ಮಾತು ಸೋತ ಮೇಲೆ...

ಮೌನ ಮುರಿಯುವ ಮಾತು
ಭಾವ ದೀಪ್ತಿಯ ಹಚ್ಚಲಾಗದೆ
ಮಾತು ಮುರಿದು ಮೌನವಾಗುವಲ್ಲಿಗೆ...
ಮಾತಿಗೂ ಭಾವಕ್ಕೆ ತಾಳಮೇಳ,
ಚೈತನ್ಯ ಸಾಲದೆ ಹೇಳಿದ್ದು
ಸರಿಯಾಗಿ ಕೇಳದೆ
ಕೇಳಿದ್ದೂ ಮನನವಾಗದೆ...
ಮಾತು ಸೋತು ಬಳಲಿ
ಮೂಲೆಯಲ್ಲಿ ಕೂತು
ಅರ್ಥ ಸಿಕ್ಕದೆ ಮತ್ತೆ ಮೌನದ್ದೇ ಮಾತು



ಅರ್ಥಕೋಶ ಹಳಿತಪ್ಪಿಸಿ
ಹೇಳಿದ್ದೆಲ್ಲ ಅಪಾರ್ಥವಾಗಿ
ಅಪಾರ ಅರ್ಥಗಳಿಗೆ
ವಿಮರ್ಶೆ ಬರೆದು, ಪದಗಳ
ಹಿಂಡಿ ಹಿಪ್ಪೆ ಮಾಡಿ
ಸೋಸಿ, ಭೂತಕನ್ನಡಿ ಹಿಡಿದು
ಹೇಳಿದ್ದಕ್ಕೂ ಕೇಳಿದ್ದಕ್ಕೂ
ಹೊಸದೊಂದು ಅರ್ಥ ಬರೆದು
ಸಂಭಾಷಣೆ ಅನರ್ಥವಾದಲ್ಲಿಗೆ
ಮಾತು ಬರಿದಾಗಿ, ಸೋತು ಏಕಾಂಗಿಯಾಯ್ತು


ತಿದ್ದುಪಡಿ ತಂದರೂ
ಆಡಿದ ಮಾತಿನ ಧಾಟಿ
ಸದ್ದು, ಶೃತಿ, ಲಯ, ತಾಳದ
ಛಾಪು ಮಾಸಿ ಹೋಗದು...
ತಪ್ಪಾಗಬಹುದಾದ ಮಾತಿಗೂ ಮೊದಲು
ಯೋಚನೆ, ಒಂದಿಷ್ಟು ಚಿಂತನೆ
ದೂರದೃಷ್ಟಿ, ಮಥಿಸುವ ತಾಳ್ಮೆ
ಇದ್ದರೆ ಸಾಕು...
ಒಡೆದ ಕನ್ನಡಿಯಾಗುವ ಮೊದಲು
ಜತನದಿಂದ ಮೌನದೊಳಗೆ ಹುದಿಗಿಡಬಹುದೇನೋ...


ಸಮರ್ಥನೆಗೆ ತ್ರಾಣವಿಲ್ಲದಿದ್ದರೆ
ತಿದ್ದುಪಡಿಗೆ ಪದಗಳು ಬರಿದಾದರೆ
ಯೋಚನೆಗೆ ಮಂಕು ಕವಿದರೆ
ನಾಲಗೆಯ ಲಗಾಮು ಹರಿದರೆ
ಮಂಥನಕ್ಕೆ ಮೌಢ್ಯ ಕವಿದರೆ
ಕಟ್ಟಿ ಹಾಕುವ ಮಾತುಗಳನ್ನು
ಸುಟ್ಟು ಬಿಡುವ ಯೋಚನೆಗಳನ್ನು
ಮೌನದಲ್ಲಿ ಕೂಡಿಟ್ಟು
ದಿನಗಟ್ಟಲೆ ಮಥಿಸಿ
ಕುದಿಸಿ, ಆರಿಸಿ ಕುಡಿದರೆ ಆಯಿತು...!
-KM

No comments: