ಸ್ವಸಹಾಯ ಪದ್ಧತಿ....!

ಕರೆದು ಬಡಿಸುವವರಿಲ್ಲ
ಬಫೆಯಲ್ಲಿ ಹುಡುಕಿ
ಆರಿಸಿ, ಹಾಕಿಸಿಕೊಳ್ಳಬೇಕು...
ಖುಷಿಯನ್ನು ಹುಡುಕಿ
ಹಂಚುವವರಿಲ್ಲ
ಸುಖವನ್ನು ಅರಸಿ
ವಿತರಿಸುವುದಿಲ್ಲ...
ಅದರಿದರೆಡೆಯಲ್ಲಿ
ಜಾಲಾಡಿ, ತಟ್ಟೆ ಹಿಡಿದು ಹೋಗಿ
ಕೇಳಿ ಪಡೆದುಕೊಳ್ಳಬೇಕು!

ಪಡೆದದ್ದರ ತಿಂದು
ಅರಗಿಸಬೇಕು,
ಸೇರಿದ್ದರ ಜಗಿದು,
ಅಪಥ್ಯವ ಉಗುಳಿ
ರುಚಿಗೆ ತಕ್ಕಷ್ಟು ನೆಮ್ಮದಿಯ
ಸೃಷ್ಟಿಸಿ ಜೀರ್ಣಕ್ಕೆ ಸೇರಿಸಬೇಕು...
ರುಚಿಗಾಗಿ ಉಣ್ಣುವುದೋ
ಹೊಟ್ಟೆಪಾಡಿಗೆ ತುಂಬುವುದೋ
ಊಟದಲ್ಲಿ ಸವಿಯ ಕಾಣುವುದೋ
ಅವರವ ಭಾವಕ್ಕೆ, ಭಕುತಿಗೆ, ವಿಧಿಗೆ ಬಿಟ್ಟದ್ದು...!

ಉಣ್ಣುವುದೂ ಕಲೆ
ಊಟ ಪಡೆಯುವುದು ಅದೃಷ್ಟ
ದೊರಕಿದ ತಿನಿಸಿನಲ್ಲಿ
ಸವಿಯ ಅನುಭೂತಿ
ಹೊಂದುವುದು ಬದುಕುವ ಕಲೆ
ಉಣ್ಣಲಾಗುವುದು,
ಪಥ್ಯಕ್ಕೆ ಹೆದರಿ ಉಂಡಂತೆ ಮಾಡುವುದು
ಉಣ್ಣುವವರ ಕಂಡು ಕರುಬುವುದು
ಊಟಕ್ಕೆ ಬದುಕೋ, ಬದುಕಿಗಾಗಿ ಊಟವೋ
ಎಂಬ ಜಿಜ್ನಾಸೆಯ ನಡುವಿನ ಡೊಂಬರಾಟ!

ಸವಿ ರುಚಿ ದೊರಕುವುದೋ
ಪಡೆಯುವುದೋ
ತಪಸ್ಸಿಗೆ ಒಲಿಯುವುದೋ
ಸಂಕೋಚ ಬಿಟ್ಟು ಗಿಟ್ಟಿಸಿಕೊಳ್ಳುವುದೋ...
ಸಿದ್ಧಾಂತ ಕಠಿಣವಾಗಿ
ವಾಸ್ತವ ಬಿಸಿ ತುಪ್ಪವಾಗಿ
ಕಂಡ ಊಟ
ಗಂಟಲ ತಲಪುವ ಮೊದಲು
ಬಟ್ಟಲಿಗೆ ಬಿದ್ದದ್ದಷ್ಟೇ ಹೊಟ್ಟೆಗೆ ಸೇರುವುದೆಂಬ
ತತ್ವಜ್ಞಾನ ಊಟ ಕಲಿಸಿದ್ದು!


-KM

No comments: