ಬೆನ್ನು ತಟ್ಟಲು, ಸಣ್ಣದೊಂದು ಥ್ಯಾಂಕ್ಸ್ ಹೇಳಲು ಯಾಕೆ ನಾವು ತಡವರಿಸುತ್ತೇವೆ?!

 



ಜಾಲ ತಾಣದ ನೆಟ್ವರ್ಕಿನೊಳಗೆ ನಾವು ಸಿಲುಕಿದ ಬಳಿಕ ಅಥವಾ ಇದರ ನಿರಾಕರಿಸಲಾಗದ ಜಾಲದ ಭಾಗವಾದ ಬಳಿಕ ಅಲ್ಲಿಲ್ಲಿ ಕಾಣುವ ಎಷ್ಟೊಂದು ಮೆಚ್ಚುಗೆಗಳು, ಎಷ್ಟೊಂದು ಪ್ರತಿಕ್ರಿಯೆಗಳು, ಎಷ್ಟೊಂದು ಆಕ್ರೋಶಗಳೆಲ್ಲ ನಿಜವ, ಸುಳ್ಳ, ಮುಖಸ್ತುತಿಯ, ಓದಿ ಹೇಳಿದ್ದ, ಓದದೇ ಹೇಳಿದ್ದ, ವ್ಯಾವಹಾರಿಕ ಪ್ರತಿಕ್ರಿಯೆ ಅಂತೆಲ್ಲ ತಿಳಿಯುವುದೇ ಇಲ್ಲ. ಫೇಸ್ಬುಕ್ಕು ಗೋಡೆಯಲ್ಲಿ, ವಾಟ್ಸಪ್ ಸ್ಟೇಟಸ್ಸಿನಲ್ಲಿ ನಾವು ಬಹಳಷ್ಟು ಸಲ ತ್ಯಾಂಕ್ಸು, ಸಾರಿ, ರಿಪ್ಪು, ಬಾಯ್ ಅಂತೆಲ್ಲ ತುಂಬ ನಯ ವಿನಯದಿಂದ, ಶಿಷ್ಟಾಚಾರದಿಂದ ಬರೆದುಕೊಳ್ಳುತ್ತೇವೆ. ಜಾಲತಾಣದಲ್ಲಿ ಸೌಜನ್ಯದಿಂದಲೇ ನಡೆದುಕೊಳ್ಳುತ್ತೇವೆ.

ಆದರೆ...

ನಿತ್ಯ ಬದುಕಿನಲ್ಲಿ ಪುಟ್ಟ ಪುಟ್ಟ ಸಹಾಯ ಮಾಡಿ ಚಂದದ ಒಂದು ಖುಷಿ ಕೊಡುವ, ದೊಡ್ಡದೊಂದು ದಾರಿಗೆ ಪುಟ್ಟದಾದ ಸೇತುವೆಯನ್ನು ದಾಟಿಸಿ ಬಿಡುವ ಎಷ್ಟು ಮಂದಿ ಅನಾಮಧೇಯರನ್ನು ನಾವು ನೆನಪಿಡುತ್ತೇವೆ? ಎಷ್ಟು ಮಂದಿಯನ್ನು ಹೃದಯಪೂರ್ವಕವಾಗಿ ಹುಡುಕಿ ಹೋಗಿ ತ್ಯಾಂಕ್ಸ್ ಹೇಳುತ್ತೇವೆ. ಎಷ್ಟು ಮಂದಿಯಲ್ಲಿ ನೀವು ಅಂದು ಹಾಗೆ ನನ್ನನು ಆಧರಿಸಿದ್ದಕ್ಕೆ ನಾನಿಂದು ಇಲ್ಲಿದ್ದೇನೆ ಅಂತ ನೆನಪಿಸಿ ಹೇಳುತ್ತೀರಿ? ಅವರಿಗೆ ಅದರ ಅಪೇಕ್ಷೆ ಇರಲಿಕ್ಕಿಲ್ಲ, ನಮಗೂ ಅದು ದೊಡ್ಡ ಸಂಗತಿ ಅನ್ನಿಸಲಿಕ್ಕಿಲ್ಲ. ಆದರೆ, ಬಹಳಷ್ಟು ಸಲ ಕೃತಕವಾಗಿ, ಒತ್ತಾಯಪೂರ್ವಕವಾಗಿ, ಒತ್ತಡದ ಶಿಷ್ಚಾಚಾರಕ್ಕೆ ಕಟ್ಟು ಬಿದ್ದ ಹಾಗೆ ಹೇಳುವ ಸಾರಿ, ತ್ಯಾಂಕ್ಸ್ ಉಂಟಲ್ಲ ಅದಕ್ಕಿಂತ ಇಂತಹ ವರ್ಚುವಲ್ ಉಪಕಾರಗಳಿಗೆ ನೀಡುವ ಧನ್ಯವಾದ ಸಮರ್ಪಣೆ ಮತ್ತು ಒಂದು ಚಂದದ ಸ್ಮರಣೆ ಅಂತಹ ಮಂದಿಗೆ ಅವರ ನಿಷ್ಕಾಮ ಕಾಯಕದಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ನೆರವಾಗುತ್ತದೆ.

ಅಂಥಹ ಕೆಲವು ಸಂಗತಿಗಳ ಪಟ್ಟಿ ಮಾಡುವ ಪ್ರಯತ್ನ ಇದು...

1)      ಶಾಲೆಯಿಂದ ದಿನಾ ಬರ್ತಾ ಇದ್ದ ಬಸ್ಸಿಗೆ ನೀವು ಒಂದು ದಿನ ಎರಡು ನಿಮಿಷ ತಡವಾದರೆ ರಸ್ತೆ ಬದಿ ದೊಡ್ಡದಾಗಿ ಹಾರ್ನು ಹಾಕುತ್ತಾ ಕಾಯುತ್ತಿದ್ದ ಡ್ರೈವರ್..

2)      ತರಕಾರಿ ಅಂಗಡಿಯಲ್ಲಿ ಎಲ್ಲ ಖರೀದಿ ಆದ ಮೇಲೆ ಅಗತ್ಯ ಬೇಕಾಗಿದ್ದ ಹಸಿಮಣಸಿನ ಕಾಯಿ ಇಲ್ಲದಿದ್ದರೆ, ನಿಮಗೆ ಮುಜುಗರ ಉಂಟು ಮಾಡದೆ ಪಕ್ಕದ ಅಂಗಡಿಯಿಂದ ತಂದು ಕೊಟ್ಟು ಒಂದೇ ಬಿಲ್ಲಿನಲ್ಲಿ ಸುಧಾರಿಸುವವರು, ದುಡ್ಡು ಕಡಿಮೆ ಆದರೆ, ನಾಳೆ ಕೊಡಿ ಸಾಕು ಅಂತ ನಂಬಿಕೆಯಿಂದ ಕಳುಹಿಸಿಕೊಡುವವರು. (ಇದು ಬಿಸಿನೆಸ್ ಟ್ರಿಕ್ ಇರಬಹುದು, ಆದರೆ, ಪಡೆದ ದುಡ್ಡಿಗೆ ಗ್ರಾಹಕನ ಸಂತೃಪ್ತಿಯನ್ನು ಗಮನಿಸುವವನೇ ನಿಜವಾದ ವ್ಯಾಪಾರಿ).

3)      ಬದುಕಿನಲ್ಲಿ ತುಂಬ ಹಣಕಾಸಿನ ಮುಗಟ್ಟಿನಲ್ಲಿದ್ದಾಗ ಯಾಕೆ, ಏನು, ಯಾವಾಗ ಕೊಡ್ತಿ, ನಿನಗೆ ಇದನ್ನು ವಾಪಸ್ ಕೊಡಲು ಸಾಧ್ಯವ?” ಅಂತ ಕೂಡಾ ಕೇಳದೆ ತಕ್ಷಣಕ್ಕೆ ಪೂರ್ತಿ ನಂಬಿಕೆ ಇಟ್ಟು ಒಂದು ಪುಟ್ಟ ಹಣಕಾಸು ನೆರವು ನೀಡುವ ಬಂಧು ಅಥವಾ ಮಿತ್ರರು. ಅದೇ ಪುಟ್ಟ ದುಡ್ಡಿನಿಂದ ನಾವೊಂದು ಕಡೆ ಹೋಗಬಹುದು, ಒಂದು ಸಂದರ್ಶನ ಎದುರಿಸಿ ಕೆಲಸ ಗಿಟ್ಟಿಸಬಹುದು, ಯಾರದ್ದೋ ಅನಾರೋಗ್ಯಕ್ಕೆ ಮದ್ದು ತಂದು ಅವರ ಜೀವ ಉಳಿಸಬಹುದು, ಪುಟ್ಟದೊಂದು ಬಂಡವಾಳ ಹೂಡಿ ಚಂದದ ವ್ಯಾಪಾರ ಮಾಡಿ ದೊಡ್ಡ ಜನರಾಗಬಹುದು. ನಾವು ನೆನಪಿಟ್ಟು ಅವರು ಕೊಟ್ಟ ಸಾಲವನ್ನು ತಕ್ಷಣ ಅಥವಾ ಎಷ್ಟೋ ವರ್ಷದ ನಂತರ ವಾಪಸ್ ಕೊಡಬಹುದು. ಆದರೆ, ನಮ್ಮಲ್ಲಿ ಎಷ್ಟು ಮಂದಿ ಅವತ್ತು ನೀವು ಕೊಟ್ಟ ಪುಟ್ಟ ಬಂಡವಾಳದಿಂದಲೇ ನಾನಿಂದು ಇಷ್ಟು ದೊಡ್ಡ ವ್ಯವಹಾರಸ್ಥನಾದೆ, ನಿಮಗೀಗ ಯಾವ ಕಷ್ಟ ಇದ್ದರೂ ಹೇಳಿ, ನನ್ನಿಂದಾದ ನೆರವು ನೀಡುತ್ತೇನೆ…” ಅಂತ ಆಫರ್ ಕೊಡುವವರಿದ್ದಾರೆ? (ಇಲ್ಲವೇ ಇಲ್ಲ ಹೇಳುವುದಿಲ್ಲ, ತುಂಬ ಮಂದಿಗೆ ಆ ಸೂಕ್ಷ್ಮತೆ ಇರುವುದಿಲ್ಲ). ಎಷ್ಟೊ ಸಲ ಈ ರೀತಿ ಪುಟ್ಟ ಪುಟ್ಟ ಸಾಲ ಕೊಡುವ ಮಂದಿ ಬದುಕಿನಲ್ಲಿ ಯಾವತ್ತೂ ಹಣಕಾಸಿನ ವಿಚಾರದಲ್ಲಿ ದೊಡ್ಡ ಜನರಾಗುವುದಿಲ್ಲ. ಅವರ ಬದುಕು ಹಾಗೆಯೇ ಇರುತ್ತದೆ, ವರ್ಷಗಳ ಬಳಿಕವೂ. ಹಣ ಪಡೆದು ಉಪಕೃತರಾದವರ ಬದುಕು ಬಹಳಷ್ಟು ಪ್ರಮಾಣದಲ್ಲಿ ಮೇಲಕ್ಕೆ ಏರಿರಬಹುದು. ಅಂತಹ ಸಾಕಷ್ಟು ನಿದರ್ಶನಗಳು ಇವೆ.

4)      ಬದುಕಿನಲ್ಲಿ ತುಂಬ ನೊಂದಿರುವಾಗ, ಬದುಕೇ ಸಾಕು ಅಂತ ಅನ್ನಿಸಿರುವಾಗ, ಮುಂದೇನು ಮಾಡಬೇಕು ಅಂತ ತೋಚದೇ ಇರುವಾಗ ತಾವಾಗಿ ಬಂದು, ನಿಮ್ಮ ಕಷ್ಟಗಳನ್ನು ಸಹನೆಯಿಂದ ಕೇಳಿ, ಚಂದದ ಪರಿಹಾರ ಸೂಚಿಸಿ, ಸಾಕಷ್ಟು ಆತ್ಮವಿಶ್ವಾಸ ತುಂಬಿಸಿ ಮುಂದೆ ನಡೆ ಅಂತ ಕಳಿಸುವವರು.... ಒಂದು ದೊಡ್ಡ ಪ್ರಯಾಣಕ್ಕೆ ಹೊರಟವ ಆರಂಭದಲ್ಲೇ ಸಣ್ಣ ತೊರೆಯನ್ನು ದಾಟಲು ಹೆದರಿದರೆ, ಅವನ ಪ್ರಯಾಣ ಮುಂದೆ ಸಾಗುವುದೇ ಇಲ್ಲ. ಯಾರೋ ಒಬ್ಬ ಅನಾಮಿಕನೇ ಆಗಲಿ, ಕೈಹಿಡಿದು ಆ ತೊರೆ ದಾಟಿಸಿದರೆ ಸಾಕು, ಮುಂದೆ ನಾವೇ ಸ್ವತಂತ್ರವಾಗಿ ಆ ದಾರಿಯಲ್ಲಿ ಸಾವಿರಾರು ಮೈಲಿ ಕ್ರಮಿಸಬಹುದು. ಆದರೆ, ಒಂದು ವೇಳೆ ಆ ತೊರೆ ದಾಟದೇ ಇರುತ್ತಿದ್ದರೆ, ನಾವು ಹೊರಟಲ್ಲೇ ಇರುತ್ತಿದ್ದೆವು ಅಲ್ವ? ಈರೀತಿ ತೊರೆ ದಾಟಿಸಿದವರು ಪ್ರತಿಯೊಬ್ಬರ ಬದುಕಿನಲ್ಲೂ ಇರುತ್ತಾರೆ. ತೊರೆ ದಾಟಿಸುವುದು ಅವರಿಗೆ ಉದ್ಯಮ ಆಗಿರುವುದಿಲ್ಲ, ಅದು ಅವರ ಸಹೃದಯತೆ ಆಗಿರುತ್ತದೆ.

5)      ಒಂದು ಹೊಟೇಲಿಗೆ ಹೋದಾಗ ಅತ್ಯಂತ ಸಹನೆಯಿಂದ ಅನ್ನಾಹಾರ ನೀಡಿ, ಅಲ್ಲಿ ಸಿಗುವ ಇತರ ರುಚಿಕಟ್ಟಾದ ಖಾದ್ಯಗಳ ಬಗ್ಗೆ ತಿಳಿಸಿ, ಕೇಳಿದ್ದನ್ನೆಲ್ಲ ಅತ್ಯಂತ ನಾಜೂಕಾಗಿ ಪೂರೈಸುವ ಸಪ್ಲೈಯರ್ ಇರ್ತಾರಲ್ವ? ನೀವು ಅವರಿಗೆ ಪರ್ಸಿನಿಂದ ಯಾಂತ್ರಿಕವಾಗಿ ತೆಗೆದುಕೊಡುವ 50, 100 ರು. ಟಿಪ್ಸು ನಿಮ್ಮ ಶ್ರೀಮಂತಿಕೆಯ ಲೆವೆಲ್ಲಿಗೆ ಅನುಗುಣವಾಗಿ ಇರುತ್ತದೆ. ಅದರ ಹೊರತಾಗಿ, ಹೊಟೇಲಿನಿಂದ ಹೊರಡುವ ಮೊದಲು ನಿಮ್ಮ ಸೇವೆ ನನಗೆ ತುಂಬ ಖುಷಿಯಾಯಿತು, ನಿಮ್ಮ ಹೊಟೇಲಿನ ಊಟ ತುಂಬ ರುಚಿಕಟ್ಟಾಗಿದೆ... ಇದೇ ಥರ ಆಹಾರ ಮಾಡ್ತಾ ಇರಿ ಅಂತ ಎಷ್ಟು ಸಲ ಹೇಳಿದ್ದೀರಿ. ನಾವು ಆನ್ ಲೈನ್ ವ್ಯವಹಾರಗಳಲ್ಲಿ ತಕ್ಷಣ ರೇಟಿಂಗ್ ಕೊಡ್ತೇವೆ... ಆದರೆ ನೇರವಾಗಿ ದೈನಂದಿನ ಆಗುಹೋಗುಗಳಲ್ಲಿ ತಪ್ಪಿಯೂ ಎಲ್ಲಿಯೂ ಬಾಯಿಯಿಂದ ಮೆಚ್ಚುಗೆ ಹೇಳುವುದಿಲ್ಲ... ಈ ಸೂಕ್ಷ್ಮತೆಯೇ ನಮಗಿಲ್ಲ.

6)      ಇದು ಕೇವಲ ಸಪ್ಲಯರ್ ವಿಚಾರವಲ್ಲ. ಜಾಗ್ರತೆಯಿಂದ ಚಾಲನೆ ಮಾಡಿದ ಚಾಲಕ, ಯಶಸ್ವಿಯಾಗಿ ಚಿಕಿತ್ಸೆ ನೀಡಿದ ವೈದ್ಯರು, ನೋವಾ ಆಗದಂತೆ ಇಂಜಕ್ಷನ್ ನೀಡಿದ ಸಿಸ್ಟರ್, ಎಷ್ಟೇ ಜನ ಇದ್ರೂ ಕೂಡ್ಲೇ ಸಾಮಾನು ಪ್ಯಾಕ್ ಮಾಡಿ ಕೊಡುವ ಅಂಗಡಿಯಾತ, ಹೇಳಿದ ದಿನವೇ ಅಂಗಿ ಹೊಲಿದು ಕೊಡುವ ದರ್ಜಿ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಕೂದಲು ಡಿಸೈನ್ ಮಾಡಿ ಕೊಡುವ ಕ್ಷೌರಿಕ, ಚಂದದ ಪ್ರಸ್ತುತಿ ನೀಡಿದ ಯಕ್ಷಗಾನ ಕಲಾವಿದ, ಎಷ್ಟೇ ಮಳೆ ಇದ್ರೂ ಸರಿಯಾದ ಸಮಯಕ್ಕೇ ಆಹಾರ ತಂದು ಕೊಡುವ ಫುಡ್ ಡೆಲಿವರಿ ಬಾಯ್.... ತುಂಬ ತಾಳ್ಮೆಯಿಂದ ನಿಮ್ಮ ಇಷ್ಟದ ಶರ್ಟ್ ಪೀಸ್ ಆರಿಸಿ ಕೊಡುವ ಟೆಕ್ಸ್ ಟೈಲ್ಸ್ ನ ಮಾರಾಟ ಪ್ರತಿನಿಧಿ... ಇವರಿಗೆಲ್ಲ ಸಂಬಳ ಕೊಡ್ತಾರೆ, ಅದು ಅವರ ಕರ್ತವ್ಯವೂ ಹೌದು. ಆದರೆ, ಕರ್ತವ್ಯದ ಯಾಂತ್ರಿಕತೆ ಮೀರಿದ ಅವರ ತೊಡಗಿಸಿಕೊಳ್ಳುವಿಕೆ, ಸಹನೆ ಹಾಗೂ ವೃತ್ತಿಪರತೆಯನ್ನು ನಾವು ತುಂಬ ಸಲ ಮನಸ್ಸಿನೊಳಗೆ ಮೆಚ್ಚಿಕೊಂಡರೂ ಬಾಯಿ ಬಿಡಿಸಿ ಹೇಳುವುದಿಲ್ಲ... ಹೇಳಿದರೆ ಎಲ್ಲಿ ನಮ್ಮ ಬಿಗು ಮಾನಕ್ಕೆ ಕಮ್ಮಿ ಆಗ್ತದೋ ಎಂಬ ಹಾಗೆ...

ಇಂತಹ ಇನ್ನಷ್ಟು ಮಂದಿಯ ಹೆಸರು ಪಟ್ಟಿ ಮಾಡಬಹುದು. ನಮ್ಮೊಳಗಿನ ಸಣ್ಣ ಅಹಂ, ಕೆಟ್ಟ ಬಿಗುಮಾನ, ದಾಕ್ಷಿಣ್ಯ, ಹಿಂಜರಿಕೆ ಮತ್ತಿತರ ಕಾರಣಗಳಿಂದ ನಾವು ಮೆಚ್ಚುಗೆಗಳನ್ನು ಮುಕ್ತವಾಗಿ ಹೇಳುವುದೇ ಇಲ್ಲ. ಮತ್ತಷ್ಟು ಸಲ ಅವರೇನು ಅಂದುಕೊಳ್ಳುತ್ತಾರೋ ಎಂಬ ಚಿಂತೆಯೂ ಕಾರಣ ಇರಬಹುದು.

ಆದರೆ ವ್ಯಾವಹಾರಿಕತೆಯ ಬೇಲಿ ದಾಟಿ ಒಂದು ಭಾವನಾತ್ಮಕ ಸ್ಮರಿಸುವಿಕೆ, ಥ್ಯಾಂಕ್ಸ್ ಹೇಳುವುದು, ಬೆನ್ನು ತಟ್ಟಿ ಪ್ರೋತ್ಸಾಹಿಸುವುದು, ನನಗೆ ನಿನ್ನ ಉಪಕಾರ ನೆನಪಿದೆ ಎಂದು ಮುಕ್ತ ಮನಸ್ಸಿನಿಂದ ಹೇಳುವುದು ಇಂತಹ ಸಹೃದಯರ, ಸುಮನಸರ ನಿಷ್ಮಲಶ ಕಾಯಕಕ್ಕೆ ನಾವು ನೀಡಬಹುದಾದ ಪದ್ಮಶ್ರೀ ಪ್ರಶಸ್ತಿಯೇ ಸರಿ!

-ಕೃಷ್ಣಮೋಹನ ತಲೆಂಗಳ (11.12.2022)

No comments: