ಫಸ್ಟು ಬಸ್ಸಿಗೆ ಸರಿ ಮಿಗಿಲುಂಟೇ...?

ಆಗ ತಾನೆ ಮಿಂದು ಬಂದವಳಂತೆ ಮೈಯ್ಯಿಂದ ತೊಟ್ಟಿಕ್ಕುವ ಹನಿಗಳು, ಸ್ಫಟಿಕದಂತೆ ಸ್ವಚ್ಛಂದವಾಗಿ ಹೊಳೆಯುವ ಕನ್ನಡಿಗಳು... ತೊಳೆದು ಶುಚಿಯಾದ ಕಪ್ಪು ಚಕ್ರಗಳು, ಮೈಲಿಗಟ್ಟಲೆ ಪ್ರಯಾಣಕ್ಕೆ ಸಿದ್ಧವಾದ ಧೀರೋದ್ದಾತ ಭಂಗಿ, ಡ್ರೈವರ್ ಮಾಮನ ಪಕ್ಕದ ದೇವರ ಫೋಟೋಗೆ ಹಾಕಿದ ಕೆಂಪು ದಾಸವಾಳ, ಕನಕಾಂಬರ ಹೂಗಳ ತೊನೆಯುವ ಮಾಲೆ... ಪರಿಸರವೆಲ್ಲಾ ಘಂ ಅನಿಸುವ ಅಗರಬತ್ತಿ ಸುವಾಸನೆಯ ಭಕ್ತಿ ಭಾವ ಪರಾಕಾಷ್ಠೆ...!

ಹೌದು, ಫಸ್ಟ್ ಬಸ್ಸಿನ ಪ್ರಯಾಣ ಆರಂಭಕ್ಕೂ ಮೊದಲು ಬೆಳ್ಳಂಬೆಳಗ್ಗೆ ೬ಗಂಟೆಗೋ, ೬.೩೦ಕ್ಕೋ ಯಾವುದೇ ಊರಿಗೆ ಹೋದರೂ ಕಾಣುವ ದೃಶ್ಯವಿದು... ಪಾತ್ರಗಳು, ಬಸ್ಸಿನ ಬಣ್ಣ, ಹಾಕಿದ ಮಾಲೆ, ಓಡುವ ರೂಟು ಬದಲಾಗಬಹುದು... ಆದರೆ ಫಸ್ಟು ಬಸ್ಸಿನ ಪ್ರಯಾಣದ ಸುಖ ಮಾತ್ರ ಅಷ್ಟೇ ತಾಜಾ.. ಅಷ್ಟೇ ಆಹ್ಲಾದಕರ ಅಷ್ಟೇ ಥಂಡ ಥಂಡ ಕೂಲ್ ಕೂಲ್, ಅಲ್ವ?


ಮಧುರ ಅನುಭೂತಿ: ಯಾಂತ್ರಿಕ ಬದುಕಿನ ಏಕತಾನತೆ ಕಳೆಯಬಲ್ಲ ಕೆಲವು ಅನುಭೂತಿಗಳಲ್ಲಿ ಫಸ್ಟ್ ಬಸ್ಸಿನ ರೂಟ್ ಪ್ರಯಾಣವೂ ಒಂದು. ಈಗೀಗ ಕಾರು, ಬೈಕುಗಳ ಸಂಖ್ಯೆ ಜಾಸ್ತಿಯಾದಂತೆ ಧಾವಂತದಲ್ಲಿ ಎದ್ದು ನಾಲ್ಕಾರು ಮೈಲಿ ಟಾರ್ಚು ಲೈಟು ಹಿಡ್ಕೊಂಡು ನಡೆದು ನದಿ ಪಕ್ಕದ ಬಸ್ ಸ್ಟಾಂಡಿನೆದುರು ನಿಂತ ಫಸ್ಟ್ ಬಸ್ಸೇರಿ ಸಿಟಿಗೆ ಹೋಗುವವರ ಸಂಖ್ಯೆ ಕಡಿಮೆ ಇರಬಹುದು. ಒಂದು ಕಾಲದಲ್ಲಿ ಅದೊಂದು ಮಹತ್ಸಾಧನೆ...ದೂರದೂರಿಗೆ ಹೋಗುವ ತುಸು ಉದ್ವೇಗ, ಬಸ್ ಸಿಗ್ತದೋ ಇಲ್ಲವೋ ಎಂಬ ಟೆನ್ಶನ್ನು, ಕೈಲಿ ಮಣಭಾರದ ಬ್ಯಾಗುಗಳು, ಕೊರೆಯುವ ಚಳಿ, ಬಗಲಲ್ಲಿ ಮಕ್ಕಳು, ಮರಿಗಳು... ಹಾಗೂ ಹೀಗೂ ಏರಿ, ದಿಣ್ಣೆ ದಾಟಿ, ಹಳ್ಳ ತೊರೆ ಕಳೆದು... ಡಾಂಬರು ರಸ್ತೆಯ ಪಕ್ಕ ರಾತ್ರಿಯೆಲ್ಲಾ ಹಾಲ್ಟ್ ಮಾಡಿ ಇನ್ನೇನೂ ಹೊರಡುವ ಔದಾಸೀನ್ಯದಲ್ಲಿರುವ ಬಸ್ಸನ್ನು ಏರಿದಾಗಲೇ ಢವಗುಟ್ಟುವ ಎದೆ ಹದಕ್ಕೆ ಬರೋದು! 


ಕೊನೆಗೂ ಬಸ್ಸು ಸಿಕ್ಕಿ, ಅಲ್ಲೊಂದು ಸುರಕ್ಷಿತ ಸೀಟೂ ಸಿಕ್ಕಿ ಉಸ್ಸಪ್ಪ ಅಂದಾಗ ಸಮಾಧಾನ ಆಗೋದು. ಬೆಳಗ್ಗಿನ ಬಸ್ಸೇ ಹಾಗೆ. ನಿದ್ರೆ ಕಳೆದು ಖುಷಿ ಖುಷಿಯಾದ ಭಾವ, ಬೆಳಗ್ಗಿನ ಸೂರ್ಯೋದಯ, ಜೊತೆಗೆ ನಸು ಮಂಜು, ವೈಪರ್ ಹಾಕದಿದ್ರೆ ದಾರಿ ಕಾಣದೇನೋ ಎಂಬಂಥ ತುಸು ಮಂಜು, ಹಗಲಿಡೀ ಕಾಡಿ ಸುಸ್ತಾಗಿ ತಲೆ ಮರೆಸಿದ ರಸ್ತೆ ಬದಿಯ ಧೂಳು, ಬೇಗ..ಬೇಗ... ರೈಟ್ ರೈಟ್ ಎಂಬ ಧಾವಂತವಿಲ್ಲದೆ ನಿಧಾನಕ್ಕೆ ಹೊರಡುವ ಗಾಡಿಯ ವೇಗ... ಅಷ್ಟೇನು ರಶ್ಶಿಲ್ಲದೆ ಬೇಕಾದ ಸೀಟಲ್ಲಿ ಕೂರಬಲ್ಲ ವಿಶೇಷ ಅವಕಾಶ ಸಿಗೋದಿದ್ರೇ ಅದು ಫಸ್ಟ್ ಬಸ್ಸಿನಲ್ಲಿ ಮಾತ್ರ, ಅಲ್ವ?


ಎಲ್ಲಿಗೋ ಪಯಣ...: ಅದೆಷ್ಟು ಮನೆಯ ತರಕಾರಿ, ಹಾಲು ಪೇಟೆಗೆ ಸೇರಬೇಕೋ? ಅದೆಷ್ಟು ಮಂದಿ ನೆಂಟರು, ಇಷ್ಟರ ಮನೆ ಸೇರಬೇಕೋ? ಅದೆಷ್ಟು ಮಂದಿಯ ಮನಗಳು ಬೆಚ್ಚಗಿನ ಕೆಲಸದ ಕನಸು ಹೊತ್ತು ದೂರದೂರು ತಲುಪಬೇಕೋ? ವಾರದ ರಜೆಗೆಂದು ಬಂದು ಅತ್ತು ಕರೆದು ಮನಸ್ಸಿಲ್ಲದ ಮನಸ್ಸಿಂದ ಹೊರಟು ದೂರದ ಹಾಸ್ಟೆಲ್ಲಿಗೆ, ಕಾಲೇಜಿಗೆ ಫಸ್ಟು ಬಸ್ಸಿನಲ್ಲೇ ಹೋಗಿ ಮುಟ್ಟಬೇಕಾದ ಇನ್ನೆಷ್ಟು ಮಂದಿ ಇದ್ದಾರೋ? ಅಲ್ಲೆಲ್ಲ ಗಂಭೀರ ಮೌನದ ಹಿಂದಿನ ಅಷ್ಟೂ ಮನಸ್ಸುಗಳು ಮುಂಜಾವಿನ ಸೂರ್ಯೋದಯದ ಜೊತೆಗೇ ಮನೆ ಬಿಟ್ಟು ತಮ್ಮೂರು ಬಿಟ್ಟು ಮತ್ತೊಂದೆಡೆ ಸಾಗಬೇಕಾದ ಖುಷಿಗೋ, ದುಖಕ್ಕೋ ನೆಚ್ಚಿಕೊಂಡಿರೋದು ಫಸ್ಟು ಬಸ್ಸನ್ನೇ...


ಟೈರು ಸರಿ ಇದೆಯಾ, ಡೀಸೆಲ್ ಲೀಕ್ ಆಗ್ತಿದೆಯಾ, ಟಿಕೆಟ್ ಬುಕ್ಕು ಸಾಕಷ್ಟಿದೆಯಾ ಅಂತ ಠೀವಿಯಿಂದ ಚೆಕ್ ಮಾಡಿ ಬಸ್  ಹತ್ತುವ ಡ್ರೈವರ್, ಕಂಡಕ್ಟರ್ ಮಾಮಂದಿರೇ ಚಿಕ್ಕವರಿದ್ದಾಗ ನಮ್ಮ ಪಾಲಿಗೆ ದೊಡ್ಡ ಹೀರೋಗಳು, ಹಿಡಿಯಷ್ಟು ದೊಡ್ಡದ ಸ್ಟಿಯರಿಂಗ್ ತಿರುಗಿಸಿ, ಒಂದಷ್ಟು ಹೊತ್ತು ಬಸ್ಸನ್ನು ಸ್ಟಾರ್ಟಿಂಗ್ ಮೋಡ್‌ನಲ್ಲಿಟ್ಟು ವಾಮ್ ಅಪ್ ಮಾಡುವ ಗತ್ತು ಗೈರತ್ತು ಕಂಡು, ಆದರೆ ಡ್ರೈವರೇ ಆಗಬೇಕೆಂಬ ಕನಸು ಕಂಡಿದ್ದು ಇಂತಹದ್ದೇ ಫಸ್ಟ್ ಬಸ್ಸಿನಲ್ಲಿ.
ಆ ಬಸ್ ಕೈಕೊಟ್ಟರೆ, ಅರ್ಧದಲ್ಲಿ ಠಿಕಾಣಿ ಹೂಡಿದರೆ ಅಷ್ಟೂ ಮಂದಿಯ ಎಷ್ಟೆಷ್ಟೋ ಕನಸುಗಳಿಗೆ ಕೊಕ್ಕೆ ಖಂಡಿತ. ಫಸ್ಟ್ ಟ್ರಿಪ್ಪಾದ ಕಾರಣ ಸೆಕೆಂಡಿಗೂ ಚ್ಯುತಿಯಾಗದಂತೆ  ಸಮಯ ಪಾಲಿಸುವ ಡ್ರೈವರ್, ಕಂಡಕ್ಟರ್‌ಗಳು ಮುಂದಿನ ಸಾಟ್ಪಿನಲ್ಲಿ ಕಾಲು ಗಂಟೆ ಚಹಾ ಕುಡಿಯಲು ನಿಲ್ಲಿಸೋದು ಬೇರೆ ವಿಷಯ.
ಫಸ್ಟ್ ಸ್ಟಾಪಿನಿಂದ ಹೊರಡುವ ಅಷ್ಟೂ ಮಂದಿ ಅದೇ ಊರಿನವರಾಗಿರುವುದರಿಂದ ಮಾತನಾಡಲೂ ಸಾಕಷ್ಟು ವಿಚಾರಗಳಿರುತ್ತವೆ, ಬಿಗಿದ ತುಟಿಯ ಬಿಗುಮಾನ, ಅಸಹಜ ಗಾಂಭೀರ್ಯತೆ ಫಸ್ಟು ಟ್ರಿಪ್ಪಿಗೆ ಅನ್ವಯಿಸುವುದಿಲ್ಲ. ಮತ್ತೆ, ಯಾರು ಎಲ್ಲಿ ಇಳೀತಾರೆ ಅಂತ ಕಂಡಕ್ಟರ್ ಮಾಮನಿಗೆ ಗೊತ್ತಿರೋ ಕಾರಣ, ಯಾರ ಹತ್ರನೂ ಎಲ್ಲಿಗೆಂದು ಕೇಳದೆ ಟಿಕೆಟ್ ಇಶ್ಯೂ ಮಾಡುವ ವಿಶೇಷ ಸಂದರ್ಭ ಬೆಳಗ್ಗೆ ಮಾತ್ರ ಸಿಗೋದು ಅನ್ನೋದು ಬೋನಸ್ ವಿಷಯ...


ಲಾಸ್ಟ್ ಟ್ರಿಪ್ ಉಸ್ಸಪ್ಪ!:
ಅಂತೂ ಇಂತೂ ದಿನಪೂರ್ತಿ ಓಡಾಡಿ, ಅರಚಿ, ಕಾದಾಡಿ, ಓವರ್‌ಟೇಕ್‌ಗಳನ್ನು ಮಾಡಿ, ಹತ್ತಿಸಿ, ಇಳಿಸಿ, ಬಳಲಿ ಬೆಂಡಾಗಿ ಲಾಸ್ಟ್ ಟ್ರಿಪ್ ಮತ್ತದೇ ಊರಿಗೆ ಬರುವ ಹೊತ್ತಿಗೆ ನಾವು ನಾವಾಗಿರೋದಿಲ್ಲ...
ಮೈತುಂಬ ಬಳಲಿಕೆ, ಹರಿದ ಬೆವರು, ಬಸ್ಸು ತುಂಬ ರಶ್ಶೋ ರಶ್ಶು, ಕಾಲಿಡಲೂ ಜಾಗವಿಲ್ಲ, ಹಿಂದಿನ ಸೀಟಲ್ಲಿ ಕುಳಿತವರ ಬಾಯಿಂದ ಏನೇನೋ ವಾಸನೆ, ಜೋಲಾಡಿ ಹೆಗಲಿಗೆ ಬೀಳುವ ದೇಹಗಳು, ಬೆಳಗ್ಗೆ ಶುಭ್ರವಾಗಿ ತೊಳೆದ ಬಾಡಿ ಮೇಲೆ ಧೂಳಿನ ದಪ್ಪ ಹೊದಿಕೆ, ಹಸಿವಾದ ಹೊಟ್ಟೆಗಳು, ಒಮ್ಮೆ ಮನೆ ಸೇರಿದರೆ ಸಾಕೆಂಬ ತುಡಿತ...
ಏನಂತೀರಾ... ಫಸ್ಟು ಬಸ್ಸೇ ವಾಸಿಯಲ್ವ?
-ಕೃಷ್ಣಮೋಹನ ತಲೆಂಗಳ.

1 comment:

Giri said...

2000-2003 ಸಂದರ್ಭದಲ್ಲಿ ದಿನಾ ಶಾಲೆಗೆ ಫಸ್ಟ್ ಬಸ್ಸಿನಲ್ಲಿ ಹೋಗಿ ಲಾಸ್ಟ್ ಬಸ್ಸಿನಲ್ಲಿ ಬರ್ತಿದ್ದೆ..

ಬೆಳಗ್ಗೆ ಎಷ್ಟೋ ಬಾರಿ ಡ್ರೈವರ್ ನ ಬದಲು ನಾನೇ ವಾರ್ಮ್ ಅಪ್ ಮಾಡಿದ್ದೇನೆ. ಕಿಟಕಿಯ ಟಾರ್ಪಲು ಮೇಲೆ ಕಟ್ಟಿದ್ದೇನೆ. ಆ ಬಸ್ಸು ಬರಿಯ ಬಸ್ಸಾಗಿರಲಿಲ್ಲ. ಜೀವನದ ಭಾಗವಾಗಿತ್ತು. ಡ್ರೈವರು ಕಂಡಕ್ಟರ್ ಬಂಧುಗಳಾಗಿದ್ದರು. ಕೆಲ ವರ್ಷಗಳ ಮೊದಲು ಅದೇ ಬಸ್ಸು ಹೋಗಿ ಹೊಸ ಬಸ್ಸು ಬರುವ ಮುಂಚೆ ಅದೇ ಸಿಬ್ಬಂದಿ ಜತೆ ಮಾತಾಡಿ, ಫೋಟೋ ತೆಗೆದು ಫೇಸ್ಬುಕ್ನಲ್ಲಿ ಹಾಕಿದ್ದೆ. ಒಮ್ಮೆ ಆ ಕಂಡಕ್ಟರ ಜೊತೆ ಮಾತಡಲೆಂದೇ ಬಸ್ಸಿಗೆ ಹತ್ತಿ ಟಿಕೇಟು ಇಲ್ಲದೆ ಹೋಗಿ ಬಂದಿದ್ದೆ.

ನೆನಪುಗಳು ಎಷ್ಟು ಬೆಚ್ಚಗೆ ಅಲ್ವಾ...