ಜೂನ್ 1ರ ಮಳೆ ಮತ್ತು ಹೊಸ ಪುಸ್ತಕದ ಪರಿಮಳ!


 


ಹೊಸ ನೋಟ್ಸ್ ಪುಸ್ತಕಕ್ಕೂ, ಪಾಠ ಪುಸ್ತಕಕ್ಕೂ ಒಂದು ವಿಶೇಷವಾದ ಪರಿಮಳ ಇರ್ತದೆ. ಶಾಲೆ ಶುರುವಾಗುವ ದಿನ ಎಷ್ಟು ನೋಟ್ಸು ಕೊಂಡೋಗ್ಬೇಕು, ರಫ್ ವರ್ಕ್ ಬುಕ್ಕು ಮಾತ್ರ ಸಾಕಾ ಎಂದೇ ಸರಿಯಾಗಿ ಗೊತ್ತಿಲ್ಲದ ಅಯೋಮಯ ಸ್ಥಿತಿಯಲ್ಲಿ ಸಿಕ್ಕಿದಷ್ಟು ನೋಟ್ಸುಗಳನ್ನು, ಜೊತೆಗೊಂದು ರಪ್ ವರ್ಕು ಪುಸ್ತಕವನ್ನೂ ಸೇರಿಸಿ ಹೊಸತ್ತು ಬ್ಯಾಗಿನಲ್ಲಿ ತುಂಬಿಕೊಂಡು ಹೋಗುವ ಚಂದವೇ ಬೇರೆ....

ಕಳೆದ ವರ್ಷ ನಾಲ್ಕನೇ ಕ್ಲಾಸಿನಲ್ಲಿ ಕುಳಿತಿದ್ದಾಗ, ದೂರದಲ್ಲಿ ತಟ್ಟಿಯ (ಎರಡು ತರಗತಿಗಳನ್ನುಪ್ರತ್ಯೇಕಿಸುವ ಪ್ಲೈವುಡ್ ರಿವೈಡರ್) ಆಚೆ ಕಾಣಿಸುತ್ತಿದ್ದ ಐದನೇ ಕ್ಲಾಸಿನಲ್ಲಿ ಕೂರುವುದೇ ಇಂದಿನ ದೊಡ್ಡದೊಂದು ಸಾಧನೆ. ನಾಲ್ಕನೆಯಲ್ಲಿದ್ದಷ್ಟು ದಿವಸವೂ ಐದನೇ ಕ್ಲಾಸಿನಲ್ಲಿ ಹೋಗಿ ಕೂರುವುದೆಂದರೆ ಇನ್ನಷ್ಟು ದೊಡ್ಡವನಾಗುವುದು, ಇನ್ನಷ್ಟು ಪ್ರಮೋಶನ್ ಹೊಂದುವುದೆಂಬ ಅದಮ್ಯ ನಿರೀಕ್ಷೆ... ಶಾಲೆಯ ಶುರುವಿನ ದಿನ ಯಾರದ್ರವೂ ಕೇಳದೆ ಸೀದಾ ಐದನೇ ಕ್ಲಾಸಿನಲ್ಲಿ ಹೋಗಿ, ಬೇಕಾದ ಬೆಂಚಿನಲ್ಲಿ ಕೂರುವ ಗರ್ವವೇ ಬೇರೆ...

 

ಅದ್ಯಾಕೋ ಗೊತ್ತಿಲ್ಲ... ಹೊಸ ಪುಸ್ತಕದ ಪರಿಮಳ ಮಾತ್ರ ಜೂನಿನ ಮಳೆಯೊಂದಿಗೆ ಬೆಸೆದಿರುತ್ತದೆ... ಹಳೆಯ ಪುಸ್ತಕಕ್ಕೂ ಒಂದು ವಿಶೇಷವಾದ ಘಾಟು ಇರುತ್ತದೆ. ಧಾರಾಕಾರ ಮಳೆಯ ನಡುವೆ ಮತಾನಾಡಿದರೂ ಹತ್ತಿರದವರಿಗೆ ಕೇಳದಷ್ಟು ಸದ್ದು... ಚಂಡಿ ಪುಂಡಿಯಾದ ಉಡುಪು, ತೊಟ್ಟಿಕ್ಕುವ ಕೊಡೆ, ತೂಗಾಡುವ ಶಾಲೆಯ ಅಂಗಳದ ತೆಂಗಿನ ಮರಗಳು... ಈ ನಡುವೆ ಹೊಸದೊಂದು ತರಗತಿಯ ಆರಂಭ. ಫೇಲಾದ ನಾಲ್ಕೈದು ಮಂದಿ ಮತ್ತದೇ ನಾಲ್ಕನೇ ಕ್ಲಾಸಿನಲ್ಲಿ ಪೆಚ್ಚು ಮೋರೆ ಹಾಕಿ ಕೂರುವ ಹೊತ್ತಿಗೆ ಐದನೇ ಕ್ಲಾಸಿನವರ ಬದುಕು ಮುಂದೆ ಹೋಗುತ್ತದೆ. ಕಾಲ ಯಾರಿಗೂ ಕಾಯುವುದಿಲ್ಲ ಎಂಬ ಹಾಗೆ... ಬದುಕು ಮುಂದೂಡಲ್ಪಡುತ್ತಲೇ ಇರುತ್ತದೆ. ಪಾಸಾದರೂ, ಫೇಲಾದರೂ...!

 

ಹೊಸ ಕ್ಲಾಸಿಗೆ ಕ್ಲಾಸ್ ಟೀಚರ್ ಯಾರೆಂಬ ಕುತೂಹಲ. ಪ್ರತಿ ಸಬ್ಜೆಕ್ಟಿಗೆ ಬೇರೆ ಬೇರೆ ಮಾಷ್ಟ್ರುಗಳು ಇರ್ತಾರ ಎಂಬ ಡೌಟು, ಎತ್ತರದ ಪ್ರಕಾರ ಕೂರಿಸುವಾಗ ನನ್ನ ಹತ್ತಿರ ಯಾರು ಸಿಕ್ಕಿಯಾರು ಎಂಬ ವಿಚಿತ್ರ ತಳಮಳ, ಈ ಸಲ ಗಣಿತ ಕಷ್ಟ ಇರಬಹುದ? ಹಿಂದಿ ಕಲಿಯಲಿಕ್ಕೆ ಸಾಧ್ಯ ಉಂಟ?, ಇಂಗ್ಲಿಷ್ ಕವನ ಬಾಯಿ ಪಾಠ ಮಾಡ್ಲಿಕೆ ಹೋಗುವಾಗ ಸ್ಪೆಲ್ಲಿಂಗ್ ಮರೆತು ಹೋದೀತ? ಎಂಬ ಆತಂಕ.... ಹೀಗೆ ಭಯಂಕರ ಮಂಡೆಬಿಸಿಯ ವಿಚಾರಗಳು ಜೂನ್ 1ರಂದೇ ಕಾಡಲು ಶುರುವಾಗುತ್ತದೆ... ಹೋಗ್ತಾ ಹೋಗ್ತಾ ಅದು ರುಟೀನ್ ಅಂತಾದರೂ ಶಾಲೆಯ ಶುರುವಿನ ದಿನದ ಅಸ್ಪಷ್ಟತೆ, ಆತಂಕ ಹಾಗೂ ಒಂಥರಾ ಮೊದಲ ದಿನದ ಥ್ರಿಲ್ ಆ ಪ್ರಾಯದಲ್ಲಿ ಅನುಭವಿಸಿದ್ದನ್ನು ಈ ಪ್ರಾಯದಲ್ಲಿ ವಿವರಿಸುವುದು ಕಷ್ಟವೇ ಹೌದು...

 

ಕಳೆದ ವರ್ಷದ ಮಧ್ಯದಲ್ಲಿ ತೆಗೆದ ಬ್ಯಾಗು ಈ ವರ್ಷಕ್ಕೂ ಸಾಕು ಅಂತ ಅದನ್ನೇ ಧೂಳು ಒರೆಸಿ ತಂದದ್ದು, ತಂಗೀಸ್ ಚೀಲದ ಕೈ ತುಂಡಾಗಿದ್ದರೆ ಅದಕ್ಕೆ ಹೊಲಿಗೆ ಹಾಕಿ ನೆತ್ತಿಯ ಮೇಲಿರಿಸಿ ಬಂದದ್ದು, ಪುಸ್ತಕ ಚಂಡಿ ಆಗುವುದಕ್ಕೆ ತೊಟ್ಟೆಯೊಳಗೆ ಪುಸ್ತಕ ಹಾಕಿ ತಂಗೀಸು ಚೀಲಕ್ಕೆ ತುಂಬಿಸಿದ್ದು, ಕೊಡೆಯ ಎರಡು ಗಡ್ಡಿಗಳು (ಕೊಡೆ ಕಡ್ಡಿ) ಪೀಂಕಿದ್ದಕ್ಕೆ (ಜಾರಿದ್ದಕ್ಕೆ) ಕೊಡೆ ರಿಪೇರಿಯವನತ್ರ ಹೋಗಿ ಹೊಲಿಗೆ ಹಾಕಿಸಿ ಬಂದರೂ, ಗಾಳಿ ಬರುವಾಗ ಮತ್ತೆ ಅದು ಪೀಂಕಿ, ದೊಡ್ಡ ಗಾಳಿಗೆ ಅಡಿ ಮೇಲಾಗಿದ್ದು... ಮೇ 15ಕ್ಕೇ ಕಳೆದ ವರ್ಷಗಳ ನೋಟ್ಸು ಪುಸ್ತಕಗಳ ಉಳಿದ ಹಾಳೆಗಳನ್ನು ಕಿತ್ತು ಪ್ರೆಸ್ಸಿನಲ್ಲಿ ಬೈಂಡಿಂಗಿಗೇ ಕೊಟ್ಟರೂ ಜೂ.1 ಕಳೆದರೂ ಅಲ್ಲಿ ರಶ್ ಆಗಿ ವಿನೂತನ ರಫ್ ವರ್ಕ್ ಬುಕ್ಕು ಕೈಗೆ ಸಿಕ್ಕದೆ ತಳಮಳ ಆದದ್ದು... ಸ್ಲಿಪ್ಪರ್ ಮೆಟ್ಟಿನ (ಚಪ್ಪಲಿ) ಹಿಂಭಾಗದ ಕೆಸರು ರಪಕ್ಕನೆ ಬೆನ್ನಿನ ಮೇಲೆ, ನೆತ್ತಿಯ ವರೆಗೂ ಕೆಸರಿನ ಚಿತ್ತಾರ ಮೂಡಿಸಿದ್ದು... ಇವೆಲ್ಲ ಇದೇ ಜೂ.1ರಂದು... ಆಗ ಶಾಲೆ ಶುರು ಎಂದರೆ ಜೂ.1. ಈಗ ಶಾಲೆ ಶುರುವಾಗುವ ದಿನವೇ ಮಕ್ಕಳ ಪಾಲಿಗೆ ಜೂನ್ 1!

 

ಮಳೆ ಜೊತೆಗೇ ಆರಂಭವಾಗುತ್ತಿದ್ದ ಶಾಲೆ ಆರಂಭವೂ ಈಗ ಯಾಂತ್ರಿಕ ಆಕ್ತಿದೆ. ಬೇಸಿಗೆಯ ಬೇಗೆ ಹಾಗೂ ನೀರಿನ ಸಂಕಷ್ಟದ ನಡುವೆ ಸೆಕೆ ಕಳೆದ ಬಳಿಕವೂ ಶುರುವಾಗುತ್ತಿದ್ದ ಶಾಲೆಗಳೂ ಈಗೀಗ ನಾನಾ ಕಾರಣಗಳಿಂದ ಒಟ್ರಾಸಿ ಶುರು ಆಗ್ತಾ ಇವೆ. ಅದಕ್ಕೇ ಅದರದ್ದೇ ಆದ ಕಾರಣಗಳು ಇರಬಹುದು. ಆದರೆ ಮಳೆಯ ನಡುವೆ ಶಾಲೆಗೆ ಹೋಗುವುದು, ಅಲ್ಲಿ ನಮ್ಮ ಬೆಂಚಿ ಹುಡುಕುವುದು, ತುಂಬಿ ಬರಿಯುವ ತೋಡಿನ ಪಾಪು (ಕಿರುಸೇತುವೆ) ದಾಟಲು ಹೆದರುವುದು, ಮಳೆ ಕಡಿಮೆಯಾಗುವ ವರೆಗೂ ದೊಡ್ಡ ಮರದಡಿ ನಿಲ್ಲುವುದು, ಪ್ರೆಸ್ಸಿಗೆ ಹೋಗಿ ಹಳೆ ನೋಟ್ಸು ಪುಸ್ತಕಗಳ ಹಾಳೆಗಳ ರಫ್ ವರ್ಕ್ ಬುಕ್ಕು ಮಾಡುವುದು ಇವೆಲ್ಲ ಈಗ ನಡೆಯುತ್ತಿಲ್ಲ... ಆದರೂ ಶಾಲಾರಂಭ ಆಗಿಯೇ ಆಗುತ್ತದೆ... ಮಕ್ಕಳಿಗೂ ಈಗಲೂ ಶಾಲಾರಂಭದ ಥ್ರಿಲ್ ಇದೆ. ಆದರೆ ಅನುಭೂತಿ ಮಾತ್ರ ಬೇರೆ!

-ಕೃಷ್ಣಮೋಹನ ತಲೆಂಗಳ. 16.05.2022.


No comments: