ಅಂತರ...

ಸಂಜೆ ಸುಮಾರು 6.45ರ ಹೊತ್ತಾಗಿರಬಹುದು...

ತಾರಸಿಯಲ್ಲಿ ಅಂಗಾತ ಮಲಗಿ ನೋಡಿದರೆ ಅಷ್ಟೂ ಆಕಾಶ ವಿಶಾಲ ವಿಶ್ವದ ಹಾಗೆ ಕಂಡು ಬಂತು.
ನಸು ಗುಲಾಬಿ ಬಣ್ಣದ ಫೇಡ್ ಔಟ್ ಆದಂಥ ಬಣ್ಣದ ನಡುವೆ ಅರ್ಧಚಂದ್ರಾಕೃತಿಗೆ ಅನ್ವರ್ಥ ನಾಮದ ಹಾಗಿದ್ದ ಚಂದ್ರ, ಕಳಗೆ ಬೆಟ್ಟದಾಚೆಯ ಮರಗಳ ನಡುವೆ, ಈಗಷ್ಟೇ ಇಳಿದು ಹೋದದ್ದಕ್ಕೆ ಕೆಂಪು ದಾರಿಯ ಕುರುಹು ಬಿಟ್ಟು ಮಾಯವಾದ ಸೂರ್ಯ. ಇವೆರಡರ ನಡುವೆ ಪ್ರಖರವಾಗಿ ನಗುತ್ತಿದ್ದ ಒಂಟಿ ನಕ್ಷತ್ರ...


ಎಲ್ಲದರ ನಡುವೆ ಸಾಕಷ್ಟು ವೈಟ್ ಸ್ಪೇಸ್... ಪತ್ರಿಕೆಯ ಪುಟದ ಅಂದ ಹೆಚ್ಚಿಸುವ ಖಾಲಿ ಜಾಗದ ಬಳಕೆ ಹಾಗೆ. ಗಡಿಬಿಡಿ ಧಾವಂತ ಇಲ್ಲದ ಸಂಜೆಯ ಆಕಾಶ. ಅಸ್ಪಷ್ಟವಾಗಿ ಮೂಡುತ್ತಿರುವ ಪುಟ್ಟ ಪುಟ್ಟ ನಕ್ಷತ್ರಗಳು. ಅಲ್ಲೆಲ್ಲ ಮನೆಗಳಿದ್ದವೇ ಎಂಬ ಹಾಗೆ 
ಗುಡ್ಡದ ನಡುವೆ ವಿದ್ಯುತ್ ದೀಪ ಉರಿಸುವ ಮೂಲಕ ಅಸ್ತಿತ್ವ ತೋರಿಸುತ್ತಿರುವ ಪುಟ್ಟ ಪುಟ್ಟ ಮನೆಗಳು... ಇದ್ಯಾವುದನ್ನೂ ಗಮನಿಸದೆ ತಡೆರಹಿತ ಲಾಸ್ಟ್ ಬಸ್ಸಿನ ಹಾಗೆ ಗಡಿಬಿಡಿಯಿಂದ ಹಾರುತ್ತಿರುವ ಕಾಗೆಗಳ ಹಿಂಡು...

ಹತ್ತಿಯ ಹಾಗೋ, ಬೆಣ್ಣೆಯ ಹಾಗೋ ಕರಗುವ, ಮತ್ತೆ ಕೂಡುವ ಮೋಡಗಳಿಗೆ ಕೆಂಪಿನ ನೆರಳುಗಳೇ ಪದರಗಳನ್ನು ಎತ್ತಿ ತೋರಿಸಿ, ಮತ್ತೆ ಚಂದ್ರನಿಗೆ ಕ್ಷಣ ಕಾಲ ಗ್ರಹಣ ಕವಿದಂತೆ ಮರೆ ಮಾಡಿ ದೂರ ಹೋಗಿ, ಇಂಥದ್ದೇ ಸೆಕೆಂಡಿಗೆ ಮಾಯವಾಯಿತು ಎಂಬುದನ್ನು ಖಚಿತ ಪಡಿಸಲು ಅಸಾಧ್ಯವಾಗುವ ಹಾಗೆ ನಿಧಾ....ನಕ್ಕೆ ಫೇಡ್ ಆಗುವ ಗಾಳಿಯಾಟ, ಸೂರ್ಯ ಮುಳುಗಿ ಕಾಲು ಗಂಟೆಯಾದರೂ ಒಂಥರಾ ಬಂಗಾರದ ವರ್ಣದ ಸಂಜೆಯ ಮಿನುಗು, ದಿನದ ಆಯಾಸ ಕಳೆಯುವ ಹಾಗೆ ತಣ್ಣಗೆ ಸೋಕಿಯೂ ಸೋಕದ ಹಾಗೆ ಹಾದು ಹೋಗುತ್ತಿರುವ ಗಾಳಿ...

ದಾರ ಕಡಿದರೂ ನಶೆಯೇರಿದಂತೆ ಎತ್ತರದಲ್ಲಿ ಹಾರಾಡುತ್ತಾ ದೂರ ಸಾಗುತ್ತಿದ್ದ ಗಾಳಿಪಟವಾಗಲಿ, ತುಸು ಕಪ್ಪಾದರೂ ಎಲ್ಲೋ ದೂರದಲ್ಲಿ ಮಳೆ ಸುರಿಸಿ ಸುಸ್ತಾಗಿ ಬಂದ ಹಾಗೆ ನಿಧಾನಕ್ಕೆ ಕರಗುತ್ತಿದ್ದ ಮೋಡಕ್ಕಾಗಲೀ, ಸದ್ದಾಗದಂತೆ ಬಡಿದುಕೊಳ್ಳುತ್ತಿದ್ದ ತೆಂಗಿನ ಗರಿಗಳಿಗಾಗಲಿ ಸೂರ್ಯ ಹೋಗಿ ಚಂದ್ರ ಬರುವ ಹೊತ್ತಿನ ಪರಿವೆ ಇದ್ದ ಹಾಗಿರಲಿಲ್ಲ. ಹೊತ್ತೇರಿದಂತೆ ಗತ್ತು ಗೈರತ್ತು ಬದಲಾಗುವ ಪರಿಸರದ ಸಹಜ ಓಘಕ್ಕೆ ಸಾಕ್ಷಿಗಳಂತೆ ಕಾಣಿಸಿದ ಕ್ಷಣವದು...

ಯಾರ್ರೀ ಅದು, ಫುಟ್ಬಾತ್ ಪಕ್ಕ ಕೆಎ 19.... ಗಾಡಿ ನಿಲ್ಸಿ ಹೋಗಿದ್ದು, ತಕ್ಷಣ ತೆಗೀರಿ, ಲಾಕ್ ಡೌನ್ ಇದೆಯಂತ ಗೊತ್ತಿಲ್ವ... ಪೊಲೀಸ್ ಗಸ್ತು ವಾಹನದ ಮೈಕ್ ಕೆಳಗಿನ ರಸ್ತೆಯಲ್ಲಿ ಕೂಗುತ್ತಾ ಸಾಗಿದಾಗ ದೃಶ್ಯವೆಲ್ಲ ಸ್ತಬ್ಧವಾದ ಹಾಗೆ ಭಾಸ... ಮತ್ತೆ ಭೂಮಿಗಿಳಿದ ಅನುಭವ. ಭುವಿಗೂ ಬಾನಿಗೂ ಇರುವ ಅಂತರ ಅಂದರೆ ಇದುವೆಯೇನೋ ಅನ್ನಿಸಿದ್ದು ಆಗ. ಗಡಿಬಿಡಿಯಲ್ಲಿ ಮುಖದ ಮಾಸ್ಕ್ ಸರಿಪಡಿಸುತ್ತಾ ಮೆಟ್ಟಿನಲಿನಲ್ಲಿ ಕೆಳಗಿಳಿದಾಗ ಪ್ರಶಸ್ತಿ ಪುರಸ್ಕೃತ ಕಿರುಚಿತ್ರವೊಂದು ಆಗಸದ ಮೋಡದೆಡೆಯಲ್ಲಿ ಸಾಗುತ್ತಾ ಸಾಗುತ್ತಾ ಮರೆಯಾದಂತೆ ಭಾಸ... ಮುಖದ ಮಾಸ್ಕಿನ ಉಸಿರುಗಟ್ಟಿಸುವ ಒತ್ತಡ ಮತ್ತೆ ಭುವಿಗೆ ತಲುಪಿಸಿ ಲೌಕಿಕ ಪ್ರಜ್ನೆ ಮೂಡಿಸಿ ಕೃತಾರ್ಥವಾಯಿತು.

-ಕೃಷ್ಣಮೋಹನ ತಲೆಂಗಳ.

No comments: