ಆಸ್ಪತ್ರೆಯ ವರಾಂಡಗಳು ಮತ್ತು ಧ್ಯಾನಸ್ಥ ಮನಸ್ಸು!


ಉದರ, ಪ್ರಸವ, ಸ್ಮಶಾನ ವೈರಾಗ್ಯಗಳು ಮಾತ್ರ ನಮ್ಮನ್ನು ಅಧೀರರಾಗಿಸುವುದಲ್ಲ. ಅಸ್ತಿತ್ವದ ಬಗ್ಗೆ, ಅಸ್ಪಷ್ಟ ಭವಿಷ್ಯದ ಬಗ್ಗೆ, ಬದುಕಿನ ತನಕ ನಾವು ಸಾಧನೆ ಅಂದುಕೊಂಡಿದ್ದರ ನಶ್ವರತೆ ಬಗ್ಗೆ ಎಲ್ಲ ಮತ್ತೊಮ್ಮೆ ಯೋಚಿಸುವ ಹಾಗೆ ಮಾಡುವ ಮತ್ತೊಂದು ಜಾಗ ಇದೆ, ಅದು ಆಸ್ಪತ್ರೆ! ರಕ್ತದ ಮಾದರಿ ಕೊಟ್ಟ ಬಳಿಕ ಫಲಿತಾಂಶಕ್ಕೆ ಕಾಯುವ ಲ್ಯಾಬುಗಳು ಹಾಗೂ ಪುನರ್ಜನ್ಮ ನೀಡುವ ಐಸಿಯು ವಾರ್ಡುಗಳು ಒಂದು ಧ್ಯಾನಸ್ಥ ಸನ್ನಿವೇಶವನ್ನು, ಒಂದು ಆಧ್ಯಾತ್ಮಿಕ ಜಿಜ್ಞಾಸೆಗಳ ತಾಕಲಾಟಕ್ಕೆ ದೂಡುವುದು ಸುಳ್ಳಲ್ಲ...

ನಿಯಮಿತವಾಗಿ ನಡೆಯುತ್ತಿದ್ದ ಬದುಕು, ಒಂದು ಹಳಿ ಮೇಲೆ ಸಾಗುತ್ತಿದ್ದ ರೈಲು, ಸರಾಗವಾಗಿ ಹೋಗುತ್ತಿದ್ದ ಬಂಡಿ ದಿಢೀರ್ ಹಳ್ಳಿ ತಪ್ಪಿದ ಹಾಗೆ, ಕುಸಿದು ಬಿದ್ದ ಹಾಗೆ, ಆಘಾತವಾದ ಕಾಡುವುದು ಅನಾರೋಗ್ಯ. ಕೆಲವೊಮ್ಮೆ ಮುನ್ಸೂಚನೆ ಕೊಟ್ಟು, ಕೆಲವೊಮ್ಮೆ ಹೇಳದೇ ಕೇಳದೆ ಕಾಡುವ ಸ್ಟ್ರೋಕು, ಬ್ಲಾಕು, ಇನ್ನು ಏನೇನೋ ಸಮಸ್ಯೆಗಳು. ಆ ಸ್ಟೇಜು ದಾಟಿದೆ, ಈ ಹಂತ ಕಳೆದಿದೆ ಎಂಬಿತ್ಯಾದಿ ಟಿಪ್ಪಣಿಗಳಿಗೆ ಕಾಣವಾಗುವ ನಮ್ಮದೇ ದೇಹದೊಳಗೆ ಅವಿತು ಧುತ್ತನೆ ಪ್ರಕಟವಾಗಿ ನಮ್ಮನ್ನೇ ಅಧೀರರಾಗಿಸುವ ಸಮಸ್ಯೆಗಳು.

ರೋಗಗಳನ್ನು, ಬಾಧೆಯ ತೀವ್ರತೆಯನ್ನು ನಿರೂಪಿಸುವುದು ಟೆಸ್ಟು ರಿಪೋರ್ಟುಗಳು, ಅಲ್ವ? ಒಂದು ಪ್ರಯೋಗಾಲಯದಲ್ಲಿ ರಕ್ತ, ಮೂತ್ರ, ಅಥವಾ ಬಯಾಪ್ಸಿಯ ಬಳಿಕ ನೀಡುವ ಮಾದರಿಗಳು ಪರೀಕ್ಷೆಗೊಳಗಾಗಿ ರಿಸಲ್ಟ್ ಬರುವ ವರೆಗಿನ ಆತಂಕ ಅರೋಗ್ಯವಂತನ ಮನಃಶಾಂತಿಯನ್ನೂ ಹಿಂಡಿ ಹಿಪ್ಪೆ ಮಾಡಬಲ್ಲುದು. ಫಿಫ್ಟಿ-ಫಿಫ್ಟಿ ಸಾಧ್ಯತೆಗಳ ನಿರೀಕ್ಷೆಗಳು ಬೇಡದ್ದನ್ನೇ ಯೋಚಿಸುವ ಹಾಗೆ, ಋಣಾತ್ಮಕ ಫಲಿತಾಂಶವನ್ನೇ ನಿರೀಕ್ಷಿಸುವ ಹಾಗೆ ಮಾಡಬಹುದು. ಹಾಗಾದರೆ ಹೇಗೆ, ಹೀಗಾದರೆ ಹೇಗೆ ಎಂಬಿತ್ಯಾದಿ ದುಗುಡ ಹುಟ್ಟು ಹಾಕಿ ಇರುವ ನೆಮ್ಮದಿಯನ್ನೂ ಕಸಿಯಬಹುದು. ಫಲಿತಾಂಶ ವಿಳಂಬವಾದರೆ, ವೈದ್ಯರು ಇನ್ನಷ್ಟು ಟೆಸ್ಟುಗಳಿಗೆ ಸಲಹೆ ಮಾಡಿದರೆ ರೋಗಿಯಲ್ಲಿ, ರೋಗಿಯ ಮನೆಯವರಲ್ಲಿ ಗೊಂದಲದ ಗೂಡು ಬೆಳೆಯುತ್ತಲೇ ಹೋಗುತ್ತದೆ. ಬಹಳಷ್ಟು ಬಾರಿ ಕ್ಯಾನ್ಸರ್ ನಂತಹ ಸಾಧ್ಯತೆಯನ್ನು ಅಲ್ಲಗಳೆಯುವುದಕ್ಕೆ, ಅಥವಾ ರೋಗದ ತೀವ್ರತೆ ನಿರ್ಧರಿಸುವುದಕ್ಕೆ ಬಯಾಪ್ಸಿಯಂತಹ ಪರೀಕ್ಷೆಗಳನ್ನು, ಮತ್ತಷ್ಟು ಸ್ಕ್ಯಾನಿಂಗುಗಳನ್ನು ಸೂಚಿಸಲಾಗುತ್ತದೆ. ಅವುಗಳ ಉದ್ದೇಶ ಭಾರಿ ಅಪಾಯ ದೇಹಕ್ಕೆ ಬಂದಿಲ್ಲ ಎಂದು ಅಲ್ಲಗಳೆಯುವುದೇ ಆಗಿರುತ್ತದೆ. ಆದರೂ ಫಲಿತಾಂಶ ಏನೂ ಆಗಿರಬಹುದೆಂಬ ಸಾಧ್ಯತೆಯೇ ರೋಗಿಯನ್ನು ಅಡಿಮೇಲು ಮಾಡುತ್ತದೆ. ಅಂತಿಮವಾಗಿ ನೆಗೆಟಿವ್ ವರದಿ ಕೈಗೆ ಸಿಕ್ಕರೆ ಮತ್ತೊಂದು ಜನ್ಮ ಪಡೆದ ಹಾಗೆ, ಮತ್ತೊಮ್ಮೆ ಬದುಕಲು ಅವಕಾಶ ಸಿಕ್ಕಿದ ಹಾಗೊಂದು ನಿಟ್ಟುಸಿರು ಬರಬಹುದು.

ಲ್ಯಾಬು ರಿಪೋರ್ಟ್ ಕೈಸೇರುವ ವರೆಗಿನ ತಲ್ಲಣ, ತಳಮಳ, ಆತಂಕ, ಕೆಟ್ಟದ್ದರ ಕಲ್ಪನೆ, ಯಾವುದಕ್ಕೂ ಸಿದ್ಧನಾಗಿರಬೇಕೆಂಬ ನಿರ್ಲಿಪ್ತತೆಗಳು ಇವೆಯಲ್ಲ ಬದುಕನ್ನು ರಿವೈಂಡ್ ಮಾಡಿದ ಹಾಗೆ ಅಥವಾ ತನ್ನತನದ ಬಗ್ಗೆ ಮತ್ತೊಮ್ಮೆ ಯೋಚಿಸುವ ಹಾಗೆ ಮಾಡಬಹುದು, ನೆಗೆಟಿವ್ ಬಂದರೆ ಎಂಬ ರೇ…” ಕಲ್ಪನೆ ಬದುಕಿನ ಮತ್ತೊಂದು ಮಗ್ಗುಲಿನ ಪ್ರಪಾತದ ಅಂಚಿಗೆ ಕರೆದೊಯ್ದು ಆಳವನ್ನು ತೋರಿಸಿದಾಗಿನ ಉದ್ವೇಗವನ್ನು ಒಂದೊಮ್ಮೆ ಕಟ್ಟಿಕೊಡಬಹುದು....

ಪ್ರಕಾಶ್ ರಾಜ್ ಅಭಿಯನದ ತಮಿಳು ಸಿನಿಮಾ “SOMETIMES”  ಈ ಭಾವತೀವ್ರತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಬೇರೆ ಬೇರೆ ಪ್ರಾಯದ ಐದಾರು ಮಂದಿ ಎಚ್ಐವಿ ಪರೀಕ್ಷೆಗೆ ರಕ್ತದ ಮಾದರಿ ಕೊಟ್ಟು ವರದಿ ಬರಲು ತಗಲುವ ನಾಲ್ಕೈದು ಗಂಟೆಗಳ ಅವಧಿಯಲ್ಲಿ ಚಡಪಡಿಸುವ ಸನ್ನಿವೇಶ ಒಂದು ಯತಾರ್ಥ ಭಾವತೀವ್ರತೆಗೆ ಕನ್ನಡಿ ಹಿಡಿದ ಹಾಗಿದೆ. ಮಾನಸಿಕವಾಗಿ ಒಂದು ಕಲ್ಪನೆ ಅಥವಾ ಸಾಧ್ಯತೆ ಕುರಿತಾದ ತೀವ್ರ ಚಿಂತೆ ಹೇಗೆ ನಮ್ಮನ್ನು ಕುಗ್ಗಿಸುತ್ತದೆ ಎಂಬುದನ್ನು ಸಿನಿಮಾದ ಕೊನೆಯ ದೃಶ್ಯ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.

ಒಂದು ವಿಪರ್ಯಾಸವೆಂದರೆ ಲ್ಯಾಬಿನಲ್ಲಿ ನಮ್ಮ ಹಾಗೆ ತುಂಬ ಮಂದಿ ಆಚೀಚೆ ಕುಳಿತಿರುತ್ತಾರೆ, ಬೇರೆ ಬೇರೆ ಪರೀಕ್ಷೆಗೆ ನಮ್ಮ ಹಾಗೆಯೇ ಸ್ಯಾಂಪಲ್ ಕೊಟ್ಟಿರುತ್ತಾರೆ. ನಮ್ಮ ವರದಿ ನೆಗೆಟಿವ್ ಬಂದ ತಕ್ಷಣ ದೊಡ್ಡದೊಂದು ಭಾರವನ್ನು ಇಳಿಸಿದ ಹಾಗೆ ಹಗುರವಾಗಿ ದೇವರಿಗೊಂದು ಥ್ಯಾಂಕ್ಸ್ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡುತ್ತೇವೆ. ನಮ್ಮ ನಂತರವೂ ವರದಿಗಾಗಿ ಕುಳಿತಿರುವವರ ಆತಂಕ, ತಲ್ಲಣ, ತಳಮಳ ಆ ಕೊಠಡಿಯೊಳಗೆ ಮಡುಗಟ್ಟಿಯೇ ಇದೆ ಎಂಬುದು ಆ ಕ್ಷಣಕ್ಕೆ ನಮಗೆ ಹೊಳೆಯುವುದೇ ಇಲ್ಲ! ಅಲ್ವ?

ಕುಳಿತಯಲ್ಲಿಯೇ ಬದುಕಿನ ಅನೇಕ ಸತ್ಯದರ್ಶನಗಳನ್ನು, ಕ್ಷುಲ್ಲಕತೆಯನ್ನು ತೋರಿಸಿಕೊಡುವ ಇನ್ನೊಂದು ತಾಣ ಆಸ್ಪತ್ರೆಗಳ ಮೌನವಾಗಿರುವ ಐಸಿಯು ವಾರ್ಡಿನ, ಆಪರೇಶನ್ ಥಿಯೇಟರ್ ಹೊರಗಿನ ವೆರಾಂಡ! ಅಲ್ಲಿ ಸಾಲು ಸಾಲು ಕುರ್ಚಿಗಳನ್ನು ಜೋಡಿಸಿಟ್ಟಿರುತ್ತಾರೆ ನೋಡಿದ್ರ? ತುಂಬ ಮಂದಿ ತಲೆಯಲ್ಲಿ ಚಿಂತೆ ಹೊತ್ತು, ಹೇಳಲೂ ಆಗದೆ, ಮಾತನಾಡಲೂ ಆಗದೆ ಮಡುಗಟ್ಟಿನ ಭಾವಗಳನ್ನು ತುಂಬಿಕೊಂಡು ಮೌನವಾಗಿ ಕುಳಿತಿರುತ್ತಾರೆ. ಐಸಿಯು ಬಾಗಿಲಿನಲ್ಲಿರುನ ವಾಚ್ ಮ್ಯಾನ್ ಕರೆದು ನೀಡುವ ಚೀಟಿಗಳಲ್ಲಿನ ಔಷಧಿಗಳನ್ನು ತಂದುಕೊಟ್ಟ ಮೇಲೆ ಮತ್ತದೇ ಕುರ್ಚಿಗೆ ಹೋಗಿ ಕುಳಿತುಕೊಳ್ಳುತ್ತಾರೆ. ಏನೋ ಯೋಚಿಸ್ತಾರೆ, ಮೊಬೈಲ್ ಬ್ರೌಸ್ ಮಾಡಿದಂತೆ ಕೂರುತ್ತಾರೆ. ತಲೆಯೊಳಗೆ ಬೇರೇಯದೇ ರೈಲು ಓಡುತ್ತಿರುತ್ತದೆ.

ಪೇಶಂಟ್ ಕಂಡೀಶನ್ ಈಗ ಹೇಗಿದೆ, ಸುಧಾರಣೆ ಇದೆಯಾ, ಬೇರೆ ಆಸ್ಪತ್ರೆಗೆ ಕರ್ಕೊಂಡು ಹೋಗ್ಬೇಕಾ?” ಎಂಬಿತ್ಯಾದಿ ಪ್ರಶ್ನೆಗಳನ್ನು ಸಿಸ್ಟುರುಗಳಲ್ಲಿ, ಡ್ಯೂಟಿ ಡಾಕ್ಟ್ರಲ್ಲಿ ಕೇಳಿದ್ರೆ ಸರಿಯಾದ ಉತ್ತರ ಸಿಗಲು ಸಾಧ್ಯವಿಲ್ಲ. ಮುಖ್ಯ ಡಾಕ್ಟ್ರು ಸಂಜೆ ಬರ್ತಾರೆ ಅವರತ್ರ ಕೇಳಿ ಎಂಬ ಉತ್ತರ ಸಿಕ್ತದೆ, ಇದು ಸಹಜ ಕೂಡಾ. ರೋಗಿಯ ಉಸ್ತುವಾರಿ ಹೊತ್ತ ಡಾಕ್ಟ್ರೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಬೆಳ್ಳಂಬೆಳಗ್ಗೆಯೋ, ಸಂಜೆಯೋ ಡಾಕ್ಟ್ರು ಬರುವ ಹೊತ್ತನ್ನೇ ಕಾದು ಕುಳಿತು ಸರಸರನೇ ಅವರು ಐಸಿಯು ಒಳಗೆ ಹೋದದ್ದನ್ನು ನೋಡ್ತಾ ಅಲರ್ಟ್ ಆಗುವುದು, ಒಂದರ್ಧ ಗಂಟೆ ಬಿಟ್ಟು ಹೊರಗೆ ಬಂದಾಗ ಬಾಗಿಲಲ್ಲಿಯೇ ಕಾದು, ಇವತ್ತು ಹೇಗಿದೇ ಡಾಕ್ಟ್ರೇ ಅಂತ ಕೇಳುವುದು, ಅವರು ವೈದ್ಯಕೀಯ ಭಾಷೆಯಲ್ಲಿ ಪಟಪಟನೆ ಹೇಳಿದ್ದು ಪೂರ್ತಿ ಅರ್ಥವಾಗದೆ ಮತ್ತಷ್ಟು ಕಂಗಾಲಾಗುವುದು.... ಎಷ್ಟೊಂದು ಟೆನ್ಶನ್ನುಗಳು.

ಆ ಹೊತ್ತಿಗೆ ಅಲ್ಲಿರುವ ಸಿಸ್ಟರುಗಳು, ಬಾಗಿಲು ಕಾಯುವ ಭಟನೇ ಪ್ರತ್ಯಕ್ಷ ದೇವರಂತೆ ಕಾಣುತ್ತಾರೆ. ನಿದ್ರೆಗೆಟ್ಟು 24 ಗಂಟೆಯೂ ಐಸಿಯು ವೆರಾಂಡದಲ್ಲಿ ಕಾಯುತ್ತಿರುವ ಪೇಶಂಟಿನ ಮನೆಯವರು ಗೋಗರೆಯುತ್ತಾರೆ ಬಾಗಿಲಿನ ಹತ್ರ ನಿಂತವನ ಹತ್ರ. ದಯವಿಟ್ಟು ಡಾಕ್ಟ್ರು ಬಂದಾಗ ತಿಳಿಸಿ, ಮಾತಾಡ್ಲಿಕೆ ಇದೆ…” ಅಂತ. ಆಯ್ತು ಸಾರ್ ನೀವು ಟೆನ್ಶನ್ ಮಾಡಬೇಡಿ, ಕರೀತೇನೆ, ಆರಾಮವಾಗಿ ಕೂತಿರಿ ಅಂತ ಅವ ಹೇಳ್ತಾನೆ. ಗ್ರಹಚಾರಕ್ಕೆ ನೀವು ರೂಮಿಗೆ ಹೋದಾಗ, ತಿಂಡಿ ತಂದುಕೊಡಲು ಕ್ಯಾಂಟೀನಿಗೆ ಹೋದಾಗ, ಮಾತ್ರೆ ತರಲು ಮೆಡಿಕಲ್ಲಿಗೆ ಹೋದಾಗಲೇ ಡಾಕ್ಟ್ರು ಬಂದು ಹೋಗಿ ಆಗಿರುವುದೂ ಇದೆ, ಮತ್ತೆ ಅವರು ಬರುವುದು ಮರುದಿನ ಅಂತ ಗೊತ್ತಾದರೆ ಮತ್ತಷ್ಟು ಕಂಗಾಲಾಗುವ ಹಾಗೆ. ಬಾಗಿಲ ಕಡೆಗೆ ನೋಡಿದರೆ, ನೀವು ಡಾಕ್ಟ್ರು ಬಂದ್ರೆ ಸೂಚನೆ ಕೊಡಿ ಅಂತ ರಿಕ್ವೆಸ್ಟ್ ಮಾಡಿದ್ದ ವಾಚ್ ಮ್ಯಾನ್ ಶಿಫ್ಟ್ ಮುಗಿಸಿ ಬೇರೊಬ್ಬ ಬಂದು ಕೂತಿರ್ತಾನೆ. ಅವನಿಗೆ ಮತ್ತೊಮ್ಮೆ ಪರಿಚಯ ಮಾಡಿಕೊಡಬೇಕಾಗುತ್ತದೆ...!

ಕೆಲವೊಂದು ಸಲ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಐಸಿಯು ಒಳಗಡೆ ಮಲಗಿರುವಾತ ಗುಣವಾಗಿ ಮನೆಗೆ ಮರಳಿಯಾನೇ, ಇದಕ್ಕಿಂತ ಹೆಚ್ಚಿನ ಚಿಕಿತ್ಸೆ ಕೊಡಿಸುವ ಸಾಧ್ಯತೆ, ಕೊಟ್ಟರೆ ಪ್ರಯೋಜನ ಇದೆಯಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಸಿಗುವುದಿಲ್ಲ. ಆಸ್ಪತ್ರೆಗಳಲ್ಲಿ ಪರಿಚಯದ ಡಾಕ್ಟ್ರು ಇದ್ರೆ, ಅಥವಾ ಏನಾದರೂ ಗುರ್ತದವರು ಇದ್ರೆ ಅವರಿವರ ಮೂಲಕ ಕೇಳಿಸಿ ಆದರೂ ಉತ್ತರ ಪಡೆಯುವ ಪ್ರಯತ್ನ ಮಾಡಬಹುದು. ಅಪರಿಚಿತ ಊರಿನಲ್ಲಿ, ಅಪರಿಚಿತ ಜಾಗದಲ್ಲಿ ಕೆಲವೊಮ್ಮೆ ಅದೂ ಸಾಧ್ಯವಾಗುವುದಿಲ್ಲ. ವ್ಯಸ್ತ ಬದುಕಿನಲ್ಲಿ ದಿನಾ ಹತ್ತಾರು ರೋಗಿಗಳನ್ನು ನೋಡಿಕೊಳ್ಳುವ ವೈದ್ಯರಿಗೂ ಪ್ರತಿ ರೋಗಿಯ ಮನೆಯವರನ್ನೂ ಕರೆದು ಸಾವಕಾಶವಾಗಿ ಮಾತನಾಡುವಷ್ಟು ವ್ಯವಧಾನ ಎಲ್ಲ ಸಂದರ್ಭ ಇರುವುದಿಲ್ಲ. ಕೆಲವೊಮ್ಮೆ ವೈದ್ಯರು ತಾವಾಗಿ ತುಂಬ ಸಾವಧಾನದಿಂದ, ಸಂಯಮದಿಂದ ಸರಳವಾಗಿ ವಿವರಣೆ ನೀಡುತ್ತಾರೆ, ಅದು ರೋಗಿಯ ಅವಲಂಬಿತರಿಗೆ ಆತ್ಮವಿಶ್ವಾಸ ತುಂಬುವುದು ಮಾತ್ರವಲ್ಲ, ಆ ಹೊತ್ತಿಗೆ ಅದು ಆತನಲ್ಲಿ ಜೀವನೋತ್ಸಾಹ ತುಂಬುವ ಸಂಜೀವಿನಿ ಆಗಬಲ್ಲುದು ಅಲ್ವ.

ಐಸಿಯು ವಾರ್ಡಿನ ಹೊರಗಿನ ವೆರಾಂಡದಲ್ಲಿನ ಮಂದ ಬೆಳಕು, ಅಸಹಜ ಮೌನ, ದಾದಿಯರ, ವಾರ್ಡು ಬಾಯ್ ಗಳ ಓಡಾಟ, ಸ್ಟ್ರೆಚರುಗಳಲ್ಲಿ ನಿಶ್ಚಲದಂತಿರುವ ಶರೀರಗಳನ್ನು ಲಿಫ್ಟಿನ ಮೂಲಕ ಬೇರೆ ಬೇರೆ ಪರೀಕ್ಷೆಗಳಿಗೆ ಕೊಂಡು ಹೋಗುವುದು. ಅವಸರ ಅವಸರವಾಗಿ ಓಡಾಡುವ ಡಾಕ್ಟ್ರು, ಗುಂಪಾಗಿ ಬರುವ ಪಿಜಿ ಸ್ಟೂಡೆಂಟುಗಳು. ತಮ್ಮ ಪಾಡಿಗೆ ನಿರ್ಲಿಪ್ತರಾಗಿ, ಕೆಲವೊಮ್ಮೆ ಆಪ್ತರಾಗಿ ಕಾಣುವ ಬಾಗಿಲ ಭಟರು, ಲಿಫ್ಟ್ ಆಪರೇಟರುಗಳು... ಎಷ್ಟೊಂದು ಭಿನ್ನ ಜಗತ್ತು. ದಿನಪೂರ್ತಿ ಏನೋ ಕಾತರ, ಆತಂಕ, ನಿರೀಕ್ಷೆ, ಒಂದು ಶುಭ ಸುದ್ದಿ ಕೇಳಲು ಪರಿತಪಿಸುವ ಮನಸ್ಸು, ಬದುಕಿನ ಉತ್ಸಾಹವನ್ನು ಹೀರಿಬಿಡಿಸುವಂತಹ ಜಿಗುಪ್ಸೆ, ಆಶಾವಾದ ಕುಂದುವುದು ಸ್ಪಷ್ಟವಾಗುತ್ತಾ ಬಂದರೆ ಮುಂದಿನ ದಾರಿಯತ್ತ ನಿರ್ವಿಕಾರವಾಗಿ ಯೋಚಿಸುವ ಮನಸ್ಸು... ಮಾತ್ರವಲ್ಲ ಬಂಧು ಮಿತ್ರರಿಂದ ಪದೇ ಪದೇ ಬರುವ ಕಾಲು, ಮೆಸೇಜುಗಳು ಈಗೇ ಹೇಗಿದ್ದಾರೆ, ಈಗ ಹೇಗಿದೆ, ಡಾಕ್ಟ್ರು ಏನು ಹೇಳಿದ್ದಾರೆ?” ಎಂಬ ಹಾಗೆ. ಎಷ್ಟೋ ಸಲ ಇಂತಹ ಪ್ರಶ್ನೆಗಳಿಗೆ ನಿಖರ ಉತ್ತರ ಇಲ್ಲದಿದ್ದರೂ ಅಲ್ಲಿ ಕುಳಿತಿರುವಾತ ಏನಾದರೂ ಉತ್ತರ ಹೇಳಲೇಬೇಕಾಗುತ್ತದೆ.

ಒಂದು ಹಂತದ ಬಳಿಕ ಐಸಿಯು ವಾರ್ಡು, ವೈದ್ಯರ ಓಡಾಟ, ನೆಂಟರಿಷ್ಟರ ಕಾಲ್ ಗಳು ಇವೆಲ್ಲ ಆತನಿಗೆ ರೂಢಿಯಾಗಿ ಬಿಡುತ್ತದೆ. ಅಲ್ಲಿ ಕುಳಿತ ಮೌನವಾದ ಮನಸ್ಸುಗಳು, ಭಾರವಾದ ಹೆಜ್ಜೆಗಳು, ಕಠಿಣವಾದ ಭಾವಗಳು ಅತನನ್ನೂ ಅದರ ಭಾಗವಾಗಿಸಿ ಬಿಡುತ್ತದೆ.

ಎಲ್ಲ ಸರಿ. ರೋಗಿ ಗುಣಮುಖನಾಗಿದ್ದು ನಮಗೇ ಸ್ಪಷ್ಟವಾಗಿದೆ ಅಂತ ಇಟ್ಟುಕೊಳ್ಳೋಣ. ತುಂಬ ಸಲ ಏನಾಗ್ತದೆ ಅಂದ್ರೆ, ಸಿಸ್ಟರ್ ನಮ್ಮನ್ನು ಯಾವಾಗ ಡಿಸ್ಚಾರ್ಜ್ ಮಾಡ್ತೀರಿ?” ಅಂತ ಕೇಳಿದ್ರೆ, ಗೊತ್ತಿಲ್ಲ ಡಾಕ್ಟ್ರು ಸಂಜೆ ಬರ್ತಾರೆ ಮತ್ತೆ ನೋಡುವ ಅಂತ ಹೇಳ್ತಾರೆ. ಡಾಕ್ಟ್ರು ಎಷ್ಟೊತ್ತಿಗೆ ಬರ್ತಾರೆ ಅಂತ ನಿಖರವಾಗಿ ಹೇಳುವುದೂ ಕಷ್ಟ. ಅವರಿಗೂ ಅನೇಕ ಜವಾಬ್ದಾರಿಗಳಿರುತ್ತವೆ. ಒಂದು ವೇಳೆ ಸಂಜೆ ತಡವಾಗಿ ಬಂದ ಬಳಿಕ ಅವರು ಡಿಸ್ಚಾರ್ಜ್ ಮಾಡಬಹುದು ಅಂತ ಬರೆದು ಕೊಟ್ಟರೂ ಆ ದಿನ ಲೇಟಾಯ್ತು ಎಂಬ ಕಾರಣಕ್ಕೆ ಡಿಸ್ಚಾರ್ಜು ಸಾಧ್ಯವಾಗುವುದಿಲ್ಲ, ಮತ್ತೊಂದು ದಿನದ ಬಿಲ್ ಕೊಟ್ಟು ಹೊರಬರಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ತುಂಬ ಮಂದಿಗೆ ಇಂತಹ ಅನುಭವ ಆಗಿರುತ್ತದೆ. ಗುಣಮುಖರಾಗಿ ಆಸ್ಪತ್ರೆಯಿಂದ ಮುಕ್ತಿ ಸಿಕ್ಕಿ ಹೊಸ ಬದುಕು ಸಿಕ್ಕಿದ ಸಮಾಧಾನದಲ್ಲಿ ಈ ಬಗ್ಗೆ ಹೆಚ್ಚು ತಲೆಕೆಡಿಸಲು ಹೋಗುವುದಿಲ್ಲ ಹಲವರು.

ನಿಖರ ಫಲಿತಾಂಶ ತೋರಿಸದ ಕಾಯಿಲೆ, ಏರುತ್ತಿರುವ ಬಿಲ್, ಬೇಕಾಗಿರುವ ರಕ್ತ, ದೊಡ್ಡಾಸ್ಪತ್ರೆಯ ಲ್ಯಾಬಿಗೆ ಕೊಂಡುಹೋಗುವ ಸ್ಯಾಂಪಲ್ಲು,  ಈ ಸಮಸ್ಯೆಗೆ ಇನ್ಶೂರೆನ್ಸ್ ಸಿಗ್ಲಿಕಿಲ್ಲ ಎಂಬ ಸಂಶಯದ ಆತಂಕ... ಹೀಗೆ ಆಸ್ಪತ್ರೆಗೆ ಹೋಗಿ ಹೊರಬರುವಷ್ಟರಲ್ಲಿ ಎಷ್ಟೊಂದು ಗಡಿಬಿಡಿಗಳು.

ಬದುಕೆಂದರೆ ಹೀಗೆ, ಇದು ನಾನು, ನಾನೆಂದರೆ ಹೀಗೆ... ಎಂಬಿತ್ಯಾದಿ ಭ್ರಮೆಗಳನ್ನು ತೊಲಗಿಸುತ್ತದೆ ಆಸ್ಪತ್ರೆ, ಆ ಪರಿಸ್ಥಿತಿ ಹಾಗೂ ಮನಸ್ಥಿತಿ. ಒಂದು ಲ್ಯಾಬ್ ರಿಪೋರ್ಟು, ಡಾಕ್ಟ್ರು ಹೇಳುವ ಒಂದು ಫಲಿತಾಂಶ, ಆಸ್ಪತ್ರೆಯ ಯಂತ್ರಗಳು ತೋರಿಸುವ ಅಂಕಿ ಅಂಶಗಳು... ಬಹಳಷ್ಟು ಬಾರಿ ನೀನು ಇಷ್ಟೆಯೇ ಎಂದು ತೋರಿಸಿಕೊಡಬಹುದು. ಭ್ರಮೆಗಳು, ನಿರೀಕ್ಷೆಗಳೆಲ್ಲ ಕಳಚಿಹೋಗುವಂತೆ ಮಾಡಬಲ್ಲ ವೈರಾಗ್ಯಗಳಿಗೆ ಆಸ್ಪತ್ರೆಗಳ ವೆರಾಂಡಗಳು ಬೋಧಿವೃಕ್ಷಗಳಾಗಲೂಬಹುದು.

ಒಳ್ಳೆಯ ಚಿಕಿತ್ಸೆ ಬಳಿಕ ರೋಗಿ ಮತ್ತೆ ಗುಣಮುಖನಾಗಿ ಸಹಜ ಬದುಕು ಸಾಗಿಸಬಹುದು, ಒಂದು ಶಸ್ತ್ರಚಿಕಿತ್ಸೆ ಬಳಿಕ ಮತ್ತೆ ಮೊದಲಿನ ಹಾಗೆ ಜೀವನ ನಡೆಸಬಹುದು, ಬದುಕಿನ ಅಲ್ಲೋಲಕಲ್ಲೋಲ ಸಹಜವಾಗಬಹುದು. ಆದರೆ, ಬದುಕೆಂದರೆ ಇಷ್ಟೇ ಎಂಬ ಹಾಗೆ ಒಂದು ಕ್ಷಣಕ್ಕಾದರೂ ತೋರಿಸಿಕೊಡಬಲ್ಲ ಆಸ್ಪತ್ರೆಯ ವೆರಾಂಡಗಳು ಜನಜಂಗುಳಿಯ ನಡುವೆಯೂ ಧ್ಯಾನಸ್ಥ ಮನಸ್ಸುಗಳನ್ನು ಹುಟ್ಟುಹಾಕುವುದು ಸುಳ್ಳಲ್ಲ!

-ಕೃಷ್ಣಮೋಹನ ತಲೆಂಗಳ

(17.07.2021)

 

No comments: