ಗಡಿ ದಾಟಿ ಸದ್ದು ಮಾಡಿದೆ ‘ಕುಡ್ಲ’ದ ಭಾಷೆ!

ಒಂದು ಕಾಲವಿತ್ತು, ಮಂಗಳೂರು, ಉಡುಪಿ ಜಿಲ್ಲೆಗಳ ಭಾಷೆಯನ್ನು ಸಿನಿಮಾಗಳಲ್ಲಿ ಬಳಸುವುದೆಂದರೆ ಅದು- ‘ಎಂಥದು ಮಾರಾಯ’, ‘ಭಯಂಕರ ಉಂಟು ಗೊತ್ತುಂಟೊ?’ ಎಂಬಲ್ಲಿಗೆ ಸೀಮಿತವಾಗಿತ್ತು. ಇಂದು ಹಿರಿತೆರೆ, ಕಿರಿತೆರೆ ಎರಡರಲ್ಲೂ ಕರಾವಳಿ ಜಿಲ್ಲೆಗಳ ಕನ್ನಡ ಹಾಗೂ ಇಲ್ಲಿನ ಸೊಗಡು ತುಳು ಭಾಷೆಯನ್ನು ಒಂದು ಭಾಷಾ ಶೈಲಿಯಾಗಿ ಯಶಸ್ವಿಯಾಗಿ ಬಳಸಲಾಗುತ್ತದೆ. ಮಂಗಳೂರು ಕನ್ನಡವೆಂಬ ಪ್ರತ್ಯೇಕತೆಯ ಬದಲಿಗೆ ಕುಡ್ಲದ (ಮಂಗಳೂರಿನ) ಭಾಷೆಯನ್ನು ಮುಖ್ಯವಾಹಿನಿ ಆದರಿಸಿ ಪ್ರೀತಿಸತೊಡಗಿದೆ...
---------------------
ಮಂಗಳೂರು, ಉಡುಪಿ, ಕುಂದಾಪುರದ ಮಂದಿ ಬೆಂಗಳೂರಿಗೋ, ಮುಂಬೈಗೋ, ಗಲ್ಫಿಗೋ ಹೋದಾಗ ಪರಸ್ಪರ ಪರಿಚಯವಾಗಲು ಬೇರೇನೂ ಕೊಂಡಿ ಬೇಕಾಗಿಲ್ಲ. ಒಂದೇ ಭಾಷೆಯವರಿಬ್ಬರು ಪರವೂರಲ್ಲಿ ಸಿಕ್ಕಿದರೆ ‘ಈರ್ ಕುಡ್ಲದಾರ?’ (ನೀವು ಮಂಗಳೂರಿನವರ) ಎಂದು ಕೇಳಿದರೆ ಸಾಕು. ಸ್ನೇಹ ಬೆಳೆಯಲು ಬೇರೇನೂ ಬೇಡ.
 ಮಾತಿನಲ್ಲೇ ಪರವೂರ ಮಂದಿ ಕರಾವಳಿಗರನ್ನು ಗುರುತು ಹಿಡಿತಾರೆ, ಪದಗಳನ್ನು ಬಿಡಿಸಿ ಬಿಡಿಸಿ ಮಂಗಳೂರಿಗರು ಮಾತನಾಡುತ್ತಿದ್ದರೆ, ‘ನೀವು ಮಂಗ್ಳೂರವರ’ ಎಂದು ಕೇಳಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಮಂಗಳೂರಿಗರ ಗ್ರಾಂಥಿಕ ಶೈಲಿಯ ಕನ್ನಡ ಬಳಕೆಯೇ ಇದಕ್ಕೆ ಕಾರಣ. ಜೊತೆಗೆ ಮಂಗಳೂರಿನ ತುಳು, ಬ್ಯಾರಿ ಭಾಷೆ (ಮುಸ್ಲಿಮರು), ಕೊಂಕಣಿ ಹಾಗೂ ಕುಂದಾಪುರದ ಕುಂದ ಕನ್ನಡದಂತಹ ನಾಲ್ಕು ವಿಶಿಷ್ಟ ಭಾಷೆಗಳು ಈ ಮಂಗ್ಳೂರ ಕನ್ನಡ ಹಾಗೂ ಅದರೊಂದಿಗಿನ ಪದ ಬಳಕೆ ಮೇಲೆ ಅಗಾಧ ಪರಿಣಾಮ ಬೀರಿದೆ. ಮಂಗಳೂರಿಗರೂ ಕನ್ನಡಿಗರು ಹೌದು. ಆದರೆ ಯಾವುದೇ ಮಾತೃಭಾಷೆಯವನಾಗಿರಲಿ ತುಳು ಸಂಭಾಷಣೆಯನ್ನೇ ಹೆಚ್ಚು ಕಂಫರ್ಟೇಬಲ್ ಅಂದುಕೊಂಡಿರುತ್ತಾನೆ!
ಗಡಿ ದಾಟಿದೆ ಕುಡ್ಲದ ಭಾಷೆ: ಕಳೆದ ಕೆಲವು ವರ್ಷಗಳಿಂದ ಬಂದ ಸಿನಿಮಾಗಳು, ಕಿರಿತೆರೆ ಧಾರಾವಾಹಿಗಳೂ ಮಂಗ್ಳೂರಿನ ಕನ್ನಡ, ತುಳು ಶೈಲಿಯ ಸಂಭಾಷಣೆ, ಹಾಡಿನ ಸಾಹಿತ್ಯ ಬಳಸಿ ಯಶಸ್ವಿಯಾಗಿ ರಾಜ್ಯ ವ್ಯಾಪಿ ಪ್ರೇಕ್ಷಕರನ್ನು ತಲುಪಿದೆ. ಇತ್ತೀಚೆಗೆ ಬಂದ ‘ರಂಗಿತರಂಗ’ ಹಾಗೂ ‘ಉಳಿದವರು ಕಂಡಂತೆ’ ಚಿತ್ರಗಳು ಇದಕ್ಕೆ ಅತ್ಯಂತ ಯಶಸ್ವಿ ಉದಾಹರಣೆ. ಮಂಗಳೂರು ಮೂಲದವರು ಈ ಸಿನಿಮಾ ನಿರ್ಮಿಸಿದ್ದೂ ಇದಕ್ಕೆ ಕಾರಣವಿರಬಹುದು.
ಭಾಷೆಯನ್ನು ಅಪಭ್ರಂಶಗೊಳಿಸದೆ ಆಯಾ ಪ್ರಾದೇಶಿಕ ಸೊಗಡಿನಲ್ಲೇ ಕಟ್ಟಿಕೊಟ್ಟರೆ ಅದು ಯಾರನ್ನೂ ನೋಯಿಸುವುದಿಲ್ಲ, ಮಾತ್ರವಲ್ಲ ಪರವೂರ ಮಂದಿಗೂ ಆ ಭಾಷೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ‘ರಂಗಿತರಂಗ’ದಿಂದ ಮನೆ ಮಾತಾದ ‘ಡೆನ್ನಾನ ಡೆನ್ನಾನಾ.... ಗುಡ್ಡೇಡ್ ಭೂತಾ ಉಂಡುಗೇ...’ ಸಾಲುಗಳು ಕರಾವಳಿಯ ಜನಪ್ರಿಯ ‘ಪಾಡ್ದನ ಶೈಲಿ’ಯನ್ನು ಅಳವಡಿಸಿಕೊಂಡ ಹಾಡು.
ದಶಕದ ಹಿಂದೆ ಬಂದ ಗಣೇಶ್ ಅಭಿನಯದ ‘ಕೃಷ್ಣ’ ಚಿತ್ರದಲ್ಲಿ ‘ಗೊಲ್ಲರ ಗೊಲ್ಲ ಇವನು ಗೋಪಿ ಲೋಲ ಮುರಾರಿ...’ ಹಾಡಿನಲ್ಲೂ ಪಾಡ್ದನದ ಸಾಲುಗಳಿವೆ. ವಿ.ಮನೋಹರ್ ಸಂಗೀತ ನಿರ್ದೇಶನದ ಕಾರಂತರ ಕಾದಂಬರಿ ಆಧರಿಸಿದ ‘ಚಿಗುರಿದ ಕನಸು’ ಚಿತ್ರದಲ್ಲೂ ‘ಸಿಂಗಾರ ಕಣಕಣದಲ್ಲಿ...’ ಹಾಡಿನಲ್ಲೂ ತುಳು ಪಾಡ್ದನದ ಸಾಲುಗಳಿವೆ. ಕರಾವಳಿಯ ಯಕ್ಷಗಾನದ ಸ್ಟೆಪ್ ಹಾಗೂ ಹಾಡುಗಳನ್ನು ಬಳಸಿದ ಚಿತ್ರಗೀತೆಗಳಿಗೆ ಲೆಕ್ಕವಿಲ್ಲ.
ಕನ್ನಡಕ್ಕೆ ಸೀಮಿತವಲ್ಲ: ಈ ಪ್ರಯೋಗ ಸ್ಯಾಂಡಲ್ ವುಡ್‌ನಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಹಿಂದಿ ಸಿನಿಮಾದಲ್ಲೂ ಗುಜರಾತಿ, ಮರಾಠಿ, ಬೆಂಗಾಳಿ, ಉರ್ದು , ತಮಿಳು, ಮಲೆಯಾಳಂ ಭಾಷೆಗಳನ್ನು ಸಮರ್ಥವಾಗಿ ಹಾಗೂ ಆಯಾ ಪ್ರಾದೇಶಿಕ ಸೊಗಡಿನಲ್ಲೇ ಬಳಸಲಾಗುತ್ತಿದೆ. ಪ್ರೇಕ್ಷಕರೂ ಅದನ್ನು ಸ್ವೀಕರಿಸಿದ್ದಾರೆ.
ಕನ್ನಡ ಸಿನಿ ರಂಗವೂ ಮಂಗ್ಳೂರು ಕನ್ನಡ, ಮಂಡ್ಯ ಕನ್ನಡ, ಧಾರವಾಡ ಕನ್ನಡಗಳ ಶೈಲಿ ಅಳವಡಿಸಿಕೊಂಡಿರುವುದು ಇದೇ ಫಾರ್ಮುಲಾ ಬಳಸಿಕೊಂಡು. ಗಂಗಾವತಿ ಪ್ರಾಣೇಶ್ ಅವರು ಉತ್ತರ ಕರ್ನಾಟಕ ಭಾಷೆಯಲ್ಲೇ ಜೋಕು ಹೇಳಿದರೂ ಜನ ನಗುವುದಕ್ಕೆ ಕಾರಣ ಆ ಶೈಲಿಯನ್ನು ಕೇಳಲು ರೂಢಿಯಾಗಿರುವುದರಿಂದ ಎನ್ನುವುದನ್ನು ಮರೆಯುವ ಹಾಗಿಲ್ಲ. ಜೊತೆಗೆ ಇಂತಹ ಭಾಷೆ ಬಳಸಿದ ಸಿನಿಮಾಗಳ ಮಾರುಕಟ್ಟೆಯೂ ಆಯಾ ಜಿಲ್ಲೆಗಳ ಗಡಿ ಮೀರಿ ವಿಸ್ತರಣೆಯಾಗುತ್ತಿದೆ.
ಮಂಗಳೂರು ಭಾಗದ ಕನ್ನಡ ಹಾಗೂ ತುಳುವಿನಲ್ಲಿ ಬಳಕೆಯಾಗುವ ‘ಬೋಡ ಶೀರಾ’, ‘ಎಂಚಿ ಸಾವುಯಾ’, ‘ಎಂಥ ಅವಸ್ಥೆ ಮಾರಾಯ...’ ಇತ್ಯಾದಿ ಪದಪುಂಜಗಳು ‘ಉಳಿದವರು ಕಂಡಂತೆ’ ಮತ್ತಿತರ ಚಿತ್ರಗಳಲ್ಲಿ ಧಾರಾಳ ಬಳಕೆಯಾಗಿವೆ. ಹಾಸ್ಯದ ಉದ್ದೇಶದಿಂದ ಕನ್ನಡ ಸಂಭಾಷಣೆಯ ಜೊತೆಗೇ ಇವನ್ನು ಬಳಸಲಾಗುತ್ತಿದೆ.
ಕಿರುತೆರೆಗೂ ಬಂತು: ಇದೇ ಮಾನದಂಡ ಇಟ್ಟುಕೊಂಡು ಕಿರುತೆರೆಯಲ್ಲೂ ಮಂಗ್ಳೂರ ಕನ್ನಡ, ತುಳು ಬಳಕೆಗೆ ಸಾಕಷ್ಟು ವೇದಿಕೆ ಕಲ್ಪಿಸಲಾಗಿದೆ.
ನಟ ಸೃಜನ್ ಲೋಕೇಶ್ ನಿರ್ಮಿಸುತ್ತಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಜಾ ಟಾಕೀಸ್’ನಲ್ಲಿ ಮಂಗಳೂರಿನ ನಟ ನವೀನ್ ಡಿ. ಪಡೀಲ್ ಕೆಲ ಕಾಲ ಭಾಗವಹಿಸಿ ಮಂಗ್ಳೂರ ಭಾಷೆ ಮಾತನಾಡಿದ್ದರು, ಪ್ರೇಕ್ಷಕರನ್ನು ನಗಿಸಿದ್ದರು. ಸುವರ್ಣ ವಾಹಿನಿಯಲ್ಲಿ ‘ಪಂಚರಂಗಿ ಪೋಂ ಪೋಂ’ ಧಾರಾವಾಹಿಯಲ್ಲಿ ನಟ ರಾಘವೇಂದ್ರ ರೈ ಅವರೂ ಇದೇ ಮಂಗ್ಳೂರ ಕನ್ನಡ ಬಳಸಿ ಗಮನ ಸೆಳೆದಿದ್ದರು. ಇದೇ ಮಾದರಿಯಲ್ಲಿ ಈಗ ‘ಮಂಗ್ಳೂರು ಹುಡುಗ, ಧಾರಾವಾಡ ಹುಡುಗಿ’ ಮಾದರಿಯ ಧಾರಾವಾಹಿಗಳು ಬರುತ್ತಿವೆ. ರಿಯಾಲಿಟಿ ಶೋಗಳಲ್ಲೂ ಅಷ್ಟೇ, ಮಂಗಳೂರು, ಉಡುಪಿ ಭಾಗದ ಸ್ಪರ್ಧಿಗಳು ತುಳುವಿನಲ್ಲೇ ಮಾತನಾಡುವುದು, ಇಲ್ಲಿನ ಕನ್ನಡ ಶೈಲಿ ಬಳಸುವುದೂ ಸಹಜವಾಗಿ ಹೋಗಿದೆ. ಝೀ ಕನ್ನಡದಲ್ಲಿ ಬರ್ತಾ ಇರುವ ‘ಕಾಮಿಡಿ ಕಿಲಾಡಿಗಳು’ ಎಪಿಸೋಡುಗಳಲ್ಲೂ ಮಂಗ್ಳೂರು ಕನ್ನಡ ಧಾರಾಳ ಬಳಕೆಯಾಗಿದ್ದು, ತೀರ್ಪುಗಾರರನ್ನೂ ಆಕರ್ಷಿಸಿದೆ.
ಹಿಂದೆಯೂ ಬಂದಿತ್ತು: ವರ್ಷಗಳ ಹಿಂದೆ ಬಂದ ಕಾಶಿನಾಥ್ ಅಭಿನಯದ ‘ಲವ್ ಮಾಡಿ ನೋಡು’ ಚಿತ್ರದ ನಾಯಕ ‘ಮಂಗಳೂರು ಮಂಜುನಾಥ’ನ ಮಾತು, ಉಪೇಂದ್ರ ಅಭಿನಯದ ‘ಬುದ್ಧಿವಂತ’ ಸಿನಿಮಾದ ನಾಯಕ ‘ನಾನವನಲ್ಲ, ನಾನವನಲ್ಲ’ ಅನ್ನುವಂಥ ಡೈಲಾಗ್‌ಗಳು ಜನಪ್ರಿಯವಾಗಿದ್ದವು.
ಯಶಸ್ಸಿನ ಹಿಂದಿರುವವರು...: ಒಂದು ಪ್ರದೇಶದ ಭಾಷೆಯನ್ನು ಅರ್ಧರ್ಧ ತಿಳಿದವರು ಬಳಸಿ ಹಾಸ್ಯ ಮಾಡುವುದಕ್ಕೂ, ಅದೇ ಊರಿನಿಂದ ಬಂದವರು ಸಮರ್ಥವಾಗಿ ಬಳಸುವುದಕ್ಕೂ ವ್ಯತ್ಯಾಸವಿದೆ. ಎರಡನೇ ವಿಭಾಗದಿಂದ ಈ ಭಾಷೆ ಉಳಿದವರಿಗೂ ಚೆನ್ನಾಗಿ ತಿಳಿಯುತ್ತದಲ್ಲದೆ, ಅಪಭ್ರಂಶವಾಗುವುದು ತಪ್ಪುತ್ತದೆ. ಕರಾವಳಿ ಭಾಗದಿಂದ ಹೋದ, ಮಂಗ್ಳೂರು ಭಾಷೆಯನ್ನು ಹತ್ತಿರದಿಂದ ಬಲ್ಲ ಗುರುಕಿರಣ್, ವಿ.ಮನೋಹರ್, ರಕ್ಷಿತ್ ರೈ, ಅನೂಪ್ ಭಂಡಾರಿ ಮತ್ತಿತರ ಪ್ರತಿಭೆಗಳೂ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿವೆ.

--------------

ಕನ್ನಡ ಇಂಡಸ್ಟ್ರಿಯಲ್ಲಿ ತುಳುವಿನವರೂ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಇಂತಹ ಬದಲಾವಣೆ ಆಗುತ್ತಿದೆ. ಅನೂಪ್ ಭಂಡಾರಿ ಮತ್ತಿತರರು ಕರಾವಳಿಯವರೇ ಆಗಿರುವುದರಿಂದ ಇಂತಹ ಪ್ರತಿಭಾವಂತರಿಗೆ, ಹುಟ್ಟಿದ ನಾಡಿಗೆ ಕೊಡುಗೆ ಕೊಡಬೇಕು ಎಂಬ ತುಡಿತ ಇರುವುದರಿಂದ ಇಂತಹ ಪ್ರಯೋಗ ಮಾಡಿದ್ದಾರೆ. ಮಂಗಳೂರು ಭಾಗದ ಪ್ರೇಕ್ಷಕರಿಗೆ ಇಷ್ಟವಾದ ವಿಷಯವನ್ನು ಇಡೀ ರಾಜ್ಯದ ಮಾಸ್ ಆಡಿಯನ್ಸ್‌ಗೆ ತಲುಪಿಸುವಲ್ಲಿ ಇಂತಹ ಪ್ರಯೋಗ ಸಹಕಾರಿ. ಈಗ ಕನ್ನಡದವರೂ ತುಳುವಿನ ವಿಶೇಷ ಡಯಲಾಗ್ ಬಂದರೆ ಕೇಳಲು ಆಸಕ್ತಿ ತೋರಿಸುತ್ತಾರೆ. ಸಾಹಿತ್ಯಿಕವಾಗಿ ಒಂದು ಭಾಷೆಯವರು ಮತ್ತೊಂದು ಭಾಷೆಯನ್ನು ಪ್ರೀತಿಸಬೇಕು. ಅದು ಭಾಷೆಗಳ ಬೆಳವಣಿಗೆಗೆ ಸಹಕಾರಿ.
-ಶಶಿರಾಜ್ ಕಾವೂರು, ತುಳು ಚಿತ್ರಸಾಹಿತಿ.
----------
-ಕೃಷ್ಣಮೋಹನ ತಲೆಂಗಳ.

No comments: