ಕನ್ನಡಿಯಲ್ಲಿ ಕಂಡರೂ...

ಕನ್ನಡಿಯಲ್ಲಿ ಕಾಣುವುದಷ್ಟೇ ಸತ್ಯವಲ್ಲ
ಅದಕ್ಕೂ ಒಂದು ಆಯಾಮವಿರುತ್ತದೆ. ಕೆಲವೊಮ್ಮೆ ಹತ್ತಿರವಿದ್ದದ್ದು ದೂರ ಕಾಣಿಸುತ್ತದೆ, ದೂರವಿದ್ದದ್ದು ಪಕ್ಕದಲ್ಲೇ ಹಾದು ಹೋದಂತೆ ಭಾಸವಾಗುತ್ತದೆ. ಬಿಂಬ ತಿರುವು ಮುರುವಾಗಿರುತ್ತದೆ, ಎಡ ಬಲ ವ್ಯತ್ಯಾಸ ಗೊಂದಲ ಸೃಷ್ಟಿಸುತ್ತದೆ.
ಅದಕ್ಕೆ,
ಕನ್ನಡಿಯಲ್ಲಿ ಕಂಡರೂ ಹಿಂದಿರುಗಿ ನೋಡುವ ತಾಳ್ಮೆ ಬೇಕು. ವಾಸ್ತವಿಕ ಪ್ರಜ್ಞೆ ಹೊಂದಿರಲು...


ಬದುಕು ಓಟವಾದರೆ, ಪರಿಸ್ಥಿತಿ ಅದರ ವೇಗ ವಾಹಕ. ಸನ್ನಿವೇಶಗಳು, ಸಂಬಂಧಗಳು ಕನ್ನಡಿಯಾಗಿ ಜಗತ್ತನ್ನು ತೋರಿಸುತ್ತಲೇ ಇರುತ್ತವೆ. ಆದರೆ, ನಾವು ಅವುಗಳನ್ನು ಗ್ರಹಿಸುವಲ್ಲಿ ಕೆಲವೊಮ್ಮೆ ಹಿಂದುಳಿಯುತ್ತೇವೆ. ಮಹತ್ವ, ಪ್ರಸ್ತುತತೆ, ಲಭ್ಯತೆ ನಮಗೆಷ್ಟರ ಮಟ್ಟಿಗೆ ಇದೆ ಎಂದು ಯೋಚಿಸದೆ ವ್ಯವಹರಿಸುತ್ತಾ ಹೋದರೆ ಕನ್ನಡಿಯಲ್ಲಿ ಕಂಡ ಗಂಟು ಮುಟ್ಟಲು ಹೋದ ಹಾಗಾದೀತು.

ನಾನೆಷ್ಟರ ಮಟ್ಟಿಗೆ ಇಂಥಹದ್ದನ್ನು ಪಡೆಯಲು ಯೋಗ್ಯ, ನನಗೆಷ್ಟರ ಮಟ್ಟಿಗೆ ಅದು ಲಭ್ಯವಾಗಬಹುದು, ಎಷ್ಟು ಕಾಲದ ಮಟ್ಟಿಗೆ ಸಿಗಬಹುದು, ಮತ್ತೆಷ್ಟು ಜೋಪಾನವಾಗಿ ಅದನ್ನು ಕಾಪಾಡಬಹುದು ಎಂಬ ಪ್ರಜ್ಞೆ ಸದಾ ಇದ್ದರೆ ಮಾತ್ರ, ಸಿಕ್ಕಿದ್ದನ್ನು, ದಕ್ಕಿದ್ದನ್ನು ಕಕ್ಕುಲತೆಯಿಂದ ಕಾಪಾಡಲು ಸಾಧ್ಯ. ಸೈಡ್ ಮಿರರಿನಲ್ಲಿ ಕಂಡದ್ದನ್ನೇ ಮಾನದಂಡವಾಗಿ ಗಾಡಿ ಓಡಿಸುತ್ತಿದ್ದರೆ ಮತ್ತದು ಸರಿಯಾದ ಚಿತ್ರಣ ಕೊಡದೆ ವಾಲುವುದರಲ್ಲಿ ಸಂಶಯವಿಲ್ಲ.

ಆಗಾಗ ಹಿಂದಿರುಗಿ ನೋಡುವ ಅಭ್ಯಾಸ ಬೇಕು. ಕನ್ನಡಿಯಲ್ಲಿ ನಮ್ಮ ಮುಖ ನೋಡುವಷ್ಟೇ ಮುಖ್ಯವಾಗಿ ನಮ್ಮ ಹಿಂದಿರುವ ಜಗತ್ತನ್ನೂ ನೋಡಬೇಕು. ನಾನು ಸಾಗಿ ಬಂದ ದಾರಿಯಲ್ಲಿ ಧೂಳು ಎದ್ದಿದೆಯೇ, ತಿರುವಿನಲ್ಲಿ ಪ್ರಯೋಗಿಸಿದ ಬ್ರೇಕು ಸಾಗಷ್ಟಾಯಿತೆ, ಏರು ದಾರಿಯಲ್ಲಿ ಯಾವ ಹೊತ್ತಿಗೆ ಗೇರು ಬದಲಿಸಬೇಕೆಂದು ಸಿಂಹಾವಲೋಕನ ಮಾಡಿದಾಗಲಷ್ಟೇ ಮತ್ತೊಂದು ಏರು ಬಂದಾಗ ಸುಸ್ಥಿತಿಯಲ್ಲಿ ಅದರ ತುತ್ತತುದಿ ತಲುಪಲು ಸಾಧ್ಯವಾಗುವುದು.

ಕನ್ನಡಿಯಲ್ಲಿ ಕಂಡದ್ದನ್ನೆ ನಂಬಿ, ಕನ್ನಡಿಗೇ ಜವಾಬ್ದಾರಿ ಕೊಟ್ಟು ಸ್ವಂತ ಬುದ್ಧಿಗೋ, ವಿವೇಚನೆಗೋ ಮಹತ್ವ ಕೊಡದೆ ಅಡ್ಡಾಡುತ್ತಿದ್ದರೆ ವೇಗ ಕಡಿಮೆಯಾಗುತ್ತಾ ಬಂದ ಹಾಗೆ ಗಾಡಿ ಮತ್ತೊಂದು ಕಡೆ ಅಸಹಾಯಕವಾಗಿ ನಿಂತು ಬಿಡುವುದುಕ್ಕೆ ನಾವು ಪ್ರೇಕ್ಷಕರಷ್ಟೇ ಆಗುತ್ತೇವೆ.

ಹಿಂದಿರುಗಿ ನೋಡಿದರೆ ನಮಗೆ ಮಾತ್ರವಲ್ಲ, ಹಿಂದಿನಿಂದ ಬರುವ ಇತರರಿಗೆ, ಅಕ್ಕಪಕ್ಕ ದಾಟಿ ಹೋಗುವವರಿಗೆ, ಎದುರಿನಿಂದ ಬಂದು ಸೈಡು ಕೊಡುವವರಿಗೆ, ನಮ್ಮನ್ನು ಹಿಂದಿಕ್ಕೆ ವೇಗವಾಗಿ ಮುಂದೆ ಹೋಗುವ ಪ್ರಾಜ್ಞರಿಗೂ ನಮ್ಮಿಂದ, ನಮ್ಮ ಸವಾರಿಯಿಂದ ಉಪದ್ರ ಆಗದ ಹಾಗೆ ಜಾಗ್ರತೆ ವಹಿಸಬಹುದು. ಬೇರೆಯವರಿಂದ ನಮಗೆ ಉಪದ್ರ ಆಗಬಾರದೆಂಬ ನಿರೀಕ್ಷೆಯಿದ್ದಲ್ಲಿಗೆ, ನನ್ನ ಸವಾರಿ ಬೇರೆಯವರಿಗೆ ತೊಂದರೆ ಅಗಬಾರದು ಎಂಬ ಪ್ರಜ್ಞೆಯೂ ಮುಖ್ಯ ತಾನೆ.
ಕನ್ನಡಿಯಲ್ಲಿ ಕಾಣಲಿ, ದೂರು ಅಂದಾಜು ಮಾಡುವ ಮೊದಲು ಹಿಂದಿರುಗುವ ತಾಳ್ಮೆ ಇರಲಿ, ಭರದಲ್ಲಿ ಮುಂದಿನದ್ದು ನಿರ್ಲಕ್ಷ್ಯಕ್ಕೊಳಗಾಗದಿರಲಿ...ಸವಾರಿ ನಿರ್ಲಿಪ್ತವಾದರೂ ಅತ್ತಿತ್ತಲ ಗಾಡಿಗಳಿಗೆ ತಾಗಿ ಅಡ್ಡಿ ಮಾಡದಿರಲಿ....
-KM

No comments: