ಹ್ಯಾಪ್ಪಿ ಬಿ ಹ್ಯಾಪ್ಪಿಯೋ...happy to be alone!



ಒಂಟಿತನ ಬೇರೆ, ಏಕಾಂಗಿತನ ಬೇರೆ. ದೈನಂದಿನ ಜಂಜಾಟಗಳಲ್ಲಿ ಬೆಂದು ಮನಸ್ಸು ಹೈರಾಣಾದಾಗ ಪ್ರತಿಯೊಬ್ಬರೂ ಬಯಸುವುದು ಒಂದು ಕೂಲ್ ಕೂಲ್ ಏಕಾಂತವನ್ನು. ಆ ಏಕಾಂಗಿತನ ನಿಮ್ಮನ್ನು ನೀವು ವಿಮರ್ಶಿಸುವುದಕ್ಕೆ, ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ, ಕಳೆದುಕೊಂಡ ಎನರ್ಜಿಯನ್ನು ಮತ್ತೆ ಪಡೆದು ಬೂಸ್ಟ್ ಆಗೋದಕ್ಕೆ, ಯಾರೋ ಎರಚಿದ ಕೆಸರನ್ನು ತೊಳೆದು ಸ್ವಚ್ಛಗೊಳಿಸಿ ಮತ್ತೆ ನಿರ್ಮಲರಾಗುವುದಕ್ಕೆ ಸಹಕರಿಸೀತು....

-------





ಉಕ್ಕುವ ಸಾಗರವಿದ್ದರೂ ಕುಡಿಯಲು ನೀರಲ್ಲ ಎಂಬ ಹಾಗೆ, ಕೈತುಂಬಾ ದುಡ್ಡಿದ್ದರೂ ಖರ್ಚು ಮಾಡಲು ಯೋಗವಿಲ್ಲ ಎಂಬ ಹಾಗೆ.... ಜನಜಂಗುಳಿಯ ನಡುವೆಯಿದ್ದೂ ನಿಮಗೆ ಮಾತನಾಡಲು, ನಿಮ್ಮನ್ನು  ಕೇಳಸಿಕೊಳ್ಳಲು ಯಾರೂ ಇಲ್ಲ ಎಂದಾದರೆ ಅಲ್ಲೊಂದು ಏಕಾಂಗಿತನ ನಿಮ್ಮ ಪಾಲಿಗೆ ಹುಟ್ಟಿಕೊಂಡಿದೆ ಅಂದುಕೊಳ್ಳಬಹುದೇನೋ...ನೀವಲ್ಲಿ ಒಂಟಿಯಲ್ಲ, ಆದರೆ ಏಕಾಂಗಿಗಳು.
ಯೋಚಿಸಿ, ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಿ....ಸುಮಾರು ಸಾವಿರದಷ್ಟು ಮಂದಿ ಹಿಂದೆ ಮುಂದೆಯೇ ಕುಳಿತಿದ್ದರೂ ಯಾರದ್ದೂ ಪರಿಚಯ ಇಲ್ಲವೆಂದ ಮೇಲೆ ನೀವು ಒಂಟಿಯೇ ಅಲ್ಲವೇ.. ದೈಹಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿಯಾದರೂ...
ಅಲ್ಲಿ ನಿಮ್ಮನ್ನು ಡಿಸ್ಟರ್ಬ್ ಮಾಡಲು, ಕೆಣಕಲು, ತಲೆ ಚಿಟ್ಟು ಹಿಡಿಸಲು ಯಾರೂ ಇರುವುದಿಲ್ಲ... ನಿಮ್ಮ ಯೋಚನಾ ಸರಣಿಗಳಿಗೆ ನೀವೇ ಒಡೆಯರು.
ಕಚೇರಿಯಲ್ಲೋ, ಕ್ಲಾಸ್ ರೂಂನಲ್ಲೋ, ಹಾಸ್ಟೆಲಿನಲ್ಲೋ.... ಇಂತಹ ಏಕಾಂತ ನಿಮ್ಮ ಪಾಲಿಗೆ ಸೃಷ್ಟಿಯಾಗಬಲ್ಲುದು. ದಿನಪೂರ್ತಿ ಅದೇ ಮಾತು, ಅದೇ ಚಾಟ್, ಅದೇ ಟಿ.ವಿ., ಅದೇ ಹರಟೆ, ಕಾಲೆಳೆಯೋದು, ದೂರುವುದು, ಕಾದುವುದು, ಬಾರ್ಗೈನ್ ಮಾಡೋದು, ಅಸೂಯೆ ಪಡೋದು, ಸಂಶಯಪಡೋದು, ಬಸ್ಸಲ್ಲಿ ಸೀಟು ಹಿಡಿಯೋದು, ಇಷ್ಟ ಇಲ್ಲದ ಊಟ ಮಾಡೋದು, ಬಟ್ಟೆ ಒಗಿಯೋದು, ಕಾಫಿ ಕುಡಿದು ಮತ್ತೆ ಲೋಟ ತೊಳಿಯೋದು... ಇಷ್ಟೇನಾ.... ಇದಕ್ಕೂ ಮೀರಿದ ಒಂದು ನಿಶ್ಯಬ್ಧ ವಿಶ್ರಾಂತಿ, ಬದಲಾವಣೆ ಬೇಡವಾ...
ಅದೇ ಏಕಾಂತ...
ವಾಟ್ಸಾಪ್, ಫೇಸ್ಬುಕ್ ಬಂದ್ ಮಾಡಿ, ಚಾಟಿಂಗ್ ನಿಲ್ಸಿ, ಹರಟೆಗೆ ಫುಲ್ ಸ್ಟಾಪ್ ಇರಿಸಿ ಸ್ವಲ್ಪ ಏಕಾಂಗಿಯಾಗಿ ಕುಳಿತು ಯೋಚಿಸಿದರೆ ಮಾತ್ರ ನಿಮ್ಮ ಸ್ಟ್ರೆಂತ್, ವೀಕ್ನೆಸ್ ಗೊತ್ತಾಗೋದು. ಯಾರೋ ಹೊಗಳ್ತಾರೆ, ಯಾರೋ ಕಾಲೆಳಿತಾರೆ, ಇನ್ಯಾರೋ ಬೇಳೆ ಬೇಯ್ಸೋದಕ್ಕೆ ಬಕೆಟ್ ಹಿಡಿತಾ ಇದ್ದಾರೆ ಅಂತ ನೀವು ಅದೇ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೈಮರೆತರೆ... ನಮ್ಮ ಬಗ್ಗೆ ನಮಗೇ ಇಂಪ್ರೆಶನ್ ತಪ್ಪಿ ಹೋಗುವ ಭಯವಿದೆ ಎಚ್ಚರಿಕೆ.
-ಸಾಧಾರಣವಾಗಿ ನಮ್ಮ ಬಲ, ದೌರ್ಬಲ್ಯ ನಮಗೆ ಗೊತ್ತಿರುತ್ತೆ. ನಾವು ಹೇಗೆ ಇದ್ದೀವಿ, ಹೇಗೆ ಕಾಣಿಸ್ತೀವಿ, ನಮ್ಮ ಪರ್ ಫಾರ್ಮೆನ್ಸ್ ಏನು ಅನ್ನೋದು ನಮ್ಮ ಅಂತರಾತ್ಮಕ್ಕೆ ಗೊತ್ತೇ ಇರುತ್ತದೆ. ಈ ನಡುವೆ ಸುಖಾ ಸುಮ್ಮನೆ ಯಾರೋ ಅತಿಯಾಗಿ ಹೊಗಳ್ತಾರೆ, ವಿನಾ ತೆಗಳ್ತಾರೆ ಅಂತಾದ್ರೆ ತಕ್ಷಣಕ್ಕೆ ಉಬ್ಬುವುದೋ, ಡಿಪ್ರೆಸ್ ಆಗುವುದೋ ಬೇಕಾಗಿಲ್ಲ.....
-ಯಾರಿಂದಲೋ ನಿಮಗೆ ಸಿಟ್ಟು ಬಂದಿದೆ. ಯಾರದ್ದೋ ನಡವಳಿಕೆ ನಿಮ್ಮ ಸಿದ್ಧಾಂತಗಳಿಗೆ ವಿರುದ್ಧ ಅನ್ನಿಸಿದೆ.. ಯಾರೋ ಹೇಳಿದ ಮಾತು ನಿಮಗೆ ಹರ್ಟ್ ಮಾಡಿದೆ... ಯಾರೋ ಬೇಕೆಂದೇ ನಿಮ್ಮನ್ನು ಕೆಣಕುತ್ತಿದ್ದಾರೆ... ಹಾಗೆಂದ ಮಾತ್ರಕ್ಕೆ ತಕ್ಷಣಕ್ಕೆ ಎಗರಾಡಿ, ಹಾರಾಡಿ, ಬೈದು, ಕಿರುಚಿ, ಕಾಲರ್ ಹಿಡಿದು ಅಬ್ಬರಿಸಿ ಬೊಬ್ಬೆ ಹೊಡೆಯಬೇಕಿಲ್ಲ....
-ಯಾವುದೋ ಕೆಲಸ ಅಂದುಕೊಂಡ ಹಾಗೆ ಆಗ್ತಾ ಇಲ್ಲ. ಪದೇ ಪದೇ ವೈಫಲ್ಯ (ಆಗಾಗ ನೆಟ್ ಡಿಸ್ ಕನೆಕ್ಟ್ ಆಗಿ ಚಾಟಿಂಗ್ ಡಿಸ್ಟರ್ಬ್ ಆದ ಹಾಗೆ). ಪ್ಲಾನ್ ಪ್ರಕಾರ ಯಾವುದೂ ಮುಂದೆ ಹೋಗ್ತಾ ಇಲ್ಲ, ಅನಿರೀಕ್ಷಿತ ಸೋಲು ಬರ್ತಾ ಇದೆ.... ಆಗೆಲ್ಲಾ ಕೈಚೆಲ್ಲಿ, ನೆಗೆಟಿವ್ ಯೋಚನೆಗಳೊಂದಿಗೆ ಹತಾಶರಾಗಿ ಏನೇನೋ ಮಾಡ್ಕೊಳ್ಳೋಕೆ ಹೋಗ್ಬೇಡಿ. ಒಂದು ಸಿಟ್ಟು ಬಂತು ಕೈಲಿರೋ ಮೊಬೈಲ್ ತೆಗೆದು ಗೋಡೆಗೆ ಅಪ್ಪಳಿಸಬೇಡಿ, ಯಾರದ್ದೋ ನಂಬರ್ ಡಿಲೀಟ್ ಮಾಡಿ ಹಾಕ್ಬೇಡಿ...
-ಒಂದು ದೊಡ್ಡ ಗೆಲುವು ನಿಮ್ಮ ಕೈ ಹಿಡಿದಿದೆ. ಅನಿರೀಕ್ಷಿತವಾಗಿ ದೊಡ್ಡ ಸಾಧನೆಗೆ ಅವಕಾಶ ಸಿಕ್ಕಿದೆ. ನಿಮ್ಮನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸಿ, ಕೆಲಸ ಮಾಡಿಸಿಕೊಳ್ಳೋಕೆ ಸುತ್ತಮುತ್ತ ಜನ ರೆಡಿ ಆಗಿದ್ದಾರೆ... ಆಗಲೂ ಉಬ್ಬಿ, ಮೈಮರೆತು ಏನೇನೋ ಕೊಚ್ಚಿಕೊಳ್ಳೋಕೆ ಹೋಗ್ಬೇಡಿ.
-------------
ಮತ್ತೇನು ಮಾಡ್ಬೇಕು....
ಸ್ವಲ್ಪ ಹೊತ್ತು ಸ್ವಿಚ್ ಆಫ್ ಆಗಿ...
ಅಂದ್ರೆ ಸಣ್ಣ ವಾಕ್ ಹೋಗಿ, ಸಣ್ಣದೊಂದು ರೈಡ್ ಮಾಡಿ.... ಸ್ವಲ್ಪ ದೂರ ಡ್ರೈವ್ ಮಾಡಿ... ಅಥವಾ ಯಾರ ಕೈಗೂ ಸಿಗದೆ ಜಂಗುಳಿಗಳಿಂದ ಮರೆಯಾಗಿ ತುಂಬ ಮನಶ್ಸಾಂತಿ ಕೊಡೋ ದೇವಸ್ಥಾನವೋ, ಪಾರ್ಕೋ, ತೋಟವೋ ಎಲ್ಲಿಗಾದರೂ ಹೋಗಿ... ಒಂದು ಏಕಾಂತ ಸೃಷ್ಟಿಸಿಕೊಳ್ಳಿ. ನಮ್ಮ ಕುರಿತು ನಮಗೆ ಗೊತ್ತಿದ್ದಷ್ಟು ಇನ್ಯಾರಿಗೂ ಗೊತ್ತಿರೋಕೆ ಸಾಧ್ಯವಿಲ್ಲ. ಯಾಕೆಂದರೆ 24 ಗಂಟೆಯೂ ನಮ್ಮನ್ನು ಗಮನಿಸುತ್ತಿರುವವರು ಸ್ವತಃ ನಾವೇ ಆಗಿರುತ್ತೇವೆ. ಆದ್ದರಂದ ಸಂದಿಗ್ಧಗಳಲ್ಲಿ, ವೈಫಲ್ಯಗಳಲ್ಲಿ, ಅಸಹನೆಯಲ್ಲಿ ಮತ್ತೆ ಮೂಡ್ ಪಡೆದುಕೊಳ್ಳಲು, ಮತ್ತೆ ಬೂಸ್ಟಪ್ ಆಗಲು, ಮತ್ತೆ ಪುಟಿದೇಳಲು ನಮ್ಮದೇ ಚಿಂತನೆಗಳು, ಸಾಂತ್ವನಗಳು ಬೇಕಿರುತ್ತವೆ. 
ಸ್ವಲ್ಪ ಯೋಚಿಸಿ ನೋಡಿ... ಒಂದು ಗೊಂದಲ, ಒಂದು ಸೋಲು, ಒಂದು ಅಪಾರ್ಥದ ಸನ್ನಿವೇಶದಲ್ಲಿ ತಕ್ಷಣ ಅಲ್ಲಿಂದ ಹೋಗಿ ಕೂಲಾಗಿ ಯೋಚಿಸಿ ನೋಡಿದರೆ ಸ್ವಲ್ಪ ಹೊತ್ತಿನ ಬಳಿಕ ಅದು ಸಿಲ್ಲಿ ಅನ್ನಿಸಬಹುದು. ನಮ್ಮ ಮನಸ್ಸಿನಲ್ಲೇ ಅವುಗಳಿಗೆಲ್ಲಾ ಪರಿಹಾರ ಇರುತ್ತವೆ. ಆದರೆ, ಸೋ ಕಾಲ್ಡ್ ಬಿಝಿ ಬದುಕಿನಲ್ಲಿ ಸರಿ ತಪ್ಪುಗಳ ವಿಮರ್ಶೆಗೂ ಸಮಯ ಸಾಕಾಗದೆ, ಸ್ವವಿಮರ್ಶೆಗೆ ಅವಕಾಶ ಕೊಡುವ ಏಕಾಂಗಿತನವೇ ದೊರಕದೆ ಗುಂಪಿನಲ್ಲಿ ಗೋವಿಂದ ಆಗುತ್ತೇವೆ. ಸರಿ ತಪ್ಪು ಯೋಚಿಸದೆ ದುಡುಕಿ ಆಡಿ, ಮಾಡಿ ಮತ್ತೆ ಪಶ್ಚಾತ್ತಾಪ ಪಡುವ ಹಾಗಾಗುತ್ತದೆ.
ಅದಕ್ಕೇ ಹೇಳಿದ್ದು...
ಹ್ಯಾಪ್ಪಿ ಟು ಬಿ ಅಲೋನ್ ಅಂತ....
ನೀವು ಪ್ರತ್ಯೇಕವಾದಿಗಳಾಗಬೇಕು, ಸನ್ಯಾಸಿಯಾಗಬೇಕು, ಪ್ರತ್ಯೇಕ ಮಾರ್ಗದಲ್ಲಿ ದುರಹಂಕಾರದಿಂದ ಸಾಗಬೇಕು ಅನ್ನುವುದು ಈ ವಾಕ್ಯಾಂಶದ ಸಾರವಾಗಿರಬೇಕಿಲ್ಲ. ಏಕಾಂಗಿತನದಲ್ಲೂ ಖುಷಿಯಿದೆ, ನೆಮ್ಮದಿ ಇದೆ. ಎಷ್ಟೋ ಬಾರಿ ಅದು ಮತ್ತೆ ಬದುಕು ಮುಂದುವರಿಸಲು ಟಾನಿಕ್ ಆಗಿಯೂ ಬರಬಹುದು. ಪೆಂಡಿಂಗ್ ಇರಿಸಿದ ಎಷ್ಟೋ ವಿಚಾರಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ಪೇಸ್ ಒದಗಿಸಬಹುದು. ಹಳತೊಂದು ಕೋಪದ ಶಮನ, ಹೊಸದೊಂದು ಗೆಲವಿನ ಅಹಂಗೆ ನಿಯಂತ್ರಣ, ಬ್ರಹ್ಮಗಂಟು ಅಂದುಕೊಂಡ ಕ್ಲಿಷ್ಟ ಸಮಸ್ಯೆಯೊಂದಗ್ಗೆ ಥಟ್ಟನೆ ಪರಿಹಾರವನ್ನೂ ಏಕಾಂತ ಒದಗಿಸಬಹುದು.
ಮನಸ್ಸಿನೊಳಗಿನ ಆಪರೇಟಿಂಗ್ ಸಿಸ್ಟಂ ರಿಸ್ಟಾರ್ಟ್ ಮಾಡಲು ಸಕಾಲ ಏಕಾಂತ...
ದಿನದ ಹತ್ತು ಹಲವು ತಪ್ಪುಗಳ ಪರಾಮರ್ಶೆ, ಒಡನಾಟದ ವಿಮರ್ಶೆ, ಹೊಸ ಚಿಂತನೆಗಳ ಹುಟುಕಾಟಕ್ಕೂ ವೇದಿಕೆ ಏಕಾಂತ...
---------
ಕೆಲವೊಮ್ಮೆ ಪರಿಸ್ಥಿತಿಗೆ ಕಟ್ಟುಬಿದ್ದು ವಾಸ್ತವದ ಸತ್ಯ ಅರ್ಥ ಮಾಡ್ಕೊಂಡು ಇಷ್ಟ ಇಲ್ಲದ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಹಾಗಂತ ಬದುಕಿನ ಎಲ್ಲ ಸಂತೋಷಗಳನ್ನು, ಎಲ್ಲಾ ನೆಮ್ಮದಿ, ಏಕಾಂತ ಕಳೆದುಕೊಳ್ಳುವ ಹುಂಬತನವಾಗಲಿ, ಸತತವಾಗಿ ಆತ್ಮಸಾಕ್ಷಿಗೆ ವಿರುದ್ಧವಾಗಿ ಕಾಂಪ್ರಮೈಸ್ ಆಗಬೇಕಾಗಿಲ್ಲ ಅಲ್ವ....
-ನೀವು ನಿಮ್ಮ ಪಾಡಿಗೆ ಸ್ವಲ್ಪ ರೆಸ್ಟ್ ಬೇಕು ಅಂತ ಕೂತಿದ್ದೀರಿ... ಯಾರೋ ಒಬ್ಬ ಅನಾಸಿನ್ ಕರೆ ಮಾಡಿ ಗಂಟೆಗಟ್ಟಲೆ ಅದೂ ಇದೂ ಮಾತನಾಡಿ, ಫೋನ್ ಇಡೋದೇ ಇಲ್ಲ ಅಂತಾದ್ರೆ, ಸುಮ್ನೇ ತಲೆ ನೋಯುತ್ತಿದ್ದರೂ ಕೇಳಿಸಿಕೊಳ್ತೀರಾ ಅಥವಾ ಮರ್ಯಾದೆಯಿಂದ ಸಂಭಾಷಣೆ ಮುಗಿಸಿ ನೆಮ್ಮದಿ ಪಡ್ಕೊಳ್ತೀರೋ...
-ಯಾವನೋ ಒಬ್ಬನಿಗೆ ದೂರುವುದೇ ಕೆಲಸ. ಕಾರಣ ಇದ್ದರೂ ಇಲ್ಲದೆ ಪ್ರತಿ ದಿನ ಪಕ್ಕದಲ್ಲೇ ಕುಳಿತು ಏನನ್ನಾದರೂ ದೂರುತ್ತಲೇ ಇರ್ತಾನೆ. ನಿಮಗದು ಇಷ್ಟವಿಲ್ಲ, ಸೈಲೆಂಟ್ ಆಗಿ ಕೂರಬೇಕು ಅಂದುಕೊಳ್ತೀರಿ... ಆಗ ಏನು ಮಾಡ್ತೀರಿ. ಆ ಜಾಗ ಬದಲಿಸುತ್ತೀರಾ... ನಿಷ್ಠುರವಾಗಿ ಆತನಲ್ಲಿ ನನಗಿದೆಲ್ಲಾ ಇಷ್ಟವಿಲ್ಲ ಅಂತೀರಾ...
-ಒಬ್ಬ ಇನ್ಸೂರೆನ್ಸ್ ಪ್ರತಿನಿಧಿ ಬರ್ತಾನೆ. ಬದುಕಿನ ಬೆಲೆ ಬಗ್ಗೆ ಪಾಠ ಮಾಡ್ತಾನೆ. ಆ ಕಂಪನಿಯ ಪಾಲಿಸಿ ತಗೊಳ್ಳದಿದ್ರೆ ಬದುಕೇ ವೇಸ್ಟ್ ಅನ್ನುವಷ್ಟರ ಮಟ್ಟಿಗೆ ಕೊರೀತಾನೆ....
ಆಗ, ಪರವಾಗಿಲ್ಲ, ಈ ಪಾಲಿಸಿ ಇದ್ರೆ ಮುಂದೆ ನನಗೇ ಒಳ್ಳೇದು ಅಂತ ಕನ್ವಿನ್ಸ್ ಆದ್ರೆ ಪಾಲಿಸಿ ಮಾಡಿಸ್ತೀರೋ... ಅಥವಾ ಈಗಾಗಲೇ ಹತ್ತಾರು ಪಾಲಿಸಿ ಮಾಡಿ ಕೈಸುಟ್ಟುಕೊಂಡ್ರೂ ಬಿಡದೆ ದಾಕ್ಷಿಣ್ಯದಿಂದ ಒಳಗೊಳಗೇ ಶಾಪ ಹಾಕ್ಕೊಂಡು ಮತ್ತೊಂದು ಪಾಲಿಸಿ ಮಾಡಿಸಿಕೊಳ್ತೀರೋ...

 ಇವೆಲ್ಲಾ ಸಂದಿಗ್ಧಗಳು... ಇನ್ನೂ ಹತ್ತಾರು ಉದಾಹರಣೆ ಕೊಡಬಹುದು. ಇಲ್ಲೆಲ್ಲ ಸ್ವಂತ ನಿರ್ಧಾರ, ಸ್ವಂತ ವಿವೇಚನೆ, ಸ್ವಂತಿಕೆ ಉಳಿಸಿಕೊಳ್ಳೋದು ಮುಖ್ಯ. ಮುಖ್ಯವಾಗಿ, ಅಂತಿಮವಾಗಿ ನಮಗೆ ಕನ್ವಿನ್ಸ್ ಆಗುವ ನಿರ್ಧಾರಗಳು ಮಾತ್ರ ನಮಗೆ ಖುಷಿಕೊಬಲ್ಲವು ಅನ್ನೋದು ನೆನಪಿರಬೇಕು, ಹೊರತು ಹತ್ತಿರ ಕುಳಿತು ತಲೆ ತಿನ್ನೋನ ವೈಯಕ್ತಿಕ ಅಭಿಪ್ರಾಯಗಳಲ್ಲ ಅನ್ನುವುದು ವಾಸ್ತವ. ಇಂತಹ ನಿರ್ಧಾರಗಳಿಗೆ, ಗಟ್ಟಿತನಕ್ಕೆ ಸ್ಪೇಸ್ ಕೊಡುವ ಏಕಾಂತ ಅತ್ಯಮೂಲ್ಯ.... ಮತ್ತು ಮೆಟೀರಿಯಲಿಸ್ಟಿಕ್ ಜಗತ್ತಿನೊಳಗೆ ನಮ್ಮನ್ನು ನಾವು ಕಳೆದುಕೊಳ್ಳದಂತೆ ಕಾಪಿಡಬಲ್ಲ ಒಂದು ಅವಕಾಶವೂ ಹೌದು....

ಅಷ್ಟು ಮಾತ್ರವಲ್ಲ... ತಾವೂ ನಕ್ಕು ಸುತ್ತಲಿನವರನ್ನು ನಗಿಸುವವರೆಲ್ಲಾ ಏಕಾಂತದಲ್ಲಿ ಅಷ್ಟು ಖುಷಿ ಖುಷಿಯಾಗಿರಬೇಕಿಲ್ಲ. ಏಕಾಂತದ ಕಣ್ಣೀರನನ್ನು ಉಳಿದವರು ಕಾಣಬೇಕೆಂದೂ ಇಲ್ಲ. ಅದಕ್ಕೇ ಹೇಳಿದ್ದು ಏಕಾಂತವೊಂದು ಖಾಸಗಿ ಪ್ರಪಂಚ. ಜಗತ್ತು ನಿಮ್ಮನ್ನು ಕಾಣದಿದ್ದರೂ ನಿಮ್ಮ ನಗು, ಅಳುವಿಗೆ ನೀವೇ ಸಾಕ್ಷಿಗಳಾಗುವ ತಾಣವದು ಅಂತ...

No comments: