ಚೌಕಟ್ಟು ಹಾಕದ ಚಿತ್ರಗಳು...!


ದೊಡ್ಡ ಪ್ರಾಂಗಣದ ದೇವಸ್ಥಾನ. ಅಂಗಣದ ತುಂಬ ಬೆಳೆದ ಹಸಿರು ಹುಲ್ಲು. ಸುಡು ಬಿಸಿಲು, ತುಸು ನಿಶ್ಯಬ್ಧ. ಮಧ್ಯಾಹ್ನದ ಅನ್ನಪ್ರಸಾದ ಸ್ವೀಕರಿಸಿದ ಬಳಿಕ ಗೋಪುರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಭಕ್ತರು. ಅಂಗಣದ ಮೂಲೆಯ ಮರದ ಕೆಳಗೆ ಬಿಸಿಲಿನ ಬೇಗೆಯಿಂದ ವಿಶ್ರಾಂತಿ ಪಡೆದು ಅರೆ ನಿಮೀಲಿತ ನೇತ್ರಗಳೊಂದಿಗೆ ಏಕಾಗ್ರತೆಯಿಂದ ಮೆಲುಕು ಹಾಕುತ್ತಿರುವ ಹಸು. ತಿಂದುಡು ಚೆಲ್ಲಿದ ಅನ್ನದ ಅಗುಳನ್ನು ತಿನ್ನಲು ಕಾದಾಡಿ ಬರುವ ಕಾಗೆಗಳ ಹಿಂಡು. ದೂರದಲ್ಲಿ ಗಾಳಿಗೆ ತಲೆದೂಗುವ ತೆಂಗಿನ ಗರಿಗಳು. ಬೆವರೊರೆಸಿಕೊಂಡು ಪಂಜಕಜ್ಜಾಯದ ಪೊಟ್ಟಣ ಹಿಡಿದು ಊರಿಗೆ ಮರಳಲು ಬಸ್ ಹಿಡಿಯಲು ಧಾವಂತ...
----------
ವೇಗವಾಗಿ ಓಡಾಡುವ ವಾಹನಗಳ ಹಿಂಡು, ರಸ್ತೆಯಲ್ಲಿ ಕಾಲೂರಲೂ ಜಾಗವಿಲ್ಲ. ಪಕ್ಕದ ಫುಟ್‌ಪಾತ್‌ನಲ್ಲಿ ಸಣ್ಣ ಕೊಡೆಯೊಳಗೆ ಕುಕ್ಕುರುಗಾಲಿನಲ್ಲಿ ಕುಳಿದ ಅಜ್ಜಿ. ಎದುರಿನಲ್ಲೊಂದು ಬುಟ್ಟಿ ತುಂಬಾ ರಸಬಾಳೆ. ಎಲ್ಲಿಂದ ತರ್ತಾಳೋ ಅಜ್ಜಿ ಆ ಬಾಳೆಹಣ್ಣುಗಳನ್ನು? ಅದನ್ನು ಮಾರಿದರೆ ದಿನದಲ್ಲಿ ಸಂಪಾದನೆ ಎಷ್ಟಾಗುತ್ತದೋ ಗೊತ್ತಿಲ್ಲ. ಆಕೆಗೆಷ್ಟು ಮಂದಿ ಮಕ್ಕಳಿದ್ದಾರೆ? ಈ ಪ್ರಾಯದಲ್ಲಿ ಯಾಕಿಲ್ಲಿ ಬಂದು ಮಾರಾಟ ಮಾಡ್ತಾಳೆ? ಒಂದು ವೇಳೆ ಯಾರೂ ಬಾಳೆಹಣ್ಣನ್ನೇ ಖರೀದಿಸದಿದ್ದರೆ ಸಂಜೆ ಹೊತ್ತಿಗೆ ಅವನ್ನೆಲ್ಲ ಆ ವೃದ್ಧ ಜೀವ ಏನು ತಾನೇ ಮಾಡಲು ಸಾಧ್ಯ? ಸುಕ್ಕುಗಟ್ಟಿದ ಮುಖವನ್ನು ಹತ್ತಿರದಿಂದ ನೋಡಿದರೆ ನಿರ್ಭಾವುಕತೆ. ದುಡ್ಡು ಕೊಟ್ಟು ಹಣ್ಣು ಕೇಳಿದರೆ ನಿರ್ಲಿಪ್ತವಾಗಿ ಚಿಲ್ಲರೆ ವಾಪಸ್ ಕೊಟ್ಟು ಮತ್ತೊಬ್ಬ ಗಿರಾಕಿಯ ದಾರಿ ಕಾಯ್ತಾಳೆ...
........
ರಸ್ತೆಯ ಅರ್ಧದಲ್ಲೊಂದು ರಕ್ತಸಿಕ್ತ ದೇಹ. ಪುಟ್ಟ ನಾಯಿ ಮರಿಯದು. ಸ್ವಲ್ಪ ಆಗಷ್ಟೇ ಯಾವುದೋ ವಾಹನದ ಅಡಿಗೆ ಬಿದ್ದು ಸತ್ತುಹೋಗಿದೆ. ಅದರ ಅಮ್ಮನಿರಬಹುದು, ಪಕ್ಕದಲ್ಲೇ ಸುಳಿದಾಡುತ್ತಿದೆ. ಆಗಾಗ ಬಂದು ತನ್ನ ಕಂದನ ದೇಹವನ್ನು ಮೂಸುತ್ತಿದೆ. ವಾಹನಗಳು ಬಂದಾಗ ಪಕ್ಕನೆ ಬದಿಗೆ ಸರಿದು ಮತ್ತೆ ಮತ್ತೆ ಮಾರ್ಗದ ಮಧ್ಯಕ್ಕೇ ಬರುತ್ತಿದೆ. ಬೈಕು ಸವಾರರು, ಪಾದಚಾರಿಗಳು ತಮಗದರ ಗೊಡವೆಯೇ ಇಲ್ಲದ ಹಾಗೆ ನಡೆಯುತ್ತಲೇ ಇದ್ದಾರೆ. ಕಾರ್ಪೋರೇಶನ್‌ನವರು ಬಂದು ಕಳೇಬರ ತೆಗೆಯುವ ತನಕ ಮರಿಯ ಅಮ್ಮನ ಮೂಕ ರೋಧನಕ್ಕೆ ಸಾಕ್ಷಿಗಳೇ ಇಲ್ಲ. ಚಕ್ರದಡಿಗೆ ಮರಿ ಬಿದ್ದಾಗ ಆ ವಾಹನದ ಚಾಲಕ ಗಾಡಿ ನಿಲ್ಲಿಸಿ ಒಂದು ಕ್ಷಣ ನೋಡಿರಬಹುದೇ? ಈ ಭೀಕರ ಘಟನೆಗೆ ಅದರಮ್ಮ ಅಲ್ಲಿ ಸಾಕ್ಷಿಯಾಗಿದ್ದಿರಬಹುದೇ? ಮರಿ ಸತ್ತ ವಿಚಾರ ಆ ಹೆತ್ತ ಕರುಳಿಗೆ ಅರ್ಥ ಆಗಿರಬಹುದೇ? ಇಷ್ಟಾದರೂ ಒಂದು ಕ್ಷಣ ನಿಂತು ಕಳೇಬರ ನೋಡುವ ಮಾನವ ಪ್ರಾಣಿಗಳನ್ನು ಕಂಡು ಆ ನಾಯಿ ಬಾಲ ಅಲ್ಲಾಡಿಸುತ್ತಿದೆಯಲ್ಲ! ಅದಕ್ಕಿನ್ನೂ ಮನುಷ್ಯರ ಮೇಲೆ ನಂಬಿಕೆ ಹೋಗಿಲ್ಲವೇನೋ?
...............


 
ದೊಡ್ಡದೊಂದು ಸಿಮೆಂಟು ಕಟ್ಟಡದ ಅದೆಷ್ಟನೆಯದೋ ಮಹಡಿಯ ಬಾಲ್ಕನಿಯಲ್ಲಿ ತಡರಾತ್ರಿ ಒಂದು ಅಸ್ಪಷ್ಟ ಮುಖ. ಸ್ಪಷ್ಟ ಬಾನಿನಲ್ಲಿ ಅರಳಿದ ಚಂದಿರನನ್ನೇ ನೋಡುತ್ತಿದೆ. ನಿಶ್ಯಬ್ಧವಾಗಿ. ತದೇಕಚಿತ್ತದಿಂದ... ಮಾತಿಲ್ಲ, ಕತೆಯಿಲ್ಲ. ಹಿಂದಿನಿಂದ ಸಣ್ಣ ಬೆಳಕಿನ ರೇಖೆ ಮಾತ್ರ. ಆ ಮನಸ್ಸಿನಲ್ಲಿ ಏನು ಚಿಂತೆ ಕೊರೆಯುತ್ತಿರಬಹುದು? ಚಂದಿರನ ಮುಖಾಮುಖಿಯಾಗುತ್ತಿರುವುದು ಆಹ್ಲಾದಕತೆಯಿಂದಲ? ಅಥವಾ ವಿಷಾದದ ನಿಟ್ಟುಸಿರು ಅಂದರ ಹಿಂದಿದೆಯಾ? ಅಂದ ಹಾಗೆ ಜಗತ್ತಿನಲ್ಲಿ ಇಷ್ಟು ಹೊತ್ತಿಗೆ ಎಷ್ಟು ಕೋಟಿ ಮಂದಿ ಚಂದಿರನನ್ನು ನೋಡುತ್ತಿರಬಹುದು. ಇದನ್ನು ಅಳೆಯಲು ಲೈಕ್ಸು, ಹಿಟ್ಸುಗಳ ಮಾನದಂಡ ಇಲ್ಲವಲ್ಲ? ಚಂದಿರನಾದರೂ ಏನು ಮಾಡಿಯಾನು? ಅಷ್ಟೊಂದು ನಿಟ್ಟುಸಿರು, ಲೈಕುಗಳನ್ನು ತಾಳಿಕೊಂಡಾನೆ?
---------
ಬದುಕಿನ ವಿವಿಧ ಮಗ್ಗುಲುಗಳಲ್ಲಿ ಇಂತಹ ಚಿತ್ರಣಗಳು ಆಗಾಗ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಆ ಕ್ಷಣಕ್ಕೊಂದು ಸ್ತಬ್ಧವಾದ ಚಿತ್ರದ ಹಾಗೆ. ಕೆಲವೊಮ್ಮೆ ಅದರ ಮಹತ್ವ ಗೊತ್ತಾಗುವುದೇ ಇಲ್ಲ. ಸೆಕುಂಡುಗಳ ಲೆಕ್ಕದಲ್ಲಿ ಕಣ್ಣಿಗೆ ಬಿದ್ದು ಮರೆಯಾಗುವವು. ಆದರೆ ತುಂಬ ಸಮಯ ನೆನಪಿನಲ್ಲಿ ಕಾಡುವಂಥದ್ದು. ಈ ಕ್ಷಣಾರ್ಧದಲ್ಲಿ ಕಂಡ ದೃಶ್ಯದ ಕುರಿತು ಎಷ್ಟೋ ಪ್ರಶ್ನೆಗಳು ಹುಟ್ಟಬಹುದು. ಆದರೆ ಉತ್ತರಿಸಲು ಯಾರೂ ಇರುವುದಿಲ್ಲ. ಆ ಚಿತ್ರಗಳಿಗೆ ಚೌಕಟ್ಟು ಕಟ್ಟಿ ತೂಗು ಹಾಕಲೂ ಆಗುವುದಿಲ್ಲ. ಯಾಕೆಂದರೆ ಇವೆಲ್ಲ ಹಲವರ ಬದುಕಿನಲ್ಲಿ ಹಾಸು ಹೊಕ್ಕಿರುವ ಕ್ಷಣಗಳ ತುಣುಕುಗಳು. ಅವು ಜೀವಂತವಾಗಿಯೇ ಇರುತ್ತವೆ. ಇಲ್ಲಿಯೂ, ಇನ್ನೆಲ್ಲೆಲ್ಲಿಯೂ.
ಕಡಲ ನಡುವೆ ಹೊಯ್ದಾಡುತ್ತಿರುವ ಹಾಯಿ ದೋಣಿಗೆ ಲಂಗರು ಹಾಕಿದ್ದಾರೆಯೇ, ಸಮುದ್ರದಾಚಿನ ಕ್ಷಿತಿಜದಲ್ಲಿ ಸಾಲು ಸಾಲಾಗಿ ಹೋಗುತ್ತಿರುವ ಹಡಗುಗಳು ನಿಜವಾಗಿಯೂ ಚಲಿಸುತ್ತಿವೆಯೇ? ಬಾನಿನಲ್ಲಿ ಮುಸ್ಸಂಜೆ ವಿ ಆಕಾರದಲ್ಲಿ ಹಾರುವ ಕಡಲ ಕಾಗೆಗಳಿಗೆ ಸರಳ ರೇಖೆ ಎಳೆದು ಕೊಟ್ಟವರಾರು? ಚಂದ್ರನೂ ಉಪಗ್ರಹವೇ ಹೌದಾದರೆ ರಾತ್ರಿ ಹೊತ್ತು ನಕ್ಕು ನಾಚಿದ ಹಾಗೆ ಕಾಣುವುದು ಏಕೆ? ಉತ್ತರ ಹುಡುಕದಿರುವುದೇ ವಾಸಿ!
ವೇಗವಾಗಿ ಓಡುವ ರೈಲಿನ ಕಿಟಕಿಯಲ್ಲಿ ನಮಗೆ ಆಗಾಗ ಕಂಡು ಮರೆಯಾಗುವ ದೃಶ್ಯಗಳ ಹಾಗೆ... ಓಟ ನಿರಂತರ. ಕೆಲವೊಂದು ಕಣ್ಣಿನಲ್ಲಿ, ಕೆಲವೊಂದು ಹೃದಯದಲ್ಲಿ ಅಚ್ಚೊತ್ತಿ ನಿಲ್ಲುವ ಕಟ್ಟು ಹಾಕದ ಚಿತ್ರಗಳು.
-ಕೃಷ್ಣಮೋಹನ ತಲೆಂಗಳ.

No comments: