ಆಡದೇ ಉಳಿದ ಮಾತುಗಳಿಗೆ ಪ್ರತಿಫಲನ the lift boy!..

"THE LIFT BOY" 2019ರಲ್ಲಿ ತೆರೆ ಕಂಡ ಹಿಂದಿ ಚಿತ್ರ. ಜೊನಾಥನ್ ಆಗಸ್ಟಿನ್ ನಿರ್ದೇಶನದ ಸಿನಿಮಾ.

ಸರಳವಾದ ಕಥೆ. ಅಚ್ಚುಕಟ್ಟಾದ ನಿರೂಪಣೆ, ಚಂದದ ದೃಶ್ಯ ಜೋಡಣೆ, ಚುರುಕಾದ ಸಂಭಾಷಣೆಗಳಿಂದ ಗಮನ ಸೆಳೆಯುತ್ತದೆ. 

ರೋಮಾನ್ಸು, ಫೈಟಿಂಗ್, ದೊಡ್ಡದೊಂದು ತಿರುವು, ರೋಚಕತೆ ಎಂಥದ್ದೂ ಇಲ್ಲದೆ ಮಾನವೀಯತೆ ಗೆಲ್ಲುವ ಕಥಾಹಂದರ. 

ಬಹುತೇಕ ಲಿಫ್ಟಿನಲ್ಲೇ ಶುರುವಾಗಿ ಲಿಫ್ಟಿನ ಆಸುಪಾಸಿನಲ್ಲೇ ಸಾಗುವ ಕಥೆ. 

30 ವರ್ಷ ಅಪಾರ್ಟ್ ಮೆಂಟ್ ಒಂದರಲ್ಲಿ ಲಿಫ್ಟ್ ಮ್ಯಾನ್ ಆಗಿ ದುಡಿಯುತ್ತಿದ್ದ ಕೃಷ್ಣ ಹೃದಯಾಘಾತಕ್ಕೆ ತುತ್ತಾಗ್ತಾರೆ. ಅವರ ಮಗ, ನಾಲ್ಕು ಸಲ ಎಂಜಿನಿಯರಿಂಗ್ ನಲ್ಲಿ ಢುಮ್ಕಿ ಹೊಡೆದ ರಾಜು ಮನಸ್ಸಿಲ್ಲದ ಮನಸ್ಸಿನಿಂದ ಅಪ್ಪ ಮಾಡುತ್ತಿದ್ದ ಲಿಫ್ಟ್ ಮ್ಯಾನ್ ಕೆಲಸಕ್ಕೆ "ಲಿಫ್ಟ್ ಬಾಯ್" ಆಗಿ ಹೋಗ್ತಾನೆ. ಅಲ್ಲಿ ಅಪಾರ್ಟ್ ಮೆಂಟ್ ನ ಮಾಲಕಿ ಶ್ರೀಮತಿ ಡಿಸೋಜ ಅವರ ಪರಿಚಯ ಆಗ್ತದೆ... ಅವನ ಬದುಕು ಹೇಗೆ ಬದಲಾಗ್ತದೆ ಅಂತ ತಿಳಿಯುವುದಕ್ಕೆ ಸಿನಿಮಾ ನೋಡಬೇಕು!

ಇಡೀ ಸಿನಿಮಾದ ಎಲ್ಲ ಪಾತ್ರಗಳ ಆಯ್ಕೆ ಅತ್ಯಂತ ಸಮಂಜಸವಾಗಿದ್ದು,  ಜನಪ್ರಿಯರಾದ ಯಾವುದೇ ಕಲಾವಿದರು ಇಲ್ಲಿ ಕಾಣಿಸುವುದಿಲ್ಲ. ಬಹುತೇಕ ಹಿಂದಿ, ಇಂಗ್ಲಿಷ್ ಹಾಗೂ ಅಲ್ಪಸ್ವಲ್ಪ ಮರಾಠಿ ಜೊತೆಗೆ ಸಿನಿಮಾ ತುಂಬ ಆಪ್ತವಾಗುತ್ತದೆ. 

ಇಡೀ ಸಿನಿಮಾದಲ್ಲಿ ಗಮನ ಸೆಳೆಯುವುದು ಮಿಸೆಸ್ ಡಿಸೋಜ ಅವರ ಪಾತ್ರ. ಅವರ ಹಾಗೂ ರಾಜುವಿನ ನಡುವಿನ ಸರಳ ಹಾಗೂ ಚಂದದ ಇಂಗ್ಲಿಷ್ ಸಂಭಾಷಣೆ ತುಂಬ ಇಷ್ಟವಾಗುತ್ತದೆ. ನಾನು ಸ್ವತಃ ಬದುಕಿನಲ್ಲಿ ಡಿಸೋಜ ಅವರಂತಹ ಶಿಸ್ತುಬದ್ಧ ಹಾಗೂ ಪರೋಪಕಾರಿ ಮಹಿಳೆಯನ್ನು ಕಂಡಿರುವೆನಾದ್ದರಿಂದ ಅವರ ಮಾತು, ಸಮಯಪಾಲನೆಯ ಶಿಸ್ತು, ಸೂಕ್ಷ್ಮಗ್ರಹಿಕೆ ತುಂಬ ಆಪ್ತ ಹಾಗೂ ಅತ್ಯಂತ ಸಹಜ ಅನ್ನಿಸಿತು. ಯಾವುದೇ ಮಸಾಲೆಗಳಿಲ್ಲದೆಯೂ ಸಿನಿಮಾ ಹೇಗೆ ಇಷ್ಟ ಆಗಬಹುದು ಎಂಬುದಕ್ಕೆ ಇನ್ನೊಂದು ಉದಾಹರಣೆ the lift boy.

ಹೌದಲ್ವ... ವ್ಯಕ್ತಿಗಳನ್ನು ಹೊರಗಿನಿಂದ ಮಾತ್ರ ನೋಡುತ್ತೇವೆ. ಅವರ ಆಂತರ್ಯ, ಅವರೊಳಗಿನ ಮಿಡಿಯುವ ಹೃದಯ ನಮಗೆ ಹೊರನೋಟಕ್ಕೆ ಕಾಣುವುದೇ ಇಲ್ಲ. ಆಡದೇ ಉಳಿದ ಮಾತುಗಳಾಚೆಗಿನ ಮಿಡಿತ ಹಾಗೂ ಹೇಳದೇ ಮಾಡಿದ ಉಪಕಾರ ಮತ್ತು ನಿರೀಕ್ಷೆಗಳೇ ಇಲ್ಲದ ಕಾಳಜಿಗಳಿಂದಾಗಿ ಈ ಸಿನಿಮಾ ತುಂಬ ಆಪ್ತ ಅನ್ನಿಸುತ್ತದೆ. ಈ ಸಿನಿಮಾ netflixನಲ್ಲಿ ಲಭ್ಯ.

#TheLiftBoy 
#Netflix 
#JonathanAugustin 
#bollywood 
#filmreview 

-ಕೃಷ್ಣಮೋಹನ ತಲೆಂಗಳ (29.12.2022)

No comments: