ಒಂದು ರಾತ್ರಿಯ ಕಥೆ... ಚಕ್ರಗಳ ಮೇಲೆ!






ರಾತ್ರಿ 9.30ಕ್ಕೆಲ್ಲ ಹೊರಡುವ ರಾತ್ರಿ ಬಸ್ಸಿನ ಪ್ರಯಾಣಕ್ಕೆ ಮಧ್ಯಾಹ್ನದಿಂದಲೇ ಸಣ್ಣದೊಂದು ತಯಾರಿ ಶುರು ಆಗುತ್ತದಲ್ವ. ಟಿಕೆಟ್ ಖಚಿತವಾದ ಬಳಿಕ ಪ್ಯಾಕಿಂಗು, ರಾತ್ರಿಗೆ ಊಟ, ಬಟ್ಟೆಬರೆ, ದಾರಿಯಲ್ಲಿ ತಿನ್ನೋದಕ್ಕೆ ಏನಾದರೂ ಬಿಸ್ಕತ್ತು, ಹಣ್ಣು ಹಂಪಲು, ದಾರಿಯಲ್ಲಿ ಚಳಿ ಇದ್ದರೆ ಅಂತ ಮಫ್ಲರು, ಸ್ವೆಟರ್ ಇಲ್ಲವಾದರೆ ಬಹುಪಯೋಗಿ ಜರ್ಕಿನ್ನು, ಸ್ಲೀಪರ್ ಕೋಚಿನಲ್ಲಿ ಕೊಡುವ ಹೊದಿಕೆ ಹೇಗಿರುತ್ತದೋ ಏನೋ ಎಂಬ ಕಾರಣಕ್ಕೆ ಪ್ರತ್ಯೇಕದ್ದೊಂದು ದೊಡ್ಡ ಶಾಲು, ಮೊಬೈಲಿನಲ್ಲಿ ಚಾರ್ಜ್ ಮುಗಿದರೆ ಎಂಬ ಕಾರಣಕ್ಕೆ ಒಂದು ಪವರ್ ಬ್ಯಾಂಕ್, ನಿದ್ರೆ ಬಾರದಿದ್ದರೆ ಅಂತ ಧೈರ್ಯಕ್ಕೊಂದು ಪುಸ್ತಕ... ಸಾಕಾಗ್ತದಲ್ವ ಇಷ್ಟು ಸಿದ್ಧತೆಗಳು...

.....

ಈಗ ಇ ಟಿಕೆಟ್ ಯುಗ. ಮೊಬೈಲಿನಲ್ಲಿ ಬಂದ ಮೆಸೇಜೇ ಸಾಕಾಗುತ್ತದೆ, ಇಲ್ಲದಿದ್ದರೆ ಟಿಕೆಟ್ ಜೋಪಾನ ಎಂಬ ಕಾಳಜಿ ಬೇರೆ ಜೊತೆಗಿರುತ್ತದೆ. ರಾತ್ರಿ ಬಸ್ಸಿನಲ್ಲಿ ಸ್ಲೀಪರ್ ಮೇಲಿನ ಬರ್ಥ್ ನಲ್ಲಿ ಚಪ್ಪಲಿ ಇಡುವುದಾದರೂ ಹೇಗೆ... ಕೆಳಗೇ ಚಪ್ಪಲಿ ಇರಿಸಿ ರಾತ್ರಿ ಆರಾಮವಾಗಿ ನಿದ್ರೆ ಮಾಡಿದರೆ ಬೆಳಗ್ಗೆದ್ದು ನೋಡಿದಾಗ ಚಪ್ಪಲಿಯನ್ನು ಯಾರಾದರೂ ಕದ್ದರೆ ಅಥವಾ ಚಪ್ಪಲಿ ಸರ್ಕಸ್ ಮಾಡುತ್ತಾ ಮೆಜೆಸ್ಟಿಕ್ಕು ಬರುವ ಹೊತ್ತಿಗೆ ಯಾರದ್ದೋ ಸೀಟಿನಡಿಗೆ ಹೋಗಿ ಮಾಯವಾದರೆ ಅನ್ನುವ ಟೆನ್ಶನ್ನು ಬೇರೆ.... ಮತ್ತೆ ಕೆಲವರಿಗೆ ಮಧ್ಯರಾತ್ರಿ ಮೂತ್ರ ವಿಸರ್ಜನೆಗೆ ಡ್ರೈವರ್ ಎಲ್ಲಿ ಗಾಡಿ ನಿಲ್ಲಿಸುತ್ತಾನೋ ಏನೋ... ಅಲ್ಲಿ ಎಷ್ಟು ಗಲೀಜು ಇರುತ್ತದೋ ಏನೋ... ತುಂಬ ರಶ್ಶಿದ್ದರೆ ನಾನು ಮಾತ್ರ ಬರುವಾಗ ತಡವಾಗಿ ಬಸ್ಸು ನನ್ನನ್ನು ಬಿಟ್ಟು ಹೊರಟೇ ಹೋದರೆ... ಇದೆಲ್ಲ ರಗಳೆಯೇ ಬೇಡ ಅಂತ ಅಂದು ಮಧ್ಯಾಹ್ನದಿಂದಲೇ ನೀರು ಸೇವನೆ ಬಂದ್ ಮಾಡಿ ದೇಹಬಾಧೆ ನಿಯಂತ್ರಿಸುವ ಸಾಹಸವೂ ನಡೆಯುತ್ತದೆ... ಈ ಊರಿನಿಂದ ಆ ಊರಿಗೆ ಸುಮಾರು 300-400 ಕಿ.ಮೀ. ಪ್ರಯಾಣ ರಾತ್ರಿಯದ್ದಾದರೆ ಅದಕ್ಕಿರುವ ಸಿದ್ಧತೆ ಮತ್ತು ಲೈಟಾದ ಟೆನ್ಶನ್ನೇ ಬೇರೆ...

......

ರಾತ್ರಿ 9.30ಕ್ಕೆ ಪಿವಿಎಸ್ ಸ್ಟಾಪಿಗೆ ಬರುವ ಬಸ್ಸಿನ ವರೆಗೆ ಹೋಗುವುದು ಹೇಗೆ.... ಆಟೋ ಸಾಕ, ಓಲಾ ಬುಕ್ ಮಾಡಬೇಕ. ಊಟ ಮಾಡಿಯೇ ಹೊರಡುವುದಾ... ಅಥವಾ ನೆಲ್ಯಾಡಿಯ ಡಾಬಾದಲ್ಲಿ ನಿಲ್ಲಿಸಿದಾಗ ಏನಾದರೂ ಹೊಟ್ಟೆಗೆ ಹಾಕಿಕೊಳ್ಳುವುದಾ... ರಗಳೆ ಬೇಡ ಅಂತ ಬುತ್ತಿಯಲ್ಲಿ ಕಟ್ಟಿ ತೆಗೆದುಕೊಂಡರೆ ತಿಂದು ಉಳಿದ್ದನ್ನು ರೈಲಿನ ಹಾಗೆ ಎಸೆಯಲೂ ಆಗುವುದಿಲ್ಲ ಅಂತ ರಗಳೆ ಬೇರೆ...
ಎಲ್ಲವೂ ಆಗಿ ಮಂಗಳೂರಿನಲ್ಲಿ ಬಸ್ಸೇರುವ ಹೊತ್ತಿಗೆ ಲೈಟಾಗಿ ಮಳೆ ಶುರುವಾದರೆ ಜೊತೆಗಿರುವ ಅಷ್ಟು ದೊಡ್ಡ ಬ್ಯಾಗ್ ಒದ್ದೆಯಾದ ಬಳಿಕ ಬಸ್ಸಿನಲ್ಲಿ ಇಡುವುದು ಹೇಗೆ ಎಂಬ ಚಿಂತೆಯಾದರೆ ಒದ್ದೆ ಕೊಡೆಯನ್ನು ರಾತ್ರಿಯಿಡೀ ಪಕ್ಕದಲ್ಲೇ ಜೋಪಾನವಾಗಿ ಕೊಂಡೊಯ್ಯುವುದು ಹೇಗೆಂಬ ಆತಂಕ ಪ್ರತ್ಯೇಕ...


ಬಸ್ಸು ಹೊರಡುವುದಕ್ಕೂ ಅರ್ಧ ಗಂಟೆ ಮೊದಲೇ ಕಂಡಕ್ಚರ್ ಸಾಹೇಬರಿಂದ ಆತ್ಮೀಯ ಕುಶಲ ಕ್ಷೇಮ ಸಮಾಚಾರ ವಿಚಾರಣೆ ಬಳಿಕ, ಈ ಜೀವಿ ಇಂದು ರಾತ್ರಿ ತನ್ನದೇ ಬಸ್ಸಿನಲ್ಲಿ ಬರುತ್ತದೆ ಎಂಬುದು ಕಂಡಕ್ಟರ್ ಸಾಹೇಬರಿಗೆ ಖಚಿತವಾದ ನಂತರ ಬಸ್ ಹೊರಡುವಲ್ಲಿಗೆ ತಲುಪಿ, ಬಸ್ಸು ಹತ್ತಿ ಸೀಟಿನಲ್ಲೋ, ಬರ್ಥಿನಲ್ಲೋ ಆಸೀನರಾಗುವುದು ಮಾತ್ರ ನಮ್ಮ ಕೆಲಸ, ಮತ್ತೆಲ್ಲ ಡ್ರೈವರ್ ಮಾಮನಿಗೆ ಬಿಟ್ಟ ವಿಚಾರ....

......


ಅದೇ ಸುಡು ಬಿಸಿಲು, ಹೆವಿ ಟ್ರಾಫಿಕ್ಕು, ಹಿಂದಿಕ್ಕಲೂ ಜಾಗವಿಲ್ಲದಷ್ಟು ಇಕ್ಕಟ್ಟಾದ ರಸ್ತೆಯ ಹಗಲಿನ ಚಿತ್ರಣವೇ ರಾತ್ರಿಯ ವೇಳೆಗೆ ಬದಲಾಗಿರುತ್ತದೆ. ಈ ಇಕ್ಕಟ್ಟಿನ ರಸ್ತೆಯ ಅಂಚಿನಲ್ಲಿ ಅಷ್ಟುದ್ದದ ವೋಲ್ವೋ ಬಸ್ಸು ರಾತ್ರಿ 9ರ ಹೊತ್ತಿಗೆ ಬಂದು ನಿಲ್ಲುತ್ತದಲ್ಲ, ಆ ಅಂಕುಡೊಂಕಿನ ರಸ್ತೆಗಳಲ್ಲಿ ಈ ಯಮ ಗಾತ್ರದ ಬಸ್ಸು ಹೇಗೆ, ಎಷ್ಟೊತ್ತಿಗೆ ಬಂದು ನಿಂತಿತು ಅಂತ ನೋಡುವ, ತಿಳಿದುಕೊಳ್ಳುವ ತಾಳ್ಮೆ ಯಾರಿಗೂ ಇರುವುದಿಲ್ಲ. ಅವಸರವಸರವಾಗಿ ಬಂದು, ಕೆಲವರು ಬಸ್ಸು ಸ್ಟಾರ್ಟ್ ಆದ ಮೇಲೆ ಬಂದು ಆತಂಕದ ಕಣ್ಣುಗಳಿಂದ ತಮ್ಮ ಸೀಟಿಗಾಗಿ ಹುಡುಕಿ, ಅಲ್ಲಿ ತಮಗಿಂತ ಮೊದಲೇ ಇನ್ಯಾರೂ ಬಂದು ಸೀನ್ ಕ್ರಿಯೇಟ್ ಮಾಡಿಲ್ಲ ಅಂತ ಸಮಾಧಾನ ಪಟ್ಕೊಂಡು ಕುಳಿತುಕೊಳ್ಳುವ ಹೊತ್ತಿಗೆ ಬಸ್ ಸುಮಾರು 8-9 ಗಂಟೆಯ ಪ್ರಯಾಣಕ್ಕೆ ಮಾನಸಿಕವಾಗಿ ಸಿದ್ಧವಾಗಿರುತ್ತದೆ, ಬಸ್ಸಿನೊಳಗಿರುವ ಪ್ರಯಾಣಿಕ ಕೂಡಾ....

......

ಮಂದ ಬೆಳಕು, ತಣ್ಣನೆಯ ಸಂಗೀತ, ಒಗೆದು ಇಸ್ತ್ರಿ ಹಾಕಿದಂತೆ ಆ ಮಂದ ಬೆಳಕಿನಲ್ಲಿ ಕಾಣಿಸುವ ಹೊದಿಕೆ, ಸೀಟು ಕವರುಗಳು ಅರೆಬರೆ ಕತ್ತಲಿನಲ್ಲಿ ಯಾವುದೂ ಸ್ಪಷ್ಟವಾಗಿರುವುದಿಲ್ಲ. ಸುತ್ತಮುತ್ತ ನೋಡಿದರೆ ಅವರವರ ಲೋಕದಲ್ಲಿ ಮುಳುಗಿರುವ ಪ್ರಯಾಣಿಕರು ಕಾಣಿಸುತ್ತಾರೆ. ಅಪರೂಪಕ್ಕೆ ಬೆಂಗಳೂರಿಗೆ ಹೋಗುವವರು, ಆಗಾಗ ಹೋಗ್ತಾ, ಬರ್ತಾ ಇದೊಂದು ಸಂಗತಿಯೇ ಅಲ್ಲವೆಂಬಂತೆ ಖಾಲಿ ಒಂದು ಪುಟ್ಟ ಬ್ಯಾಗಿನೊಂದಿಗೆ ರಾತ್ರಿ ಪ್ರಯಾಣ ದಾಟಿ ಬರಬಲ್ಲವರು... ಕಿವಿಗೊಂದು ಇಯರ್ ಫೋನ್ ಸಿಕ್ಕಿಸಿ, ಮೊಬೈಲಿಗೆ ಪವರ್ ಬ್ಯಾಂಕ್ ಲಗತ್ತಿಸಿ, ರಾತ್ರಿ 9ರ ನ್ಯೂಸ್ ನೋಡದಿದ್ದರೆ, ಕ್ರಿಕೆಟ್ ಮ್ಯಾಚ್ ನೋಡದಿದ್ರೆ ನಿದ್ರೆಯೇ ಬಾರದೇ ಹೋದೀತು ಎಂಬಂತೆ ತಮ್ಮದೇ ಲೋಕದಲ್ಲಿ ಮುಳುಗಿರುವವರು, ಸುತ್ತಮುತ್ತ ಅಷ್ಟು ಜನರಿದ್ದರೂ ಕ್ಯಾರೇ ಅನ್ನದೆ ವಿಡಿಯೋ ಚಾಟ್ ಮಾಡುವವರು, ಬೆಳಗ್ಗಿನ ವರೆಗೂ ಚಾಟ್ ಮಾಡುತ್ತಲೇ ಠಣ್ಣನೆ ಚೀತ್ಕರಿಸುವ ಮೆಸೇಜ್ ನೋಟಿಫಿಕೇಶನ್ ಅಕ್ಕಪಕ್ಕದವರ ಏಕಾಗ್ರತೆಗೆ ಭಂಗ ತಂದರೂ ಚಿಂತಿಸದೆ ಕುಳಿತಿರುವವರು, ಮಾತನಾಡಿದರೆ ಮುತ್ತು ಉದುರೀತು ಎಂದು, ಮೊಬೈಲಿನಲ್ಲಿ ದೊಡ್ಡ ಸ್ವರದಲ್ಲಿ ಮಾತನಾಡಿದರೆ ಅಕ್ಕಪಕ್ಕದವರು ಏನಂದುಕೊಂಡಾರು ಅಂತ ಅತೀವ ಕಾಳಜಿ ದಾಕ್ಷಿಣ್ಯದಿಂದ ಕುಳಿತವರು... ಕಿಟಕಿ ತೆರೆದರೆ ಹಿಂದಿನ ಸೀಟಿನವರಿಗೆ ಥಂಡಿಯಾಗಿ ಜಗಳಕ್ಕೆ ಬಂದರೆ ಅಂತ ಹೆದರಿ ಉಸಿರು ಬಿಗಿ ಹಿಡಿದು ಕುಳಿತವರು, ಬೆಳಗ್ಗೆ ಜಾಲಹಳ್ಳಿ ಕ್ರಾಸಿನಲ್ಲಿ ತನ್ನನ್ನು ಕರೆದೊಯ್ಯಬೇಕಾದ ಸ್ನೇಹಿತ ಬೈಕ್ ಸಮೇತ ಬಾರದಿದ್ದರೆ ಆ ಅಪರಿಚಿತ ಬೆಂಗಳೂರಿನಲ್ಲಿ ತನ್ನ ಗತಿ ಏನಾದೀತು ಅಂತ ವೃಥಾ ಚಿಂತಿಸಿ ಕೊರಗುವವರು....

ಎಷ್ಟೊಂದು ಮನಸ್ಸುಗಳು, ಎಷ್ಟೊಂದು ಚಿಂತೆಗಳು... ಮಂದ ಬೆಳಕಿನ ಬಸ್ಸಿನ ಸೀಟುಗಳ ನಡುವಿನ ಪ್ರಯಾಣ, ಪ್ರವಾಸ, ಪ್ರಯಾಸಗಳ ಉದ್ದೇಶದಿಂದ ಹೊರಟವರ ಹೊತ್ತೊಯ್ಯುವ ಬಸ್ಸಿಗೆ ಮಾತ್ರ ಅದು ರುಟೀನ್ ಅಷ್ಟೇ.... ನಿತ್ಯದ ಕಾಯಕ, ಹತ್ತಿದವರ ಅಚ್ಚುಕಟ್ಟಾಗಿ ಅತ್ತ ಕಡೆ ತಲುಪಿಸಿ ಮತ್ತೆ ನಾಳೆ ರಾತ್ರಿ ಹೊರಟು ಹಿಂತಿರುಗಿ ಬರುವುದು ಅಷ್ಟೇ....

........

ಹೊರಟಿತು ಬಂಡಿ....
ಬಸ್ಸು ಹೊರಟ ಮೇಲೆ ಸ್ವಲ್ಪ ನಿರಾಳವಾಗಿ ಸುತ್ತಮುತ್ತ ನೋಡಿದಾಗ, ದಿನಾ ಓಡಾಡುವ ಅದೇ ಪೇಟೆ ಎಷ್ಟು ವಿಶಿಷ್ಟ ಕಾಣ್ತದೆ ಅಲ್ವ... ಬೈಕ್ಕಿನಲ್ಲೋ, ಬಸ್ಸಿನಲ್ಲೋ, ಆಟೋದಲ್ಲೋ ಹಗಲಿಡೀ ಗಡಿಬಿಡಿಯಲ್ಲಿ ಓಡಾಡುವ ಅದೇ ಪೇಟೆ ರಾತ್ರಿ ಒಂದಷ್ಟು ನಿರ್ಜನವಾಗಿ, ನಿಲ್ತಿಪ್ತವಾಗಿ, ಕರೆಂಟು ಲೈಟಿನಲ್ಲಿ ಝಗಮಗಿಸುತ್ತಾ ಸ್ಪಷ್ಟವಾದಂತೆ, ಸಾವಧಾನದಿಂದ ಇರುವಂತೆ ಭಾಸವಾಗುತ್ತದೆ. ರಾತ್ರಿಯ ಬದುಕಿಗೆ ತನ್ನನ್ನು ತೆರೆದುಕೊಳ್ಳುವ ಪೇಟೆಯನ್ನು ನೈಟ್ ಬಸ್ಸಿನಲ್ಲಿ ಕುಳಿತು ಪೇಟೆ ದಾಟುವ ವರೆಗೆ ನೋಡುತ್ತಾ ಬಂದರೆ ನಗರ ಸಂಚಾರದ ಅನುಭವ ಮಾತ್ರವಲ್ಲ, ಇನ್ನೆಂದು ಈ ಪೇಟೆಯನ್ನು ಮತ್ತೆ ಕಾಣುವೆನೋ ಎಂಬ ಅವ್ಯಕ್ತ ನೋವು ಬೇರೆ. ಊರು ಕಳಚಿ ಪರವೂರಿಗೆ ಹೋಗುವಾಗಿನ ವಿರಹದ ಬೇಗುದಿ ಮತ್ತು ಕಾಡುವ ನೀರವ ರಾತ್ರಿಯ ಬೀಳ್ಕೊಡುಗೆ ಕೂಡಾ...


ತಡರಾತ್ರಿಯ ಹೊತ್ತಿಗೆ ಆಕಳಿಸುತ್ತಾ ತೆರೆದುಕೊಳ್ಳುವ ನಗರ, ವಿರಳ ಹೊಟೇಲುಗಳು, ಅಲ್ಲೊಂದು ಇಲ್ಲೊಂದು ಪೆಟ್ರೋಲ್ ಬಂಕುಗಳು, ಎಟಿಎಂಗಳ ಎದುರಿನ ಸೆಕ್ಯೂರಿಟಿಯವರು, ಆಹಾರ ತೆಗೆದುಕೊಂಡು ಫ್ಲಾಟು, ಹಾಸ್ಟೆಲುಗಳ ಕಡೆಗೆ ಧಾವಿಸುವ ಸ್ವಿಗ್ಗಿ, ಝೊಮ್ಯಾಟೋ ಹುಡುಗರು, ದೂರುದೂರುಗಳಿಗೆ ಹೊರಟ ನೈಟು ಬಸ್ಸುಗಳು, ಪರವೂರಿನಿಂದ ಏದುಸಿರು ಬಿಡುತ್ತಾ ನಗರ ಪ್ರವೇಶಿಸುತ್ತಿರುವ ಬಸ್ಸುಗಳು... ದೂರದ ಫ್ಲಾಟುಗಳ ಬೆಳಕಿನ ಚೌಕಗಳ ನಡುವಿನಲ್ಲಿ ಫೋನಿನಲ್ಲಿ ಮಾತನಾಡುವವರು, ಒಂಟಿ  ರಸ್ತೆಯಲ್ಲಿ ನಾಯಿಯನ್ನು ತಕ್ಕೊಂಡು ವಾಕಿಂಗ್ ಹೊರಟವರು, ರಾತ್ರಿ ಪಹರೆಗೆ ಹೊರಟ ಪೊಲೀಸರು, ದೂರದೂರಿಗೆ ಪಾರ್ಸೆಲ್ ತಕ್ಕೊಂಡು ಬಂದು ಬಸ್ಸಿನ ಟಾಪಿಗೆ ಏರಿಸುತ್ತಿರುವ ಕೂಲಿಯವರು, ಕೊನೆಯದಾಗಿ ಯಾರಾದರೂ ಗಿರಾಕಿಗಳು ಬಂದಾರ ಅಂತ ಕಾಯುತ್ತಿರುವ ಮೆಡಿಕಲ್ ಶಾಪ್ ಗಳವರು... ಟ್ರಾಫಿಕ್ ಪೊಲೀಸ್ ಇಲ್ಲದ ಸರ್ಕಲ್ಲುಗಳು, ಹಳದಿ ಬಣ್ಣಕ್ಕೆ ಸೀಮಿತವಾದ ಸಿಗ್ನಲ್ಲು ಲೈಟುಗಳು, ಖಾಲಿ ಹೊಡೆಯುವ ಫ್ಲೈ ಓವರ್ರು, ಅಂಡರ್ ಪಾಸ್, ಕಣ್ಣು ಕೆಂಪಾಗಿಸಿ ತೂರಾಡುತ್ತಾ ಅಲ್ಲೊಬ್ಬ ಇಲ್ಲೊಬ್ಬರಂತೆ ಮನೆಗೆಂದು ಹೊರಟು ಇನ್ನೆಲ್ಲಿಗೋ ಹೋಗುತ್ತಿರುವ ಅಪರಿಚಿತರು... ಎಷ್ಟೊಂದು ದೃಶ್ಯಗಳು ರಾತ್ರಿಯ ಪೇಟೆಯಲ್ಲಿ ಕಾಣುತ್ತವೆ... ಕಾಡುತ್ತವೆ....

.....

ಪೇಟೆ ದಾಟಿ ಜನ ಹತ್ತುವ ಪಾಯಿಂಟುಗಳೆಲ್ಲ ಮುಗಿದ ಬಳಿಕ ಕಂಡಕ್ಚರು ಲೈಟಾಫ್ ಮಾಡಿ ಎದುರಿನ ಪರದೆ ಎಳೆದ ಬಳಿಕ ಮೊದಲನೇ ದೃಶ್ಯ ಮುಗಿಯಿತು. ಮತ್ತೆಲ್ಲ ಅವರವರದ್ದೇ ಲೋಕ. ಅಲ್ಲೊಂದು ಇಲ್ಲೊಂದು ಪಿಸುಮಾತು, ಹುಸಿನಗೆ, ಕ್ಯಾರೇ ಅನ್ನದೆ ಮನೆಯವರೊಂದಿಗೆ ಅಟ್ಟಹಾಸ ಕೊಟ್ಟು ಮೊಬೈಲಿನಲ್ಲಿ ಮಾತು... ಸಿಗ್ನಲ್ ಸಿಗ್ತಾ ಇಲ್ಲ ನಾಳೆ ಬೆಳಗ್ಗೆ ಕಾಲ್ ಮಾಡ್ತೀನಿ ಇರು... ಅಂತ ಹೇಳ್ತಾ ಹೇಳ್ತಾ ಇಡೀ ಬಸ್ಸಿಗೆ ಕೇಳುವಂತೆ ಅರ್ಧ ಗಂಟೆ ಮಾತನಾಡುವವರು, ಲೋಕದ ಪರಿವೆಯೇ ಇಲ್ಲದೆ ಬಸ್ ಏರಿದ ತಕ್ಷಣದಿಂದ ಗೊರಕೆ ಹೊಡೆಯುತ್ತಿರುವವರು, ಅಪರಿಚಿತ ಜಾಗದಲ್ಲಿ ನಿದ್ರೆ ಬಾರದೆ ತೊಳಲಾಡುತ್ತಾ ಇನ್ನೆಷ್ಟು ಹೊತ್ತಿಗೆ ಬೆಳಗಾದೀತು ಅಂತ ದಯನೀಯವಾಗಿ ಆಗಾಗ ವಾಚು ನೋಡುವವರು, ಪ್ರಯಾಣದಲ್ಲೂ ಟೈಂ ವೇಸ್ಟ್ ಮಾಡಬಾರದು ಅಂತ, ಅತ್ತಿತ್ತ ಮಂದಿ ಸ್ಕ್ರೀನ್ ನೋಡುತ್ತಿದ್ದರೂ ಸ್ಥಿತಪ್ರಜ್ನರಾಗಿ ಪ್ರೈಮಿನಲ್ಲಿ ಮೂವಿ ನೋಡುವವರು... ಎಲ್ಲವನ್ನೂ ಕಳೆದುಕೊಂಡವರಂತೆ ಕಿಟಕಿ ತೆರೆದು ವೇಗವಾಗಿ ಬೀಸುವ ಗಾಳಿಗೆ ಮುಖವೊಡ್ಡಿ ಧ್ಯಾನಸ್ಥರಾದವರು...


ನಾಳೆ ಬೆಳಗ್ಗಿನ ಇಂಟರ್ ವ್ಯೂ, ಸಂಬಂಧಿಯ ಭೇಟಿ, ಆಸ್ಪತ್ರೆಯ ಸ್ಪೆಷಲಿಸ್ಟ್ ಕಾಣುವ ಆತಂಕ, ಎಷ್ಟೋ ವರ್ಷದ ಬಳಿಕ ಮನೆಗೆ ಹೋಗಿ ಸೇರುವ ತವಕ, ಹೇಳದೇ ಕೇಳದೇ ಮನೆಯಿಂದ ಓಡಿ ಬಂದು ಮೆಜೆಸ್ಟಿಕ್ಕು ತಲುಪಿದ ಬಳಿಕ ಮುಂದೇನು ಅಂತವೇ ಗೊತ್ತಿಲ್ಲದೆ ಹುಚ್ಚು ಧೈರ್ಯದಿಂದ ಬಸ್ಸು ಹತ್ತಿದ ಜೋಡಿ... ಹೀಗೆ ಬಸ್ಸು ಒಂದೇ ಆದರೂ ಗಮ್ಯ ತಲುಪಿದ ಬಳಿಕ ಆಗಬೇಕಾದ ಹತ್ತು ಹಲವು ಕಾರ್ಯಗಳಿಗೆ ಸಾಕ್ಷಿಯಾಗಿ ಗಾಳಿಯನ್ನು ಸೀಳುತ್ತಾ ಮರಗಳನ್ನು ಹಿಂದಕ್ಕೆ ತಳ್ಳುತ್ತಾ ಬಸ್ ಹೋಗುತ್ತಲೇ ಇರುತ್ತದೆ, ಕರೆದೊಯ್ಯುವುದು ಮಾತ್ರ ತನ್ನ ಕರ್ತವ್ಯ ಎಂಬ ಹಾಗೆ....

......


ಉಪ್ಪಿನಂಗಡಿಯ ವರೆಗೆ ನಮ್ಮದೇ ಊರಿನ ವಾತಾವರಣ, ಗುಂಡ್ಯ ದಾಟಿ ಶಿರಾಡಿ ಘಾಟ್ ಏರುತ್ತಿದ್ದ ಹಾಗೆ ನೆಟ್ವರ್ಕ್ ಹೋಗುತ್ತದೆ... ಮತ್ತೆ ಲೈಟಾಗಿ ಚಳಿ ಶುರುವಾಗುತ್ತದೆ, ನಿದ್ರೆಯ ಮಂಪರು ಆವರಿಸುತ್ತದೆ... ಹೊರಗಡೆಯ ಓರೆಕೋರೆ ತಿರುವು, ರಕ್ಕಸ ಗಾತ್ರದ ಮರಗಳ ಮೇಲೆ ಹೆಡ್ ಲೈಟ್ ಬಿದ್ದಾಗ ಆಗುವ ಪ್ರತಿಫಲನ,... ಯಾವ ಕಾಲಕ್ಕೆ ಬೆಂಗಳೂರು ತಲಪುವುದೋ ಎಂಬ ಹಾಗೆ ಏದುಸಿರು ಬಿಡುತ್ತಾ ತೆವಳಿದಂತೆ ಸಾಗುವ ಟ್ಯಾಂಕರ್, ಈಗಷ್ಟೇ ಬಂದು ಬಿಟ್ಟ ಮಳೆಯ ನೀರು ರಸ್ತೆಯ ಗುಂಡಿಯಲ್ಲಿ ತುಂಬಿ ಬಸ್ ವೇಗವಾಗಿ ಹಾದು ಹೋದಾಗ ಪಕ್ಕದ ಬೇಲಿಗೆ ನೀರು ಸಿಂಚನವಾದಾಗ ಅದರ ನಂತರದ ದೃಶ್ಯ ಕಾಣುವಷ್ಟರಲ್ಲಿ ದೊಡ್ಡದಂದು ಸೇತುವೆ ಬಂದು ಹಾದು ಹೋಗಿ ಆಗಿರುತ್ತದೆ... ಅರ್ಧ ನಿದ್ರೆಯಲ್ಲಿ ಬಸ್ಸಿನ ವೇಗವೂ ತಿಳಿಯದೆ ಒಂದು ಹಂತದಲ್ಲಿ ಸಕಲೇಶಪುರ ಬಸ್ ಸ್ಟ್ಯಾಂಡ್ ಬಂದಾಗಲೇ ಕೆಲವರಿಗೆ ಎಚ್ಚರವಾಗುವುದು. "ಯಾರಲ್ಲಿ 10 ನಿಮಿಷ ಬಸ್ ನಿಲ್ತದೆ ನೋಡಿ, ಟೀ ಕುಡಿಯುವವರು ಕುಡೀಬಹುದು..." ಅಂತ ವರದಿ ಒಪ್ಪಿಸಿದಂತೆ ಡ್ರೈವರು, ಕಂಡಕ್ಟರ್ ಹೇಳಿ ಹೋದಾಗ ಧಡಬಡಿಸಿ ಎದ್ದು ಹೋಗುವ ಮಂದಿ ಟಾಯ್ಲೆಟ್ಟಿನ ಎದುರಿನ ಅಷ್ಟುದ್ದ ಕ್ಯೂ ಕಂಡು ಬೆಚ್ಚಿ ಬೀಳುತ್ತಾರೆ... ಹೇಗ್ಹೇಗೋ ಕಷ್ಟಪಟ್ಟು ದೇಹಬಾಧೆ ತೀರಿಸಿ ಎದುರು ಶಾಲು ಬಿಗಿದು ನಿದ್ರೆ ತೂಗುತ್ತಾ ಕಲೆಕ್ಷನಿಗೆ ಕೂತವ ನಾವು ಕೊಟ್ಟ 10 ರು. ನೋಟಿಗೆ  ನಾಣ್ಯಕ್ಕೆ ಚಿಲ್ಲರೆಯಾಗಿ ಎಷ್ಟು ಕೊಟ್ಟಿದ್ದಾನೆ ಎಂದೂ ಕೂಡಾ ನೋಡದೆ, ದೇಹ ಹಗುರಾದ ಸಮಾಧಾನದಲ್ಲಿ ಬಸ್ಸು ನನ್ನನ್ನು ಬಿಟ್ಟು ಹೋದರೆ ಅಂತ ಓಡಿ ಬಂದು ಕೂರುವಷ್ಟರಲ್ಲಿ ಆತ ಮೂರು ರು.ಬಾಕಿ ಇರಿಸಿದ್ದು ಗೊತ್ತಾಗಿ ಚಡಪಡಿಸಿದರೂ ಬಸ್ಸು ಹೊರಟಾಗಿರುತ್ತದೆ.


ನೈಟ್ ಬಸ್ಸಿನಲ್ಲಿ ವೃತ್ತಿಪರರಂತೆ ಹೋಗುವವರು ಒಂದನ್ನು ಎಲ್ಲೋ ರಸ್ತೆ ಪಕ್ಕ ಮುಗಿಸಿ, ಸಿಂಗಲ್ ಚಾಯ ಕುಡಿದು ಸೀಗರೇಟ್ ಎಳೆದು ಮೊಬೈಲ್ ನೆಟ್ವರ್ಕ್ ಬಂತ ಅಂತ ನೋಡಿ ಒಂದು ಬಿಸ್ಲೇರಿ ಬಾಟಲ್ ಸಮೇತ ಸೀಟಿನಲ್ಲಿ ಬಂದು ಕೂರುವಾಗ ಹತ್ತೇ ನಿಮಿಷದಲ್ಲಿ ಅವರಿಗೆ ಅದೆಲ್ಲ ಆಗಿರುತ್ತದೆ. ಚಾಯ ಕುಡಿದು ಬರುವ ಕಂಡಕ್ಟರ್ ಮಾಮ ಎಲ್ಲರ ತಲೆ ಲೆಕ್ಕ ಹಾಕಿ ರುಯ್ಯಾ ಅನ್ನುವಷ್ಟರಲ್ಲಿ ಬಸ್ ಹೊರಟಾಗಿರುತ್ತದೆ... ನಿಧಾನಗತಿಯ ಒಂದಿಬ್ಬರು ಎಲ್ಲಿಯೋ ದೂರದ ಕತ್ತಲಿನಿಂದ ಓಡಿ ಬಂದು ಸ್ವಲ್ಪವೂ ಟೆನ್ಶನಿನಲ್ಲದೆ ತಮ್ಮ ಸೀಟಿನಲ್ಲಿ ಬಂದು ಕೂರುವಾಗ ತಾವು ಹೋಗಿ ಬರುವಷ್ಟರಲ್ಲಿ ಬಸ್ ಹೋದರೆ ಅಂತ ಟೆನ್ಶನ್ನಿನಿಂದ ಟಾಟ್ಲೆಟ್ಟಿಗೆ ಹೋಗದೆ ಕುಳಿತ ಮಂದಿಯ ಕಣ್ಣಿನಲ್ಲಿ ಅಚ್ಚರಿ ಕುಣಿಯುತ್ತಿರುತ್ತದೆ....

.....


ನೇರ ರಸ್ತೆಯಲ್ಲಿ ಬಸ್ ಹೆಚ್ಚು ಕುಲುಕದೆ ಸಾಗುವಾಗ ಮತ್ತೆ ನಿದ್ರೆ ಬಂದ ಹಾಗಾಗುತ್ತದೆ.... ಮಂಗಳೂರಿನ ಸೆಕೆ ಕಳೆದು ಮತ್ತೆ ಎಲ್ಲಿ ನುಗ್ಗಿತು ಅಂತ ಗೊತ್ತಾಗದ ಹಾಗೆ ಚಳಿ ನುಸುಳಿದಾಗ ಕಟ್ಟಿ ತಂದ ಶಾಲು, ಮಫ್ಲರು ಕೆಲಸಕ್ಕೆ ಬರುತ್ತದೆ.... ಯಾವ ಊರು ಬಂತು ಅಂತ ನೋಡುವಷ್ಟು ತಾಳ್ಮೆ ಇರುವುದಿಲ್ಲ.... ಅಪರಿಚಿತ ಜಾಗದಲ್ಲಿ ನಿದ್ರೆ ಬಾರದವರಿಗೆ ನಿಮಿಷಗಳು ಗಂಟೆಗಳಂತೆ ಭಾಸವಾಗುತ್ತಿರುತ್ತದೆ... ಚಳಿಯನ್ನು ನಿರೀಕ್ಷಿಸದೆ, ವ್ಯವಸ್ಥೆ ಮಾಡದೆ ಬಂದವರಿಗೆ ಯಾಕಾದರೂ ರಾತ್ರಿ ಬಸ್ಸಿನಲ್ಲಿ ಬಂದೆವೋ ಅಂತ ನಡುಗುವ ಹಾಗಾಗಿರುತ್ತದೆ. ಎಲ್ಲೋ ಹಿಂದಿನ ಸೀಟಿನಲ್ಲಿ ಮುಸು ಮುಸು ಅಳುವ ಕಂದಮ್ಮ, ತಡರಾತ್ರಿಯಲ್ಲೂ ನಗು ನಗುತ್ತಾ ಪಿಸಪಿಸನೆ ಮೊಬೈಲಿನ್ಲಲಿ ಮಾತನಾಡುವ ಯುವಕ, ಬೆಂಗಳೂರು ತಲಪುವಾಗ ಎಷ್ಟು ಹೊತ್ತಾಗುತ್ತದೆ ಅಂತ ಸತತ ನಾಲ್ಕನೇ ಬಾರಿ ಎದುರು ಕುಳಿತ ಕಂಡಕ್ಟರ್ ಹತ್ತಿರ ಕೇಳಿ ಬಂದು ಸೀಟಿನಲ್ಲಿ ಆಸೀನರಾದ ಅಜ್ಜಯ್ಯ... ಎಲ್ಲರಿಗೂ ಅರ್ಧ ದಾರಿ ಕ್ರಮಿಸಿದ್ದು ಗೊತ್ತಾಗಿರುತ್ತದೆ....

.....


ಈ ನಡುವೆ ಎಲ್ಲೋ ಜನರೇ ಇಲ್ಲದ ಬಸ್ ಸ್ಟ್ಯಾಂಡ್ ಹೊಕ್ಕ ಬಸ್ಸಿನ ಕೆಳಗಿನ ಕ್ಯಾರಿಯರ್, ಟಾಪಿನಲ್ಲಿ ಏನೇನೋ ಗೋಣಿಚೀಲಗಳು ಲೋಡ್ ಆಗುತ್ತಿರುವುದು ನಿದ್ರೆ ಬಾರದ ಒಂದಿಷ್ಟು ಆಸಾಮಿಗಳಿಗೆ ಗೊತ್ತಿರುತ್ತದೆ... ಅದೆಲ್ಲ ಕಾಮನ್ ಬಿಡ್ರಿ, ಹೂಗಳನ್ನು ಕಂಡಕ್ಟರಿಗೆ ಒಂದಿಷ್ಟು ದುಡ್ಡು ಕೊಟ್ಟು ಕೊಂಡೋಗ್ತಾರೆ ಅಂತ ಇಬ್ಬರು ನೈಟ್ ಜರ್ನಿ ಸ್ಪೆಷ್ಟಲಿಸ್ಟುಗಳು ಪಕ್ಕದಲ್ಲಿ ಕುಳಿತವರಿಗೆ ಹೇಳುತ್ತಿರುತ್ತಾರೆ...
ನೇರ ನಿರ್ಜೀವ ರಸ್ತೆಯ ನಡುವಿನ ಹಳಿದ ಬಣ್ಣದ ಬೀದಿ ದೀಪ, ಎಲ್ಲೋ ಒಂದೆಡೆ ಮಾತ್ರ ತೆರೆದುಕೊಳ್ಳುವ ಡಿವೈಡರ್, ರಾತ್ರಿ ವಾಹನಗಳಿಗೇ ಕಾದಿರುವ ಚಹಾದ ಅಂಗಡಿ, ಡಾಬಾಗಳು, ಗುಂಪುಗುಂಪಾಗಿ ಹೊಟೇಲುಗಳ ಎದುರು ನಿಂತಿರುವ ನೈಟ್ ಬಸ್ಸುಗಳು... ಇಷ್ಟೊಂದು ಮಂದಿ ಬೆಂಗಳೂರಿಗೆ ಹೋಗಿ ಏನು ಮಾಡುತ್ತಾರಪ್ಪ ಅಂತ ಆಶ್ಚರ್ಯ ಆಗುವಷ್ಟರ ಮಟ್ಟಿಗೆ ಬಸ್ಸುಗಳು, ಅದರಲ್ಲೂ ಜನಗಳೂ ಹೋಗುತ್ತಲೇ ಇರುತ್ತಾರೆ... ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಒಂದಷ್ಟು ಸಾವಿರ ಮಂದಿ ಊರು ಬಿಟ್ಟು ಬೆಂಗಳೂರೆಂಬ ಶಹರ ತಲುಪಿರುತ್ತಾರೆ.

......

ಹಾಸನದ ಬಳಿಕ ಅಲ್ಲಲ್ಲಿ ಸಿಕ್ಕುವ ಟೋಲುಗಳು, ಮತ್ತೆ ನೆಲಮಂಗಲದ ವೈಭವೋಪೇತ ರಸ್ತೆ ಸಿಕ್ಕಾಗ ಬೆಂಗಳೂರು ಹತ್ತಿರ ಬರುತ್ತಿದೆಯೆಂಬ ಸೂಚನೆ ಸಿಕ್ಕುತ್ತದೆ, ವೀಕಾಗಿದ್ದ ಮೊಬೈಲ್ ಸಿಗ್ನಲ್ಲುಗಳು ಪ್ರತ್ಯಕ್ಷವಾಗುತ್ತವೆ... ರೇಡಿಯೋ ಆನ್ ಮಾಡಿದರೆ ರೇಡಿಯೋ ಸಿಟಿ, ಮಿರ್ಚಿಗಳೆಲ್ಲ ಮಾತನಾಡಲು ಶುರು ಮಾಡುತ್ತವೆ... ಬೆಳ್ಳಬೆಂಳಗ್ಗೆ ಕ್ಯಾರಿಯರ್ ಕಟ್ಟಿಕೊಂಡು ಫ್ಯಾಕ್ಟರಿಗೆ ಹೊರಟವರು, ಹೂವು ಮಾರ ಹೊರಟ ಸೈಕಲ್ ವಾಲಾಗಳು, ರಾತ್ರಿ ಪಾಳಿ ಮುಗಿಸಿ ಕ್ಯಾಬಿನಲ್ಲಿ ಮನೆಗೆ ಮರಳುವ ಟೆಕ್ಕಿಗಳು, ಪೇಪರ್ ತಕ್ಕೊಂಡು ಸೈಕಲ್ಲಿನಲ್ಲಿ, ಮೊಪೆಡ್ಡಿನಲ್ಲಿ ಹೊರಟವರು, ಜರ್ಕಿನ್ ಹಾಕಿ ಬೆಳಗ್ಗಿನ ವಾಕ್ ಹೊರಟವರು, ಎಲ್ಲೆಲ್ಲಿಂದಲೋ ಬಂದು ತರಕಾರಿ ಅನ್ ಲೋಡ್ ಮಾಡುತ್ತಿರುವ ಲಾರಿಗಳು... ವಿರಳ ವಿರಳವಾಗಿ ಹೊರಟ ಬೆಂ.ಮ.ನ.ಸಾ. ಬಸ್ಸುಗಳು... ಬೆಂಗಳೂರು ಬಂತೆಂಬ ಸೂಚನೆ ಕೊಡುತ್ತವೆ. ಆಕಾಶ ಕೆಂಪಾಗಿ ನೋಡ ನೋಡತ್ತಿರುವಂತೆ ಬೆಳಗು ಆವರಿಸುತ್ತದೆ... ಆಕಳಿಸಿ ಎದ್ದವರು, ನಿದ್ರೆಯಿಲ್ಲದೆ ರಾತ್ರಿ ಕಳೆದವರು... ಮೈಮುರಿದು ತಲೆ ಬಾಚಿ, ಸೆಲ್ಫೀ ಮೋಡಿನಲ್ಲಿ ಮುಖ ನೋಡಿ. ಅತ್ತಿತ್ತ ಚದುರಿದ ಚಪ್ಪಲಿ ಹುಡುಕಿ ಹಾಕಿ... ತಮ್ಮ ತಮ್ಮ ಸ್ಟಾಪ್ ಬರಲು ಕಾಯುತ್ತಾರೆ....


ಮೊದಲ ಬಾರಿಗೆ ಬೆಂಗಳೂರಿಗೆ ಬಂದವರು ತಮ್ಮ ಸಂಬಂಧಿಗಳಿಗೆ, ಸ್ನೇಹಿತರಿಗೆ ಕರೆ ಮಾಡಿ ಬೆಳ್ಳಂಬೆಳಗ್ಗೆ ಅವರ ತಲೆ ತಿಂದು ಇಂತಿಂಥಾ ಜಾಗ ತಲುಪಿದೆವು ಎಂದು ನೇರ ವೀಕ್ಷಕ ವಿವರಣೆ ಕೊಡುತ್ತಾ.... ತಮ್ಮ ಸ್ಟಾಪಿನಲ್ಲೇ ಕಂಡಕ್ಟರ್ ಇಳಿಸಿದರೆ ಸಾಕಪ್ಪ ಅಂತ ಪ್ರಾರ್ಥಿಸುತ್ತಲೇ ಇರುತ್ತಾರೆ....




ರಾತ್ರಿಯ ಕತ್ತಲಿನ ಸೀಮಿತ ವ್ಯಾಪ್ತಿ, ಬೆಳಗ್ಗೆ ನಿಧಾನಕ್ಕೆ ಕಾಣಿಸುವ ಜಗತ್ತು. ಅರೆಬರೆ ನಿದ್ರೆ... ಪರವೂರಿಗೆ ಕಾಲಿಡುತ್ತಿರುವ ಪುಳಕ... ತಣ್ಣನೆಯ ಮುಂಜಾವಿನ ಗಾಳಿ, ಕೆಂಪಗಿನ ಸೂರ್ಯ, ರಾತ್ರಿಯಿಡೀ ಅರ್ಧರ್ಧ ನಿದ್ರೆಯ ಸುಸ್ತು... 25 ಪರ್ಸೆಂಟಿಂಗಿಂತಲೂ ಕಡಿಮೆ ಚಾರ್ಜ್ ಉಳಿದಿದೆ ಅಂತ ತೋರಿಸುತ್ತಿರುವ ಮೊಬೈಲು, ಮುದುಡಿದ ಶಾಲು, ಕೆದರಿದ ಕೂದಲು, ತಲೆಯಡಿ ಸುಕ್ಕಾದ ಬ್ಯಾಗ್ ಎಲ್ಲ ರಾತ್ರಿ ಪ್ರಯಾಣದ ಸಾಕ್ಷಿಗಳು...
.....

"ಯಾರಪ್ಪ ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, ಯಶ್ವಂತ್ ಪುರ, ನವರಂಗ್...."ಜನ ಇಳಿಯುತ್ತಲೇ ಹೋಗುತ್ತಾರೆ, ಮೆಜೆಸ್ಟಿಕ್ಕು ಬರುವಾಗ ಅಳಿದುಳಿದ ನಾಲ್ಕಾರು ಮಂದಿ ಇಳಿದ ಬಳಿಕ ಬಸ್ಸು ಎತ್ತ ಹೋಗುತ್ತದೆ ಎಂದು ನೋಡುವ ಆಸಕ್ತಿ ಯಾರಿಗೂ ಇರುವುದಿಲ್ಲ., ಬಿಳಿ ಬಣ್ಣದ ಯೂನಿಫಾರಂ ತೊಟ್ಟ ಡ್ರೈವರ್, ಕಂಡಕ್ಟರ್ ಮಾಮನಾನಿಗೆ ಥ್ಯಾಂಕ್ಸ್ ಹೇಳುವ, ಟಾಟಾ ಹೇಳುವವರೂ ಬಹುಶಹ ಕಡಿಮೆಯೇ...
ಅಷ್ಟೊತ್ತು ಆಸರೆಯಾದ ಬಸ್ಸಿನಿಂದ ಸ್ಟಾಪ್ ಬಂದಾಕ್ಷಣ ಇಳಿದು... ಮತ್ತೆ ಲೌಕಿಕಕ್ಕೆ ಮರಳಿ ತಮ್ಮ ತಮ್ಮ ಕಾರ್ಯಗಳಿಗೆ ಹೊರಡುವ ಧಾವಂತ ಪ್ರಯಾಣಿಕರಿಗಾದರೆ ಬೆಳ್ಳಂಬೆಳಗ್ಗೆ ಹತ್ತೂರುಗಳಿಂದ ಬಂದು ಸೇರುವ ಸಾವಿರಗಟ್ಟಲೆ ಮಂದಿಗೆ ತಿನ್ನಿಸುವ ಟೆನ್ಶನ್ ಬೆಂಗಳೂರೆಂಬ ಮಹಾನಗರಕ್ಕೆ.... ಇಂದು ರಾತ್ರಿ ಮತ್ತೆ ಹೊರಟು ಮಂಗಳೂರು ತಲಪುವ ತವಕ ನಾವು ಹತ್ತಿ ಬಂದ ಅದೇ ಬಸ್ಸಿಗೆ....
"ಮಲ್ಲಿಗೆ ಹೂವೇಯಾ.... ಕನಕಾಂಬ್ರ... ಎಲ್ಲಿ ಬಿಡ್ಲಿ ಸರ್... ಏನ್ ಗುರೂ... ?" ಬೆಂಗಳೂರಿಗರ ಸಂಭಾಷಣೆ, ಮಾತುಗಳಿಗೆ ಅಚ್ಚರಿ ಪಡುತ್ತಾ ಅಪ್ಪಟ ಮಂಗಳೂರಿಗನೊಬ್ಬ ತಡವರಿಸುತ್ತಿರಬೇಕಾದರೆ ಯಾವುದೋ ಆಟೋ ಆತನನ್ನು ತಲುಪಿಸುವಲ್ಲಿಗೆ ತಲಪಿಸಿ ಮುಂದೆ ಸಾಗುತ್ತದೆ... ಮತ್ತೊಂದು ದಿನ ಶುರುವಾಗುತ್ತದೆ...

.....

ಕತ್ತಲಿನಲ್ಲೇ ಗಮ್ಯ ತಲಪುವ ಬೆಳಕಿನಾಟದ ರಾತ್ರಿ ಪ್ರಯಾಣ... ಇಲ್ಲಿ ಹೊರಡುವ, ತಲಪುವ ಜಾಗ ಯಾವುದೇ ಊರಿರಬಹುದು. ಆದರೆ ಅನುಭೂತಿ ಮಾತ್ರ ಅದುವೇ... ಅನುಭವಗಳು ಬೇರೆ ಬೇರೆ ಇದ್ದೀತು... ರಾತ್ರಿ ಝಗಮಗಿಸುವ ಹೊಟೇಲುಗಳು, ಆ ಚಿತ್ರಗೀತೆಗಳ ಅಬ್ಬರ, ಬಿಸಿಬಿಸಿ ಬೋಂಡಾ, ಚಹಾ ಮಾರುವ ಅಂಗಡಿಗಳು ಹಗಲು ಹೊತ್ತು ಸೊರಗಿ ಮಂಕಾಗಿರುತ್ತವೆ... ನಮ್ಮನ್ನು ಹೊತ್ತು ಬರುವ ಬಸ್ಸು ಯಾವುದೋ ಪೆಟ್ರೋಲ್ ಬಂಕಿನ ಪಕ್ಕ ಹಗಲಿನ ಬಿಸಿಲಿಗೆ ಅನಾಥವಾಗಿ ನಿಂತಿರುತ್ತದೆ. ಸಂಜೆಯಾದಂತೆ ಮತ್ತೆ ತೊಳೆದು ಶೃಂಗಾರಗೊಂಡು ಆನಂದ ರಾವ್ ಸರ್ಕಲ್ಲಿಗೆ ಬಂದು ಜನರನ್ನು ಹತ್ತಿಸಿ ಮತ್ತೆ ಮಂಗಳೂರಿಗೆ... ಮತ್ತದೇ ಕಥೆ... ಗಮ್ಯ ತಲುಪುವ ವರೆಗೆ...

.....


ಎಷ್ಟೋ ದಿನದ ಬಳಿಕ ಊರಿಗೆ ಬರುವವರಿಗೆ ಮೆಜೆಸ್ಟಿಕ್ಕಿನಲ್ಲಿ ಮಂಗಳೂರಿನ ಬಸ್ಸಿನ ಕಂಡಕ್ಟರ್ ಹತ್ರ ಅಣ್ಣಾ ಉಬಾರ್ ಏತ್ ಪೊರ್ತುಗೆ ಎತ್ತುಂಡು ಅಂತ ತುಳುವಿನಲ್ಲೇ ಮಾತನಾಡಿ ಊರನ್ನು ಇಲ್ಲೇ ಕಾಣುವ ಹಂಬಲ... ಊರಿಗೆ ಹೊರಟದ್ದು, ತಲುಪಿದ್ದು ಸೆಲ್ಫೀ ತೆಗೆದು ಸ್ಟೇಟಸ್ಸಿನಲ್ಲಿ ಹಾಕುವ ಆತುರ, ಬೆಂಗಳೂರಿನಲ್ಲಿ ಪಡೆದದ್ದು, ಕಳೆದುಕೊಂಡದ್ದರ ಮೆಲುಕು... ಹೊಸ ಕೆಲಸ ಸಿಕ್ಕಿದ್ದು,ತ ಕೆಲಸ ಕಳೆದುಕೊಂಡದ್ದು, ಪ್ರಮೋಶನ್ ಸಿಕ್ಕಿದ್ದು... ಬೆಂಗಳೂರಿನಲ್ಲಿ ಕಲಿತದ್ದು, ಮರೆತದ್ದು ಎಲ್ಲವೂ ಸಿನಿಮಾ ದೃಶ್ಯಗಳ ಹಾಗೆ ನೆಲ ಮಂಗಲ ತಲಪುವ ವರೆಗೂ ಮೇಲಿನ ಸೇತುವೆಯಲ್ಲಿ ಓಡುವ ಮೆಟ್ರೋ ರೈಲಿನ ಹಾಗೆ ಓಡುತ್ತಲೇ ಇರುತ್ತದೆ. ರಾತ್ರಿಯ ಕತ್ತಲ ಸೀಳಿ ಸಾಗುವ ಬಸ್ಸಿನೊಂದಿಗೆ ಒಂದು ಆರಂಭದಿಂದ ಗಮ್ಯ ತಲಪುವ ವರೆಗಿನ ಕಾತರ, ಆತಂಕ ಮತ್ತು ಪ್ರಯಾಣದ ಕ್ಷಣಕ್ಷಣವನ್ನೂ ತಾಳ್ಮೆಯಿಂದ ಸವಿಯುವ ಮನಸ್ಸುಗಳ ನಾಗಾಲೋಟ.... 




ಈ ಒಂದು ರಾತ್ರಿಯ ಕಥೆ ಮತ್ತೊಂದಿಷ್ಟು ರಾತ್ರಿ ಹಗಲುಗಳ ಭವಿಷ್ಯಕ್ಕೆ ಸೇತು ಮಾತ್ರವಲ್ಲ, ಒಂದು ರಾತ್ರಿಯ ಪಯಣ ಹೆಡ್ ಲೈಟಿನಾಚೆಗಿನ ಬೆಳಕಿನ ವ್ಯಾಪ್ತಿಯ ನಂತರದ ಕತ್ತಲುಗಳಲ್ಲಿ ಅವಿತಿರುವ ಸಾಧ್ಯತೆಗಳನ್ನು ಅರಸುತ್ತಾ ಹೋಗುವಾಗ ಸಿಕ್ಕುವ ಪುಟ್ಟ ಸ್ಪೇಸ್ ಕೂಡಾ ಹೌದು....

-ಕೃಷ್ಣಮೋಹನ ತಲೆಂಗಳ (16.06.2020).


1 comment:

Varijakshi.yash. dammadka. said...

ಸರ್,
ಸುಂದರವಾಗಿದೆ ಭಾವಾಭಿವ್ಯಕ್ತಿ