ವಾಟ್ಸಪ್ ಗ್ರೂಪುಗಳ ದಂತಕತೆಗಳಲ್ಲ, ನಡೆ”ದಂಥ” ಕತೆಗಳು!

 


ಕೆಲವೊಂದ್ಸಲ ವಾಟ್ಸಪ್ ಗ್ರೂಪುಗಳಿಗೆ ಸಾರ್ವಜನಿಕ ಶೌಚಾಲಯಗಳಿಗೆ ಹೆಚ್ಚು ವ್ಯತ್ಯಾಸ ಇಲ್ಲ ಅಂತ ಅನ್ನಿಸಿದ್ರೆ ಅತಿಶಯೋಕ್ತಿ ಆಗಲಾರದೇನೋ! 10 ಮಂದಿ ಟಾಯ್ಲೆಟ್ಟಿಗೆ ಹೋಗ್ತಾರೆ ಅಂತ ಇಟ್ಟುಕೊಳ್ಳಿ. 6 ಮಂದಿ ಹೋಗಿ ಸ್ವಚ್ಛಗೊಳಿಸಿ ಬಂದು 7ನೆಯವ ನೀರು ಹಾಕದೆ ಬಂದರೆ, ನಂತರದ ಮೂವರಿಗೂ ಆ ಟಾಯ್ಲೆಟ್ಟು ಅಸಹನೀಯವಾಗಿ ಕಾಡುತ್ತದೆ. ವಾಟ್ಸಪ್ ಗ್ರೂಪು ಕೂಡಾ ಅಷ್ಟೇ...! ತುಂಬ ಸರಳ.

ಒಂದು ಚಂದದ ಸಂವಹನ ತಂತ್ರಜ್ಞಾನದ ವೇದಿಕೆ, ನಾವು ಕುಳಿತಲ್ಲಿಂದ್ದಲೇ, ಜಗತ್ತನ್ನು ಸುಲಭವಾಗಿ, ತ್ವರಿತವಾಗಿ ತಲುಪಲು ಸಾಧ್ಯವಾಗಿಸಿದ ಆಪ್. ಆದರೆ ನಾವದನ್ನು ನಮ್ಮ ಉಡಾಫೆ, ವಿವೇಚನಾರಹಿತ ಬಳಕೆಯಿಂದ ಕ್ಲಿಷ್ಟ, ಸಂಕೀರ್ಣ ಆಗಿಸಿದ್ದೇವೆ. ಅಯ್ಯೋ ವಾಟ್ಸಪ್ಪು ದೊಡ್ಡ ಹೊರೆ ಅಂತ ಅನ್ನಿಸಿದರೆ ಅದು ನಮ್ಮ ಸ್ವಯಂಕೃತಾಪರಾಧ ಅಷ್ಟೆ...

ವಾಟ್ಸಪ್ ಗ್ರೂಪಿನ ಅವಾಂತರಗಳ ಕುರಿತು ಅನೇಕ ಪುಟ್ಟ ಪುಟ್ಟ ಕತೆಗಳಿವೆ. ಇವೆಲ್ಲ ದಂತ ಕತೆಗಳಲ್ಲ, ನಡೆದಂಥ ಕತೆಗಳೇ ಆಗಿವೆ. ನಿಮ್ಮ ಪಾಲಿಗೆ ಇವು ಖಂಡಿತಾ ಹೊಸತೂ ಅಲ್ಲ, ಬರಹದ ರೂಪವಷ್ಟೇ... ಅರಣ್ಯರೋದನ ಎಂದು ಗೊತ್ತಿದ್ದರೂ ಸಹ, ಅನುಭವಿಸಿ ಸಾಕಾಗಿ ಮನಃಶಾಂತಿಗೋಸ್ಕರ ಬರೆದದ್ದು... ಎಲ್ಲರಿಗೂ ಗೊತ್ತಿರುವ ವಿಷಯಗಳೇ ಆಗಿವೆ.

1)      ಯಾರೋ ಒಬ್ಬ ಒಂದು ಸಂಘಟನಾತ್ಮಕ ಪ್ರಯತ್ನಕ್ಕೆ ವಾಟ್ಸಪ್ ಗ್ರೂಪು ಮಾಡುತ್ತಾನೆ. ಆರಂಭದಲ್ಲಿ ಪ್ರತಿ ಗ್ರೂಪು ಸಹ ತುಂಬ ಲವಲವಿಕೆಯಿಂದಲೇ ಇರುತ್ತದೆ. ಎಲ್ಲರ ಪರಿಚಯ, ಹಿನ್ನೆಲೆ ವಿವರಣೆ ಇವೆಲ್ಲ ನಡೆಯುತ್ತದೆ. ನಂತರ ಪರಸ್ಪರ ಪರಿಚಯದ ಕಾರ್ಯಕ್ರಮ ಹೆಚ್ಚಾದಂತೆಲ್ಲ ಇಲ್ಲಿ ಭಯಂಕರ ಮಸೇಜ್ ಬರ್ತದೆ, ನನ್ನ ಮೊಬೈಲ್ ಹ್ಯಾಂಗ್ ಆಗ್ತದೆ, ಥತ್ ಕಿರಿಕಿರಿ ಅಂತ ಒಬ್ಬ ಗ್ರೂಪಿನಿಂದ ಲೆಫ್ಟ್ ಆಗ್ತಾನೆ. ಇದಕ್ಕೆ ಕಾಯುತ್ತಿದ್ದ ಹಾಗೆ ಮತ್ತೆ ನಾಲ್ಕು ಮಂದಿ ಲೆಫ್ಟ್ ಆಗ್ತಾರೆ. ಪುಣ್ಯಕ್ಕೆ ಅದು ಅಡ್ಮಿನ್ ಬಿಟ್ಟು ಮತ್ಯಾರಿಗೂ ಗೊತ್ತಾಗುವುದಿಲ್ಲ. ಅಡ್ಮಿನ್ ಅಸಹಾಯಕನಾಗಿ ನೋಡುತ್ತಲೇ ಇರುತ್ತಾನೆ.

ಟಿಪ್ಪಣಿ: ನಮಗೆ ಸಿಗರೇಟು ಎಳೆಯಲು ಸಮಯ ಇದೆ, ಗಂಟೆಗಟ್ಟಲೆ ಕ್ರಿಕೆಟ್ ನೋಡಲು ಸಮಯ ಇದೆ. ಫೇಸ್ಬುಕ್ಕಿನಲ್ಲಿ ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ಗಂಟೆಗಟ್ಟಲೆ ಜಗಳ ಮಾಡಲು ಸಮಯ ಇದೆ. ನಮ್ಮ ಮೊಬೈಲಿನೊಳಗಿರುವ ವಾಟ್ಸಪ್ ಗ್ರೂಪುಗಳನ್ನು ಶಿಸ್ತಿನಿಂದ ಹೊಂದಾಣಿಕೆ ಮಾಡಿ, ಕುಳಿತಲ್ಲಿದ್ದಂಲೇ ಅನೇಕ ವಿಚಾರಗಳನ್ನು ತಿಳಿಯಲು, ಮೀಟಿಂಗ್ ಗಳನ್ನು ಮಾಡಲು ಸಿಕ್ಕಿದ ಅವಕಾಶ ಸದುಪಯೋಗ ಮಾಡಲು ಪುರುಸೊತ್ತಿಲ್ಲ ಅಥವಾ ಮನಸ್ಸಿಲ್ಲ. ಅದರ ಹಿಂದೆ ಮುಂದೆ ಕಲಿಯುವ ಪ್ರಯತ್ನವೂ ಮಾಡುವುದಿಲ್ಲ. (ಹೊಂದಾಣಿಕ ಮನೋಭಾವ ಇದ್ದರೆ ಆಗುತ್ತದೆ ಅಷ್ಟೇ)

2)      ಸರಿ, ವಾಟ್ಸಪ್ ಗ್ರೂಪು ರೆಡಿ ಆಯಿತು. 200-300 ಜನ ಸೇರ್ತಾರೆ, 2-3 ಮಂದಿ ಬಡಪಾಯಿ ಅಡ್ಮಿನ್ ಗಳು ಇರ್ತಾರೆ. ಅವರು ಪಾಪ ಗಂಭೀರವಾಗಿ ಒಂದು ವಿಷಯದತ್ತ ಜನರ ಗಮನ ಸೆಳೆಯಲು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಒಂದು ಹಳೆ ವಿದ್ಯಾರ್ಥಿ ಸಂಘವೋ, ಊರಿನಲ್ಲಿ ನಡೆಯುವ ಕಾರ್ಯಕ್ರಮವೋ, ಮೀಟಿಂಗೋ ಯಾವುದೋ ಕಾರಣಕ್ಕೆ ಮಾಡಿದ ಗ್ರೂಪು. ದಯವಿಟ್ಟು ಇದೇ ವಿಷಯದ ಬಗ್ಗೆ ಮಾತ್ರ ಇಲ್ಲಿ ಮಾತಾಡಿ ಅಂತ ಹೇಳಿದರೂ, ಕೆಲವು ಹಿಂಟ್ ಆಂಡ್ ರನ್ ಕೇಸುಗಳು ಅಲ್ಲಿ ನುಸುಳಿಕೊಂಡಿರುತ್ತವೆ. ಅವರ ಕೆಲಸ ಇಷ್ಟೇ. ಒಂದು ತಾವು ಬರೆದ ಭಯಂಕರ ಕವನಗಳನ್ನು ಬೇಡ ಬೇಡ ಎಂದರೂ ಗ್ರೂಪಿನಲ್ಲಿ ಹಾಕುವುದು, ಎರಡನೆಯದು ಜಗತ್ತಿನ ಅತಿ ವಿಶೇಷ ಬ್ರೇಕಿಂಗ್ ನ್ಯೂಸ್ ಗಳನ್ನು ಗ್ರೂಪಿಗೆ ಫಾರ್ವರ್ಡ್ ಮಾಡುವುದು, ಮೂರನೆಯದು ತಮಗೆ ಸಿಕ್ಕಿದ ಪ್ರಶಸ್ತಿಗಳ ಫೋಟೋವನ್ನು ಯಾವುದೇ ವಿವರ ಇಲ್ಲದೆ ಆಗಾಗ ಗ್ರೂಪಿಗೆ ಹಾಕುತ್ತಲೇ ಇರುವುದು. ಅವರು ಮತ್ಯಾವ ವಿಷಯದ ಚರ್ಚೆಗೆ ಬರುವುದೂ ಇಲ್ಲ. ಮಾತನಾಡುವುದೂ ಇಲ್ಲ. ಇದೇ ಹೊತ್ತಿಗೆ ಈ ಗ್ರೂಪ್ ಅಡ್ಮಿನ್ ನ ಹರಕೆಯ ಕೂಸೋ ಎಂಬ ಹಾಗೆ ಇತರರು ಅಡ್ಮಿನ್ ತಲೆ ತಿನ್ತಾ ಇರ್ತಾರೆ, ನೀವು ಆ ಜನವನ್ನು ಗ್ರೂಪಿನಿಂದ ತೆಗೆಯದಿದ್ದರೆ ನಾವು ಗ್ರೂಪ್ ಬಿಡ್ತೇವೆ, ನಮಗೆ ಮೊಬೈಲ್ ಹ್ಯಾಂಗ್ ಆಗ್ತಾ ಇದೆ…” ಅಂತ. ಬಡ ಅಡ್ಮಿನ್ ಯಾರನ್ನೂ ಎದುರು ಹಾಕಿಕೊಳ್ಳಲು ಆಗದೆ, ಯಾರ ಸಪೋರ್ಟೂ ಇಲ್ಲದೆ, ಗ್ರೂಪ್ ಮಾಡಿದ ತಪ್ಪಿಗೆ ಅಸಹಾಯಕನಾಗಿ ನೋಡುತ್ತಲೇ ಇರುತ್ತಾನೆ.
ಟಿಪ್ಪಣಿ
: ನಿಮಗೆ ಕಂಡ ಕಂಡಲ್ಲಿ ನಿಮ್ಮ ಕವನಗಳನ್ನು ತೋರಿಸಬೆಂಕೆಂದೇ ಇದ್ದರೆ ನೀವೇ ಯಾಕೆ ಒಂದು ಗ್ರೂಪ್ ಮಾಡಬಾರದು? ಯಾರೋ ಯಾವುದೋ ಉದ್ದೇಶಕ್ಕೆ ಮಾಡಿದ ಗ್ರೂಪಿನಲ್ಲಿ ನಿಮ್ಮ ವೈಯಕ್ತಿಕ ವಿಚಾರಗಳ ಪ್ರಚಾರಕ್ಕೆ ಬಳಸಿಕೊಳ್ಳಲು ಏನೂ ಅನ್ನಿಸುವುದಿಲ್ಲವೇ? ಒಂದು ಚಂದದ ವೇದಿಕೆಯನ್ನು ಮೂಗಿನ ನೇರಕ್ಕೆ ಬಳಸಿ ಅಲ್ಲಿರುವ ಅಷ್ಟೂ ಮಂದಿಗೆ ಉಪದ್ರ ಕೊಡುತ್ತಿದ್ದೇನೆ ಅಂತ ಪಶ್ಚಾತ್ತಾಪವಾದರೂ ಇಲ್ಲವೇ?

3)      ಇನ್ನು ಕೆಲವು ಗ್ರೂಪುಗಳಿರ್ತವೆ. ಅಲ್ಲಿರುವ ಸುಮಾರು ಶೇ.80ರಷ್ಟೂ ಮಂದಿ ಗ್ರೂಪಿನ ಸಬ್ಜೆಕ್ಟಿಗೆ ಸಂಬಂಧ ಪಟ್ಟ ಯಾವ ವಿಷಯಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ಬೈದು, ಹಂಗಿಸಿ, ಕೆಣಕಿದರೂ ಯಾವ ವಿಚಾರಕ್ಕೂ ಮಾತನಾಡುವುದಿಲ್ಲ. ಗ್ರೂಪ್ ಬೆಳೆಸುವುದು,ದಿನಾ ಪೋಸ್ಟ್ ಹಾಕುವುದು ಗ್ರೂಪ್ ಕಟ್ಟಿದ ಅಡ್ಮಿನ್ ನ ಪೂರ್ವಜನ್ಮದ ಪಾಪದ ಫಲವೋ ಎಂಬ ಹಾಗೆ ಅನುಕಂಪದಿಂದ ದೂ....ರಿಂದ ನೋಡ್ತಾ ಇರ್ತಾರೆ! ಗ್ರೂಪಿನ ಶೀರ್ಷಿಕೆಗೆ ಸಂಬಂಧಿಸಿದ ಚರ್ಚೆಗಳಿಂದ ಭಯಕಂರ ಅಂತರ ಕಾಯ್ದುಕೊಳ್ಳುತ್ತಾರೆ. ಹಾಗಂತ ಗ್ರೂಪು ಬಿಡುವುದೂ ಇಲ್ಲ. ನೀವು ಸಭೆಗೆ ಬರ್ತೀರ, ನಾನೊಂದು ವಿಷಯ ಪ್ರಸ್ತಾಪ ಮಾಡಿದ್ದೇನೆ, ಇದು ಸರಿಯಾ? ಈ ಪ್ರಸ್ತಾಪದ ಬಗ್ಗೆ ನೀವೇನು ಹೇಳುತ್ತೀರಿ?” ಎಂಬಿತ್ಯಾದಿ ಎಲ್ಲಾ ಪ್ರಸ್ತಾಪವನ್ನು ಅವರೆಲ್ಲ ನೋಡಿರುತ್ತಾರೆ, ಆದರೆ ಮಾತನಾಡುವುದೇ ಇಲ್ಲ. ಯಾಕೆಂದರೆ ಅವರೆಲ್ಲ ಭಯಂಕರ ಬಿಝಿ ಇರ್ತಾರೆ. ಅವರೆಲ್ಲರಿಗೂ 24 ಗಂಟೆ ಇದ್ದರೆ ಅಡ್ಮಿನ್ ಎಂಬ ವ್ಯಕ್ತಿಗೆ ಬಹುಶಃ ದೇವರು ಸ್ವಲ್ಪ ಜಾಸ್ತಿ ಸಮಯ ದಯಪಾಲಿಸಿರುತ್ತಾನೋ ಏನೋ. ಇದೇ ವ್ಯಕ್ತಿಗಳು ರಾಜ್ಯೋತ್ಸವ ಬಂದಾಗ, ದೀಪಾವಳಿ ಬಂದಾಗ, ಹೊಸ ವರ್ಷ ಬಂದಾಗ ಮೈಕೊಡವಿಕೊಂಡು ಏಳುತ್ತಾರೆ. ಕಂಡ ಕಂಡಲ್ಲಿಂದ ಬಂದ ಶುಭಾಶಯ ಕೋರುವ ಮೆಸೇಜುಗಳನ್ನೆಲ್ಲ ಗ್ರೂಪಿಗೆ ದೂಡಿ ಗ್ರೂಪನ್ನು ಬಣ್ಣ ಬಣ್ಣಂದ ಗ್ರೀಟಿಂಗ್ ಕಾರ್ಡುಗಳಿಂದ ಸಿಂಗರಿಸುತ್ತಾರೆ. ಯಾರದ್ದಾರದೂ ಬರ್ತ್ ಡೇ ಅಂತ ಗೊತ್ತಾದರೆ ಸಾಕು, ತೀರಾ ಲೇಟೆಸ್ಟ್ ಇಮೋಜಿಗಳಿಂದ ಶುಭಾಶಯ ಕೋರುತ್ತಾರೆ. ಜಗತ್ತಿನ ಯಾವು ಮೂಲೆಯಲ್ಲಿ ಯಾರೇ ಸತ್ತರೂ ಅದರ ಸುದ್ದಿ ಗ್ರೂಪಿಗೆ ಬಂದರೆ ವಿಳಂಬ ಮಾಡದೆ RIP... RIP.. ಮೆಸೇಜ್ ಹಾಕಿ ಮೋಕ್ಷ ಕರುಣಿಸುತ್ತಾರೆ.! ಇಂಥವರ ಪಾಲಿಗೆ ತಗಾದೆ ತೆಗೆಯುವ ಅಡ್ಮಿನ್ ದುಶ್ಮನ್ ಥರ ಕಾಣಿಸುತ್ತಾನೆ.

ಟಿಪ್ಪಣಿ: ಈ ಬರಹವನ್ನು ಇಲ್ಲಿ ತನಕ ಓದಿದವರ ಪೈಕಿ ಯಾರದರೂ ವಾಟ್ಸಪ್ ಅಡ್ಮಿನ್ ಆಗಿ ಅನುಭವ ಇದ್ದರೆ ಅವರಿಗೆ ಅರ್ಥವಾಗ್ತದೆ ಯಾಕೆ ಈ ವಿಷಯ ಪ್ರಸ್ತಾಪ ಮಾಡಿದೆ ಅಂತ. ಉಳಿದವರಿಗೆ ಇದು ಅಧಿಕಪ್ರಸಂಗವಾಗಿ ಕಾಣಬಹುದು. ಅಡ್ಡಿಯಿಲ್ಲ, ಹಾಗೆ ಕಂಡರೆ. ಹಾಗೆ ಕಾಣುತ್ತಿರುವುದರಿಂದಲೇ ವಾಟ್ಸಪ್ ಗ್ರೂಪುಗಳು ದುರಂತ ಅಂತ್ಯ ಕಾಣುತ್ತಿರುವುದು.

4)      ಇನ್ನು ಹಲವರಿಗೆ ವಾಟ್ಸಪ್ ಗ್ರೂಪುಗಳಲ್ಲಿದ್ದ ಕೂಡಲೇ ಮೊಬೈಲ್ ಹ್ಯಾಂಗ್ ಆಗುತ್ತದೆ ಅಂತ ಯಾರೋ ಹೇಳಿರ್ತಾರೆ. ಅದಕ್ಕೆ ಅವರು ಮೊದಲು ಮಾಡುವ ಕೆಲಸ ಗ್ರೂಪಿನಲ್ಲಿ ಬಂದ ಮೆಸೇಜುಗಳನ್ನು ಕ್ಲಿಯರ್ ಚಾಟ್ ಮಾಡಿ ಅಳಿಸುವುದು!! ಏನೂ ಬಂದರೂ ನೋಡುವುದಿಲ್ಲ. ಆದರೆ ತಮಗೆ ಇಷ್ಟ ಬಂದದ್ದನ್ನು ಯಾರ ಅನುಮತಿಯೂ ಇಲ್ಲದೆ ಹಾಕ್ತಾರೆ. ತುಂಬ ಸಲ ಕ್ಲಿಯರ್ ಚಾಟ್ ಮಾಡುವ ಭರಾಟೆಯಲ್ಲಿ ಗ್ರೂಪಿನಿಂದ ಲೆಫ್ಟ್ ಆಗ್ತಾರೆ. ಲೆಫ್ಟ್ ಆದದ್ದು ಕೂಡಾ ಹಲವರಿಗೆ ಗೊತ್ತಾಗುವುದಿಲ್ಲ. ಅಡ್ಮಿನ್ ಒಂದು ವೇಳೆ ಪರ್ಸನಲ್ ಮೆಸೇಜ್ ಹಾಕಿ, ಸ್ವಾಮಿ ಯಾಕೆ ಗ್ರೂಪಿನಿಂದ ಲೆಫ್ಟ್ ಆದಿರಿ? ತಪ್ಪಾಗಿ ಬಿಟ್ರ, ಏನಾದರೂ ಸಮಸ್ಯೆ ಆಯಿತೇ, ನಾನು ಆ ಗ್ರೂಪಿನ ಅಡ್ಮಿನ್ ಅಂತ ಹೆಸರು, ವಿಳಾಸ ಹಾಕಿ ಕೇಳಿದರೂ ಅದಕ್ಕೆ ಡಬಲ್ ಬ್ಲೂ ಟಿಕ್ ಬಂದರೂ ಜಪ್ಪಯ್ಯ ಅಂದರೂ ಉತ್ತರಿಸುವುದಿಲ್ಲ. ಮೃಗಾಲಯದಲ್ಲಿ ಹುಲಿ ಬಂದು ನಿಮ್ಮತ್ರ ಪ್ರಶ್ನೆ ಕೇಳಿತೋ ಎಂಬ ಹಾಗೆ ಮಾತನಾಡದೇ ಉಳಿಯುತ್ತಾರೆ!!!! ಅಡ್ಮಿನ್ ಅಸಹಾಯಕನಾಗಿ ಸುಮ್ಮನಿರುತ್ತಾನೆ. ಗ್ರೂಪಿನಿಂದ ಲೆಫ್ಟ್ ಆಗುವವರ ಸಂಖ್ಯೆ ಜಾಸ್ತಿಯಾಗ್ತಾ ಹೋದ ಹಾಗೆ ಅಡ್ಮಿನ್ ಗೆ ತಾನು ಗ್ರೂಪ್ ಕಟ್ಟಿದ ಉದ್ದೇಶದ ಬಗ್ಗೆ ಜಿಗುಪ್ಸೆ ಬಂದಿರುತ್ತದೆ. ಆದರೆ ಯಾವ ಅಡ್ಮಿನ್ನ್ನೂ ಬಹುಶಃ ಬುದ್ದಿ ಕಲಿಯುವುದಿಲ್ಲ. ಗ್ರೂಪು ಕಟ್ಟುವ ಭ್ರಮೆಯಿಂದ ಹೊರಗೆ ಬರುವುದೂ ಇಲ್ಲ.
ಟಿಪ್ಪಣಿ
: ಒಂದು ವಾಟ್ಸಪ್ ಗ್ರೂಪಿಗೆ ನಾವಾಗಿ ಸೇರುವುದು ಬೇರೆ, ನಮ್ಮನ್ನು ಯಾರೋ ಒತ್ತಾಯದಿಂದ ಸೇರಿಸುವುದು ಬೇರೆ. ನಾವಾಗಿಯೇ ವಾಟ್ಸಪ್ ಗ್ರೂಪಿಗೆ ಸೇರಿಯೂ ನಾವು ಅಲ್ಲಿ ಸಕ್ರಿಯರಾಗಿ ಇಲ್ಲದಿದ್ದರೆ, ಗ್ರೂಪಿನ ಆಶಯಕ್ಕೆ ಅನುಗುಣವಾಗಿ ವರ್ತಿಸದೇ ಹೋದರೆ ಅದು ಯಾರ ತಪ್ಪು ಅಂತ ಹೇಳಬೇಕು. ಒಂದು ಸಂಘಟನೆ ಕಟ್ಟಲು, ಒಂದು ಕಾರ್ಯಕ್ರಮ ಮಾಡಲು ಎಲ್ಲರ ಸಹಕಾರ ಬೇಕು. ವಾಟ್ಸಪ್ ಇದ್ದರೆ ನಿಮ್ಮ ನಿಮ್ಮ ಮನೆಯಿಂದಲೇ ನಿಮಗೆ ಬಿಡುವು ಇರುವಾಗ ಪ್ರತಿಕ್ರಿಯೆ ನೀಡುವ ಮೂಲಕ ಸಂಘಟನೆಯನ್ನು ಚೆನ್ನಾಗಿ ಕಟ್ಟಬಹುದು. ಆದರೆ ಇದ್ಯಾವುದನ್ನೂ ಅರ್ಥ ಮಾಡಿಕೊಳ್ಳದೆ ನಿಷ್ಕ್ರಿಯರಾಗಿ, ಎಲ್ಲವೂ ಅಡ್ಮಿನ್ನಿಗೆ ಸೇರಿದ್ದು ಎಂಬ ಹಾಗೆ ವರ್ತಿಸಿ, ಮಾತನಾಡಬೇಕಾದಲ್ಲೂ ಮಾತನಾಡದೆ ಇರುವ ಅಡ್ಡ ಗೋಡೆ ಮೇಲೆ ದೀಪ ಇರಿಸಿಂತಹ ಇಂತಹ ವರ್ತನೆ ಇದೆಯಲ್ಲ. ಇದು ಸರಿಯಾಗುವವ ವರೆಗೂ ಯಾವ ಗ್ರೂಪು ಕೂಡಾ ಉದ್ಧಾರ ಆಗಲು ಸಾಧ್ಯವಿಲ್ಲ.

5)      ಗ್ರೂಪಿನಲ್ಲಿ ಅಸಹಜತೆ ವಿಚಾರ ಬಂದರೆ, ತಪ್ಪು ಪೋಸ್ಟುಗಳು ಬಂದರೆ, ಅನಾವಶ್ಯಕ ಜೋಕಿನ ವೀಡಿಯೋ ಬಂದರೆ, ಮೋದಿ ಅಥವಾ ರಾಹುಲ್ ಗಾಂಧಿಯ ವಿಮರ್ಶೆ ನಡೆದರೆ, ಧರ್ಮ, ಜಾತಿ, ಕೋಮಿನ ಸಂಗತಿ ಬಂದರೆ ಮಲಗಿದಂತೆ ಇದ್ದವರೆಲ್ಲ ಎದ್ದು ಎಚ್ಚರಗೊಳ್ಳುತ್ತಾರೆ. ಪ್ರಬಲ ವಾದಗಳನ್ನು ಮಂಡಿಸುತ್ತಾರೆ. ಅಡ್ಮಿನ್ ಮೇಲೆ ಹರಿಹಾಯುತ್ತಾರೆ. ಗ್ರೂಪಿನ ಸಬ್ಜೆಕ್ಟಿನ ವಿಚಾರಕ್ಕೂ ತಾವು ಸ್ಪಂದಿಸುತ್ತಿರಲಿಲ್ಲ ಎಂಬದುನ್ನು ಮರೆತು ಜಗಳವಾಡುತ್ತಾರೆ. ಇದರ ಅರ್ಥ ಏನು? ಜನ ಗ್ರೂಪಿನಲ್ಲಿ ಬಂದ ಮೆಸೇಜುಗಳನ್ನು ನೋಡುವುದೇ ಇಲ್ಲ ಅಂತ ಅಲ್ಲ. ನಮಗೆ ಯಾಕೆ ಬೇಕು ಉಸಾಬರಿ? ಅವ ಅಡ್ಮಿನ್ ಇದ್ದಾನಲ್ಲ. ಮಾಡಿಕೊಳ್ಳಲಿ ಬಿಡಿ. ಅಯ್ಯೋ ಯಾಕ್ರೀ ಬೇಕು ತಲೆನೋವು. ನೋಡಿಕೊಳ್ತಾರೆ ಬಿಡಿ ಎಂಬ ಉಡಾಫೆ. ಇದಕ್ಕೇ ಶೇ.90ರಷ್ಟು ವಾಟ್ಸಪ್ ಗ್ರೂಪುಗಳು ವಿಫಲವಾಗುತ್ತಿರುವುದು.

ಟಿಪ್ಪಣಿ: ಗ್ರೂಪಿನ ಪ್ರತಿಯೊಬ್ಬರಿಗೂ ಗ್ರೂಪು ಬೇಕು, ಅದರ ಉದ್ದೇಶ ಸಫಲವಾಗಬೇಕು ಎಂಬ ಇಚ್ಛೆ ಇದ್ದರೆ ಮಾತ್ರ ಯಾವುದೇ ವಾಟ್ಸಪ್ ಗ್ರೂಪು ಚೆನ್ನಾಗಿ ನಡೆಯಲು ಸಾಧ್ಯ. ನಮಗೆ ಟೈಮೇ ಇಲ್ಲ ಎನ್ನುವ ಅಸ್ಪಷ್ಟ ನಿಲುವು ಹೊಂದಿದವರು ಒಂದು ಯೋಚಿಸಬೇಕು. ಈ ಅಡ್ಮಿನ್ ಅನ್ನುವ ಪ್ರಾಣಿ ಕೂಡಾ ಮನುಷ್ಯನೇ ಆಗಿರುತ್ತಾನೆ. ಹಾಗೂ ಅವನಿಗೂ ನಿಮ್ಮೆಲ್ಲರಿಗೆ ಇರುವ ಹಾಗೆ ಮನೆ, ಕೆಲಸ, ಸಂಸಾರ, ಒತ್ತಡಗಳು ಇರುತ್ತವೆ. ಅವನಿಗೆ ಟೈಂ ಎಲ್ಲಿಂದ ಬರಬೇಕು, ಅವ ಯಾರಿಗೋಸ್ಕರ ಇಷ್ಟೆಲ್ಲ ಒದ್ದಾಡಬೇಕು ಎಂಬಿತ್ಯಾದಿ ಪ್ರಶ್ನೆಗಳನ್ನು ಸ್ವಲ್ಪ ನಿಮಗೆ ನೀವೇ ಕೇಳಿಕೊಂಡರೆ ಇದಕ್ಕೆ ಪರಿಹಾರ ಸಿಕ್ಕೀತು. ದುರಾದೃಷ್ಟವಶಾತ್ ಇಷ್ಟೆಲ್ಲ ಜಿಜ್ಞಾಸೆ ಮಾಡಲೂ ನಮಗೆ ಟೈಂ ಇರುವುದಿಲ್ಲ...

ಯಾಕೆಂದರೆ...

 

ಜಗತ್ತಿನಲ್ಲಿ ಎಲ್ಲರೂ ಬಿಝಿ... ಆದರೆ, ಕೆಲವರು ಸ್ವಲ್ಪ ಜಾಸ್ತಿ ಬಿಝಿ!

ಜಗತ್ತಿನಲ್ಲಿ ಎಲ್ಲರ ಸಮಯವೂ ಶ್ರೇಷ್ಠವೇ, ಆದರೆ ಕೆಲವರ ಸಮಯ ಅತ್ಯಂತ ಶ್ರೇಷ್ಠ!

ಇವತ್ತು ವಾಟ್ಸಪ್ ಗ್ರೂಪುಗಳು ಕುಲಗೆಟ್ಟುಹೋಗಿದ್ದರೆ ಅದಕ್ಕೆ ತಂತ್ರಜ್ಞಾನ ಅಥವಾ ಕಾಲ ಕಾರಣ ಅಲ್ಲ. ನಮ್ಮ ಉಡಾಫೆಯೇ ಅತ್ಯಂತ ನಿಖರ ಹಾಗೂ ಪ್ರಬಲವಾದ ಕಾರಣ!

(ಒಂದು ವೇಳೆ ಯಾರಾದರೂ ಇಲ್ಲಿಯವರೆಗೆ ಬರಹ ಓದಿದ್ದರೆ, ನಿಮ್ಮ ಸಹನೆಗೆ ಧನ್ಯವಾದಗಳು. ನನ್ನ ವಿಚಾರಗಳು ನಿಮಗೆ ಇಷ್ಟವಾಗದೇ ಇದ್ದರೆ ದಯವಿಟ್ಟು ಕಮೆಂಟ್ ಬಾಕ್ಸಿನಲ್ಲಿ ನಮೂದಿಸಬಹುದು. ಧನ್ಯವಾದಗಳು)

-ಕೃಷ್ಣಮೋಹನ ತಲೆಂಗಳ (19.11.2022)           

No comments: