ಸತ್ತಂತಿರುವ ಸತ್ಯ

ಸತ್ಯವನ್ನು ಪುಷ್ಟೀಕರಿಸಲು, ಸತ್ಯವನ್ನು ನಿರೂಪಿಸಲು ಕಷ್ಟ ಪಡಬೇಕು. ನಾನು ಸತ್ಯವನ್ನೇ ನಿರೂಪಿಸುತ್ತಿದ್ದೇನೆ ಎಂದು ಒತ್ತಿ ಹೇಳಬೇಕು. ಪದೇ ಪದೇ ಸತ್ಯ ಹೇಳುತ್ತಿದ್ದೇನೆ ಎಂದು ನೆನಪಿಸುವ ಮೂಲಕ ಮತ್ತಷ್ಟು ವಿಚಿತ್ರನಾಗಬೇಕು.
ಸುಳ್ಳಾದರೆ ಹಾಗಲ್ಲ. ಸುಳ್ಳನ್ನು ಆಗಾಗ ರಿಫ್ರೆಶ್ ಮಾಡ್ತಾ, ಅದಕ್ಕೊಂದಿಷ್ಟು ಮಸಾಲೆ ಸೇರಿಸಿ, ಸುವಾಸನೆ ಬೆರೆಸಿ, ಜನರನ್ನು ಆಕರ್ಷಿಸುವ ಹಾಗೆ ಸಿದ್ಧ ಮಾಡಿಟ್ಟು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟರೆ ಸರಿ. ತನ್ನಷ್ಟಕ್ಕೇ ಜನಪ್ರಿಯವಾಗುತ್ತದೆ. ನಾಲ್ಕೈದು ಮಂದಿ ಸುಳ್ಳುಗಳನ್ನೇ ಶೇರ್ ಮಾಡಿದಲ್ಲಿಗೆ ಆ ಸುಳ್ಳು ತನ್ನಷ್ಡಕ್ಕೇ ಸುಳ್ಳಿ ಸ್ಥಾನಕ್ಕೆ ಭಡ್ತಿ ಹೊಂದುತ್ತದೆ.


ಸ್ವತಹ ದೇವರೇ ಧರೆಗಿಳಿದು ಜನರೆದುರು ಹೋಗಿ ನಾನೇ ದೇವರು ಎಂದರೂ ಜನ ಕೇಳಬಹುದಂತೆ ನೀನ್ಯಾವ ನಾಟಕ ಕಂಪನಿಯಂದ ಬಂದ ವೇಷಧಾರಿ ಅಂತ. ಹಾಗಾಗಿ ಸತ್ಯ ಹೇಳುತ್ತೇನೆ ಎಂತ ನಿರ್ಧರಿಸುವ ಮೊದಲು ಅದನ್ನು ನಿರೂಪಿಸುವಷ್ಟು ಸರಕು ನಿಮ್ಮಲ್ಲಿರಬೇಕು. ಬರಿದೇ ಟೀಕೆ ಬಂದರೆ ಎದುರಿಸುವ ಅಥವಾ ಸುಮ್ಮನಿರುವ ಗುಂಡಿಗೆ ಬೇಕು.


ಸತ್ಯ ಹೇಳುವುದೆಂದರೆ ವಾಸ್ತವ. ನಡೆದಿದ್ದನ್ನೇ ಹೇಳುವುದು. ಅದು ನಡೆದುದ್ದರೆ ವರದಿ ಹೊರತು ಅಭಿಪ್ರಾಯ ಪ್ರಸ್ತುತಿಯಲ್ಲ. ಹಾಗಾಗಿ ಅದು ಆಪ್ತವೂ, ಆಕರ್ಷಕವೂ ಇರಬೇಕಾಗಿಲ್ಲ. ಜನ ವಾಸ್ತವದ ವರದಿಯನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳುತ್ತಾರೆ. ತಮ್ಮ ಗ್ರಹಿಕಯ ನೇರಕ್ಕೆ ಬೇರೆಯವರಿಗೆ ಫಾರ್ವರ್ಡ್ ಮಾಡುತ್ತಾರೆ. ಅಲ್ಲಿಗೆ ಸತ್ಯ ತಿರುಚಲ್ಪಡುತ್ತದೆ. ಸತ್ಯ ಬಾಯಿಯಿಂದ ಬಾಯಿಗೆ ಬದಲಾಗುತ್ತಾ ಹೋಗಿ ವದಂತಿಯಾಗುತ್ತದೆ.
ಇದ್ದದ್ದನ್ನು ಇದ್ದ ಹಾಗೇ ಹೇಳಿದರೂ ನಂಬಂದಂಥ ಪರಿಸ್ಥಿತಿ. ಪ್ರಾಮಾಣಿಕತೆಗೆ ಬೆಲೆ ಇಲ್ಲ ಎಂಬ ಪೂರ್ವಾಗ್ರಹ, ಸತ್ಯ ಹೇಳುತ್ತಾನೆ ಎಂದು ಏನು ಗ್ಯಾರಂಟಿ ಎಂಬ ಸಂಶಯದಿಂದ ಸತ್ಯಕ್ಕೇ ಪುರಾವೆ ಒದಗಿಸಬೇಕಾದ ಅನಿವಾರ್ಯ ಸಂಕಟ ಎದುರಾಗುತ್ತದೆ.

ನಿಜವನ್ನೇ ಹೇಳುವುದರಿಂದ ಸತ್ಯ ಹೇಳಿದಾದ ಆಗಾಗ ಪುರಾವೆ ಒದಗಿಸಬೇಕಾಗಿಲ್ಲ ಎಂಬ ನಂಬಿಕೆ ಇತ್ತು. ಆದರೆ, ಸತ್ಯವನ್ನೂ ರುಜುವಾತುಪಡಿಸಬೇಕಾಗಿ ಬರುವ ಹಿನ್ನೆಲೆಯಲ್ಲಿ ಸತ್ಯವನ್ನೇ ಹೇಳಲೂ ಹಿಂಜರಿಯುವ ಹಾಗಾಗುತ್ತದೆ. ಸತ್ಯವನ್ನೇ ಹೇಳಿದಾತನನ್ನು ಯಾರೂ ವಿಶೇಷವಾಗಿ ಕರೆದು ಸನ್ಮಾನ ಮಾಡುವುದಿಲ್ಲ ಎಂಬಲ್ಲಿಗೆ, ಸುಳ್ಳು ಹೇಳಿ ಪಾರಾದರೆ ತಪ್ಪೇನು ಎಂಬ ಈಸಿ ಗೋಯಿಂಗ್ ವಿಧಾನದ ಬಗ್ಗೆ ಚಿಂತಿಸುವುದೂ ತಪ್ಪಲ್ಲ.
ಕೊಟ್ಟ ಸಾಲವನ್ನು ಸತ್ಯ ನಂಬಿ ವಾಪಸ್ ಕೇಳಿ ಮುಖಭಂಗಕ್ಕೆ ಈಡಾದಗ, ಯಾವುದೋ ಊಹಿಸಿರದ ಘಟನೆ ಅಪಾರ್ಥಕ್ಕೆ ಕಾರಣವಾಗಿ ಸತ್ಯಕ್ಕೆ ಪುರಾವೆ ಸಿಗದೆ ಅನುಮಾನಗಳಿಗೆ ಕಾರಣವಾದಾಗ, ಕಣ್ಣೆದುರೇ ಸುಳಿದಾಡುತ್ತಿರುವ ಸತ್ಯವನ್ನು ಕೈಯ್ಯಲ್ಲಿ ಹಿಡಿದು ರುಜುವಾತು ಮಾಡುವುದು ಕಷ್ವವಾದಾಗ. ಆತ್ಮಸಾಕ್ಷಿ, ನನ್ನ ಮೇಲಿ ನನಗಿರುವ ನಂಬಿಕೆ ಎಂಬಿತ್ಯಾದಿ ಭಾವನಾತ್ಮಕ ಸಾಕ್ಷಿಗಳೆಲ್ಲ ಥಿಯರಿಗೇ ಸೀಮಿತ ಎಂದು ಅರಿವಾದಾಗಲೆಲ್ಲಾ... ಸತ್ಯ ಸಾಯುತ್ತಿದೆಯಾ ಅಥವಾ ಸತ್ಯವನ್ನು ಹಿಡಿದವನಿಗೆ ಆಕ್ಸಜನ್ ಜಾಸ್ತಿ ಬೇಕಾಗುತ್ತದ ಎಂಬ ಸಂಶಯ ಮೂಡುವುದು.


ಸತ್ಯ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಸತ್ಯ ಸ್ವಾಭಿಮಾನಕ್ಕೇ ಕೈ ಹಾಕುತ್ತದೆ. ಸತ್ಯ ನಿಷ್ಠುರಿಯನ್ನಾಗಿ ಮಾಡುತ್ತದೆ. ಸತ್ಯ ಏಕಾಂಗಿಯಾಗಿಸುತ್ತದೆ. ಆದರೆ, ಸತ್ಯ ಹೇಳಿದ ತಪ್ಪಿಗೆ ದಿನಕ್ಕೊಂದು ಸಬೂಬು ಹೇಳುವ ಸಂಕಟ ಸೃಷ್ಟಿಸುವುದಿಲ್ಲ ಖಂಡಿತ.

ಸತ್ಯ ಘಟನೆ ಏನೋ ಇರುತ್ತದೆ. ಎಡ ಪಂಥೀಯ, ಬಲ ಪಂಥೀಯರು ತಮ್ಮದೇ ಮಗ್ಗುಲು ಕೊಡುತ್ತಾರೆ. ಯಾರದ್ದೂ ರಗಳೆಗೆ ಹೋಗದ ಜನಸಾಮಾನ್ಯ ಹೊಟ್ಟೆಪಾಡಿಗೆ ಏನೋ ಮಾಡಿಕೊಂಡಿದ್ದವ ಕಲ್ಮಶವಾದ ಸತ್ಯದೊಳಗೆ ನಿಜವನ್ನು ಹುಡುಕಲು ಹೋಗಿ ಅಯೋಮಯನಾಗುತ್ತಾನೆ.

ಸತ್ಯವನ್ನು ಜಾಸ್ತಿ ನಿರೂಪಿಸಲು ಹೋಗಬೇಡಿ. ತನ್ನಷ್ಟಕ್ಕೆ ಅರ್ಥವಾದ ಸತ್ಯಕ್ಕೆ ಆಯುಷ್ಯ ಜಾಸ್ತಿ. ಆದರೆ, ತಾಳ್ಮೆ ಇದ್ದವರು ಮಾತ್ರ ಸತ್ಯವನ್ನು ಮಾತನಾಡಿ... ಆರೋಗ್ಯಕ್ಕೆ ಒಳ್ಳೆಯದು!.

No comments: