LIKE, SHARE, COMMENT ಬಯಸುವ YOUTUBE ಚಾನ್ನೆಲ್ಲುಗಳ ಹಿಂದೆ ಗೊತ್ತಿಲ್ಲದ ವಿಚಾರ ತುಂಬಾ ಇವೆ... ಅದು ನಿಮಗೆ ಗೊತ್ತಾ?!

Youtube channel ಅಂದರೇ ಹಾಗೆ, ಒಂಥರಾ ಆಕರ್ಷಣೆ. ಎಲ್ಲರಿಗೂ ತುಂಬ ಕುತೂಹಲ.




ಕೋವಿಡ್ ಯುಗ ಬಂದಾದ ಮೇಲೆ ನನ್ನನ್ನು ತುಂಬ ಆಕರ್ಷಿಸಿದ್ದು ಸುದರ್ಶನ್ ಭಟ್ ಹಾಗೂ ಮನೋಹರ ಭಟ್ ಅವಳಿ ಸಹೋದರರ ಭಟ್ ಎನ್ ಭಟ್ ಚಾನೆಲ್ಲು. ಪಟಪಟನೆ ನಮ್ಮ ಮಂಗ್ಳೂರು ಕನ್ನಡ ಮಾತನಾಡ್ತಾ, ಶುಚಿ, ರುಚಿಯಾಗಿ ಅಡುಗೆ ಮಾಡುವುದನ್ನು ನೋಡಲೂ ಇವತ್ತಿಗೂ ಚಂದ....

ನಂತರ ತುಂಬ ಚಾನೆಲ್ಲುಗಳು ಸೃಜನಶೀಲವಾಗಿ ನಿರ್ವಹಣೆ ಆಗುವುದನ್ನು ನೋಡಿ ಖುಷಿ ಪಟ್ಟಿದ್ದೇನೆ. ಇತ್ತೀಚೆಗೆ ನನ್ನನ್ನು ತುಂಬ ಕಾಡಿದ್ದು ಬೆಂಗಳೂರಿನ ಹುಡುಗ, ಬಿಕಾಂ ವಿದ್ಯಾರ್ಥಿ ಗಗನ್ ಎಂಬಾತನ ಡಾಕ್ಟರ್ ಬ್ರೋ (Dr Bro) ಎಂಬ ಚಾನೆಲ್ಲು. ಇನ್ನೂ 21ರ ಹರೆಯದ ಈ ವಿದ್ಯಾರ್ಥಿಯ ಮಾತು, ಉತ್ಸಾಹ, ಆತನ ಆತ್ಮವಿಶ್ವಾಸ, ಆತ ಗ್ಯಾಜೆಟ್ಟುಗಳನ್ನು ಬಳಸುವ ರೀತಿ, ಪ್ರಪಂಚವನ್ನೇ ಸುತ್ತಿ ಬರುವ ಅದಮ್ಯ ದಾಹ ಹಾಗೂ ಆತನ ಚಾನೆಲ್ಲಿನಲ್ಲಿರುವ ಸ್ವಂತಿಕೆ ಹಾಗೂ ಎನರ್ಜಿ ಬಹಳಷ್ಟು ಆಕರ್ಷಿಸುತ್ತದೆ.

ಆದರೆ, ಆತನ ಸ್ವಗತದ ವಿಡಿಯೋ ಒಂದರಲ್ಲಿ ಹೇಳಿಕೊಂಡ ಹಾಗೆ, ಆತನೂ ನಡೆದು ಬಂದ ದಾರಿ ಸುಲಭ ಆಗಿರಲಿಲ್ಲ... ಎಲ್ಲರ ಹಾಗೆ ಪುಟ್ಟದೊಂದು ಮೊಬೈಲಿನಲ್ಲಿ ಶೂಟಿಂಗ್ ಶುರು ಮಾಡಿ ಬೆಂಗಳೂರು ಎಕ್ಸ್ ಪ್ಲೋರ್ ಮಾಡ ಹೊರಟ ಗಗನ್ ಇಂದು ಜಗತ್ತನ್ನೇ ತನ್ನ ಚಾನ್ನೆಲ್ಲಿನಲ್ಲಿ ತೋರಿಸ್ತಾ ಇದ್ದಾನೆ. ಆತನ ವಿಡಿಯೋಗಳು ಕಾಡಿದ ಗುಂಗಿನಲ್ಲೇ ಇಂಥದ್ದೊಂದು ವಿಚಾರ ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನ್ನಿಸಿದ್ದು.

 

ಗೊತ್ತಿಲ್ಲದ ಸಂಗತಿ ತುಂಬ ಇವೆ....

 

ಯೂಟ್ಯೂಬ್ ಚಾನೆಲ್ಲುಗಳನ್ನು ತುಂಬ ಮಂದಿ ನಾವು ನೋಡ್ತೇವೆ. ಆದರೆ, ಅದರ ಹಿಂದೆ, ಮುಂದೆಯನ್ನು ಸರಿಯಾಗಿ ಅಧ್ಯಯನ ಮಾಡಿ ಅದರಲ್ಲಿ ಪಳಗಿದವರ ಸಂಖ್ಯೆ ತುಂಬ ಕಡಿಮೆ. ಆದರೂ, ಯೂಟ್ಯೂಬ್ ಚಾನೆಲ್ಲು ಮಾಡಿದರೆ ತುಂಬ ದುಡ್ಡು ಮಾಡಬಹುದು ಎಂಬ ಅರ್ಧಸತ್ಯದ ಕಲ್ಪನೆ ಹಲವರಲ್ಲಿದೆ. ಸಾವಿರ ಗಳಿಸ್ತಾರಂತೆ, ತಿಂಗಳು ತಿಂಗಳು ಲಕ್ಷಾಂತರ ರುಪಾಯಿ ಅಕೌಂಟಿಂಗೆ ಬೀಳ್ತದಂತೆ ಅಂತೆಲ್ಲ ಅಂದಾಜಿಗೇ ಗುಂಡು ಹೊಡೆಯುವವರೂ ಇದ್ದಾರೆ.

ಇದು ತಪ್ಪು ಕಲ್ಪನೆಯಲ್ಲ. ಹಾಗಂತ ಎಲ್ಲ ರೂಮರ್ರುಗಳೂ ನಿಜವೂ ಖಂಡಿತಾ ಅಲ್ಲ!

ಸಹಜವಾಗಿ ಎಲ್ಲರಿಗೂ ಈ ಕುತೂಹಲ ಇರುತ್ತದೆ ಸಹಿತ. ಯಾಕೆಂದರೆ ಯೂಟ್ಯೂಬ್ ಚಾನೆಲ್ ಮಾಡಿ ಹೆಸರು ಗಳಿಸಿ, ಜನಪ್ರಿಯರಾದವರೆಲ್ಲ ಯೂಟ್ಯೂಬ್ ಚಾನೆಲ್ಲಿನಿಂದ ಬರುವ ಸಂಪಾದನೆ ಎಷ್ಟು ಅಂತ ಗುಟ್ಟು ಬಿಟ್ಟು ಕೊಡುವುದು ಅಪರೂಪ. ಈ ಗುಟ್ಟು ಜನರ ಆತುರವನ್ನು ಮತ್ತಷ್ಟು ಜಾಸ್ತಿ ಮಾಡುತ್ತದೆ.

ಹವ್ಯಾಸಕ್ಕಾಗಿ Youtube ವಿಡಿಯೋಗಳನ್ನು ಅಪ್ಲೋಡ್ ಮಾಡುವವನಾಗಿ ನನಗೆ ಅನ್ನಿಸಿದ್ದು, ಸಾಮಾಜಿಕ ಜಾಲತಾಣಗಳ ಪೈಕಿ ಯೂಟ್ಯೂಬ್ ನಿಮಗೆ ಹೇಳಲಿಕ್ಕಿರುವುದನ್ನು, ತೋರಿಸಲಿಕ್ಕಿರುವುದನ್ನು ತೋರಿಸಲು ಇರುವ ಅತ್ಯಂತ ಸೃಜನಶೀಲ ವೇದಿಕೆ. ಹಾಗಂತ ಯೂಟ್ಯೂಬ್ ಚಾನೆಲ್ಲು ಮಾಡಿ, ಅದಕ್ಕೆ ಒಂದಿಷ್ಟು ಸಾವಿರ ಸಬ್ ಸ್ಕ್ರೈಬರ್ಸ್ ಹಾಗೂ ವ್ಯೂಸ್ ಬಂದ ತಕ್ಷಣ ಅವರಿಗೆ ತಿಂಗಳು ತಿಂಗಳು ಸಾವಿರಾರು ರುಪಾಯಿ ದುಡ್ಡು ಬರುತ್ತದೆ ಅಂತ ಅರ್ಥ ಅಲ್ಲ. ಹಾಗೆಲ್ಲ ಬಾಳೆಹಣ್ಣಿನ ಸಿಪ್ಪೆ ಸುಲಿದ ಹಾಗೆ ಯಾರೂ ನಿಮಗೆ ಕೂತಲ್ಲಿಗೆ ದುಡ್ಡು ತಂದು ನೀಡುವುದೂ ಇಲ್ಲ.

 

ಸರಳವಾಗಿ ಹೇಳಬೇಕೆಂದರೆ, ಯೂಟ್ಯೂಬ್ ಚಾನೆಲ್ಲಿನವರ ಪ್ರಾಥಮಿಕ ಮಾನದಂಡ (ಇಂತಿಷ್ಟು ಚಂದಾದಾರರು ಆಗಬೇಕು ಹಾಗೂ ಒಂದು ವರ್ಷದ ಅವಧಿಯಲ್ಲಿ ನಿಮ್ಮ ವಿಡಿಯೋಗಳು ಇಂತಿಷ್ಟು ಗಂಟೆ ಕನಿಷ್ಠೆ ವೀಕ್ಷಣೆ ಆಗಬೇಕು) ವನ್ನು ನಮ್ಮ ಚಾನೆಲ್ಲು ಪೂರೈಸಿದರೆ ನಮ್ಮ ಚಾನೆಲ್ಲು ಮಾನಿಟೈಸೇಷನ್ ಗೆ ಅರ್ಹತೆ ಪಡೆಯುತ್ತದೆ. ಅಷ್ಟಕ್ಕೆ ನಿಮಗೆ ದುಡ್ಡು ಬಂತು ಅಂತ ಅರ್ಥ ಅಲ್ಲ. ಬಳಿಕ, ನಿಮ್ಮ ವಿಡಿಯೋಗಳ ಮೂಲಕ ಯೂಟ್ಯೂಬ್ ನವರು ಜಾಹೀರಾತು ಪ್ರಸಾರ ಮಾಡುತ್ತಾರೆ. ಆ ಜಾಹೀರಾತಿನ ಆದಾಯವನ್ನು ಮತ್ತೂ ಕೆಲವೊಂದಷ್ಟು ಮಾನದಂಡ, ಗುರಿಗಳು ಈಡೇರಿದ ಬಳಿಕ ನಿಮಗೆ ನೀಡುತ್ತಾರೆ. ಇದು ಅಷ್ಟು ಸುಲಭವೂ, ಸರಳವೂ ಖಂಡಿತಾ ಅಲ್ಲ.

ಕೇವಲ ಸಬ್ ಸ್ಕ್ರಿಪ್ಶನ್ ಆದಲ್ಲಿಗೆ, ಒಂದಷ್ಟು ಸಾವಿರ ವ್ಯೂಸ್ ಬಂದಲ್ಲಿಗೆ ಯಾವ ವ್ಲಾಗರ್ (ಯೂಟ್ಯೂಬ್ ಚಾನೆಲ್ಲು ನಡೆಸುವವರು) ಕೂಡಾ ದುಡ್ಡು ಸಂಪಾದನೆ ಸುಲಭದಲ್ಲಿ ಮಾಡಲು ಆಗುವುದಿಲ್ಲ. ನಿಯಮಿತವಾಗಿ ವಿಡಿಯೋಗಳನ್ನು ಹಾಕುತ್ತಲೇ ಇರಬೇಕು. ಅದನ್ನು ಆಕರ್ಷಕವಾಗಿ ವಿವಿಧ ಜಾಲತಾಣಗಳ ಮೂಲಕ ಲಿಂಕ್ ಗಳಲ್ಲಿ ಪ್ರಚಾರ ಮಾಡಬೇಕು. ಅದಕ್ಕೆ ಸಾವಿರಾರು ವೀಕ್ಷಕರು ಸಿಕ್ಕಬೇಕು, ಸಿಕ್ಕಿದರೆ ಸಾಲದು ಅವರದನ್ನು ಆದಷ್ಟು ಮಟ್ಟಿಗೆ ಗರಿಷ್ಠ ಅವಧಿಯಲ್ಲಿ ವೀಕ್ಷಿಸಬೇಕು, ಕೇವಲ ವೀಕ್ಷಿಸಿದರೆ ಸಾಲದು, ಜಾಹೀರಾತುಗಳನ್ನು ಆದಷ್ಟು ಮಟ್ಟಿಗೆ ಸ್ಕಿಪ್ ಮಾಡದೆ ಹೆಚ್ಚಿನ ಅವಧಿ ವೀಕ್ಷಿಸಬೇಕು, ವೀಕ್ಷಿಸಿದರೆ ಸಾಲದು, ಲೈಕ್, ಕಮೆಂಟ್ ಮಾಡಬೇಕು.... ವಿಡಿಯೋಗಳು ವೈರಲ್ ಆಗಬೇಕು, ಸಾವಿರ, ಲಕ್ಷಾಂತರ ಮಂದಿಯನ್ನು ಶೀಘ್ರಾತಿಶೀಘ್ರ ತಲುಪಬೇಕು...

ಮಾತ್ರವಲ್ಲ, ಒಟ್ರಾಸಿ (ಬೇಕಾಬಿಟ್ಟಿ) ವಿಡಿಯೋ ಮಾಡಿ ಹಾಕುತ್ತಿರುವುದಲ್ಲ. ಅಲ್ಲಿ ಸ್ಟ್ಯಾಂಡರ್ಡ್ ಪಾಲನೆ ಆಗಬೇಕು, ನೀವು ಬಳಸುವ ಕಂಟೆಂಟ್ ಹಾಗೂ ಹಿನ್ನೆಲೆ ಸಂಗೀತಗಳು ಯೂಟ್ಯೂಬಿನ ನಿಯಮಗಳಿಗೆ ವಿರುದ್ಧ ಆಗಿರಬಾರದು (ಈಗಾಗಲೇ ಜನಪ್ರಿಯವಾಗಿರುವ ಹಿನ್ನೆಲೆ ಸಂಗೀತ ಬಳಸಿದರೆ ಅದು ಹಕ್ಕುಸ್ವಾಮ್ಯ ಉಲ್ಲಂಘನೆ ಆಗುತ್ತದೆ), ಹಿಂಸೆಯನ್ನು ಪ್ರಚೋದಿಸುವ, ಅಶ್ಲೀಲ ಅಥವಾ ಮಕ್ಕಳ ಶೋಷಣೆಯಂತಹ ವಿಚಾರಗಳ ಕುರಿತು ಅಸಡ್ಡೆ ಸಲ್ಲದು... ಹೀಗೆ ತುಂಬ ನಿಯಮಗಳೂ ಇವೆ.

ಇಷ್ಟು ಮಾತ್ರವಲ್ಲ. ನೀವು ಹೇಳಲಿಕ್ಕಿರುವುದನ್ನು ಗಂಟೆ ಗಟ್ಟಲೆ ಹೇಳಿದರೆ ಯಾರಿಗೂ ಅದನ್ನು ವೀಕ್ಷಿಸುವಷ್ಟು ಪುರುಸೊತ್ತೂ ಇರುವುದಿಲ್ಲ. 5-10 ನಿಮಿಷದೊಳಗೆ ತೋರಿಸುವುದನ್ನು ತೋರಿಸಿ ಆಗಬೇಕು. (ನೀವು ಒಂದು 20 ನಿಮಿಷದ ವಿಡಿಯೋ ಹಾಕಿದರೆ, ಅದರ ಸರಾಸರಿ ವೀಕ್ಷಣೆ ಸಮಯ 2-3 ನಿಮಿಷ ಮಾತ್ರ!). ಮಾತ್ರವಲ್ಲ, ವಿಡಿಯೋ ನೋಡಿದವರೆಲ್ಲ ಆ ಚಾನೆಲ್ಲನ್ನು ಸಬ್ ಸ್ಕ್ರೈಬ್ ಮಾಡುವುದಿಲ್ಲ. ನೀವು ಸಬ್ ಸ್ಕ್ರೈಬ್ ಮಾಡಿದರೆ ಮಾತ್ರ ಈ ವಿಡಿಯೋ ನೀಡಿದಾತನಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬುದು ಬಹುಶಃ ಇಂದಿಗೂ ಶೇ.75ರಷ್ಟು ಮಂದಿಗೆ ತಿಳಿದಿಲ್ಲ (SUBSCRIBE ಮಾಡಿದರೆ ದುಡ್ಡು ನೀಡಬೇಕು ಎಂಬ ತಪ್ಪು ಕಲ್ಪನೆ ಇದ್ದರೂ ಇದ್ದೀತು).

 

ಅಷ್ಟು ಮಾತ್ರವಲ್ಲ. ವಿಡಿಯೋ ಚಿತ್ರೀಕರಣ, ಸಂದರ್ಶನ, ಎಡಿಟಿಂಗಿನಷ್ಟೇ ಅದನ್ನು ತಲುಪಿಸುವುದು ಕೂಡಾ ಮುಖ್ಯ. ಚಂದದ ಥಂಬ್ ನೈಲ್ (ನಿಮ್ಮ ಗಮನ ಸೆಳೆಯುವ ಮುಖಪುಟ), ಶೀರ್ಷಿಕೆ, ಹ್ಯಾಶ್ ಟ್ಯಾಗ್, ಸಬ್ ಟೈಟಲ್, ಹಿನ್ನೆಲೆ ಸಂಗೀತ, ಪೂರಕ ಮಾಹಿತಿ (ಡಿಸ್ಕ್ರಿಪ್ಶನ್), ಬಳಸುವ ಭಾಷೆ ಇವೆಲ್ಲ ನಿಮ್ಮ ಪ್ರೇಕ್ಷಕರನ್ನು ತಲುಪುವ ರೀತಿಯನ್ನು ನಿರ್ಧಾರ ಮಾಡುತ್ತವೆ.

ಈ ಸಾಲು ಕೇಳಿದರೆ ಜನ ಉರಿದು ಬೀಳ್ತಾರೆ!!!!

 

ನಿಮಗೆಲ್ಲ ಗೊತ್ತೇ ಇದೆ.... ಲೈಕ್, ಶೇರ್ ಕಮೆಂಟ್ ಮಾಡಿ ಎಂಬ ಈ ಸಾಲು ತುಂಬ ಮಂದಿಗೆ ಸಿಟ್ಟು ತರಿಸುತ್ತದೆ. ಇದನ್ನು ನೋಡಿ ನೋಡಿ ಜನ ಸುಸ್ತಾಗಿದ್ದಾರೆ. ದಿನಕ್ಕೆ ಎಷ್ಟು ಅಂತ ಲೈಕ್, ಶೇರ್, ಕಮೆಂಟ್ ಮಾಡಲು ಸಾಧ್ಯ ಎಂಬ ಜಿಗುಪ್ಸೆ ಹೊಂದಿದವರೂ ಇದ್ದಾರೆ. ಇಷ್ಟೊಂದು ಕಾಂಪಿಟಿಶನ್ ಇರುವಾಗ ಚಾನೆಲ್ಲಿನಲ್ಲಿ ಹಾಕಿದ ವಿಡಿಯೋವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದು ಸವಾಲೇ ಸರಿ. ಇದಕ್ಕೋಸ್ಕರ ಗಿಮಿಕ್ ಮಾಡುವವರು, ಅನ್ವರ್ಥವೇ ಆಗದ ಶೀರ್ಷಿಕೆ ನೀಡುವವರು, ಬಾಲಿಶ ವಿಚಾರಗಳನ್ನು ದೊಡ್ಡ ಸಂಗತಿ ಎಂಬಂತೆ ಬಿಂಬಿಸುವವರು, ತುಂಬ ಮಂದಿಯನ್ನು ತಲುಪಲಿ ಎಂಬ ಕಾರಣಕ್ಕೆ ಮೆಸೆಂಜರಿನಲ್ಲಿ, ವಾಟ್ಸಪ್ ಮೆಸೇಜಿನಲ್ಲಿ ಲಿಂಕ್ ಕಳಿಸಿ ದಯವಿಟ್ಟು ಲೈಕ್, ಕಮೆಂಟ್ ಮಾಡಿ ಅಂತ ಗೋಗರೆಯುವವರೂ ಇದ್ದಾರೆ. ಅವರಿಗದು ಟಾರ್ಗೆಟ್ಟು, ಇತರರಿಗೆ ಶಿಕ್ಷೆಯೋ ಎಂಬ ಹಾಗೆ. (ಯೂಟ್ಯೂಬ್ ಚಾನೆಲ್ಲು ಮಾಡುವವರೆಲ್ಲ ಹೀಗೆ ಅಂತ ಸಾಮಾನ್ಯೀಕರಿಸಿದ್ದಲ್ಲ, ತಪ್ಪು ತಿಳಿಯಬೇಡಿ).

 

ಹೋಗ್ತಾ ಹೋಗ್ತಾ ಉತ್ತಮ ಕ್ಯಾಮೆರಾ, ಟ್ರೈಪಾಡ್, ಮೈಕ್ಕು, ಎಡಿಟಿಂಗ್ ಸಾಪ್ಟ್ ವೇರ್, ಡಿಸೈನಿಂಗ್ ಸೆನ್ಸು ಇವನ್ನೆಲ್ಲ ಚಾನೆಲ್ಲು ಮಾಡುವವರು ರೂಢಿಸಿಕೊಳ್ಳಬೇಕಾಗುತ್ತದೆ. ಮಾತ್ರವಲ್ಲ, ವೀಕ್ಷಕರಿಗೆ ಬೋರ್ ಹೊಡೆಯದ ಹಾಗೆ ಹೊಸ ಹೊಸ ಐಡಿಯಾಗಳನ್ನೂ ಹುಡುಕಿ ತಂದು ನೀಡಬೇಕಾಗುತ್ತದೆ. ನಿರಂತರವಾಗಿ ವೀಕ್ಷಕರನ್ನು ಕಾಯ್ದುಕೊಂಡು ಜಾಹೀರಾತು ಚೆನ್ನಾಗಿ ಡಿಸ್ ಪ್ಲೇ ಆಗಿ ಜನರನ್ನು ತಲುಪಿದವರಿಗೆ ಮಾತ್ರವೇ ಸಾವಿರಾರು ರುಪಾಯಿ ಆದಾಯ ಬರುವುದು ಎಂಬುದು ನಿಮಗೆ ನೆನಪಿರಲಿ....

 

ಹಾಗಾಗಿ ತುಂಬ ಸಮಯ, ತುಂಬ ಸಹನೆ, ತುಂಬ ಶಿಸ್ತನ್ನು ಯೂಟ್ಯೂಬ್ ಚಾನೆಲ್ಲು ನಿರೀಕ್ಷಿಸುತ್ತದೆ. ಈಗ ಯೂಟ್ಯೂಬ್ ಚಾನೆಲ್ಲು ಮಾಡಿ ಲಕ್ಷಾಂತರ ಸಬ್ ಸ್ಕ್ರೈಬರುಗಳನ್ನು ಪಡೆದು ನನಗೆ, ನಿಮಗೆ ಪರಿಚಿತರಾಗಿರುವವರೆಲ್ಲ ಆ ಹಂತಕ್ಕೆ ಬರಲು ತುಂಬ ದುಡಿದಿರುತ್ತಾರೆ. ಏಕಲವ್ಯರಂತೆ ಕಲಿಯುತ್ತಾ, ಕಲಿಯುತ್ತಾ, ಈಗಾಗಲೇ ಪಳಗಿದವರ ತಲೆ ತಿಂದು ತಿಳಿಯುತ್ತಾ ಮುಂದೆ ಹೋಗುತ್ತಾರೆ. ಸಾಕಷ್ಟು ಸಮಯವನ್ನು ಅದಕ್ಕೋಸ್ಕರ ವಿನಿಯೋಗ ಮಾಡಿ, ರಿಸರ್ಚ್ ಮಾಡಿ ಮುಂದೆ ಬಂದಿರುತ್ತಾರೆ. ಹಾಗೂ ಆ ಜನಪ್ರಿಯತೆ ಕಾಯ್ದುಕೊಳ್ಳಲು ಅವಿರತ ಪ್ರಯತ್ನ ಮಾಡುತ್ತಿರುತ್ತಾರೆ.


YOUTUBE ಚಾನೆಲ್ಲು ಮಾಡುವವರ ತಲೆನೋವುಗಳು ಏನೇನು ಅಂತ ಗೊತ್ತುಂಟ?

1) ಕೆಲವೊಮ್ಮೆ ತುಂಬ ಸಮಯ ವಿನಿಯೋಗಿಸಿ, ಶ್ರದ್ಧೆಯಿಂದ ಮಾಡಿದ ವಿಡಿಯೋಗಳಿಗೆ ಜಾಸ್ತು ವ್ಯೂಸ್ ಬರುವುದೇ ಇಲ್ಲ. ಅದೇ ತಮಾಷೆಯ, ಸುಲಭದಲ್ಲಿ ಮಾಡಬಹುದಾದ ವಿಡಿಯೋಗಳಿಗೆ ಸಾವಿರಾರು ವ್ಯೂಸ್ ಬಂದು ವೈರಲ್ ಆಗುತ್ತವೆ. ಆಗ ಚಾನೆಲ್ಲಿನವನಿಗೆ ತಬ್ಬಿಬ್ಬಾಗುತ್ತದೆ, ತಾನು ಜನರಿಗೆ ಮಾಹಿತಿ ನೀಡುವುದನ್ನು ಕಷ್ಟು ಪಟ್ಟು ಕೊಡಬೇಕಾ ಅಥವಾ ಸುಲಭವಾಗಿ ಜನ ಸ್ವೀಕರಿಸುವ ತಮಾಷೆಯನ್ನು ಮಾತ್ರ ನೀಡಿ ಬೇಗ ಜನಪ್ರಿಯನಾಗಬೇಕ ಅಂತ.

2) ಜನರಿಗೆ ಇಡೀ ವಿಡಿಯೋ ನೋಡುವಷ್ಟು ಸಮಯಾವಕಾಶ ಇರುವುದೂ ಇಲ್ಲ. ಅವರದ್ದೇ ತಾಪತ್ರಯಗಳು, ಜಾಲತಾಣಗಳ ಪ್ರವಾಹ, ಇಂತದ್ದೇ ನೂರಾರು ಚಾನ್ನೆಲ್ಲಿನವರ ರಿಕ್ವೆಸ್ಟು... ಹೀಗೆ ಕೆಲವೊಮ್ಮೆ ಕಳಿಸಿದವನಿಗೆ ಬೇಸರ ಆಗುವುದು ಬೇಡ ಅಂತ ವಿಡಿಯೋ ನೋಡಿದ ಶಾಸ್ತ್ರ ಮಾಡುವವರೂ ಇದ್ದಾರೆ.

3) ವಿಡಿಯೋ ನೋಡಿದವರೆಲ್ಲ ತಾಳ್ಮೆಯಿಂದ ಲೈಕ್ ಕೊಡುವುದಿಲ್ಲ, ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ರೂಪದಲ್ಲಿ ಹಾಕುವಷ್ಟು ವ್ಯವಧಾನವನ್ನೂ ತೋರುವುದಿಲ್ಲ. ಅಂದಾಜು ಶೇ.80ರಷ್ಟು ಮಂದಿ ಉಚಿತವಾಗಿ ಸಬ್ ಸ್ಕ್ರೈಬ್ ಮಾಡುವುದಾದರೂ ಸಬ್ ಸ್ಕ್ರೈಬ್ ಮಾಡದೇ ವಿಡಿಯೋ ನೋಡಿ ಮುಂದೆ ಹೋಗುತ್ತಾರೆ. ತನ್ನ ಚಾನೆಲ್ಲು ಸಬ್ ಸ್ಕ್ರೈಬ್ ಆಗಿದ್ದರೆ, ವಿಡಿಯೋ ಹಾಕಿದವನಿಗೆ ಯಾವು ಪ್ರಯೋಜನವೂ ಇಲ್ಲ... ಇಂತಹ ಸೂಕ್ಷ್ಮ ವಿಚಾರ ಸಾಮಾನ್ಯ ಪ್ರೇಕ್ಷಕರಿಗೆ ಸುಲಭದಲ್ಲಿ ಅರ್ಥ ಆಗುವುದಿಲ್ಲ.

4) ಹೇಳಿ ಕೇಳಿ ಇದು ಜಾಲತಾಣದ ಯುಗ. ಮಾಹಿತಿ ಪ್ರವಾಹದೋಪಾದಿಯಲ್ಲಿ ಬರುತ್ತಲೇ ಇರುತ್ತದೆ. ಹೀಗಾಗಿ ದಯವಿಟ್ಟು LIKE, SHARE, COMMENT ಮಾಡಿ ಅನ್ನುವ ಮನವಿಯನ್ನು ದಿನಪೂರ್ತಿ ನೋಡಿ ನೋಡಿ ಜನರಿಗೂ ಕೆಲವೊಮ್ಮ ತಾಳ್ಮೆ ತಪ್ಪಿ ಹೋಗಿರುತ್ತದೆ. ವಿಡಿಯೋ ನೋಡದೆಯೇ (ಪುಣ್ಯಕ್ಕೆ ಯಾರ್ಯಾರೂ ವಿಡಿಯೋ ನೋಡಿದ್ದಾರೆ ಅಂತ ವಿಡಿಯೋ ಹಾಕಿದವನಿಗೆ ತಿಳಿಯುವುದಿಲ್ಲ!) ಲೈಕ್ ಕೊಡುವುದು, ಥಂಬ್ ರೈಸ್ ಮಾಡುವವರೂ ಇದ್ದಾರೆ.

5) ಯೂಟ್ಯೂಬಿನಲ್ಲಿ ಜನರನ್ನು ತಲಪುವುದು ಅನ್ನುವ ಕಲ್ಪನೆಯೇ ವಿಚಿತ್ರ. ಶುರುವಿಗೇ ಹೇಳಿದ ಹಾಗೆ ಮಾಹಿತಿಯುಕ್ತವಾಗಿದ್ದು ಜನಪ್ರಿಯ ಆಗಬೇಕಾಗಿಲ್ಲ, ತುಂಬ ನಿರೀಕ್ಷೆ ಇಟ್ಟು ಮಾಡಿದ ವಿಡಿಯೋಗಳು ಬಹಳಷ್ಟು ಮಂದಿಯನ್ನು ತಲುಪಬೇಕಾಗಿಯೂ ಇಲ್ಲ. ಇದೊಂಥರ ಟಿ.ವಿ. TRP RATING ಇದ್ದ ಹಾಗೆ. ಜನರ ನಿರೀಕ್ಷೆಗಳನ್ನು ಊಹಿಸುವುದಕ್ಕೆ ಕಷ್ಟ. ಜೊತೆಗೆ PAID PROMOTION, AI ತಂತ್ರಜ್ಞಾನ, ನಿಮ್ಮ ಸಾಮಾಜಿಕ ಸಂಪರ್ಕ, ಜನಪ್ರಿಯತೆ ಇವೆಲ್ಲಕೂಡಾ ನಿಮ್ಮ ಪೋಸ್ಟುಗಳನ್ನು ಅಗಾಧ ಜನಸಂಖ್ಯೆಗೆ ತಲುಪಿಸುವಲ್ಲಿ ನೆರವಾಗುತ್ತದೆ.

 

ಹಾಗಾಗಿ ಯೂಟ್ಯೂಬ್ ಚಾನೆಲ್ಲು ಮಾಡುವವರೆಲ್ಲ ನಾನಿದರಿಂದ ಲಕ್ಷಾಧೀಶ್ವರನಾಗುತ್ತೇನೆ ಅಂತಲೇ ಮಾಡುವುದಲ್ಲ. ಹಾಡುಗಾರಿಕೆ, ಫೋಟೋಗ್ರಫಿ, ವಿಡಿಯೋಗ್ರಫಿ ಇದ್ದ ಹಾಗೆ ಯೂಟ್ಯೂಬ್ ಚಾನೆಲ್ಲು ಕೂಡಾ ತನ್ನದೊಂದು ಸಂದೇಶವನ್ನು, ಸೃಜನಶೀಲ ಅಭಿವ್ಯಕ್ತಿಯನ್ನು ತನ್ನಂತಹ ಹತ್ತಾರು ಮಂದಿಗೆ ವ್ಯವಸ್ಥಿತವಾಗಿ ತಲುಪಿಸಬಲ್ಲ ತಾಣ. ಸಮಯ, ಅನುಕೂಲ, ಐಡಿಯಾ, ಸೃಜನಶೀಲಗೆ, ಧೈರ್ಯ ಇದ್ದವರು ಅದರಲ್ಲೇ ಹೆಚ್ಚು ಹೆಚ್ಚು ತೊಡಗಿಸಿಕೊಂಡು ದುಡ್ಡು ಕೂಡಾ ಸಂಪಾದಿಸಬಹುದು. ಆದರೆ, ಅದಕ್ಕ ಸಾಕಷ್ಟು ನಿಬಂಧನೆಗಳು ಹಾಗೂ ಶ್ರಮ ಇರುತ್ತದೆ ಎಂಬುದು ಕೂಡಾ ಸತ್ಯ.

 

ಯೂಟ್ಯೂಬ್ ಚಾನೆಲ್ಲಿನ ಬಗ್ಗೆ ಇನ್ನಷ್ಟು ತಿಳಿಯಬಯಸುವವರು ಗಗನ್ ಅವರ ಜನಪ್ರಿಯ ಯೂಟ್ಯಾಬ್ ಚಾನೆಲ್ಲು ವೀಕ್ಷಿಸಲು, DOCTOR BRO (Dr Bro) ಅಂತ YOUTUBEನಲ್ಲಿ ಸರ್ಚ್ ಕೊಟ್ಟು, ತಮ್ಮ ಯೂಟ್ಯೂಬ್ ಚಾನೆಲ್ಲು ಪಯಣದ ಕುರಿತು ಅವರ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಸುಮಾರು 23 ನಿಮಿಷಗಳ ಕಾಲ ತಾಳ್ಮೆಯಿಂದ ಉತ್ತರಿಸಿದ್ದನ್ನು ನೋಡಿ. ಅಲ್ಲಿ ನಿಮ್ಮ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗ್ತವೆ... ಅಬ್ಬಬ್ಬ, ಯೂಟ್ಯೂಬ್ ಬಗ್ಗೆ ನಮಗೆ ಗೊತ್ತಿಲ್ಲದ ಸಂಗತಿಗಳು ತುಂಬ ಉಂಟಪ್ಪ!

-ಕೃಷ್ಣಮೋಹನ ತಲೆಂಗಳ, 04.04.2022.

 

No comments: