪಣೆ ನಿನಗೇ ಅರ್ಪಣೆ..." ಹಾಡಿನ ಮಾಧುರ್ಯ ರೇಡಿಯೋದಲ್ಲಿ ಕೇಳಿದ ಹಾಗೆ ದೃಶ್ಯವನ್ನು ನೋಡುವಾಗ ಸಿಕ್ಕುವುದೇ ಇಲ್ಲ.

ಕಾರಣ ಸ್ಪಷ್ಟ. ಬರಹಗಾರ ಕೆ.ಟಿ.ಗಟ್ಟಿ ಅವರು ಹೇಳುವುದು ಕೇಳಿದ್ದೆ. ನಾವು ಕಿವಿಯಿಂದ ಕೇಳುವ ವಿಚಾರಗಳು ತುಂಬ ಗಾಢವಾಗಿ ಪರಿಣಾಮ ಬೀರ್ತವಂತೆ. ಶ್ರವ್ಯವಾದ ವಿಚಾರಗಳು ತುಂಬ ಕಲ್ಪನೆಗಳಿಗೆ, ಯೋಚನೆಗಳಿಗೆ ಅವಕಾಶ ಮಾಡಿಕೊಡುವುದರಿಂದ ತುಂಬ ಆಳವಾಗಿ, ನಿಖರವಾಗಿ "ಕೇಳಿದ ವಿಚಾರಗಳು" ಮನನ ಆಗ್ತವೆ ಮತ್ತು ನೆನಪಿನಲ್ಲೂ ಇರ್ತವೆ.

ಅದೇ ಕಾರಣಕ್ಕೆ ರೇಡಿಯೋದ ಯುವವಾಣಿ, ಕೃಷಿರಂಗ, ಬಾಲವೃಂದ, ವನಿತಾವಾಣಿ, ಚಿಲಿಪಿಲಿಯ ಸಿಗ್ನೇಚರ್ ಟ್ಯೂನ್ (ಆರಂಭ ಮತ್ತು ಅಂತ್ಯದಲ್ಲಿ ಬರುವ ಸಂಗೀತದ ತುಣುಕು) ಕೇಳಿದಾಗ ಇವತ್ತಿಗೂ ಮನಸ್ಸು ಅದೇ ದಿನದತ್ತ ತೆರಳುತ್ತದೆ, ಸಮ್ಮೋಹನಕ್ಕೆ ಒಳಗಾದ ಹಾಗೆ. ನಿಜಕ್ಕೂ ಅವೆಲ್ಲ ಮನಸ್ಸಿನಲ್ಲಿ ಅಚ್ಚಾದ ಸಿಗ್ನೇಚರ್ ಟ್ಯೂನುಗಳೇ... ಆ ಸಹಿಯನ್ನು ಅಳಿಸಲು ಆಗುವುದಿಲ್ಲ. ಆ ಪುಟ್ಟ ಪುಟ್ಟ ರಾಗಗಳ ತುಣುಕುಗಳಿಗೆ ಮತ್ತೊಮ್ಮೆ ಕೃಷಿರಂಗ, ಯುವವಾಣಿ, ವನಿತಾವಾಣಿಯನ್ನು ನೆನಪಿಸುವ ಶಕ್ತಿ ಇದೆ. ಇದೇ ಕಾರಣಕ್ಕೆ ರೇಡಿಯೊ ಅಂದರೆ ಬಾಲ್ಯ, ರೇಡಿಯೋ ಅಂದರೆ ಸುಂದರ ಚೌಕಟ್ಟಿನ ಪ್ರಶಾಂತ ಬದುಕು ಎಂಬ ಹಾಗೆ ಭಾಸವಾಗುವುದು.

ಎಸ್ಪಿಬಿ, ಪಿಬಿ ಶ್ರೀನಿವಾಸ್, ರಾಜ್ ಕುಮಾರ್, ಎಸ್.ಜಾನಕಿ, ಮಹಮ್ಮದ್ ರಫಿ, ಕಿಶೋರ್ ಕುಮಾರ್ ಇವರೆಲ್ಲ ಯಾರೆಂದೇ ಗೊತ್ತಿಲದಿದ್ದರೂ ಧ್ವನಿಯಿಂದಲೇ ಗುರ್ತ ಹಿಡಿದು ಇಲ್ಲೇ ಅಕ್ಕಪಕ್ಕದ ಮನೆಯಲ್ಲಿ ಇದ್ದವರೇನೋ ಎಂಬ ಹಾಗೆ ನಾವು ಆಪ್ತತೆಯನ್ನು ಕಟ್ಟಿಕೊಂಡಿರುವುದು. ಕಾಲೇಜು ದಿನಗಳ ವರೆಗೂ ಈ ಗಾಯಕರ ಪೈಕಿ ಹಲವರ ಫೋಟೋಗಳನ್ನು ನೋಡಿದ್ದೇ ತುಂಬ ಅಪರೂಪ. ವೀಡಿಯೋ ನೋಡಲು ಅವಕಾಶ ಇರಲೇ ಇಲ್ಲ. ಆದರೂ ಧ್ವನಿಯೇ ಕಟ್ಟಿಕೊಟ್ಟ ಒಂದು ಆಪ್ತತೆ, ಒಂದು ಚಂದದ ಅನುಭೂತಿಯ ಮೆಲುಕು ಮರೆಯುವ ಕಾಲದಲ್ಲೂ ಯಾವುದನ್ನೂ ಮರೆಯದ ಹಾಗೆ ಗಟ್ಟಿಯಾಗಿ ಕಟ್ಟಿ ಇಟ್ಟಿರುತ್ತದೆ.

ಇವತ್ತು ನೋಡಿದ ಸಿನಿಮಾದ ಹೆಸರು ನೆನಪಿರುವುದಿಲ್ಲ, ಹಾಡಿನ ಸಾಲು ಮರೆತು ಹೋಗುತ್ತದೆ, ನೂರಾರು ಚಾನೆಲ್ಲುಗಳಲ್ಲಿ ಸಾವಿರಾರು ಸಿನಿಮಾಗಳು ಬರುತ್ತಲೇ ಇದ್ದರೂ ಯಾವುದನ್ನು ಆರಿಸಬೇಕು, ಯಾವುದನ್ನು ನೋಡಬೇಕು ತಿಳಿಯುವುದಿಲ್ಲ, ಅರ್ಧ ಸಿನಿಮಾ ನೋಡಿದಾಗ ಬೋರಾಗುವುದೂ ಇದೆ.

ಆದರೆ ಎಳೆವೆಯಲ್ಲಿ ಕೇಳಿದ ಹಾಡು, ಆಲಿಸಿದ ರಾಗ, ನೆನಪಿಟ್ಟ ಧ್ವನಿಗಳು, ಧ್ವನಿಯ ಏರಿಳಿತ ಮಾತ್ರ ಇಂದಿಗೂ ಮರೆತು ಹೋಗಿಲ್ಲ. ಮನಸ್ಸು ಎಂಬ ವಿಶಿಷ್ಟ ಕೋಶದಲ್ಲಿ ಧ್ವನಿ ಅಚ್ಚೊತ್ತುವ ವೈಖರಿಯೇ ತುಂಬ ಅಚ್ಚರಿ.

ರೇಡಿಯೋದಲ್ಲಿ ಮಾತನಾಡುವವರ ಶೈಲಿ, ತಪ್ಪಿಲ್ಲದೇ ವೇಗವಾಗಿ ಓದುವ ಧಾಟಿ, ಸ್ವರದ ಗಾಂಭೀರ್ಯ, ಮಾಧುರ್ಯ, ಸುಸ್ಪಷ್ಟ ಓದು ಇವೆಲ್ಲ ಬಾಲ್ಯದಲ್ಲಿ ದೊಡ್ಡ ಅಚ್ಚರಿಯಾಗಿತ್ತು. ಆಕಾಶವಾಣಿಯ ನಿರೂಪಕರ ಪರಿಚಯ ಇಲ್ಲದಿದ್ದರೂ ಮುಂದೊಮ್ಮೆ ಅಚಾನಕ್ ಅವರು ಸಿಕ್ಕಾಗ ಎಷ್ಟೋ ಕಾಲದ ಸ್ನೇಹಿತರ ಹಾಗೆ ಮಾತನಾಡುವಂಥಹ ಹಪಹಪಿಕೆ... ಕಾಣದ ಮುಖದ ಹಿಂದಿನ ಧ್ವನಿಯ ಹಿಡಿದಿಟ್ಟುಕೊಂಡ ಪರಿ ಅದು. ಇವತ್ತಿಗೂ ಕೆ.ಆರ್.ರೈಗಳು, ಕಿಣಿಯವರು, ನಾರಾಯಣಿ ಅವರು, ಮುದ್ದು ಮೂಡುಬೆಳ್ಳೆ ಅವರು, ಶಂಕರ್ ಭಟ್ರು ಅಂತ ನೆನಪಿಸಿದರೆ ಸಾಕು... ರಪಕ್ಕ ಮೊದಲು ಕಿವಿಯಲ್ಲಿ ಗುಂಯ್ಗುಡುವುದು ಅವರ ಧ್ವನಿ, ಮತ್ತೆ ಕಾಣುವುದು ಮುಖ...

ಕಾಣದ ಮುಖ, ಕಾಣದ ಚಿತ್ರ, ಕಾಣದ ಸನ್ನಿವೇಶದ ಕುರಿತು ಯೋಚಿಸುವಂತೆ, ಕಲ್ಪಿಸುವಂತೆ, ಭಾವಿಸುವಂತೆ, ಚಿಂತಿಸುವಂತೆ ಮಾಡುವ ಶಕ್ತಿ ಧ್ವನಿಗಿದೆ. ಅದು ಕರ್ಕಶವೂ ಆಗದೆ, ಭಾರವೂ ಆಗದೆ, ಅತಿರೇಕವೂ ಆಗದೆ ಆವರಿಸುವ ಭಾವದ ಕೋಟೆ. ಅದರಲ್ಲೊಂದು ಪ್ರಶಾಂತ ಸಾಂತ್ವನ ಇರ್ತದೆ, ಹಳೆಯ ನೆನಪುಗಳ ಖಜಾನೆ ಅಡಗಿರ್ತದೆ, ಬಿಟ್ಟು ಬಂದ ಮನೆ, ಸವಕಲಾದ ರಸ್ತೆ, ಹಳೆ ತೋಟ, ಮಸಿ ಹಿಡಿದ ಅಟ್ಟ, ಅಡಕೆ ಒಣಗಿಸುವ ಅಂಗಳ, ಸಾರಣೆ ಕಾಣದ ನೆಲ, ಮುಳಿ ಹುಲ್ಲಿನ ಮಾಡಿನ ಕೊಟ್ಟಿಗೆ... ಎಲ್ಲದರ ನೆನಪು ಮಸುಕು ಮಸುಕಾಗಿ ಮುಸುಕು ಹೊದ್ದು ಮಲಗಿರುತ್ತದೆ. ಒಂದು ಹಾಡು, ಒಂದು ಧ್ವನಿ, ಒಂದು ಮಾತಿನ ಪುಟ್ಟ ಸಾಲಿನ ಧ್ವನಿಮುದ್ರಿಕೆ ಮತ್ತೊಮ್ಮೆ ಮತ್ತೊಂದು ಸಾಲ ಮತ್ತದೇ ಜಾಗಕ್ಕೆ, ನೆನಪಿನ ಅಂಗಳಕ್ಕೆ ಅಯಾಚಿತವಾಗಿ ಎತ್ತಿಕೊಂಡು ಹೋಗಿ ಸುತ್ತಾಡಿಸಿ ಬರಬಹುದು. ಅದು ಧ್ವನಿಯ ಶಕ್ತಿ.. ಧ್ವನಿಯೇ ಗುರುತು ಆಗುವುದು ಹಾಗೆ. ಏನಂತೀರಿ?!

-ಕೃಷ್ಣಮೋಹನ ತಲೆಂಗಳ (08.03.2023)

No comments: