ಬಾನುಲಿ ಕಟ್ಟಿ ಕೊಟ್ಟ ಧ್ವನಿಯ ಜಾಡು ಹಿಡಿದು...

ಧ್ವನಿ...ಕೇವಲ ಧ್ವನಿ..
ಧ್ವನಿಯೊಂದರಿಂಗಲೇ ಕಟ್ಟಿಕೊಳ್ಳುವ ಅನುಬಂಧ ಬಾನುಲಿ. ಗ್ಲಾಮರ್ರು, ಫ್ಯಾಷನ್ನು, ರೇಟಿಂಗು, ಬ್ರೇಕಿಂಗ್ ನ್ಯೂಸು ಯಾವುದೂ ಇಲ್ಲದ ಕಾಲದಿಂದ ಇಂದಿನ ವರೆಗೂ ಕೇವಲ ಧ್ವನಿಯಲ್ಲೇ ಹಿಡಿದಿಟ್ಟುಕೊಂಡು ಲಕ್ಷಾಂತರ ಕೇಳುಗರ ಎಂದೂ ಮರೆಯದ ಮಿತ್ರ ಆಕಾಶವಾಣಿಗೆ ಇಂದಿಗೂ ಸಾಕಷ್ಟು ಅಭಿಮಾನಿಗಳಿದ್ದಾರೆ.
ಯಾವುದೋ ಧ್ವನಿ, ಯಾವುದೋ ರಾಗದ ಮಾತು, ಯಾವುದೋ ಇಷ್ಟದ ಸಾಲುಗಳು, ಯಾವುದೋ ಸಾಂತ್ವನದ, ಹಾರೈಕೆಯ, ಹಿತವಚನದ ಸುಮಧುರ, ಗಡಸು ಧ್ವನಿಗಳು ರೇಡಿಯೋ ಸೆಟ್ ನಲ್ಲಿ ಮೂಡಿ ಬರುತ್ತಿದ್ದರೆ ಆಪ್ತ ಸ್ನೇಹಿತನೊಬ್ಬ ಪಕ್ಕದಲ್ಲೇ ಕುಳಿತು ಹರಟಿದ, ಮೈದಡವಿನ ಅನುಭವ. ರೇಡಿಯೋ ಪವರ್ರೇ ಅಂತದ್ದು. 
ಇಂತಹದ್ದರಲ್ಲಿ ಹುಟ್ಟಿದಾಗಿನಿಂದ ರೇಡಿಯೋ ಕೇಳ್ಕೊಂಡೇ ಬೆಳೆದ ನನ್ನಂಥವರಿಗೆ ಅಲ್ಲಿನ ಪ್ರತಿ ಧ್ವನಿ, ಅದರ ಏರಿಳಿತ, ವೇಗದ ಜಾಡು ಹಿಡಿಯುವುದು ತುಂಬಾ ಸುಲಭ. ಅಲ್ಲಿನ ನಿರೂಪಕರನ್ನು ಕಣ್ಣಾರೆ ಕಾಣದಿದ್ದರೂ ಬಾಲ್ಯದಿಂದಲೇ ರೇಡಿಯೋದವರ ಧ್ವನಿ ಕೇಳುತ್ತಾ ಬೆಳೆದಂತೆಲ್ಲ ಅವರೆಲ್ಲ ನೋಡುವುದಕ್ಕೆ ಹೇಗಿರಬಹುದೆಂಬ ಒಂದು ಸ್ವಗತ ಕಲ್ಪನೆಯಿತ್ತು. ಪ್ರತಿ ಧ್ವನಿಯ ಹಿಂದಿನ ವ್ಯಕ್ತಿತ್ವ ಹೀಗಿರಬಹುದೇ ಎಂಬ ಹುಚ್ಚು ಕಲ್ಪನೆ ಹಾಗೂ ಅವರ ಕುರಿತು ಅಗಾಧ ಅಭಿಮಾನ...
----------

ಅಂತಹ ಮಂಗಳೂರು ಆಕಾಶವಣಿಯಲ್ಲಿ 35 ವರ್ಷಗಳಿಂದ ತಮ್ಮ ಸ್ವರದಿಂದಲೇ ಶ್ರೇಷ್ಠರಾದ ಶ್ರೀಮತಿ ಶಕುಂತಳಾ ಕಿಣಿ ಅವರು ಇಂದು (ಜ.29) ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಇದು ಸಾಕಷ್ಟು ಸೋಶಿಯಲ್ ಮೀಡಿಯಾಗಳಲ್ಲಿ ಹರಡಿರುವ ಸುದ್ದಿ ಮಾತ್ರವಲ್ಲ. ಅವರ ಅಭಿಮಾನಿ ಶಿಷ್ಯರ ಪ್ರೀತಿಯ ಬರಹಗಳು ಅವರ ಕುರಿತಿರುವ ಅಕ್ಕರೆಯನ್ನು ಸಾರಿ ಹೇಳಿವೆ...

ನಿವೃತ್ತರಾಗುತ್ತಾರೆ, ಅಥವಾ ಆಗಿದ್ದಾರೆ ಎಂಬ ಕಾರಣಕ್ಕೆ ಶ್ರೇಷ್ಠತೆಯನ್ನು ಅಳೆಯುವುದೋ, ಹೊಗಳುವುದೋ ಅಲ್ಲ. ಶ್ರೇಷ್ಠತೆಯನ್ನು ಅರ್ಹವಾಗಿ ಗಳಿಸಿದವರಿಗೆ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಪ್ರಾಮಾಣಿಕ ಸಾಧನೆ ಮಾಡಿ, ತಲುಪಬೇಕಾದವರನ್ನು ಪರಿಣಾಮಕಾರಿಯಾಗಿ ತಲುಪಿಸಿ ಸಾರ್ಥಕ್ಯ ಹೊಂದಿದವರ ಬಗ್ಗೆ ಮಾತನಾಡಲು ನಿವೃತ್ತಿ ಸಂದರ್ಭ ಒಂದು ನಪವಷ್ಟೇ...

ನನ್ನ ವಯಸ್ಸಿನಷ್ಟಾಯ್ತು ಕಿಣಿ ಮೇಡಂ ಅವರ ಸೇವಾವಧಿ. ಸುಮಾರು ಐದಾರು ವರ್ಷ ಪ್ರಾಯದವನಿರುವಾಗಲೇ ರೇಡಿಯೋ ಕೇಳಲು ಶುರು ಮಾಡಿದವರು. ಅದು ಸಹಜ ಹಾಗೂ ಬೈ ಡಿಫಾಲ್ಟ್ ಮಾಧ್ಯಮ ಕೂಡಾ ಆಗಿತ್ತು. ಕಿಣಿ, ನಾರಾಯಣಿ ದಾಮೋದರ್, ಕೆಆರ್ ರೈ, ಶಂಕರ ಭಟ್ರು, ಮುದ್ದು ಮೂಡುಬೆಳ್ಳೆ ಇಷ್ಟು ಮಂದಿಯ ಧ್ವನಿ ಯಾವ ಟೋನ್, ಯಾವ ವೇಗ, ಯಾವ ರೇಂಜಿನಲ್ಲಿ ಪ್ರಸಾರವಾದರೂ ಗುರುತಿಸಬಹುದಾದಷ್ಟು ಆಪ್ತ. ರೇಡಿಯೋ ಕೇಳ್ತಾ ಕೇಳ್ತಾ, ಚಿತ್ರಗೀತೆ, ಯಕ್ಷಗಾನ, ಮಾತುಕತೆ, ಯುವವಾಣಿ, ವನಿತಾವಣಿ, ಬಾನುಲಿ ನಾಟಕ, ಕೃಷಿರಂಗ ಆಲಿಸುತ್ತಾ ಬೆಳೆದವರಿಗೆ ಈ ಉದ್ಘೋಷಕರೆಲ್ಲ ಮನೆ ಸದಸ್ಯರೇನೋ ಎಂಬ ಭಾವ. ಅವರೆಲ್ಲ ಒಂಥರಾ ಆಕಾಶವಾಣಿಯ ಬ್ರಾಂಡ್ ಅಂಬಾಸಿಡರ್ ಗಳು... ಹಾಗೂ ನಮ್ಮ ಪಾಲಿನ ಹೀರೋಗಳು.

ಅವರೆಲ್ಲಾ ಯಾರು ಗೊತ್ತಿಲ್ಲ, ಯಾವೂರಿನವರು, ಹೇಗಿದ್ದಾರೆ, ಜೋರೋ, ಪಾಪವೋ, ನಮ್ಮನ್ನು ಕಂಡರೆ ಮಾತಾಡಿಸ್ತಾರೋ, ತುಂಬಾ ಬಿಝಿ ಇರ್ತಾರೋ... ಹೀಗೆಲ್ಲಾ ಗೊತ್ತಿಲ್ಲ. ಆದರೆ, ಕಿವಿಯೊಳಗೆ ಗುಂಯ್ ಗೊಡುವ ಈ ಐವರು ಪ್ರಧಾನ ಉದ್ಘೋಷಕರು ಮಾತ್ರ ಪರಿಚಿತರಲ್ಲದ ಚಿರ ಪರಿಚಿತರು.

ಈ ಪೈಕಿ ಮೇಲಿನವರೆಲ್ಲಾ ಈಗಾಗಲೇ ನಿವೃತ್ತರಾಗಿದ್ದು ಶಕಂತಳಾ ಕಿಣಿ ಅವರು ಮಂಗಳೂರು ಆಕಾಶವಾಣಿಯಿಂದ ನಿವೃತ್ತಿಯಾಗುವುದರೊಂದಿಗೆ ಅಲ್ಲಿನ ಎಲ್ಲಾ ಕಾಯಂ ಉದ್ಘೋಷಕರ ಸೇವಾವಧಿ ಮುಗಿದಂತಾಗಿದೆ. ದೊಡ್ಡದೊಂದು ದಶಕಗಳ ಪರಂಪರೆ ಕೂಡಾ ಇನ್ನು ನಿಶ್ಯಬ್ಧ ಎನಿಸೀತು.

----------

ಕೊಣಾಜೆಗೆ ಬಂದು ಕಲಿಯುವ ವರೆಗೂ ರೇಡಿಯೋ ಸ್ಟೇಷನ್ ಬಗ್ಗೆ, ಅಲ್ಲಿನವರ ಬಗ್ಗೆ ಏನೂ ಗೊತ್ತಿಲ್ಲ, ಯಾರದ್ದೂ ಪರಿಚಯವಿಲ್ಲ. ನಂತರ ಅಲ್ಲಿ ಕೆಲ ವರ್ಷ ಕಾರ್ಯಕ್ರಮಗಳನ್ನು ನೀಡುವ ಅವಕಾಶ ಸಿಕ್ಕಾಗಲಷ್ಟೇ ತುಂಬಾ ಮಂದಿಯ ಮುಖದರ್ಶನ, ಮಾತುಕತೆ, ಒಡನಾಟ ಅವಕಾಶ ಸಿಕ್ಕಿತು. ತುಂಬ ಮಂದಿಯ ಧ್ವನಿಗೂ, ಮುಖ ಲಕ್ಷಣಕ್ಕೂ ತುಂಬಾ ವ್ಯತ್ಯಾಸವಿದೆ ಅನ್ನಿಸ್ತಾ ಇತ್ತು. ಧ್ವನಿ ಕೇಳಿ ಕಲ್ಪಿಸಿಕೊಳ್ಳುವುದಕ್ಕೂ ಮುಖತಾ ಮಾತನಾಡುವುದಕ್ಕೂ ಇರುವ ಅಂತರ ಗೊತ್ತಾಯ್ತು. ಆದರೆ ಕೆ.ಆರ್. ರೈ ಹಾಗೂ ಶಕಂತಳಾ ಕಿಣಿ ಅವರ ಧ್ವನಿ ಕೇಳಿದ್ದಕ್ಕೂ ಅವರನ್ನು ಕಾಣುವುದಕ್ಕೂ ಹೆಚ್ಚಿನ ವ್ಯತ್ಯಾಸ ಅನ್ನಿಸಲೇ ಇಲ್ಲ. ಯಾಕೋ ಅವರ ಧ್ವನಿಗೂ ವ್ಯಕ್ತಿತ್ವಕ್ಕೂ ತಾಳಮೇಳ ಇದೆ ಅನ್ನಿಸ್ತಾ ಇತ್ತು...(ಅಫ್ ಕೋರ್ಸ್ ಬಹುತೇಕ ಇತರ ಹಿರಿಯ ನಿರೂಪಕರು, ಉದ್ಘೋಷಕರೂ ಅಷ್ಟೇ).
ಅಲ್ಲಿ ಯಾರನ್ನು ಮಾತನಾಡಿಸಿದರೂ ಸಲುಗೆಯಂದ, ಗುರ್ತದವರ ಬಳಿ ಮಾತನಾಡಿದ ಧಾಟಿ ಬಂದು ಬಿಡುತ್ತದೆ. ಯಾಕೆಂದರೇ ಕೇಳುಗರು ಅವರಿಗೆ ಅಪರಿಚಿತರಿರಬಹುದು. ಆದರೆ, ಕೇಳುಗರಿಗೆ ಅವರೆಲ್ಲಾ ತುಂಬಾ ವರ್ಷಗಳಿಂದ ಪರಿಚಿತರಲ್ವೇ...

-----------------
ಕಿಣಿಯವರು ಸಹೃದಯತೆಯಿಂದಲೇ ಗಮನ ಸೆಳೆದವರು. ಎಷ್ಟೇ ಕಿರಿಯ ನಿರೂಪಕನಾದರೂ, ಶ್ರೋತೃವನ್ನಾದರೂ ತಾಳ್ಮೆಯಿಂದ ಕರೆದು ಮಾತನಾಡಿಸುವುದು, ಹಾಸ್ಯದ ಹೊನಲು, ಪಕ್ಕಾ ಮಂಗಳೂರು ಭಾಷೆ, ಅವರದ್ದೇ ವಿಶಿಷ್ಟ ಧ್ವನಿ.... ಎಲ್ಲದರಿಂದಲೂ ಅಲ್ಲಿನ ಎಲ್ಲಾ ತಾತ್ಕಾಲಿಕ ನಿರೂಪಕರ ಜೊತೆ ತುಂಬಾ ಬೆರೆಯುವ ಗುಣ ಅವರನ್ನು ಹೆಚ್ಚು ಆಪ್ತರನ್ನಾಗಿಸಿದೆ. 

ಸುಲಲಿತ, ತಪ್ಪಿಲ್ಲದ ಸ್ಪಷ್ಟ ಭಾಷೆ, ಉಚ್ಛಾರಣೆ, ನಿಧಾನಗತಿಯ ನಿಖರ ಮಾತು, ವಿಶಿಷ್ಟ ಧ್ವನಿ, ಸಹಜವಾದ ಮೌನ ಇವೆಲ್ಲದರ ಸಮ್ಮಿಳಿತ ಅವರ ಉದ್ಘೋಷಣೆಯ ಗಾಂಭೀರ್ಯ ಎಲ್ಲ ಶ್ರೋತೃಗಳಿಗೆ ತಿಳಿದ ವಿಚಾರ. ಫೋನ್ ಇನ್ ಕಾರ್ಯಕ್ರಮಗಳಲ್ಲಿ ಜನ ಅವರೊಡನೆ ಪ್ರೀತಿಯಿಂದ ಮಾತನಾಡುವ ಶೈಲಿಯಲ್ಲೇ ಇದು ಕಂಡುಬರುತ್ತದೆ...
--------------

ಹಾಗಾಗಿ ರೇಡಿಯೋದಲ್ಲಿ ಕೇಳಿದ ಕಿಣಿಯವರ ಧ್ವನಿಗೂ ಅವರನ್ನೂ ಕಂಡು ಮಾತನಾಡಿಸಿದಾಗ ಉಂಟಾದ ಭಾವಕ್ಕೂ ಹೆಚ್ಚು ವ್ಯತ್ಯಾಸವಿರೋದಿಲ್ಲ. ತುಂಬ ಮಂದಿಗೆ ಇದೇ ಅನುಭವ ಆಗಿರಬಹುದು. ಅವರನ್ನು ಹೊಗಳೋದಕ್ಕೋ, ಅಯ್ಯೋ ಬಿಡ್ತಾರಲ್ಲಾ ಎಂಬ ಕಾರಣಕ್ಕೋ ಬರೆಯುತ್ತಿರುವುದಲ್ಲ....

ಕಿರಿಯ ನಿರೂಪಕರ ಕಾರ್ಯಕ್ರಮ ಕೇಳಿ ಅನಿಸಿಕೆ ಹೇಳುವುದು, ಯಾವುದೇ ಸಂಶಯ ಕೇಳಿದರೂ ಯೋಚಿಸಿ ಮಾಹಿತಿ ನೀಡುವುದು (ಬೇಕಿದ್ದರೆ ಬರೆದು ಕೊಡುವುದು), ಕಷ್ಟ ಸುಖ ವಿಚಾರಿಸುತ್ತಿದ್ದ ಸ್ವಭಾವ ಅವರದು. ಧ್ವನಿ, ಉದ್ಘೋಷಣೆ, ಪಾಂಡಿತ್ಯವನ್ನು ಹೆಚ್ಚು ಪ್ರಖರಗೊಳಿಸಿದ್ದು ಈ ಸಾತ್ವಿಕತೆ ಹಾಗೂ ಔದಾರ್ಯ. 

----------------
ಮನೆ, ಶಾಲೆ, ಕೆಲಸ ಮಾಡುವ ಸಂಸ್ಥೆ ಥರ ರೇಡಿಯೋ ಕೂಡಾ ಅವಿಭಾಜ್ಯ ಅಂಗವಾಗಿ ಬೆಳೆದವರನ್ನು ಅದು ಸದಾ ಕಾಡುತ್ತಿರುತ್ತದೆ. ಬದುಕಿನಲ್ಲಿ ಎಷ್ಟೋ ದೊಡ್ಡ ಪ್ರಮಾಣದ ಜನರಲ್ ನಾಲೆಡ್ಜು ಗೊತ್ತೇ ಇಲ್ಲದ ಹಾಗೆ ನಮ್ಮೊಳಗೆ ತುಂಬಿದ್ದು, ಭಾಷೆ ಕಲಿಸಿದ್ದು ರೇಡಿಯೋ ಅಂತ ಗೊತ್ತಾಗೋದೇ ಇಲ್ಲ. ದೊಡ್ಡವರಾದ ಮೇಲೆ ಬಹುಷಃ ಅರಿವಾಗಬಹುದು. ಎಳವೆಯಲ್ಲೇ ರೇಡಿಯೋ ಕುರಿತು, ರೇಡಿಯೋದಲ್ಲಿ ಕೆಲಸ ಮಾಡುವವರ ಕುರಿತು ಇರುವ ಕುತೂಹಲ, ಆಕರ್ಷಣೆ, ಪ್ರೀತಿಯೇ ಆ ಬಾಂಧವ್ಯವನ್ನು ವೃದ್ಧಿಸೋದು.

-------------
ಸಾವಿರ ಸಾವಿರ ಚಿತ್ರಗೀತೆಗಳು, ಭಾವಗಾನ, ಯಕ್ಷಗಾನದ ಹಾಡು, ಪಾಡ್ದನ, ಟಿಪಿಕಲ್ ಸಂಸ್ಕೃತ ವಾರ್ತೆ, ಪ್ರದೇಶ ಸಮಾಚಾರ, ಕಷ್ಟ ಅನ್ನಿಸ್ತಾ ಇದ್ದಾ ಇಂಗ್ಲಿಷ್ ನ್ಯೂಸ್, ಇಷ್ಟದ ಮಾತುಕತೆ, ಯುವವಾಣಿ, ಫೋನ್ ಇನ್ ಕಾರ್ಯಕ್ರಮಗಳು, ಬಾನುಲಿ ನಾಟಕ, ಚಲನಚಿತ್ರ ಧ್ವನಿವಾಹಿನಿಗಳು, ಕ್ರಿಕೆಟ್ ಕಾಮೆಂಟರಿ..... ಹೀಗೆ ಕಿಣಿಯವರಂತಹ ನೂರಾರು ಮಂದಿ ಕಂಡು ಕೇಳರಿಯದ, ಮುಖ ಪರಿಚಯವೇ ಇಲ್ಲದ ವೈವಿಧ್ಯಮಯ ಧ್ವನಿಗಳು ರೂಪಿಸಿದ ಕಾರ್ಯಕ್ರಮಗಳು ಕಾಡುತ್ತಲೇ ಇರುತ್ತವೆ...
ಅದರಲ್ಲಿ ಕೆಲವು ಮಂದಿಯ ಮುಖ ದರ್ಶನ, ಮಾತುಕತೆ ಆ ಆಪ್ತತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಅದರಲ್ಲಿ ಕಿಣಿಯವರೂ ಒಬ್ಬರು...
-------------
ಇಂದು ಸೋಶಿಯಲ್ ಮೀಡಿಯಾಗಳಿವೆ, ಮೊಬೈಲ್ ಇದೆ. ಓರ್ವ ಆರ್ ಜೆ, ವಿಜೆ ಬಗ್ಗೆ ತಿಳ್ಕೊಳ್ಳೋದು, ಮಾತಾಡೋದು, ಅವರ ಕಾರ್ಯಕ್ರಮಗಳಗೆ ಪ್ರಚಾರ ಸಿಗೋದು, ಸಂವಹನ ಏರ್ಪಡೋದು ದೊಡ್ಡ ವಿಚಾರವಲ್ಲ. ಆದರೆ, ಇವೆಲ್ಲಾ ಇಲ್ಲದ ಮೂರು ದಶಕಗಳ ಹಿಂದಿನ ಆ ಕಾಲದಲ್ಲೇ ಅಪಾರ ಶ್ರೋತೃಗಳನ್ನು ಕೇವಲ ಧ್ವನಿ ಮೂಲಕ ತಲುಪಿದವರು ಕಿಣಿ ಮೇಡಂ ಹಾಗೂ ಅವರ ಸಹವರ್ತಿಗಳು.
----------------

ಅವರು ಬಾನುಲಿ ತೊರೆದರೂ ಧ್ವನಿ ಭಂಡಾರ ಅಲ್ಲೇ ಇರುತ್ತದೆ. ಹಲವು ಚಿಂತನೆ, ಕಾರ್ಯಕ್ರಮಗಳು, ಉಳಿಸಿದ ಪರಂಪರೆ, ಭಾಷಾ ಪ್ರೀತಿ, ಅವರಿಂದ ಕಲಿತ ಶಿಷ್ಯರು... ಹೀಗೆ ಆ ಪರಂಪರೆಯ ಧ್ವನಿ ಅನುರಣಿಸುತ್ತಿರುತ್ತದೆ. ಕಾಲನ ಓಟದಲ್ಲಿ, ತಾಂತ್ರಿಕ ಬದಲಾವಣೆಯಲ್ಲಿ ಅದೇ ಕದ್ರಿ ಗುಡ್ಡದ ಕಾಂಕ್ರಿಟ್ ಕಟ್ಟದಿಂದ ಹೊರಡುವ ಬಾನುಲಿಯ ಅಶರೀರ ವಾಣಿ ಲಕ್ಷಾಂತರ ಮಂದಿಯನ್ನು ತಲಪುವ ಮತ್ತೆ ಮರಳಿ ಪ್ರೀತಿಯ ಪತ್ರಗಳನ್ನು ಹೊತ್ತು ತರುವ ಉತ್ತರ ಪಡೆಯುವ ನಿರಂತರ ಪ್ರಕ್ರಿಯೆ ಅದ್ಭುತ ಸಂವಹನ ಪ್ರಕ್ರಿಯೆ ಹಾಗೂ ಅವ್ಯಕ್ತ ಬಂಧಕ್ಕೊಂದು ನಿದರ್ಶನ.

7 comments:

Chandrashekhar, AIR Mangalore said...

Nice article Sir. She has contributed immensely for the National Public Broadcaster. He has groomed many youngsters to the tone of AIR. I often feel for not having jingles / slogans / thoughts recorded with her voice so that we could hear to her everyday. But happy to say that we have fantastic group of announcers / comperers working for us with selflessness. Hope they will go for word with the legacy adding more everyday. Congrats for the write-up

ಅನನ್ಯ said...

ಬಾನುಲಿ, ಬಾನುಲಿಯ ಉದ್ಘೋಷಕರ ಬಗ್ಗೆ ಆಪ್ತವಾದ ಬರಹ.. ಆಕಾಶವಾಣಿಯೊಂದಿಗೆ ಬೆಳೆದುಬಂದ ಪರಂಪರೆಯ ಚಿತ್ರಣ ಮನಮುಟ್ಟುವಂತಿದೆ..

- ಚಂದ್ರಶೇಖರ ಕುಳಮರ್ವ..

ಅನನ್ಯ said...

ಬಾನುಲಿ, ಬಾನುಲಿಯ ಉದ್ಘೋಷಕರ ಬಗ್ಗೆ ಆಪ್ತವಾದ ಬರಹ.. ಆಕಾಶವಾಣಿಯೊಂದಿಗೆ ಬೆಳೆದುಬಂದ ಪರಂಪರೆಯ ಚಿತ್ರಣ ಮನಮುಟ್ಟುವಂತಿದೆ..

- ಚಂದ್ರಶೇಖರ ಕುಳಮರ್ವ..

Unknown said...

Well said km.

Unknown said...

Well said km.

VISHU KUMAR said...

ಮಂಗಳೂರು ಆಕಾಶವಾಣಿ ಯಲ್ಲಿ ಸೂರ್ಯನಾರಾಯಣ ಅಡಿಗ ಅಂತ ಒಬ್ಬ ನಿರೂಪಕರಿದ್ದರು. ಈಗ ಅವರ ಬಗ್ಗೆ ನನ್ನಲ್ಲಿ ಮಾಹಿತಿಯಿಲ್ಲ. ನಾನು ಅವರನ್ನ ಭೇಟಿ ಆದಾಗ ಅವರ ದ್ವನಿ ಗೂ, ವ್ಯಕ್ತಿತ್ವಕ್ಕೂ, ಸಾಮ್ಯತೆ ಇದೆ ಅಂತ ಅನ್ನಿಸಿತ್ತು.

Thriveni said...

ಬಾನುಲಿಯ ಬಗ್ಗೆ ನಿಮ್ಮ ಬರೆಹ ಬಹಳ ಆಪ್ತವಾಯಿತು... ಅಭಿನಂದನೆಗಳು. ಶುಭಾಶಯಗಳು. ನಿಮ್ಮ ನಿರೂಪಣೆಯ ಕಾರ್ಯಕ್ರಮಗಳನ್ನೂ ಎಂದಿಗೂ ಮರೆಯುವಂತಿಲ್ಲ. ಸಂಡೇ ಟ್ಯೂನ್ಸ್ ಕಾರ್ಯಕ್ರಮ ಸದಾ ಹಸಿರು.🙏🙌🌹💐