ನೆರಳೂ ಜೊತೆಗೇ ಬರುವುದಿಲ್ಲ...!

ವ್ಯಕ್ತಿತ್ವಕ್ಕೊಂದು ಚಿಂತನೆ
ನಡವಳಿಕೆ, ನಂಬಿಕೆ
ಯೋಚನೆ, ಅಹಂ
ಬಿಗುಮಾನ, ಸಿದ್ಧಾಂತ
ಚಿಂತನೆಯಿಂದ ವ್ಯಕ್ತಿಗೆ ಅಸ್ತಿತ್ವ
ಹೊರತು
ಭೌತಿಕ ಕಾಯದ ಉದ್ದಗಲವಲ್ಲವಲ್ಲ ತಾನೆ?


ಅನಪೇಕ್ಷಿತ ಹುಟ್ಟು
ದಾರಿ ಸಿಕ್ಕಷ್ಟು ಕಾಲ ನಡಿಗೆ
ಮತ್ತೊಂದು ದಿನ ಹೇಳಿಯೋ,
ಹೇಳದೆಯೋ ಚಟುವಟಿಕೆಗಳಿಗೆ
ಪೂರ್ಣವಿರಾಮ
ಬರುವಾಗಲೂ, ಹೋಗುವಾಗಲೂ
ಜೊತೆಗೆ ನಡೆವವರಿಲ್ಲ!

ಗುಂಪು, ಸಂಘ
ಸಮುದಾಯಕ್ಕೂ ಮೀರಿ
ವ್ಯಕ್ತಿ ಒಂಟಿಯೇ...
ಯೋಚನೆ, ಕಟ್ಟಿಕೊಂಡ
ನಂಬಿಕೆ... ಅರ್ಥ ಮಾಡಿಕೊಳ್ಳುವುದಿಲ್ಲವೆಂಬ
ವೃಥಾರೋಪ,
ಸ್ವವಿಮರ್ಶೆಯ ಕ್ಷಣಗಳಲ್ಲಿ


ಸೋಲಿಗೊಂದು, ಗೆಲುವಿಗೊಂದು
ನೆಪ, ಸ್ಪಷ್ಟೀಕರಣ...
ಸಮುದ್ರದೊಳಗೆ ಸಿಹಿ ನೀರು ಸಿಗದ ಹಾಗೆ
ಗುಂಪಿನೊಳಗಿದ್ದೂ ಏಕಾಂಗಿತನ...
ಇರುವುದನ್ನು ಕಾಣದೆ
ಕಾಣದಲ್ಲಿ ಹುಡುಕುತ್ತಾ ಹೋದಾಗಲೂ
ಒಬ್ಬೊಬ್ಬರೂ ಒಬ್ಬಂಟಿಗಳೇ

ಗಡಚಿಕ್ಕುವ ಸದ್ದಿನಲ್ಲೂ
ಏಕಾಂತ ಅನುಭವಿಸುವ ತನ್ಮಯತೆ
ದೂರದಿಂದಲೂ ತನ್ನನ್ನೇ ಕಾಣಬಲ್ಲ
ಏಕಾಗ್ರತೆ...
ನಗುವಿನಲ್ಲೂ ಅಳುವಿನಲ್ಲೂ
ಸಮಚಿತ್ತ ಕಾಯಬಲ್ಲವರು
ಗಟ್ಟಿಗರಾಗಲಾರರೆ?


ಸುದ್ದಿಗಳಾಗದವರು
ಸದ್ದೇ ಮಾಡದವರು
ಪ್ರಸಿದ್ಧಿಗೆ ಬಾರದೇ
ಇದ್ದವರು ಮಾತ್ರವಲ್,ಲ ಒಬ್ಬಂಟಿಗರು
ನಕ್ಕು ನಗಿಸಿ, ಕುಪ್ಪಳಿಸುವವರ
ಹೃದಯಗಳನ್ನೂ ತೆರೆದು ನೋಡಿದರೆ ಕಂಡೀತು
ಮಾತುಗಳಾಗದೆ ಅಡಗಿದ ಕೂಗುಗಳು.


-KM

No comments: