ಏ.೧೯ಕ್ಕೆ ನಮ್ಮೂರಲ್ಲಿ ಗೌಜಿಯ ಬಯಲಾಟ... ಎಲ್ಲರಿಗೂ ಸ್ವಾಗತ

ಆಟ ನಡೆಯಲಿರುವ ಮೈದಾನ...

ಆತ್ಮೀಯ ಕಲಾಭಿಮಾನಿಗಳೇ....
ನಿಮಗೆಲ್ಲ ಈಗಾಗಲೇ ತಿಳಿದಿರುವ ಹಾಗೆ ನಮ್ಮೂರಿನಲ್ಲಿ ಧರ್ಮ ಜಾಗೃತಿ ವೇದಿಕೆ ಮುಡಿಪು, ಕುರ್ನಾಡು ಗ್ರಾಮ, ಬಂಟ್ವಾಳ ತಾಲೂಕು ಇಲ್ಲಿ ಇದೇ ಬರುವ ಏ.19ರಂದು ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ ಶ್ರೀ ಹೊಸನಗರ ಮೇಳದವರಿಂದ ರಾತ್ರಿ ೮ರಿಂದ ಮುಂಜಾನೆ ವರೆಗೆ ಬೃಹತ್ ಹಾಗೂ ಅದ್ಧೂರಿಯ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಹಲವು ವಿಶೇಷ ಆಕರ್ಷಣೆಗಳನ್ನು ಈ ಬಯಲಾಟ ಒಳಗೊಂಡಿದೆ. ಬಯಲಾಟಕ್ಕೆ ಮೈದಾನ ಸಜ್ಜುಗೊಂಡಿದ್ದು ಸುಮಾರು ಎಂಟು ಸಾವಿರ ಪ್ರೇಕ್ಷರನ್ನು ನಿರೀಕ್ಷಿಸಲಾಗಿದೆ. ಬಯಲಾಟ ರಾತ್ರಿ ಎಂಟು ಗಂಟೆಯಿಂದ ಮುಂಜಾನೆ ತನಕ ಹಲವು ಆಕರ್ಷಣೆಗಳೊಂದಿಗೆ ನಡೆಯಲಿದೆ.

ಹೊಸನಗರ ಮೇಳದ ಶ್ರೀದೇವಿ ಮಹಾತ್ಮೆ....ಕಡತ ಚಿತ್ರಗಳು

ಹೊಸನಗರ ಮೇಳದ ಶ್ರೀದೇವಿ ಮಹಾತ್ಮೆ....ಕಡತ ಚಿತ್ರಗಳು

ಹೊಸನಗರ ಮೇಳದ ಶ್ರೀದೇವಿ ಮಹಾತ್ಮೆ....ಕಡತ ಚಿತ್ರಗಳು

ಹೊಸನಗರ ಮೇಳದ ಶ್ರೀದೇವಿ ಮಹಾತ್ಮೆ....ಕಡತ ಚಿತ್ರಗಳು

ಸಮರ್ಥ ಕಲಾವಿದರು-
ಕಾಲಮಿತಿ ಯಕ್ಷಗಾನವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವ ತೆಂಕು ತಿಟ್ಟಿನ ಪ್ರಸಿದ್ಧ ಶ್ರೀ ಹೊಸನಗರ ಮೇಳದವರು ಬಯಲಾಟ ನಡೆಸಿಕೊಡಲಿದ್ದಾರೆ.
ಖ್ಯಾತ ಭಾಗವತರಾದ ಪದ್ಯಾಣ ಗಣಪತಿ ಭಟ್, ಕುರಿಯ ಗಣಪತಿ ಶಾಸ್ತ್ರಿ, ರವಿಚಂದ್ರ ಕನ್ನಡಿಕಟ್ಟೆ ಇವರ ಗಾನ ವೈಭವ, ಚೈನತಕೃಷ್ಣ ಪದ್ಯಾಣ, ಬಿ.ಟಿ.ಜಯರಾಮ ಭಟ್, ಪದ್ಯಾಣ ಶಂಕರನಾರಾಯಣ ಭಟ್, ವಿನಯ ಆಚಾರ್ಯರ ಚೆಂಡೆ ಹಿಮ್ಮೇಳ   ರಂಗ ವೈಭವವನ್ನು ಸಾಕ್ಷೀಕರಿಸಲಿದೆ. ಮೇಳದ ಸಮರ್ಥ ಹಾಗೂ ತೆಂಕು ತಿಟ್ಟಿನ ಯುವ ಪೀಳಿಗೆಯ ವೇಷಧಾರಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ ವಿಷ್ಣು, ಅತಿಥಿ ಕಲಾವಿದರು, ಸಮರ್ಥ ವಾಗ್ಮಿ ವಾಸುದೇವ ರಂಗ ಭಟ್ ಬ್ರಹ್ಮನ ಪಾತ್ರದಲ್ಲಿ ಅರ್ಥಪೂರ್ಣ ಸಂವಾದ ನಡೆಸುವ ನಿರೀಕ್ಷೆ ಕಲಾಭಿಮಾನಿಗಳದ್ದು. 
ವಯಸ್ಸು ಎಪ್ಪತ್ತು ಸಂದರೂ ಹೊಸನಗರ ಮೇಳದಲ್ಲಿರುವ ಪರಂಪರೆಯ ಹಾಗೂ ಗಾಂಭೀರ್ಯತೆಗೆ ಹೆಸರಾದ ಪ್ರಖ್ಯಾತ ಹಿರಿತಲೆಮಾರಿನ ಕಲಾವಿದರಾದ ಶ್ರೀ ಸಂಪಾಜೆ ಶೀನಪ್ಪ ರೈ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು) ಹಾಗೂ ಶ್ರೀ ಶಿವರಾಮ ಜೋಗಿ ಬಿ.ಸಿ.ರೋಡ್ ಇವರ ಮಧು ಕೈಟಭರ ಪಾತ್ರ ಆಟದ ವಿಶೇಷ ಆಕರ್ಷಣೆಯೂ ಹೌದು. ಇವರಿಬ್ಬರ ಜೋಡಿ ಯುವ ಪೀಳಿಗೆಯನ್ನು ನಾಚಿಸಬೇಕು. ಅಷ್ಟು ಸಮರ್ಥ ನಿರ್ವಹಣೆಯನ್ನು ಈಗಾಗಲೇ ನೀವು ಈ ಹಿಂದಿನ ಆಟಗಳಲ್ಲಿ ನೋಡಿರುತ್ತೀರಿ.  ಬಡಗು ಮೂಲದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರ ಮೋಹಕ ಮಾಲಿನಿ, ತೆಂಕು ತಿಟ್ಟನಲ್ಲೇ ಅತ್ಯಂತ ಜನಪ್ರಿಯರಾಗಿ ಅಬ್ಬರದ ಪಾತ್ರ ನಿರ್ವಹಣೆ, ಸುಸ್ಪಷ್ಟ ಮಾತುಗಾರಿಕೆಗೆ ಹೆಸರುವಾಸಿಯಾಗಿರುವ ಸದಾಶಿವ ಶೆಟ್ಟಿಗಾರ್ ಅವರ ಮಹಿಷಾಸುರ, ಪಾತಾಳ ಪರಂಪರೆಯ ಹಿರಿಯ ಸ್ತ್ರೀವೇಷಧಾರಿ ಅಂಬಾ ಪ್ರಸಾದ ಪಾತಾಳ ಅವರ ಶ್ರೀದೇವಿ ಪಾತ್ರಗಳಿಗೆ ನೀವು ಸಾಕ್ಷಿಗಳಾಗಲಿದ್ದೀರಿ.
ಹೊಸನಗರ ಮೇಳದ ಸಮರ್ಥ ಪುಂಡು ವೇಷಧಾರಿಗಳಾದ ದಿವಾಕರ ರೈ ಸಂಪಾಜೆ ಹಾಗೂ ವೇಣೂರು ಸದಾಶಿವ ಆಚಾರ್ಯರ ಚಂಡ-ಮುಂಡರ ಅಬ್ಬರದ ಕುಣಿತ, ತೆಂಕು ತಿಟ್ಟಿನಲ್ಲಿ ಅರ್ಥಪೂರ್ಣವಾಗಿ ರಕ್ತಬೀಜನ ಪಾತ್ರ ನಿರ್ವಹಿಸುವ ಬೆರಳೆಣಿಕಯ ಪ್ರಸ್ತುತ ಕಲಾವಿದರ ಪೈಕಿ ಅಗ್ರಮಾನ್ಯರಾಗಿರುವ, ಕುಣಿತ, ವೇಷ, ಮಾತು ಮೂರರಲ್ಲೂ ಪ್ರಾವೀಣ್ಯತೆ ಹೊಂದಿರುವ ಶ್ರೀ ಸುಬ್ರಾಯ ಹೊಳ್ಳ ಸಂಪಾಜೆ ಅವರ ರಕ್ತಬೀಜನ ಪಾತ್ರ ರಂಗದಲ್ಲಿ ಮೂಡಿಬರಲಿದೆ. ಹಿರಿಯ ರಾಜವೇಷಧಾರಿ, ಬಣ್ಣದ ವೇಷಧಾರಿ ಶ್ರೀ ವೇ.ಮೂ.ಜಗದಾಭಿ ಪಡುಬಿದ್ರಿ ಅವರ ಪರಂಪರೆಯ ಗಾಂಭೀರ್ಯದ ಶುಂಭಾಸುರನ ಪಾತ್ರ, ದೇವೇಂದ್ರನ ಪಾತ್ರದಲ್ಲಿ ಹೆಸರುವಾಸಿ, ಹಿತಮಿತ ಮಾತುಗಾರಿಕೆಯ ಜಯಾನಂದ ಸಂಪಾಜೆ ಅವರ ದೇವೇಂದ್ರ ಪಾತ್ರ ರಂಜಿಸಲಿದೆ. ಉಳಿದಂತೆ ಹಾಸ್ಯಗಾರರಾದ ಬಂಟ್ವಾಳ ಜಯರಾಮ ಆಚಾರ್ಯ, ಸೀತಾರಾಮ ಕುಮಾರ್ ಕಟೀಲು, ಇತರ ಯುವ ಕಲಾವಿದರಾದ ಪ್ರಜ್ವಲ್ ಕುಮಾರ್, ರಕ್ಷಿತ್ ಶೆಟ್ಟಿ ಪಡ್ರೆ, ವಿಶ್ವನಾಥ ಎಡನೀರು, ಸಂತೋಷ್ ಎಡನೀರು, ಪ್ರಕಾಶ್ ನಾಯಕ್ ನೀರ್ಚಾಲು.... ಮತ್ತಿತರರು ಇತರ ಪಾತ್ರಗಳನ್ನು ನಿರ್ವಹಿಸುವರು.
-----------
ಆಟದ ಇತರ ಆಕರ್ಷಣೆಗಳು....
-ವಿಷ್ಣುವಿನ ನಾಭಿಯಿಂದ ಅರಳುವ ಕಮಲದಲ್ಲಿ ಬ್ರಹ್ಮ ಪ್ರತ್ಯಕ್ಷನಾಗುವುದು.
-ಸಿಂಹನೃತ್ಯ
-ಕದಂಬ ವನದಲ್ಲಿ ಶ್ರೀದೇವಿಗೆ ವಿಶೇಷ ಅಲಂಕಾರದ ಉಯ್ಯಾಲೆ
-ಹತ್ತು ಕೋಣಗಳ ಮರಿಗಳೊಂದಿಗೆ ಮಹಿಷಾಸುರನ ಪ್ರವೇಶ
-ಕದಂಬ ವನದಲ್ಲಿ ಅಲೌಕಿಕವಾದ ಪರಿಮಳ
-ಇಪ್ಪತ್ತೈದು ರಕ್ತಬೀಜಾಸುರರ ಜನನ
-ಭೂಮಿಯೊಡೆದು ಬರುವ ದೇವಿಯ ಕಾಳಿ ಅವತಾರ
-ರಕ್ತೇಶ್ವರಿ ದೇವಿಗೆ ತುಳುನಾಡಿನ ಸಾಂಪ್ರದಾಯಿಕ ನೇಮ
-ಹಾಗೂ ಸುಡುಮದ್ದಿನ ಪ್ರದರ್ಶನ.
-ಅತಿಥಿ ಕಲಾವಿದರಾಗಿ ಕುರಿಯ ಗಣಪತಿ ಶಾಸ್ತ್ರಿ, ಜಗದಾಭಿರಾಮ ಪಡುಬಿದ್ರಿ, ವಾಸುದೇವರಂಗ ಭಟ್ ಪಾಲ್ಗೊಳ್ಳುವರು.
ಒಟ್ಟಿನಲ್ಲಿ ಗೌಜಿಯ ಆಟವೊಂದಕ್ಕೆ ನೀವು ೧೯ರಂದು ಮುಡಿಪಿನಲ್ಲಿ ಸಾಕ್ಷಿಗಲಾಗಲಿದ್ದೀರಿ. ನೀವೂ ಬನ್ನಿ, ಯಕ್ಷಗಾನಾಸಕ್ತ ನಿಮ್ಮ ಬಂಧು ಮಿತ್ರರಿಗೂ ಮಾಹಿತಿ ನೀಡಿ. ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ.

----------
ಮುಡಿಪು ಎಲ್ಲಿದೆ...ಮುಡಿಪಿಗೆ ಹೋಗುವುದು ಹೇಗೆ....
ಮುಡಿಪು ಎಂಬ ಊರು ಮಂಗಳಗಂಗೋತ್ರಿ ಕೊಣಾಜೆ ವಿಶ್ವವಿದ್ಯಾನಿಲಯದಿಂದ ಸುಮಾರು ಐದು ಕಿ.ಮೀ. ದೂರದಲ್ಲಿ ವಿಟ್ಲ ರಸ್ತೆಯಲ್ಲಿ ಸಿಗುತ್ತದೆ, ಕಂಬಳಪದವು ಇನ್‌ಫೋಸಿಸ್ ಕ್ಯಾಂಪಸ್ ನಂತರದ ಸ್ಟಾಪ್ ಮುಡಿಪು. ಇದು ಮಂಗಳೂರಿನಿಂದ ಸುಮಾರು ೨೨ ಕಿ.ಮೀ. ದೂರದಲ್ಲಿದೆ. ಮಂಗಳೂರಿನಿಂದ ಸಾಕಷ್ಟು ಖಾಸಗಿ ಬಸ್ ವ್ಯವಸ್ಥೆ ಇದೆ. ಸ್ವಂತ ವಾಹನದಲ್ಲಿ ಬರುವಿರಾದರೆ ಸುಮಾರು ೩೫ ನಿಮಿಷದ ದಾರಿ. ರಾಜ್ಯ ರಸ್ತೆ ಸಾರಿಗೆ ನಿಗಮದ ೫೧ಕೆ ಸಂಖ್ಯೆಯ ಬಸ್ ಇಲ್ಲಿಗೆ ಸುಮಾರು ಮುಕ್ಕಾಲು ಗಂಟೆಗೊಂದರಂತೆ ಇದೆ.
ಅಥವಾ ಮೇಲ್ಕಾರಿನಿಂದ ಬರುವಿರಾದರೆ, ಮೇಲ್ಕಾರಿನಿಂದ (ಪಾಣೆಮಂಗಳೂರು) ಕೊಣಾಜೆ ರಸ್ತೆಯಲ್ಲಿ ಸುಮಾರು ೧೨-೧೩ ಕಿ.ಮೀ. ಬಂದಾಗ ಮುಡಿಪು ಸಿಗುತ್ತದೆ, ವಿಟ್ಲದಿಂದಲೂ ಬರಬಹುದು.
ಬರಹ, ಚಿತ್ರ-ಕೆಎಂ (ಬಲ್ಲಿರೇನಯ್ಯ ಯಕ್ಷಗಾನ ಗ್ರೂಪ್ ನಲ್ಲಿ ಪ್ರಕಟಿತ ಲೇಖನ)

No comments: