ರೀಲ್ ಕ್ಯಾಮೆರಾದಿಂದ ಡಿಜಿಟಲ್ ಯುಗದ ವರೆಗೆ... 2ಜಿಯಿಂದ 5ಜಿ ವರೆಗೆ ಬದಲಾದ 15 ವರ್ಷಗಳು....!

ಈಗಲೂ ಬೆಳಗ್ಗೆ 10,11 ಗಂಟೆಗೆಲ್ಲ ಪೇಟೆಯಲ್ಲಿ ಪರಿಚಯದವರು ಸಿಕ್ಕಿದರೆ ಕೇಳುತ್ತಾರೆ.. ‘ದಾನೆ ಇನಿ ರಜೆಯಾ’ (ಏನು ಇಂದು ರಜೆಯಾ) ಅಂತ. ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಸೆಕೆಂಡ್ ಶಿಫ್ಟು, ನೈಟ್ ಶಿಫ್ಟು ಸುಲಭದಲ್ಲಿ ಯಾರಿಗೂ ಅರ್ಥವಾಗುವುದಿಲ್ಲ. 10ರಿಂದ5ರ ತನಕದ ಕೆಲಸ ಅವಧಿಯನ್ನೇ ಗಟ್ಟಿ ಮಾಡಿಕೊಳ್ಳುವ ಮಂದಿ ಹಗಲು ಹೊರಗಡೆ ಸಿಕ್ಕಿದವನಿಗೆ ರಜೆಯೇ ಅಂತ ತೀರ್ಮಾನಿಸುತ್ತಾರೆ. ನಮ್ಮ ಕೆಲಸದ ಸಮಯವನ್ನು ವಿವರಿಸಿ ಹೇಳುವಷ್ಟರಲ್ಲಿ ಸುಸ್ತಾಗಿರುತ್ತದೆ. ಮತ್ತೊಮ್ಮೆ ಅಷ್ಟೊತ್ತಿಗೆ ಸಿಕ್ಕರೆ ಅದೇ ಪ್ರಶ್ನೆ, ಅದೇ ಉತ್ತರ!
ಭಾನುವಾರ ರಜೆ ಯಾಕಿಲ್ಲ? ಎಂಬ ಪ್ರಶ್ನೆಗೂ ಅದೇ ಉತ್ತರ. ಸೋಮವಾರ ಬೆಳಗ್ಗೆದ್ದು ಪೇಪರ್ ಓದಬೇಕಾದರೆ ಭಾನುವಾರ ನಾವು ಪುಟ ಕಟ್ಟಿ ಕೊಡಲೇ ಬೇಕು ತಾನೆ? ಅಂತ. ಹೌದು...




ಇಂತಹ ಪೇಪರಿನ ಕೆಲಸಕ್ಕೆ ಸೇರಿ ನೋಡ ನೋಡುತ್ತಿದ್ದಂತೆ 15 ವರ್ಷಗಳು (from 07/10/2002) ಪೂರ್ತಿಯಾದವು. ಇದೊಂದು ಐತಿಹಾಸಿಕ ದಾಖಲೆಯಲ್ಲ, ಮಹತ್ಸಾಧನೆಯಂತೂ ಅಲ್ಲವೇ ಅಲ್ಲವೇ ಅಲ್ಲ. ದಶಕಗಳ ಕಾಲ ಪತ್ರಿಕೆಗಳಲ್ಲೇ ಕಳೆದು, ದೊಡ್ಡದೊಂದು ಬೌದ್ಧಿಕ ಆಸ್ತಿಯನ್ನು ನಮ್ಮ ಪಾಲಿಗೆ ಕೊಟ್ಟು ಹೋದ ಹಿರಿಯರ ನಡುವೆ ನನ್ನದೊಂದು ನಡಿಗೆಯಷ್ಟೇ. ಆದರೆ, 50 ವಸಂತಗಳನ್ನು ದಾಟಿದ ಪತ್ರಿಕೆಯೊಂದರ ಮ್ಯಾರಥಾನ್‌ನಲ್ಲಿ 15 ವರ್ಷ ನಾನೂ ಓಡಿದ್ದೇನೆ ಎಂಬ ಕೃತಾರ್ಥ ಭಾವ ಖಂಡಿತಾ ಇದೆ. ಕೆಲಸದ ವಿಚಿತ್ರ ಟೈಮಿಂಗ್ಸು, ರಜೆಗಳ ಹೊಂದಾಣಿಕೆ, ಕಾಲಮಿತಿಯ ಯಕ್ಷಗಾನ ಮಾದರಿಯ ಕೆಲಸ. ಯಾಂತ್ರಿಕವಾಗಿ, ತಲೆ ಖರ್ಚು ಮಾಡದೆ ನಿಭಾಯಿಸಲಾಗದ ಕೆಲಸವಿದು. ಇಂದಿನ ಕೆಲಸ ನಾಳೆಗೆ ಬಿಟ್ಟು ಹೋಗುವಂತಿಲ್ಲ, ಪ್ರವಾಹ ಬಂತು, ನಿಷೇಧಾಜ್ಞೆ ಹಾಕಿದರು, ಭಾರತ್ ಬಂದ್ ಇದೆ... ಹೀಗೆಲ್ಲ ನೆಪಗಳನ್ನು ಹೇಳಿ ಮನೆಯಲ್ಲಿ ಕೂರುವಂತಿಲ್ಲ... ಬೇಕೆಂದಾಗ ಖುಷಿ ಬಂದ ಹಾಗೆ ರಜೆ ಚೀಟಿ ಎಸೆದು ಹೋಗಬಹುದಾದ ಕೆಲಸವಲ್ಲ ಮಾಧ್ಯಮ ರಂಗದ್ದು. 


ಕಲಿತದ್ದು ಪತ್ರಿಕೋದ್ಯಮವಾದರೂ ಕೆಲಸಕ್ಕೆ ಸೇರುವಾಗ ಕೆಲಸದ ಸ್ವರೂಪದ ಬಗ್ಗೆ ಇಷ್ಟೆಲ್ಲ ಕಲ್ಪನೆಯಿರಲಿಲ್ಲ. ಊರೆಲ್ಲ ಮಲಗಿದ ಬಳಿಕವೂ ಸಕ್ರಿಯವಾಗಿ ಕೆಲಸ ಮಾಡುವ ಸುದ್ದಿ ಮನೆಯ ಮಂದಿ ತಡರಾತ್ರಿ, ಮಧ್ಯರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆಗೆ ಓದುಗರೆಲ್ಲ ಮಲಗಿರುತ್ತಾರೆ. ಮರುದಿನ ಮುಂಜಾನೆ ಬಿಸಿ ಬಿಸಿ ಪೇಪರು ಕೈಗೆ ಬರುವ ಹೊತ್ತಿಗೆ ಕಚೇರಿಯಲ್ಲಿ ಪುಟಗಳನ್ನು ಕಟ್ಟಿ ಕೊಟ್ಟ ಉಪಸಂಪಾದಕರು ಇನ್ನೂ ಎದ್ದಿರುವುದಿಲ್ಲ! ಅಂಥಹದ್ದೊಂದು ಕೆಲಸವಿದು...
ಶುರುವಾಗಿದ್ದು ಹೀಗೆ...: ಆ ದಿನವಿನ್ನೂ ನೆನಪಿದೆ. ಕನ್ನಡಪ್ರಭದ ಆಗಿನ ಸುದ್ದಿ ಸಂಪಾದಕರಾಗಿದ್ದ ಶ್ರೀ ಜಯರಾಮ ಅಡಿಗರು ಮಂಗಳೂರಿನ ಕದ್ರಿಯಲ್ಲಿದ್ದ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿದ್ದು... ಆಗಿನ ಸಂಪಾದಕೀಯ ವಿಭಾಗ ಮುಖ್ಯಸ್ಥರಾಗಿದ್ದ ಮಧುಕೇಶ್ವರ ಯಾಜಿಯವರು ಹಾಗೂ ಪ್ರಧಾನ ವರದಿಗಾರರಾಗಿದ್ದ ಚಿದಂಬರ ಬೈಕಂಪಾಡಿಯವರೂ ಸಂದರ್ಶನದ ಪ್ಯಾನೆಲ್‌ನಲ್ಲಿದ್ದರು. ನಾನು ಉಪಸಂಪಾದಕನಾಗಿ, ಗೆಳೆಯ ವೇಣು ವಿನೋದ್ ವರದಿಗಾರನಾಗಿ ಒಟ್ಟೊಟ್ಟಿಗೇ ಕೆಲಸಕ್ಕೆ ಸೇರಿದ್ದು ಅಕ್ಟೋಬರ್‌ನಲ್ಲಿ.9 ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದ ವೇಣುವಿನೋದ್ ಬಳಿಕ ವಿಜಯವಾಣಿಗೆ ಮುಖ್ಯ ವರದಿಗಾರನಾಗಿ ತೆರಳಿದ. ನಾನು ಕನ್ನಡಪ್ರಭದಲ್ಲೇ ಉಳಿದೆ. ತುಂಬ ಸಲ ಹೊಸ ಮಾಧ್ಯಮಗಳು ಶುರುವಾದಾಗ, ಬೇರೆ ಅವಕಾಶಗಳು ಕರೆದಾಗಲೂ ‘ಕನ್ನಡಪ್ರಭ’ ಬಿಡಲು ನನಗೆ ಕಾರಣ ಸಿಗಲಿಲ್ಲ. ಗೊತ್ತಿಲ್ಲ, ಪತ್ರಿಕೆಯೇ ಅಷ್ಟು ಇಷ್ಟವಾಗಿರಲೂ ಬಹುದು ನನಗೆ. 


2002 ಎಲ್ಲರ ಕೈಗೆ ಮೊಬೈಲ್ ಬರಲು ಆರಂಭವಾದ ವರ್ಷ ಇನ್‌ಕಮಿಂಗ್ ಕರೆಗೂ ಶುಲ್ಕ ವಿಧಿಸುತ್ತಿದ್ದ ಸಂದರ್ಭವದು. ಅದೇ ವರ್ಷ ಬಹುಷಃ ಬಿಎಸ್‌ಎನ್‌ಎಲ್ ನವರು ಮೊಬೈಲ್ ಸೇವೆಯೂ (2ಜಿ) ಶುರುವಾಯಿತು. ಆಗಷ್ಟೇ ಡಿಜಿಟಲ್ ಕ್ಯಾಮೆರಾಗಳು ಚಾಲ್ತಿಗೆ ಬರುತ್ತಿದ್ದವು. ಆಗಿನ್ನೂ ಕ್ಯಾಮೆರಾಗೆ ರೀಲ್ ಹಾಕಿಯೇ ಫೋಟೊ ತೆಗೆಯಲಾಗುತ್ತಿತ್ತು. ಪ್ಯಾಕ್ಸ್ ಮೂಲಕ ಬರುವ ಸುದ್ದಿಗಳನ್ನು ಟೈಪ್ ಮಾಡಬೇಕಿತ್ತು. ಪೇಜಿನೇಶನ್ ಎಂಬ ಸಾಫ್ಟ್‌ವೇರ್ ಬಳಸಿ ಪುಟ ಮಾಡಲಾಗುತ್ತಿತ್ತು. ಮಂಗಳೂರು ಕಚೇರಿಯಲ್ಲಿದ್ದ ಮಧುಕೇಶ್ವರ ಯಾಜಿ, ರಾಘವೇಂದ್ರ ಅಗ್ನಿಹೋತ್ರಿ, ಸೋಮಶೇಖರ ಪಡುಕೆರೆಯವರು ಕೆಲಸ ಕಲಿಸಿದ ಗುರುಗಳು. ನಂತರ ಕಚೇರಿ ಕೆಎಸ್ ರಾವ್ ರಸ್ತೆಯ ಗಣೇಶ್ ಮಹಲ್ ಕಾಂಪ್ಲೆಕ್ಸ್‌ಗೆ ಶಿಫ್ಟ್ ಆಯ್ತು 2002ರಲ್ಲೇ. ವಿಶಾಲವಾದ ಕಚೇರಿ. ಕೆಲ ವರ್ಷಗಳ ಹಿಂದೆ ಏಷಿಯಾನೆಟ್ ಮೀಡಿಯಾದವರು ಕನ್ನಡಪ್ರಭದಲ್ಲೂ ಹೂಡಿಕೆ ಮಾಡಿದ ಬಳಿಕ, ಎಕ್ಸ್‌ಪ್ರೆಸ್ ಪಬ್ಲಿಕೇಶನ್ ನೌಕರರಾಗಿದ್ದ ನಾವು ಕನ್ನಡಪ್ರಭ ಪಬ್ಲಿಕೇಶನ್ ಸಂಸ್ಥೆಯ ನೌಕರರಾದೆವು. 2014 ಆಗಸ್ಟ್‌ನಲ್ಲಿ ಎಕ್ಸ್‌ಪ್ರೆಸ್ ಕಚೇರಿ ಬಿಟ್ಟು ಸುವರ್ಣನ್ಯೂಸ್ ಕಚೇರಿಗೆ ಸಂಪಾದಕೀಯ ವಿಭಾಗ (ರಾಜ್ಯಾದ್ಯಂತ) ವರ್ಗಾವಣೆಗೊಂಡಿತು...ಈಗ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಸಹೋದರ ಸಂಸ್ಥೆಗಳಾಗಿ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿವೆ.

 
ಆರಂಭದಲ್ಲಿ ವೆಂಕಟನಾರಾಯಣ ಅವರು, ಬಳಿಕ ಎಚ್.ಆರ್.ರಂಗನಾಥ್ ಅವರು, ಬಳಿಕ ಶಿವಸುಬ್ರಹ್ಮಣ್ಯ ಅವರು, ಬಳಿಕ ವಿಶ್ವೇಶ್ವರ ಭಟ್ ಅವರು, ಬಳಿಕ ಸುಗತ ಶ್ರೀನಿವಾಸ ರಾಜು ಅವರು, ಇದೀಗ ಶ್ರೀ ರವಿ ಹೆಗಡೆಯವರ ಸಂಪಾದಕತ್ವದ ಅವಧಿಯಲ್ಲಿ ಕೆಲಸ ಮಾಡುವ ಅವಕಾಶ ದೊರಕಿತು. ಕನ್ನಡಪ್ರಭದ ಪುಟ ಮಾಡುವ ಪೇಜಿನೇಶನ್‌ನಿಂದ ಕ್ವಾರ್ಕ್ ಎಕ್ಸ್‌ಪ್ರೆಸ್ ಬಳಿಕ ಇನ್‌ಡಿಸೈನ್‌ಗೆ ಬದಲಾಗಿದ್ದು, ಫ್ಯಾಕ್ಸ್ ವ್ಯವಸ್ಥೆ ನಿಂತು ಪೂರ್ತಿ ಮೇಲ್ ವ್ಯವಸ್ಥೆಗೆ ರೂಢಿಸಿಕೊಂಡದ್ದು, ಪೇಪರ್‌ಲೆಸ್ ಆಗಿ ಕೆಲಸ ಕಾರ್ಯಗಳು ನಡೆಯುವುದು, ಆರ್ಕುಟ್, ಫೇಸ್‌ಬುಕ್, ವಾಟ್ಸ್‌ಪಗಳಂತಹ ಸಂಪರ್ಕ ಸಾಧನೆಗಳ ಆವಿಷ್ಕಾರ, 2ಜಿ, 3ಜಿ, 4ಜಿ, ವಿಒಎಲ್‌ಟಿಇಯಂತಹ ಹಂತಹಂತಗಳ ಮೊಬೈಲ್ ಸಂಪರ್ಕ ಕ್ರಾಂತಿ, 10 ವರ್ಷಗಳಿಂದೀಚಿಗೆ ಜನಪ್ರಿಯವಾಗುತ್ತಿರುವ ಕನ್ನಡ ಸುದ್ದಿ ವಾಹಿನಿಗಳು, ಎಫ್‌ಎಂ ಸ್ಟೇಷನ್‌ಗಳು, ಆನ್‌ಲೈನ್ ಜರ್ನಲಿಸಂ, ಬಹುತೇಕ ಎಲ್ಲಾ ಕಾಲೇಜುಗಳಲ್ಲೂ ಶುರುವಾಗಿರುವ ಪತ್ರಿಕೋದ್ಯಮ ತರಗತಿಗಳು, ಪತ್ರಿಕೆಯ ಗಾತ್ರ, ದರಗಳಲ್ಲಿ ಬದಲಾವಣೆ, ಅಕ್ಷರ ವಿನ್ಯಾಸ ಬದಲಾವಣೆ, ಕನ್ನಡಪ್ರಭದ ಲೋಗೋ ಬದಲಾಗಿದ್ದು, ಲಾಂಛನ ಬದಲಾಗಿದ್ದು... ಹೀಗೆ ಇಷ್ಟೆಲ್ಲಾ ಬದಲಾವಣೆಗಳೂ (ಇನ್ನೂ ಬಹಳಷ್ಟಿವೆ.. ಬರೆಯ ಹೊರಟರೆ ಮುಗಿಯದು) ಆಗಿದ್ದು ಇದೇ 15 ವರ್ಷಗಳ ಅವಧಿಯಲ್ಲಿ. 2ಜಿ ಮೊಬೈಲ್ ಕಾಲದಿಂದ ಇದೀಗ ಮಾತನಾಡುತ್ತಿರುವ 5ಜಿ ವರೆಗಿನ ಬದಲಾವಣೆಯಷ್ಟಕ್ಕೂ ಪತ್ರಿಕೆ ತೆರೆದುಕೊಂಡಿದ್ದು, ಓದುಗ ಹಾಗೂ ಸುದ್ದಿ ನೀಡುವವನ ದೃಷ್ಟಿಕೋನ ಬದಲಾಗಿದ್ದಕ್ಕೂ ನಾನು ಸಾಕ್ಷಿಯಾಗಿದ್ದು ಈಗ ತಿರುಗಿ ನೋಡಿದಾಗ ಕಾಣಿಸುತ್ತದೆ ನಿಚ್ಚಳವಾಗಿ.


ಹಲವು ಮೊದಲುಗಳ ಹೆಗ್ಗಳಿಕೆ ಹೊಂದಿರುವ ಕನ್ನಡಪ್ರಭ ಕಾಲದಿಂದ ಕಾಲಕ್ಕೆ ವಿನ್ಯಾಸ ಹಾಗೂ ಕಾಣಿಸಿಕೊಳ್ಳುವಿಕೆಯಲ್ಲಿ ಬದಲಾಗಿರಬಹುದು. ಆದರೆ 50 ವರ್ಷಗಳ ಸುದೀರ್ಘ ಅವಧಿಯಲ್ಲಿ ಗಳಿಸಿಕೊಂಡ ಹೆಸರು ಹಾಗೂ ವಿಶ್ವಾಸಾರ್ಹತೆಯನ್ನು ಇಂದಿಗೂ ಉಳಿಸಿಕೊಂಡಿದೆ. ಪಾರಂಪರಿಕ ಓದುಗರಲ್ಲದೆ, ಬದಲಾದ ಕಾಲ ಘಟ್ಟದ ಓದುಗರೂ ಇದ್ದಾರೆ. ಪ್ರಸಾರ ಸಂಖ್ಯೆಯಷ್ಟೇ ಪತ್ರಿಕೊಂದಕ್ಕೆ ವಿಶ್ವಾಸಾರ್ಹತೆಯೂ ಮುಖ್ಯ, ಓದುಗರು ಪತ್ರಿಕೆಯ ಮೇಲಿರಿಸಿದ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅದನ್ನು ಕಾಯ್ದುಕೊಂಡು ಬರುವುದೂ ಅಗತ್ಯ ಎಂಬ ನಂಬಿಕೆ ನನ್ನದು. ವಿವಿಧ ಬಣ್ಣಗಳ ವಿಶೇಷತೆಯ ಹಾಗೆ ಪ್ರತಿ ಪತ್ರಿಕೆಗೂ ಅದರದ್ದೇ ಆದ ಸೊಬಗಿದೆ. ಆದರೆ ತನ್ನತನ ಕಾಯ್ದುಕೊಂಡು ಬರುವುದು ಮುಖ್ಯ, ಅಷ್ಟೇ. 






 ಮಂಗಳೂರಿನ ಕೆಂಜಾರಿನಲ್ಲಿ ಏಳು ವರ್ಷಗಳ ಹಿಂದೆ ಸಂಭವಿಸಿದ ಭೀಕರ ವಿಮಾನ ದುರಂತ ಬೆಳ್ಳಂಬೆಳಗ್ಗೇ ಎಚ್ಚರಿಸಿತ್ತು. ಆಗಿನ ಸಂಪಾದಕರು ಮಂಗಳೂರಿನ ಪ್ರತಿ ಉಪಸಂಪಾದಕ, ವರದಿಗಾರರಿಗೂ ಕರೆ ಮಾಡಿ ತಕ್ಷಣ ಸ್ಥಳಕ್ಕೆ ತೆರಳಿ ಘಟನೆಯ ಸವಿವರ ವರದಿಗೆ ಸೂಚನೆ ನೀಡಿದ್ದರು. ನಾನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ತೆರಳಿದ್ದೆ. ಬೆಂಕಿಯಲ್ಲಿ ಸುಟ್ಟು ಹೋದ ಮೃತದೇಹಗಳ ಅವಶೇಷಗಳು ಆಂಬುಲೆನ್ಸ್‌ಗಳಲ್ಲಿ ಬರುತ್ತಾ ಇದ್ದುದು, ಶವಾಗಾರದಲ್ಲಿ ಅವುಗಳನ್ನು ಪೇರಿಸುತ್ತಿದ್ದುದು, ಸಂಬಂಧಿಕರ ಆಕ್ರಂದನ, ಅವರನ್ನು ಪ್ರತಿಕ್ರಿಯೆಗೆ ಮಾತನಾಡಿಸಿದ್ದು, ನಮ್ಮಿಂದ ಅವರಿಗೇನಾದರೂ ಸಹಾಯವಾದೀತು ಎಂಬ ಆಶಾಭಾವ ಅವರಕಣ್ಣುಗಳಲ್ಲಿ ಕಾಣುತ್ತಿದ್ದುದು. ಓಹ್... ಆ ಭಯಾನಕ ಸನ್ನಿವೇಶ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಮಂಗಳೂರು ಆವೃತ್ತಿಯಲ್ಲಿದ್ದ ನಾವಷ್ಟೂ ಮಂದಿ ಆ ದಿನ ಬೆಳಗ್ಗಿನಿಂದ ರಾತ್ರಿ ವರೆಗೆ ಸುತ್ತಾಡಿ ವರದಿಗಳನ್ನು ತಯಾರಿಸಿದ್ದು, ಪತ್ರಿಕೋದ್ಯಮದ ಸಂದರ್ಭಗಳು ಎಷ್ಟು ನಿಷ್ಠುರ ಎಂಬುವುದನ್ನು ಸಾರಿ ಹೇಳುತ್ತಿತ್ತು. ಅಪಘಾತಗಳು ಸಂಭವಿಸಿದಾಗ ಸಂತ್ರಸ್ತರ ವಿವರಗಳನ್ನು ನಿರ್ಭಾವುಕರಾಗಿ ಹಾಕುವುದು, ಮತ್ತೆ ವಿವರಗಳನ್ನು ಕಲೆ ಹಾಕುವುದು...ಟಿ.ವಿ.ಯವರಾದರೆ ಪ್ರತಿಯೊಂದಕ್ಕೂ ಅನಿಸಿಕೆಗಳನ್ನು ಕಲೆ ಹಾಕುವುದು...ಸೂಕ್ತ ಫೋಟೊಕ್ಕಾಗಿ ಹುಡುಕಾಟ... ನೋಡುಗರ ಪಾಲಿಗೆ ನಾವು ನಿಷ್ಕರುಣಿಗಳು, ವಸ್ತುನಿಷ್ಠರು, ಪ್ರಸಾರಕ್ಕಾಗಿ, ಟಿಆರ್‌ಪಿಗಾಗಿ ಹಂಬಲಿಸುವವರು ಎಂಬಂಥ ಸನ್ನಿವೇಶಗಳನ್ನು ಕಟ್ಟಿಕೊಡುತ್ತದೆ. ಏನು ಮಾಡುವುದು... ವೃತ್ತಿಯಲ್ಲಿ ನಿರ್ಲಿಪ್ತತೆಯೂ, ನಿರ್ಭಾವುಕತೆಯೂ ಬೇಕಾಗುತ್ತದೆ ಅಂತ ತುಂಬ ಸಾರಿ ಅನ್ನಿಸಿದೆ...

ಉಡುಪಿ ಕನಕಗೋಪುರ ವಿವಾದ, ಸುರ್ವಣ ಕರ್ನಾಟಕ ಸಂಚಿಕೆಯಾಗಿ ಮೂಡಿಬಂದ 150ಕ್ಕೂ ಹೆಚ್ಚು ಪುಟಗಳ ಆಕರ್ಷಕ ವಿಶೇಷ ಪುರವಣಿ, ಉಡುಪಿ ಬೆತ್ತಲೆ ಹಲ್ಲೆ ವಿವಾದ, ಕನ್ನಡಪ್ರಭ ವರ್ಷದ ವ್ಯಕ್ತಿಯಾಗಿ ಮೊದಲ ಬಾರಿಗೆ ಆಯ್ಕೆಯಾದ ಕಿತ್ತಳೆವ್ಯಾಪಾರಿ ಅಕ್ಷರಸಂತ ಹರೇಕಳ ಹಾಜಬ್ಬರು, ಯಾವುದೋ ಲೇಖನಕ್ಕೆ ವಿರೋಧವಾಗಿ ಕೆಎಸ್ ರಾವ್ ರಸ್ತೆಯಲ್ಲಿದ್ದ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿ ಮೇಲೆ ರಾತ್ರಿ 9 ಗಂಟೆ ಹೊತ್ತಿಗೆ ನಡೆದ ದುಷ್ಕರ್ಮಿಗಳ ದಾಳಿ, ಕನ್ನಡಪ್ರಭ ಕಚೇರಿ ಸುವರ್ಣನ್ಯೂಸ್ ಕಚೇರಿಗೆ ಸ್ಥಳಾಂತರವಾದ ದಿನ ಆಗಿನ್ನೂ ಪ್ರಸರಣ ವಿಭಾಗದವರ ನೇಮಕವಾಗದ ಹಿನ್ನೆಲೆಯಲ್ಲಿ  ಬೆಳಗ್ಗಿನ ವರೆಗೆ ಸ್ಟಾಲ್‌ಗಳಿಗೆ ಪೇಪರ್ ಹಾಕಲು ತೆರಳಿದ್ದು.... 
 ಹೀಗೆ ನೆನಪುಗಳ ಸರಮಾಲೆಯೇ ಇದೆ ಕನ್ನಡಪ್ರಭದೊಂದಿಗೆ... ಹೇಳಿದರೆ ಮುಗಿಯದಷ್ಟು...


ಕನ್ನಡಪ್ರಭ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ಬಡ ಕುಟುಂಬದ ಕಿತ್ತಳೆ ವ್ಯಾಪಾರಿ, ಅಕ್ಷರ ಸಂತ ಹರೇಕಳ ಹಾಜಬ್ಬರು ಕಚೇರಿಗೆ ಬಂದಾಗಲೆಲ್ಲಾ, ದಾರಿಯಲ್ಲಿ ಸಿಕ್ಕಿದಾಗಲೆಲ್ಲಾ ನಿಮ್ಮ ಪತ್ರಿಕೆ ನನ್ನನ್ನು ಗುರುತಿಸಿದ್ದಕ್ಕೆ ನಾನಿವತ್ತು ಹೀಗಿದ್ದೇನೆ ಅಂತೆಲ್ಲಾ ಹೇಳುವಾಗ ಸ್ವತಃ ನಾನೇ ಆ ಪ್ರಶಸ್ತಿ ಕೊಟ್ಟಿದ್ದೇನೇನೋ ಎಂಬಂಥ ಖುಷಿ ಆಗುವುದಿದೆ...
ಯಾರದ್ದೋ ಬಗ್ಗೆ ಲೇಖನ ಬರೆದಾಗ, ಅವರಿಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದಾಗ, ಅದನ್ನವರು ಮರಳಿ ನಮಗೆ ತಿಳಿಸಿದಾಗ, ಎಷ್ಟೋ ವರ್ಷಗಳ ವರೆಗೆ ಅದೇ ಲೇಖನವನ್ನು ಜೋಪಾನವಾಗಿ ಸಂಗ್ರಹಿಸಿಟ್ಟಾಗಲೆಲ್ಲಾ ನಮ್ಮ ಕೆಲಸದ ಬಗ್ಗೆ ನಮಗೇ ಸಾರ್ಥಕತೆ ಮೂಡುವುದಿದೆ.

 
ವೈಎನ್ಕೆ, ಖಾದ್ರಿ ಶಾಮಣ್ಣನವರು ಇದ್ದ ಪತ್ರಿಕೆಯಲ್ವಾ ಅಂತ ತಿಳಿದವರು ಕೇಳುವಾಗ ಖುಷಿಯಾಗುತ್ತದೆ ಅದೇ ಕನ್ನಡಪ್ರಭದಲ್ಲಿ ನಾನೂ ಇದ್ದೇನಲ್ಲ ಅಂತ...
ನಮ್ಮ ಪತ್ರಿಕೆಯ ಆಲ್ ಎಡಿಶನ್ ಪುಟಗಳ ನಿರ್ಮಾಣವಾಗುವುದು ಬೆಂಗಳೂರು ಕೇಂದ್ರ ಕಚೇರಿಯಲ್ಲಿ. ನಾನು ಕೆಲಸ ಮಾಡುವುದು ಮಂಗಳೂರು ಬ್ಯೂರೋ ಕಚೇರಿಯಲ್ಲಿ. ಈ ನಡುವೆ ಇಷ್ಟೂ ವರ್ಷಗಳಲ್ಲಿ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುವ ಹಿರಿಯ, ಕಿರಿಯ ಸಹೋದ್ಯೋಗಿಗಳ ಪ್ರೋತ್ಸಾಹದಿಂದ ಕೃಷಿ, ಕಲೆ, ಟೆಕ್ ಸೇರಿದಂತೆ ಪುರವಣಿ ಪುಟಗಳಲ್ಲಿ ಹಲವು ಬರವಣಿಗೆಗಳಿಗೆ ಅವಕಾಶ ಸಿಕ್ಕಿತು. ಸಾಮಾನ್ಯವಾಗಿ ಉಪಸಂಪಾದಕರ ಪರಿಚಯ ಹೊರಜಗತ್ತಿನವರಿಗೆ ಕಡಿಮೆ. ನಮ್ಮ ಕೆಲಸದ ಸ್ವರೂಪವೂ ಹೊರ ಜಗತ್ತಿನವರಿಗೆ ಕಡಿಮೆ. ಆದರೂ ಸೀಮಿತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ, ಅಪರೂಪದ ವರದಿಗಾರಿಕೆ ಸಂದರ್ಭ ಸಿಕ್ಕಿದ ಮಾಧ್ಯಮ ಮಿತ್ರರ ಸಂಪರ್ಕ ಸೀಮಿತ ಸಂಖ್ಯೆಯಲ್ಲಿ ಅಷ್ಟೇ...










ಪ್ರತಿ ಬಾರಿ ಬೈಲೈನ್ (ಹೆಸರು ಸಹಿತ ಪ್ರಕಟವಾಗುವ ಬರಹಗಳು) ಪ್ರಕಟವಾಗುವಾಗಿ ಸಿಗುವ ಖುಷಿ ಅಷ್ಟೇ ಜವಾಬ್ದಾರಿಯನ್ನೂ ಹುಟ್ಟುಹಾಕುತ್ತದೆ. ಹೆಚ್ಚಿನ ಜಾಗ್ರತೆ ಹಾಗೂ ಒಳಗೊಳ್ಳುವಿಕೆಯನ್ನು ಅದು ಅಪೇಕ್ಷಿಸುತ್ತದೆ. ಮಾಧ್ಯಮ ಸಂಸ್ಥೆಯಲ್ಲಿ ವರ್ಷಗಳ ಅನುಭವ ಹೆಚ್ಚಿನ ತಿಳಿವಳಿಕೆಯನ್ನು, ರಾಗಭಾವ ದ್ವೇಷ ರಹಿತ ಸ್ಥಿತಿಪ್ರಜ್ಞತೆಯನ್ನೂ ಬಯಸುತ್ತದೆ. ಎಷ್ಟೋ ಬಾರಿ ಪತ್ರಿಕೆಯ ಸ್ಟೈಲ್‌ಶೀಟು, ಕೆಲಸದ ಸಮಯ, ಯಾವುದೋ ದಿನ ಸಿಕ್ಕುವ ವಾರದ ರಜೆಗಳು ನಮ್ಮ ಬದುಕನ್ನೇ ಮಾಧ್ಯಮ ಸಂಸ್ಥೆಯ ಗುಣ ವಿಶೇಷಗಳಿಗೆ ಹೊಂದಿಸಿಕೊಂಡಿರುತ್ತದೆ...! ಬೆಳಗ್ಗೆದ್ದು ಪತ್ರಿಕೆಗಳನ್ನು ಓದದಿದ್ದರೆ ಏನೋ ತಪ್ಪು ಮಾಡಿದ ಭಾವ ಮೂಡಿಸುತ್ತದೆ!
ದಿನದಿಂದ ದಿನಕ್ಕೆ ತಂತ್ರಜ್ಞಾನ ಬದಲಾಗುತ್ತಿದೆ, ಪತ್ರಿಕಾ ಕ್ಷೇತ್ರಕ್ಕೆ ಬರುವ ಹೊಸಬರ ಮನಃಸ್ಥಿತಿ, ಓದುಗರ ಮನಃಸ್ಥಿತಿ, ಸುದ್ದಿಗಳ ವ್ಯಾಖ್ಯಾನ, ಪ್ರಸ್ತುತಿ, ವೇಗ, ಸಹ ಮಾಧ್ಯಮಗಳ ಪೈಪೋಟಿ ಎಲ್ಲವೂ ಬದಲಾಗುತ್ತಲೇ ಇದೆ. ಅದಕ್ಕೆ ಹೊಂದಿಕೊಂಡೇ ಕೆಲಸ ಮಾಡಬೇಕು. ಎಲ್ಲಿಯೂ ಹಿಂದುಳಿಯುವಂತಿಲ್ಲ. ಬದುಕೂ ಕೆಲಸದ ಜೊತೆ ಜೊತೆಗೇ ಸಾಗುತ್ತದೆ...





ಉಳಿದಂತೆ....

 ತಡರಾತ್ರಿ ಕೆಲಸ ಮುಗಿಸಿ ಒಂಟಿಯಾಗಿ ನಿರ್ಜನ ರಸ್ತೆಗಳಲ್ಲಿ ತೆರಳಿ ಮನೆ ತಲಪುವಾಗ ನಿದ್ರೆಗೆ ಶರಣಾದ ಮನೆಮಂದಿಯಲ್ಲಿ ಯಾರೂ ಸ್ವಾಗತಿಸುವ ಮೂಡಲ್ಲಿ ಇರುವುದಿಲ್ಲ, ಬೆಳಗ್ಗೆ ತಡವಾಗಿ ಏಳುವ ವೇಳೆಗೆ ಅವರವರ ಕೆಲಸಕ್ಕೆ ಹೋಗುವ ಧಾವಂತದಲ್ಲಿರುತ್ತಾರೆ. ಎಂದೋ ಸಿಕ್ಕುವ ವಾರದ ರಜೆ ಪರಸ್ಪರ ಹೊಂದಾಣಿಕೆಯಾಗದೆ ಬದುಕು ನೀರಸವೆನಿಸುವುದಿದೆ... ಗ್ರಹಚಾರ ಕೆಟ್ಟು ನಾವೇನಾದರೂ ಆರೋಗ್ಯ ಕೆಡಿಸಿಕೊಂಡು ದಿನಗಟ್ಟಲೆ ರಜಾ ಹಾಕಬೇಕಾದರೆ ಇತರ ಸಹೋದ್ಯೋಗಿಗಳಿಗೆ ವಾರದ ರಜೆಯೂ ಸಿಗದೆ ಪರದಾಡುವುದಿದೆ. ಎಲ್ಲಿಯೋ ಹೋಗಿ, ಯಾವುದೋ ಕೆಲಸವನ್ನು ಪೂರ್ವ ನಿಗದಿಪಡಿಸಿ ಇಂತಹ ದಿನ ಬೇಕೆಂದುಕೊಂಡ ರಜೆ ಕೊನೆ ಕ್ಷಣದಲ್ಲಿ ರದ್ದಾಗಿ ತೀರಾ ನಿರ್ಭಾವುಕರಾಗಿ ಕರ್ತವ್ಯದ ಕರೆಗೆ ಓಗೊಟ್ಟದ್ದಿದೆ. ರಜೆ ಸಿಕ್ಕದ ಸಂದರ್ಭಗಳಲ್ಲಿ ಮನೆ ಮಂದಿಯಿಂದ ಸ್ನೇಹಿತರಿಂದ ಉಗಿಸಿಕೊಂಡು ಯಾರಿಗೂ ಪರಿಸ್ಥಿತಿಗಳನ್ನು ಅರ್ಥ ಮಾಡಿಸಲಾಗದೆ ಅಸಹಾಯಕನಾಗಿದ್ದೂ ಇದೆ... ಭಾನುವಾರ ಮನೆಗೆ ನೆಂಟರು ಬಂದರೂ ನಮ್ಮ ಕರ್ತವ್ಯದ ಕರೆ ಕರೆದು ನಿರ್ದಯರಾಗಿ ಅವರಿಗೆ ಬಾಯ್ ಹೇಳಿ ಕೆಲಸದ ಕಡೆ ಓಟ ಕಿತ್ತಿದ್ದಿದೆ... ಮನೆ ಮಂದಿಯ ಜೊತೆ ಹೆಚ್ಚು ಓಡಾಡಲೂ ಆಗದೆ, ಸಾವಕಾಶದ ಸಮಯವನ್ನೂ ನೀಡಲಾಗದೆ ಮೌನವಾದದ್ದಿದೆ. ಸಂಜೆಯ ವೇಳೆ ಊರ ಮಂದಿ ಮನೆಗೆ ಹೋಗಿ, ವಾಕಿಂಗ್  ಮಾಡಿ, ನಾಟಕ, ಸಿನಿಮಾಗಳಿಗೆ ಹೋಗುವಾಗ ನಾವು ದೂರದಿಂದ ಮೂಕಪ್ರೇಕ್ಷಕರಾಗಿ ಸುದ್ದಿಗಳನ್ನು ಆರಿಸುತ್ತಾ ಬಿಝಿ ಅನ್ನಿಸಿಕೊಳ್ಳುವುದು ರೂಢಿಯಾಗಿದೆ. ಬದಲಾಗುವ ಊಟದ ಹೊತ್ತು, ಡೆಡ್‌ಲೈನ್‌ನಲ್ಲಿ ಕೆಲಸ ಮುಗಿಸುವ ಧಾವಂತದಲ್ಲಿ ಕಡೆಗಣಿಸಿದ ಹೊಟ್ಟೆಯ ಉಪಚಾರ, ಬದಲಾಗುವ ನಿದ್ರೆಯ ಸಮಯ ಆರೋಗ್ಯವನ್ನೂ ಆಗೀಗ ಕಾಡುತ್ತದೆ. ಅನಾರೋಗ್ಯ ನಿಮಿತ್ತ ಸ್ವಲ್ಪ ದೀರ್ಥ ರಜೆ ತೆಗೆದುಕೊಳ್ಳಬೇಕಾದಾಗ... ಅಯ್ಯೋ ಇಷ್ಟು ರಜೆ ಇದ್ದೂ ಪ್ರಯೋಜನವಾಗದೇ ಹೋಯಿತಲ್ಲ ಎಂಬ ಶೂನ್ಯತೆ ಕಾಡುತ್ತದೆ....
 ಬದುಕೇ ಕಾಲಮಿತಿಯ ಯಕ್ಷಗಾನವಾದ ಹಾಗೆ ಭಾಸವಾಗುವುದೂ ಇದೆ. ಓದಬೇಕು, ಬರೆಯಬೇಕು ಎಂಬ ಮಾತಿದೆ, ನಮ್ಮ ಕೆಲಸದ ವಿಶೇಷಣವೇ ಅದು. ಆದರೆ ಎಷ್ಟು ಹೊತ್ತಿಗೆ ಎಂಬ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ. ಮೊಬೈಲು ಬಂದ ಮೇಲೆ ಪುರುಸೊತ್ತು ಎಂಬುದು ಎಲ್ಲಿ ಹೋಗಿದೆ ಗೊತ್ತಾಗುತ್ತಿಲ್ಲ...ಎಲ್ಲಾ ಕೆಲಸಗಳಲ್ಲೂ ಇಂತಹ ಸೈಡ್ ಇಫೆಕ್ಟ್‌ಗಳು ಇದ್ದದ್ದೇ. ನಮ್ಮ ಕೆಲಸದ ಅವಧಿ, ಕೆಲಸದ ಶೈಲಿ ವಿಶೇಷವಷ್ಟೇ...

























ತಡರಾತ್ರಿ, ಮಧ್ಯರಾತ್ರಿ ಡ್ಯೂಟಿ ಮುಗಿದ ಮೇಲೆ ಗಂಟೆಗಳ ಲೆಕ್ಕದಲ್ಲಿ ನೋಡಿದ ಬಯಲಾಟಗಳಿಗೆ ಲೆಕ್ಕವೇ ಇಲ್ಲ. ಮಂಗಳೂರು ಆಸುಪಾಸು ಯಕ್ಷಗಾನವಿದ್ದರೆ ಬೈಕು ಹಿಡಿದು ಹೋದದ್ದು, ಮಂಗಳೂರಿನಲ್ಲಿ ರೂಂನಲ್ಲಿದ್ದಾಗ ಬೆಳಗ್ಗಿನ ಜಾವ ಅಲಾರಂ ಇಟ್ಟು ಜಾವ ಆಟಕ್ಕೆ ಹೋಗಿದ್ದು, ಅಲ್ಲೆಲ್ಲ ಸ್ನೇಹಿತರ ಪರಿಚಯವಾಗಿ ಯಕ್ಷಗಾನದ್ದೇ ಒಂದು ವಾಟ್ಸಪ್ ಗ್ರೂಪು ಮಾಡಿದ್ದೆಲ್ಲ ಈಗ ಇತಿಹಾಸ. ಯಕ್ಷಗಾನ ಕಾಲಮಿತಿಯದ್ದಾದರೆ ನಮ್ಮ ಡ್ಯೂಟಿ ಮುಗಿಯುವ ವೇಳೆಗೆ ಆಟವೂ ಮುಗಿದಿರುತ್ತದೆ ಎಂಬುದು ಬೇಸರದ ಸಂಗತಿ. ಇಡೀ ರಾತ್ರಿಯ ಆಟವಾದರೆ ಅಡ್ಡಿಯಿಲ್ಲ... ನೋಡಬಹುದು.
ನನ್ನ ನಂತರ ಕೆಲಸಕ್ಕೆ ಸೇರಿದವರು, ನಮ್ಮ ಕಚೇರಿಯಿಂದ ಬೇರೆಡೆ ವರ್ಗಾವಣೆಯಾಗಿ ತೆರಳಿದವರು, ಆಗಾಗ ತರಬೇತಿಗೆ ಬರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು, ರಕ್ಷಾ ಬಂಧನದಂದು ಕಚೇರಿಗೆ ಬಂದು ರಾಕಿ ಕಟ್ಟುವ ಬ್ರಹ್ಮಕುಮಾರಿಯರು, ಅಷ್ಟಮಿ ದಿನ ಪ್ರಸಾದ ನೀಡುವ ಇಸ್ಕಾನ್ ನವರು, ದೀಪಾವಳಿಗೆ ಸ್ವೀಟು ತಲುಪಿಸುವ ನಮ್ಮ ಜಾಹೀರಾತುದಾರರು, ಹೊಸ ವರ್ಷದಂದು ಕ್ಯಾಲೆಂಡರು, ಡೈರಿಯನ್ನು ಕಚೇರಿ ಸಿಬ್ಬಂದಿಗೆ ಕೊಟ್ಟು ಶುಭಾಶಯ ಹೇಳುವವರು... ತುಂಬಾ ಟೆನ್ಶನ್ ಇಟ್ಕೊಂಡು ಪ್ರೆಸ್ ನೋಟ್ ಹಿಡ್ಕೊಂಡು ಕಚೇರಿಗೆ ಬಂದು ಯಾರಲ್ಲಿ ಅದನ್ನು ಕೊಡಬೇಕೆಂದು ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ, ಪ್ರೆಸ್ ನೋಟ್ ಕೊಟ್ಟ ಮೇಲೆ "ನಾಳೆಯೇ ಪುಟಕ್ಕೆ ಹಾಕಿ' ಅಂತ ಕಳಕಳಿಯಿಂದ ಬೇಡಿಕೆ ಇಡುವವರು, ನಾವು ಕಳುಹಿಸಿದ ಸುದ್ದಿ ಪ್ರಕಟವಾಗಿಲ್ಲ ಅಂತ ಕಂಪ್ಲೇಟ್ ರೂಪದಲ್ಲಿ ನೆನಪಿಸುವ ತಾಲೂಕು ವರದಿಗಾರರು, ಜಾಹೀರಾತು ಆಧಾರಿತ ಸುದ್ದಿ ಮರೀಬೇಡಿ ಅಂತ ನೆನಪಿಸುವ ಜಾಹೀರಾತು ಪ್ರತಿನಿಧಿಗಳು, ಡೆಡ್ ಲೈನ್ ಮೀರಿದರೂ ಜಾಹೀರಾತು ಗಾತ್ರ ನೀಡುವುದು ತಡವಾಗುತ್ತಲೇ ಇದ್ದರೂ ಶಾಂತರಾಗಿರುವ ಶೆಡ್ಯೂಲಿಂಗ್ ವಿಭಾಗದವರು...ಹೀಗೆ ಇವರೆಲ್ಲ ವೃತ್ತಿ ಬದುಕಿನಲ್ಲಿ ಬಂದು ಹೋಗುವ ಸಹಯೋಗಿಗಳು... ಕೆಲಸದ ಭಾಗಗಳಾಗಿರುವವರು.
ನಮಗೋ ವರ್ಷಕ್ಕೆ ನಾಲ್ಕಾದರೂ ರಜೆ ಇದೆ, ವರ್ಷದಲ್ಲಿ ನಾಲ್ಕು ದಿನ ಪತ್ರಿಕೆ ಪ್ರಕಟವಾಗುವುದಿಲ್ಲ. (ಚೌತಿ, ಆಯುಧಪೂಜೆ, ದೀಪಾವಳಿ, ಯುಗಾದಿ). ಈ ಟಿ.ವಿ.ಯವರು ವರ್ಷದ 365 ದಿನವೂ ಕೆಲಸಕ್ಕೆ ಬರಬೇಕಲ್ಲ ಅಂತ ಸಮಾಧಾನ ಮಾಡಿಕೊಳ್ಳುವುದೂ ಇದೆ.
ಇಷ್ಟೂ ವರ್ಷಗಳಲ್ಲಿ ಪತ್ರಿಕೆಯ ಕೆಲಸದಲ್ಲಿ ನನ್ನಿಂದ ಅದೆಷ್ಟೋ ತಪ್ಪುಗಳಾಗಿರಬಹುದು, ಅದೆಷ್ಟೋ ಮರೆವುಗಳಾಗಿವೆ, ಅದೆಷ್ಟೋ ಎಡವಟ್ಟುಗಳೂ ಆಗಿವೆ. ಆದರೆ ಜೊತೆಗಿರುವ, ತಿದ್ದುವವರು, ಕ್ಷಮಿಸುವವರು, ಸಹಿಷ್ಣುಗಳ ಸಹಕಾರದಿಂದ ಅವುಗಳನ್ನು ದಾಟಿ ಇನ್ನೊಮ್ಮೆ ಹಾಗೆ ಮಾಡುವುದಿಲ್ಲ ಎಂಬ ಬದ್ಧತೆಯಿಂದ ಮುಂದುವರಿಯುತ್ತಾ ಬಂದವನಿದ್ದೇನೆ. ವ್ಯಕ್ತಿಯೊಬ್ಬನಿಂದ ಮಾಧ್ಯಮ ಸಂಸ್ಥೆಯಲ್ಲ... ಅದೊಂದು ಸಮೂಹ ವ್ಯವಸ್ಥೆ. ನಾನು ಪತ್ರಿಕೆಯ ಸಿಬ್ಬಂದಿಗಳು. ನನ್ನಿಂದ ನನ್ನ ಪತ್ರಿಕೆಗೆ ಏನು ಸಿಕ್ಕಿದೆಯೊ ಗೊತ್ತಿಲ್ಲ. ಆದರೆ ಪತ್ರಿಕಾ ಕಚೇರಿಯ ಕೆಲಸದ ಅನುಭವ ತುಂಬಾ ಕಲಿಸಿದೆ... ವಿಶಾಲವಾದ ಅನುಭವ, ಸತ್ಯದರ್ಶನ, ಅನುಭೂತಿಗಳನ್ನು ನೀಡಿದೆ... ಮಧ್ಯಾಹ್ನದಿಂದ ತೊಡಗಿ ಮಧ್ಯರಾತ್ರಿಯ ವರೆಗಿನ ಕೆಲಸದ ಅವಧಿ ಬದುಕಿನ  ಭಾಗವೇನೋ ಅನ್ನಿಸುತ್ತಿದೆ... ಪ್ರತಿದಿನ ಬಂದು ಬೀಳುವ ರಾಶಿ ರಾಶಿ ಸುದ್ದಿಗಳ ನಡುವಿನಿಂದ ಬೇಕಾದ್ದನ್ನು ಹೆಕ್ಕಿ ತೆಗೆದು, ತಪ್ಪಿಲ್ಲದಂತೆ ಎಡಿಟ್ ಮಾಡಿ, ಆಕರ್ಷಕವಾಗಿ ಪುಟ ಮಾಡಿ ಮುದ್ರಣಕ್ಕೆ ಕಳುಹಿಸುವ ವರೆಗಿನ ‘ಸದಾ ಎಚ್ಚರ ಸ್ಥಿತಿಯಲ್ಲೇ’ ಇರಬೇಕಾದ ಕೆಲಸ ನಮ್ಮನ್ನು ಯಾವತ್ತೂ ಜಾಗೃತ ಸ್ಥಿತಿಯಲ್ಲಿರಿಸುವುದಂತೂ ಸತ್ಯ.
ಈ ನಡುವೆ ಬೆಳೆಸಿದವರು, ಪ್ರೋತ್ಸಾಹಿಸಿದವರು, ತಪ್ಪುಗಳು ಆದಗಲೂ ಸಹಿಸಿ ಬೆಳೆಯಲು, ಕಲಿಯಲು ಅವಕಾಶ ಮಾಡಿಕೊಟ್ಟ ಎಲ್ಲ ಹಿರಿಯ, ಕಿರಿಯ ಸಹೋದ್ಯೋಗಿ ಮಿತ್ರರೂ ಇಷ್ಟು ಸಮಯದ ತನಕವೂ ಪತ್ರಿಕೆಯ ಜೊತೆ ನಡೆದುಬರಲು ಕಾರಣಕರ್ತರು....
ಬದುಕಿನ ದಾರಿ ಪೂರ್ವನಿಗದಿಯಂತೆ ರೂಪಿಸಿಯೂ ಕಾಣಿಸಬಹುದು. ಆಕಸ್ಮಿಕವಾಗಿಯೂ ಕಾಣಿಸಬಹುದು. ನಾನಂತೂ ಕನ್ನಡಪ್ರಭಕ್ಕೆ ಸೇರಿದ್ದು ಆಕಸ್ಮಿಕ. ಆದರೆ, ಇಷ್ಟು ವರ್ಷ ಮುಂದುವರಿದದ್ದು ವಾಸ್ತವ... ಮತ್ತು ಇಲ್ಲಿ ಕಳೆದ ಆಯುಷ್ಯದ ಈ ಅವಧಿ ಅತಿ ಪ್ರಮುಖ ಘಟ್ಟವೂ ಹೌದು. ಅದಕ್ಕೇ ಇಷ್ಟೊಂದು ಹಿನ್ನೋಟ, ವಿಶ್ಲೇಷಣೆ ಅಷ್ಟೇ...
ಮತ್ತೆ ಉಪಸಂಹಾರಕ್ಕೆ ಮೊದಲು ಬರೆಯಬೇಕೆನಿಸುವ ವಿನಮ್ರ ಸಾಲುಗಳು..
‘ಎನ್ನಂಥ ಭಕ್ತರು ಅನಂತ ನಿನಗಿಹರು... ನಿನ್ನಂಥ ಸ್ವಾಮಿ ಎನಗಿಲ್ಲ...’! ಅಂತ.
-ಕೃ.ಮೋ.

4 comments:

VENU VINOD said...

ಮನೋಜ್ಞ ಹಾಗೂ ಆಪ್ತ ಬರಹ. ನಿನ್ನೊಂದಿಗೆಯೇ ಪತ್ರಿಕಾ ವೃತ್ತಿಗೆ ಕಾಲಿಟ್ಟ ಬಳಿಕದ ವಿವಿಧ ಹಂತಗಳೆಲ್ಲ ನೆನಪಾದವು.

ಹರೀಶ ಮಾಂಬಾಡಿ said...

ಸುಂದರ ನೆನಪುಗಳು. ಆರು ವರ್ಷ 2005 - 12 ನಿಮ್ಮ ಜೊತೆ ಕೆಲಸ ಮಾಡಿದ್ದೇನೆ. ವಿಮಾನ ಬಿದ್ದಾಗ ಇಡೀ ದಿನ ತಿರುಗಾಡಿ ಬಳಿಕ ಪುಟ ಕಟ್ಟಿದ ಛಾಲೆಂಜ್, ಕಚೇರಿಗೆ ಬೆಂಕಿ ಹಾಕಿದಾಗ (ದಾಳಿ) ಧೃತಿಗೆಡದೆ ಅಂಥ ಸನ್ನಿವೇಶದಲ್ಲಿ ಪೇಜ್ ಮಾಡಿ ಪತ್ರಿಕೆಯನ್ನು ಮುದ್ರಣಕ್ಕೆ ಕಳಿಸಿದ್ದು ಮರೆಯಲಾಗದ ನೆನಪು

ಅನನ್ಯ said...

ಸುಂದರ ನೆನಪಿನ ಬುತ್ತಿ... ಆಪ್ತವಾದ ಬರಹ... ಇದು ಹೀಗೆಯೇ ದೀರ್ಘಕಾಲ ಮುಂದುವರಿಯಲಿ.. ಶುಭಾಶಯಗಳು..

- ಚಂದ್ರಶೇಖರ ಕುಳಮರ್ವ

ಸಿಬಂತಿ ಪದ್ಮನಾಭ Sibanthi Padmanabha said...

ಲೇಖನವನ್ನು ಪೂರ್ತಿಯಾಗಿ ಓದಿದೆ. ಮನೋಜ್ಞವಾಗಿದೆ. ಇದು ಕೇವಲ ನಿಮ್ಮ ಪತ್ರಿಕಾ ಬದುಕಿನ ಹಿನ್ನೋಟವಷ್ಟೇ ಅಲ್ಲದೆ, ಒಟ್ಟಾರೆ ಪತ್ರಿಕೋದ್ಯಮದ 15 ವರ್ಷಗಳ ಇತಿಹಾಸವನ್ನು ತಿರುವಿ ಹಾಕಿದಂತೆ ಇದೆ. ನಿಮ್ಮ ಪಯಣ ಇನ್ನಷ್ಟು ಸ್ವಾರಸ್ಯಕರವಾಗಿ ಮುಂದುವರಿಯಲಿ.