ದುಡ್ಡಿನ ಜೊತೆಗೆ ನಂಬಿಕೆಯೂ ಹೋಗ್ತಿದೆ.....

ಪ್ರತಿಯೊಬ್ಬರೂ ಯಾಚಕರೇ. ನಾವು ಒಂದಲ್ಲ ಒಂದು ಹಂತದಲ್ಲಿ ಇತರರಿಂದ ಯಾವುದೋ ರೀತಿಯಲ್ಲಿ ಸಾಲ/ನೆರವು ಪಡೆದೇ ಪಡೆದಿರುತ್ತೇವೆ. ಯಾರದ್ದೂ ನೆರವಿಲ್ಲದೆ ಬದುಕು ತುಂಬ ಕಷ್ಟ. ಆದರೆ ಪಡೆದ ಸಾಲವನ್ನು ಮರಳಿಸದೆ, ಮರಳಿಸುವ ಮಾತನ್ನೂ ಆಡದೆ, ಸಂಪರ್ಕವನ್ನೂ ಮಾಡದೆ ಇರುವುದು ಎಷ್ಟರ ಮಟ್ಟಿಗೆ ಸರಿ? ನಿಮ್ಮಲ್ಲಿ ತುಂಬ ಮಂದಿಗೆ ಈ ಥರ ಅನುಭವ ಆಗಿರಬಹುದು. ತುಂಬ ತುರ್ತು ಸಂದರ್ಭದಲ್ಲಿ ಗಡಿಬಿಡಿ ಮಾಡಿ ಸಾಲ ಕೇಳುತ್ತಾರೆ. ಮನುಷ್ಯತ್ವ ಇರುವ ಯಾರೇ ಆದರೂ ನೆರವು ಕೊಟ್ಟೇ ಕೊಡುತ್ತಾರೆ‌. ನೆರವು ಕೊಡಬೇಕಾದ್ದು ನಮ್ಮ ಧರ್ಮ‌ ಕೂಡಾ. ನಾವು ಕೂಡಾ ಅವರಿರವ ಸಹಾಯ ಹಸ್ತದಿಂದಲೇ ಬದುಕು ಸಾಗಿಸುವವರು.

ಆದರೆ...

ಕಳೆದ ಒಂದೂವರೆ ವರ್ಷಗಳಲ್ಲಿ ಮೂರು ಜನ ತುರ್ತು ಸಂದರ್ಭ ಅಂತ ಹೇಳಿ ನನ್ನಲ್ಲಿ ದುಡ್ಡು ಪಡ್ಕೊಂಡ್ರು. ಈ ಪೈಕಿ ಒಬ್ಬ ಅವನ ಶೋಕಿಗೋಸ್ಕರ ನನ್ನನ್ನು ನಂಬಿಸಿ *ನಾಳೆಯೇ ಕೊಡ್ತೇನೆ* ಅಂದು ಹಣ ತಗೊಂಡು ಹತ್ರ ಹತ್ರ ಒಂದೂವರೆ ವರ್ಷ ಆಗ್ತಾ ಬಂತು. ವಾಪಸ್ ಮಾಡುವ ಯೋಚನೆಯಿಲ್ಲ, ನಾಚಿಕೆ ಬಿಟ್ಟು ಕೇಳಿದಾಗ *ಅವತ್ತೇ ಅಕೌಂಟಿಗೆ ಹಾಕಿದ್ನಲ್ಲ* ಅಂತ ಜಾರಿಕೊಂಡ. ಅವನನ್ನು ಒಳ್ಳೆ ಸ್ನೇಹಿತ ಅಂತ ನಂಬ್ಕೊಂಡು ಮೋಸ ಹೋದೆ. ಮೊದ್ಲು ಮಂಗ್ಳೂರಿಗೆ ಬಂದಾಗಲೆಲ್ಲ ಭೇಟಿಯಾಗ್ತಾ ಇದ್ದ, ಮೆಸೇಜ್ ಮಾಡ್ತಾ ಇದ್ದ ಆತ, ಈಗ ನನ್ನನ್ನು avoid ಮಾಡ್ತಿದ್ದಾನೆ. ಬಹುಷಃ ಇನ್ನು ಆ ಹಣ ಮತ್ತೆ ಸಿಗೋದಿಲ್ಲ.

ಎರಡ್ನೇ ಸ್ನೇಹಿತರು, ನೋಟು ಅಪನಗದೀಕರಣ ಸಂದರ್ಭ ತುಂಬ ಕಷ್ಟ ಅಂತ ಹೇಳಿ ದುಡ್ಡು ಕೇಳಿದ್ರು (ಪ್ರೈಮರಿ‌ ಕ್ಲಾಸ್ ಮೇಟ್). ಎರಡು ಮೂರು ಕಂತುಗಳಲ್ಲಿ. ಅಕೌಂಟಿಗೆ ದುಡ್ಡು ಹಾಕಿದೆ. ಎರಡು ವರ್ಷ ಭರ್ತಿ ಆಯ್ತು. ನಯಾಪೈಸೆ ವಾಪಸ್ ಕೊಟ್ಟಿಲ್ಲ. ಸಂಪರ್ಕಕ್ಕೆ ಸಿಕ್ತಾರೆ. ಸುಮ್ನೆ ವಾಯಿದೆ ಹಾಕ್ತಾ ಹೋಗ್ತಿದ್ದಾರೆ. ಇದ್ರೆ ಇನ್ನಷ್ಟು ಸಾಲ ಕೊಡು ಅಂತಾರೆ. ಮನಸ್ಸಿದ್ರೆ 100 ರು. ಆದ್ರೂ ವಾಪಸ್ ಕೊಡ್ಬಹುದಿತ್ತು.

ಮೂರನೆಯವರು ಅನಾರೋಗ್ಯದ ಸಂದರ್ಭ ದುಡ್ಡು ಕೇಳಿದ್ರು. ತಕ್ಷಣ ದುಡ್ಡು ಅಕೌಂಟಿಗೆ ಹಾಕಿದೆ. ಆಮೇಲೆ ಅವ್ರಾಗಿ ಅಕೌಂಟ್ ಡಿಟೈಲ್ ಕೇಳಿದ್ರು. ಆದರೆ ಹಣ ವಾಪಸ್ ಈ ತನಕ‌ ಕೊಟ್ಟಿಲ್ಲ. ನಾನಾಗಿಯೇ ಕೇಳಿದಾಗ, ನಿಮ್ಮ‌ ಸಾಲ ವಾಪಸ್ ಕೊಡ್ತೇನೆ, ನೆನಪಿದೆ ಅಂದಿದ್ರು. ಈಗ ಆ ಬಗ್ಗೆ ಪ್ರಸ್ತಾಪವೇ ಇಲ್ಲ.

....

ನಂಗೆ ಆಗ್ತಾ ಇರೋ ಆಶ್ಚರ್ಯ ಏನಂದ್ರೆ:

1) ನಾನು ಬೇರೆಯೋರ ಹತ್ರ ಸಾಲ ಮಾಡಿ ಮನೆ ಕಟ್ಟಿದ್ದು. ಮನೆ ಕಟ್ತಿದ್ದೇನೆ, ಕಷ್ಟ ಇದೆ, ದುಡ್ಡು ವಾಪಸ್ ಮಾಡಿ ಅಂದ್ರೂ ಮೂರೂ ಮಂದಿಗೆ ಏನೂ ಅನಿಸ್ಲಿಲ್ಲ. ನೀನು ಮನೆ ಕಟ್ಲಿಕೆ ಏನು ವ್ಯವಸ್ಥೆ ಮಾಡಿದ್ದೀಯ ಅಂತ ಕೇಳಿಲ್ಲ

2) ಮನುಷ್ಯರಿಗೆ ಕಷ್ಟ ಹೇಳಿ ಕೇಳಿ ಬರಲ್ಲ. ಕಷ್ಟ ಇರ್ಬಹುದು. ದುಡ್ಡಿಗೆ ತತ್ವಾರ ಇರ್ಬಹುದು. ಆದರೆ.... ನಿನ್ನತ್ರ ದುಡ್ಡು ತಗೊಂಡದ್ದು ನೆನಪಿದೆ. ಇಂಥ ದಿನ ಕೊಡ್ತೇನೆ ಅಂತ ಒಂದು ಮಾತು ಹೇಳಿದ್ರೆ ಸಮಾಧಾನ ಆಗ್ತಿತ್ತು.

3) ಸಾಮಾಜಿಕ ಜಾಲತಾಣದಲ್ಲಿ ಮೂರೂ ಜನರನ್ನು ಗಮನಿಸ್ತಾ ಇದ್ದೇನೆ. ಅವರ ದೈನಂದಿನ ಓಡಾಟ, ಸುತ್ತಾಟ ಎಲ್ಲ ಸಹಜವಾಗಿಯೇ ನಡೀತಿದೆ. ಆದರೆ ನಂಗೊಂದು ಮೆಸೇಜ್ ಮಾಡುವಷ್ಟು ಪುರುಸೊತ್ತಿಲ್ಲ. ಎಂಥ ವಿಪರ್ಯಾಸ‌

4) ಹೀಗಾದ್ರೆ ಯಾರನ್ನಾದ್ರೂ ನಂಬೋದು ಹೇಗೆ? ಕಷ್ಟ ಅಂತ ಕೇಳಿದಾಗ ಕೊಟ್ಟ ದುಡ್ಡು ವಾಪಸ್ ಕೊಡೋದು ಬಿಡಿ, ಕನಿಷ್ಠ ಕೊಡುವ ಮಾತನ್ನೂ ಆಡದೆ ರಾಜಾರೋಷವಾಗಿ ಓಡಾಡೋದು ಕಂಡಾಗ ಸಿಟ್ಟು ಬರೋದಿಲ್ಲ, ಆಶ್ಚರ್ಯ ಆಗ್ತಿದೆ. ಹೀಗೂ ಇರ್ತಾರಲ್ಲ ಜ‌ನ ಅಂತ.

5) ನಾನು ಕರಾರುಪತ್ರ ಬರ್ದು ಬಡ್ಡಿಗೆ ಸಾಲ ಕೊಟ್ಟದ್ದಲ್ಲ, ದುಡ್ಡು ಜಾಸ್ತಿ ಆಗಿದೆ ಅಂತಾನೂ ಅಲ್ಲ. ಕಷ್ಟ ಕಾಲದಲ್ಲಿ ನೆರವಾಗುವುದು ಧರ್ಮ ಅಂತ ಅಷ್ಟೆ. ಹಾಗಾಗಿ ಅವ್ರ ಹೆಸರು ಇಲ್ಲಿ ಹಾಕುವ ಉದ್ದೇಶ ಸದ್ಯಕ್ಕಿಲ್ಲ.
ನಾನು ಸಾಲ ಕೊಟ್ಟ ಧನಿಕ ಅಂತ ಹೇಳೋದಕ್ಕೂ ಈ ಬರಹ ಬರ್ದದ್ದಲ್ಲ.

ಅರ್ಜೆಂಟಿದೆ ಅಂತ ಕೆಟ್ಟ ಅವಸರ ಮಾಡಿ ದುಡ್ಡು ಕೇಳಿದ್ರೆ ಯಾರಾದ್ರೂ, ಸ್ವಲ್ಪ ಯೋಚಿಸಿ ದುಡ್ಡು ಕೊಡಿ. ಹಲವರು ವಾಪಸ್ ಕೊಡ್ತಾರೆ. ಕೆಲವರಿಗೆ ಉಪಕಾರ ಪ್ರಜ್ನೆ ಇಲ್ಲ. ನಾಚಿಕೆ ಬಿಟ್ಟು ವಾಪಸ್ ದುಡ್ಡು ಕೇಳಿದಾಗ ತಾವೇ ಸಾಲ ಕೊಟ್ಟ ಥರ ವರ್ತಿಸ್ತಾರೆ

ಸೋ‌ ನೀವಾದ್ರೂ ಜಾಗ್ರತೆಯಿಂದಿರಿ
(ಈ ಬರಹ ಪಡೆದ ಸಾಲ ಮರಳಿಸುವ ಯೋಚನೆ ಇಲ್ಲದವರನ್ನು ಉದ್ದೇಶಿಸಿ ಬರೆದದ್ದು)

ಸಾಲ ತಡವಾಗಿಯೇ ಮರಳಿಸಿ. ಪರವಾಗಿಲ್ಲ. ಬಟ್ ಅದನ್ನು ತಿಳಿಸುವ ಮನುಷ್ಯತ್ವ ಇರಲಿ. ಇಲ್ಲವಾದಲ್ಲಿ ಸಹಾಯ ಮಾಡುವಾಗಲೂ ನಮ್ಮ ಬಗ್ಗೆ ನಾವು ಯೋಚಿಸುವ ಹಾಗಾಗ್ತದೆ..

ಸಾಲ ಮರಳಿಸದೇ ಇರಲು ನಿರ್ಧರಿಸಿರುವವರನ್ನು ದೇವರು ಚೆನ್ನಾಗಿಟ್ಟಿರಲಿ!

KM

1 comment:

Karnataka Best said...

ಹಣದ ವಿಷಯದಲ್ಲಿ ಇಂತಹ ಮೋಸ ಬಹುತೇಕರಿಗೆ ಅನುಭವವಾಗಿರುತ್ತದೆ. ಎಲ್ಲರಿಗೂ ಇಂತಹ ಕೆಲವು ಸ್ನೇಹಿತರು ಇದ್ದೇ ಇರುತ್ತಾರೆ. ಹಣದ ಮೊತ್ತ ಕಡಿಮೆ ಇದ್ರೆ ಸೋಷಿಯಲ್ ಮಮೀಡಿಯಾದಲ್ಲಿ ಹೆಸರು ಹಾಕ್ತಿನಿ ಅಂತ ಹೇಳಬಹುದು. ಸ್ನೇಹ ಕಡಿದು ಹೋಗುವ ಕುರಿತು ಆಲೋಚಿಸಬಾರದು :)