ಹೇಳದೇ ಕೇಳದೇ ಕಳಚುವ ಚಕ್ರಗಳು...!

ಹೇಳಿ ಕೇಳಿ ವಾಹನದ ಟಯರುಗಳು ಪಂಕ್ಚರ್ ಆಗುವುದಿಲ್ಲ. ಬದುಕಿನಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸವಾಲುಗಳ ಹಾಗೆ. ಪಂಕ್ಚರ್ ಆದ ತಕ್ಷಣ ಗಾಡಿ ವಾಲುತ್ತದೆ, ವೇಗ ಇಳಿಯುತ್ತದೆ, ಮುಂದುವರಿಯುವ ಕಷ್ಟ ತಕ್ಷಣಕ್ಕೆ ಗೊತ್ತಾಗುತ್ತದೆ. ಆ ಕ್ಷಣಕ್ಕೆ ಸ್ಟೆಪ್ನಿ ಬಳಸಿ ಬೇರೆ ಚಕ್ರ ಹಾಕುವುದು ಅಥವಾ ಟ್ಯೂಬ್ ತೆಗೆದು ಪ್ಯಾಚಪ್ ಮಾಡಿಸಿ ಮುಂದೆ ಹೋಗುವುದು ಎರಡೇ ದಾರಿಗಳು ಚಾಲಕನ ಅಥವಾ ಸವಾರನ ಎದುರಿಗೆ ಇರುವುದು. ಹೊರತು, ಯಾವ ಪೂರ್ವಜನ್ಮದ ಫಲವಾಗಿ ಗಾಡಿ ಕೈಕೊಟ್ಟಿತು ಎಂಬ ಜಿಜ್ನಾಸೆಯಲ್ಲಿ ಮುಳುಗುವುದರಿಂದ ಯಾವ ಪ್ರಯೋಜನವೂ ಇಲ್ಲ... ಸಮಸ್ಯೆಬಂದಿದೆ, ಅದಕ್ಕೇನು ಪರಿಹಾರ, ಎಷ್ಟು ತ್ವರಿತವಾಗಿ, ಪರಿಣಾಮಕಾರಿಯಾಗಿ ಹೊರಬರಹುದು ಎಂದು ತಾರ್ಕಿಕವಾಗಿ ಯೋಚಿಸಲು ಸಾಧ್ಯವಾದರೆ, ಚಾಲಕ ಚಾಲಾಕಿಯಿದ್ದಾನೆ, ವಸ್ತುನಿಷ್ಠನಿದ್ದಾನೆ ಅಂದುಕೊಳ್ಳಬಹುದು...!
ಈ ಮೂಲಕ ಟಯರ್ ಪಂಕ್ಚರ್ ಆಗುವುದು ಕೂಡಾ ಒಂದು ಪಾಠ ಕಲಿಸುತ್ತದೆ ಅಲ್ಲವೇ...

ಹೌದು
ಜೀವನ ಬಂಡಿಯಲ್ಲಿ ಎದುರಾಗುವ ಕಷ್ಟ, ನಷ್ಟ, ಅನಾರೋಗ್ಯ, ಕಿರಿಕಿರಿ, ಅಪವಾದಗಳು, ಹೊರಬರಲಾಗದೇ, ಇರಲೂ ಆಗದೆ, ಹೇಳಿಕೊಳ್ಳಲು ಆಗದಿರುವ ಸಣ್ಣಪುಟ್ಟ ಅಸಹಾಯಕತೆಗಳು... ಇವೆಲ್ಲ ಯೋಜನಾಬದ್ಧವಾಗಿ ನಮ್ಮ ಅನುಮತಿ ತೆಗೆದುಕೊಂಡು ಬಂದು ನಮ್ಮನ್ನು ಕಾಡುವುದಲ್ಲ. ಬೇಕಾದಾಗ, ಬೇಕಾದಲ್ಲಿ ಬಂದು ನಮ್ಮ ಸತ್ವಪರೀಕ್ಷೆ ಮಾಡುತ್ತವೆ. ಎಲ್ಲೆಂದರಲ್ಲಿ ಪಂಕ್ಚರ್ ಆಗಬಲ್ಲ ವಾಹನದ ಚಕ್ರಗಳ ಹಾಗೆ!

ಸಮತಟ್ಟಾದ ಜಾಗ ನೋಡಿ, ಪಾರ್ಕಿಂಗ್ ಅವಕಾಶ ಇದೆಯೇ ಎಂದು ನೋಡಿ, ಸ್ಟೆಪ್ನಿ ಸರಿ ಇದೇಯಾ, ಸಾಕಷ್ಟು ಸೂರ್ಯನ ಬೆಳಕಿದೆಯೇ, ಈಗ ಹಗಲಾ, ರಾತ್ರಿಯಾ, ಪಕ್ಕದಲ್ಲಿ ಪಂಕ್ಚರ್ ಶಾಪ್ ಇದೆಯಾ ಎಂದೆಲ್ಲಾ ಲೆಕ್ಕಾಚಾರ ಹಾಕಿ ಪಂಕ್ಚರ್ ಆಗುವುದಲ್ಲ. ಯಾವತ್ತಾದರೂ ಗಾಡಿ ಪಂಕ್ಚರ್ ಆಗಬಹುದು ಎಂಬ ಪೂರ್ವಾಲೋಚನೆ ಇದ್ದವರು, ಈಗಾಗಲೇ ಪಂಕ್ಚರ್ ಹಾಕಿಸಿ ಅನುಭವ ಇದ್ದವರೂ ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕೆಂಬ ಸಿದ್ಧತೆಯಲ್ಲಿರುತ್ತಾರೆ. ಅಧೀರರಾಗುವುದಿಲ್ಲ. ನನ್ನ ಗಾಡಿ ಸರಾಗವಾಗಿ ಹೋಗುತ್ತದೆ, ಪಂಕ್ಚರೇ ಆಗಲಾರದು ಎಂಬ ಭ್ರಮೆ ಇರುವವರು ಕೈಕಾಲು ಬಿಡುತ್ತಾರೆ.
ಯಾಕೆಂದರೆ ಜೇಬಲ್ಲಿ ಎಷ್ಟೇ ದುಡ್ಡಿದ್ದರೂ, ನೀವೆಷ್ಟೇ ದೊಡ್ಡ ಕುಳವೇ ಆದರೂ ನಿರ್ಜನ ಜಾಗದಲ್ಲಿ, ಅಕಾಲದಲ್ಲಿ ಟಯರು ಪಂಕ್ಚರ್ ಆದರೆ ಅದನ್ನು ರಿಪೇರಿ ಮಾಡದೆ ಮುಂದೆ ಹೋಗಲು ಸಾಧ್ಯವೇ ಇಲ್ಲ. ಕಷ್ಟದಿಂದ ಹೊರಬರಲು ದುಡ್ಡು ಮತ್ತು ಪ್ರಭಾವ ಮಾತ್ರ ಸಹಾಯ ಮಾಡುವುದಲ್ಲ. ಅವಕಾಶ, ಅದೃಷ್ಟ, ಧೈರ್ಯಗಳೂ ಸಹಾಯ ಮಾಡುತ್ತವೆ.

ಹೇಳದೇ ಕೇಳದೇ ಪಂಕ್ಚರ್ ಆಗುವ ವಿಚಾರಗಳು ಬದುಕಿನಲ್ಲೂ ನಡೆಯುತ್ತವೆ. ಆಗೆಲ್ಲಾ ಅಳುತ್ತಾ ಕೂರುವುದರಿಂದ, ಕಾರಣಗಳನ್ನು ಜಿಜ್ನಾಸೆಗೊಳಪಡಿಸಿ ವೈಚಾರಿಕರಾಗುವುದರಿಂದ ಸಮಸ್ಯೆಯಿಂದ ಹೊರಬರಲು ಸಾಧ್ಯವೇ ಇಲ್ಲ. ಬಂದಿರುವ ಸಮಸ್ಯೆಯಿಂದ ಹೊರ ಬರಲು ದಾರಿಯೇನೆಂಬುದು ಮಾತ್ರ ಎದುರಿಗಿರುವ ದಾರಿ. 

ಅತ್ತರೂ, ಕಳವಳಿಸಿದರೂ, ಭೂತಕ್ಕೋಸ್ಕರ ಮರುಗಿದರೂ, ನಿರ್ಲಕ್ಷ್ಯಕ್ಕೆ ಪಶ್ಚಾತ್ತಾಪಪಟ್ಟರೂ ಬಂದಿರುವ ಸಮಸ್ಯೆಯನ್ನು ದಾಟಿ ಬರಲು ಅವು ಯಾವುವೂ ಸಹಾಯ ಮಾಡುವುದಿಲ್ಲ. ಪಂಕ್ಚರ್ ಆಗಿರುವ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ. ಚಕ್ರ ಕೈಕೊಟ್ಟಿದೆ ಎಂಬುದು ವಾಸ್ತವಿಕ ಸತ್ಯ. ಕಣ್ಣೆದುರಿಗಿದೆ. ಸಮಸ್ಯೆ ಬಂದಾಗಿದೆ. ನಾನು ಮೊದಲೇ ಬ್ಲೋ ಚೆಕ್ ಮಾಡಿಸಬೇಕಿತ್ತು, ಸ್ಟೆಪ್ನಿ ಬೇಕಿತ್ತು... ಕಲ್ಲು ದಾರಿಯಲ್ಲಿ ಹೋಗಬಾರದಿತ್ತು ಎಂಬಿತ್ಯಾದಿ ಪೋಸ್ಟ್ ಮಾರ್ಟಂ ವಿಮರ್ಶೆಗಳಿಂದ ಹಾಳಾದ ಚಕ್ರ ಸಹಿಯಾಗುತ್ತದೆಯೇ... ಇಲ್ಲವಲ್ಲ.

ವಿರಾಗಿಯಾದರೂ, ವಿಷಾದಯೋಗ ಹೊಂದಿದರೂ, ಅವರಿವರ ಸಲಹೆ ಪಡೆದರೂ ಚಕ್ರ ಸರಿಯಾಗುತ್ತದೆಯೇ?  ಇಲ್ಲ.
ಚಕ್ರ ಬದಲಿಸುವುದೋ, ಪ್ಯಾಚಪ್ ಮಾಡುವುದೋ ಎರಡೇ ದಾರಿ. ಅದು ಸ್ಪಷ್ಟ. ಆದರೆ, ಗೊಂದಲಕ್ಕೊಳಗಾದ ಮನಸ್ಸಿಗೆ, ದುಖಕ್ಕೆ ಸಿಲುಕಿದ ಹೃದಯಕ್ಕೆ ಆ ಕ್ಷಣಕ್ಕೆ ಆಪರಿಹಾರವೂ ಕಾಣಿಸುವುದಿಲ್ಲ ಕೆಲವೊಮ್ಮೆ.
ಕಷ್ಟ ಏಕಾಏಕಿ ಎದುರುದಾಗ ಮನಸ್ಸು ಅದನ್ನು ಸ್ವೀಕರಿಸಲು ಎಷ್ಟೋ ಸಲ ಸಿದ್ಧವಾಗಿರುವುದಿಲ್ಲ. ಯಾಕೆಂದರೆ ಅದು ಅನಿರೀಕ್ಷಿತ. ಬರಬಹುದಾದ ಎಲ್ಲಾ ಕಷ್ಟಗಳನ್ನೂ ಎದುರಿಸುವಷ್ಟು ಪೂರ್ವತಯಾರಿ ಮನಸ್ಸಿಗೂ ಇರುವುದಿಲ್ಲ, ಅನುಭವಕ್ಕೂ ಅದು ನಿಲುಕಿರುವುದಿಲ್ಲ. ಆದರೆ ಆ ಕ್ಷಣದ ಆತಂಕ ತುಸು ಕರಗಿದ ಬಳಿಕ ಮನಸ್ಸು ಪ್ರಾಕ್ಟಿಕಲ್ ಆಗಿ ಯೋಚಿಸತೊಡಗುತ್ತದೆ. ಸಮಸ್ಯೆಯ ವಿಶ್ಲೇಷಣೆಗಿಳಿಯುತ್ತದೆ. ಬಂದಿರುವ ಕಷ್ಟಕ್ಕೆ ಮನಸ್ಸು ನಿಧಾನವಾಗಿ ಹೊಂದಾಣಿಕೆಯಾಗುತ್ತದೆ. ಕ್ರಮೇಣ ಕಷ್ಟವನ್ನು ಮನಸ್ಸು ಸ್ವೀಕರಿಸಿರುತ್ತದೆ. ನಂತರ ಅದರಿಂದ ಹೊರಬರುವ ದಾರಿ ಮಸುಕು ಮಸುಕಾಗಿ ಕಾಣಿಸಲೂ ಬಹುದು. ಕೊನೆಗೊಮ್ಮೆ ಪಂಕ್ಚರ್ ಆದ ಚಕ್ರ ಬದಲಿಸಿ ಗಾಡಿ ಹೊರಟ ಬಳಿಕ, ಪಂಕ್ಚರ್ ಆದ ಕ್ಷಣದಲ್ಲಿ ಕಾಡಿದ ಆತಂಕದ ಮುಕ್ಕಾಲು ಭಾಗವೂ ಕರಗಿಹೋಗಿರುತ್ತದೆ.... ಚಕ್ರ ಕಳಚಿದ ಸ್ಥಿತಿಯಲ್ಲಿ ಕಾಡುವ ಆತಂಕ ಹಾಗೂ ಸರಾಗವಾಗಿ ಸಾಗುವಾಗ ಇರುವ ನಿರಾಳತೆಯ ನಡುವಿನ ಸಮತೋಲನವನ್ನು ಕಾಯ್ದುಕೊಂಡು ಬಂದು ಆಗಲೂ ಈಗಲೂ ಅಧೀರರಾಗದೆ ಬಾಳಬಹುದಾದರೆ ಅದೊಂದು ದೊಡ್ಡ ಭಾವನಾತ್ಮಕ ದಿಗ್ವಿಜಯವೇ ಸರಿ.

No comments: