ತೋಚಿದ್ದು...ಗೀಚಿದ್ದು...

 ಮನಸು ಕಾಣ್ತದೆಯಾ?
.........................................

ಕಂಡದ್ದನ್ನೇ ಹೇಳಿದರೆ
ಅನಿಸಿದ್ದನ್ನೇ ಉಲಿದರೆ
ದಾಕ್ಷಿಣ್ಯ, ಮುಜುಗರ ಅಳಿದರೆ
ಜಗವಿದ್ದೀತೆ ಹೀಗೆ ನಳನಳಿಸಿ!

ನವಿರು ಸೌಜನ್ಯ, ತುಸು ಗೌರವ
ಕಂಡಾಗ ಕಿರುನಗು, ಬಿಗುಮಾನ
ಜಾಸ್ತಿಯೇ ಮರ್ಯಾದೆ, ಸ್ಥಾನಮಾನ..
ಅಂತಿಮವಾಗಿ ಒಳ್ಳೆಯೋನೆಂಬ ಬಿರುದು!

ಅಂದಿದ್ದೇ ಹೇಳ್ತಾರ, ಹೇಳಿದ್ದೇ ಮಾಡ್ತಾರ
ಕಂಡೋರ್ಯಾರು, ಹಿಂದೆ ಹೋಗೋರ್ಯಾರು
ಸ್ವಯಂ ದೃಢೀಕೃತ ಪ್ರಕರಣಗಳೇ ಎಲ್ಲ
ಕಂಡದ್ದು, ಕೇಳಿದವೇ ಪ್ರಮಾಣಪತ್ರಗಳು!

ಮನಸು ಸ್ಕ್ಯಾನ್ ಮಾಡೋ ಯಂತ್ರ ಇದ್ದಿದ್ರೆ
ಕನಸು ಕಸಿ ಮಾಡುವ ತಂತ್ರ ಬಂದಿದ್ರೆ
ಕಸಿವಿಸಿ, ಬೇಸರ ಡಿಲೀಟ್ ಮಾಡೋ ಹಾಗಿದ್ದಿದ್ರೆ
ಮನಸಾಲಜಿಗಳ ಕೆಲಸ ಸ್ವಲ್ಪ ಕಡಿಮೆ ಆಗ್ತಿತ್ತೇನೋ!

ಹೇಳಿದ್ದೇ ನಂಬ್ತೀವಿ, ಕಂಡಿದ್ದೇ ಒಪ್ತೀವಿ
ಮನಸು ಎಕ್ಸರೇ ಪರಿಧಿಗೆ ಸಿಗೋದಿಲ್ಲ
ಇಸಿಜಿಗೆ ಮನಸ ಬಡಿತ ಕಾಣ್ಸೋದಿಲ್ಲ
ಬಯಾಪ್ಸಿಗೆ ಮಾದರಿಯೂ ಗಿಟ್ಟೋದಿಲ್ಲ!

ಕಂಟ್ರೋಲ್ ಆಲ್ಟ್ ಡಿಲೀಟ್ ಹಂಗಿಲ್ಲ
ಸ್ವಿಚಾಫ್ ಆದರೆ ಮತ್ತೆ ರಿಸ್ಟಾರ್ಟ್ ಪ್ರಶ್ನೆ ಬರೋದೇ ಇಲ್ಲ
ಮನಸು ಯಂತ್ರವಲ್ಲ, ಸಾವಯವದ ಬಟ್ಟಲು
ಹೇಳಿದರೆ, ಕೇಳಿದರೆ,ತುಸು ಗಮನಿಸಿದರೆ ಕಾಣೋದು!

 --------------

ಸತ್ಯ ಅಡಗಿದೆ!


ಕುರುಡರ ಕೈಗೆ ಸಿಕ್ಕ ಆನೆಯ ಹಾಗೆ...
ಒಬ್ಬನಿಗೆ ಕಂಬ, ಇನ್ನೊಬ್ಬನಿಗೆ ಬಂಡೆ
ಮಗದೊಮ್ಮೆಗೆ ಗೋಡೆ,
ಕೊನೆಗೂ ತಿಳಿಯದೇ ಹೋಯಿತು,
ಸತ್ಯ ಅಡಗಿದೆ...

ಅವರವ ಭಾವಕ್ಕೆ, ಮೂಗಿನ ನೇರಕ್ಕೆ
ಬಾಯಿ ಚಪಲಕ್ಕೆ
ವಾರೆ ಕಣ್ಣಿನ ದೃಷ್ಟಿಗೆ, ಹಾಕಿದ ಕನ್ನಡಕದ ಬಣ್ಣದಡಿ
ಸತ್ಯ ಅಡಗಿದೆ...

ಸತ್ಯ ಬಗೆಯಲು ಪರೀಕ್ಷೆ,
ಗಡಿಬಿಡಿಯ ಓಡಾಟ, ಗಡುವಿನ ತನಕ ಆತಂಕ
ಫೇಲಾದರೆ ಮರು ಎಣಿಕೆ, ಉಸಿರು ಬಿಡಿಹಿಡಿಯುವ ಹಾಗೆ
ಸತ್ಯ ಅಡಗಿದೆ

ಆತ ಹೇಳಿದ್ದೂ ಸತ್ಯ, ಈಚಿನ ದನಿಯೂ ದಿಟ
ನಾನು ಹೇಳಿದ್ದೇ ನನಗೆ ಸರಿ,
ಅರಿವಿಗೆ ಗೊಂದಲ ಹುಟ್ಟಿಸಿ, ದಿಟ್ಟಿಸಿ ನೋಡುತ್ತಲೇ
ಸತ್ಯ ಅಡಗಿದೆ

ಸತ್ತ ದೇಹದ ಹಾಗೆ, ಮತ್ತೆ ಚೇತನ ತುಂಬದೆ
ವಾಸ್ತವ ಬಗೆಯದೆ, ಅರಿಯದೆ, ಚಿಂತಿಸದೆ
ನನ್ನ ಬೊಗಸೆಗೆ ಸಿಕ್ಕಿದ್ದೇ ಪಂಚಾಮೃತ ಎಂಬಲ್ಲಿಗೆ
ಸತ್ಯ ಅಡಗಿದೆ

ಅಷ್ಟಕ್ಕೂ ನಿಜವೆಂಬುದೆಲ್ಲಿದೆ, ಆಡುವ ಬಾಯಿಗೆ
ಮಾಡುವ ವಾದಕ್ಕೆ, ತೋರುವ ಸಾಕ್ಷಿಗೆ
ತೋರಿಕೆ, ಹಾರಿಕೆ, ಸೋರಿಕೆಯ ಚಾದರದ
ಅಡಿಗಿದೆ ಸತ್ಯ!!


----------------


ಜಾರು ಬಂಡೆ


ಆಗಸದೆತ್ತರದ ಬೆಟ್ಟ
ಶೃಂಗ ಕಂಡರೂ ಬಲುದೂರ,
ಕೈಗೆಟಕುವ ಮರೀಚಿಕೆಯ ಭ್ರಮೆ
ಮೆಟ್ಟಿಲುಗಳ ದಾಟಿದರೆ ಇಳಿಜಾರ ಏರು

ಅಲ್ಲಲ್ಲಿ ಜಾರುತ್ತಿದೆ, ಮಂಜು ಸುರಿಯುತ್ತಿದೆ
ನಾಲ್ಕು ಹೆಜ್ಜೆ ಏರಿದ ಮೇಲೆ ಮೂರು ಅಡಿ ಹಿಂದಕ್ಕೆ
ಕಾಲಿಟ್ಟಲ್ಲೆಲ್ಲ ಹೂಳುವ ಹೂಳು,
ಪ್ರಕೃತಿ ರಮಣೀಯವಾದರೂ ದಾರಿ ತಪ್ಪುವ ಭಯ

ಏರುವುದಷ್ಟೇ ಅಲ್ಲ, ಬೆನ್ನ ಚೀಲದ ಭಾರದ ಜೊತೆಗೆ
ಆಗಾಗ ಕಿತ್ತು ಹೋಗುವ ಚಪ್ಪಲಿಯ ಹಾಗೆ
ಕೈಕೊಡುವ ಕಾಲು, ಪರಚುವ ಮುಳ್ಳು
ಸರಿ ಮಾಡುವಷ್ಟರಲ್ಲಿ, ಮುಂದೆ ಸಾಗಿದವರಿಗೆ ಲೆಕ್ಕವಿಲ್ಲ

ಸಾವರಿಸಿ ಮತ್ತೆ ನಡೆಯಹೊರಟಾಗ ಸಿಡಿಲು
ನೂಕುವಂತಹ ಗಾಳಿ, ತತ್ತರಿಸಿ ಬಿಟ್ಟ ಮಳೆ ನಡುವೆ
ಸುತ್ತ ಮಬ್ಬ ಮಬ್ಬು, ಇದ್ದ ದಾರಿಗೂ ಮಂಪರು
ಮಂಜು ಸರಿದಾಗ ನೋಡುವುದೇನು...ಏರುವುದಕ್ಕೆ ತುಂಬಾ ಇದೆ

ನೂರಾರು ಮಂದಿ ಏರುತ್ತಲೇ ಇದ್ದಾರೆ, ಇಳಿವವರು ಕಾಣುತ್ತಿಲ್ಲ
ವೇಗ ಹೆಚ್ಚಲೇ ಬೇಕು, ಜಾರಿದರೂ ಕೂರಬಾರದು
ಹೋಗದಿದ್ದರೆ ಬಾಕಿಯಾಗುವ ಭಯ, ಆತಂಕ
ಕಳೆಗಿಳಿಯುವ ಆಯ್ಕೆಯಿಲ್ಲ, ಗಮ್ಯವೇ ಸ್ಫೂರ್ತಿ

ಜಾರದೇ ಏರುವವರಿಲ್ಲ, ವೇಗದಲ್ಲಿ ಮಾತ್ರ ವ್ಯತ್ಯಾಸ
ನಿಂತು ನೋಡುತ್ತಲಿದ್ದರೆ ಗಮ್ಯಕ್ಕಿರುವ ದೂರ ಜಾಸ್ತಿ
ಏನು ಮಾಡುವುದು ಜಾರುವುದೇ ಸಮಸ್ಯೆ
ಕಾಲೂರಲು ಆಧಾರ, ಧೈರ್ಯ ಸಿಕ್ಕರೆ ಸಾಕು

ಬಂಡೆ ಜಾರುವುದು ಸಹಜ, ಆಧಾರ ಬಿಗುವಿರಲಿ
ಮಣ್ಣು ಜೌಗು ಗುಣ, ಎಚ್ಚರದ ನಡಿಗೆ ಬರಲಿ
ದೂರದ ಚಿಂತೆ ಬೇಡ, ಸಾಗಿದ ದಾರಿಯ ಗಟ್ಟಿಗತನ ನೆನಪಿರಲಿ
ವೇಗದ ತಗ್ಗಿದರೂ ಗುರಿ ನಿರಂತರ, ತಪ್ಪಿಸಲಸಾಧ್ಯ.


----------------------