ನಡೆದಲ್ಲೇ ನಡಿಗೆ...

ಪಥವಿಲ್ಲದ ಮಾರ್ಗದಲ್ಲಿ
ಅವಿರತ ನಡಿಗೆ
ಬರಿದೇ ಓಡಾಟ,
ನಿಲ್ದಾಣಗಳಿಲ್ಲದೆ,
ಬಳಲಿದರೆ ನೆರಳು ಕಾಣದೆ
ಕುಳಿತು ಮಾತನಾಡಲು
ನೆಲೆ ಗೋಚರಿಸದೆ
ದಿಕ್ಕು ದೆಸೆ, ಹೊತ್ತುಗೊತ್ತಿಲ್ಲದ
ಹುಚ್ಚು ನಡಿಗೆ...

ಹೊರಟ ಮೇಲೆ
ದೂರ ತಿಳಿದು
ದಾರಿಯೊಳಗಿನ
ಏರು ಇಳಿತ,
ಓರೆಕೋರೆಗಳ
ದಾಟಿ ಬಳಸಿ,
ತೋಚಿದಂತೆ
ಯೋಚಿಸದೆ, ಯಾಚಿಸದೆ
ದಾರಿ ಸವೆಸಿದ್ದಕ್ಕೆ ದಾಖಲೆಯೇ ಇಲ್ಲ


ಪಕ್ಕದಲ್ಲೇ ದಾಟಿ ಹೋದವರು,
ಅಷ್ಟುದ್ದ ತಲುಪಿ
ಕಾಣಿಸದಾದವರು
ನೋಡಿಯೂ ನೋಡದಂತೆ
ಹೋದವರು, ಮೊದಲೇ ತಲುಪಿದವರು
ಪ್ರತಿಯೊಬ್ಬರೂ ನಿಶ್ಯಬ್ಧ ಸಾಕ್ಷಿಗಳು...
ವೇಗ ಹೆಚ್ಚದೆ, ರಸ್ತೆಯ
ಗುಂಡಿಗಳ ಮುಚ್ಚುತ್ತಾ
ಹೋಗುವುದು ತಲುಪದ ದಾರಿಯಲ್ಲಿ...

ಕತ್ತಲಿನ ದಾರಿಗೆ
ಚಂದ್ರನೊಬ್ಬ ವೀಕ್ಷಕನಿದ್ದ ಹಾಗೆ
ಅಷ್ಟಿಷ್ಟು ಬೆಳಕು ಕೊಟ್ಟರೂ
ಕಂಡೂ ಕಾಣದಂತೆ
ಮಾತಿಲ್ಲ, ಕತೆಯಿಲ್ಲ
ಒಂಟಿ ಪಯಣಿಗರ ಬಗ್ಗೆ
ವ್ಯಥೆಯಿಲ್ಲ, ಮರುಕವಿಲ್ಲ,
ಸದಾ ನಿರ್ಲಿಪ್ತ
ನಿರಾಸಕ್ತರ ಹಾಗೆ...


ಅಷ್ಟುದ್ದದ ದಾರಿಯ
ತಿರುವಿನ ಪುಟ್ಟ ಪುಟ್ಟ ಕಲ್ಲುಗಳೇ
ಕೆಲವೊಮ್ಮೆ ಅಡ್ಡಲಾಗಿ
ವೇಗಕ್ಕೆ ತಡೆಯಾಗಿ
ಪಥಿಸಿದ ದಾರಿಯ
ತೀವ್ರತೆಗೆ ಮತ್ತಷ್ಟು
ತಣ್ಣೀರೇರಚಿ
ನಡೆದಲ್ಲೇ ನಡೆದಂತೆ ಮಾಡುವ
ಪಥವಿಲ್ಲದ ದಾರಿ...

-KM

No comments: