ಪ್ರಶಸ್ತಿ ಹಾಜಬ್ಬರನ್ನು ಬದಲಿಸುವುದಿಲ್ಲ, ಪುರಸ್ಕಾರದ ಮೌಲ್ಯ ಹೆಚ್ಚಿದೆ...






ಹೌದು ಪದ್ಮಶ್ರೀ ಪ್ರಶಸ್ತಿ ಬಂದರೂ ಹಾಜಬ್ಬರ ಬದುಕಿನಲ್ಲಿ ಕಿಂಚಿತ್ತೂ ಬದಲಾವಣೆ ಆಗುವುದಿಲ್ಲ. ಈ ನಿರ್ಲಿಪ್ತ ವ್ಯಕ್ತಿ, ಈ ಪ್ರಶಸ್ತಿಯಿಂದ ಏನಾದರೂ ಉಪಕಾರವಾದರೆ ತನ್ನ ಶಾಲೆಯನ್ನು ಇನ್ನೂ ಹೇಗದೆ ಬೆಳೆಸಬಹುದು ಎಂದು ಯೋಚಿಸುತ್ತಿರುತ್ತಾರೆ. ತುಂಬ ಮಂದಿ ಹೇಳುತ್ತಿದ್ದಾರೆ, ಅದು ನಿಜ... ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಿಂದ ಸ್ವತಹ ಪ್ರಶಸ್ತಿಗೆ ಹೆಚ್ಚಿನ ಮೌಲ್ಯ ಬಂದಿದೆ. 





ತಾವು ಅನರಕ್ಷರಸ್ಥರಾದರೂ, ಮಂಗಳೂರು ನಗರದಲ್ಲಿ ಓಡಾಡಿ ಕಿತ್ತಳೆ ಮಾರಿ ದೊರಕಿದ ಊರಿನ ಮಕ್ಕಳಿಗೆ ಸರ್ಕಾರಿ ಶಾಲೆ ಕಟ್ಟಿಸಿ ಅದನ್ನು ಬೆಳೆಸಿದ (ಇಂದಿಗೂ ಅವರ ಹೋರಾಟ ಮುಂದುವರಿದಿದೆ) ಮಹಾನ್ ಅಕ್ಷರಸಂತ ಮಂಗಳೂರು ಹೊರವಲಯದ ಮಂಗಳೂರು ವಿಶ್ವವಿದ್ಯಾನಿಲಯದ ಸಮೀಪದ ಹರೇಕಳ ಎಂಬ ಪುಟ್ಟ ಊರಿನ ಹಾಜಬ್ಬ. ಮಾಧ್ಯಮಗಳ ಮೂಲಕ ಅವರು ಹೊರ ಜಗತ್ತಿಗೆ ಪರಿಚಯವಾಗಿ ಸುಮಾರು 16 ವರ್ಷಗಳೇ ಸಂದವು.

ಈ ಸಜ್ಜನಿಕೆಯ ವ್ಯಕ್ತಿತ್ವದ ಮಹಾನುಭಾವ ಇಷ್ಟೂ ವರ್ಷಗಳಲ್ಲಿ ತನ್ನ ಸ್ವಭಾವದಲ್ಲಿ ಏನೂ ಬದಲಾವಣೆ ಮಾಡಿಕೊಂಡಿಲ್ಲ, ಇಂದಿಗೂ ಹಾಗೆಯೇ ಇದ್ದಾರೆ. ಇವರ ಅಕ್ಷರ ಪ್ರೀತಿ ಹಾಗೂ ಬದ್ಧತೆಯನ್ನು ಮೊದಲಿಗೆ ಗುರುತಿಸಿ ಜಗತ್ತಿಗೆ ಪರಿಚಯಿಸಿದವರು ಮಂಗಳೂರಿನ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ. ನಂತರ 2004ರಲ್ಲಿ ಕನ್ನಡಪ್ರಭ ಆರಂಭಿಸಿದ ವರ್ಷದ ವ್ಯಕ್ತಿ (ಒಂದು ಲಕ್ಷ ರು.ನಗದು ಸಹಿತ) ಪ್ರಶಸ್ತಿಗೆ ಆಯ್ಕೆಯಾದರು ಹಾಜಬ್ಬ. ಪತ್ರಿಕೆಯ ಸಿಬ್ಬಂದಿಯೇ ರಾಜ್ಯದಾದ್ಯಂದ ಸೂಕ್ತರನ್ನು ಆರಿಸಿ, ಗುರುತಿಸಿ ಅವರಿದ್ದಲ್ಲಿಗೇ ಹೋಗಿ ಪ್ರದಾನ ಮಾಡುವ ಪ್ರಕ್ರಿಯೆಯ ಪ್ರಶಸ್ತಿ ಇದು. ಯಾರೂ ಅರ್ಜಿ ಸಲ್ಲಿಸುವ ಪ್ರಮೇಯ ಇಲ್ಲ. ಅಂತಿಮ ಹಂತದಲ್ಲಿ ಒಂದು ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆರಿಸುತ್ತದೆ. ಮೊದಲ ವರ್ಷವೇ ಹರೇಕಳ ಹಾಜಬ್ಬ ಆಯ್ಕೆಯಾದರು. ಕನ್ನಡ ಸುದ್ದಿ ವಾಹಿನಿಗಳು ಅಷ್ಟೊಂದು ಪ್ರವರ್ಧಮಾನಕ್ಕೆ ಬಂದಿರದಿದ್ದ ಆ ದಿನಗಳಲ್ಲಿ ಕನ್ನಡಪ್ರಭದ ರಾಜ್ಯವ್ಯಾಪಿ ಪುಟಗಳಲ್ಲಿ ಅವರ ಕುರಿತು ವಿವರವಾದ ವಿಶೇಷವರದಿಗಳ ಪ್ರಕಟವಾದವು. ಹಿರಿಯ ಪತ್ರಕರ್ತರಾದ ಟಿ.ಜೆ.ಎಸ್.ಜಾರ್ಜ್ ಹಾಗೂ ಇತರ ಗಣ್ಯರು ಹರೇಕಳದ ಹಾಜಬ್ಬರ ಶಾಲೆಗೇ ತೆರಳಿ ಪ್ರಶಸ್ತಿ ನೀಡಿ ಗೌರವಿಸಿದರು. ಇದರ ವರದಿಗಳೂ ಸಾಕಷ್ಟು ಸುದ್ದಿ ಮಾಡಿತು. ಇದಾದ ನಂತರ ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಸಿಎನ್ ಎನ್ ಐಬಿಎನ್ ಮಾಧ್ಯಮ ಸಂಸ್ಥೆ ಹಾಜಬ್ಬರನ್ನು ಕರೆಸಿ ಐದು ಲಕ್ಷ ರು. ನಗದು ಸಹಿತ ರಿಯಲ್ ಹೀರೋ ಪುರಸ್ಕಾರ ನೀಡಿತು. 

ಇದೆಲ್ಲ ಆಗಿ ಈಗ 15 ವರ್ಷಗಳೇ ಸಂದಿವೆ. ನಂತರ ಹಾಜಬ್ಬರಿಗೆ ನೂರಾರು ಪ್ರಶಸ್ತಿಗಳು, ಪುರಸ್ಕಾರಗಳು ಸಂದಿವೆ. ನೂರಾರು ಮಂದಿ ಸ್ವತಹ ಕರೆ ಮಾಡಿ, ಪತ್ರ ಬರೆದು ಹಾಜಬ್ಬರನ್ನು ಭೇಟಿಯಾಗಿ ಅವರಿಗೆ ನೆರವಾಗಿದ್ದಾರೆ, ಈಗಲೂ ನೆರವಾಗುತ್ತಲೇ ಇದ್ದಾರೆ. ಹಾಜಬ್ಬರು ಇಂತಹ ಪ್ರತಿಯೊಬ್ಬರನ್ನೂ ನೆನಪಿಟ್ಟಿದ್ದಾರೆ. ಎಷ್ಟೋ ಊರುಗಳಿಗೆ ಹೋಗಿ ಬಂದಿದ್ದಾರೆ. ಮಂಗಳೂರಿನ ಮಾಧ್ಯಮ ಮಿತ್ರರೆಲ್ಲ ಹಾಜಬ್ಬರ ಕುರಿತು ಸಾಕಷ್ಟು ವಿಶೇಷ ವರದಿಗಳನ್ನು ಪ್ರಕಟಿಸಿದ್ದಾರೆ. ಎಷ್ಟೋ ಮಾಧ್ಯಮ ಮಿತ್ರರು ಅವರ ಕಾಯಕಕ್ಕೆ ನೆರವಾಗಿದ್ದಾರೆ. ಅವರ ಹೋರಾಟಕ್ಕೆ ಮಂಗಳೂರಿನ ಎಲ್ಲ ಮಾಧ್ಯಮಗಳೂ ನೆರವಾಗಿವೆ. ಇಷ್ಟೆಲ್ಲ ಪ್ರಶಸ್ತಿ, ನಗದು ಪುರಸ್ಕಾರಗಳು ಬಂದರೂ ನಯಾಪೈಸೆಯನ್ನು ಹಾಜಬ್ಬ ಸ್ವಂತಕ್ಕೆ ಬಳಸಲಿಲ್ಲ. ಮನೆಯಲ್ಲಿ ಆರ್ಥಿಕ ಸಂಕಷ್ಟವಿದ್ದರೂ ಎಲ್ಲ ದುಡ್ಡನ್ನು ಕೊಂಡುಹೋಗಿ ಶಾಲೆ ಬೆಳೆಸಲು ತೊಡಗಿಸಿಕೊಂಡರು. ತಮ್ಮ ಕಾಯಕವನ್ನೂ ಬಿಡಲಿಲ್ಲ. ಕಿತ್ತಳ, ಮೂಸಂಬಿ ಮಾರುತ್ತಲೇ ದಿನ ಕಳೆದರು. ಈಗ ವಯಸ್ಸು, ಅನಾರೋಗ್ಯದಿಂದ ಈ ಕಾಯಕ ಮಾಡಲಾಗುತ್ತಿಲ್ಲ ಅಷ್ಟೇ. 


ಅವರು ಶಾಲೆಗೇ ಹೋಗಿಲ್ಲ. ಆದರೆ ಅವರ ಸಾಧನೆಯಿಂದಾಗಿ ಅವರು ಎಷ್ಟೋ ಸಮಾರಂಭಗಳಲ್ಲಿ ಮುಖ್ಯ ಅತಿಥಿಯಾಗಿ, ಉದ್ಘಾಟಕರಾಗಿ ಆಹ್ವಾನಿತರಾಗಿದ್ದಾರೆ. ಗಣ್ಯರು, ಅತಿ ಗಣ್ಯರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ತಮ್ಮದೇ ಮುಗ್ಧ ಭಾಷೆಯಲ್ಲಿ ಭಾಷಣ ಮಾಡುತ್ತಾರೆ. ಎಷ್ಟೋ ಸಂಘ ಸಂಸ್ಥೆ, ಸರ್ಕಾರಿ ಕಚೇರಿಗಳಿಗೆ ತೆರಳಿ ಹಿರಿಯ ಅಧಿಕಾರಿಗಳು, ದಾನಿಗಳಲ್ಲಿ ಸ್ವತಹ ಹಾಜಬ್ಬರು ತೆರಳಿ ಮಾತನಾಡಿ, ತಮ್ಮ ಶಾಲೆಗೆ ನೆರವಾಗುವಂತೆ ಕೋರುತ್ತಾರೆ, ಅವರ ಮನವೊಲಿಸಿ ಅನುದಾನ ತರಲು ಪ್ರಯತ್ನಿಸುತ್ತಾರೆ. ಎಲ್ಲರಿಗೂ ಅವರ ಪರಿಚಯ ಇದೆ. ಹೀಗಾಗಿ ಅವರ ವ್ಯಕ್ತಿತ್ವಕ್ಕೆ ಎಲ್ಲೆಡೆ ಗೌರವ ಇದೆ. ತಮಗೆ ಸಮಾಜದಿಂದ ಸಿಕ್ಕಿದ ಗೌರವ, ತಮಗಿರುವ ಪರಿಚಯಗಳು ಅವರನ್ನು ಕಿಂಚಿತ್ತೂ ಬದಲಾಯಿಸಿಲ್ಲ. ಅವರೀಗಲೂ ಬಸ್ಸಿನಲ್ಲಿ ಓಡಾಡುತ್ತಾರೆ. ತಮ್ಮನ್ನು ಗುರುತಿಸಿದ ಮಾಧ್ಯಮ ಕಚೇರಿಗಳಿಗೂ ಹೋಗುತ್ತಾರೆ, ತಮ್ಮ ಬಗ್ಗೆ ಬರೆದ ಎಲ್ಲರನ್ನೂ ನೆನಪಿಟ್ಟುಕೊಂಡಿದ್ದಾರೆ. ನಾನು ಬಡವ ಸರ್, ನನಗೇನೂ ಗೊತ್ತಿಲ್ಲ ಎನ್ನುತ್ತಾರೆ. ಹಿತೈಷಿಗಳ ಒತ್ತಾಸೆಯಿಂದ ಅವರಿಗೊಂದು ಮನೆ ನಿರ್ಮಾಣವಾಯಿತು. ಹಿತೈಷಿಗಳ ಒತ್ತಾಸೆ ಮೇರೆಗೆ ಮೊಬೈಲ್ ಫೋನ್ ಸ್ವೀಕರಿಸಿದರು. ಆದರೂ ಅವರ ವೈಯಕ್ತಿಕ ಬದುಕು ಇಂದಿಗೂ ಶ್ರೀಮಂತವಲ್ಲ. 

ಅವರೆಂದೂ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ತಮ್ಮ ಬಗ್ಗೆ ಬರೆಯುವಂತೆ, ತಮ್ಮ ಫೋಟೋ ಹಾಕುವಂತೆ ಯಾವ ಪತ್ರಕರ್ತರ ಬಳಿಯೂ ಹೇಳಿಕೊಳ್ಳುವುದಿಲ್ಲ. ಅವರ ಕಾಯಕವೇ ಅವರಿಗೆ ಪ್ರಚಾರ ದೊರಕಿಸಿಕೊಟ್ಟಿದೆ. ಅವರ ಸರಳತೆ, ಅವರ ನಿರ್ಲಿಪ್ತ ಓಡಾಟ, ವ್ಯಕ್ತಿ ಪ್ರೀತಿ, ಉಪಕಾರ ಸ್ಮರಣೆ, ಬದುಕನ್ನು ಸಹಜವಾಗಿ ಸ್ವೀಕರಿಸುವ ಮನಸ್ಥಿತಿ ಅವರನ್ನು ದೊಡ್ಡವರನ್ನಾಗಿಸಿದೆ. ತಮ್ಮ ವರದಿಗಳಿಂದ ಆಗುವ ಬದಲಾವಣೆಗಳು, ಸುಧಾರಣೆಗಳು ಪತ್ರಕರ್ತನಿಗೆ, ಸುದ್ದಿ ಸಂಸ್ಥೆಗಳಿಗೆ ಸಾರ್ಥಕತೆಯನ್ನು ನೀಡುತ್ತವೆ. ಹಾಜಬ್ಬರಿಗೆ ನೀಡಿದ ವರ್ಷದ ವ್ಯಕ್ತಿ ಪುರಸ್ಕಾರ ನಮ್ಮ ಪತ್ರಿಕೆಗೂ, ನಮ್ಮೆಲ್ಲ ಸಿಬ್ಬಂದಿಗೂ ಸಾರ್ಥಕ ಭಾವವನ್ನು ನೀಡಿದೆ. ಅವರನ್ನು ಪುರಸ್ಕರಿಸಿದ ಎಲ್ಲ ವ್ಯಕ್ತಿ, ಸಂಸ್ಥೆಗಳಿಗೂ ಈ ಭಾವ ಕಾಡುತ್ತದೆ. ಅವರನ್ನು ಕಂಡಾಗ ಕೈಜೋಡಿಸುತ್ತಾರೆ, ಪ್ರೀತಿಯಿಂದ ಮಾತನಾಡಿಸುತ್ತಾರೆ. ಬಿಳಿ ಶರ್ಟು, ಬಿಳಿ ಪಂಚೆ ಉಟ್ಟು ನಡೆದಾಡಿಕೊಂಡೆ ಓಡಾಡುವ ಹಾಜಬ್ಬರು ನಾವು ಅಕ್ಷರ ಕಲಿಯದಿದ್ದರೂ ತಮ್ಮ ಅಕ್ಷರ ಹೋರಾಟದ ಮೇಲೆ ಅದು ಪ್ರಭಾವ ಬೀರಿಲ್ಲ. ಹೆಸರು, ಪದವಿ, ದುಡ್ಡು ಯಾವುದೂ ಅವರನ್ನು ವಿಚಲಿತಗೊಳಿಸಿಲ್ಲ. ಬಣ್ಣದ ಮಾತುಗಳು, ಪ್ರಚಾರದ ದುರ್ಬಳಕೆ, ಇನ್ನಷ್ಟು ಗಳಿಸುವ ಇಚ್ಛೆಯೂ ಅವರಲ್ಲಿಲ್ಲ...


ನಾವೆಲ್ಲ ಇಷ್ಟು ವರ್ಷದಿಂದ ಮಂಗಳೂರಿನಲ್ಲಿ ಅವರನ್ನು ನೋಡುತ್ತಲೇ ಬೆಳೆದವರು... ಒಬ್ಬ ಸೂಕ್ತ ವ್ಯಕ್ತಿಗೆ, ಸೂಕ್ತ ಸಂದರ್ಭದಲ್ಲಿ ಇಂತಹ ಪ್ರಶಸ್ತಿ ಪ್ರಕಟವಾಗಿದೆ. ಪ್ರಶಸ್ತಿ ಅವರನ್ನು ಬದಲಾಯಿಸುವುದಿಲ್ಲ. ಆದರೆ, ಈ ಪ್ರಶಸ್ತಿಯಿಂದ ಅವರಿಗೆ ಇನ್ನಷ್ಟು ಸಹಾಯ, ನೆರವು ಲಭಿಸುವಂತಾಗಲಿ. ಹಾಜಬ್ಬರ ಬದುಕು ಪ್ರೇರಣೆಯಾಗಲಿ... ಇವರು ರಿಯಲ್ ಹೀರೋ, ಸೆಲ್ಫೀ ತೆಗೆಯುವುದಿದ್ದರೆ ಹಾಜಬ್ಬರಂಥಹ ಹಿರೋಗಳ ಜೊತೆ ತೆಗೆಯಬೇಕು. ತೀರಾ ಅಪರೂಪಕ್ಕೆ ಕಾಣಬಹುದಾದ ಸಾಧಕರವರು. ಹೀಗಾಗಿಯೇ ಹಾಜಬ್ಬರಿಗೆ ಪ್ರಶಸ್ತಿ ಘೋಷಣೆಯಾದ ತಕ್ಷಣ ಪತ್ರಕರ್ತ ಮಿತ್ರರೆಲ್ಲ ಅವರ ಬಗ್ಗೆ ಎಷ್ಟೊಂದು ಬರೆದಿದ್ದಾರೆ. ಜೊತೆಗೆ ನನ್ನದೂ ಒಂದು ಬರಹ... 

ಮಾಧ್ಯಮದವರಿಂದಾಗಿ ಹಾಜಬ್ಬರು ದೊಡ್ಡ ವ್ಯಕ್ತಿಯಾದರು ಎಂದು ನಾನು ಹೇಳುವುದಲ್ಲ. ಹಾಜಬ್ಬರ ಒಳ್ಳೆ ಕೆಲಸಕ್ಕೆ ಮಾಧ್ಯಮಗಳು ಸಾಥ್ ನೀಡಿವೆ ಅಷ್ಟೆ. ಜಸ್ಟ್ ಗೂಗಲ್ ಗೆ ಹೋಗಿ ಹಾಜಬ್ಬ ಅಂತ ಟೈಪ್ ಮಾಡಿ... ಎಷ್ಟೊಂದು ವಿಚಾರಗಳು ಅವರ ಬಗ್ಗೆ ಸಿಗುತ್ತವೆ ನೋಡಿ. ಹಾಜಬ್ಬರು ನಮ್ಮೂರಿನವರು ಎಂಬುದೇ ನಮಗೆ ಹೆಮ್ಮೆ. ಹಾಜಬ್ಬರಿಗೆ ಅಭಿನಂದನೆಗಳು. 

-ಕೃಷ್ಣಮೋಹನ ತಲೆಂಗಳ. ಕನ್ನಡಪ್ರಭ

No comments: