ಗಡಿಬಿಡಿಯ ನಡುವಿನ ಮೌನ

ಕಣ್ಣೆದುರಿಗೆ ಕಾಣದ್ದು
ಕಂಡೂ ಕಂಡುಕೊಳ್ಳಲಾಗದ್ದು
ಗಡಿಬಿಡಿಗೆ, ಒತ್ತಡಕ್ಕೆ
ಕಂಡುಕೊಂಡು,
ಕಾಣದ್ದರಲ್ಲೇ
ಕಂಡಂತೆ ಕೊಂಡಿ ಬೆಸೆದು
ಕಂಡದ್ದಕ್ಕಿಂತ ಕಾಣದ್ದನ್ನೇ ಕೆಣಕಿ
ಕೆಂಡದಂತಾಗಿ
ಕಂಡದ್ದರ ಭಾವವನ್ನೂ ಕೊಂದು ಕೆಡವಿದ್ದು...

ಹೇಳುವುದಕ್ಕೂ ಮೊದಲೇ
ಅಷ್ಟಿಷ್ಟು ಕೇಳಿಸಿಕೊಂಡು
ಕೇಳಿದ್ದಕ್ಕೂ ಮಿಗಿಲಾಗಿ
ಕೇಳದ್ದೇ ದೊಡ್ಡದಾಗಿ ಆವರಿಸಿ
ಕೇಳುವ ವ್ಯವಧಾನ ತೀರಿ
ಭಾವಗಳಲ್ಲೇ ರೂಪುಕೊಟ್ಟು
ಏಕಮುಖ ವಿಚಾರಣೆಯೊಳಗೆ
ಹೇಳದ್ದೂ, ಕೇಳಿಸಿದ್ದನ್ನೂ ಬಿಟ್ಟು
ಕೇಳದ್ದರ ಆಧಾರದಲ್ಲಿ ತೀರ್ಪು ಕೊಟ್ಟದ್ದು...

ಕಾಣವುದರಾಚೆಗಿನ ಸತ್ಯ
ಕೇಳಿಸಿದ್ದರೊಳಗಿನ ಧ್ವನಿ
ಹೇಳದೇ ಉಳಿದಿರುವುದರೊಳಗಿನ ಭಾವ
ನೋಡಲು, ಆಲಿಸಲು, ಸ್ಪಂದಿಸಲು
ಬಿಡುವಿಲ್ಲದ, ಸಹನೆಯಿಲ್ಲದ
ಗಡಿಬಿಡಿಯ ನಡುವೆ
ಅಡಿಗಡಿಯ ಘರ್ಷಣೆಗೂ
ಮೌನಕ್ಕೂ ನಡುವಿನ
ಸಂವಹನ ಸತ್ತು ಮಲಗಿದೆ...

-ಕೃಷ್ಣಮೋಹನ.


No comments: