ಸಪ್ತಸಾಗರದಾಚೆಗೆಲ್ಲೋ...! ಕೇಳಿಸದೇ ಆವಿಯಾಗುವ "ದುಡಿಯುವವರ ಕನವರಿಕೆಗಳು" Pathemari ಎಂಬ ರೂಪಕ...


2015ರಲ್ಲಿ ಮಲಯಾಳಂ ಭಾಷೆಯಲ್ಲಿ ಬಂದ ಸಿನಿಮಾ PATHEMARI. ಸಲೀಂ ಅಹಮ್ಮದ್ ನಿರ್ದೇಶನದ ಮಮ್ಮೂಟ್ಟಿ ಅಭಿನಯದ ಪ್ರಶಸ್ತಿ ಪುರಸ್ಕೃತ ಸಿನಿಮಾ ಇದು. ಗಲ್ಫ್ ದೇಶಕ್ಕೆ ಎಳೆಯ ವಯಸ್ಸಿನಲ್ಲಿ ತೆರಳಿದ ನಾರಾಯಣನ್ (ನಾಯಕ) ಬದುಕಿನ ಚಿತ್ರಣ. ಒಂದು ರೀತಿಯಲ್ಲಿ ನೋಡುವುದಕ್ಕೆ ಹೋದರೆ ಗಲ್ಫಿನಲ್ಲಿ ನೆಲೆಸಿ ಊರಿನವರ ದೃಷ್ಟಿಯಲ್ಲಿ ಧನಿಕನಾಗಿ, ಆಂತರಂಗಿಕವಾಗಿ ಕುಟುಂಬ ಜೀವನವನ್ನೇ ಕಳೆದುಕೊಂಡವನಾಗಿ, ನಾರಾಯಣನ್ ತನ್ನ ಇಡೀ ಬದುಕಿನಲ್ಲಿ ಕಳೆದುಕೊಂಡು ಹೋಗುವುದು ಯಾರಿಗೂ ಕಾಣಿಸುವುದೇ ಇಲ್ಲ. ಕಳ್ಳ ಮಾರ್ಗದಲ್ಲಿ ತೈಲ ರಾಷ್ಟ್ರಕ್ಕೆ ತೆರಳಿದ ನಾರಾಯಣನ್ ಇಡೀ ಬದುಕನ್ನು ಕುಟುಂಬದವರ ಖುಷಿಗೆ, ಊರಿನವರ ಹೆಮ್ಮೆಗೆ ವ್ಯಯಿಸಿ ಕೊನೆಗೊಮ್ಮೆ ಅಲ್ಲೇ ಸತ್ತು ನಿಶ್ಚಲನಾಗಿ ಮನೆಗೆ ಮರಳಿದಾಗ ಕೌಟುಂಬಿಕ ಕಲಹದಿಂದ ಹೊಸದಾಗಿ ಕಟ್ಟಿದ ಮನೆಯಲ್ಲಿ ಆತನ ದೇಹ ಇರಿಸಲೂ ಆಗದೇ ಇರುವಂಥಹ ಸಂಧಿಗ್ಧತೆ ಇಡೀ ಸಿನಿಮಾದ ಕರುಳು ಹಿಂಡುವ ಕಲ್ಪನೆಯನ್ನು ದಯನೀಯವಾಗಿ ತೋರಿಸಿಕೊಡುತ್ತದೆ.

ಇದು ಕೇವಲ ಸಿನಿಮಾದ ಕಥೆಯಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಅದರಲ್ಲೂ ನಮ್ಮ ಕರಾವಳಿ ಹಾಗೂ ಕೇರಳದಿಂದ ಲಕ್ಷಾಂತರ ಮಂದಿ ಗಲ್ಫಿಗೆ ತೆರಳಿ, ಅಲ್ಲಿ ಬದುಕು ಕಟ್ಟಿಕೊಂಡು, ಮನೆಯವರಿಗೆ ಆಧಾರವಾಗಿದ್ದುಕೊಂಡು ಆ ಬಿಸಿಲಿನ ರಾಷ್ಟ್ರದಲ್ಲಿ ಹೊಟ್ಟೆಪಾಡಿಗೆ ಮಾಡುವ ಕೆಲಸದ ಕಷ್ಟಗಳನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ, ಊರಿಗೆ ಬಂದಾಗಲೆಲ್ಲ ಮನೆಮಂದಿಗೆ, ಊರವರಿಗೆ, ಅಕ್ಕಪಕ್ಕದವರಿಗೆ "ಗಲ್ಫ್ ಕ್ಕಾರನ್" ಎಂಬ ಗತ್ತನ್ನು ಬಿಟ್ಟುಕೊಡಲಾಗದೆ ಪೆಟ್ಟಿಗೆಯಲ್ಲಿದ್ದದ್ದನೆಲ್ಲ ಹಂಚಿ ಮತ್ತೆ ಖಾಲಿ ಕೈಯ್ಯಲ್ಲಿ ವಿಮಾನ ಹತ್ತಿ ಮತ್ತೊಂದು ಸಲ ಮುಂದಿನ ವರ್ಷ ಬರುವಾಗ ಅವನ ಬ್ಯಾಗಿನತ್ತವೇ ಎಲ್ಲರ ಚಿತ್ತ ಹರಿಯುವುದು ಕೇವಲ ನಾಟಕವೂ, ನಾಟಕೀಯವೂ ಅಲ್ಲ. ನಾವೆಲ್ಲ ಕಂಡು, ಕೇಳಿದ್ದೇ ಹೌದು.

3-4 ದಶಕಗಳ ಹಿಂದೆ ಬಾಂಬೆಗೆ ಹೋಗುವುದು ಮತ್ತು ದುಬೈಗೆ ಹೋಗುವುದು ಅಂದರೆ, ದುಡಿದು ಕೈತುಂಬ ದುಡ್ಡು ಮಾಡಿದ್ದಾನೆ ಅಂತಲೇ ಜನ ಆಡಿಕೊಳ್ಳುತ್ತಿದ್ದ ಕಾಲ. ಬಾಂಬೆಯಲ್ಲಿ, ಗಲ್ಫ್ ದೇಶಗಳಲ್ಲಿ ಏನು ಕೆಲಸ ಮಾಡುತ್ತಾರೆ, ಅವರ ಕಷ್ಟಗಳನೇನು, ಅವರ ಮನೆಮಂದಿಯನ್ನು ಅವರೆಷ್ಟು ಮಿಸ್ ಮಾಡಿಕೊಳ್ತಾರೆ, ಅವರ ವೈಯಕ್ತಿಕ ನೋವು ನಲಿವುಗಳೇನು ಅಂತೆಲ್ಲ ಎಷ್ಟು ಮಂದಿ ವಿಚಾರಿಸುತ್ತಿದ್ದರೋ ಗೊತ್ತಿಲ್ಲ. ಆದರೆ, ಅವನಿಗೆಷ್ಟು ಸಂಬಲ ಅಂತ ಮಾತ್ರ ತಪ್ಪದೇ ಕೇಳುತ್ತಿದ್ದದ್ದು ಸರೀ ನೆನಪಿದೆ!!!

ಹೆಣ್ಣು ಹುಡುಕುವಾಗ, ಸಂಬಂಧ ತಲಾಶ್ ಮಾಡುವಾಗಲೂ ಬಾಂಬೆಯಲ್ಲಿರುವ ಅಥವಾ ಗಲ್ಫಿಗೆ ಹೋದವ, ಹೋಗಿ ಬಂದವನಿಗೆ ಒಂದು ತೂಕ ಜಾಸ್ತಿಯೇ ಇರ್ತಾ ಇತ್ತು. ವರದಕ್ಷಿಣೆ ಭಯಂಕರ ಚಲಾವಣೆಯಲ್ಲಿದ್ದ ವರ್ಷಗಳಲ್ಲಿ ವರದಕ್ಷಿಣೆಯ ಮೀಟರ್ ಸಹಿತ ಪರವೂರಿನಲ್ಲಿ ದುಡಿಯುವ ವರನಿಗೆ ಜಾಸ್ತಿಯೇ ಇರ್ತಾ ಇತ್ತು. ಭಾರತದಿಂದ ಹೋಗ್ತಾರೆ, ಮತ್ತೆ ದೊಡ್ಡ ಸೂಟ್ ಕೇಸ್ ಹಿಡ್ಕೊಂಡು ಬರ್ತಾರೆ ಅಂತ ಮಾತ್ರ ಕಾಣುವುದು. ನೇಪಥ್ಯದ ಹಿಂದಿನ ಕಣ್ಣೀರು, ಮನೆಮಂದಿಯ ವಿಪರೀತ ನಿರೀಕ್ಷೆ. ಕಾಡುವ ಬಡತನದಿಂದ ಆಚೆಗೆ ಬಂದು ಒಂದು ಹಂತಕ್ಕೆ ಬದುಕು ನೆಲೆ ಕಾಣುವ ಹೊತ್ತಿನಲ್ಲಿ ಮುಗಿದು ಹೋಗುವ ಆಯುಷ್ಯ, ಕೈಕೊಡುವ ಆರೋಗ್ಯ ಮತ್ತು ಕೃಶವಾದ ಯೌವ್ವನ ಯಾವುದೂ ಮತ್ತೆ ಆ ವ್ಯಕ್ತಿಗೆ ಸಿಕ್ಕಲು ಸಾಧ್ಯವೇ ಇಲ್ಲ ಎನ್ನುವ ಸತ್ಯ, ಅವನ ತಲೆದಿಂಬಿನಡಿಯಲ್ಲಿ ಕರಗಿ ಹೋಗುವ ಕಣ್ಣೀರನ ಹಾಗೆ ಕಾಣಿಸುವುದೇ ಇಲ್ಲ. ಅಸಲಿಗೆ ಅವನಲ್ಲಿ ಎಷ್ಟು ಕಷ್ಟ ಪಟ್ಟು ದುಡಿಯುತ್ತಾನೆ, ಏನು ಕೆಲಸ ಮಾಡುತ್ತಾನೆ, ಅವನ ವೈಯಕ್ತಿಕ ಇಷ್ಟಾನಿಷ್ಟಗಳನ್ನು ವಿಚಾರಿಸುತ್ತಿದ್ದವರು ಎಷ್ಟು ಮಂದಿ ಇದ್ದಾರು?!

ಪಥೇಮಾರಿ ಸಿನಿಮಾದಲ್ಲೂ ಅಷ್ಟೇ... ತೀರಾ ಎಳೆವಯಸ್ಸಿನಲ್ಲಿ ಹಡಗೊಂದರಲ್ಲಿ ಗಲ್ಫಿಗೆ ತೆರಳುವ ನಾರಾಯಣನ್ ಅಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಆಗಾಗ ಊರಿಗೆ ಬರುತ್ತಾ ಇರುತ್ತಾನೆ. ಅವನಿಗೂ ಅಮ್ಮ ಇರ್ತಾರೆ, ಮದುವೆ ಆಗಿ ಸಂಸಾರ ಆಗುತ್ತದೆ. ಯಥಾಪ್ರಕಾರ, ಆತ ಮಾತ್ರ ಗಲ್ಫಿಗೆ ಹೋಗುತ್ತಾನೆ, ಹೆಂಡತಿ ಮಕ್ಕಳು ಊರಿನಲ್ಲೇ ಇರ್ತಾರೆ. ವರ್ಷಕ್ಕೊಮ್ಮೆ ಬರುವಾಗ ಆತನ ಸ್ವಾಗತಕ್ಕೆ ಏರ್ ಪೋರ್ಟಿಗೆ ಇಡೀ ಊರೆ ಹೋಗುತ್ತದೆ. ಆತನ ಪೆಟ್ಟಿಗೆಗಳನ್ನು ಅಂಬಾಸಿಡರ್ ಕಾರಿನಲ್ಲಿ ಕಟ್ಟಿ ತಂದು ಮನೆಯಂಗಳದಲ್ಲಿ ಇಳಿಯುವಾಗ ಹತ್ತಾರು ಕುತೂಹಲದ ಕಣ್ಣುಗಳು ಆತನನ್ನೇ ದಿಟ್ಟಿಸುತ್ತವೆ.

ಕೂಡು ಕುಟುಂಬದ ಎಲ್ಲರನ್ನೂ ಸಂಬಾಳಿಸುವ ನಾಯಕ ನಾರಾಯಣನ್ ಎಲ್ಲರಿಗೂ ಉಡುಗೊರೆಗಳನ್ನು ಹಂಚಿ ಕೊನೆಗೆ ಪ್ರೀತಿಯ ಪತ್ನಿಗೆಂದೇ ಬಚ್ಚಿಟ್ಟು ಪ್ರತ್ಯೇಕ ಸೀರೆ ಕೊಡುವ ದೃಶ್ಯವೂ ಮನ ಕಲಕುತ್ತದೆ. ಅದೇ ಪತ್ನಿ ಮುಂದೊಂದು ದಿನ ಆತ ಪರವೂರ ದುಡಿಮೆ ಸಾಕು, ಇನ್ನು ಊರಲ್ಲೇ ಇರ್ತೇನೆ ಅನ್ನುವಾಗ, ಗಲ್ಫಿಗೆ ಮರಳದ ಗಂಡ ಎಂಬ ಹೀಯಾಳಿಕೆಗೆ ಗಂಡ ಸಿಕ್ಕುವುದನ್ನು ಒಪ್ಪಿಕೊಳ್ಳಲಾಗದೆ, ಹಂಗಿಸುವುದು ಮತ್ತೆ ಕಣ್ಣೀರೊರೆಸಿ ಗಲ್ಫಿನ ವಿಮಾನಕ್ಕೆ ನಾಯಕ ಏರುವುದು, ಕಷ್ಟ ಕಾಲದಲ್ಲಿ ಮನೆಮಂದಿಯ ಎಲ್ಲರ ಹಣಕಾಸು ಬೇಡಿಕೆಗಳಿಗೂ ಉತ್ತರವಾದ ನಾರಾಯಣನ್ ಯಾವತ್ತೋ ಒಮ್ಮೆ ಐಎಸ್ ಡಿ ಕರೆ ಮಾಡಿದಾಗಲೂ ಮದುವೆ ಸಂಭ್ರಮದಲ್ಲಿರುವ ಮನೆಯಲ್ಲಿ ಯಾರಿಗೂ ಫೋನಿನಲ್ಲ ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ.. ಎಲ್ಲ ವಸ್ತುನಿಷ್ಠ ಬದುಕು ಹಾಗೂ ದುಡಿಯುವ ಕೈಗಳ ಮೇಲೆ ಇತರರ ಅವಲಂಬನೆ ಮತ್ತು ನಿರೀಕ್ಷೆಗಳ ಕಟು ಸತ್ಯವನ್ನು ಅತ್ಯಂತ ನಿಷ್ಠುರವಾಗಿ ಬಿಚ್ಚಿಡುತ್ತದೆ... ಮುಗಿಯದ ಸಾಲಗಳು, ತೀರದ ನಿರೀಕ್ಷೆಗಳು ಕಡಲ ತೀರದಲ್ಲಿ ಅಪ್ಪಳಿಸುವ ತೆರೆಗಳ ಹಾಗೆ ಮರಳಿ ಮರಳಿ ಆತನನ್ನು ಗಲ್ಫಿನತ್ತ ಅಟ್ಟುತ್ತಲೇ ಇರುತ್ತದೆ!


ದಾಕ್ಷಿಣ್ಯವೇ ನಾರಾಯಣನನ್ನು ಕೊನೆಗೂ ಕೊಂದು ಬಿಡುತ್ತದೆ... ಸಾಯುವ ವರೆಗೂ ಆತ ಯಾವುದಕ್ಕೂ "ಇಲ್ಲ" ಎನ್ನಲಾಗದೆ ಒದ್ದಾಡುತ್ತಾನೆ. ಬೇಡಿಕೆಗಳು ಮುಗಿಯುವುದೇ ಇಲ್ಲ. ಒಂದಷ್ಟು ಹೊತ್ತ ಮನೆ ಮಂದಿಯೊಂದಿಗೆ ಬದುಕಬೇಕು ಎಂಬ ಆತನ ಆಸೆ ನೆರವೇರುವುದೇ ಇಲ್ಲ... ಮೊಬೈಲು, ವಾಟ್ಸಪ್ಪು, ಟಿ.ವಿ., ಎಂಥದ್ದೂ ಇಲ್ಲದ ಕಾಲದಲ್ಲಿ ಗಲ್ಫ್ ಬಿಡಿ, ದೇಶದೊಳಗೇ ಪರವೂರಿನಲ್ಲಿ ಮನೆಯವರಿಗೋಸ್ಕರ ದುಡಿದ ಲಕ್ಷಾಂತರ ಮಂದಿ ಇಂಥಹದ್ದೇ ಸಂಕಟಗಳನ್ನು ಎಷ್ಟು ಎದುರಿಸಿದ್ದಾರೋ ಏನೋ... ದುಡಿಮೆ ಮತ್ತು ದುಡ್ಡಿನ ಆಚೆಗಿನ ಅಂತರಂಗ, ತಲ್ಲಣ, ಕುಟುಂಬ ಬದುಕಿನ ತುಡಿತ, ಮಕ್ಕಳನ್ನು ನೋಡುವ ಕಾತರ, ಒಟ್ಟಿಗೆ ಉಣ್ಣುವ ಹಂಬಲ ಎಲ್ಲವೂ ಬದುಕಿನ ಅನಿರಾರ್ಯ ಅಗತ್ಯಗಳ ಲೌಕಿಕ ಜೀವನದ ಪ್ರವಾಹದಲ್ಲಿ ಕೊಚ್ಚಿಯೇ ಹೋಗುತ್ತವೆ. ಯಾವತ್ತೋ ಒಮ್ಮೆಯ ಮನೆ ಭೇಟಿ, ಕುಟುಂಬ ಜೀವನ, ಮತ್ತು ಒಂದು ನೆಮ್ಮದಿಯ ನಿದ್ರೆ ಹಾಗೂ ಎಂದಿಗೂ ಮುಗಿಯದ ಕನಸುಗಳ ತೋರಣ ಬದುಕಿನ ಮುಸ್ಸಂಜೆ ವರೆಗೂ ಮುಂದುವರಿದು ಒಂದೊಂದು ಬದುಕು ಸಹ ಅಪೂರ್ಣ ಕನಸಿನ ಹಾಗೆ ಅಲ್ಲಲ್ಲಿಗೇ ಮುಗಿದು ಹೋಗಿದ್ದವು, ಈಗಲೂ ಹೋಗುತ್ತಲೇ ಇವೆ.

ಗಲ್ಫಿನಲ್ಲಿ, ಬಾಂಬೆಯಲ್ಲಿ, ಬೆಂಗಳೂರಿನಲ್ಲಿ, ಅಮೆರಿಕಾದಲ್ಲಿ ದುಡಿಯಬಹುದು, ದುಡ್ಡು ಸಂಪಾದಿಸಬಹುದು, ಮನೆಮಂದಿಯ ಕಷ್ಟಗಳನ್ನು ಪರಿಹಾರ ಮಾಡಬಹುದು. ಒಂದು ಸ್ಟೇಟಸ್ಸು, ಶ್ರೀಮಂತಿಕೆ, ಐಷಾರಾಮದ ಬದುಕೂ ಜೊತೆಯಾಗಬಹುದು. ಆದರೆ ಅದರಾಚೆಗಿನ ವಿಚಿತ್ರ ತಲ್ಲಣಗಳು, ವಿರಹ ಮತ್ತು ಕೈಜಾರಿ ಹೋಗುವ ಲೆಕ್ಕವಿಲ್ಲದ ದಿನಗಳು ಬ್ಯಾಲೆನ್ಸ್ ಶೀಟಿನಲ್ಲಿ ಟ್ಯಾಲಿಯೇ ಆಗದಿರುವುದು ಎಲ್ಲಿಯೂ ದಾಖಲಾಗುವುದಿಲ್ಲ! ಪುಟ್ಟ ಪುಟ್ಟ ದುಡಿಮೆಯಿಂದ ಹಣಕ್ಕೋಸ್ಕರ, ಕಷ್ಟಗಳ ಪರಿಹಾರಕ್ಕೋಸ್ಕರ ಒದ್ದಾಡುವ ಮಂದಿ ಈ ವರ್ಷ ಲಾಸ್ಟು ಈವರ್ಷ ಲಾಸ್ಟು ಅನ್ನುತ್ತಲೇ ಜೀವನದ ಬಹುಭಾಗ ಮರಳ ರಾಷ್ಟ್ರದಲ್ಲೇ ಕಳೆಯುವಂಥಾಗುವುದು ವಿಪರ್ಯಾಸ.

 

ಹೌದಲ್ವ...? ಬದುಕು ಕಂಪ್ಯೂಟರ್ ಅಲ್ಲ. ಕಂಟ್ರೋಲ್, ಆಲ್ಟ್, ಡಿಲೀಟ್ ಕೊಟ್ಟು ಬದುಕನ್ನು ರೀಸೆಟ್ ಮಾಡಲು ಅಸಾಧ್ಯ. ಮೊಬೈಲ್ ಥರ ಫ್ಯಾಕ್ಟರಿ ರಿಸೆಟ್ ಮಾಡಿ ಮತ್ತೊಮ್ಮೆ ಶುರುವಿನಿಂದ ತೊಡಗುವ ಅಂತಲೂ ಮಾಡಲು ಬರುವುದಿಲ್ಲ. ಬದುಕಿನಲ್ಲಿ ಟೇಪ್ ರೆಕಾರ್ಡರ್ ಥರ ಫಾರ್ವರ್ಡ್, ರಿವೈಂಡ್, ಪಾಸ್ ಸ್ವಿಚ್ಚುಗಳಿರುವುದಿಲ್ಲ. ಈಗ ಕಾಣುತ್ತಿರುವುದು ಮಾತ್ರ ಸತ್ಯ. ಕಳೆದುಕೊಂಡ ಹಿಂದಿನ ದಿನಗಳಿಗೆ ಹೋಗಲೂ ಅಸಾಧ್ಯ. ಕಾಣದ ನಾಳೆಯಲ್ಲಿ ಒಂದಿಷ್ಟು ಹೊತ್ತು ವಿಹರಿಸಿ ಪಿಚ್ ಟೆಸ್ಟ್ ಮಾಡಲೂ ಬರುವುದಿಲ್ಲ. ಕಳೆದು ಹೋದ ದಿನಗಳು ಹೋಗಿಯೇ ಸಿದ್ಧ. ವೃತ್ತಿ ಮತ್ತು ಪ್ರವೃತ್ತಿ ಜೊತೆಗೇ ಇದ್ದರೆ ಸಂತೋಷ. ವೃತ್ತಿಗೋಸ್ಕರ ಕಳೆದುಕೊಳ್ಳುವ ಪ್ರವೃತ್ತಿ, ನೆಮ್ಮದಿ, ಬದುಕು, ಯೌವ್ವನ, ಹುಮ್ಮಸ್ಸು, ಆರೋಗ್ಯ, ಆಯುಷ್ಯ ಯಾವುದೂ ಮತ್ತೊಮ್ಮೆ ಸಿಕ್ಕುವಂಥದ್ದಲ್ಲ. ಹಾಗಂತ ಪ್ರತಿಯೊಬ್ಬನ ಬದುಕೂ ಲೆಕ್ಕ ಹಾಕಿದ ಹಾಗೆ, ನೀಲಿ ನಕಾಶೆ ಮಾಡಿ ಹೀಗಿಯೇ ಬದುಕುತ್ತೇನೆ ಅಂತ ಬದುಕುವುದಕ್ಕೂ ಬರುವುದಿಲ್ಲ... ಕೆಲವೊಂದು ಅದೃಷ್ಟ, ಕೆಲವೊಂದು ಹಣೆಬರಹ ಮತ್ತೆ ಕೆಲವು ಸಾಧನೆ, ಸಾಹಸಕ್ಕೆ ಸಿಕ್ಕುವ ಪುರಸ್ಕಾರ... ಕಳೆದುಕೊಂಡದ್ದು ಪಡೆದುಕೊಂಡದ್ದರ ಎದುರು ಟ್ಯಾಲಿ ಆದರೆ ಖುಷಿ, ಆಗದೇ ಹೋದರೆ ಅದು ಸಸ್ಪೆನ್ಸ್ ಅಕೌಂಟಿಗೆ ಸೇರಿ ಎಲ್ಲೋ ಮೂಲೆಯಲ್ಲಿ ರಿಕವರಿ ಆಗದ ಸಾಲದ ಹಾಗೆ ಕಾಡುತ್ತಲೇ ಇರುತ್ತದೆ, ಇದ್ದೀತು.

ಅದು ಬಿಟ್ಟು ಸಾಗರದಾಚೆಗಿನ ಬದುಕು, ದುಡಿಮೆ ಶೋಕಿಗೆ, ಐಷಾರಾಮಕ್ಕೆ, ಅಹಂಕಾರಕ್ಕೆ, ದೌಲತ್ತಿಗೆ ಅಂತೆಲ್ಲ ಬರಿದೇ ಸರ್ಟಿಫಿಕೇಟ್ ಕೊಡುತ್ತಾ ಹೋದರೆ, ದುಡಿಮೆಗೆ ತೆರಳಿದ ಪ್ರತಿ ಮನಸ್ಸುಗಳ ಹಿಂದಿನ, ಮನೆಯವರ ಕಷ್ಟಗಳು, ನಿರೀಕ್ಷೆಗಳು, ಅನಿವಾರ್ಯತೆಗಳ ಕೂಡಿಸಿ-ಕಳೆಯುವಿಕೆಗೆ ಕೆಲವೊಮ್ಮೆ ಇಲ್ಲಿ ಉತ್ತರವೇ ಸಿಕ್ಕದೆ ಹತಾಶರಾದ ಹಾಗಾದೀತು.

ಕಾಣದ ಬದುಕುಗಳ ಬಗ್ಗೆ, ಸೆಂಟು, ಮಿರಮಿರ ಮಿಂಚುವ ಉಡುಪಗಳ ಹಿಂದೆ ಕಾಣಿಸದ ಬೆವರಿನ ಕಲೆಗಳ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ಒಂದು ಸಲ pathemari  ಸಿನಿಮಾ ನೋಡಬೇಕು!

ಪಥೇಮಾರಿ ಸಿನಿಮಾದ ಹಾಗೆ... ಸಪ್ತಸಾಗರದಾಚೆಗೆಲ್ಲೋ.. ಕನವರಿಸುವ, ಕಾತರಿಸುವ, ನಿಟ್ಟುಸಿರು ಬಿಡುವ ಮನಸ್ಸುಗಳ ತಲ್ಲಣಗಳ ತರಂಗ ಸಮುದ್ರ ದಾಟಿ ಬಾರದೆ ಹೆಪ್ಪುಗಟ್ಟಿ ಬಿಕ್ಕಳಿಸದ ಹಾಗೆ ಕಾಡುತ್ತಲೇ ಇರುತ್ತದೆ.

-ಕೃಷ್ಣಮೋಹನ ತಲೆಂಗಳ (30.11.2022).