ವೃತ್ತಿ ಬದುಕು ಮತ್ತು ಕನ್ನಡಪ್ರಭ ಸಾಂಗತ್ಯಕ್ಕೆ 22 ವರ್ಷ ಪೂರ್ಣ!

 



ಈ ನವರಾತ್ರಿಗೆ ಪತ್ರಿಕಾ ಉದ್ಯೋಗಿಯಾಗಿ ವೃತ್ತಿ ಬದುಕು ಮತ್ತು ಕನ್ನಡಪ್ರಭ ಸುದ್ದಿಮನೆ ಸಾಂಗತ್ಯಕ್ಕೆ (07.10.2002ರಿಂದ ಮೊದಲ್ಗೊಂಡು) 22 ವರ್ಷ ಪೂರ್ತಿಯಾಗಿದೆ. ಇಂತಹ ಘಟ್ಟ ಪೂರೈಸಿದವರಲ್ಲಿ ನಾನು ಮೊದಲಿಗನೂ ಅಲ್ಲ, ಕೊನೆಯವನೂ ಅಲ್ಲ. 2002ರಲ್ಲಿ ನವರಾತ್ರಿಯ ಶುಭ ಸಂದರ್ಭದಲ್ಲೇ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬಳಗದ ಕನ್ನಡಪ್ರಭಕ್ಕೆ ಸೇರಿದ್ದು, ಇಂದು ಏಷ್ಯಾನೆಟ್ ಸಮೂಹದ ಪ್ರಧಾನ ಮಾಲಕತ್ವದಲ್ಲಿರುವ ಅದೇ ಕನ್ನಡಪ್ರಭದಲ್ಲಿದ್ದೇನೆ.

 ಪತ್ರಿಕೆಯಲ್ಲಿ ಉದ್ಯೋಗಿಯಾಗಿದ್ದು ಅನುಭವ ಗಳಿಸಿದಲ್ಲಿಗೇ ನಾವು ಸಾಧಕರಾಗಬೇಕಾಗಿಲ್ಲ. ಹಿರಿಯ ಪತ್ರಕರ್ತರೂ (ಕೇವಲ ವಯಸ್ಸಿನ ಕಾರಮಕ್ಕೆ) ಆಗಬೇಕಾಗಿಲ್ಲ. ನಾನೂ ಇದೇ ವರ್ಗಕ್ಕೆ ಸೇರಿದವ. ಹಿರಿಯನೂ ಅಲ್ಲ, ಸಾಧಕನೂ ಅಲ್ಲ. ಆದರೆ ನನ್ನ ಅನ್ನದಾತ ಸಂಸ್ಥೆ ನನಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ತಪ್ಪುಗಳನ್ನು ತಿದ್ದಿ ಸರಿಪಡಿಸಿ ಮುಂದೆ ಹೋಗಲು ಅವಕಾಶ ನೀಡಿದೆ. ಈ ತನಕ ಹಿರಿಯರಾಗಿ ಮಾರ್ಗದರ್ಶನ ನೀಡಿದ ಎಲ್ಲ ಸಂಪಾದಕರೂ, ಸಹೋದ್ಯೋಗಿಗಳೂ ಅವಕಾಶ ಮಾತ್ರವಲ್ಲ ಅನುಭವಗಳನ್ನೂ ನೀಡಿದ್ದಾರೆ. ಕೋವಿಡ್ ನಂತಹ ಕ್ಲಿಷ್ಟ ಸನ್ನಿವೇಶದಲ್ಲೂ ನಮ್ಮ ಸಂಸ್ಥೆ ನಮ್ಮನ್ನು ವೇತನ ಸಹಿತ ಉಳಿಸಿಕೊಂಡಿದ್ದು ಮಾತ್ರವಲ್ಲ, ವೃತ್ತಿಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿದೆ. ಕೋವಿಡ್ ಕಾಲದ ಆರ್ಥಿಕ ಹಿಂಜರಿತಗಳನ್ನು ಮೀರಿ ವೇತನ ಸರಿದೂಗಿಸಿದೆ. ಕೆಲಸಕ್ಕೆ ಯೋಗ್ಯ ವೇತನ ಕೊಟ್ಟು ನನ್ನನ್ನು ಇಷ್ಟೂ ದಿನ ಬೆಳೆಸಿದೆ, ಬರವಣಿಗೆಗೆ ಅದೆಷ್ಟೋ ಅವಕಾಶ ನೀಡಿದೆ, ಮಾತ್ರವಲ್ಲ ನಾನು ದುಡಿಯುವ ಸಂಸ್ಥೆಯ ಇತಿಹಾಸ, ಇಲ್ಲಿ ಆಗಿ ಹೋದ ಹೆಸರಾಂತ ಪತ್ರಕರ್ತರು, ನಂತರ ಪತ್ರಿಕೆಯನ್ನು ಮುನ್ನಡೆಸಿದ ಎಲ್ಲ ಸಂಪಾದಕರ ಬಗೆಗೂ ನನಗೆ ಹೆಮ್ಮೆಯಿದೆ. ನಾನೇನು ಸಾಧಕ ಪತ್ರಪರ್ತನಲ್ಲ.

ಆದರೆ...

 

ಇಷ್ಟೂ ವರ್ಷಗಳಲ್ಲಿ ಪತ್ರಿಕೆಯ ಹೆಸರು ಹೇಳಿಕೊಂಡು, ಪತ್ರಿಕಾ ಉದ್ಯೋಗಿ ಎಂಬ ನೆಲೆಯಲ್ಲಿ ಪತ್ರಕರ್ತನ ಹೆಸರು ದುರುಪಯೋಗ ಪಡಿಸಿ ಯಾವುದೇ ವೈಯಕ್ತಿಕ ಲಾಭಗಳನ್ನು, ಲಂಚವನ್ನು, ಸೇವೆಗಳನ್ನು ಪಡೆದುಕೊಂಡಿಲ್ಲ.  ಪತ್ರಿಕಾ ಉದ್ಯೋಗಿ ಎಂಬ ನೆಲೆಯಲ್ಲಿ ವಿಶೇಷ ಅವಕಾಶಗಳನ್ನೂ ಬಳಸಿಲ್ಲ, ದುರ್ಬಳಕೆ ಮಾಡಿಲ್ಲ. ಮಾತ್ರವಲ್ಲ ಯಾರಲ್ಲೂ ಅಸಹಜವಾದವುಗಳಿಗೆ ಆಗ್ರಹಿಸಿಲ್ಲ, ಗರಿಷ್ಠ ಪ್ರಮಾಣದಲ್ಲಿ ನಿಷ್ಪಕ್ಷಪಾತವಾಗಿ ವೃತ್ತಿಗೆ ನ್ಯಾಯ ಸಲ್ಲಿಸಲು ಪ್ರಯತ್ನ ಮಾಡಿಕೊಂಡೇ ಬಂದಿದ್ದೇನೆ ಎಂದು ಎದೆ ತಟ್ಟಿಕೊಂಡು ಹೇಳಬಲ್ಲ ಶೇ.100 ಆತ್ಮವಿಶ್ವಾಸ ನನಗಿದೆ. ಮತ್ತು ಈ ವಿಚಾರದಲ್ಲಿ ಸಂಪೂರ್ಣ ಖುಷಿ ಇದೆ. ನನ್ನ ಸಂಸ್ಥೆ, ನನ್ನ ಪತ್ರಿಕೆಯ ಸಂಪಾದಕರು ನನ್ನ ಮೇಲಿರಿಸದ ವಿಶ್ವಾಸಕ್ಕೆ ಯಾವತ್ತೂ ಚ್ಯುತಿ ಬಾರದಂತೆ ನನ್ನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂಬ ಹೇಳಿಕೆಯಲ್ಲಿ ನಿರ್ವಂಚನೆಯಿಲ್ಲ...

ತೆಂಕುತಿಟ್ಟು ಯಕ್ಷಗಾನ ರಂಗದ ಅಗ್ರಗಣ್ಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರು 42 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟದಲ್ಲಿದ್ದಾರೆ. ನೀವ್ಯಾಕೆ ಬೇರೆ ಮೇಳಕ್ಕೆ ಹೋಗಲಿಲ್ಲಎಂಬ ಕುತೂಹಲಕ್ಕೆ ಅವರು ನೀಡಿದ ಉತ್ತರ ಹೋಗಬೇಕು ಅಂತ ಅನ್ನಿಸುವಂಥದ್ದು ಇಲ್ಲಿ ಏನೂ ಆಗಿಲ್ಲ, ಹಾಗಂತ ನನಗೆ ಬೇರೆ ಕಡೆ ಅವಕಾಶಗಳು ಇಲ್ಲ ಅಂತಲ್ಲ, ನಾನು ದುಡಿಯುವ ಸಂಸ್ಥೆ ನನಗೆ ಎಲ್ಲವನ್ನೂ ನೀಡಿದೆ, ಅದರಲ್ಲಿ ಖುಷಿ ಇದೆ ಅಂತ. ಈ ಮಾತುಗಳು ತುಂಬ ಇಷ್ಟವಾದವು. ಹಿರಿಯ ಕಲಾವಿದರ ಅನುಭವದ ಮಾತಿಗೆ ಅಷ್ಟೇ ತೂಕವಿದೆ. ಬದಲಾಗುವುದು, ಬದಲಾವಣೆ, growth, Opportunity ಎಂಬಿತ್ಯಾದಿ ವಿಚಾರಗಳು ವ್ಯಾಖ್ಯಾನದಿಂದ ನಿರ್ಧರಿಸಲ್ಪಡುತ್ತವೆ ಹಾಗೂ ಅದು ಅವರವರ ವೈಯಕ್ತಿಕ ಇಷ್ಟಾನಿಷ್ಟಗಳು... ತನ್ನ ಕರ್ಮದಲ್ಲಿ ತನಗೆ ಖುಷಿ ಇರಬೇಕು, ಅದು ಮುಖ್ಯ.

ಈ ಪಯಣದಲ್ಲಿ ಸಹಕರಿಸಿದ ಎಲ್ಲರೂ ಸ್ಮರಣಾರ್ಹರು. ನನ್ನ  ಕನ್ನಡಪ್ರಭ ನನಗೆ ಹೆಮ್ಮೆ...

-ಕೃಷ್ಣಮೋಹನ ತಲೆಂಗಳ (11.10.2024)

No comments: