ದೂರದ ಬೆಟ್ಟದ ಹೂವು....

ಪುಟ್ಟ ಹೂವಿನ ಪರಿಮಳದ
ಅನುಭೂತಿ ಅರಿವಿಗೆ ಗುಡ್ಡ ಹತ್ತಲೇ ಬೇಕು
ದೂರದ ದೃಷ್ಟಿ...
ಅಂದುಕೊಳ್ಳುವುದು
ಬಳಿಕ ಹತ್ತಿರ ಹೋಗಿ
ಕಂಡುಕೊಳ್ಳುವುದು ಬೇರೆ ಬೇರೆ

ಮೌನ ಕಟ್ಟಿಕೊಟ್ಟ ಕಲ್ಪನೆಯ ವ್ಯಕ್ತಿತ್ವ
ಮಾತು ತೋರಿಸಿ ಕೊಡುವ
ಚಿತ್ರಣ, ಇತಿಮಿತಿಗಳ ದರ್ಶನ
ಮತ್ತೊಂದು ಮುಖದ
ಕಾಣದ ಮನಸ್ಸಿನ
ಎಟುಕದ ಚಿಂ(ತೆ)ತನೆಯ
ಅರಿವಿಗೆ, ಕಾಣಿಸದ ಪೊರೆಗೆ ಮಾತೆಂಬೋ ಬೇಲಿ...

ದೃಷ್ಟಿಗೆ ನಿಲುಕದ ಗುಡ್ಡ...
ಮೇಲಿನ ಪುಟ್ಟ ಗಿಡದೊಳಗಿನ
ಹಳದಿ ಪುಷ್ಪದ ಎಸಳಿನೊಳಗೆ
ಪರಿಮಳವೋ, ಸೌಂದರ್ಯವೋ...
ತಲೆದೂಗುವ ಚಾತುರ್ಯವೋ
ಹತ್ತಿರ ಹೋದರೆ ತಾನೆ
ಕಾಣುವುದು, ಅರಿಯುುವುದು...

ಕಂಡರೂ, ಕಾಣದಿದ್ದರೂ
ಹೂವಿಗದರ ಹಂಗಿಲ್ಲ
ವಿಮರ್ಶೆಯೂ ಬೇಕಿಲ್ಲ
ಹಣೆಪಟ್ಟಿ, ಬಿರುದು ಬಾವಲಿ
ಕಮೆಂಟು, ಲೈಕುಗಳ ಗೊಡವೆಯಿಲ್ಲ....
ಅರ್ಥವಾದರೂ, ಆಗದಿದ್ದರೂ
ಹೂವು ತಲೆದೂಗುವುದು ತಪ್ಪುವುದಿಲ್ಲ


No comments: