ಕೋಪಿಷ್ಠ!


(ಕಾಲ್ಪನಿಕ ಕತೆ)

..............


"ಹಲೋ... ಬಿಝಿಯಾ...?"
ಆಫೀಸಿನಲ್ಲಿದ್ದಾಗ ಬಂದ ವಾಟ್ಸಪ್ಪು ಮೆಸೇಜು...
ನಂತರದ ಸಂಭಾಷಣೆಯ ಪೂರ್ಣ ಪಾಠ:

"ಸ್ವಲ್ಪ ಬಿಝಿ, ಏನು ವಿಷಯ ಹೇಳಿ..."


"ನಾಳೆಯಿಂದ ಶಾಲೆಗಳಿಗೆ ರಜೆ ಅಂತ ಹಾಕಿದ್ದೀರಲ್ಲ ಸ್ಟೇಟಸ್ಸಲ್ಲಿ, ಅದಕ್ಕೆ ಕೇಳಿದ್ದು. ಹೌದ. ರಜೆಯಾ...?"
"ಹೌದು ರಜೆಯೇ... ರಜೆ ಇರುವುದಕ್ಕೇ ಹಾಕಿದ್ದು..."
"ಹೋ ಹೌದ... ನಾಡಿದ್ದೂ ರಜೆ ಇದೆಯ...?"
"ಗೊತ್ತಿಲ್ಲ, ನಾಳೆ ಇದೆ ಅಂತ ಗೊತ್ತಾಯ್ತು, ಅದಕ್ಕೆ ಹಾಕಿದ್ದು..."
"ಹೋ ಹೌದ... ಮತ್ತೆ ಎಂತ ವಿಶೇಷ...?"
"ನಾನು ಡ್ಯೂಟಿಲಿದ್ದೇನೆ, ಆಫೀಸಲ್ಲಿ..."
"ಹೋ ಹೌದ... ಸಾರಿ..."



ಇಲ್ಲಿಗೆ ಮೊದಲನೇ ಅಧ್ಯಾಯ ಸಮಾಪ್ತಿ

---------------

ಇದಕ್ಕಿಂತ ಮೊದಲು ತುಂಬ ಸಲ ಆಗಿತ್ತು... ಹೀಗೆ, ಮೆಸೇಜು ಮಾಡಿದವರಿಗೆ ONLINEನಲ್ಲಿರುವವರ ಕಷ್ಟ ಗೊತ್ತಾಗೋದಿಲ್ಲ ಅಂತ ನಾನು ಅವರ ಜೊತೆ ವಾದ ಮಾಡಿ, ಅದು ಜಗಳ ಆಗಿ, ಕೊನೆಗೆ ಅವರು ನನಗೆ ಮುಂಗೋಪಿ ಅಂತ ಬಿರುದು ಕೊಟ್ಟು, ಕೊನೆಗೆ ಮಾತು ಬಿಟ್ಟು... ಇದೆಲ್ಲ ರಗಳೆ ಬೇಕಾ? ಅಂತ ಅನ್ನಿಸ್ತಾ ಇತ್ತು. ಹಾಗಂತ offline ಹೋಗುವ ಹಾಗಿಲ್ಲ, ಕೆಲಸಕ್ಕೆ ಬೇಕಾದ್ದೆಲ್ಲ onlineನಲ್ಲೇ ಸಿಕ್ಕೋದು. ಇದನ್ನೆಲ್ಲ ವಿವರಿಸಿ ಹೇಳುವಷ್ಟು ಪುರುಸೊತ್ತೂ, ತಾಳ್ಮೆಯೂ ಖಂಡಿತಾ ಇಲ್ಲ... 



ಒಬ್ಬರು ಅವತ್ತೊಮ್ಮೆ ಎಂಥದ್ದೋ ಕೇಳಿದಾಗ busy ಇದ್ದೆ... ಸ್ವಲ್ಪ ಗರಂ ಆಗಿ ಉತ್ತರಿಸಿದ್ದು ವಿಕೋಪಕ್ಕೆ ತಿರುಗಿ ಜಗಳ ಆಗಿ ಸಮಸ್ಯೆ ಆಗಿತ್ತು. ಆಗ ಗೆಳೆಯನೊಬ್ಬ ಉಪದೇಶ ಕೊಟ್ಟಿದ್ದ, "ಬಿಝಿ ಇದ್ದರೆ ಬಿಝಿ ಅಂತ ಹೇಳಬಹುದಲ್ಲ, ಸುಮ್ನೆ ಯಾಕೆ ಕಂಡ ಕಂಡವರಲ್ಲೆಲ್ಲ ಜಗಳ ಕಾಯ್ತಾ ಇರ್ತೀಯ..?. ಆನ್ ಲೈನ್ ಮಾತ್ರ ಇದ್ದೇನೆ, ಫ್ರೀ ಇಲ್ಲ ಅಂತ ಹೇಳಿಬಿಡು..." ಅಂತ. ನನಗೂ ಹೌದು ಅನ್ನಿಸಿತು.. ಇನ್ನೊಮ್ಮೆ ಕೋಪ ಮಾಡಿ ತಾಳ್ಮೆ ಕಳೆದುಕೊಳ್ಳಬಾರದು ಅಂತ ಖಡಕ್ ನಿರ್ಧಾರ ಮಾಡಿ ಆಗಿತ್ತು... ಬಿಝಿ ಅಂದ ಮೇಲೂ ಮಾತನಾಡ್ಸಿದ್ರೆ ನೇರವಾಗಿ ಹೇಳುತ್ತೇನೆಯೋ ಹೊರತು ಕೋಪ ಮಾಡಿಕೊಳ್ಳುವುದಿಲ್ಲ ಅಂತ...

ಅರೆ...
ಅವತ್ತು ಸಿಟ್ಟು ಮಾಡಿದ ಅದೇ ವ್ಯಕ್ತಿಯ ಮೆಸೇಜು ಈಗ ಪುನಹ ಬಂತು..
"ಹಾಯ್.."
-ನಮಸ್ತೇ...
"ಹೇಗಿದ್ದೀರಿ...?"
-ಫೈನ್..
"ಎಲ್ಲಿದ್ದೀರಿ...?"
-ಆಫೀಸ್...
"ಹೌದಾ, ಇವತ್ತು ನಿಮ್ಗೆ ರಜೆ ಇಲ್ವ....?"
-ಇಲ್ಲ ನಮ್ಗೆ ಇವತ್ತೂ ಡ್ಯೂಟಿ..
"ಆನ್ ಲೈನ್ ಇದ್ರಲ್ವ... ಹಾಗೆ ಮಾತನಾಡಿಸಿದೆ...."
-ಆನ್ ಲೈನ್ ಇದ್ದೇನೆ.. ಆದ್ರೆ ಫ್ರೀ ಅಲ್ಲ... ಸ್ಟೇಟಸ್ಸಿನಲ್ಲಿ ಹಾಕಿದ್ದೀನಲ್ಲ... ON DUTY, BUSY ಅಂತ...
"ಹ್ಹೆಹ್ಹೆಹ್ಹೇ..... ಏನು ನೀವೊಬ್ರೇನಾ ಆನ್ ಡ್ಯೂಟಿ ಬಿಝಿ ಇರೋದ...? ಎಲ್ರೂ ಇರ್ತಾರಲ್ವ... ಅದನ್ನು ದೊಡ್ದಾಗಿ ಹಾಕ್ಲಿಕೇನಿದೆ...?" ಸ್ವಲ್ಪ ಕೆಣಕಿದ ಧಾಟಿಯ ಸಂದೇಶ ಬಂತು.
-ಹಾಗಲ್ಲ, ಆನ್ ಲೈನ್ ಇದ್ರೂ ಕೆಲ್ಸ ಇದೆ, ಮಾತನಾಡೋವಷ್ಟು ಫ್ರೀ ಅಲ್ಲ ಅಂತರ್ಥ... 

ತಾಳ್ಮೆ ವಹಿಸಿಕೊಂಡು ಹೇಳಿದೆ...
"ಬೆಳಗ್ಗೆ ಸ್ಟೇಟಸ್ಸಿನಲ್ಲಿ ಒಂದು ಟಿಕ್ ಟಾಕ್ ಹಾಡು ಹಾಕಿದ್ರಲ್ಲ, ಅದು ಹಾಡಿದ್ದು ನೀವೇಯಾ...?" ಪುನಹ ಮೆಸೇಜು ಬಂತು...
-ಹೌದು ನಾನೇ... ನಾನೇ ಆಗಿದ್ದಕ್ಕೆ ಹಾಕಿದ್ದು, ಯಾರ್ಯಾರು ಹಾಡಿದ್ದು ಹಾಕ್ಲಿಕೆ ನಂಗೇನು ಹುಚ್ಚ...?


ಸ್ವಲ್ಪ ಸಿಟ್ಟಿನಿಂದ್ಲೇ ಉತ್ತರಿಸಿದೆ...

"ಅಲ್ರೀ... ನೀವೇ ಹಾಡಿದ್ದ ಕೇಳಿದೆ.. ಹೌದು ಅಂದ್ರೆ ಮುಗೀತಪ್ಪ.. ಯಾಕ್ರೀ ಅಷ್ಟು ಅರೋಗೆಂಟ್ ಆಗಿ ಉತ್ತರಿಸ್ತೀರ..?. ಯಾಕಿಷ್ಟು ಸಿಟ್ಟು ಮಾಡುವಂಥದ್ದು ನಾನೀಗ ಏನು ಹೇಳಿದೆ...."
-OK SORRY ... ನಾನೇ ಹಾಡಿದ್ದು, ಆಯ್ತಲ್? ನಾನೀಗ ಬಿಝಿ ಇದ್ದೇನೆ. ರಾತ್ರಿ 10 ಗಂಟೆಗೆ ಡ್ಯೂಟಿ ಮುಗೀತದೆ, ಮತ್ತೆ ಏನು ಕೇಳೋದಿದ್ರೂ ಕೇಳಿ... ಓಕೆನಾ...?ತಾಳ್ಮೆಯಿಂದ ಕೇಳಿದೆ..
"ಅಯ್ಯೋ 10 ಗಂಟೆಗಾ... ಅಷ್ಟೊತ್ತಿಗೆ ಮಲಗೀರ್ತೀನಪ್ಪ, ಬೇಗ ಮಲಗಿ ಅಭ್ಯಾಸ...ಅಲ್ಲ ನೀವ್ಯಾಕೆ ಮಾತು ಮಾತಿಗೆ ಸಿಡುಕ್ತೀರಿ...?"


ಮತ್ತೆ ಪ್ರಶ್ನೆ ಬಂತು.

-ನಾನು ಸಿಡುಕಿಲ್ಲ, ಬಿಝಿ ಇದ್ದೇನೆ, ಆಫೀಸಿನಲ್ಲಿದ್ದೇನೆ, ಆಫೀಸಿಗೆ ಬರೋದು ಕೆಲಸ ಮಾಡೋಕೆ, ಚಾಟ್ ಮಾಡ್ತಾ ಇರೋದಕ್ಕಲ್ಲ, ಸ್ವಲ್ಪ ಅರ್ಥ ಮಾಡಿಕೊಳ್ಳಿ. ಸಪೋಸ್ ನೀವು ಡ್ಯೂಟಿಲೀರೋವಾಗ ನಾನು ಪ್ರಶ್ನೆಗಳನ್ನು ಕೇಳ್ತಾ ಇದ್ರೆ ನಿಮ್ಗೆ ಉತ್ತರ ಕೊಡೋಕೆ ಸಾಧ್ಯವಾ...? ಅವರಿಗೆ ಮನವರಿಕೆ ಮಾಡ್ಲಿಕೆ ಪ್ರಯತ್ನ ಮಾಡಿದೆ..



"ಅಯ್ಯೋ ದೇವಾ.. ನಾನು ಡ್ಯೂಟೀಲಿ ಇರೋವಾಗ OFFLINE ಹೋಗ್ತೇನೆ..." 

 
-ಸರಿ ಸರಿ... ನೀವು ಆಫ್ ಲೈನ್ ಹೋಗಿ.. ಆದ್ರೆ ನನ್ನ ಕೆಲಸಕ್ಕೆ ನಾನು ಆನ್ ಲೈನ್ ಇರ್ಲೇ ಬೇಕಾಗ್ತದೆ... ಅದಕ್ಕೇ ಇದ್ದೇನೆ. ಅದರ ಅರ್ಥ ನಾನು ಫ್ರೀ ಅಂತ ಅಲ್ಲ. ಅಷ್ಟೇ... 


ಮತ್ತೂ ವಿವರವಾಗಿ ಅವರಿಗೆ ಹೇಳೋಕೆ ಪ್ರಯತ್ನ ಮಾಡಿದೆ. ಇಷ್ಟೆಲ್ಲಾ ಆಗುವಾಗ ಬಾಸ್ ದೂರದಿಂದ ಕೆಕ್ಕರಿಸಿ ನನ್ನನ್ನೇ ನೋಡ್ತಾ ಇದ್ರು... ನಂಗೆ ಅಸಹನೆ ಏರ್ತಾ ಇತ್ತು... ಬರಬಾರದು ಅಂದುಕೊಂಡಿದ್ದ ಸಿಟ್ಟು ಏರುತ್ತಿತ್ತು. ಆದರೆ ಶುರು ಮಾಡಿದ ವಾದಕ್ಕೆ ಪೂರ್ಣವಿರಾಮ ಹಾಕದೆ ಸಮಾಧಾನ ಇರಲಿಲ್ಲ...


--------------

"ರೀ... ನೀವು ಬಿಝಿ ಅಂತ ಶುರುವಿಗೇ ಹೇಳಿದ್ದರೆ ಮುಗೀತಿತ್ತಲ್ಲ... ಸುಮ್ ಸುಮ್ನೇ ಯಾಕೆ ಇನ್ ಸಲ್ಟ್ ಮಾಡಿ ಮಾತಾಡ್ತೀರಿ...? ಏನು ನೀವೋಬ್ರೇನಾ ಜಗತ್ತಿನಲ್ಲಿ ಕೆಲ್ಸ ಮಾಡೋರು, ಬಿಝಿ ಇರೋರು...?" ಮತ್ತೆ ಕೆಣಕಿದ ಮಾತು...


-ನಾನು ಶುರುವಿಗೇ ಹೇಳಿದ್ದೆ ಬಿಝಿ ಅಂತ. ಅದ್ರೂ ಅರ್ಜೆಂಟಿಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೆ. ನೀವೇ ನಂತರ ಸ್ಟ್ರೆಚ್ ಮಾಡಿದ್ರಿ... ನಾನೇನು ಮಾಡ್ಲಿ? ಅಷ್ಟು ನಿಷ್ಠುರವಾಗಿ ಮೆಸೇಜ್ ನಿಲ್ಲಿಸೋಕೆ ಆಗ್ತದ...?

ಹೇಳುವ ಪ್ರಯತ್ನ ಮಾಡಿದೆ..

"ನಿಮ್ಗೆ ತುಂಬಾ EGOರೀ... ಬೇರೆಯವ್ರ ಸಮಯಕ್ಕೆ ನೀವು ಹೊಂದಿಕೊಳ್ಳಲ್ಲ... ಏನು ಒಂದು ಪ್ರಶ್ನೆ ಕೇಳಿದ ತಕ್ಷಣೆ ಅಷ್ಟೊಂದು ಸಿಡುಕ್ಲಿಕೆ ಏನಿದೆ...? ನಾನು ತಾಳ್ಮೆಯಿಂದ್ಲೇ ಮಾತನಡ್ತಾ ಇದ್ದೇನಲ್ಲ...? ನೀಮ್ಗೆ ಮೂಗಿನ ತುದೀಲಿ ಕೋಪ.... ನಿಮ್ಮ ಟೈಮಿಗೆ ಉಳ್ದೋರು ಕಾದು ಕುಳಿತು ಮಾತನಾಡಬೇಕ...? ಬೇರೆಯವ್ರಿಗೀ ರೆಸ್ಪೆಕ್ಟ್ ಕೊಡೋಕೆ ಕಲೀರಿ...."

 
ನಂಗೆ ಮೈ ನಡುಗುತ್ತಿತ್ತು... ಬೆವರ್ತಾ ಇತ್ತು... ಸಿಟ್ಟಿನಲ್ಲಿ ಏನಾಗ್ತಾ ಇದೆ ಅಂತ ಗೊತ್ತಾಗ್ಲಿಲ್ಲ. "ಹೌದು ನಂಗೆ ಇಗೋ... ಏನೀಗ..." ದೊಡ್ಡದಾಗಿ ಕಿರುಚಿ ಮೊಬೈಲ್ ನೆಲಕ್ಕಪ್ಪಳಿಸಿದೆ.... ಬಾಸು, ಅಕ್ಕಪಕ್ಕ ಕುಳಿತೋರೆಲ್ಲ ಅವಾಕ್ಕಾಗಿ ನೋಡ್ತಾ ಇದ್ರು... ಏನಾಗ್ತಾ ಇದೆ. ಅಂತ. ಅವ್ರಿಗೆ ನನ್ನ ಸಿಟ್ಟು ಹೊಸದಲ್ಲದ ಕಾರಣ ಜಾಸ್ತಿ ತಲೆಗೆ ಹಚ್ಚಿಕೊಳ್ಳಲಿಲ್ಲ... 


ಅಲ್ಲಿಗೆ ನನ್ನ ಮೊಬೈಲ್ ಒಡೆದು ಎರಡು ಹೋಳಾಯ್ತು... ಜೊತೆಗೆ ಸಿಟ್ಟು ಮಾಡಿಕೊಳ್ಳಬಾರದೆಂಬ ನಿರ್ಧಾರ ಕೂಡಾ...!!!

....

ಮತ್ತೆ ಕೆಲ್ಸಕ್ಕೆ ಕೂತ್ರೂ ಏಕಾಗ್ರತೆ ಸಿಗ್ಲಿಲ್ಲ... EGO.. ಮುಂಗೋಪ... ಮಾತುಗಳೇ ಚುಚ್ತಾ ಇದ್ದವು. ಇದ್ರಲ್ಲಿ ನನ್ನ ತಪ್ಪೇನು ಅಂತ ಅರ್ಥ ಆಗಲಿಲ್ಲ....


----


ಕಂಪ್ಯೂಟರ್ ಮುಂದೆ ಕೂತರೂ ಏಕಾಗ್ರತೆ ಸಿಗ್ಲಿಲ್ಲ... ಮೈಯೆಲ್ಲ ಸಣ್ಣಗೆ ನಡುಗ್ತಾ ಇತ್ತು. ಕೋಪ ಬಿಡಬೇಕೆಂದರೂ ಕೋಪ ಹುಟ್ಟಿಸುವವರು ಬಿಡುವುದಿಲ್ಲ ಅಂತ ಅಸಹಾಯಕತೆ ಕಾಡ್ತಿದೆಯಾ ಅಂತ ಸಂಶಯ ಶುರು ಆಯ್ತು... ಕೋಪ ಬರಿಸಿದ ವ್ಯಕ್ತಿ ಏನು ಮಾಡುತ್ತಿರಬಹುದು ಅಂತ ಕುತೂಹಲದಿಂದ ಕಂಪ್ಯೂಟರಿನಲ್ಲಿ ಫೇಸ್ ಬುಕ್ ತೆರೆದು ನೋಡಿದೆ...

ನನ್ನ ನಿರೀಕ್ಷೆ ನಿಜವಾಗಿತ್ತು... ವಾಲ್ ನಲ್ಲಿ ಎರಡು ನಿಮಿಷದ ಹಿಂದೆ ಹೊಸ ಪೋಸ್ಟು ಮೂಡಿತ್ತು...!!

"ಕೋಪವೆಂಬುದು ಮನುಷ್ಯನ ದೌರ್ಬಲ್ಯ, ವಿವೇಚನೆಗೆ ನಾವಾಗಿ ನೀಡುವ ವಿಷ, ಕೋಪಿಸುವ ವ್ಯಕ್ತಿ ದುರ್ಬಲ ಅಂತ ಅರ್ಥ, ಪದೇ ಪದೇ ಕೋಪಿಸುವುದು ಒಂದು ಮಾನಸಿಕ ಅಸ್ಥಿರತೆ, ನೀವೇನು ಹೇಳುತ್ತೀರಿ ಪ್ರೇಂಡ್ಸ....?"


ಎರಡು ನಿಮಿಷಗಳಲ್ಲಿ 20 ಲೈಕ್ಸ್, 15 ಕಮೆಂಟ್ಸ್ ಬಂದಿತ್ತು...


-ಖರೇ ಹೇಳಿದ್ರಿ... ಕೋಪಿಸುವವರನ್ನೆಲ್ಲ ಕೌನ್ಸಿಲಿಂಗಿಗೆ ಕರೆದೊಯ್ಯಬೇಕು...

 
-ಕೋಪಿಸುವವರಿಗೆ ತಾವೇ ಬುದ್ಧಿವಂತ ಅಂತ ಅಹಂ ಇರ್ತದೆ...

 
-ಪದೇಪದೇ ಕೋಪಿಸುವವರನ್ನು ಅನ್ ಪ್ರೆಂಡ್ಸ್ ಮಾಡ್ರಿ...


-ಮಾತಿಗೆ ಮೊದಲೇ ಎಗರಾಡುವವರನ್ನ ಮಾನಾಡಿಸಲೇಬೇಡಿ... ಅವರಷ್ಟಕ್ಕೆ ಬಿಡಿ...


-ಅವರ ಕೋಪ ಅವರನ್ನೇ ಸುಡುತ್ತೆ ಬಿಡ್ರಿ, ನೀವ್ಯಾಕೆ ತಲೆ ಕೆಡಿಸ್ಕೋತೀರ... COOL DOWN?


-ಏನಾಯ್ತು... ಯಾರಾದ್ರೂ ನಿಮ್ಮತ್ರ ಕೋಪ ಮಾಡಿದ್ರ? ನಿಮ್ಮಂಥ ಸಾತ್ವಿಕರತ್ರ ಕೋಪ ಮಾಡಿದವರು ಯಾರ್ರಿ ಅದು? ಇಲ್ಲೇ ಅವರ ಹೆಸರು ಹಾಕಿ ಬಿಡಿ, ಯಾರೂಂತ ನಾವೂ ನೋಡ್ತೀವಿ...

ಕಮೆಂಟ್ ಬರುತ್ತಲೇ ಇತ್ತು... ಕೋಪ ಇಳಿದಿತ್ತು... ಕೋಪ ತಾನಾಗಿ ಹುಟ್ಟುವುದು ಜಾಸ್ತಿಯೋ, ಬೇರೆಯವರು ಹುಟ್ಟಿಸುವುದು ಜಾಸ್ತಿಯೋ? ಅಂತ ಗೂಗಲ್ ನಲ್ಲಿ ಸರ್ಚ್ ಕೊಟ್ಟು ಉತ್ತರಕ್ಕಾಗಿ ಕಾದೆ, ಅಷ್ಟೊತ್ತಿಗೆ ಗುಡುಗು ಬಂದು, ಕರೆಂಟ್ ಹೋಗಿ, ಕಂಪ್ಯೂಟರ್ ಆಫ್ ಆಯ್ತು...!!

-ಕೃಷ್ಣಮೋಹನ ತಲೆಂಗಳ.

No comments: