ಅಂತರ್ ದೃಷ್ಟಿಗೆ ಖಾಸಗಿ ಮೊಗಸಾಲೆ...




ನಾವು ಮಾತ್ರ ಎತ್ತರದಲ್ಲಿದ್ದು ಜಗತ್ತು ಪಕ್ಷಿನೋಟಕ್ಕೆ ಗೋಚರವಾಗುವ ಜಾಗವಲ್ವ ಬಾಲ್ಕನಿ?
ಎಲ್ಲಿಯೂ ಕಾಣಲಾಗದ ದೃಷ್ಟಿಕೋನ, ಆಯಾಮಕ್ಕೆೊಂದು ಎತ್ತರದ ವೇದಿಕೆ ಮತ್ತೊಂದು ಪುಟ್ಟದಾದ ಖಾಸಗಿ ಕಾರ್ನರ್ ಕೂಡಾ ಹೌದಲ್ವ?


ನಾವು ಚಿಕ್ಕದಾಗಿ ಜಗತ್ತಿಗೆ ಕಂಡರೂ ಜಗತ್ತು ನಮಗೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರದ ಹಾಗೆ ಖುಲ್ಲಂ ಖುಲ್ಲಾ ಕಾಣಿಸೋದು.
ವಠಾರದುದ್ದಕ್ಕೂ ಹಾದು ಹೋಗಿರುವ ರಸ್ತೆ, ಅವರವಸರವಾಗಿ ಹಾದು ಹೋಗುವ ಮಂದಿ, ಎಲ್ಲಿಂದಲೋ ಬಂದು ಇನ್ನೆಲ್ಲಿಗೋ ಸಾಗುವ ನಾಗರಿಕರು... ಕಂಠ ಶೋಷಣೆ ಮಾಡಿ ಗಾಡಿಗಳಲ್ಲಿ ತರಕಾರಿಗಳು, ಕನಕಾಂಬರ, ಮಲ್ಲಿಗೆ, ಮತ್ತಿನ್ನೇನ್ನೇನೋ ಮಾರುತ್ತಾ ಬರುವ ಚತುರ ವ್ಯಾಪಾರಿಗಳು...
ಹಾಗೆ ನೋಡುವುದಕ್ಕೆ ಹೋದರೆ ಬಾಲ್ಕನಿಯ ನೋಟ ಟಿ.ವಿ.ಪರದೆಯಲ್ಲಿ ಕಂಡ ಹಾಗೆ. ನೀವೆಷ್ಟೇ ಇಣುಕಿದರೂ ಪರದೆಯ ಹಿಂದಿನದ್ದು, ಅಕ್ಕಪಕ್ಕದ್ದು ಕಾಣಿಸುವುದಿಲ್ಲ. ಬಾಲ್ಕನಿಯಲ್ಲೂ ಹಾಗೆ ಅದೊಂದು ಫ್ರೇಮಿನ ಹಾಗೆ. ಆ ಚೌಕಟ್ಟು ಮೀರಿ ನೋಡುವುದಕ್ಕೆ ಹೋದರೆ ಬಾಲ್ಕನಿಯಿಂದ ಉರುಳಿ ಧರಾಶಾಹಿಗಳಾಗುವ ಅಪಾಯವಿದೆ.


ಎಡದ ಮೂಲೆಯಲ್ಲಿ ಓ ಅಷ್ಟು ದೂರ. ಬಲದ ಮೂಲೆಯಲ್ಲಿ ಕಣ್ಣು ಎಟಕುವಷ್ಟು ದೂರ ಬಿಟ್ಟರೆ ಅದರಾಚೆಗೆ ಮಸುಕು ಮಸುಕು ಅಥವಾ ಅಲ್ಲಿಗೇ ಮುಕ್ತಾಯವಾದ ಹಾಗೆ ದೃಷ್ಟಿಕೋನ. ಅತ್ತಿಂದಿತ್ತ ಸಾಗುವವರು ಈ ಚೌಕಟ್ಟಿನ ಅಂಚಿನ ವರೆಗೆ ಮಾತ್ರ ಕಾಣಿಸುತ್ತಾರೆ. ಅದರಾಚೆಗೆ ಅವರೆತ್ತ ಹೋಗುತ್ತಾರೆ ಎಂಬ ಬಗ್ಗೆ ಕುತೂಹಲ ಇರಬಹುದಷ್ಟೇ ಹೊರತು ಅವರನ್ನು ಅನುಸರಿಸಿ ದೃಷ್ಟಿ ಹೋಗದು. ಇಂತಹ ಸೀಮಿತಗಳು ದೇವರು ಒದಗಿಸಿದ ಸೌಕರ್ಯವೂ ಇರಬಹುದು. ಪ್ರತಿ ವ್ಯಕ್ತಿತ್ವವನ್ನು ಹಿಂಬಾಲಿಸುತ್ತಲೇ, ಪ್ರತಿ ಸಮಸ್ಯೆಯನ್ನು ಅನುಸರಿಸುತ್ತಲೇ ಹೋಗಲು ಮಾನವ ಮೆದಳುಗೆ ಬಹುಷಹ ಧಾರಣಾ ಶಕ್ತಿ ಸಾಲದು. ಅದಕ್ಕೆ ಚೌಕಟ್ಟು ಮುಗಿಯುವ ತನಕವಷ್ಟೇ ನಮ್ಮ ಅರಿವಿಗೆ ಅವರು ಬರುತ್ತಾರೆ. ಅದರಾಚಿನದ್ದು ಮತ್ತೆ ಚಿಂತನೆಗೆ ಬಿಟ್ಟದ್ದು ಅಷ್ಟೇ. ಹೋಗುವವರೆಲ್ಲರ ಬಗ್ಗೆ ಯೋಚಿಸುತ್ತಾ ಕೂತರೆ, ಚಿಂತಿಸಹೊರಟರೆ ಒಂದೊಂದು ನಡಿಗೆಯ ಹಿಂದಿನ ಕತೆಗಳನ್ನು, ಒಗಟುಗಳನ್ನು ಬಿಡಿಸುತ್ತಾ ಕೂರಲು ಆಯುಷ್ಯ ಸಾಕಾಗುವುದೇ...


ಮೇಲೆ ನೋಡಿದರೆ ಆಕಾಶ. ಹಗಲು ಪ್ರಖರ ಸೂರ್ಯನ ಶಾಖ ಚುಚ್ಚಿದರೆ, ರಾತ್ರಿ ಮೂಡುವ ಚಂದ್ರಮನ ತಂಪು ಸಾಲದೆನಿಸುತ್ತದೆ. ಫೋಟೊ ತೆಗೆಯಹೊರಟರೆ ಸಾವಿರ ಸಾವಿರ ಕಂಪೋಸಿಶನ್ ಗಳಿಗೆ ಆಹಾರ ಒದಗಿಸುತ್ತದೆ ಆಕಾಶ. ಚದುರಿದ ಮೋಡ, ಒಗ್ಗೂಟಿದ ಮೋಡ, ವಿ ಆಕಾರದಲ್ಲಿ ಹಾರುವ ಪಕ್ಷಿಗಳು, ಹೆಸರೇ ಗೊತ್ತಿಲ್ಲದೆ ರಂಗೋಲಿ ಬಿಡಿಸುವ ರಾತ್ರಿ ಚುಕ್ಕಿಗಳು, ದೂರದಲ್ಲಿ ಮೊರೆಯುವ ಸಮುದ್ರದ ಬದಿಯಿಂದ ಹಾಗೆಯೇ ಧಾವಿಸಿ ಬರುವ ಮಳೆಯ ಪದರ ಪದರವಾದ ನೇರ ಪ್ರಸಾರ...


ಪಕ್ಕದ ಮನೆಯವರ ಸಂಪಿಗೆ ಮರದ ತುದಿಯಿಂದ ದಾಟಿ ಬರುವ ಘಮಘಮ ನಾಸಿಕಕ್ಕೆ ತಾಕಿದಾಗ ಉಂಟಾಗುವ ತಾಜಾ ಭಾವ, ನೈಜತೆಗೊಂದು ಸಾಕ್ಷಿ...
ಅಷ್ಟೊಂದು ಗದ್ದಲ ಸುತ್ತಮುತ್ತವಿದ್ದರೂ ಬಾಲ್ಕನಿ ಕಟ್ಟಿಕೊಡುವ ಏಕಾಂತದ ಸುಖಕ್ಕೆ ಅರೆನಿಮಿಷವಾದರೂ ಕಟ್ಟಿಟ್ಟ ಚೌಕಟ್ಟಿನ ದೃಶ್ಯಾವಳಿಗಳಿಗೆ, ಅಲ್ಲೇ ಹುಟ್ಟಿ ಅಲ್ಲೆ ಸತ್ತ ಕನಸುಗಳಿಗೆ, ಮಳೆ ಸಿಂಚನಕ್ಕೆ ಒದ್ದೆಯಾದ ಮುಖದ ತಂಪಿಗೆ, ಅರ್ಧರ್ಧ ಬರೆದಿಟ್ಟ ಕವನಗಳಿಗೆ, ದಿಗಂತವ ನೋಡುತ್ತಾ ಬಿಟ್ಟ ನಿಟ್ಟುಸಿರುಗಳಿಗೆ, ಮಧ್ಯಾಹ್ನ ಹೋಗುವ ವಿಮಾನಕ್ಕೆ ಬರಿದೇ ಮಾಡಿದ ಟಾಟಾಗಳಿಗೆ ಬೆಲೆ ಕಟ್ಟಲುಂಟೇ... ಅಥವಾ ಟೆಂಪರರಿ ಫೈಲ್ ಗಳ ರೂಪದಲ್ಲಿ ಅಲ್ಲಿಂದಲ್ಲಿಗೇ ಡಿಲೀಟ್ ಆಗಿ ಹೋಗುವ ನನಸುಗಳ ಸರಮಾಲೆಯೇ... ಬಾಲ್ಕನಿ ದಾಟಿ ಆಚೆ ಹೋದಾಗ ಕಾಣುವ ಹೊಸ ಲೋಕಕ್ಕೊಂದು ಕನಸಿನ ಚಿತ್ತಾರದ ನೆನಪುಗಳ ಗಾಢ ಅನುಭೂತಿಯ ನೀಡುವ ಪುಟ್ಟ ಸೌಧದ ಹಾಗೆ.

No comments: