ದುರ್ಬಲ ತರಂಗಾಂತರ...ಅವಸರದ ಬದುಕು

ಮಾತು ಬಡವಾದಲ್ಲಿ
ಭಾವವೂ ದುರ್ಬಲ
ತಾಳವೂ, ರಾಗವೂ ಶೃತಿ ತಪ್ಪಿದಲ್ಲಿ
ಧಾಟಿಗೂ ಸಂಚಕಾರ
ಹದತಪ್ಪಿ ಉಸುರಿದರೆ
ಮಾತು ಮತಾಂತರ!
ಸ್ಪಷ್ಟೀಕರಣ, ಸಮರ್ಥನೆಯ
ರಾಜಿ ಸಂಧಾನ
ಅಪ್ರಸ್ತುತ ಭಾವ ಸಂಚಲನದ
ಪ್ರಮಾದಕ್ಕೆ ಮೌನದ ಪರದೆ...


ಉದ್ವೇಗಕ್ಕೂ ಅಸಹನೆಗೂ
ಮಾತೇ ಅನಾರೋಗ್ಯ
ಮೌನವೇ ಔಷಧೋಪಚಾರ
ಚಿಂತನೆಯೇ ಯೋಗಾಭ್ಯಾಸ
ಧ್ಯಾನಸ್ಥ ಮನಸ್ಸಿಗೆ
ನಿರ್ಲಿಪ್ತತೆಯ ಬೇಲಿ
ಹದತಪ್ಪುವ ಪದಪುಂಜಗಳ
ಹರಿಯುವಿಕೆಗೆ
ನಿರ್ಭಾವುಕತೆಯ ಅಣೆಕಟ್ಟು
ನಿಷ್ಠುರ, ಕಠೋರತೆಯ ಹಣೆಪಟ್ಟಿ!


ಒಂಟಿ ಕೂಗಿಗೆ,
ಬಡವಾಗುವ ಮಾತಿಗೆ
ಸಂವಹನಕ್ಕೆ ತ್ರಾಣವಿಲ್ಲದ
ಭಾಷೆಗೆ, ಸಂಭಾಷಣೆಗೆ
ಮಾಪನವಿಲ್ಲ...ಅಸಹಾಯಕ ಮೌನ
ಇಸಿಜಿ, ಎಕ್ಸರೇಗೆ ನಿಲುಕುವುದಿಲ್ಲ,
ವೈಫೈ ವ್ಯಾಪ್ತಿಗೂ ಬರುವುದಿಲ್ಲ..!.
ಪ್ರತಿಕ್ರಿಯೆಗೂ ಪುರೊಸೊತ್ತಿಲ್ಲದೆ
ಆಲಿಸಲು ತಾಳ್ಮೆಯಿಲ್ಲದೆ
ಬರಡಾಗುವ ಅವಸರದ ಬದುಕು...


ಲೆಕ್ಕಕ್ಕೆ ಸಿಕ್ಕದ ಮೌನವ
ಇಡಿಯಾಗಿ ನುಂಗಿ
ವಿಷಕಂಠರಾಗಿ...
ವೈಯಕ್ತಿಕ ಚಿಂತೆಗಳ
ವಿಲೇಯಾಗದ ತ್ಯಾಜ್ಯ
ಅಲ್ಲಿಲ್ಲಿ ಚೆಲ್ಲಿ,
ಲೋಕಕಂಟವಾಗದಿರಲಿ ಜಾಗ್ರತೆ
ಅರ್ಥಮಾಡಿಸಲಾಗದ್ದಕ್ಕೆ
ಮಾತು ಲೇಪಿಸುವ ಹಂಗು ತೊರೆದು
ಅಂತರಾಳಕ್ಕೆ ತಳ್ಳಿ... ಬದುಕಲು ಕಲಿಯಿರಿ!

No comments: